ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಕರಾಳ ದಿನ Archives » Dynamic Leader
November 22, 2024
Home Posts tagged ಕರಾಳ ದಿನ
ವಿದೇಶ

ಡಿ.ಸಿ.ಪ್ರಕಾಶ್

ವಿಶ್ವವನ್ನೇ ಬೆಚ್ಚಿಬೀಳಿಸಿದ ಅವಳಿ ಗೋಪುರದ ದಾಳಿ ನಡೆದು ಇಂದಿಗೆ 23 ವರ್ಷಗಳು. ದಾಳಿಯ ದಿನವಾದ ಸೆಪ್ಟೆಂಬರ್ 11 ಅನ್ನು ಅಮೆರಿಕದಲ್ಲಿ ಕಪ್ಪು ದಿನವಾಗಿ ಆಚರಿಸಲಾಗುತ್ತದೆ. ಈ ದುರಂತ ನಡೆದಿದ್ದು ಹೇಗೆ?… ಇತಿಹಾಸದಲ್ಲಿ ಸ್ವಲ್ಪ ಹಿಂದಕ್ಕೆ ಹೋಗೋಣ….

ಈ ಭೀಕರ ದಾಳಿಯು ಸೆಪ್ಟೆಂಬರ್ 11, 2001 ರಂದು ಬೆಳಿಗ್ಗೆ 8.46ಕ್ಕೆ ನ್ಯೂಯಾರ್ಕ್ ನಗರದಲ್ಲಿ ನಡೆಯಿತು. 19 ಅಲ್ ಖೈದಾ ಭಯೋತ್ಪಾದಕರು 4 ಪ್ರಯಾಣಿಕ ವಿಮಾನಗಳನ್ನು ಅಪಹರಿಸಿ, ನ್ಯೂಯಾರ್ಕ್‌ನಲ್ಲಿರುವ ವರ್ಲ್ಡ್ ಟ್ರೇಡ್ ಸೆಂಟರ್, ಸೇನಾ ಪ್ರಧಾನ ಕಛೇರಿಯಾದ ಪೆಂಟಗನ್, ಮತ್ತು ಪೆನ್ಸಿಲ್ವೇನಿಯಾ ಪ್ರದೇಶ ಮುಂತಾದ ಮೂರು ಕಡೆ ದಾಳಿಯನ್ನು ನಡೆಸಿದರು.

81 ಪ್ರಯಾಣಿಕರು ಮತ್ತು 11 ಸಿಬ್ಬಂದಿಯೊಂದಿಗೆ ವಾಷಿಂಗ್ಟನ್‌ನಿಂದ ಲಾಸ್ ಏಂಜಲೀಸ್‌ಗೆ ತೆರಳುತ್ತಿದ್ದ ಅಮೆರಿಕನ್ ಏರ್‌ಲೈನ್ಸ್ ವಿಮಾನವನ್ನು ಹೈಜಾಕ್ ಮಾಡಿದ ಉಗ್ರರು, ನ್ಯೂಯಾರ್ಕ್‌ನ ಅವಳಿ ಗೋಪುರಕ್ಕೆ ಅಪ್ಪಳಿಸಿ ಸ್ಫೋಟಿಸಿದರು. ಸತತ 18 ನಿಮಿಷಗಳ ಅಂತರದಲ್ಲಿ, ವಾಷಿಂಗ್ಟನ್ ಏರ್‌ಪೋರ್ಟ್‌ನಿಂದ 56 ಪ್ರಯಾಣಿಕರು ಮತ್ತು 9 ಸಿಬ್ಬಂದಿಯೊಂದಿಗೆ ಟೇಕ್ ಆಫ್ ಆಗಿದ್ದ ಮತ್ತೊಂದು ವಿಮಾನವು ಬೆಳಿಗ್ಗೆ 9.03ಕ್ಕೆ ಅವಳಿ ಗೋಪುರದ ದಕ್ಷಿಣ ಭಾಗದ ಕಟ್ಟಡದ ಮೇಲೆ ಅಪ್ಪಳಿಸಿತು.

