ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಬಿಎಸ್‌ಪಿ Archives » Dynamic Leader
November 21, 2024
Home Posts tagged ಬಿಎಸ್‌ಪಿ
ರಾಜಕೀಯ

ಲಕ್ನೋ: ಉತ್ತರ ಪ್ರದೇಶದ ಜಾಟ್ ಸಮುದಾಯದ ಜಾತೀಯತೆಯಿಂದಾಗಿ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸೋಲಾಯಿತು ಎಂದು ಮಾಜಿ ಮುಖ್ಯಮಂತ್ರಿ ಮತ್ತು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಆರೋಪಿಸಿದ್ದಾರೆ.

ಹರಿಯಾಣದಲ್ಲಿ ಚುನಾವಣೋತ್ತರ ಸಮೀಕ್ಷೆಗಳನ್ನು ಸುಳ್ಳಾಗಿಸಿ, ಬಿಜೆಪಿ ಭರ್ಜರಿ ಗೆಲುವು ಸಾಧಿಸಿ 3ನೇ ಬಾರಿಗೆ ಸರ್ಕಾರ ರಚಿಸಲಿದೆ. ಸೋಲಿಗೆ ಚುನಾವಣಾ ಆಯೋಗದ ಚಟುವಟಿಕೆಗಳೇ ಕಾರಣ ಎಂದು ಕಾಂಗ್ರೆಸ್ ದೂರಿದೆ. ಮಾಯಾವತಿಯವರ ಬಹುಜನ ಸಮಾಜ ಪಕ್ಷವು ಭಾರತೀಯ ರಾಷ್ಟ್ರೀಯ ಲೋಕದಳದೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿತು.

ಚುನಾವಣೆಯ ಅಂತ್ಯಕ್ಕೆ ಬಹುಜನ ಸಮಾಜ ಪಕ್ಷ ಶೇ.1.82 ಮತಗಳನ್ನು ಪಡೆದಿದ್ದು, ಭಾರತೀಯ ರಾಷ್ಟ್ರೀಯ ಲೋಕದಳ ಪಕ್ಷ ಶೇ.4.14 ಮತಗಳನ್ನು ಪಡೆದಿವೆ. ಈ ಹಿನ್ನೆಲೆಯಲ್ಲಿ, ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಹರಿಯಾಣ ಚುನಾವಣೆಯ ಸೋಲಿಗೆ ಜಾಟ್ ಸಮುದಾಯದ ಜಾತೀಯತೆ ಕಾರಣ ಎಂದು ಆರೋಪಿಸಿದ್ದಾರೆ.

ಈ ಕುರಿತು, ತಮ್ಮ ‘ಎಕ್ಸ್’ ಸೈಟ್ ನಲ್ಲಿ ಪ್ರತಿಕ್ರಿಯಿಸಿರುವ ಅವರು, “ನಾವು ಭಾರತೀಯ ರಾಷ್ಟ್ರೀಯ ಲೋಕದಳ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದೆವು. ಆದರೆ ಚುನಾವಣಾ ಫಲಿತಾಂಶ ನಮಗೆ ವಿರುದ್ಧವಾಗಿ ಬಂದಿದೆ. ಜಾಟ್ ಸಮುದಾಯದ ಜಾತಿ ಮನಸ್ಥಿತಿಯೇ ನಮ್ಮ ಸೋಲಿಗೆ ಕಾರಣ. ಕೆಲವು ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಅಲ್ಪ ಮತಗಳ ಅಂತರದಿಂದ ಗೆಲುವನ್ನು ಕಳೆದುಕೊಂಡಿದ್ದಾರೆ.

ಉತ್ತರ ಪ್ರದೇಶದ ಜಾಟ್ ಸಮುದಾಯದವರು ತಮ್ಮ ಜಾತಿ ತಾರತಮ್ಯವನ್ನು ಬದಲಾಯಿಸಿಕೊಂಡಿದ್ದಾರೆ. ಅವರಲ್ಲಿ ಹಲವರು ನಮ್ಮ ಪಕ್ಷದಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹರಿಯಾಣದ ಜಾಟ್ ಸಮುದಾಯದವರೂ ತಮ್ಮ ಮನೋಭಾವವನ್ನು ಬದಲಾಯಿಸಿಕೊಳ್ಳಬೇಕೆಂದು ನಾನು ಸಲಹೆ ನೀಡುತ್ತೇನೆ” ಎಂದು ಹೇಳಿದ್ದಾರೆ.

