ಹನಿಮೂನ್‌ಗೆ ಗೋವಾಕ್ಕೆ ಕರೆದುಕೊಂಡು ಹೋಗುವುದಾಗಿ ನಂಬಿಸಿ, ಅಯೋಧ್ಯೆಗೆ ಕರೆದುಕೊಂಡು ಹೋದ ಪತಿ; ವಿಚ್ಛೇದನ ಕೋರಿದ ಪತ್ನಿ!
ಮಧ್ಯಪ್ರದೇಶದ ಭೋಪಾಲ್ ಮೂಲದ ಮಹಿಳೆಯೊಬ್ಬರು ಮದುವೆಯಾದ ಐದೇ ತಿಂಗಳಲ್ಲಿ ಪತಿಯಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಈ ದಂಪತಿಗಳಿಗೆ ಮದುವೆಯಾಗಿತ್ತು. ಆ ವ್ಯಕ್ತಿ ಐಟಿ ವಲಯದಲ್ಲಿ ಕೆಲಸ ಮಾಡುತ್ತಿದ್ದು ಉತ್ತಮ ಆದಾಯ ಗಳಿಸುತ್ತಿದ್ದಾರೆ. ಹಾಗೆಯೇ ಮಹಿಳೆಯೂ ಕೆಲಸಕ್ಕೆ ಹೋಗುತ್ತಿದ್ದಾರೆ; ಅವರಿಗೂ ಒಳ್ಳೆಯ ಸಂಬಳ ಇದೆ. ಮೊದಲು ಅವರು ತಮ್ಮ ಹನಿಮೂನ್‌ಗಾಗಿ ವಿದೇಶಕ್ಕೆ ಹೋಗಲು ಯೋಜಿಸಿದ್ದರು. ಒಳ್ಳೆಯ ಸಂಬಳ ಪಡೆಯುತ್ತಿದ್ದರಿಂದ ಇಬ್ಬರಿಗೂ ಹನಿಮೂನ್‌ಗೆ ವಿದೇಶಕ್ಕೆ ಹೋಗುವುದು ದೊಡ್ದ ಸಮಸ್ಯೆ ಆಗಿರಲಿಲ್ಲ.
ತಮ್ಮ ಹನಿಮೂನ್ ಯೋಜನೆ ಬಗ್ಗೆ ಮಾತನಾಡಿದ ಮಹಿಳೆ, “ನನ್ನ ಪತಿ ತನ್ನ ಹೆತ್ತವರನ್ನು ನೋಡಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಹನಿಮೂನ್‌ಗೆ ವಿದೇಶಕ್ಕೆ ಹೋಗುವ ಆಲೋಚನೆಯನ್ನು ತಿರಸ್ಕರಿಸಿದರು. ದೇಶೀಯವಾಗಿ ಹನಿಮೂನ್‌ಗೆ ಹೋಗೋಣ” ಎಂದು ಹೇಳಿದರು. ಇದರ ನಂತರ, ದಂಪತಿಗಳು ಅಂತಿಮವಾಗಿ ಗೋವಾ ಮತ್ತು ದಕ್ಷಿಣ ಭಾರತಕ್ಕೆ ಭೇಟಿ ನೀಡಲು ನಿರ್ಧರಿಸಿದರು.
ಆದರೆ ಅವರ ಪತಿ, ರಾಮಮಂದಿರ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕಾಗಿ ಅಯೋಧ್ಯೆಗೆ ಹೋಗಬೇಕೆಂದು ಅವರ ತಾಯಿ ಬಯಸಿದ್ದರಿಂದ ಅಯೋಧ್ಯೆ ಮತ್ತು ವಾರಣಾಸಿಗೆ ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದಾರೆ. ಆದರೆ ಅವರು ತನ್ನ ಹೆಂಡತಿಗೆ ಇದನ್ನು ಹೇಳದೇ ಪ್ರವಾಸಕ್ಕೆ ಒಂದು ದಿನ ಮೊದಲು ಮಾಹಿತಿ ನೀಡಿದ್ದಾರೆ. ಉದ್ಘಾಟನಾ ಸಮಾರಂಭಕ್ಕೂ ಮುನ್ನ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಬೇಕೆಂದು ತಾಯಿಯ ಇಚ್ಛೆಯಂತೆ ಪ್ರವಾಸವನ್ನು ಯೋಜಿಸಿದ್ದಾಗಿ ಪತಿ ವಿವರಿಸಿದ್ದಾರೆ.
