ಛತ್ತೀಸ್‌ಗಢದ ನಾರಾಯಣಪುರದಲ್ಲಿ 8 ನಕ್ಸಲೀಯರ ಎನ್‌ಕೌಂಟರ್; 1 ಸೈನಿಕ ಹುತಾತ್ಮ!
ನವದೆಹಲಿ: ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯ ಅಬುಜ್ಮಾರ್ ನಲ್ಲಿ ಶನಿವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಕನಿಷ್ಠ ಎಂಟು ನಕ್ಸಲೀಯರು ಹತರಾಗಿದ್ದಾರೆ. ಗುಂಡಿನ ಚಕಮಕಿಯಲ್ಲಿ ಒಬ್ಬ ಯೋಧ ಪ್ರಾಣ ಕಳೆದುಕೊಂಡು ಇನ್ನಿಬ್ಬರು ಗಾಯಗೊಂಡಿದ್ದಾರೆ.
ಮಾದ್ ಮತ್ತು ನಾರಾಯಣಪುರ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ಎನ್‌ಕೌಂಟರ್ ನಡೆಯುತ್ತಿದೆ. ನಾರಾಯಣಪುರ-ಕೊಂಡಗಾಂವ್-ಕಂಕೇರ್-ದಂತೇವಾಡ ಡಿಆರ್‌ಜಿ, ಎಸ್‌ಟಿಎಫ್ ಮತ್ತು ಐಟಿಬಿಪಿ 53ನೇ ಬೆಟಾಲಿಯನ್ ಪಡೆಗಳು ಜಂಟಿ ಕಾರ್ಯಾಚರಣೆಯಲ್ಲಿ ತೊಡಗಿವೆ.
ಭದ್ರತಾ ಪಡೆಗಳು “ರೆಡ್ ಕಾರಿಡಾರ್” ನಲ್ಲಿ ನಕ್ಸಲೀಯರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿವೆ ಮತ್ತು ನಕ್ಸಲ್ ವಿರೋಧಿ ಕಾರ್ಯಾಚರಣೆಯನ್ನು ಬಲಪಡಿಸಿವೆ. ಕಳೆದ ತಿಂಗಳು ದೀರ್ಘಾವಧಿಯ ಗುಂಡಿನ ಕಾಳಗ ಮುಂದುವರಿಸಿ, ಪ್ರಕ್ಷುಬ್ಧ ಬಿಜಾಪುರ ಜಿಲ್ಲೆಯ ಅರಣ್ಯದಲ್ಲಿ ಪಡೆಗಳು ಕನಿಷ್ಠ 12 ನಕ್ಸಲೀಯರನ್ನು ನಿರ್ಮೂಲನೆ ಮಾಡಿದೆ.
ಗಂಗಲೂರು ಪ್ರದೇಶದ ಪಿಡಿಯಾ ಗ್ರಾಮದ ಬಳಿ ಬೆಳಿಗ್ಗೆ ನಕ್ಸಲೀಯರೊಂದಿಗೆ ಎನ್‌ಕೌಂಟರ್ ನಡೆದಾಗ ಭದ್ರತಾ ಸಿಬ್ಬಂದಿಯ ತಂಡವು ಶೋಧ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಪಡೆಗಳು ಹಿಂತಿರುಗುವ ಮೊದಲು ಸಂಜೆಯವರೆಗೆ ಹನ್ನೊಂದು ಗಂಟೆಗಳ ಕಾಲ ಎನ್‌ಕೌಂಟರ್ ನಡೆದಿದೆ.
ಈ ಹಿನ್ನೆಲೆಯಲ್ಲಿ, ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ಕಾರ್ಯಾಚರಣೆಯಲ್ಲಿ ತೊಡಗಿದ್ದ ಭದ್ರತಾ ಪಡೆಗಳು ಮತ್ತು ಅಧಿಕಾರಿಗಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
“ಛತ್ತೀಸ್‌ಗಢದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ನಕ್ಸಲೀಯರ ವಿರುದ್ಧ ಕ್ರಮಗಳು ಹೆಚ್ಚಿವೆ ಮತ್ತು ನಾವು ಅವರಿಗೆ ಪ್ರಬಲ ಹೋರಾಟ ನೀಡುತ್ತಿದ್ದೇವೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ನಕ್ಸಲಿಸಂ ಕೊನೆಗೊಳ್ಳಲಿ ಎಂದು ಬಯಸಿದ್ದಾರೆ ಮತ್ತು ಜನರು ಡಬಲ್ ಇಂಜಿನ್ ಸರ್ಕಾರದ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ” ಎಂದು ಸಾಯಿ ಹೇಳಿದರು.
ಏಪ್ರಿಲ್ 16 ರಂದು, ಕಂಕೇರ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು 29 ನಕ್ಸಲೀಯರನ್ನು ಹೊಡೆದುರುಳಿಸಿದರೆ, ಅದೇ ನಾರಾಯಣಪುರ ಜಿಲ್ಲೆಯ ಅಬುಜ್ಮಾರ್ ಪ್ರದೇಶದಲ್ಲಿ ನಡೆದ ಮತ್ತೊಂದು ಎನ್‌ಕೌಂಟರ್‌ನಲ್ಲಿ ಹತ್ತು ನಕ್ಸಲೀಯರು ಕೊಲ್ಲಲ್ಪಟ್ಟರು ಎಂಬುದು ಗಮನಾರ್ಹ.