ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಚುನಾವಣೆ ಆಯೋಗ Archives » Page 2 of 2 » Dynamic Leader
November 23, 2024
Home Posts tagged ಚುನಾವಣೆ ಆಯೋಗ (Page 2)
ದೇಶ ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಕೇಂದ್ರ ಬಿಜೆಪಿ ಸರ್ಕಾರವು 2018ರಲ್ಲಿ ಚುನಾವಣಾ ಬಾಂಡ್ ಎಂಬ ಯೋಜನೆಯನ್ನು ಜಾರಿಗೆ ತಂದಿತು. ಈ ಯೋಜನೆಯ ಮೂಲಕ ವ್ಯಕ್ತಿಗಳು ಮತ್ತು ಕಂಪನಿಗಳು ಚುನಾವಣಾ ಬಾಂಡ್‌ಗಳನ್ನು ಖರೀದಿಸಿ ತಮ್ಮ ನೆಚ್ಚಿನ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಬಹುದು. ಅದಕ್ಕಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ಚುನಾವಣಾ ಬಾಂಡ್‌ಗಳು 1 ಸಾವಿರದಿಂದ 1 ಕೋಟಿ ರೂಪಾಯಿಯವರೆಗೆ ಮಾರಾಟ ಮಾಡಲಾಯಿತು.

ಈ ಯೋಜನೆಯ ವಿಶೇಷತೆ ಏನೆಂದರೆ, ಚುನಾವಣಾ ಬಾಂಡ್‌ಗಳನ್ನು ಖರೀದಿಸುವವರ ಹೆಸರು ಮತ್ತು ವಿಳಾಸ ಸೇರಿದಂತೆ ಯಾವುದೇ ವಿವರಗಳನ್ನು ಬಹಿರಂಗಪಡಿಸಲಾಗುವುದಿಲ್ಲ. ಈ ಬಾಂಡ್ ಅನ್ನು 15 ದಿನಗಳಲ್ಲಿ ನಗದು ರೂಪದಲ್ಲಿ ಪರಿವರ್ತಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಚುನಾವಣಾ ಬಾಂಡ್‌ಗಳ ಮೊತ್ತವು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಹೋಗುತ್ತವೆ. ಅಂತಹ ಸಮಸ್ಯೆ ಈ ಚುನಾವಣಾ ಬಾಂಡ್ನಲ್ಲಿ ಇದೆ.

ಈ ಚುನಾವಣಾ ಬಾಂಡ್ ಸಂಪೂರ್ಣವಾಗಿ ಬಿಜೆಪಿಯ ಪರವಾಗಿಯೇ ಇತ್ತು ಎಂದು ಹೇಳಲಾಗುತ್ತಿದೆ. 2016 ರಿಂದ 2022ರ ಅವಧಿಯಲ್ಲಿ ಬಿಜೆಪಿ ಮಾತ್ರ ರೂ.5,272 ಕೋಟಿ ದೇಣಿಗೆ ಪಡೆದಿತ್ತು. ಇದು ಒಟ್ಟು ನಿಧಿಯಲ್ಲಿ ಶೇ.58 ರಷ್ಟು ಆಗಿರುತ್ತದೆ. ಈ ಕಾರಣದಿಂದಾಗಿ, ಚುನಾವಣಾ ಬಾಂಡ್‌ಗಳಲ್ಲಿ ಪಾರದರ್ಶಕತೆ ಇಲ್ಲ, ಹೀಗಾಗಿ ಅದನ್ನು ರದ್ದುಗೊಳಿಸಬೇಕೆಂದು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾದವು.

ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ 5 ನ್ಯಾಯಾಧೀಶರ ಸಂವಿಧಾನ ಪೀಠವು, ಚುನಾವಣಾ ಬಾಂಡ್ ಕಾರ್ಯವಿಧಾನವನ್ನು ರದ್ದುಗೊಳಿಸಲಾಗಿದೆ ಎಂದು ಸರ್ವಾನುಮತದ ತೀರ್ಪು ನೀಡಿತು.