ಈ ಕ್ರೂರ ದಾಳಿಯಿಂದ ಗಗನಚುಂಬಿ ಕಟ್ಟಡಗಳು ಕ್ಷಣಾರ್ಧದಲ್ಲಿ ನೆಲಸಮಗೊಂಡವು. ಅಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಜನ ಹಾಗೂ ರಸ್ತೆಯಲ್ಲಿ ಹೋಗುತ್ತಿದ್ದವರು ದಾರುಣವಾಗಿ ಸಾವನ್ನಪ್ಪಿದರು. ಮುಂದಿನ ಕೆಲವು ನಿಮಿಷಗಳಲ್ಲಿ, ನಿಖರವಾಗಿ 9.37ಕ್ಕೆ, ಮುಂದಿನ ದಾಳಿಯು ಅಮೆರಿಕದ ವಿಶ್ವದ ಅತ್ಯಂತ ಶಕ್ತಿಶಾಲಿ ಮಿಲಿಟರಿ ಪ್ರಧಾನ ಕಛೇರಿಯಾದ ಪೆಂಟಗನ್ ಮೇಲೆ ನಡೆದಿತ್ತು. ಮತ್ತೊಂದು ವಿಮಾನವು ಪೆನ್ಸಿಲ್ವೇನಿಯಾದ ಮೈದಾನದಲ್ಲಿ ಪತನಗೊಂಡು ಸ್ಫೋಟಗೊಂಡಿತು.

ಸೂಪರ್ ಪವರ್ ಅಮೆರಿಕಕ್ಕೆ ಎಚ್ಚರಿಕೆಯಂತೆ ನಡೆದ ಈ ದಾಳಿಗಳಲ್ಲಿ 2,977 ಅಮಾಯಕರು ದಾರುಣವಾಗಿ ಸಾವನ್ನಪ್ಪಿದರು. ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಇದು ಇತಿಹಾಸದಲ್ಲಿ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ಎಂದೂ ದಾಖಲಾಯಿತು. ಇದರ ಬೆನ್ನಲ್ಲೇ ಭಯೋತ್ಪಾದನೆ ವಿರುದ್ಧ ಸಮರ ಸಾರಿದ್ದ ಅಮೆರಿಕ, 2011ರಲ್ಲಿ ಅಲ್-ಖೈದಾ ಭಯೋತ್ಪಾದಕ ಆಂದೋಲನದ ನಾಯಕ ಒಸಾಮಾ ಬಿನ್ ಲಾಡೆನ್ ನನ್ನು ಹೊಡೆದುರುಳಿಸಿತು.

ವಿಶ್ವವನ್ನೇ ಬೆಚ್ಚಿ ಬೀಳಿಸಿದ ಈ ಅವಳಿ ಗೋಪುರದ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಸ್ಮರಣಾರ್ಥ ಅಮೆರಿಕದಲ್ಲಿ ಸೆಪ್ಟೆಂಬರ್ 11ನ್ನು ದೇಶಪ್ರೇಮಿಗಳ ದಿನವನ್ನಾಗಿಯೂ ಆಚರಿಸಲಾಗುತ್ತದೆ.

ದೇಶ

“ಸರ್ಕಾರದ ಪ್ರತಿ ಟೀಕೆಯನ್ನು ಅಪರಾಧವೆಂದು ಪರಿಗಣಿಸಿದರೆ ಭಾರತೀಯ ಸಂವಿಧಾನದ ಅತ್ಯಗತ್ಯ ಲಕ್ಷಣವಾದ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ” – ಸುಪ್ರೀಂ ಕೋರ್ಟ್

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿ ರದ್ದತಿ ದಿನವನ್ನು ‘ಕರಾಳ ದಿನ’ ಎಂದು ವಾಟ್ಸಾಪ್ ನಲ್ಲಿ ಹೇಳಿದ್ದ ಪ್ರೊಫೆಸರ್ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.

