ದಲಿತರಿಗಿಂತಲೂ ಹಿಂದುಳಿದಿರುವ ಮುಸ್ಲಿಮರ ಮೀಸಲಾತಿ ಬದಲಾವಣೆ; ನ್ಯಾಯ ಸಮ್ಮತವೆ.!? » Dynamic Leader
December 3, 2024
ರಾಜಕೀಯ

ದಲಿತರಿಗಿಂತಲೂ ಹಿಂದುಳಿದಿರುವ ಮುಸ್ಲಿಮರ ಮೀಸಲಾತಿ ಬದಲಾವಣೆ; ನ್ಯಾಯ ಸಮ್ಮತವೆ.!?

ಡಾ.ಖಾಸಿಂ ಸಾಬ್
ರಾಜ್ಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಮುಸ್ಲಿಮ್ ಯುನಿಟಿ.

ಹಿಂದುಳಿದ ವರ್ಗದಲ್ಲಿ ಮುಸ್ಲಿಮರಿಗೆ ಸಂವಿಧಾನಬದ್ಧವಾಗಿ ನೀಡಿರುವ ಶೇ.4ರ ಮೀಸಲಾತಿಯನ್ನು ಏಕಾ ಏಕಿ ರದ್ದು ಮಾಡಿ ಬದಲಾಯಿಸುವ ಮೂಲಕ ಬಿಜೆಪಿ ನೇತೃತ್ವದ ಕರ್ನಾಟಕ ಸರ್ಕಾರ ಮುಸ್ಲಿಮರ ಕುರಿತಾದ ತಮ್ಮ ಮಲತಾಯಿ ಧೋರಣೆಯನ್ನು ಹಿಜಾಬ್, ಅಝ, ಗೋಹತ್ಯೆ ನಿಷೇದಗಳ ನಂತರದ ಮುಸ್ಲಿಮ್ ವಿರೋಧಿ ನಿಲುವುಗಳ ಮುಂದುವರಿವಿಕೆಯನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ. ರಾಜ್ಯ ಸರಕಾರದ ಈ ಸಂವಿಧಾನ ವಿರೋಧಿ ಕ್ರಮದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಕರ್ನಾಟಕದ ಹಲವಾರು ಮುಸ್ಲಿಮ್ ಸಂಘಟನೆಗಳು ಹೇಳಿಕೆ ನೀಡಿವೆ.

ರಾಜ್ಯದಲ್ಲಿ OBC ಯ ಹಾವನೂರು, ಪ್ರೊ.ರವಿವರ್ಮ ಕುಮಾರ್ ಆಯೋಗಗಳಿಂದ ಹಿಡಿದು ಡಾ.ಸಿ.ಎಸ್.ದ್ವಾರಕನಾಥ್ ಆಯೋಗದವರೆಗೆ ಸ್ವತಂತ್ರ ನಂತರ ಕಳೆದ 75 ವರ್ಷಗಳಲ್ಲಿ ಬಂದಿರುವ ಎಲ್ಲ ಕೇಂದ್ರ, ರಾಜ್ಯ ಆಯೋಗಗಳು ಮುಸ್ಲಿಮರನ್ನು ಹಿಂದುಳಿದ ವರ್ಗ ಎಂದೇ ಗುರುತಿಸಿದೆ. ನ್ಯಾಯಮೂರ್ತಿ ಚಿನ್ನಪ್ಪರೆಡ್ಡಿ ಆಯೋಗದ ಅಧ್ಯಯನದ ಪೂರ್ಣವರದಿಯ ಶಿಫಾರಸ್ಸುಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಿಂದುಳಿದ ವರ್ಗದಲ್ಲಿ ಶೇ 4 ರಷ್ಟು ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಲಾಗಿತ್ತು. ವೀರಪ್ಪ ಮೊಯಿಲಿಯರ ಸರ್ಕಾರದ ಅವಧಿಯಲ್ಲಿ ಮೊದಲ ಬಾರಿಗೆ ಕರ್ನಾಟಕ ಅಲ್ಪಸಂಖ್ಯಾತರ ಆಯೋಗವನ್ನು ರಚಿಸಿ ಅಂದಿನ ಅಧ್ಯಕ್ಷರಾಗಿದ್ದ ಕೆ.ರೆಹಮಾನ್ ಖಾನ್ ನೇತೃತ್ವದಲ್ಲಿ ಕರ್ನಾಟಕದ ಮುಸ್ಲಿಮರ ಸಾಮಾಜಿಕ, ಆರ್ಥಿಕ ವರದಿಯ ಆಧಾರದ ಮೇಲೆ ಮೊದಲ ಬಾರಿಗೆ ಶೇ.6 ರಷ್ಟು ಮೀಸಲಾತಿ ಕಲ್ಪಿಸಲಾಯಿತು. ನಂತರ ರಾಜ್ಯದ ಮೀಸಲಾತಿ ಮಿತಿ ಶೇ. 50ಕ್ಕೂ ಮೀರಿ ಹೆಚ್ಚಳವಾದ ಕಾರಣ ಸುಪ್ರೀಂ ಕೋರ್ಟ್ ನಲ್ಲಿ ಹಿನ್ನಡೆಯಾದ ನಂತರ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿಯನ್ನು ಕಲ್ಪಿಸಲಾಯಿತು.

ಈಗ ಕರ್ನಾಟಕ ಸರ್ಕಾರದ ನಿಲುವಿನಂತೆ ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿ ಇಲ್ಲದಿರುವುದರಿಂದ, ಒಬಿಸಿ 2 ಬಿ ಪ್ರವರ್ಗದಡಿ ಮುಸ್ಲಿಮರು ಪಡೆಯುತ್ತಿದ್ದ ಮೀಸಲಾತಿಯನ್ನು ರದ್ದುಗೊಳಿಸಿ EWS ಮೀಸಲಾತಿಯಡಿ ತರಲಾಗಿದೆ. ಒಬಿಸಿ ಪ್ರವರ್ಗದಡಿ ಸಾಮಾಜಿಕವಾಗಿಯೂ ಹಿಂದುಳಿದಿದ್ದ ಮುಸ್ಲಿಮರು ಈ ಹೊಸ ಮೀಸಲು ನೀತಿಯಿಂದ ಬರಿ ಆರ್ಥಿಕವಾಗಿ ಮಾತ್ರ ಹಿಂದುಳಿದ ಸಮುದಾಯವಾಗಿ ಪರಿಗಣಿಸಲ್ಪಡುತ್ತದೆ. ಜಾತಿಯ ಆಧಾರದ ಶೋಷಣೆಗೂ ಬಡತನದ ಆಧಾರದ ಶೋಷಣೆಗೂ ವ್ಯತ್ಯಾಸಕ್ಕೆ ಭಾರತದ ಸಾಮಾಜಿಕ ಸಂರಚನೆಯೇ ಇಡೀ ಜಗತ್ತಿಗೆ ದೊಡ್ಡ ಉದಾಹರಣೆಯಾಗಿದೆ. