ಆರ್ಮ್‌ಸ್ಟ್ರಾಂಗ್ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ತಿರುವೆಂಗಟಂ ಎನ್‌ಕೌಂಟರ್‌ನಲ್ಲಿ ಗುಂಡಿಕ್ಕಿ ಹತ್ಯೆ; ಮುಂಜಾನೆಯಲ್ಲಿ ನಡೆದಿದ್ದೇನು?! » Dynamic Leader
January 13, 2025
ಕ್ರೈಂ ರಿಪೋರ್ಟ್ಸ್

ಆರ್ಮ್‌ಸ್ಟ್ರಾಂಗ್ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ತಿರುವೆಂಗಟಂ ಎನ್‌ಕೌಂಟರ್‌ನಲ್ಲಿ ಗುಂಡಿಕ್ಕಿ ಹತ್ಯೆ; ಮುಂಜಾನೆಯಲ್ಲಿ ನಡೆದಿದ್ದೇನು?!

ಡಿ.ಸಿ.ಪ್ರಕಾಶ್

ಆರ್ಮ್‌ಸ್ಟ್ರಾಂಗ್ ಹತ್ಯೆ ಪ್ರಕರಣದಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಲಾಗಿದ್ದ 11 ಮಂದಿಯಲ್ಲಿ ಒಬ್ಬನಾಗಿದ್ದ ರೌಡಿ ತಿರುವೆಂಗಟಂ ಎಂಬಾತನನ್ನು ಇಂದು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಬಹುಜನ ಸಮಾಜ ಪಕ್ಷದ ತಮಿಳುನಾಡು ರಾಜ್ಯಾಧ್ಯಕ್ಷ ಆರ್ಮ್‌ಸ್ಟ್ರಾಂಗ್ ಅನ್ನು ಜುಲೈ 5ರ ರಾತ್ರಿ ಪೆರಂಬೂರಿನ ಅವರ ನಿವಾಸದ ಬಳಿ ಆರು ಅಪರಿಚಿತ ದುಷ್ಕರ್ಮಿಗಳಿಂದ ಹತ್ಯೆ ಮಾಡಲಾಗಿತ್ತು. ಆ ನಂತರ, ಈ ಘಟನೆಗೆ ಸಂಬಂಧಿಸಿದಂತೆ ಸೆಂಬಿಯಂ ಪೊಲೀಸರು 11 ಜನರನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಈ 11 ಮಂದಿಯಲ್ಲಿ ಒಬ್ಬನಾಗಿದ್ದ ರೌಡಿಯೇ 33 ವರ್ಷದ ತಿರುವೆಂಕಟಂ.

ಆರ್ಮ್ ಸ್ಟ್ರಾಂಗ್

ಏತನ್ಮಧ್ಯೆ, ತಿರುವೆಂಗಟಂನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು, ಪರಂಗಿಮಲೈ ಸಶಸ್ತ್ರ ಪಡೆಗಳ ಸಂಕೀರ್ಣದಲ್ಲಿ ವಿಚಾರಣೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ, ಕೊಡುಂಗೈಯೂರ್ ಕಾನೂನು ಸುವ್ಯವಸ್ಥೆ ಇನ್ಸ್‌ಪೆಕ್ಟರ್ ಸರವಣನ್ ಅವರು ಇಂದು ಬೆಳಗ್ಗೆ ಮಾಧವರಂ ಅಡುತೊಟ್ಟಿ ಬಳಿ ತನಿಖೆಗಾಗಿ ಕರೆದುಕೊಂಡು ಹೋಗುತ್ತಿದ್ದಾಗ ರೌಡಿ ತಿರುವೆಂಗಟಂ ಪರಾರಿಯಾಗಿದ್ದನು ಎನ್ನಲಾಗುತ್ತಿದೆ.