ಕ್ರೈಂ ರಿಪೋರ್ಟ್ಸ್

ಡಿ.ಸಿ.ಪ್ರಕಾಶ್

ಆರ್ಮ್‌ಸ್ಟ್ರಾಂಗ್ ಹತ್ಯೆ ಪ್ರಕರಣದಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಲಾಗಿದ್ದ 11 ಮಂದಿಯಲ್ಲಿ ಒಬ್ಬನಾಗಿದ್ದ ರೌಡಿ ತಿರುವೆಂಗಟಂ ಎಂಬಾತನನ್ನು ಇಂದು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಬಹುಜನ ಸಮಾಜ ಪಕ್ಷದ ತಮಿಳುನಾಡು ರಾಜ್ಯಾಧ್ಯಕ್ಷ ಆರ್ಮ್‌ಸ್ಟ್ರಾಂಗ್ ಅನ್ನು ಜುಲೈ 5ರ ರಾತ್ರಿ ಪೆರಂಬೂರಿನ ಅವರ ನಿವಾಸದ ಬಳಿ ಆರು ಅಪರಿಚಿತ ದುಷ್ಕರ್ಮಿಗಳಿಂದ ಹತ್ಯೆ ಮಾಡಲಾಗಿತ್ತು. ಆ ನಂತರ, ಈ ಘಟನೆಗೆ ಸಂಬಂಧಿಸಿದಂತೆ ಸೆಂಬಿಯಂ ಪೊಲೀಸರು 11 ಜನರನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಈ 11 ಮಂದಿಯಲ್ಲಿ ಒಬ್ಬನಾಗಿದ್ದ ರೌಡಿಯೇ 33 ವರ್ಷದ ತಿರುವೆಂಕಟಂ.

ಆರ್ಮ್ ಸ್ಟ್ರಾಂಗ್

ಏತನ್ಮಧ್ಯೆ, ತಿರುವೆಂಗಟಂನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು, ಪರಂಗಿಮಲೈ ಸಶಸ್ತ್ರ ಪಡೆಗಳ ಸಂಕೀರ್ಣದಲ್ಲಿ ವಿಚಾರಣೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ, ಕೊಡುಂಗೈಯೂರ್ ಕಾನೂನು ಸುವ್ಯವಸ್ಥೆ ಇನ್ಸ್‌ಪೆಕ್ಟರ್ ಸರವಣನ್ ಅವರು ಇಂದು ಬೆಳಗ್ಗೆ ಮಾಧವರಂ ಅಡುತೊಟ್ಟಿ ಬಳಿ ತನಿಖೆಗಾಗಿ ಕರೆದುಕೊಂಡು ಹೋಗುತ್ತಿದ್ದಾಗ ರೌಡಿ ತಿರುವೆಂಗಟಂ ಪರಾರಿಯಾಗಿದ್ದನು ಎನ್ನಲಾಗುತ್ತಿದೆ.

ತರುವಾಯ, ತಂಡೈಯಾರ್‌ಪೇಟೆ ಪೊಲೀಸ್ ಇನ್ಸ್‌ಪೆಕ್ಟರ್ ಮುಹಮ್ಮದ್ ಬುಖಾರಿ ಮಾಧವರಂ ಆಡುತೊಟ್ಟಿ ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ನಂತರ ರೌಡಿ ತಿರುವೆಂಗಟಂ ಪುಳಲ್ ವೆಜಿಟೇರಿಯನ್ ವಿಲೇಜ್ ಪ್ರದೇಶದ ಖಾಲಿ ಜಾಗದಲ್ಲಿ ಟಿನ್ ಶೆಡ್‌ನಲ್ಲಿ ತಲೆಮರೆಸಿಕೊಂಡಿರುವುದು ಬೆಳಕಿಗೆ ಬಂದಿತ್ತು.

ತಿರುವೆಂಗಟಂ ಎನ್‌ಕೌಂಟರ್ ಸ್ಪಾಟ್

ಇದಾದ ಬಳಿಕ ವಿಶೇಷ ಪಡೆ ಪೊಲೀಸರು ಟಿನ್ ಶೆಡ್ ಅನ್ನು ಸುತ್ತುವರಿದು ತಿರುವೆಂಗಟಂ ಅವರನ್ನು ಬಂಧಿಸಲು ಯತ್ನಿಸಿದ್ದಾರೆ. ಆಗ ತಿರುವೆಂಗಟಂ ತನ್ನ ಬಳಿಯಿದ್ದ ನಾಡ ಪಿಸ್ತೂಲ್ ನಿಂದ ಪೊಲೀಸರತ್ತ ಗುಂಡು ಹಾರಿಸಿದ್ದ ಎನ್ನಲಾಗಿದೆ. ಆಗ ಆತ್ಮರಕ್ಷಣೆಗಾಗಿ ಇನ್ಸ್​ಪೆಕ್ಟರ್​ ಮುಹಮ್ಮದ್ ಬುಖಾರಿ ತಿರುವೆಂಗಟಂ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಆರೋಪಿಯ ಬಲ ಭಾಗದ ಹೊಟ್ಟೆ ಮತ್ತು ಎಡ ಭಾಗದ ಎದೆಗೆ ಗುಂಡುಗಳು ತಗುಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ತಕ್ಷಣ ಪೊಲೀಸರು ಆತನನ್ನು ರಕ್ಷಿಸಿ ಮಾಧವರಂನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಆದರೆ ಅಲ್ಲಿ ತಪಾಸಣೆ ನಡೆಸಿದ ವೈದ್ಯರು ತಿರುವೆಂಗಟಂ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ನಂತರ ತಿರುವೆಂಗಟಂ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಟಾನ್ಲಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಸದ್ಯ ಅಲ್ಲಿ ಭಾರೀ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