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರು ಹೇಳಿದಂತೆ ಭಾರತದ ಶೇ.95ರಷ್ಟು ಮುಸ್ಲಿಮರು ಅಸ್ಪೃಶ್ಯರಿಂದ ಮತಾಂತರ ಗೊಂಡವರು ಎಂಬ ಅಭಿಪ್ರಾಯದ ನಗ್ನ ಸತ್ಯ ನಮ್ಮ ಕಣ್ಣ ಮುಂದಿದೆ. ಭಾರತೀಯ ಮುಸ್ಲಿಮರ ಹಿಂದುಳಿವಿಕೆಯ ಹಿಂದೆ ಆರ್ಥಿಕ ಕಾರಣಕ್ಕೂ ಮೀರಿ ಸಾಮಾಜಿಕ ಕಾರಣ, ಸ್ಥಿತಿ ಗತಿಗಳು ಕೂಡ ನಿರ್ಧರಿಸಲ್ಪಡುತ್ತಿವೆ. ಕರ್ನಾಟಕದಲ್ಲಿ ಮುಸ್ಲಿಮರು ಬರೀ ಉದ್ಯೋಗ, ಶಿಕ್ಷಣ, ಆರ್ಥಿಕವಾಗಿ ಮಾತ್ರ ಹಿಂದುಳಿದ ಸಮುದಾಯವಲ್ಲ ಸಾಮಾಜಿಕವಾಗಿಯೂ ಶೋಷಿತ, ಅಂಚಿಗೆ ತಳ್ಳಲ್ ಪಟ್ಟವರು. ಡಾ.ಗೋಪಾಲ್ ಸಿಂಗ್, ಜಸ್ಟಿಸ್ ರಾಜೇಂದ್ರ ಸಾಚಾರ್, ಜಸ್ಟಿಸ್ ರಂಗನಾಥ್ ಮಿಶ್ರ ವರದಿಗಳ ಪ್ರಕಾರ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ದಲಿತರಿಗಿಂತಲೂ ಹಿಂದುಳಿದಿರುವ ಮುಸ್ಲಿಮರನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಅತ್ಯಂತ ಮುಂದುವರೆದಿರುವ EWS ಮೂಲಕ ಮೀಸಲಾತಿ ಪಡೆಯುತ್ತಿರುವ ಬ್ರಾಹ್ಮಣರ ಜೊತೆ ಸ್ಪರ್ಧೆ ಯೋಡ್ಡಿಸಿ ಮುಸ್ಲಿಮರನ್ನು ಸಾರ್ವಜನಿಕ ಕ್ಷೇತ್ರಗಳಿಂದ ಸಂಪೂರ್ಣವಾಗಿ ಇಲ್ಲವಾಗಿಸುವ  ಹುನ್ನಾರ ಈ ಮೀಸಲು ನೀತಿಯಲ್ಲಿ ಅಡಗಿದೆ.

ಮುಸ್ಲಿಮರಿಗೆ 2(ಬಿ) ಪ್ರವರ್ಗದಡಿ ಮೀಸಲಾತಿ ಕೊಟ್ಟಿರುವುದು ಧರ್ಮದ ಆಧಾರದ ಮೇಲಲ್ಲ. ಆರ್ಥಿಕತೆಯ ಜೊತೆಗೆ ಸಾಮಾಜಿಕವಾಗಿಯೂ ಹಿಂದುಳಿದ ವರ್ಗ ಎಂದು ಪರಿಗಣಿಸಿಯೇ ಮೀಸಲಾತಿ ನೀಡಿದ್ದು. ಈ ಅಂಶವನ್ನು ಕೇಂದ್ರದ ಕಾಕಾ ಕಾಲೇಲ್ಕರ್, ಮಂಡಲ್ ವರದಿಗಳು ಹಾಗೂ ರಾಜ್ಯದ ಒಬಿಸಿ ಆಯೋಗದ ಚಿನ್ನಪ್ಪರೆಡ್ಡಿ ವರದಿಗಳು ಸ್ಪಷ್ಟವಾಗಿ ಹೇಳಿವೆ. ಇತರ ಹಿಂದುಳಿದ ವರ್ಗಗಳಂತೆ ಕರ್ನಾಟಕದ ಮುಸ್ಲಿಮ್ ಸಮುದಾಯಗಳನ್ನು ಸಹ ಸಾಮಾಜಿಕವಾಗಿ, ಉದ್ಯೋಗ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳೆಂದು ಆಯೋಗಗಳ ಅಧ್ಯಯನದ ಮೂಲಕ ಗುರುತಿಸಿ ಒಬಿಸಿ ವರ್ಗಗಳ ಅಡಿಯಲ್ಲಿ ಮೀಸಲಾತಿಯನ್ನು ಕಲ್ಪಿಸಲಾಗಿದೆ. 