“ನಿಮ್ಮ ಕ್ಷೇತ್ರದಲ್ಲಿ ನಿಮ್ಮದೇ ಕಾರ್ಯಕರ್ತರು ನಿಮಗೆ ಟಿಕೆಟ್ ಕೊಡಬಾರದು ಎನ್ನುತ್ತಿದ್ದಾರಂತೆ, ಒಮ್ಮೆ ಆ ಕಡೆ ಗಮನ ಹರಿಸಿ ನಿಮ್ಮ ಟಿಕೆಟ್ ಭದ್ರಪಡಿಸಿಕೊಳ್ಳಿ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.
ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವಾರದ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯಲ್ಲಿ ಜೂನ್ 20 ರಂದು ಕಲಬುರ್ಗಿಯಲ್ಲಿ ಗೃಹ ಇಲಾಖೆಯ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ, ಮಾದಕ ದ್ರವ್ಯ ಮತ್ತು ಅಕ್ರಮ ಮದ್ಯ, ಅಕ್ರಮ ಮರಳು ಗಣಿಗಾರಿಕೆ ಮತ್ತು ಕಲ್ಲುಗಣಿಗಾರಿಕೆ, ಬೆಟ್ಟಿಂಗ್ ಮತ್ತು ಜೂಜು, ಅಂದಗೊಳಿಸುವ ರೌಡಿಗಳು, ದೇಶ ನಿರ್ಮಿತ ಬಂದೂಕುಗಳ ಅಕ್ರಮ ಪೂರೈಕೆ ಮುಂತಾದವುಗಳನ್ನು ತಡೆಯಲು ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.
ಇದಕ್ಕೆ ಪ್ರತಿಕ್ರಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, “ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರಿಗೆ ಕೆಲಸದ ಒತ್ತಡ ಜಾಸ್ತಿಯಾಗಿದೆಯೋ? ತಮ್ಮ ಖಾತೆಯ ಮೇಲೆ ಬೇಸರವೋ? ತಿಳಿಯುತ್ತಿಲ್ಲ. ಅಥವಾ ತಮ್ಮ ಗೃಹಖಾತೆಯ ಕೆಲಸಗಳನ್ನು ಪ್ರಿಯಾಂಕ್ ಖರ್ಗೆ ಅವರಿಗೆ ಲೀಸ್ ಗೆ ಕೊಟ್ಟಿದ್ದಾರೋ? ಪೊಲೀಸ್ ಅಧಿಕಾರಗಳಿಗೆ ಮರಿ ಖರ್ಗೆಯವರು ಕ್ಲಾಸ್ ತಗೊತಿದ್ದಾರೆ ಎಂದರೆ ನನ್ನ ಊಹೆ ನಿಜ ಅಲ್ಲವೇ? ಸಿದ್ದರಾಮಯ್ಯ ನವರೇ” ಎಂದು ಕೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, “ಶಾಸಕಾಂಗದ ಕಾರ್ಯವ್ಯಾಪ್ತಿಯ ಅರಿವಿಲ್ಲದ ನಳೀನ್ ಕುಮಾರ್ ಕಟೀಲ್ ಅವರೇ, ನೀವು ಅಧಿಕಾರ ಕಳೆದುಕೊಂಡಿದ್ದೇ ಇಂತಹ ಅಜ್ಞಾನಕ್ಕೋಸ್ಕರ. ಸಂಸದರಾಗಿರುವ ನಿಮಗೆ ನಿಮ್ಮ ಸ್ಥಾನದ ಹೊಣೆಯ ಅರಿವಿಲ್ಲದಿರಬಹುದು, ನನಗೆ ನನ್ನ ಹೊಣೆಯ ಅರಿವಿದೆ. ಕಲ್ಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವನಾದ ನಾನು ಜಿಲ್ಲೆಯ ಎಲ್ಲಾ ಇಲಾಖೆಗಳ ಆಗುಹೋಗುಗಳಿಗೂ ಹೊಣೆಯಾಗಿರುತ್ತೇನೆ, ನನ್ನ ಜಿಲ್ಲೆಯ ಗೃಹ ಇಲಾಖೆಯನ್ನೂ ನಾನೇ ನಿಯಂತ್ರಿಸಬೇಕಿರುವುದು ನನ್ನ ಕರ್ತವ್ಯ. ನಿಮ್ಮ ಪಕ್ಷದವರಿಗೆ ಇಂತಹ ಸಾಮಾನ್ಯ ಜ್ಞಾನ ಇಲ್ಲದಿರುವುದಕ್ಕಾಗಿಯೇ ಜನತೆ ನಿಮ್ಮನ್ನು ಮನೆಯಲ್ಲಿ ಕೂರಿಸಿದ್ದಾರೆ.
ನಿಮ್ಮ 40% ಸರ್ಕಾರ ಈ ರಾಜ್ಯವನ್ನು ಕೊಳ್ಳೆ ಹೊಡೆದಿದ್ದು, ರೈತರು, ಗುತ್ತಿಗೆದಾರರು ಆತ್ಮಹತ್ಯೆಗೆ ಶರಣಾಗಿದ್ದನ್ನು ರಾಜ್ಯ ಕಂಡಿದೆ. ನಿಮ್ಮಂತ ವಿಫಲ ಆಡಳಿತಗಾರರಿಂದ ನಾವು ಆಡಳಿತಾತ್ಮಕ ಪಾಠ ಕಲಿಯುವ ಅಗತ್ಯವಿಲ್ಲ. ಅಧ್ಯಕ್ಷಗಿರಿಗೆ ರಾಜೀನಾಮೆ ಕೊಟ್ಟೆ ಎಂದು ಯೂ ಟರ್ನ್ ಹೊಡೆದಿದ್ದೇಕೆ ಎಂಬುದನ್ನು ಸ್ಪಷ್ಟಪಡಿಸಿ, ನಿಮ್ಮ ಕ್ಷೇತ್ರದಲ್ಲಿ ನಿಮ್ಮದೇ ಕಾರ್ಯಕರ್ತರು ನಿಮಗೆ ಟಿಕೆಟ್ ಕೊಡಬಾರದು ಎನ್ನುತ್ತಿದ್ದಾರಂತೆ, ಒಮ್ಮೆ ಆ ಕಡೆ ಗಮನ ಹರಿಸಿ ನಿಮ್ಮ ಟಿಕೆಟ್ ಭದ್ರಪಡಿಸಿಕೊಳ್ಳಿ” ಎಂದಿದ್ದಾರೆ.