ತಿರುವೆಂಗಟಂ

ಅಲ್ಲದೆ, ತಿರುವೆಂಗಟಂ ಅವರ ಕ್ರಿಮಿನಲ್ ಹಿನ್ನೆಲೆಯ ಬಗ್ಗೆ ಪೊಲೀಸರು ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಆರ್ಮ್‌ಸ್ಟ್ರಾಂಗ್ ಆಪ್ತ ಬಾಮ್ ಸರವಣನ್ ಸಹೋದರ ತೆನ್ನರಸು ಹತ್ಯೆ ಪ್ರಕರಣದ ಮೊದಲ ಆರೋಪಿಯಾಗಿದ್ದಾನೆ. ಈತನ ವಿರುದ್ಧ 2014ರಲ್ಲಿ ಕುಂಡ್ರತ್ತೂರ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಆರ್ಮ್‌ಸ್ಟ್ರಾಂಗ್ ಘಟನೆಯಲ್ಲಿ ನೇರವಾಗಿ ಚಾಕುವಿನಿಂದ ಇರಿದ ಅಪರಾಧಿಯೂ ಇವನೇ ಆಗಿದ್ದಾನೆ. ಸದ್ಯ ಈತನ ವಿರುದ್ಧ ಅಪಹರಣ, ಕೊಲೆ ಯತ್ನ ಪ್ರಕರಣಗಳು ಬಾಕಿ ಇವೆ.

ದೇಶ

ಡಿ.ಸಿ.ಪ್ರಕಾಶ್

ಬಹುಜನ ಸಮಾಜ ಪಕ್ಷದ ತಮಿಳುನಾಡು ರಾಜ್ಯಾಧ್ಯಕ್ಷ ಆರ್ಮ್‌ಸ್ಟ್ರಾಂಗ್ ಅವರ ಜೀವಕ್ಕೆ ಅಪಾಯವಿದೆ ಎಂದು ಗುಪ್ತಚರ ಇಲಾಖೆ ಮೂರು ಬಾರಿ ಎಚ್ಚರಿಕೆ ನೀಡಿದ್ದರೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಲಿಲ್ಲ ಎಂದು ವರದಿಯಾಗಿದೆ.

ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಆರ್ಮ್‌ಸ್ಟ್ರಾಂಗ್ ಅವರನ್ನು ನಿನ್ನೆ ರಾತ್ರಿ ದುಷ್ಕರ್ಮಿಗಳು ಕಡಿದು ಹತ್ಯೆ ಮಾಡಿದ್ದರು. ದಾಳಿಕೋರರಿಂದ ಹಲ್ಲೆಗೊಳಗಾದ ಆರ್ಮ್‌ಸ್ಟ್ರಾಂಗ್ ಅವರನ್ನು ನಿನ್ನೆ ರಾತ್ರಿ ಅಪೋಲೋ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಅವರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಸದ್ಯ ಆರ್ಮ್‌ಸ್ಟ್ರಾಂಗ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.

ಆರ್ಮ್‌ಸ್ಟ್ರಾಂಗ್

ಆರ್ಮ್‌ಸ್ಟ್ರಾಂಗ್ ಹತ್ಯೆ ಖಂಡಿಸಿ ಬಹುಜನ ಸಮಾಜ ಪಕ್ಷದ ಸದಸ್ಯರು ರಸ್ತೆ ತಡೆ ಸೇರಿದಂತೆ ವಿವಿಧೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಇದೇ ವೇಳೆ ಆರ್ಮ್‌ಸ್ಟ್ರಾಂಗ್ ಹತ್ಯೆಗೆ ಸಂಬಂಧಿಸಿದಂತೆ 8 ಮಂದಿ ಶರಣಾಗಿದ್ದಾರೆ. ತನಿಖೆ ಮುಂದುವರಿದಿದೆ.

ಅವರ ನಿಧನಕ್ಕೆ ತಮಿಳುನಾಡಿನ ಹಲವು ರಾಜಕೀಯ ಪಕ್ಷಗಳು ಸಂತಾಪ ಸೂಚಿಸುತ್ತಿವೆ. ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ಖಂಡಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ, ‘ತಮಿಳುನಾಡು ವೆಟ್ರಿ ಕಳಗಂ’ ಅಧ್ಯಕ್ಷ ಮತ್ತು ನಟ ವಿಜಯ್ ಅವರು ಆರ್ಮ್‌ಸ್ಟ್ರಾಂಗ್ ಹತ್ಯೆಗೆ ಸಂತಾಪ ಸೂಚಿಸಿದ್ದಾರೆ.

ನಟ ವಿಜಯ್

ಅಲ್ಲದೆ, ತಮಿಳುನಾಡು ಸರಕಾರ ಯಾವುದೇ ರಾಜಿ ಮಾಡಿಕೊಳ್ಳದೆ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಬಗ್ಗ ಅವರು ಪ್ರಕಟಿಸಿರುವ ಟ್ವೀಟ್‌ನಲ್ಲಿ, “ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷರಾದ ಆರ್ಮ್‌ಸ್ಟ್ರಾಂಗ್ ಅವರ ಹತ್ಯೆ ಆಘಾತಕಾರಿ ಮತ್ತು ನೋವಿನಿಂದ ಕೂಡಿದೆ.

ಆರ್ಮ್‌ಸ್ಟ್ರಾಂಗ್ ಅವರ ಅಗಲಿಕೆಯಿಂದ ನೊಂದಿರುವ ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಆಳವಾದ ಸಂತಾಪ. ಇನ್ನು ಮುಂದೆ ಇಂತಹ ಘೋರ ಅಪರಾಧಗಳು ನಡೆಯದಂತೆ ತಮಿಳುನಾಡು ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ರಾಜಿ ಮಾಡಿಕೊಳ್ಳದೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮತ್ತು ಪ್ರತಿಯೊಬ್ಬರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾನು ನಿಮ್ಮನ್ನು ವಿನಂತಿಸುತ್ತೇನೆ” ಎಂದಿದ್ದಾರೆ.

