ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವಾಗ ರಾಹುಲ್ ಗಾಂಧಿ ಇದ್ದಕ್ಕಿದ್ದಂತೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದಾರೆ. ಮುಂದಿನ ಸಿಬಿಐ ಮುಖ್ಯಸ್ಥರ ಆಯ್ಕೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸಿದ್ದರು.
ಈ ಸಭೆಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಕೂಡ ಭಾಗವಹಿಸಿದ್ದರು. ಪಾಕಿಸ್ತಾನದ ವಿರುದ್ಧ ಮುಂದಿನ ಹಂತದ ಕ್ರಮದತ್ತ ಕೇಂದ್ರ ಸರ್ಕಾರ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವಾಗ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿಯನ್ನು ಖುದ್ದಾಗಿ ಭೇಟಿ ಮಾಡಿರುವುದು ಗಮನಾರ್ಹವಾಗಿದೆ.
ಪಹಲ್ಗಾಮ್ ದಾಳಿಯ ನಂತರ ಭಾರತ ಪಾಕಿಸ್ತಾನಕ್ಕೆ ಪಾಠ ಕಲಿಸಲು ಯೋಜಿಸಿದೆ. ಭಾರತ ಈ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದೆ. ಸಿಂಧೂ ಜಲ ಒಪ್ಪಂದ ರದ್ದತಿ, ಪಾಕಿಸ್ತಾನಿಗಳನ್ನು ಗಡಿಪಾರು ಮಾಡುವುದು, ವೀಸಾ ರದ್ದುಪಡಿಸುವುದು ಮತ್ತು ಪಾಕಿಸ್ತಾನಿ ಹಡಗುಗಳು ಬಂದರುಗಳಿಗೆ ಪ್ರವೇಶಿಸುವುದನ್ನು ನಿಷೇಧಿಸುವುದು ಸೇರಿದಂತೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಇದು ಪಾಕಿಸ್ತಾನವನ್ನು ಕೆರಳಿಸಿದೆ. ಪಾಕಿಸ್ತಾನ ಕೂಡ ಗಡಿ ಉಲ್ಲಂಘಿಸಿ ಗುಂಡಿನ ದಾಳಿ ನಡೆಸುತ್ತಿದೆ. ಪರಿಣಾಮವಾಗಿ, ಎರಡೂ ದೇಶಗಳ ನಡುವೆ ಉದ್ವಿಗ್ನತೆ ಉಂಟಾಗಿದ್ದು, ನಾಳಿದ್ದು ಭಾರತ ಯುದ್ಧ ಪೂರ್ವಾಭ್ಯಾಸ ನಡೆಸಲು ಆದೇಶಿಸಿದೆ. ಇಂತಹ ಸಂದರ್ಭದಲ್ಲಿ ರಾಹುಲ್ ಗಾಂಧಿ ಮತ್ತು ಮೋದಿ ನಡುವಿನ ಭೇಟಿ ಮಹತ್ವ ಪಡೆದುಕೊಂಡಿದೆ.