1920ರ ಮಿಲ್ಲರ್ ಸಮಿತಿಯಿಂದಲೂ ಕರ್ನಾಟಕದ ಮುಸ್ಲಿಮ್ ಸಮುದಾಯವನ್ನು ಸಾಮಾಜಿಕವಾಗಿ ಹಿಂದುಳಿದ ಸಮುದಾಯವೆಂದು ಪರಿಗಣಿಸಿ ಮೀಸಲಾತಿ ಒದಗಿಸಲಾಗಿದೆ. 1961ರ ನಾಗನಗೌಡ ಸಮಿತಿ, ವೆಂಕಟಸ್ವಾಮಿ ಅಯೋಗ ಮತ್ತು 1990ರ ಚಿನ್ನಪ್ಪ ರೆಡ್ಡಿ ಅಯೋಗ ಕೂಡ ಮುಸ್ಲಿಮರನ್ನು ಹಿಂದುಳಿದ ವರ್ಗಗಳಿಗೆ ಸೇರಿಸಿರುವುದನ್ನು ಎತ್ತಿ ಹಿಡಿದಿದೆ. ಇದೇ ಬಿಜೆಪಿ ಸರ್ಕಾರ ಮುಸ್ಲಿಮರಿಗೆ ಒಬಿಸಿ ಪ್ರಮಾಣ ಪತ್ರ ಕೊಡುವ ವಿಚಾರವೊಂದರಲ್ಲಿ ಹೊರಡಿಸಿದ  ಸುತ್ತೋಲೆ ಕ್ರಮಾಂಕ No:BCW 68 BCA 2013  ಪ್ರಕಾರ ಎಲ್ಲಾ ಮುಸ್ಲಿಮರಿಗೂ ಒಬಿಸಿ ಸರ್ಟಿಫಿಕೇಟ್ ಕೊಡಲು ಆದೇಶಿಸಿದ್ದು ಅದು ಇಂದು ಇತಿಹಾಸ.

ಧರ್ಮಾಧಾರಿತ ಮೀಸಲಾತಿ ಬೇಡ ಎನ್ನುವ ಸರ್ಕಾರ 3(ಬಿ) (ಈಗ 2(ಡಿ) ಯಲ್ಲಿರುವ ಕ್ರಿಶ್ಚಿಯನ್ ಮೀಸಲಾತಿ ಮುಂದುವರೆಸಿರುವುದು ಅಲ್ಲದೆ, ರಾಜ್ಯದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾಗಿರುವ  ಬುದ್ಧಿಸ್ಟ್, ಸಿಖ್, ಜೈನ್, ಪಾರ್ಸಿ ಯಂತಹ ಧಾರ್ಮಿಕ ಸಮುದಾಯಗಳನ್ನು ಏನೆಂದು ಪರಿಗಣಿಸುತ್ತದೆ ಮತ್ತು ಈ ಕೆಲ ಹಿಂದೂಯೇತರ  ಸಮುದಾಯಗಳು ಇಂದಿಗೂ ರಾಜ್ಯ ಒಬಿಸಿ ಪಟ್ಟಿಯಲ್ಲಿಯೇ ಉಳಿದು ಕೊಂಡಿವೆ. ಇಂತಹ ಕ್ಲಿಷ್ಟ ಪ್ರಶ್ನೆಗಳಿಗೆ ಸರ್ಕಾರದ ಬಳಿ ವರದಿ – ಉತ್ತರಗಳಿವಿಯೇ…!? ಕೆಳಬೇಕಿದೆ. ಮುಸ್ಲಿಮರ ಶೇ.4 ಒಬಿಸಿ ಮೀಸಲಾತಿಯನ್ನು ರದ್ದುಗೊಳಿಸಿ ಅದನ್ನು 3(ಎ) ಒಕ್ಕಲಿಗ ಮತ್ತು 3(ಬಿ) ಲಿಂಗಾಯತರಿಗೆ ತಲಾ ಎರಡೆರಡು ಹಂಚಿರುವುದರ ಹಿಂದೆ ಯಾವುದೇ ವೈಜಾನಿಕ ಅಧ್ಯಯನದ ಆಧಾರಗಳಿಲ್ಲ. ಏಕೆಂದರೆ ಅದೇ ರೀತಿಯಲ್ಲಿ 2(ಎ) ಪ್ರವರ್ಗಕ್ಕೆ ಏಕೆ ಮೀಸಲಾತಿ ಹೆಚ್ಚಿಸಿಲ್ಲ ಎಂಬ ಪ್ರಶ್ನೆಗೆ ಯಾವುದೇ ಅಧ್ಯಯನವಾಗಲಿ ಪರಿಹಾರವಾಗಲಿ ಸರ್ಕಾರದಬಳಿ ಇಲ್ಲ. ನಿಜವಾಗಿಯೂ ರಾಜ್ಯದ ಒಕ್ಕಲಿಗ, ಲಿಂಗಾಯತ ಪಂಚಮಸಾಲಿಗಳ ಮೇಲೆ ನೈಜ ಕಳಕಳಿ ಇದ್ದರೆ, ಈ ಸಮುದಾಯಗಳು ಹಿಂದುಳಿದಿರುವ ವೈಜ್ಞಾನಿಕ ವರದಿಯ ಆದಾರದ ಮೇಲೆ ಮೀಸಲಾತಿಯ ಪ್ರಮಾಣವನ್ನು ಹೆಚ್ಚಾಗಿ ಮಾಡಬಹುದಿತ್ತು. ಈ ಮೂಲಕ ಆ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕೊಡಲು ಪ್ರಯತ್ನ ಪಡಬಹುದಾಗಿತ್ತು. ಈ ಯಾವ ನ್ಯಾಯಪರ ನಿಲುವು, ನಿರ್ದಾರಗಳು ಸಹ ಈ ಮೀಸಲು ಮರು ವಿಂಗಡಣೆಯ ಹಿಂದಿಲ್ಲ.ಇಲ್ಲಿ ಒಂದಷ್ಟು ಮಸಲತ್ತು ಅಡಗಿರುವುದಂತು ನಿಜ. ಚುನಾವಣಾ ಪ್ರಚಾರದಲ್ಲಿ ಕೆಲ ಪ್ರಮುಖ ಜಾತಿಗಳನ್ನು ತುಷ್ಟೀಕರಿಸುವ ಉದ್ದೇಶವನ್ನು ಬಿಟ್ಟರೆ ಬೇರೆ ಯಾವುದೇ ಕಾನೂನಿನ ನೆಲೆ ಇದಕ್ಕಿಲ್ಲ. ಹೀಗಾಗಿ ಇದು ಮೂಲತಃ ಸಂವಿಧಾನ ವಿರೋಧಿ ಹಾಗೂ ಅನೂರ್ಜಿತಗೊಳ್ಳುವ ರಾಜಕೀಯ ದಾಳವಾಗಿದೆ.

ಸರ್ಕಾರದ ಈ ನಿಲುವನ್ನು ಮುಸ್ಲಿಮರ ಜೊತೆ ಲಿಂಗಾಯತ ಸಮುದಾಯದ ಮುಖಂಡರೂ ವಿರೋಧಿಸುತ್ತಿದ್ದಾರೆ. ಮುಸ್ಲಿಮರಿಗೆ ನೀಡಲಾಗಿದ್ದ 2B ಮೀಸಲಾತಿಯನ್ನು ರದ್ದು ಪಡಿಸಿ ಪಂಚಮಸಾಲಿಗಳಿಗೆ ನೀಡಿರುವುದು ಸ್ವೀಕಾರಾರ್ಹವಲ್ಲ ಎಂದು ವಿರೋಧಿಸಿ ಪಂಚಮಸಾಲಿ ಮೀಸಲಾತಿ ಹೋರಾಟ ಸಮಿತಿ ಮತ್ತು ಅಖಿಲ ಭಾರತ ಪಂಚಮಸಾಲಿ ಲಿಂಗಾಯತ ಸಂಘಟನೆಯ ಸ್ಥಾನಕ್ಕೆ ವಿಜಯಾನಂದ ಕಾಶಪ್ಪನವರು