ಫಿರೋಜ್‌ಪುರ: ಭಾರತೀಯ ವಾಯುಪಡೆಯ ಒಡೆತನದ ವಾಯುನೆಲೆಯನ್ನು (Runway) ತಾಯಿ ಮತ್ತು ಮಗ ಅಕ್ರಮವಾಗಿ ಮಾರಾಟ ಮಾಡಿರುವ ಆಘಾತಕಾರಿ ಸುದ್ದಿ ಹೊರಬಿದ್ದಿದೆ.
ಪಂಜಾಬ್ ರಾಜ್ಯದ ಫಿರೋಜ್‌ಪುರದ ಬಳಿ ಫಟ್ಟು ವಾಲಾ (Fattu Wala) ಎಂಬ ಹಳ್ಳಿ ಇದೆ. ಪಾಕಿಸ್ತಾನದ ಗಡಿ ಈ ಗ್ರಾಮಕ್ಕೆ ಬಹಳ ಹತ್ತಿರದಲ್ಲಿದೆ. ಅಲ್ಲಿ ಒಂದು ವಾಯುನೆಲೆ ಇದೆ. ಭಾರತೀಯ ವಾಯುಪಡೆಯ ಒಡೆತನದ ಈ ವಾಯುನೆಲೆಯನ್ನು 1962, 1965 ಮತ್ತು 1971ರ ಯುದ್ಧಗಳ ಸಮಯದಲ್ಲಿ ಬಳಸಲಾಗಿತ್ತು.
ಈ ರನ್‌ವೇ ಇರುವ ಭೂಮಿಯನ್ನು ಪಂಜಾಬ್‌ನ ಉಷಾನ್ ಅನ್ಸಾಲ್ ಎಂಬ ಮಹಿಳೆ ಮತ್ತು ಆಕೆಯ ಮಗ ನವೀನ್ ಚಂದ್ ಮಾರಾಟ ಮಾಡಿದ್ದಾರೆ. ಮಾಜಿ ಕಂದಾಯ ಅಧಿಕಾರಿ ನಿಶಾನ್ ಸಿಂಗ್ ಅವರ ದೂರಿನ ಆಧಾರದ ಮೇಲೆ ಈ ಮಾಹಿತಿ ಬೆಳಕಿಗೆ ಬಂದಿದ್ದು, ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆಗೆ ಬಂದಾಗ, ಪಂಜಾಬ್ ರಾಜ್ಯ ಭ್ರಷ್ಟಾಚಾರ ನಿಗ್ರಹ ಸಂಸ್ಥೆಗೆ ತನಿಖಾ ವರದಿ ಸಲ್ಲಿಸಲು ಆದೇಶಿಸಲಾಯಿತು.
1997ರಲ್ಲಿ ಉಷಾ ಅನ್ಸಾಲ್ ಮತ್ತು ನವೀನ್ ಚಂದ್ ಅವರು ಕಂದಾಯ ಅಧಿಕಾರಿಗಳ ಸಹಾಯದಿಂದ ನಕಲಿ ದಾಖಲೆಗಳನ್ನು ಬಳಸಿ ರನ್‌ವೇ ಮಾರಾಟ ಮಾಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ನಂತರ, ಜೂನ್ 28 ರಂದು ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಲಾಯಿತು. ಇದಲ್ಲದೆ, ಡಿಎಸ್ಪಿ ಕರಣ್ ಶರ್ಮಾ ನೇತೃತ್ವದಲ್ಲಿ ಪೂರ್ಣ ತನಿಖೆ ನಡೆಯುತ್ತಿದೆ.