ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಮಾಜಿ ವಿಧಾನ ಪರಿಷತ್ ಸದಸ್ಯ ರಘು ಆಚಾರ್!
ಬೆಂಗಳೂರು: ಚಿತ್ರದುರ್ಗದ ಮಾಜಿ ವಿಧಾನ ಪರಿಷತ್ ಸದಸ್ಯರಾದ ರಘು ಆಚಾರ್ ಇಂದು ಬೆಂಗಳೂರಿನ ಜೆಡಿಎಸ್ ಪ್ರಧಾನ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದು ಅಧಿಕೃತವಾಗಿ ಜಾತ್ಯತೀತ ಜನತಾದಳ ಪಕ್ಷ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಜಾತ್ಯತೀತ ಜನತಾದಳ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ಸಿಎಂ ಇಬ್ರಾಹಿಂ ರವರು, ವಿಧಾನಪರಿಷತ್ ಸದಸ್ಯರಾದ ಶ್ರೀ ಭೋಜೇಗೌಡರು, ಟಿ.ಎ ಶರವಣ ಅವರು ಸೇರಿದಂತೆ ಪಕ್ಷದ ಮುಖಂಡರು ಹಾಗೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಕಾಂಗ್ರೆಸ್ ಪಟ್ಟಿ ಪ್ರಕಟವಾದ ಬೆನ್ನಲ್ಲೆ ಕೋಟೆನಾಡು ಚಿತ್ರದುರ್ಗದಲ್ಲಿ ಭಾರಿ ಬಂಡಾಯ ಬಿಸಿ ಆವರಿಸಿತು. ಇದೀಗ ಅಲ್ಲಿನ ಮಾಜಿ ವಿಧಾನ ಪರಿಷತ್ ಸದಸ್ಯರಾದ ರಘು ಆಚಾರ್ ಇಂದು ಬೆಂಗಳೂರಿನಲ್ಲಿ ಜೆಡಿಎಸ್ ಸೇರಿದ್ದಾರೆ.
ಇವರಲ್ಲೆದೇ ಜೇವರ್ಗಿಯ ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ್, ಶಹಾಪುರದ ಮಾಜಿ ಶಾಸಕರಾದ ಗುರುಲಿಂಗಪ್ಪ ಗೌಡ, ಗುರು ಪಾಟೀಲ್ ಸೇರಿ ಅವರ ಅಪಾರ ಬೆಂಬಲಿಗರು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಸವದತ್ತಿಯ ಶ್ರೀ ಸೌರಭ್ ಚೋಪ್ರಾ, ಕಾರವಾರದ ಶ್ರೀಮತಿ ಚೈತ್ರಾ ಕೊಡೇಕರ್, ಪಾವಗಡದ ಶ್ರೀರಾಮ್, ಮಾಯಕೊಂಡದ ಸವಿತಾ ಬಾಯಿ, ಪುತ್ತೂರಿನ ದಿವ್ಯಾ ಪುತ್ತೂರು, ಶ್ರೀಮತಿ ದಿವ್ಯಪ್ರಭಾ ಗೌಡ ಸೇರಿದಂತೆ ಇನ್ನೂ ಅನೇಕ ಮುಖಂಡರು ಪಕ್ಷಕ್ಕೆ ಸೇರ್ಪಡೆಯಾದರು. ಎಲ್ಲರನ್ನೂ ಸಂತೋಷದಿಂದ ಪಕ್ಷಕ್ಕೆ ಸ್ವಾಗತಿಸಲಾಯಿತು.