ತರುವಾಯ, ತಂಡೈಯಾರ್‌ಪೇಟೆ ಪೊಲೀಸ್ ಇನ್ಸ್‌ಪೆಕ್ಟರ್ ಮುಹಮ್ಮದ್ ಬುಖಾರಿ ಮಾಧವರಂ ಆಡುತೊಟ್ಟಿ ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ನಂತರ ರೌಡಿ ತಿರುವೆಂಗಟಂ ಪುಳಲ್ ವೆಜಿಟೇರಿಯನ್ ವಿಲೇಜ್ ಪ್ರದೇಶದ ಖಾಲಿ ಜಾಗದಲ್ಲಿ ಟಿನ್ ಶೆಡ್‌ನಲ್ಲಿ ತಲೆಮರೆಸಿಕೊಂಡಿರುವುದು ಬೆಳಕಿಗೆ ಬಂದಿತ್ತು.

ತಿರುವೆಂಗಟಂ ಎನ್‌ಕೌಂಟರ್ ಸ್ಪಾಟ್

ಇದಾದ ಬಳಿಕ ವಿಶೇಷ ಪಡೆ ಪೊಲೀಸರು ಟಿನ್ ಶೆಡ್ ಅನ್ನು ಸುತ್ತುವರಿದು ತಿರುವೆಂಗಟಂ ಅವರನ್ನು ಬಂಧಿಸಲು ಯತ್ನಿಸಿದ್ದಾರೆ. ಆಗ ತಿರುವೆಂಗಟಂ ತನ್ನ ಬಳಿಯಿದ್ದ ನಾಡ ಪಿಸ್ತೂಲ್ ನಿಂದ ಪೊಲೀಸರತ್ತ ಗುಂಡು ಹಾರಿಸಿದ್ದ ಎನ್ನಲಾಗಿದೆ. ಆಗ ಆತ್ಮರಕ್ಷಣೆಗಾಗಿ ಇನ್ಸ್​ಪೆಕ್ಟರ್​ ಮುಹಮ್ಮದ್ ಬುಖಾರಿ ತಿರುವೆಂಗಟಂ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಆರೋಪಿಯ ಬಲ ಭಾಗದ ಹೊಟ್ಟೆ ಮತ್ತು ಎಡ ಭಾಗದ ಎದೆಗೆ ಗುಂಡುಗಳು ತಗುಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ತಕ್ಷಣ ಪೊಲೀಸರು ಆತನನ್ನು ರಕ್ಷಿಸಿ ಮಾಧವರಂನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಆದರೆ ಅಲ್ಲಿ ತಪಾಸಣೆ ನಡೆಸಿದ ವೈದ್ಯರು ತಿರುವೆಂಗಟಂ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ನಂತರ ತಿರುವೆಂಗಟಂ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಟಾನ್ಲಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಸದ್ಯ ಅಲ್ಲಿ ಭಾರೀ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

ತಿರುವೆಂಗಟಂ

ಅಲ್ಲದೆ, ತಿರುವೆಂಗಟಂ ಅವರ ಕ್ರಿಮಿನಲ್ ಹಿನ್ನೆಲೆಯ ಬಗ್ಗೆ ಪೊಲೀಸರು ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಆರ್ಮ್‌ಸ್ಟ್ರಾಂಗ್ ಆಪ್ತ ಬಾಮ್ ಸರವಣನ್ ಸಹೋದರ ತೆನ್ನರಸು ಹತ್ಯೆ ಪ್ರಕರಣದ ಮೊದಲ ಆರೋಪಿಯಾಗಿದ್ದಾನೆ. ಈತನ ವಿರುದ್ಧ 2014ರಲ್ಲಿ ಕುಂಡ್ರತ್ತೂರ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಆರ್ಮ್‌ಸ್ಟ್ರಾಂಗ್ ಘಟನೆಯಲ್ಲಿ ನೇರವಾಗಿ ಚಾಕುವಿನಿಂದ ಇರಿದ ಅಪರಾಧಿಯೂ ಇವನೇ ಆಗಿದ್ದಾನೆ. ಸದ್ಯ ಈತನ ವಿರುದ್ಧ ಅಪಹರಣ, ಕೊಲೆ ಯತ್ನ ಪ್ರಕರಣಗಳು ಬಾಕಿ ಇವೆ.

Related Posts