ರಾಜೀನಾಮೆ ನೀಡಿದ್ದಾರೆ. ಮೀಸಲಾತಿ ಪ್ರಮಾಣ ಪರಿಷ್ಕರಣೆ ಸಂಬಂಧ ಸಂಪುಟ ಸಭೆಯ ನಿರ್ಧಾರ ಸಾಮಾಜಿಕ ನ್ಯಾಯವಿರೋಧಿ, ಅಲ್ಲದೆ ಹಿಂದುಳಿದ ವರ್ಗಗಳ ಪ್ರವರ್ಗ-1 ಮತ್ತು ಪ್ರವರ್ಗ- 2ಎ ಸಮುದಾಯದ ಜನರಿಗೆ ಅನ್ಯಾಯವಾಗಿದೆ ಎಂಬ ಅಭಿಪ್ರಾಯವನ್ನು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ಆರ್.ವೆಂಕಟರಾಮಯ್ಯ ಕೊಟ್ಟಿದ್ದಾರೆ. ಸರ್ಕಾರವು ಮತಗಳಿಕೆಗಾಗಿ ಓಲೈಸಲು ಮುಸ್ಲಿಮರ ಶೇ.4ರ ಮೀಸಲಾತಿಯನ್ನು ವಿಭಜಿಸಿ ಒಕ್ಕಲಿಗ, ಲಿಂಗಾಯತ ವರ್ಗಗಳಿಗೆ ಕೊಟ್ಟಿದೆ ಎಂದು ಕಾಯಕ ಸಮಾಜಗಳ ಒಕ್ಕೂಟದ ಕೆ.ಸಿ.ಪುಟ್ಟಸಿದ್ದ ಶೆಟ್ಟಿ ತಮ್ಮ ಅಭಿಪ್ರಾಯ ನೀಡುವ ಮೂಲಕ ಸರ್ಕಾರದ ಈ ನಿಲುವನ್ನು ವಿರೋಧಿಸಿದ್ದಾರೆ. ಅಲ್ಲದೆ ಹಲವಾರು ದಲಿತ – ಮಾದಿಗ ಮುಖಂಡರು ಸಹ ಸರ್ಕಾರದ ಈ ಮೀಸಲಾತಿ ನಿರ್ಧಾರವನ್ನು ವಿರೋಧಿಸಿದ್ದಾರೆ. ಮೀಸಲಾತಿಯ ಪ್ರಮಾಣ ಹೆಚ್ಚಿಸುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಮುಂದಾಗದ ಬಿಜೆಪಿ ಸರ್ಕಾರ ತನ್ನ ಕೋಮುವಾದಿ ರಾಜಕಾರಣದಲ್ಲಿ ಲಿಂಗಾಯತ ಮತ್ತು ಒಕ್ಕಲಿಗರನ್ನು ಒಳಗೊಳ್ಳುತ್ತಿದೆ. ಇದೇ ಸಂಧರ್ಭದಲ್ಲಿ ಲಿಂಗಾಯತ ಪ್ರೆತ್ಯೇಕ ಧರ್ಮವಾದರೆ ಅದು ಸಹ ರಾಜ್ಯದ ಧಾರ್ಮಿಕ ಅಲ್ಪಸಂಖ್ಯಾತರ ಪಟ್ಟಿಯಲ್ಲಿ ಸೇರಿಸಬೇಕಿದೆ. ಆಗ ಇವರನ್ನು ಒಬಿಸಿ ಪಟ್ಟಿಯಲ್ಲಿ ಉಳಿಸುತ್ತಿರೋ? ಅಥವಾ ಧಾರ್ಮಿಕ ಆಧಾರದ ಮೀಸಲಾತಿ ನೀತಿಯಡಿಯಲ್ಲಿ EWS ಪಟ್ಟಿಕೆ ಸೇರಿಸುತ್ತಿರೊ? ಕೇಳಬೇಕಿದೆ. Abolishment of Muslim reservation in Karnataka exposed BJP’s biased mentality.

