ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ನೈಸ್ ಯೋಜನೆ Archives » Dynamic Leader
October 21, 2024
Home Posts tagged ನೈಸ್ ಯೋಜನೆ
ರಾಜಕೀಯ

ನೈಸ್ ಯೋಜನೆಗೆ ಹೆಚ್.ಡಿ.ದೇವೇಗೌಡ ಅವರೇ ಸಹಿ ಹಾಕಿದ್ದು ಎಂದು ಹೇಳುವ ಮೂಲಕ ತಾವು ಎಸಗಿದ ಅಕ್ರಮಕ್ಕೆ ತೇಪೆ ಹಚ್ಚಲು ಹೊರಟಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು. ಆದರೆ, ಅದೇ ದೇವೇಗೌಡರ ಕಾಲದಲ್ಲಿ ಆಗಿದ್ದ ಮೂಲ ಒಪ್ಪಂದದ ಬಗ್ಗೆ ಅವರದ್ದು ಧ್ಯಾನಸ್ಥ ಮೌನ!! ಯಾಕೆ?? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ನೈಸ್ ರಸ್ತೆಯ ‘ತಿರುಚಿದ ಒಪ್ಪಂದ’ದ ಬಗ್ಗೆಯೂ ಅವರು ಹೇಳಬೇಕಿತ್ತಲ್ಲವೇ? ಬ್ರ್ಯಾಂಡ್ ಬೆಂಗಳೂರು ಟೀಮಿನ ಮುಖ್ಯಸ್ಥರ ಕರಾಮತ್ತಿನ ಬಗ್ಗೆಯೂ ಬೆಳಕು ಚೆಲ್ಲಬೇಕಲ್ಲವೇ? ಅದು ಬಿಟ್ಟು, ಸತ್ಯ ಮರೆಮಾಚಿ ಬರೀ ‘ಸಹಿ’ಯ ಬಗ್ಗೆ ನೀವು ಗೊಣಗಿದ್ದು ಯಾಕೆ? ಸದನ ಸಮಿತಿ ವರದಿಯ ಬಗ್ಗೆಯೂ ಚಕಾರ ಎತ್ತದಿರುವುದು ಯಾಕೋ? ಏನಿದು ಈ ನಿಗೂಢ ಸೋಜಿಗ??

ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ಉರುಫ್ ನೈಸ್ ರಸ್ತೆ ಯೋಜನೆಗೆ ರಾಜ್ಯ ಸರಕಾರದಿಂದ ನಯಾಪೈಸೆ ಕೊಡುವುದಿಲ್ಲ, ಪೂರ್ಣ ಹೂಡಿಕೆ ಹಣವನ್ನು ಕಂಪನಿಯೇ ಭರಿಸಬೇಕು, ಭೂಸ್ವಾಧೀನವೂ ಸೇರಿ ಸರಕಾರದ ಮೇಲೆ ಯಾವುದೇ ಹೊರೆ ಇರುವಂತಿಲ್ಲ. ಇದು ದೇವೇಗೌಡರ ಕಾಲದಲ್ಲಿ ಆದ ಮೂಲ ಒಪ್ಪಂದದ ಸಾರಾಂಶ. ಹಾಗಾದರೆ, ಈ ಯೋಜನೆ ‘ಸಾರ’ವಾಗಿದ್ದು ಯಾರಿಗೆ?

ಬ್ರ್ಯಾಂಡ್ ಬೆಂಗಳೂರು ಹರಿಕಾರಾಗಲು ಹೊರಟಿರುವ ನೀವು, ‘ತಿರುಚಿದ ಒಪ್ಪಂದ’ದ ಸೂತ್ರಧಾರರನ್ನೇ ಪಕ್ಕದಲ್ಲಿ ಇಟ್ಟುಕೊಂಡಿದ್ದೀರಿ. ತಿರುಚಿದ ಪರಿಣಾಮ ರಾಜ್ಯವು ಕೋರ್ಟ್ ಕಟಕಟೆಯಲ್ಲಿ ನಿಲ್ಲಬೇಕಾಯಿತು. ಸಾವಿರಾರು ಕೋಟಿ ಲೂಟಿಯಾಯಿತು. ಸರಕಾರ & ಜನರ ಸಾವಿರಾರು ಎಕರೆ ಭೂಮಿ ಭೂಗಳ್ಳರ ಪಾಲಾಯಿತು.

ಬ್ರ್ಯಾಂಡ್ ಬೆಂಗಳೂರು ಎಂದರೆ ಬುಲ್ಡೋಜ್ ಬೆಂಗಳೂರಾ? ಇಡೀ ಬೆಂಗಳೂರು ನಗರವನ್ನು ಛಿದ್ರಛಿದ್ರ ಮಾಡಿ ಪೋಗದಸ್ತಾಗಿ ಬುಲ್ಡೋಜ್ ಮಾಡಿ ಕಿಸೆ ತುಂಬಿಸಿಕೊಳ್ಳುವುದಾ? ಕರ್ನಾಟಕವನ್ನು ಕಡಲೇಪುರಿಯಂತೆ ಮುಕ್ಕಿ ತಿನ್ನುವುದಾ?