ನಂಬಿ ಮೋಸಗೊಳಿಸಿದ್ದಾರೆ ಎಂದು ಆಘಾತಗೊಂಡ ಮಹಿಳೆ ಅದನ್ನು ಬಹಿರಂಗಪಡಿಸದೆ, ಅಯೋಧ್ಯೆಗೆ ಹೋಗಲು ಯಾವುದೇ ವಿರೋಧ ವ್ಯಕ್ತಪಡಿಸದೇ ಅಯೋಧ್ಯೆ ಮತ್ತು ವಾರಣಾಸಿಗೆ ಭೇಟಿ ನೀಡಿ ಬಂದಿದ್ದಾರೆ. ಹಿಂತಿರುಗಿ ಬಂದು ಸುಮಾರು 10 ದಿನಗಳ ನಂತರ, ಜನವರಿ 19 ರಂದು ಮಹಿಳೆ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
“ಮದುವೆಗೆ ಮೊದಲಿನಿಂದಲೂ ಪತಿ ತನಗಿಂತ ಅವರ ಕುಟುಂಬ ಸದಸ್ಯರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ. ದಂಪತಿಗೆ ಈಗ ಭೋಪಾಲ್ ಕೌಟುಂಬಿಕ ನ್ಯಾಯಾಲಯವು ಆಲೋಚನೆ ಪಡೆಯಲು ಸಮಯ ನೀಡಿದೆ.
ಎರಡು ವಿಭಿನ್ನ ಜೀವನ ಪರಿಸರದಲ್ಲಿ ಬದುಕುತ್ತಿರುವ ಇಬ್ಬರು ವ್ಯಕ್ತಿಗಳು ಪತಿ-ಪತ್ನಿಯಾಗಿ ಒಟ್ಟಿಗೆ ಪ್ರಯಾಣಿಸಲು ಪ್ರಾರಂಭಿಸಿದಾಗ, ಅವರು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಾರೆ. ಪತಿಯಾದವರು ತಮ್ಮ ಕುಟುಂಬದ ಆದ್ಯತೆ ಹಾಗೂ ಪತ್ನಿಯ ಮನಸ್ಸನ್ನು ಅರಿತು ಜೀವನ ನಡೆಸಬೇಕು. ಅದೇ ರೀತಿ ಪತ್ನಿಯಾದವಳು ತಮ್ಮ ಪ್ರಾಶಸ್ತ್ಯಗಳನ್ನು ಬಿಟ್ಟುಕೊಡದೆ ಅರ್ಥ ಮಾಡಿಕೊಂಡು ನಡೆಯಬೇಕು. ಕೌಟುಂಬಿಕ ಸಂಬಂಧ ಸುಗಮವಾಗಿ ಸಾಗಲು ಇಬ್ಬರ ಸಹಕಾರವೂ ಮುಖ್ಯವಾಗಿದೆ. ತಾನು ಯಾವ ಸ್ಥಳದಲ್ಲಿ ತನ್ನ ಸಂಗಾತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ವಿಫಲರಾಗುತ್ತೇವೆ ಎಂಬುದನ್ನು ಇಬ್ಬರೂ ವಾಸ್ತವಿಕ ನೆಲೆಗಟ್ಟಿನಿಂದ ಯೋಚಿಸಿ ಜೀವನವನ್ನು ಸಾಗಿಸಿದರೆ ಸಮಸ್ಯೆಗಳಿದ್ದರೂ ಈ ರೀತಿ ವಿಚ್ಛೇದನಕ್ಕೆ ಕಾರಣವಾಗುವುದಿಲ್ಲ.