ಚುನಾವಣೆ ಹತ್ತಿರ ಬಂದಿರುವ ಸಮಯದಲ್ಲಿ ಮುಸ್ಲಿಮರು ಮತ್ತು ಲಿಂಗಾಯತ / ಒಕ್ಕಲಿಗ ಸಮದಾಯಗಳ ಮಧ್ಯೆ ವೈಷಮ್ಯ ಹುಟ್ಟಿಸಲು ಈ ಮೂಲಕ ಪ್ರಯತ್ನಗಳಿವೆ ಎಂಬುದು ಸಹ ಒಂದು ಮಗ್ಗುಲ ಸತ್ಯವೆ ಆಗಿದೆ. ಪ್ರಸ್ತುತ ಜಯಪ್ರಕಾಶ್ ಹೆಗ್ಡೆ ನೇತೃತ್ವದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸ್ಸಿನ ಅನ್ವಯ ಮುಸ್ಲಿಂ ಮೀಸಲಾತಿಯನ್ನು ರದ್ದು ಗೊಳಿಸಲಾಗಿದೆ. ಅವರನ್ನು ಮುಂದುವರಿದ ವರ್ಗ ಎಂದು ಪರಿಗಣಿಸಿ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ (EWS) ಸೇರಿಸಿ ಮೀಸಲಾತಿ ಕೊಡಲಾಗುವುದು ಎಂದು ಈ ನಿರ್ಣಯದಲ್ಲಿ ತಿಳಿಸಲಾಗಿದೆ. ಜಯಪ್ರಾಶ್ ಹೆಗ್ಡೆ ಆಯೋಗವು ಈ ಕುರಿತು ಯಾವ ಸಮೀಕ್ಷೆಯನ್ನೂ ಮಾಡದೆ ಹೇಗೆ ನಿರ್ಧಾರ ಕೈಗೊಂಡಿದೆ? ಜಯಪ್ರಕಾಶ್ ಹೆಗ್ಡೆ ಆಯೋಗವು ರಹಸ್ಯ ಸಮೀಕ್ಷೆ ಏನಾದರೂ ಮಾಡಿದೆಯೆ? ಹಾಗಿದ್ದರೆ ಆ ವರದಿಯನ್ನು ಸರ್ಕಾರ ಈಗಲಾದರೂ ಬಹಿರಂಗ ಪಡಿಸಬೇಕಿದೆ. ಇಂತಹ ಸಂದಿಗ್ದ ಸಮಯದಲ್ಲಿ ಮುಸ್ಲಿಮ್ ಸಮುದಾಯ ಯಾವುದೇ ಭಾವಾವೇಶಕ್ಕೆ ಒಳಗಾಗದೆ ಕಾನೂನು ಹೋರಾಟದ ಮೂಲಕ ನ್ಯಾಯ ಪಡೆಯಲೆತ್ನಿಸಬೇಕಿದೆ. ಈ ಆದೇಶದ ಹಿಂದೆ ಆಯ್ದ ಎರಡು ಸಮುದಾಯಗಳ ಮತ ಕ್ರೋಢೀಕರಣದ ಜೊತೆ ಕೋಮುಗಲಭೆಗಳ ಸೃಷ್ಠಿಯ ಉದ್ದೇಶ ಇರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಸಧ್ಯಕ್ಕೆ ಮುಸ್ಲಿಮ್ ಸಮುದಾಯಗಳಿಗೆ ಹಿಂದುಳಿದ ವರ್ಗಗಳ ಪ್ರವರ್ಗ-2ಬಿ ಅಡಿಯಲ್ಲಿ ನೀಡಿದ್ದ ಶೇ.4ರಷ್ಟು ಮೀಸಲಾತಿಯನ್ನು ರಾಜ್ಯ ಬಿಜೆಪಿ ಸರ್ಕಾರ ರದ್ದುಪಡಿಸಿ, ಆರ್ಥಿಕವಾಗಿ ಹಿಂದುಳಿದವರಿಗೆ (EWS) ಕಲ್ಪಿಸಿರುವ ಮೀಸಲಾತಿ ಅಡಿಯಲ್ಲಿ ಸೇರ್ಪಡೆ ಮಾಡಿರುವುದು ಸಂವಿಧಾನ ವಿರೋಧಿ ಹಾಗೂ ಸಾಮಾಜಿಕ ಅಸಮಾನತೆಯ ನಿರ್ಣಯವಾಗಿದೆ. Ended Muslim quota as it was unconstitutional: Amit Shah.

Related Posts