ಬಿಜೆಪಿ ಅವಧಿಯಲ್ಲಿ ಜಲಜೀವನ್ ಮಿಷನ್ ಭ್ರಷ್ಟಾಚಾರದ ಮಿಷನ್ ಆಗಿತ್ತು; ಇದರ ಪರಿಣಾಮವನ್ನು ಇಂದಿಗೂ ರಾಜ್ಯದ ಜನತೆ ಎದುರಿಸುತ್ತಿದ್ದಾರೆ! » Dynamic Leader
October 21, 2024
ರಾಜಕೀಯ

ಬಿಜೆಪಿ ಅವಧಿಯಲ್ಲಿ ಜಲಜೀವನ್ ಮಿಷನ್ ಭ್ರಷ್ಟಾಚಾರದ ಮಿಷನ್ ಆಗಿತ್ತು; ಇದರ ಪರಿಣಾಮವನ್ನು ಇಂದಿಗೂ ರಾಜ್ಯದ ಜನತೆ ಎದುರಿಸುತ್ತಿದ್ದಾರೆ!

ಮಳೆ ನಿಂತರೂ ಹನಿ ನಿಲ್ಲದು ಎಂಬ ಗಾದೆಯಂತೆ ಬಿಜೆಪಿಯ ನಾಲ್ಕು ವರ್ಷದ ಭ್ರಷ್ಟ ಆಡಳಿತದ ಅವ್ಯವಸ್ಥೆಯು ಫಲ ಈಗಲೂ ಜನರ ಜೀವ ಹಿಂಡುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ವಾಗ್ದಾಳಿ ನಡೆಸಿದ್ದಾರೆ.

ನಮ್ಮ ಸರ್ಕಾರ ಬಂದು ಎರಡು ತಿಂಗಳಾಗಿದೆ; ಭ್ರಷ್ಟ ಬಿಜೆಪಿ ಮಾಡಿದ್ದ ಅವ್ಯವಸ್ಥೆಯನ್ನು ಸರಿಪಡಿಸುವ ಕೆಲಸ ಜಾರಿಯಲ್ಲಿದೆ. ಜಲಜೀವನ್ ಮಿಷನ್‌ನಲ್ಲಿ ಪ್ರತಿ ಮನೆಗೂ ನೀರು ಕೊಟ್ಟೇ ಬಿಟ್ಟಿದ್ದೇವೆ ಎಂದು ಪ್ರಚಾರ ಮಾಡಿದ್ದ ಬಿಜೆಪಿ, ಈಗ ತಮ್ಮ ಸುಳ್ಳನ್ನು ತಾವೇ ಬಯಲು ಮಾಡುತ್ತಿದ್ದಾರೆ. ಈ ಫ್ಯಾಕ್ಟ್ ಚೆಕ್ ಕೆಲಸವನ್ನು ಬಿಜೆಪಿ ಹೀಗೆಯೇ ಮುಂದುವರೆಸಲಿ!

ಜಲಜೀವನ್ ಮಿಷನ್ ಯೋಜನೆಯಲ್ಲಿ ರಾಜ್ಯ ಸರ್ಕಾರದ ಪಾಲು 55%, ಕೇಂದ್ರದ ಪಾಲು 45%, ಬಿಜೆಪಿಯ ಭ್ರಷ್ಟಾಚಾರದ ಪಾಲು 40%, ಮೋದಿಯವರಿಗೆ ಕ್ರೆಡಿಟ್ ಮಾತ್ರ 100%. ಬಿಜೆಪಿ ಅವಧಿಯಲ್ಲಿ ಜಲಜೀವನ್ ಮಿಷನ್ ಎನ್ನುವುದು “ಭ್ರಷ್ಟಾಚಾರದ ಮಿಷನ್” ಆಗಿತ್ತು, ಇದರ ಪರಿಣಾಮವನ್ನೇ ಇಂದಿಗೂ ರಾಜ್ಯದ ಜನತೆ ಎದುರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರು ಭ್ರಷ್ಟಾಚಾರದ ಆರೋಪದಲ್ಲಿ ರಾಜೀನಾಮೆ ನೀಡಿದ್ದರು; ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 40% ಕಮಿಷನ್‌ಗೆ ಗುತ್ತಿಗೆದಾರರೊಬ್ಬರು ಜೀವವನ್ನೇ ಬಿಡಬೇಕಾಯ್ತು. ನನ್ನ ಇಲಾಖೆಗೆ ಇಷ್ಟು ಘಾಡವಾಗಿ ಅಂಟಿರುವ ಕೊಳೆಯನ್ನು ಸ್ವಚ್ಛ ಮಾಡುತ್ತಿದ್ದೇನೆ.

ಬಿಜೆಪಿ ಅವಧಿಯಲ್ಲಿ ಪರ ರಾಜ್ಯಗಳತ್ತ ಮುಖ ಮಾಡಿದ್ದ ಉದ್ಯಮಗಳನ್ನು, ಹೂಡಿಕೆಗಳನ್ನು ಕರ್ನಾಟಕದತ್ತ ಕರೆತರುತ್ತಿದ್ದೇವೆ. ಉದ್ಯೋಗ ಸೃಷ್ಟಿಗೆ ಪೂರಕ ವಾತಾವರಣ ನಿರ್ಮಿಸುತ್ತಿದ್ದೇವೆ. ಅಜಾನ್, ಹಲಾಲ್, ಹಿಜಾಬ್ ಎಂಬ ಪ್ರಚೋದನೆಗೆ ಕನ್ನಡಿಗರು ಸಂಪೂರ್ಣ ತಿರಸ್ಕಾರದ ಉಡುಗೊರೆ ಕೊಟ್ಟಿದ್ದಾರೆ. ಬಿಜೆಪಿ ಮುಕ್ತ ದಕ್ಷಿಣ ಭಾರತವಾಗಿದೆ; ಆದರೂ, ಬುದ್ದಿ ಕಲಿಯದೆ ಸುಳ್ಳಿನ ಸೌಧ ಕಟ್ಟವುದನ್ನು ಮುಂದುವರೆಸಿದ ಬಿಜೆಪಿಯನ್ನು ದೇಶದ ಜನ ತಿರಸ್ಕರಿಸುವುದು ನಿಶ್ಚಿತ ಎಂದು ಭವಿಷ್ಯ ನುಡಿದಿದ್ದಾರೆ.

ಒಂದು ರಾಷ್ಟ್ರೀಯ ಪಕ್ಷವಾಗಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗದ್ದು ಬಿಜೆಪಿ ರಾಜಕೀಯ ದಿವಾಳಿತನ. ಮೇಲ್ಮನೆ, ಕೆಳಮನೆಗಳಲ್ಲಿ ವಿರೋಧ ಪಕ್ಷದ ನಾಯಕನ ಕುರ್ಚಿ ಖಾಲಿ ಇದೆ, ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿ ಮೊದಲು ತಮ್ಮ ರಾಜಕೀಯ ದಾರಿದ್ರ್ಯವನ್ನು ನಿವಾರಣೆ ಮಾಡಿಕೊಳ್ಳಲಿ ಎಂದು ಕಿಡಿಕಾರಿದ್ದಾರೆ.

Related Posts