ಬೆಂಗಳೂರು: ಕರ್ನಾಟಕದಲ್ಲಿನ ಆದಿ ದ್ರಾವಿಡ ಜನಾಂಗದವರು ಜಾತಿ ಗಣತಿಯ ಸಂದರ್ಭದಲ್ಲಿ, ಜಾತಿಯ ಕಾಲಂನಲ್ಲಿ ಎಸ್‌ಸಿ ಆದಿ ದ್ರಾವಿಡ ಎಂದು ಉಪ ಜಾತಿಯ ಕಾಲಂನಲ್ಲಿ ಪರೈಯನ್, ಪರಯ, ಚಕ್ಕಲಿಯನ್, ಅರುಂಧತಿಯರ್ ಎಂದು ಕಡ್ಡಾಯವಾಗಿ ನಮೂದಿಸಿಸಬೇಕು ಎಂದು ಜನಶಕ್ತಿ ವೇದಿಕೆಯ ಪರವಾಗಿ ಒತ್ತಾಯಿಸುತ್ತಿದ್ದೇನೆ.
ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಆಯೋಗದ ಶಿಫಾರಸಿನಂತೆ ಕರ್ನಾಟಕದ ಪರಿಶಿಷ್ಟ ಜಾತಿಗಳಿಗೆ (98 ಜಾತಿಗಳು) ಒಳ ಮೀಸಲಾತಿ ಒದಗಿಸಲು ನೆನ್ನೆಯಿಂದ (05.05.2025) ರಾಜ್ಯಾದ್ಯಂತ ಜಾತಿ ಜನಗಣತಿ ನಡೆಯುತ್ತಿದೆ.
ರಾಜ್ಯದ ಕೆಲವು ಪ್ರಮುಖ ದಲಿತ ಸಂಘಟನೆಗಳು, ವಿಶೇಷವಾಗಿ ಮಾದಿಗ ಸಮುದಾಯದ ಕಲ್ಯಾಣಕ್ಕಾಗಿ ಪ್ರತಿಪಾದಿಸುವ ಸಂಘಟನೆಗಳು, ಆದಿ ದ್ರಾವಿಡ, ಆದಿ ಕರ್ನಾಟಕ ಮತ್ತು ಆದಿ ಆಂಧ್ರಗಳನ್ನು ಜಾತಿಗಳೆಂದು ಉಲ್ಲೇಖಿಸದೆ, ಅದರ ಉಪಜಾತಿಗಳನ್ನು ಆಲಿಸಿ ಉಲ್ಲೇಖಿಸಬೇಕೆಂದು ನ್ಯಾಯಮೂರ್ತಿಗಳಾದ ನಾಗಮೋಹನ್ ದಾಸ್ ಆಯೋಗವನ್ನು ಮತ್ತು ಕರ್ನಾಟಕ ಸರ್ಕಾರವನ್ನು ಒತ್ತಾಯಿಸುತ್ತ ಬಂದಿದೆ. ಆಯೋಗದ ಮತ್ತು ಸರ್ಕಾರದ ನಿಲುವು ಕೂಡ ಅದೇ ಆಗಿದೆ.
ಆದಿ ದ್ರಾವಿಡ ಎಂಬುದು ಜಾತಿಗಳ ಸಂಗ್ರಹವಲ್ಲ; ಅದೊಂದು ಪ್ರತ್ಯೇಕ ಜಾತಿ. “ಪರೈಯನ್” ಅಥವಾ “ಪರಯ” ಎನ್ನುವುದು ಅವಮಾನಕರ ಪದವಾಗಿರುವುದರಿಂದ “ಆದಿ ದ್ರಾವಿಡ” ಎಂದು ಕರೆಸಿಕೊಳ್ಳಲು ಈ ಹಿಂದೆ ಸಮಾಜದ ನಾಯಕರಿಂದ ತೀರ್ಮಾನಿಸಲಾಗಿತ್ತು. ಆ ತಿರ್ಮಾನದಂತೆಯೇ “ಪರೈಯನ್” ಅಥವಾ “ಪರಯ” ಸಮುದಾಯವನ್ನು “ಆದಿ ದ್ರಾವಿಡ” ಎಂದು ಕರೆಯಲಾಗಿತ್ತು. ಸರ್ಕಾರ ಕೂಡ ಅದನ್ನು ಅನುಮೋದಿಸಿ ಇಲ್ಲಿಯವರೆಗೆ ಮೀಸಲಾತಿ ನೀಡುತ್ತಾ ಬಂದಿದೆ.