ಮಹಾರಾಷ್ಟ್ರದ ಕಾಲೇಜೊಂದರಲ್ಲಿ ಪ್ರಾಧ್ಯಾಪಕರಾಗಿದ್ದ ಜಾವೇದ್ ಅಹಮದ್ ಹಜಾಮ್ ಎಂಬುವರು, ಆಗಸ್ಟ್ 13 ಮತ್ತು 15, 2022ರ ನಡುವೆ ಪೋಷಕರು-ಶಿಕ್ಷಕರ ವಾಟ್ಸಾಪ್ ಗುಂಪಿನಲ್ಲಿ ಎರಡು ಪಠ್ಯ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಅದರಲ್ಲಿ, ‘ಆಗಸ್ಟ್ 5 ಜಮ್ಮು ಮತ್ತು ಕಾಶ್ಮೀರಕ್ಕೆ ಕರಾಳ ದಿನ’ ಎಂದು ಮತ್ತು ‘ಆಗಸ್ಟ್ 14 – ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು’ ಎಂದು ತಿಳಿಸಿದ್ದರು ಎಂದು ಹೇಳಲಾಗುತ್ತಿದೆ. ಹಾಗೆಯೇ ‘ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿ ರದ್ದತಿಯಿಂದ ನಾವು ಸಂತೋಷವಾಗಿಲ್ಲ’ ಎಂದು ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದರು ಎಂದೂ ಹೇಳಲಾಗುತ್ತಿದೆ.

ಇಂತಹ ಆರೋಪಗಳ ಆಧಾರದ ಮೇಲೆ ಮಹಾರಾಷ್ಟ್ರದ ಕೊಲ್ಹಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ವಿವಿಧ ಜನಾಂಗೀಯ ಗುಂಪುಗಳ ನಡುವೆ ದ್ವೇಷವನ್ನು ಪ್ರಚೋದಿಸುವ ಮತ್ತು ಸೌಹಾರ್ದತೆ ಕಾಪಾಡುವ ವಿರುದ್ಧ ಕೃತ್ಯಗಳನ್ನು ಎಸಗಿದ್ದಕ್ಕಾಗಿ ಸೆಕ್ಷನ್ 153-ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಈ ಪ್ರಕರಣಗಳನ್ನು ರದ್ದುಗೊಳಿಸುವಂತೆ ಪ್ರಾಧ್ಯಾಪಕರು ಬಾಂಬೆ ಹೈಕೋರ್ಟ್‌ನಲ್ಲಿ ದಾವೆ ಹೂಡಿದರು. ಪ್ರಕರಣವು ವಿಚಾರಣೆಗೆ ಬಂದಾಗ, ಹೈಕೋರ್ಟ್ ಪ್ರಕರಣವನ್ನು ರದ್ದುಗೊಳಿಸಲು ನಿರಾಕರಿಸಿತು ಮತ್ತು ಅವರ ಕಾಮೆಂಟ್‌ಗಳಿಗೆ ಪ್ರಾಧ್ಯಾಪಕರನ್ನು ಕ್ರಿಮಿನಲ್ (criminally liable) ಹೊಣೆಗಾರರನ್ನಾಗಿ ಮಾಡಬೇಕೆಂದು ತೀರ್ಪು ನೀಡಿತು.

ಇದರ ಬೆನ್ನಲ್ಲೇ ಪ್ರೊಫೆಸರ್ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠವು ಪ್ರಕರಣದ ವಿಚಾರಣೆ ನಡೆಸಿತು.

“ಸಂವಿಧಾನದ 370ನೇ ವಿಧಿಯ ರದ್ದತಿಗೆ ಅವರ ಪ್ರತಿಕ್ರಿಯೆ ಇದು. ವಿಶೇಷ ಸ್ಥಾನಮಾನ ರದ್ದತಿಯನ್ನು ಕರಾಳ ದಿನ ಎಂದು ಬಣ್ಣಿಸಿರುವುದು ಅವರ ಪ್ರತಿಭಟನೆ ಮತ್ತು ವೇದನೆಯ ಅಭಿವ್ಯಕ್ತಿಯಾಗಿದೆ. ಇದು ಸೆಕ್ಷನ್ 153-ಎ ಅಡಿಯಲ್ಲಿ ನಿಷೇಧಿತ ಕೆಲಸವನ್ನು ಮಾಡುವ ಯಾವುದೇ ಉದ್ದೇಶವನ್ನು ಪ್ರತಿಬಿಂಬಿಸುವುದಿಲ್ಲ.

