ಡಿ.ಸಿ.ಪ್ರಕಾಶ್
ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ನೇತೃತ್ವದ ಪ್ರಸ್ತುತ ಸರ್ಕಾರವನ್ನು ಉರುಳಿಸಲಾಗಿದ್ದು, ಸೇನೆಯ ಬೆಂಬಲದೊಂದಿಗೆ ವಿರೋಧ ಪಕ್ಷವಾದ ರಾಷ್ಟ್ರೀಯವಾದಿ ಪಕ್ಷ ಸರ್ಕಾರ ರಚಿಸಲಿದೆ ಎಂದು ಘೋಷಿಸಲಾಗಿದೆ. ಆದರೆ, ಅಲ್ಲಿ ಪ್ರತಿಭಟನೆ ಮುಂದುವರಿದಿದೆ. ಅಲ್ಲದೆ, ಅಲ್ಲಿ ಹಿಂದೂಗಳ ಮೇಲಿನ ದಾಳಿಗಳ ಬಗ್ಗೆ ವಿವಿಧ ನಕಲಿ ಸುದ್ದಿಗಳು ಮತ್ತು ವಿಡಿಯೊಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ.
ರಿಪಬ್ಲಿಕ್ ಟಿವಿ ಇಂತಹ ಸುದ್ದಿಯನ್ನು ಪ್ರಕಟಿಸಿದ ನಂತರ, ಬಾಂಗ್ಲಾದೇಶದ ರಾಷ್ಟ್ರೀಯ ಹಿಂದೂ ಮಹಾಜೋತ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಗೋಬಿಂದ ಪ್ರಮಾಣಿಕ್ ಅವರು ‘ಹಿಂದೂಗಳ ಮೇಲೆ ದಾಳಿ ನದೆದಿಲ್ಲ, ಬದಲಿಗೆ ಅವರನ್ನು ಮತ್ತು ದೇವಾಲಯಗಳನ್ನು ರಕ್ಷಿಸಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ, ಬಿಜೆಪಿ ಮತ್ತು ಹಿಂದುತ್ವ ಗ್ಯಾಂಗ್ಗಳು ನಿರಂತರವಾಗಿ ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಜನರಲ್ಲಿ ಒಡಕು ಮೂಡಿಸಲು ಯತ್ನಿಸುತ್ತಿವೆ.
ಈ ಹಿನ್ನೆಲೆಯಲ್ಲಿ, ಬಾಂಗ್ಲಾದೇಶದ ಈ ನಕಲಿ ಸುದ್ದಿಗೆ ಪ್ರತಿಯಾಗಿ ಹಿಂದುತ್ವದ ಗ್ಯಾಂಗ್ಗಳು ಭಾರತದಲ್ಲಿ ಮುಸ್ಲಿಮರ ಮೇಲೆ ದಾಳಿ ಮಾಡುವ ಮೂಲಕ ಅರಾಜಕತೆಯಲ್ಲಿ ತೊಡಗಿವೆ. ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದ ಗಾಜಿಯಾಬಾದ್ ಪ್ರದೇಶದಲ್ಲಿ ಹಿಂದೂ ಗುಂಪು ಭಾರತೀಯ ಮುಸ್ಲಿಂ ಕೊಳೆಗೇರಿ ನಿವಾಸಿಗಳ ಮೇಲೆ ಹಿಂಸಾತ್ಮಕವಾಗಿ ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಪಿಂಕಿ ಚೌಧರಿ ನೇತೃತ್ವದ ಹಿಂದೂ ರಕ್ಷಾ ದಳ ಮತ್ತು ಅವರ ಸಹಚರರು, ಅಲ್ಲಿನ ನಿವಾಸಿಗಳ ಹೆಸರುಗಳನ್ನು ಕೇಳಿ, ಅದು ಇಸ್ಲಾಮಿಕ್ ಹೆಸರಾಗಿದ್ದರೆ ಅವರ ಮೇಲೆ ದಾಳಿ ಮಾಡಿ, ಅವರ ಗುಡಿಸಲುಗಳನ್ನು ಧ್ವಂಸಗೊಳಿಸಿ, ‘ಬಾಂಗ್ಲಾದೇಶಿ’ ಎಂದು ಕಿರುಚಾಡುತ್ತಾ ಅವರ ಮೇಲೆ ದಾಳಿ ನಡೆಸಿದ್ದಾರೆ.
ಇದು ಭಾರೀ ಸಂಚಲನ ಮೂಡಿಸಿರುವಾಗಲೇ, ದೆಹಲಿಯಲ್ಲಿ ಬಾಂಗ್ಲಾದೇಶಿಯರ ಮೇಲೆ ದಾಳಿ ನಡೆಸಿದ ತನ್ನ ಸಹಚರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಪಿಂಕಿ ಚೌಧರಿ ವಿಡಿಯೋ ಮೂಲಕ ಪೊಲೀಸರಿಗೆ ಎಚ್ಚರಿಕೆಯನ್ನೂ ನೀಡಿದ್ದಾನೆ. ಅಲ್ಲದೇ “ಭಾರತದಲ್ಲಿರುವ ಯಾವ ಬಾಂಗ್ಲಾದೇಶಿಯನ್ನೂ ಬಿಡುವುದಿಲ್ಲ, 24 ಗಂಟೆಗಳ ಒಳಗೆ ನಾನು ಯಾರನ್ನೂ ಬಿಡುವುದಿಲ್ಲ, ಅವರು ಉಳಿದುಕೊಂಡಿರುವ ಸ್ಥಳಗಳೆಲ್ಲವೂ ನನಗೆ ಗೊತ್ತಿದೆ” ಎಂದು ಬೆದರಿಕೆ ಹಾಕಿದ್ದಾನೆ.
ಹಿಂದೂ ರಕ್ಷಾ ದಳದ ಪಿಂಕಿ ಚೌಧರಿ ಮತ್ತು ಆತನ ಸಹಚರರು ಅಮಾಯಕ ಮುಸ್ಲಿಮರ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಖಂಡನೆ ವ್ಯಕ್ತವಾಗುತ್ತಿದೆ. ಪಿಂಕಿ ಚೌಧರಿ ದಾಳಿ ನಡೆಸಿದ ಜಾಗದಲ್ಲಿ, ಬಾಂಗ್ಲಾದೇಶಿಗರು ಯಾರೂ ಇಲ್ಲ ಎಂದು ಪೊಲೀಸರು ಈಗಾಗಲೆ ವಿವರಣೆ ನೀಡಿದ್ದಾರೆ. ಪೊಲೀಸರು ಅವರ ವಿರುದ್ಧ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಆದರೆ, ಇದುವರೆಗೆ ಯಾರನ್ನೂ ಬಂಧಿಸಿಲ್ಲ.
ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯ ಕುರಿತು ತನಿಖೆ ನಡೆಯುತ್ತಿದೆ.