ಇದಲ್ಲದೆ, 2019 ರಿಂದ ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ನೀಡಿದವರ ವಿವರಗಳನ್ನು ಮಾರ್ಚ್ 6 ರೊಳಗೆ ಎಸ್‌ಬಿಐ ಬ್ಯಾಂಕ್ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಮತ್ತು ದಾನಿಗಳ ವಿವರಗಳನ್ನು ಮಾರ್ಚ್ 13 ರೊಳಗೆ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತು.

ಏತನ್ಮದ್ಯೆ, ಎರಡು ದಿನಗಳ ಹಿಂದೆ ಎಸ್‌ಬಿಐ ಬ್ಯಾಂಕ್, ಚುನಾವಣಾ ಬಾಂಡ್ ವಿವರಗಳನ್ನು ಬಹಿರಂಗಪಡಿಸಲು ಜೂನ್‌ 30 ರವರೆಗೆ ಕಾಲಾವಕಾಶ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡುವ ಮೂಲಕ ಭಾರಿ ವಿವಾದವನ್ನು ಸೃಷ್ಟಿಸಿತು. ಈ ಘಟನೆಯಲ್ಲಿ, ಚುನಾವಣೆಗೆ ಮುನ್ನ ಈ ವಿವರಗಳನ್ನು ಪ್ರಕಟಿಸುವುದನ್ನು ತಪ್ಪಿಸಲು ಎಸ್‌ಬಿಐ ಇಂತಹ ಬೇಡಿಕೆಯನ್ನು ಎತ್ತಿದೆ ಎಂದು ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸುತ್ತಿವೆ.

ಈ ಹಿನ್ನಲೆಯಲ್ಲಿ, ತಮಿಳುನಾಡಿನ ಮಧುರೈ ಸಂಸದ ಎಸ್.ವೆಂಕಟೇಶನ್ ಅವರು ಈ ವಿಚಾರವಾಗಿ ಎಸ್‌ಬಿಐ ಬ್ಯಾಂಕ್ ಅನ್ನು ಟೀಕಿಸಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ, “ಚಂದ್ರಯಾನವು ಚಂದ್ರನನ್ನು ತಲುಪಲು 41 ದಿನಗಳನ್ನು ತೆಗೆದುಕೊಂಡಿತು, ಇದು ಆಧುನಿಕ ವಿಜ್ಞಾನದ ಸಾಧನೆಯಾಗಿದೆ. ಮುಂಬೈ ಮೂಲದ ಎಸ್‌ಬಿಐ ದೆಹಲಿಯ ಸುಪ್ರೀಂ ಕೋರ್ಟ್‌ಗೆ ದಾನಿಗಳ ಹೆಸರುಗಳನ್ನು ನೀಡಲು 140 ದಿನಗಳ ಕಾಲಾವಕಾಶ ಕೇಳುತ್ತಿದೆ. ಇದು ಆಧುನಿಕ ಭ್ರಷ್ಟಾಚಾರದ ಸಾಧನೆಯಾಗಿದೆ.

48 ಕೋಟಿ ಗ್ರಾಹಕರ ನಂಬಿಕೆಯಾಗಿದ್ದ ಎಸ್‌ಬಿಐ ಇನ್ನು ಮುಂದೆ ಹ್ಯಾಶ್‌ಟ್ಯಾಗ್ ಹಾಕಿ #ModiKaParivar ಎಂದು ನಮೂದಿಸಿಕೊಳ್ಳಲಿ” ಎಂದು ಟೀಕಿಸಿದ್ದಾರೆ.

ದೇಶ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ನೇಮಕದ ನಿಯಮಗಳಲ್ಲಿ ಕೇಂದ್ರ ಸರ್ಕಾರವು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಅಧಿಕಾರ ಸಮಿತಿಯಲ್ಲಿ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಕೇಂದ್ರ ಸಂಪುಟ ಸಚಿವರನ್ನು ನೇಮಿಸಲು ಹೊಸ ಕಾನೂನನ್ನು ಜಾರಿಗೆ ತರಲಾಯಿತು.

ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಮುಖ್ಯ ನ್ಯಾಯಮೂರ್ತಿಯನ್ನು ಹೊರಗಿಡುವ ಮೂಲಕ ಕಾಯ್ದೆಯು ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ನೀಡಿದೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ, ಈ ಹೊಸ ಕಾನೂನಿನ ವಿರುದ್ಧ ಕಾಂಗ್ರೆಸ್ ನಾಯಕಿ ಜಯಾ ಠಾಕೂರ್ ಮತ್ತು ಇತರರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಹೊಸ ಕಾನೂನಿಗೆ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿದಾರರು ಒತ್ತಾಯಿಸಿದ್ದರು.

ಈ ಪ್ರಕರಣವು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠದಲ್ಲಿ ಇಂದು ವಿಚಾರಣೆಗೆ ಬಂದಿತು. ಕಾಂಗ್ರೆಸ್ ನಾಯಕಿ ಜಯಾ ಠಾಕೂರ್ ಪರ ಹಿರಿಯ ವಕೀಲ ವಿಕಾಸ್ ಸಿಂಗ್ ವಾದ ಮಂಡಿಸಿದರು. ‘ದಯವಿಟ್ಟು ಈ ಕಾನೂನಿಗೆ ಮಧ್ಯಂತರ ತಡೆಯಾಜ್ಞೆ ನೀಡಿ. ಇದು ಅಧಿಕಾರ ವಿಭಜನೆಯ ಪದ್ಧತಿಗೆ ವಿರುದ್ಧವಾಗಿದೆ’ ಎಂದು ಅವರು ವಾದಿಸಿದರು.

ಆಗ ಮಾತನಾಡಿದ ನ್ಯಾಯಮೂರ್ತಿಗಳು, ‘ಪ್ರತಿವಾದಿಗಳ ವಾದ ಆಲಿಸದೆ ಮಧ್ಯಂತರ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ. ಅವರಿಗೆ ನೋಟಿಸ್ ಕಳುಹಿಸುತ್ತೇವೆ’ ಎಂದರು. ಈ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯ ಪ್ರತಿಯನ್ನು ಕೇಂದ್ರ ಸರ್ಕಾರದ ವಕೀಲರಿಗೆ ನೀಡುವಂತೆ ವಕೀಲ ವಿಕಾಸ್ ಸಿಂಗ್‌ಗೆ ನ್ಯಾಯಮೂರ್ತಿಗಳು ಸೂಚಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಕಳುಹಿಸುವಂತೆಯೂ ಆದೇಶಿಸಿದರು.

ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಮುಖ್ಯ ನ್ಯಾಯಾಧೀಶರನ್ನು ಒಳಗೊಂಡಿರಬೇಕು ಎಂದು ಸುಪ್ರೀಂ ಕೋರ್ಟ್ ಕಳೆದ ವರ್ಷ ಮಾರ್ಚ್‌ನಲ್ಲಿ ಆದೇಶಿಸಿತ್ತು. ಆದರೆ ಹೊಸ ಕಾನೂನಿನಲ್ಲಿ ಮುಖ್ಯ ನ್ಯಾಯಮೂರ್ತಿಗಳ ಹೆಸರನ್ನು ಕೈಬಿಡಲಾಗಿದೆ. ಪ್ರಧಾನಮಂತ್ರಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಪ್ರಧಾನಮಂತ್ರಿ ಸೂಚಿಸಿದ ಕೇಂದ್ರ ಸಚಿವರು ಉಪಸ್ಥಿತರಿರುತ್ತಾರೆ ಎಂದು ಹೇಳಿದೆ.

ಮುಖ್ಯ ನ್ಯಾಯಮೂರ್ತಿಯನ್ನು ಆಯ್ಕೆ ಸಮಿತಿಯಿಂದ ತೆಗೆದುಹಾಕುವ ಮೂಲಕ ಮೋದಿ ಸರ್ಕಾರವು ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ದೇಶ ರಾಜಕೀಯ

ಶ್ರೀನಗರ: 5 ರಾಜ್ಯಗಳ ವಿಧಾನಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲೇ, ಜಮ್ಮು ಮತ್ತು ಕಾಶ್ಮೀರಕ್ಕೆ ಮಾತ್ರ ಏಕೆ ಚುನಾವಣೆ ನಡೆಸಲಿಲ್ಲ ಮತ್ತು ಕಾರಣಗಳನ್ನು ಹೇಳಿ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಉಮರ್ ಅಬ್ದುಲ್ಲಾ ಕೇಳಿದ್ದಾರೆ.

