“ಅಲ್ಪಸಂಖ್ಯಾತರಾದ 3 ಪರ್ಸೆಂಟ್ ಬ್ರಾಹ್ಮಣರಿಗೆ ಈಗಾಗಲೇ “ಮನುಸ್ಮೃತಿ’ ಎಂಬ ಧರ್ಮ ಸಂವಿಧಾವಿದೆ; ಅದನ್ನು ಇಂಪ್ಲಿಮೆಂಟ್ ಮಾಡಕ್ಕೆ ನಿಮ್ಮದೇ ಆದ ಸಂಘ-ಸರ್ಕಾರವಿದೆ. ಮತ್ತೊಂದು ಸಂವಿಧಾನ ನಿಮಗೆ ಏಕೆ ಬೇಕು? ಮೊದಲು ಅದನ್ನು ತ್ಯಜಿಸಿ ಸಹ ಮನುಷ್ಯರಾಗಿ” – ಡಿ.ಸಿ.ಪ್ರಕಾಶ್
ಭಾರತ ಸಂವಿಧಾನದ 75ನೇ ವರ್ಷಾಚರಣೆಯ ಸಂದರ್ಭದಲ್ಲಿ ಸಂವಿಧಾನವನ್ನು ತಿರುಚುವ ಕಾರ್ಯಗಳು ಒಂದೆಡೆ ನಡೆಯುತ್ತಲೇ ಇವೆ. ಈಗ ಬಿಜೆಪಿಯಲ್ಲಿರುವ ಸುಬ್ರಮಣಿಯನ್ ಸ್ವಾಮಿ, ವಕೀಲ ಅಶ್ವಿನಿ ಉಪಾಧ್ಯಾಯ, ವಿಷ್ಣು ಶಂಕರ್ ಜೈನ್ ಮತ್ತು ಬಲರಾಮ್ ಸಿಂಗ್ ಅವರು ಭಾರತದ ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದ’ ಮತ್ತು ‘ಜಾತ್ಯತೀತ’ ಪದಗಳನ್ನು ತೆಗೆದುಹಾಕಲು ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದರು. ಇದನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಪಿ.ವಿ.ಸಂಜಯ್ ಕುಮಾರ್ ಪೀಠವು ಇದೇ ನವಂಬರ್ 25 ರಂದು “ಸಂವಿಧಾನವನ್ನು ತಿದ್ದುಪಡಿ ಮಾಡಲು ಸಂಸತ್ತು ತನ್ನ ಅಧಿಕಾರವನ್ನು ಸರಿಯಾಗಿ ಚಲಾಯಿಸಿದೆ” ಎಂದು ದೃಢಪಡಿಸಿದೆ. ಇದಕ್ಕಿಂತ ದೊಡ್ಡ ಪೀಠಕ್ಕೆ ತೆಗೆದುಕೊಂಡು ಹೋಗಿ ಚರ್ಚೆಯನ್ನು ಎಳೆಯಲು ಜಾತ್ಯತೀತ ವಿರೋಧಿಗಳು ಬಯಸಿದ್ದರು. ಆದರೆ, ಸುಪ್ರೀಂ ಕೋರ್ಟ್ ಅದಕ್ಕೆ ಅವಕಾಶ ನೀಡಲಿಲ್ಲ. ಈ ಅರ್ಜಿಗಳನ್ನು ಆರಂಭಿಕ ಹಂತದಲ್ಲೇ ವಜಾಗೊಳಿಸಿತು.
ಭಾರತದ ಸಂವಿಧಾನವು ಭಾರತ ದೇಶವನ್ನು ‘ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯ’ ಎಂದು ವ್ಯಾಖ್ಯಾನಿಸುತ್ತದೆ.
ಸಂವಿಧಾನದ 42ನೇ ತಿದ್ದುಪಡಿಯು ಸಮಾಜವಾದಿ ಮತ್ತು ಜಾತ್ಯತೀತ ಪದಗಳನ್ನು ಸೇರಿಸಿದೆ. ಇದನ್ನು ತೆಗೆಯಬೇಕು ಎಂಬುದು ಅವರು ವಾದ. ಸಂವಿಧಾನವನ್ನು 100ಕ್ಕೂ ಹೆಚ್ಚು ಬಾರಿ ತಿದ್ದುಪಡಿ ಮಾಡಲಾಗಿದೆ ಅದೆಲ್ಲವನ್ನೂ ತೆಗೆದುಹಾಕಲು ಅವರು ಹೇಳುತ್ತಾರೆಯೇ?