ಆದಿ ದ್ರಾವಿಡರು ಸಣ್ಣ ಪ್ರಮಾಣದ ರೈತರಾಗಿ, ಕೃಷಿ ಕೂಲಿ ಕಾರ್ಮಿಕರಾಗಿ, ನಗರ ಪ್ರದೇಶಗಳಲ್ಲಿ ಗೃಹ ನಿರ್ಮಾಣ ಕಾರ್ಮಿಕರಾಗಿ, ತಮಟೆ ವಾದಕರಾಗಿ, ಕಾರ್ಖಾನೆಗಳಲ್ಲಿ ಕಠಿಣ ಕೆಲಸಗಾರರಾಗಿ ಮತ್ತು ಬೀದಿ ವ್ಯಾಪಾರಿಗಳಾಗಿದ್ದಾರೆ. ಒಟ್ಟಾರೆಯಾಗಿ ಶ್ರಮಿಕ ವರ್ಗದವರಾಗಿದ್ದಾರೆ.
ಆದ್ದರಿಂದ, ಕರ್ನಾಟಕದಲ್ಲಿನ “ಆದಿ ದ್ರಾವಿಡ” ಜನಾಂಗದವರು ಜಾತಿ ಜನಗಣತಿಯ ಸಂದರ್ಭದಲ್ಲಿ, ಜಾತಿಯ ಕಾಲಂನಲ್ಲಿ ಎಸ್‌ಸಿ ಆದಿ ದ್ರಾವಿಡ ಎಂದು ಉಪ ಜಾತಿಯ ಕಾಲಂನಲ್ಲಿ ಪರೈಯನ್, ಪರಯ, ಚಕ್ಕಲಿಯನ್, ಅರುಂಧತಿಯರ್ ಎಂದು ನಮೂದಿಸಿದರೆ ಮಾತ್ರ ಕರ್ನಾಟಕದಲ್ಲಿ ಆದಿ ದ್ರಾವಿಡರ ಜನಸಂಖ್ಯೆ ಎಷ್ಟಿದೆ ಎಂಬುದನ್ನು ನಿಖರವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಅದುಮಾತ್ರವಲ್ಲ ಭವಿಷ್ಯದಲ್ಲಿ ನಮ್ಮ ಜಾತಿ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ, ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಸರಿಯಾದ ಪ್ರಾತಿನಿಧ್ಯ ಕೂಡ ಸಿಗುತ್ತವೆ.
ಸಮುದಾಯದ ಬಂಧುಗಳು, ಜಾತಿ ಜನಗಣತಿಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕೆಂದು ಈ ಮೂಲಕ ವಿನಂತಿಸುತ್ತೇವೆ. ಜಾತಿ ಜನಗಣತಿಯ ಸಂದರ್ಭದಲ್ಲಿ ತೋರಿಸಬೇಕಾದ ಜಾತಿ / ಆದಾಯ ಪ್ರಮಾಣ ಪತ್ರ ಮತ್ತು ಶಾಲಾ ದಾಖಲೆಗಳು ಕಡ್ಡಾಯವಾಗಿ ತಮ್ಮ ಕೈಯಲ್ಲಿ ಇರಿಸಿಕೊಳ್ಳಿ. ಏಕೆಂದರೆ, ಇದು ಆದಿ ದ್ರಾವಿಡರ ಬದುಕುವ ಹಕ್ಕಿನ ವಿಷಯವಾಗಿದೆ. ಯಾರೂ ಷಡ್ಯಂತ್ರಕ್ಕೆ ಬಲಿಯಾಗದೇ ಜಾತಿಯ ಕಾಲಂನಲ್ಲಿ ಎಸ್‌ಸಿ ಆದಿ ದ್ರಾವಿಡ ಎಂದು ಉಪ ಜಾತಿಯ ಕಾಲಂನಲ್ಲಿ ಪರೈಯನ್, ಪರಯ, ಚಕ್ಕಲಿಯನ್, ಅರುಂಧತಿಯರ್ ಎಂದು ನಮೂದಿಸಿ ಎಂದು ಜನಶಕ್ತಿ ವೇದಿಕೆ ಮತ್ತು ಕರ್ನಾಟಕ ತಮಿಳರ ಸಂಘದ ಪರವಾಗಿ ಒತ್ತಾಯಿಸುತ್ತಿದ್ದೇವೆ.