ನವದೆಹಲಿ: ಎನ್‌ಡಿಎ ಸರ್ಕಾರದ ಮೊದಲ 15 ದಿನಗಳಲ್ಲಿ ನೀಟ್ ಮತ್ತು ನೆಟ್ ಪರೀಕ್ಷೆಯ ಅವ್ಯವಹಾರ, ರೈಲು ಅಪಘಾತ ಸೇರಿದಂತೆ 10 ಅಹಿತಕರ ಘಟನೆಗಳು ನಡೆದಿದ್ದು, ಸರ್ಕಾರವನ್ನು ಉಳಿಸುವತ್ತ ಪ್ರಧಾನಿ ಗಮನ ಹರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.
ಬಿಜೆಪಿ ನೇತೃತ್ವದ ಎನ್‌ಡಿಎ ಸಮ್ಮಿಶ್ರ ಸರ್ಕಾರದ ಮೊದಲ 15 ದಿನಗಳಲ್ಲಿ 10 ಅಹಿತಕರ ಘಟನೆಗಳು ನಡೆದಿವೆ ಎಂದು ತಿಳಿಸಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಅದರಲ್ಲಿ ರೈಲು ಅಪಘಾತ, ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿ, ನೀಟ್ ಅವ್ಯವಹಾರ, ನೀಟ್ ಸ್ನಾತಕೋತ್ತರ ಪರೀಕ್ಷೆ ರದ್ದತಿ, ನೆಟ್ ಪ್ರಶ್ನೆ ಪತ್ರಿಕೆ ಸೋರಿಕೆ, ನೀರಿನ ಕೊರತೆ, ಶಾಖ ಅಲೆಗಳ ವಿಚಾರದಲ್ಲಿ ಸುರಕ್ಷತಾ ಕ್ರಮಗಳ ಕೊರತೆಯಿಂದ ಪ್ರಾಣಹಾನಿ, ಹಾಲು, ಬೇಳೆಕಾಳುಗಳು, ಗ್ಯಾಸ್ ಮತ್ತು ಟೋಲ್ ದರ ಹೆಚ್ಚಲ ಮುಂತಾದ ಎಲ್ಲವನ್ನೂ ಪಟ್ಟಿ ಮಾಡಿದ್ದಾರೆ.
ನರೇಂದ್ರ ಮೋದಿ ಅವರು ಮಾನಸಿಕವಾಗಿ ಕುಗ್ಗಿದಂತೆ ಕಾಣುತ್ತಿದ್ದು, ಸರ್ಕಾರವನ್ನು ಉಳಿಸುವಲ್ಲಿ ನಿರತರಾಗಿದ್ದಾರೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಸಂವಿಧಾನದ ಮೇಲಿನ ಮೋದಿ ಮತ್ತು ಅವರ ಸರ್ಕಾರದ ದಾಳಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಮತ್ತು ಯಾವುದೇ ಸಂದರ್ಭದಲ್ಲಿ ಅವಕಾಶ ನೀಡುವುದಿಲ್ಲ ಎಂದು ರಾಹುಲ್ ಹೇಳಿದ್ದಾರೆ.
ಭಾರತದ ಪ್ರಬಲ ವಿರೋಧ ಪಕ್ಷವಾಗಿ ಜನರ ಧ್ವನಿಯಾಗುತ್ತೇವೆ ಎಂದಿರುವ ರಾಹುಲ್ ಗಾಂಧಿ, ಪ್ರಧಾನಿಯನ್ನು ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.