ಬಿಎಸ್ ಪಿ ನಾಯಕಿ ಮಾಯಾವತಿಯೊಂದಿಗೆ ಆರ್ಮ್‌ಸ್ಟ್ರಾಂಗ್

ಈ ಹಿನ್ನೆಲೆಯಲ್ಲಿ, ಕಳೆದ ಕೆಲವು ದಿನಗಳಿಂದ ಹಂತಕರು ಆರ್ಮ್‌ಸ್ಟ್ರಾಂಗ್‌ ಅವರ ಮೇಲೆ ನಿಗಾ ಇರಿಸಿದ್ದರು ಎಂದು ಹೇಳಲಾಗಿದೆ. ಆರ್ಮ್‌ಸ್ಟ್ರಾಂಗ್ ಅವರ ಜೀವಕ್ಕೆ ಅಪಾಯವಿದೆ ಎಂದು ಗುಪ್ತಚರ ಸೇವೆ ಮತ್ತು ಸಮಗ್ರ ಅಪರಾಧ ತನಿಖಾ ವಿಭಾಗ ಈಗಾಗಲೇ 3 ಬಾರಿ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ. ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದ್ದರೂ ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ಲ ಎನ್ನಲಾಗಿದೆ.

ಗುಪ್ತಚರ ಸಂಸ್ಥೆ ಮೂರು ಬಾರಿ ಎಚ್ಚರಿಕೆ ನೀಡಿದರೂ ಸೆಂಬಿಯಂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರದಿಯಾಗಿದೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ರಾಜಕೀಯ

ಡಿ.ಸಿ.ಪ್ರಕಾಶ್

ಲೋಕಸಭೆ ಚುನಾವಣೆ ವೇಳೆ ಆಕಾಶ್‌ನನ್ನು ಡಮ್ಮಿ ಮಾಡಿದ್ದ ಮಾಯಾವತಿ, ಚುನಾವಣೆಯ ನಂತರ ಅವರನ್ನು ಉತ್ತರಾಧಿಕಾರಿ ಎಂದು ಘೋಷಿಸಿದ್ದಾರೆ!

ಮಾಯಾವತಿ ಅವರು 2019ರ ಲೋಕಸಭೆ ಚುನಾವಣೆಯಲ್ಲಿ 10 ಕ್ಷೇತ್ರಗಳನ್ನು ಗೆದ್ದರು. ಆದರೆ, 2024ರ ಲೋಕಸಭೆ ಚುನಾವಣೆಯಲ್ಲಿ ಒಂದೇ ಒಂದು ಕ್ಷೇತ್ರವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷವು ಶೇ.9.39ರಷ್ಟು ಮತಗಳನ್ನು ಪಡೆದಿದ್ದರೂ ಪಕ್ಷ ಹೀನಾಯ ಸೋಲನ್ನು ಅನುಭವಿಸಿತು.

ಈ ಹಿನ್ನೆಲೆಯಲ್ಲಿ, ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಮತ್ತೊಮ್ಮೆ ತಮ್ಮ ಅಣ್ಣನ ಮಗ ಆಕಾಶ್ ಆನಂದ್ ಅವರನ್ನು ರಾಜಕೀಯ ಉತ್ತರಾಧಿಕಾರಿ ಎಂದು ಘೋಷಿಸಿದ್ದಾರೆ. ಇದರೊಂದಿಗೆ ಆಕಾಶ್ ಆನಂದ್ ಅವರಿಗೆ ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಸಂಯೋಜಕ ಹುದ್ದೆಯನ್ನೂ ನೀಡಲಾಗಿದೆ. ಬಹುಜನ ಸಮಾಜ ಪಕ್ಷದ ಕಾರ್ಯಕಾರಿಣಿ ಸಭೆ ಜೂನ್ 23 ರಂದು ಉತ್ತರಪ್ರದೇಶದ ರಾಜಧಾನಿ ಲಕ್ನೋದಲ್ಲಿ ನಡೆಯಿತು. ಸಭೆಯ ನಂತರ ಮಾಯಾವತಿ ಈ ಕುರಿತು ಘೋಷಣೆ ಮಾಡಿದ್ದಾರೆ.

ಆಕಾಶ್ ಆನಂದ್ ಲಂಡನ್ ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಅವರು 2017ರಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮಾಯಾವತಿ ಅವರೊಂದಿಗೆ ಸೇರಿ ಕೆಲಸ ಮಾಡಿದ್ದರು. 2019ರ ಲೋಕಸಭಾ ಚುನಾವಣೆ ಸಮಯದಲ್ಲಿ, ಅವರು ಬಹುಜನ ಸಮಾಜ ಪಕ್ಷದ ಪ್ರಮುಖ ಮುಖವಾಗಿ ಗುರುತಿಸಿಕೊಂಡರು. ಮತ್ತು ಆಕಾಶ್ ಅವರನ್ನು ಪಕ್ಷದ ರಾಷ್ಟ್ರೀಯ ಸಂಯೋಜಕರನ್ನಾಗಿ ನೇಮಿಸಿದ್ದು ಅಲ್ಲದೇ ಅವರನ್ನು ಕಳೆದ ಡಿಸೆಂಬರ್‌ನಲ್ಲಿ ತಮ್ಮ ರಾಜಕೀಯ ಉತ್ತರಾಧಿಕಾರಿ ಎಂದೂ ಘೋಷಿಸಿದರು.

