ಸ್ಪೀಕರ್ ಹುದ್ದೆ ಬಿಜೆಪಿ ಪಾಲಾದರೆ ಕುದುರೆ ವ್ಯಾಪಾರ ನಡೆಯುವುದು ಗ್ಯಾರೆಂಟಿ: ಅಶೋಕ್ ಗೆಹ್ಲೋಟ್
ಈ ಹಿಂದೆ ಸಮ್ಮಿಶ್ರ ಸರ್ಕಾರ ರಚನೆಯಾದಾಗ ಸ್ಪೀಕರ್ ಹುದ್ದೆಯನ್ನು ತೆಲುಗು ದೇಶಂ, ಶಿವಸೇನೆ ಮತ್ತು ಮಾರ್ಕ್ಸ್‌ವಾದಿ ಪಕ್ಷಗಳಿಗೆ ನೀಡಲಾಗಿತ್ತು
ಈ ಬಾರಿ ಲೋಕಸಭಾ ಸ್ಪೀಕರ್ ಹುದ್ದೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೈಗೆ ಸಿಕ್ಕರೆ ತೆಲುಗು ದೇಶಂ ಮತ್ತು ಸಂಯುಕ್ತ ಜನತಾದಳ ಪಕ್ಷಗಳ ಸಂಸದರ ನಡುವೆ ಕುದುರೆ ವ್ಯಾಪಾರ ನಡೆಯುವ ಸಾಧ್ಯತೆ ಇದೆ ಎಂದು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಎಚ್ಚರಿಸಿದ್ದಾರೆ.
ಕಾಂಗ್ರೆಸ್ ನ ಹಿರಿಯ ನಾಯಕರಲ್ಲಿ ಒಬ್ಬರಾದ ಅಶೋಕ್ ಗೆಹ್ಲೋಟ್ ತಮ್ಮ ಅಧಿಕೃತ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಪೋಸ್ಟ್ ನಲ್ಲಿ, “ಒಂದು ವೇಳೆ ಬಿಜೆಪಿ ಸ್ಪೀಕರ್ ಹುದ್ದೆಯನ್ನು ಉಳಿಸಿಕೊಂಡರೆ, ತೆಲುಗು ದೇಶಂ ಮತ್ತು ಸಂಯುಕ್ತ ಜನತಾದಳದ ಸಂಸದ ಬಳಿ ಬಿಜೆಪಿ ಚೌಕಾಸಿ ಮಾಡುವುದನ್ನು ನೋಡಬೇಕಾಗುತ್ತದೆ” ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಹಲವಾರು ರಾಜ್ಯ ವಿಧಾನಸಭೆಗಳಲ್ಲಿ ಸ್ಪೀಕರ್ ನಿರ್ಧಾರದಿಂದ ಸರ್ಕಾರಗಳು ಉರುಳಿ ಪಕ್ಷಗಳು ಮುರಿದುಹೋಗಿವೆ ಎಂಬುದನ್ನು ಎರಡೂ ಪಕ್ಷಗಳು ಅರಿತುಕೊಳ್ಳಬೇಕು ಎಂದು ಅಶೋಕ್ ಗೆಹ್ಲೋಟ್ ತಮ್ಮ ಪೋಸ್ಟ್‌ನಲ್ಲಿ ಎಚ್ಚರಿಸಿದ್ದಾರೆ.
“ಸಂಸತ್ತಿನಲ್ಲಿ ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳು ನಡೆಯಬಾರದು ಎಂದರೆ, ಎರಡು ಸಮ್ಮಿಶ್ರ ಪಕ್ಷಗಳಲ್ಲಿ (ತೆಲುಗು ದೇಶಂ-ಜೆಡಿಯು) ಯಾವುದಾದರೂ ಒಂದಕ್ಕೆ ಸ್ಪೀಕರ್ ಸ್ಥಾನವನ್ನು ಕೊಡಬೇಕು” ಎಂದು ಅಶೋಕ್ ಗೆಹ್ಲೋಟ್ ಒತ್ತಾಯಿಸಿದ್ದಾರೆ.
ಈ ಹಿಂದೆ ಸಮ್ಮಿಶ್ರ ಸರ್ಕಾರ ರಚನೆಯಾದಾಗ ಸ್ಪೀಕರ್ ಹುದ್ದೆಯನ್ನು ತೆಲುಗು ದೇಶಂ, ಶಿವಸೇನೆ ಮತ್ತು ಮಾರ್ಕ್ಸ್‌ವಾದಿ ಪಕ್ಷಗಳಿಗೆ ನೀಡಲಾಗಿತ್ತು ಎಂಬುದನ್ನು ಅಶೋಕ್ ಗೆಹ್ಲೋಟ್, ತೆಲುಗು ದೇಶಂ ಮತ್ತು ಜೆಡಿಯು ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.