• ಡಿ.ಸಿ.ಪ್ರಕಾಶ್
ಬೆಂಗಳೂರು: ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ KR Inn ಹೋಟೆಲ್ ನಲ್ಲಿ ಇಂದು ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಜಿಬಿಎ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು. ಉಸ್ತುವಾರಿಗಳಾದ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಬೈರತಿ ಸುರೇಶ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಿ.ಕೆ.ಮೋಹನ್ ಬಾಬು ಅವರು ಅಧ್ಯಕ್ಷತೆ ವಹಿಸಿದ್ದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವ ಬೈರತಿ ಸುರೇಶ್, ” ಬಿಜೆಪಿಯಲ್ಲಿ ಯಾರು ಬೇಕಾದರು ಎಂಎಲ್ಎ ಆಗಬಹುದು. ದುಡ್ಡೊಂದಿದ್ದರೆ ಸಾಕು. ಬಿಜೆಪಿಯವರಿಗೆ ನೈತಿಕತೆ ಇಲ್ಲ. Ethics ಇಲ್ಲ… First of all Ethics ಇಲ್ಲ. Ethics ಇದ್ದಿದ್ದರೆ ನಮ್ಮಲ್ಲಿ ಇದ್ದವರು ಯಾರು ಕೂಡ ಎಲ್ಲಿಯೂ ಹೋಗುತ್ತಿರಲಿಲ್ಲ. ನಾಲ್ಕು ಬಾರಿ ಎಂಎಲ್ಎ ಆಗಿದ್ದ ಎ.ಕೃಷ್ಣಪ್ಪನವರಿಗೆ Confirm ಆಗಿದ್ದ ಸೀಟನ್ನು ತಪ್ಪಿಸಿ ಎಂಎಲ್ಎ ಸೀಟು ಪಡೆದುಕೊಂಡು ಬಂದಿದ್ದ ಬಸವರಾಜ್ ನಮಗೆ ಕೈಕೊಟ್ಟು ಹೋದರು” ಎಂದು ಕಿಡಿಕಾರಿದರು.

“ಆದರೆ, ಇದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ. ಕ್ಷೇತ್ರದಲ್ಲಿ ಡೆವಲಪ್ಮೆಂಟ್ ಇಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಲಾ ಅಂಡ್ ಆರ್ಡರ್ ಸ್ವಲ್ಪ ಸರಿಯಾಗಿದೆ ಅನ್ಸುತ್ತೆ. ಆದರೆ, ನನಗೆ ಆಶ್ಚರ್ಯ ಆಗ್ತಿದೆ. 2013 ರಿಂದ 2018ರ ತನಕ 2500 ಕೋಟಿ ರೂಪಾಯಿಗಳನ್ನು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು ಕೆ.ಆರ್.ಪುರ ಕ್ಷೇತ್ರಕ್ಕೆ ಕೊಟ್ಟಿದ್ದರು. ನಂತರ ಬಂದ ಬಿಜೆಪಿ ಸರ್ಕಾರ 2000 ಸಾವಿರ ಕೋಟಿಯಷ್ಟು ಹಣ ಕೊಟ್ಟಿದೆ. ಇದೀಗ 500-600 ಕೋಟಿ ರೂಪಾಯಿಗಳಷ್ಟು ಹಣ ಕೊಟ್ಟಿದ್ದಾರೆ. ಸುಮಾರು 5000 ಸಾವಿರ ಕೋಟಿ ರೂಪಾಯಿಗಳು ಕೆ.ಆರ್.ಪುರಂ ಕ್ಷೇತ್ರಕ್ಕೆ ಬಂದಿದೆ. ಆದರೆ, ಇಷ್ಟು ಹಣ ಎಲ್ಲಿ ಹೋಗಿದೆ ಎಂದು ನನಗೆ ಯಕ್ಷ ಪ್ರಶ್ನೆಯಾಗಿದೆ”.ಎಂದು ಅವರು ಆಶ್ಚರ್ಯದಿಂದ ಮಾತನಾಡಿದರು.