2019ರಲ್ಲಿ ಕೇಂದ್ರ ಸರ್ಕಾರ, ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ 370ನೇ ವಿಧಿಯನ್ನು ರದ್ದುಗೊಳಿಸಿ, ಜಮ್ಮು ಮತ್ತು ಕಾಶ್ಮೀರವನ್ನು ಒಂದು ಕೇಂದ್ರಾಡಳಿತ ಪ್ರದೇಶವಾಗಿ, ಲಡಾಖನ್ನು ಮತ್ತೊಂದು ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಭಜನೆ ಮಾಡಿತು.

ಅಂದಿನಿಂದ ಅಲ್ಲಿ ವಿಧಾನಸಭೆ ಚುನಾವಣೆಯನ್ನು ನಡೆಸಲಿಲ್ಲ. ಇದಕ್ಕೆ ಸಂಬಂಧಿತ ಪ್ರಕರಣದಲ್ಲಿ, ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಸಮಯದಲ್ಲಿ ಚುನಾವಣೆ ನಡೆಸಲು ಸಿದ್ಧವಿರುವುದಾಗಿಯೂ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಗಣನೀಯವಾಗಿ ಪೂರ್ಣಗೊಂಡಿದೆ ಎಂದು ಸುಪ್ರೀಂ ಕೋರ್ಟ್‌ಗೂ ತಿಳಿಸಿತ್ತು.

ಈ ಹಿನ್ನಲೆಯಲ್ಲಿ, ಇಂದು (ಅ.9) ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಮಿಜೋರಾಂ, ಛತ್ತೀಸ್ ಗಢ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣ ಮುಂತಾದ 5 ರಾಜ್ಯಗಳ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಪ್ರಕಟಿಸಿದರು.

ಇದನ್ನೂ ಓದಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆ: ಕಾಂಗ್ರೆಸ್ ಪಕ್ಷವೇ… ಅಥವಾ ಬಿಜೆಪಿಯೇ… ಪರಿಸ್ಥಿತಿ ಏನು?

ಆಗ ಜಮ್ಮು-ಕಾಶ್ಮೀರ ಚುನಾವಣೆ ಯಾವಾಗ ನಡೆಯಲಿದೆ ಎಂದು ಪತ್ರಕರ್ತರು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ರಾಜೀವ್ ಕುಮಾರ್, “ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪರಿಸ್ಥಿತಿ ಮತ್ತು ಇತರ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಚುನಾವಣೆ ನಡೆಸಲು ಇದು ಸರಿಯಾದ ಸಮಯ ಎಂದು ಚುನಾವಣಾ ಆಯೋಗವು ಭಾವಿಸಿದಾಗ ಚುನಾವಣೆ ನಡೆಸಲಾಗುವುದು” ಎಂದು ಹೇಳಿದರು.

ಇದರ ಬಗ್ಗೆ ಪ್ರತಿಕ್ರಿಯಿಸಿರುವ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಉಮರ್ ಅಬ್ದುಲ್ಲಾ, “ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಸಲು ಭಾರತ ಚುನಾವಣಾ ಆಯೋಗಕ್ಕೆ ಅನುಮತಿ ನೀಡಿಲ್ಲ. ಚುನಾವಣೆ ನಡೆಸದಿರಲು ಯಾವ ಕಾರಣಗಳು ಇದೆಯೋ ಅದನ್ನು ತಿಳಿಸಿ.

ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ನಡೆಸಲು ಸಾಧ್ಯವಾಗದಷ್ಟು ಹದಗೆಟ್ಟಿದೆಯೇ? ಜಮ್ಮು ಮತ್ತು ಕಾಶ್ಮೀರದ ಜನರನ್ನು ಪ್ರಜಾಪ್ರಭುತ್ವದಿಂದ ಏಕೆ ಹೊರಗಿಡಲಾಗುತ್ತಿದೆ” ಎಂದು ಚುನಾವಣಾ ಆಯೋಗ ಉತ್ತರಿಸಬೇಕು” ಎಂದು ಹೇಳಿದ್ದಾರೆ.