ಮಾಯಾವತಿಯ ಉತ್ತರಾಧಿಕಾರಿ ಆಕಾಶ್ ಆನಂದ್

ಆದರೆ, ತನ್ನ ರಾಜಕೀಯ ಉತ್ತರಾಧಿಕಾರಿ ಎಂದು ಘೋಷಿಸಿದ ನಾಲ್ಕೈದು ತಿಂಗಳಲ್ಲೇ ತಮ್ಮ ನಿಲುವನ್ನು ಬದಲಿಸಿಕೊಂಡ ಮಾಯಾವತಿ, ಆಕಾಶ್ ಆನಂದ್ ಅವರ ರಾಜಕೀಯ ಉತ್ತರಾಧಿಕಾರಿ ಘೋಷಣೆಯನ್ನು ಹಿಂಪಡೆಯುತ್ತಿರುವುದಾಗಿ ಕಳೆದ ಮೇ ತಿಂಗಳಲ್ಲಿ ಚುನಾವಣೆಯ ಸನಿಹದಲ್ಲಿ ಘೋಷಿಸಿದರು. ಅಲ್ಲದೇ ‘ಆಕಾಶ್ ಆನಂದ್ ರಾಜಕೀಯವಾಗಿ ಪ್ರಬುದ್ಧರಾಗುವವರೆಗೆ ಅವರನ್ನು ಪಕ್ಷದಿಂದ ತೆಗೆದುಹಾಕಲಾಗುತ್ತಿದೆ’ ಎಂದೂ ಮಾಯಾವತಿ ಹೇಳಿದರು.

ಬಿಜೆಪಿ ವಿರುದ್ಧ ಆಕಾಶ್ ಆನಂದ್ ಟೀಕೆ ಮಾಡಿರುವುದು ಮಾಯಾವತಿ ಅವರ ಈ ನಿರ್ಧಾರಕ್ಕೆ ಕಾರಣ ಎಂದು ರಾಜಕೀಯ ವಲಯದಲ್ಲಿ ಹೇಳಲಾಗುತ್ತಿದೆ.

ಉತ್ತರ ಪ್ರದೇಶದ ಸೀತಾಪುರದಲ್ಲಿ ಬಹುಜನ ಸಮಾಜ ಪಕ್ಷ ಚುನಾವಣಾ ಪ್ರಚಾರ ನಡೆಸಿತು. ಅದರಲ್ಲಿ ಮಾತನಾಡಿದ ಆಕಾಶ್ ಆನಂದ್, ‘ಇದೊಂದು ಬುಲ್ಡೋಜರ್ ಸರಕಾರ, ದೇಶದ್ರೋಹಿಗಳ ಸರಕಾರ, ಯುವಕರನ್ನು ಹಸಿವಿನಿಂದ ಸಾಯಿಸುವ, ಮುದುಕರನ್ನು ಗುಲಾಮರನ್ನಾಗಿಸುವ ಭಯೋತ್ಪಾದಕರ ಸರಕಾರ. ಅಫ್ಘಾನಿಸ್ತಾನದ ತಾಲಿಬಾನಿಗಳಂತೆ ಬಿಜೆಪಿ ಆಡಳಿತ ನಡೆಸುತ್ತಿದೆ.

ಚುನಾವಣಾ ಬಾಂಡ್‌ಗಳ ಮೂಲಕ 16,000 ಕೋಟಿ ರೂ.ಗಳನ್ನು ತೆಗೆದುಕೊಂಡ ಕಳ್ಳರ ಪಕ್ಷ’ ಎಂದೆಲ್ಲಾ ಆಕಾಶ್ ಆನಂದ್ ಬಿಜೆಪಿಯನ್ನು ಟೀಕಿಸಿದ್ದರು. ಚುನಾವಣಾ ನೀತಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು. ಈ ಕಾರಣದಿಂದಾಗಿ ಆಕಾಶ್ ಆನಂದ್ ಅವರನ್ನು ಪಕ್ಷದಿಂದ ದೂರವಿಡಲಾಗಿತ್ತು.

ಆಕಾಶ್ ಆನಂದ್

2019ರ ಲೋಕಸಭಾ ಚುನಾವಣೆಯಲ್ಲಿ ಬಿಎಸ್‌ಪಿ 10 ಸಂಸದರನ್ನು ಪಡೆದಿದ್ದರೂ, ಆ ಸಂಸದರು ಬಿಜೆಪಿ, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದಂತಹ ಇತರ ಪಕ್ಷಗಳಿಗೆ ಪಕ್ಷಾಂತರ ಮಾಡಿದರು. ಹಾಗಾಗಿ ಮಾಯಾವತಿ ಹತಾಶರಾಗಿದ್ದರು. ಈ ಹಿನ್ನೆಲೆಯಲ್ಲಿ, 2024ರ ಲೋಕಸಭಾ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ ‘ಇಂಡಿಯಾ’ ಮೈತ್ರಿಕೂಟ ಸೇರಿದರೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸುವುದು ಖಚಿತ ಎಂದು ರಾಜಕೀಯ ವಿಶ್ಲೇಷಕ ಅಭಿಪ್ರಾಯವಾಗಿತ್ತು. ಆದರೆ ಮಾಯಾವತಿ ಅಂತಹ ನಿರ್ಧಾರ ತೆಗೆದುಕೊಂಡಿಲ್ಲ. ಮಾಯಾವತಿ ಅವರು ‘ಇಂಡಿಯಾ’ ಮೈತ್ರಿಕೂಟ ಅಥವಾ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು ಸೇರದೇ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದರು.