ಸಭೆಯಲ್ಲಿ ನಾಯಕರು ಸಂಘಟನೆಯ ಬಲವರ್ಧನೆ, ಅಭಿವೃದ್ಧಿ ಕಾರ್ಯಗಳು ಮತ್ತು ಮುಂದಿನ ಕಾರ್ಯತಂತ್ರಗಳ ಕುರಿತು ಚರ್ಚಿಸಿದರು. ಸಭೆಯ ಪ್ರಾರಂಭಕ್ಕೆ ಮೊದಲು ಬೆಂಗಳೂರು ಪೂರ್ವ ಜಿಲ್ಲಾ ಉಸ್ತುವಾರಿಗಳಾದ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಬೈರತಿ ಸುರೇಶ್ ಅವರಿಗೆ ಮತ್ತು ಅಧ್ಯಕ್ಷತೆ ವಹಿಸಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಿ.ಕೆ.ಮೋಹನ್ ಬಾಬು ಅವರಿಗೆ ಹೊರಮಾವು ಬ್ಲಾಕ್ ಅಧ್ಯಕ್ಷರು ಹಾಗೂ ಭೂ ನ್ಯಾಯ ಮಂಡಳಿ ಸದಸ್ಯರಾದ ಸಿ.ವೆಂಕಟೇಶ್ ಮತ್ತು ಹಿರಿಯ ಕಾಂಗ್ರೆಸ್ ಮುಖಂಡರಾದ ಆರ್.ಪ್ರಕಾಶ್ (ಅಗರ) ಅವರಿಂದ ಮಾಲಾರ್ಪಣೆ ಮಾಡಿ ಗೌರವಿಸಲಾಯಿತು.

ಜಿಬಿಎ ಪೂರ್ವಭಾವಿ ಸಭೆಯಲ್ಲಿ, ಮಾಜಿ ಶಾಸಕಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪೂರ್ಣಿಮ ಶ್ರೀನಿವಾಸ್, ಮಾಜಿ ಎಂಎಲ್ ಸಿ ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾದ ಎಂ.ನಾರಾಯಣಸ್ವಾಮಿ, ಕೆಪಿಸಿಸಿ ಉಪಾಧ್ಯಕ್ಷರಾದ ಆರ್.ಮಂಜುನಾಥ್, ಕ್ಷೇತ್ರದ 4 ಬ್ಲಾಕಿನ ವೀಕ್ಷಕರುಗಳಾದ ಚಾಂದ್ ಪಾಷ, ಕಾರ್ತಿಕ್, ಶ್ರೀಧರ್, ಮತ್ತು ರುಕ್ಷಾನ ಉಸ್ತಾದ್ ಹಾಗೂ ಇನ್ನಿತರ ಕೆಪಿಸಿಸಿಯ ಪದಾಧಿಕಾರಿಗಳು, ಬ್ಲಾಕ್/ವಾರ್ಡ್ ಅಧ್ಯಕ್ಷರುಗಳು, ಪಿಸಿಸಿಯ ಸದಸ್ಯರುಗಳು, ಡಿಸಿಸಿಯ ಸದಸ್ಯರುಗಳು, ಎಲ್ಲಾ ಮುಂಚೂಣಿ ಘಟಕದ ಅಧ್ಯಕ್ಷರುಗಳು, ಸರ್ಕಾರದಿಂದ ನಿಯೋಜನೆಗೊಂಡ ಅಧ್ಯಕ್ಷರು ಮತ್ತು ಸದಸ್ಯರು, ಮಾಜಿ ಬಿಬಿಎಂಪಿ ಸದಸ್ಯರುಗಳು, ಯುವ ಕಾಂಗ್ರೆಸ್ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು, ಮಹಿಳಾ ಕಾಂಗ್ರೆಸ್ ಅಧ್ಯಕ್ಷರುಗಳು ಮತ್ತು ಸದಸ್ಯರುಗಳು, ಸಾಮಾಜಿಕ ಜಾಲತಾಣದ ಅಧ್ಯಕ್ಷರುಗಳು, ಬೂತ್ ಮಟ್ಟದ ನೊಂದಾಯಿತ BLA-2 ಮುಖಂಡರುಗಳು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಭೆಯಲ್ಲಿ ಭಾಗವಹಿಸಿದ್ದರು.