“ಸಮಾಜವಾದಿ ಮತ್ತು ಜಾತ್ಯತೀತ ಪದಗಳನ್ನು ಪಾಶ್ಚಾತ್ಯ ಪರಿಕಲ್ಪನೆಗಳಾಗಿ ಪರಿಗಣಿಸಬೇಕಾಗಿಲ್ಲ” ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಜಾತ್ಯತೀತ ಎನ್ನುವುದು ಪಾಶ್ಚಿಮಾತ್ಯ ಪರಿಕಲ್ಪನೆ ಎಂದು ಇಲ್ಲಿರುವವರು ಹೇಳುತ್ತಾ ತಿರುಗುತ್ತಿದ್ದಾರೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅದನ್ನು ಸೇರಿಸಲಾಗಿತ್ತು ಎಂಬ ವಾದವನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ.
“ದಿನಾಂಕ: 2-11-1976 ರಂದು ಸಂಸತ್ತು ಸಂವಿಧಾನದ 42ನೇ ತಿದ್ದುಪಡಿಯ ಮೂಲಕ ಜಾತ್ಯತೀತ ಮತ್ತು ಸಮಾಜವಾದ ಪದಗಳನ್ನು ಸೇರಿಸಿತ್ತು. ಅದರ ನಂತರ ಜನತಾ ಸರ್ಕಾರ ಬಂದಿತು. ಜನತಾ ಸರ್ಕಾರ ಇದನ್ನು ಸಂಸತ್ತಿನಲ್ಲೇ ಒಪ್ಪಿಕೊಂಡಿದೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆ ಜನತಾ ಪಕ್ಷದಲ್ಲಿ ಸುಬ್ರಮಣಿಯನ್ ಸ್ವಾಮಿ ಕೂಡ ಇದ್ದರು.
“ಭಾರತದ ಸಂವಿಧಾನದ 368ನೇ ವಿಧಿಯು ನಂತರದ ದಿನಾಂಕದಿಂದ ಜಾರಿಗೆ ಬರುವಂತೆ ಸಂವಿಧಾನದ ಯಾವುದೇ ವಿಭಾಗವನ್ನು ತಿದ್ದುಪಡಿ ಮಾಡಲು ಸಂಸತ್ತಿಗೆ ಅಧಿಕಾರ ನೀಡುವುದರಿಂದ, ಇದು ಪೀಠಿಕೆಯ ತಿದ್ದುಪಡಿಗೂ ಅನ್ವಯಿಸುತ್ತದೆ” ಎಂದು ತೀರ್ಪು ಹೇಳಿದೆ.
“ಭಾರತದಲ್ಲಿ ‘ಸಮಾಜವಾದ’ ಎಂದರೆ ಸಮಾನತೆಯ ಸರ್ಕಾರವನ್ನೇ ಸೂಚಿಸುತ್ತದೆ ಮತ್ತು ಅದು ಎಲ್ಲರಿಗೂ ಸಮಾನ ಅವಕಾಶವನ್ನು ಒದಗಿಸುವ ಕಲ್ಯಾಣ ರಾಜ್ಯವನ್ನೂ ಸೂಚಿಸುತ್ತದೆ. ಇದು ‘ನಿರಂಕುಶ’ ಸಿದ್ಧಾಂತವಲ್ಲ” ಎಂಬುದನ್ನೂ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. “ಸಮಾಜವಾದ ಎಂಬ ಪದವು ಇಲ್ಲಿ ಖಾಸಗಿ ವಲಯದ ಅಭಿವೃದ್ಧಿಯನ್ನು ಎಂದಿಗೂ ನಿಲ್ಲಿಸಲಿಲ್ಲ; ಖಾಸಗಿಯವರಿಂದಲೂ ನಮಗೆಲ್ಲ ಲಾಭವಾಗಿದೆ” ಎಂದು ನ್ಯಾಯಮೂರ್ತಿಗಳು ವಿವರಿಸಿದ್ದಾರೆ.
ಈ ತೀರ್ಪಿನ ಮುಖ್ಯ ಅಂಶವೆಂದರೆ ಸಮಾಜವಾದ ಮತ್ತು ಜಾತ್ಯತೀತ ಪದಗಳು ಕೇವಲ ಪೀಠಿಕೆಯಲ್ಲಿ ಮಾತ್ರವಲ್ಲದೆ ಸಂವಿಧಾನದ ವಿವಿಧ ಭಾಗಗಳಲ್ಲಿಯೂ ಇವೆ ಎಂದು ಹೇಳಿರುವುದು.
“ಸಂವಿಧಾನದ ಪೀಠಿಕೆಯಲ್ಲಿ ಸಮಾನತೆ, ಭ್ರಾತೃತ್ವ, ಸ್ವಾತಂತ್ರ್ಯ ಮತ್ತು ನ್ಯಾಯ ಎಂಬ ಪದಗಳು ಜಾತ್ಯತೀತತೆಯನ್ನೇ ಅರ್ಥೈಸುತ್ತವೆ” ಎಂದು ಕಡ್ಡಿ ಮುರಿದಂತೆ ಸುಪ್ರೀಂ ಕೋರ್ಟ್ ತಮ್ಮ ತೀರ್ಪಿನಲ್ಲಿ ಹೇಳಿದೆ.
“ಪ್ರತಿಯೊಬ್ಬ ಪ್ರಜೆಯೂ ತನ್ನ ಇಚ್ಛೆಯ ಧರ್ಮವನ್ನು ಪ್ರತಿಪಾದಿಸುವ ಮತ್ತು ಪ್ರಚಾರ ಮಾಡುವ ಮೂಲಭೂತ ಹಕ್ಕನ್ನು ಹೊಂದಿದ್ದಾನೆ ಎಂದು ಹೇಳುವ ಸಂವಿಧಾನದ 25ನೇ ವಿಧಿಯ ಅರ್ಥವೂ ಕೂಡ ಜಾತ್ಯತೀತತೆ ಎಂಬುದೇ ಅಗಿದೆ” ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. “ನಾವು ಸಂವಿಧಾನವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಜಾತ್ಯತೀತತೆಯ ಮುಖ್ಯ ಪರಿಕಲ್ಪನೆಯು ಅನೇಕ ಸ್ಥಳಗಳಲ್ಲಿ ಕಂಡುಬರುತ್ತದೆ” ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ಹೇಳಿದ್ದಾರೆ.
“ಸಮಾಜವಾದ ಮತ್ತು ಜಾತ್ಯತೀತ ಇವೆರಡೂ ಪೀಠಿಕೆಯಲ್ಲಿ ಮಾತ್ರವಲ್ಲದೆ ಭಾರತೀಯ ಸಂವಿಧಾನದ ಮುಖ್ಯ ತತ್ವಗಳಾಗಿವೆ” ಎಂದು ಸುಪ್ರೀಂ ಕೋರ್ಟ್ ಹೇಳಿರುವುದನ್ನು ಒಪ್ಪಿಕೊಂಡು ಕಾರ್ಯನಿರ್ವಹಿಸಬೇಕು. ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು ಪ್ರಕರಣವನ್ನು ಮಾತ್ರವಲ್ಲ; ಧಾರ್ಮಿಕ ಪಕ್ಷಪಾತ ಎಂಬ ಪರಿಕಲ್ಪನೆಯನ್ನು ಕೂಡ.
ಮೇಲ್ಕಂಡ ಸುಪ್ರೀಂ ಕೋರ್ಟ್ ತೀರ್ಪನ್ನು ಅರಗಿಸಿಕೊಳ್ಳಲಾಗದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು, “ನಮ್ಮನ್ನು (ಬ್ರಾಹ್ಮಣರನ್ನು) ಗೌರವಿಸುವ ಸಂವಿದಾನ ಬರಬೇಕು” ಎಂದು ಹೇಳಿದ್ದೂ ಅಲ್ಲದೇ ರಾಜ್ಯಪಾಲರನ್ನು ಭೇಟಿಯಾಗಿ ಮನವಿಯನ್ನೂ ಸಲ್ಲಿಸಿದ್ದಾರೆ. ಅಲ್ಪಸಂಖ್ಯಾತರಾದ 3 ಪರ್ಸೆಂಟ್ ಬ್ರಾಹ್ಮಣರಿಗೆ ಈಗಾಗಲೇ “ಮನುಸ್ಮೃತಿ’ ಎಂಬ ಸಂವಿಧಾವಿದೆ; ಅದನ್ನು ಇಂಪ್ಲಿಮೆಂಟ್ ಮಾಡಕ್ಕೆ ನಿಮ್ಮದೇ ಆದ ಸಂಘ-ಸರ್ಕಾರವಿದೆ. ಮತ್ತೊಂದು ಸಂವಿಧಾನ ನಿಮಗೆ ಏಕೆ ಬೇಕು? ಮೊದಲು ಅದನ್ನು ತ್ಯಜಿಸಿ ಸಹ ಮನುಷ್ಯರಾಗಿ.