ಮಾಯಾವತಿ ಏಕಾಂಗಿಯಾಗಿ ಸ್ಪರ್ಧಿಸುವುದು ಬಿಜೆಪಿಗೆ ಲಾಭ ಎಂದು ರಾಜಕೀಯ ವಿಶ್ಲೇಷಕರು ಮತ್ತು ‘ಇಂಡಿಯಾ’ ಮೈತ್ರಿಕೂಟದ ಮುಖಂಡರು ಪದೇ ಪದೇ ಹೇಳುತ್ತಿದ್ದರು. ಅದೇ ರೀತಿ ಮಾಯಾವತಿಯವರ ನಿರ್ಧಾರ ಬಿಜೆಪಿಗೆ ಮಾತ್ರ ಲಾಭವಾಯಿತು. ಉತ್ತರ ಪ್ರದೇಶದಲ್ಲಿ ಬಿಜೆಪಿ 33 ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಆದರೇ ಮಾಯಾವತಿ ಅವರು ‘ಇಂಡಿಯಾ’ ಮೈತ್ರಿಕೂಟಕ್ಕೆ ಸೇರಿದ್ದರೆ, ಬಿಜೆಪಿ ಉತ್ತರ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಸ್ಥಾನಗಳನ್ನು ಕಳೆದುಕೊಳ್ಳುತ್ತಿತ್ತು. ಅದು ಏನೇ ಇರಲಿ, ಈ ಬಾರಿಯ ಚುನಾವಣೆಯಲ್ಲಿ ಬಿಎಸ್‌ಪಿ ಹೀನಾಯ ಸೋಲು ಕಂಡ ನಂತರ ಮಾಯಾವತಿ ಮತ್ತೊಮ್ಮೆ ಆಕಾಶ್ ಆನಂದ್ ಅವರನ್ನು ತಮ್ಮ ರಾಜಕೀಯ ಉತ್ತರಾಧಿಕಾರಿ ಎಂದು ಘೋಷಿಸಿದ್ದಾರೆ.

ಹಾಗಾಗಿ ಉತ್ತರ ಪ್ರದೇಶ ರಾಜಕೀಯದಲ್ಲಿ ಮತ್ತು ಮಾಧ್ಯಮಗಳಲ್ಲಿ ಆಕಾಶ್ ಆನಂದ್ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ. ಮಾಯಾವತಿಯವರ ಸಹೋದರ ಆನಂದ್ ಕುಮಾರ್ ಅವರ ಮಗ ಆಕಾಶ್ 1995ರಲ್ಲಿ ಜನಿಸಿದ್ದಾರೆ. ಇಂಗ್ಲೆಂಡಿನಲ್ಲಿ ಎಂಬಿಎ ವ್ಯಾಸಂಗ ಮಾಡಿದ ಅವರು 2016ರಲ್ಲಿ ಬಹುಜನ ಸಮಾಜ ಪಕ್ಷ ಸೇರಿದರು. ಆ ಸಮಯದಲ್ಲಿ, ಸಹರಾನ್‌ಪುರದಲ್ಲಿ ಸಾರ್ವಜನಿಕ ಸಭೆ ನಡೆಯಿತು, ಇದರಲ್ಲಿ ಅಖಿಲೇಶ್ ಯಾದವ್ ಮತ್ತು ಅಜಿತ್ ಸಿಂಗ್ ಅವರಂತಹ ಪ್ರಮುಖ ನಾಯಕರು ಭಾಗವಹಿಸಿದ್ದರು. ಆಕಾಶ್ ಆನಂದ್ ಗೆ ಇದು ಮೊದಲ ವೇದಿಕೆಯಾಗಿತ್ತು.

ಆಕಾಶ್ ಆನಂದ್, ಮಾಯಾವತಿ, ಮುಲಾಯಂ ಸಿಂಗ್, ಅಜಿತ್ ಸಿಂಗ್

ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ 2019ರಲ್ಲಿ ಆಗ್ರಾದಲ್ಲಿ ಬಹುಜನ ಸಮಾಜ ಪಕ್ಷದ ಮಹಾಸಭೆ ನಡೆಯಿತು. ಆ ಸಭೆಯಲ್ಲೇ ಆಕಾಶ್ ಆನಂದ್ ಮೊದಲ ಬಾರಿಗೆ ಭಾಷಣ ಮಾಡಿದರು. ತರುವಾಯ, ಬಿಎಸ್‌ಪಿಯೊಳಗೆ ಅವರ ಪ್ರಭಾವ ಹೆಚ್ಚಾಯಿತು. ಅವರು ಪಕ್ಷದ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ತಮ್ಮ ಅತ್ತೆ ಮತ್ತು ಪಕ್ಷದ ನಾಯಕಿ ಮಾಯಾವತಿಯವರ ಪರವಾಗಿ ನಿಂತರು. ಆದ್ದರಿಂದಲೇ ಮಾಯಾವತಿ ಅವರನ್ನು ತಮ್ಮ ರಾಜಕೀಯ ಉತ್ತರಾಧಿಕಾರಿ ಎಂದು ಘೋಷಿಸಿದರು.

ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳದಿದ್ದರೂ, ಮಾಯಾವತಿ ಅವರು ಬಿಜೆಪಿಗೆ ಅನುಕೂಲವಾಗುವ ರಾಜಕೀಯ ನಿಲುವುಗಳನ್ನೇ ತೆಗೆದುಕೊಳ್ಳುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲೇ ಆಕಾಶ್ ಬಿಜೆಪಿಯನ್ನು ಟೀಕಿಸಿ ಮಾತನಾಡಿದ್ದರು. ಹಾಗಾಗಿ ಸಾಕಷ್ಟು ಪ್ರಕರಣಗಳನ್ನು ಎದುರಿಸುತ್ತಿರುವ ಮಾಯಾವತಿ, ಬಿಜೆಪಿಯ ಸಿಟ್ಟಿನಿಂದ ರಕ್ಷಿಸಿಕೊಳ್ಳಲು ಆಕಾಶ್ ಆನಂದ್ ವಿರುದ್ಧ ಕ್ರಮ ಕೈಗೊಂಡರು.

ಲೋಕಸಭೆ ಚುನಾವಣೆಯಲ್ಲಿ ಮಾಯಾವತಿ ಒಂದೇ ಒಂದು ಸ್ಥಾನವನ್ನು ಗೆಲ್ಲದಿದ್ದರೂ, ಆಜಾದ್ ಸಮಾಜ ಪಾರ್ಟಿಯ (ಕಾನ್ಸಿರಾಮ್) ನಾಯಕ ಚಂದ್ರಶೇಖರ ಆಜಾದ್, ನಜಿನಾ ಮುಂತಾದವರು ಲೋಕಸಭಾ ಸ್ಥಾನವನ್ನು ಗೆದ್ದಿದ್ದಾರೆ. ಚಂದ್ರಶೇಖರ ಆಜಾದ್ ಅವರು ಉತ್ತರ ಪ್ರದೇಶದಲ್ಲಿ ದಲಿತ ರಾಜಕಾರಣವನ್ನು ಸಕ್ರಿಯವಾಗಿ ಪ್ರಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ, ಮಾಯಾವತಿ ಅವರು ಆಕಾಶ್ ಆನಂದ್ ಅವರನ್ನು ತಮ್ಮ ರಾಜಕೀಯ ಉತ್ತರಾಧಿಕಾರಿ ಎಂದು ಘೋಷಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಉತ್ತರ ಪ್ರದೇಶದ ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ರಾಜಕೀಯ

ಲಖನೌ/ನವದೆಹಲಿ: ಮುಂಬರುವ ಸಾರ್ವತ್ರಿಕ ಚುನಾವಣೆಗೆ ಮುನ್ನ, ಅಂಬೇಡ್ಕರ್ ನಗರದ ಬಿಎಸ್‌ಪಿ ಲೋಕಸಭಾ ಸಂಸದ ರಿತೇಶ್ ಪಾಂಡೆ ಭಾನುವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ರಿತೇಶ್ ಪಾಂಡೆ ಅವರು ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಅವರಿಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ, ‘ತಮ್ಮನ್ನು ದೀರ್ಘಕಾಲ ಸಭೆಗಳಿಗೆ ಕರೆಯದ ಕಾರಣ ಮತ್ತು ಪಕ್ಷದ ನಾಯಕತ್ವವು ತಮ್ಮೊಂದಿಗೆ ಮಾತನಾಡದ ಕಾರಣ ಪಕ್ಷಕ್ಕೆ ನನ್ನ ಸೇವೆ ಅಗತ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೇನೆ’ ಎಂದು ಹೇಳಿದ್ದಾರೆ.

ಅವರು ತಮ್ಮ ರಾಜೀನಾಮೆ ಪತ್ರವನ್ನು ‘ಎಕ್ಸ್’ ಸೈಟ್ ನಲ್ಲಿ ಹಂಚಿಕೊಂಡಿದ್ದಾರೆ.

ರಾಜಕೀಯ

ಲಖನೌ: ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಿದೆ.

ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿರುವ ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಅವರು ಬಹುಜನ ಸಮಾಜ ಪಕ್ಷದ ಸಂಸ್ಥಾಪಕ ಕಾನ್ಶಿರಾಮ್ ಅವರಿಗೂ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಮಾಯಾವತಿ ಅವರು ‘ಎಕ್ಸ್’ ಸೈಟ್‌ನಲ್ಲಿ ಪ್ರಕಟಿಸಿರುವ ಪೋಸ್ಟ್‌ನಲ್ಲಿ, “ದೇಶದಲ್ಲಿ, ವಿಶೇಷವಾಗಿ ಅತ್ಯಂತ ಹಿಂದುಳಿದ ಜನರು ತಮ್ಮ ಸಾಂವಿಧಾನಿಕ ಹಕ್ಕುಗಳಿಗಾಗಿ ತಮ್ಮ ಜೀವನದುದ್ದಕ್ಕೂ ಕಷ್ಟಪಟ್ಟು ಹೋರಾಡಿ ಸಾಮಾಜಿಕ ಸ್ಥಾನಮಾನವನ್ನು ಗಳಿಸಿದ್ದಾರೆ. ನ್ಯಾಯ ಮತ್ತು ಸಮಾನತೆಯ ಬದುಕನ್ನು ನೀಡಿದ ಜನನಾಯಕ ಕರ್ಪೂರಿ ಠಾಕೂರ್ ಅವರ 100ನೇ ಜನ್ಮದಿನದಂದು ಅವರಿಗೆ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇನೆ.