ಆರ್ಟಿಕಲ್ 370 ರದ್ದತಿ ಮತ್ತು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನದ ರದ್ದತಿಯನ್ನು ಟೀಕಿಸುವ ಹಕ್ಕು ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಇದೆ. ಇದು ಆರ್ಟಿಕಲ್ 19(1)(ಎ) ಮೂಲಕ ಖಾತರಿಪಡಿಸಿರುವ ಅವರ ವಾಕ್ ಸ್ವಾತಂತ್ರ್ಯದ ಭಾಗವಾಗಿದೆ.

ಸರ್ಕಾರದ ಪ್ರತಿ ಟೀಕೆಯನ್ನು ಅಪರಾಧವೆಂದು ಪರಿಗಣಿಸಿದರೆ ಭಾರತೀಯ ಸಂವಿಧಾನದ ಅತ್ಯಗತ್ಯ ಲಕ್ಷಣವಾದ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ. ಸರ್ಕಾರದ ನಿರ್ಧಾರಗಳ ವಿರುದ್ಧ ಶಾಂತಿಯುತ ಪ್ರತಿಭಟನೆ ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವಾಗಿದೆ. ಬಳಸಿದ ಪದಗಳು ಅಥವಾ ಕ್ರಿಯೆಗಳ ಹಿಂದಿನ ಉದ್ದೇಶವನ್ನು ನ್ಯಾಯಾಲಯಗಳು ಪರಿಗಣಿಸಬೇಕು.

ಆಯಾ ಸ್ವಾತಂತ್ರ್ಯದ ದಿನಗಳಲ್ಲಿ ಇತರ ದೇಶಗಳ ನಾಗರಿಕರನ್ನು ಅಭಿನಂದಿಸುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ. ಆಗಸ್ಟ್ 14ರ ಸ್ವಾತಂತ್ರ್ಯ ದಿನದಂದು ಪಾಕಿಸ್ತಾನದ ಜನರಿಗೆ ಅಭಿನಂದನೆ ಸಲ್ಲಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಇದು ಸದ್ಭಾವನೆಯ ಅಭಿವ್ಯಕ್ತಿಯಾಗಿದೆ.

ಇಂತಹ ಕ್ರಮಗಳು ಜನರಲ್ಲಿ ಸಂಶಯ, ದ್ವೇಷ ಮತ್ತು ವಿರೋಧವನ್ನು ಹುಟ್ಟುಹಾಕುತ್ತದೆ ಎಂದು ಹೇಳಲಾಗದು. ಅವರು ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದವರು ಎಂದ ಮಾತ್ರಕ್ಕೆ ಅವರ ಮೇಲೆ ಆಂತರಿಕ ಉದ್ದೇಶಗಳನ್ನು ಕಲಿಸಲು ಸಾಧ್ಯವಿಲ್ಲ.

ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿಯಂತ್ರಣದ ವ್ಯಾಪ್ತಿಯ ಬಗ್ಗೆ ಪೊಲೀಸರಿಗೆ ಕಲಿಸುವ ಸಮಯ ಇದು. ಸಂವಿಧಾನದಲ್ಲಿ ಪ್ರತಿಪಾದಿಸಿರುವ ಪ್ರಜಾಸತ್ತಾತ್ಮಕ ಮೌಲ್ಯಗಳ ಬಗ್ಗೆ ಅವರಿಗೆ ಅರಿವು ಮೂಡಿಸಬೇಕು” ಎಂದು ಸುಪ್ರೀಂ ಕೋರ್ಟ್ ಹೇಳಿದೆ.