2014-2 016ರಲ್ಲಿನ ಸದನ ಸಮಿತಿ ವರದಿಯನ್ನು ತಾವು ಓದಿಲ್ಲವೇ? ಅಥವಾ ಅದನ್ನು ಕಸದ ಬುಟ್ಟಿಗೆ ಎಸೆದಿದ್ದೀರಾ? ಕೊಳ್ಳೆ ಹೊಡೆದ ಈಸ್ಟ್ ಇಂಡಿಯಾದಂಥ ಕಂಪನಿ ಜತೆ ಕೈ ಜೋಡಿಸಿದ ನಿಮಗೆ, ದೇವೇಗೌಡರ ಹೆಸರು ಹೇಳುವ ಅರ್ಹತೆ ಇದೆಯಾ? ರಾಜ್ಯದ ಅಭ್ಯುದಯಕ್ಕೆ ಬದುಕನ್ನೇ ಮೀಸಲಿಟ್ಟ ಆ ಹಿರಿಯ ಜೀವದ ಬಗ್ಗೆ ನಾಲಿಗೆ ಜಾರಿ ಬಿಡಲು ನಾಚಿಕೆ ಆಗುವುದಿಲ್ಲವೇ?

ನೈಸ್ ಕರ್ಮವನ್ನೆಲ್ಲ ಒಮ್ಮೆ ಕಣ್ಮುಚ್ಚಿ ನೆನಪು ಮಾಡಿಕೊಳ್ಳಿ. ಅಲ್ಲಿ ನೀವೆಲ್ಲಿ ನಿಲ್ಲುತ್ತಿರಿ ಎಂದು ಊಹಿಸಿಕೊಳ್ಳಿ, ಮಾಡಿದ ಪಾಪಗಳೆಲ್ಲವೂ ಸ್ಲೈಡುಗಳಂತೆ ಪ್ರತ್ಯಕ್ಷವಾಗುತ್ತವೆ. ಗಂಗೆಯಲ್ಲಿ ಸಾವಿರ ಸಲ ಮುಳುಗಿದರೂ ಅಳಿಯದ ಪಾಪವದು.ರಾಜ್ಯವನ್ನೇ ದೋಚಿದ ಖಾಸಗಿ ಕಂಪನಿಗೆ ‘ಪೊಲಿಟಿಕಲ್ ಏಜೆಂಟ್’ ಆಗುವುದಕ್ಕೆ ಅಸಹ್ಯ ಅನಿಸುವುದಿಲ್ಲವೇ?

ನೈಸ್ ಯೋಜನೆ ಯಾರಿಗೆಲ್ಲಾ ಕಾಮಧೇನು, ಕಲ್ಪವೃಕ್ಷವಾಗಿದೆ ನನಗಿಂತ ನಿಮಗೆ ಚೆನ್ನಾಗಿ ಗೊತ್ತು. ಧನಪಿಶಾಚಿ ರಾಜಕಾರಣಿಗಳು, ಮುಖ್ಯ ಕಾರ್ಯದರ್ಶಿ ಮಟ್ಟದವರೂ ಸೇರಿ ಅನೇಕ ಅಧಿಕಾರಿಗಳ ‘ಅನೈತಿಕ ಭ್ರಷ್ಟವ್ಯೂಹ’ ಕರ್ನಾಟಕವನ್ನು ಕಂಡರಿಯದ ರೀತಿಯಲ್ಲಿ ಲೂಟಿ ಮಾಡಿದೆ. ಈ ಲೂಟಿಯ ಕಥೆಯಲ್ಲಿ ನಿಮ್ಮ ಪಾತ್ರವೇನು?

ತಾವು ಈಗ ಫುಲ್ ಬ್ಯುಸಿ, ನಾನು ಬಲ್ಲೆ. ಆದರೂ ಕೊಂಚ ಬಿಡುವು ಮಾಡಿಕೊಳ್ಳಿ, ಸದನ ಸಮಿತಿ ವರದಿಯ ಮೇಲೆ ಕಣ್ಣಾಡಿಸಿ. ದೇವೇಗೌಡರು ಸಿಎಂ ಆಗಿದ್ದ 1995ರ ಅಕ್ಟೋಬರ್, ನವೆಂಬರಿನಲ್ಲಿ ಈ ಯೋಜನೆಗೆ ಸಹಿ ಹಾಕುವ ವೇಳೆ ಇಂದಿನ ಮುಖ್ಯಮಂತ್ರಿಗಳೂ ಅಂದು ಹಣಕಾಸು ಸಚಿವರಾಗಿದ್ದರು.ಅವರಿಗೂ ಸತ್ಯ ಗೊತ್ತಿರುತ್ತದೆ. ಒಮ್ಮೆ ವಿಚಾರಿಸಲು ನಿಮಗೇನು ಸಮಸ್ಯೆ?

ಸದನ ಸಮಿತಿಯ ಕೊನೆ ಪ್ಯಾರಾ ಓದಿಕೊಳ್ಳಿ. ಸಮಿತಿ ಸಿಬಿಐ ತನಿಖೆಗೆ ಶಿಫಾರಸು ಮಾಡಿದೆ. ನಿಮಗೆ ಧೈರ್ಯವಿದ್ದರೆ ಸಿಬಿಐ ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಿ. ನೂರಾ ಮೂವತ್ತೈದು ಸೀಟುಗಳ ಬಹುಮತ ಸರಕಾರ ನಿಮ್ಮದಲ್ಲವೇ? ನುಡಿದಂತೆ ನಡೆಯುವ ಸರಕಾರ ನಿಮ್ಮದಲ್ಲವೇ?? ನೀವು ನುಡಿದಂತೆ ನಡೆಯುವ ಸಮಯ ಬಂದಿದೆ. ನಡೆದು ತೋರಿಸುವಿರಾ? ಎಂದು ಕಿಡಿಕಾರಿದ್ದಾರೆ.