ಬ್ರಾಹ್ಮಣರ ಪ್ರತಿನಿಧಿಗಳಾದ ಸುಬ್ರಮಣಿಯನ್ ಸ್ವಾಮಿ, ವಕೀಲ ಅಶ್ವಿನಿ ಉಪಾಧ್ಯಾಯ, ವಿಷ್ಣು ಶಂಕರ್ ಜೈನ್ ಮತ್ತು ಬಲರಾಮ್ ಸಿಂಗ್ ಮುಂತಾದವರು ಪ್ರಕರಣ ದಾಖಲಿಸಿ ಸುಪ್ರೀಂ ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡಿದ್ದಕ್ಕಾಗಿ ಬೇಸರಪಟ್ಟು ವಿಶ್ವಪ್ರಸನ್ನ ತೀರ್ಥರು “ನಮ್ಮನ್ನು ಗೌರವಿಸುವ ಸಂವಿದಾನ ಬರಬೇಕು” ಎಂದು ಹೇಳಿರಬಹುದು ಎಂದು ನಾವು ಭಾವಿಸಿ ಕೊಳ್ಳೋಣ!
ಈ ಗದ್ದಲದ ನಡುವೆ, “ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡುವ ಕಾನೂನು ಜಾರಿಗೆ ತರಬೇಕು” ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮಿಗಳ ಹೇಳಿಕೆ ಆಘಾತವನ್ನು ಉಂಟು ಮಾಡಿದೆ. ಇದರಿಂದ ಸ್ವಾಮಿಗಳು ಎಲ್ಲರ ವಿಮರ್ಶೆಗೆ ಒಳಗಾಗಿದ್ದಾರೆ. ನಂತರ, “ಬಾಯಿ ತಪ್ಪಿ ಹೇಳಿದ ಹೇಳಿಕೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅದೇನೇ ಹಾಗಿರಲಿ, ಸ್ವಾಮಿಗಳ ಈ ರೀತಿಯ ಮಾತುಗಳನ್ನು ಒಪ್ಪಲಾಗದು.
ಒಬಿಸಿ ಮೀಸಲಾತಿ ಪಟ್ಟಿಯಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿದ ಹಿಂದಿನ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ, ಆ ಮೀಸಲಾತಿಯನ್ನು ಒಕ್ಕಲಿಗ ಹಾಗೂ ಲಿಂಗಾಯಿತ ಸಮುದಾಯಕ್ಕೆ ತಲಾ ಶೇ.2ರಷ್ಟು ಹಂಚಿಕೆ ಮಾಡಿತ್ತು. ನಂತರ ಮುಸ್ಲಿಮರ 2ಬಿ ಮೀಸಲಾತಿ ರದ್ದು ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಇದು ಕೂಡ ಸ್ವಾಮಿಜೀಗಳ ಕೋಪಕ್ಕೆ ಕಾರಣವಾಗಿರಬಹುದು. ಅದು ಏನೇ ಇದ್ದರೂ, ಸರ್ಕಾರವು ಸಂವಿಧಾನ ವಿರೋಧಿಗಳಿಂದ ಬಹುಸಂಖ್ಯಾತರನ್ನು ರಕ್ಷಿಸುವುದರೊಂದಿಗೆ ಮೀಸಲಾತಿ ವಿಚಾರದಲ್ಲಿ ಆದಷ್ಟು ಬೇಗ ಎಲ್ಲರೂ ಒಪ್ಪುವಂತಹ ಮೀಸಲಾತಿ ನೀತಿಯನ್ನು ಪ್ರಕಟಿಸುವ ಕೆಲಸವನ್ನು ಸಿದ್ದರಾಮಯ್ಯ ಸರ್ಕಾರ ಮಾಡಬೇಕು. ಇಲ್ಲದಿದ್ದರೆ ಸಂವಿಧಾನ ವಿರೋಧಿಗಳು ಇದನ್ನು ಬಂಡವಾಳ ಮಾಡಿಕೊಳ್ಳುತ್ತಾರೆ ಎಂಬುದನ್ನು ಯಾರೂ ಮರೆಯಬಾರದು.