ಬಿಎಸ್‌ಪಿ ಸಂಸ್ಥಾಪಕ ಕಾನ್ಶಿರಾಮ್

ಬಿಹಾರದ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಕರ್ಪೂರಿ ಠಾಕೂರ್ ಅವರನ್ನು ಭಾರತ ರತ್ನ ನೀಡಿ ಗೌರವಿಸುವ ಕೇಂದ್ರ ಸರ್ಕಾರದ ತಡವಾದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ದೇಶದ ಈ ಅತ್ಯುನ್ನತ ನಾಗರಿಕ ಗೌರವಕ್ಕಾಗಿ ಅವರ ಕುಟುಂಬ ಮತ್ತು ಅವರ ಎಲ್ಲಾ ಅನುಯಾಯಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.

ಅದೇ ರೀತಿ ದಲಿತರು ಮತ್ತು ಇತರ ಅಂಚಿನಲ್ಲಿರುವ ಜನರು ಸ್ವಾಭಿಮಾನದಿಂದ ಬದುಕಲು ಮತ್ತು ಅವರು ಸ್ವಂತ ಕಾಲಿನ ಮೇಲೆ ನಿಂತುಕೊಳ್ಳಲು ಕಾರಣರಾಗಿದ್ದವರು ಬಹುಜನ ಸಮಾಜ ಪಕ್ಷದ ಸಂಸ್ಥಾಪಕ ಕಾನ್ಶಿರಾಮ್ ಅವರು. ಇದು ಐತಿಹಾಸಿಕವಾದ ಮತ್ತು ಮರೆಯಲಾಗದ ಸಂಗತಿ. ಕೋಟ್ಯಂತರ ಜನರ ಅಪೇಕ್ಷೆಯಂತೆ ಅವರಿಗೆ ಭಾರತ ರತ್ನ ನೀಡಿ ಗೌರವಿಸುವುದು ಅಗತ್ಯವಾಗಿದೆ” ಎಂದು ಹೇಳಿದ್ದಾರೆ.

ದೇಶ ರಾಜಕೀಯ

ನವದೆಹಲಿ: ದ್ವೇಷ ಭಾಷಣದಿಂದ ಪ್ರಭಾವಿತರಾದ ಬಹುಜನ ಸಾಮಾಜ ಪಾರ್ಟಿಯ ಸಂಸದ ಕುನ್ವರ್ ಡ್ಯಾನಿಶ್ ಅಲಿ ಅವರನ್ನು ಕಾಂಗ್ರೆಸ್ ಸಂಸದ ರಾಹುಲ್ ಭೇಟಿ ಮಾಡಿದ್ದಾರೆ.

ಸಂಸತ್ತಿನಲ್ಲಿ ಚರ್ಚೆಯ ಸಂದರ್ಭದಲ್ಲಿ ದೆಹಲಿ ಬಿಜೆಪಿ ಸಂಸದ ರಮೇಶ್ ಬಿಧುರಿ ಚಂದ್ರಯಾನ-3 ವಿಚಾರವಾಗಿ ಮಾತನಾಡುತ್ತಿದ್ದರು. ಆಗ ಮಾಯಾವತಿ ಅವರ ಬಹುಜನ ಸಮಾಜ ಪಕ್ಷದ ಸಂಸದ ಡ್ಯಾನಿಶ್ ಅಲಿ ಅಡ್ಡಿಪಡಿಸುತ್ತಿದ್ದಂತೆ, ಇದರಿಂದ ಕೆರಳಿದ ರಮೇಶ್ ಬಿಧುರಿ, ಡ್ಯಾನಿಶ್ ಅವರನ್ನು ‘ಭಯೋತ್ಪಾದಕ’ ಎಂದು ಸಂಭೋಧಿಸಿದರು. ಇದು ವಿವಾದಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ವಿಕ್ರಮ್ ಲ್ಯಾಂಡರ್, ಪ್ರಗ್ಯಾನ್ ರೋವರ್‌ನಿಂದ ಸಿಗ್ನಲ್ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ: ಇಸ್ರೋ

ಈ ವಿಚಾರ, ವಿವಾದ ಸೃಷ್ಟಿಸಿದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಡ್ಯಾನಿಶ್ ಅಲಿ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ರಾಹುಲ್ ಜೊತೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಉಪಸ್ಥಿತರಿದ್ದರು.

ಇಂಡಿಯಾ ಮೈತ್ರಿಕೂಟದ ಪರವಾಗಿ ಲೋಕಸಭೆಯ ಸ್ಪೀಕರ್‌ಗೆ ಕಳುಹಿಸಿರುವ ಪತ್ರದಲ್ಲಿ, ದ್ವೇಷ ಭಾಷಣ ಮಾಡಿದ ಬಿಜೆಪಿ ಸಂಸದ ರಮೇಶ್ ಬಿಧುರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಉಲ್ಲೇಖಿಸಿದ್ದಾರೆ.