ಸಿರಿಯಾ: 13 ವರ್ಷಗಳ ಯುದ್ಧ.. ಕೇವಲ 13 ದಿನಗಳಲ್ಲಿ ಬಂಡುಕೋರರು ಮೇಲುಗೈ ಸಾಧಿಸಿದ್ದು ಹೇಗೆ? ಇದರಲ್ಲಿ ಇಸ್ರೇಲ್ ಪಾತ್ರವೇನು?
ಡಿ.ಸಿ.ಪ್ರಕಾಶ್
ಸಿರಿಯಾದಲ್ಲಿ ಕೇವಲ 13 ದಿನಗಳಲ್ಲಿ ಬಂಡುಕೋರರು ಐದು ದಶಕಗಳ ಬಶರ್ ಅಲ್-ಅಸ್ಸಾದ್ (Bashar al-Assad) ಅವರ ಕುಟುಂಬ ಆಳ್ವಿಕೆಯನ್ನು ಪತನಗೊಳಿಸಿದ್ದಾರೆ ಎಂಬುದು ಈಗ ವಿಶ್ವದ ಚರ್ಚೆಯಾಗಿದೆ.
ಕಳೆದ 24 ವರ್ಷಗಳಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲೊಂದಾದ ಸಿರಿಯಾವನ್ನು ಬಶರ್ ಅಲ್-ಅಸ್ಸಾದ್ ಆಳುತ್ತಿದ್ದರೆ, ಆತನ ವಿರುದ್ಧ ಯುದ್ಧದ ಬಾವುಟ ಹಾರಿಸಿದ ಬಂಡುಕೋರರು ನಿಧಾನವಾಗಿ ಮುಂದುವರೆದು ಇದೀಗ ರಾಜಧಾನಿ ಡಮಾಸ್ಕಸ್ (Damascus ) ಅನ್ನು ವಶಪಡಿಸಿಕೊಂಡಿದ್ದಾರೆ. ಇಸ್ಲಾಮಿಕ್ ಉಗ್ರಗಾಮಿ ಗುಂಪು ಹಯಾತ್ ತಹ್ರೀರ್ ಅಲ್-ಶಾಮ್ (HTS) ನೇತೃತ್ವದ ಬಂಡಾಯ ಪಡೆಯು ಸಿರಿಯನ್ ನ್ಯಾಷನಲ್ ಆರ್ಮಿ ಎಂಬ ಬಂಡಾಯ ಗುಂಪಿನೊಂದಿಗೆ ಸೇರಿ ಅಸ್ಸಾದ್ ಅವರ ಕಾಲು ಶತಮಾನದ ಆಡಳಿತವನ್ನು ಕೊನೆಗೊಳೀಸಿದ್ದಾರೆ. ಇದರಿಂದ ಸಿರಿಯಾದಲ್ಲಿ 13 ವರ್ಷಗಳ ಅಂತರ್ಯುದ್ಧ ಅಂತ್ಯಗೊಂಡಿದೆ.
ಸಿರಿಯಾದ ಬಂಡುಕೋರರು 13 ವರ್ಷಗಳಿಂದ ಬಶರ್ ಅಲ್-ಅಸ್ಸಾದ್ ಆಡಳಿತದ ವಿರುದ್ಧ ಹೋರಾಟ ನಡೆಸಿದ್ದರು. ಆದರೆ, ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಸಾಧ್ಯವಾಗಲಿಲ್ಲ. ಆದರೆ, ಐದು ದಶಕಗಳ ಅಲ್-ಅಸಾದ್ ಅವರ ಕುಟುಂಬ ಆಡಳಿತವನ್ನು ಬರೀ 13 ದಿನಗಳಲ್ಲಿ ತೆಗೆದುಹಾಕಿರುವುದು ಈಗ ವಿಶ್ವದಾದ್ಯಂತ ಚರ್ಚೆಯ ವಿಷಯವಾಗಿದೆ. ಹೌದು, ಈ 13 ದಿನಗಳಲ್ಲಿ ಅಸ್ಸಾದ್ ಆಡಳಿತವನ್ನು ಹೇಗೆ ಉರುಳಿಸಲಾಯಿತು ಎಂಬುದನ್ನು ಇಲ್ಲಿ ನೋಡೋಣ.
13 ದಿನಗಳಲ್ಲಿ ಸಾಧ್ಯವಾದದ್ದು ಹೇಗೆ?
1. ಜನರ ನಿರೀಕ್ಷೆ
ಅಸ್ಸಾದ್ ಆಡಳಿತ ಶೀಘ್ರದಲ್ಲೇ ಪತನವಾಗಲಿದೆ ಎಂದು ಬಂಡುಕೋರರು ನಂಬಿದ್ದೇ ಇದಕ್ಕೆ ಪ್ರಮುಖ ಕಾರಣ. ಜನ ಕೂಡ ಅದನ್ನೇ ನಿರೀಕ್ಷಿಸಿದ್ದರು.
2. ಉಕ್ರೇನ್ ಯುದ್ಧ
ಬಂಡುಕೋರ ಪಡೆಗಳನ್ನು ಸೋಲಿಸಲು ಅಸ್ಸಾದ್ ಈ ಹಿಂದೆ ರಷ್ಯಾ ಮತ್ತು ಇರಾನ್‌ನಿಂದ ಸಹಾಯ ಪಡೆಯುತ್ತಿದ್ದರು. ಆದರೆ, ಈ ಬಾರಿ ರಷ್ಯಾ-ಉಕ್ರೇನ್ ಎರಡು ವರ್ಷಕ್ಕೂ ಹೆಚ್ಚು ಕಾಲ ಯುದ್ಧ ನಡೆಸುತ್ತಿರುವುದರಿಂದ ಈ ಬಾರಿ ಸಹಾಯ ಪಡೆಯಲು ಆಗಲಿಲ್ಲ.
3. ಇಸ್ರೇಲ್-ಇರಾನ್ ಸಂಘರ್ಷ
ಇರಾನ್ ಕೂಡ ಕಾಲಕಾಲಕ್ಕೆ ಇಸ್ರೇಲ್ ಮೇಲೆ ಯುದ್ಧ ನಡೆಸಿದೆ. ಇದಲ್ಲದೆ, ಹಮಾಸ್ ಮತ್ತು ಹಿಜ್ಬುಲ್ಲಾಗೆ ಬೆಂಬಲವಾಗಿಯೂ ಕಾರ್ಯನಿರ್ವಹಿಸುತ್ತಿದೆ. ಇದರಿಂದಾಗಿ ಸಿರಿಯನ್ ಸರ್ಕಾರಕ್ಕೆ ಆ ದೇಶಗಳ ಬೆಂಬಲ ಕಡಿಮೆಯಾಯಿತು. ಮತ್ತು ಈ ಯುದ್ಧದ ಸಮಯದಲ್ಲಿ ಇರಾನ್ ಸರ್ಕಾರದ ಅನೇಕ ನಾಯಕರು ಮತ್ತು ಕಮಾಂಡರ್ಗಳನ್ನು ಕಳೆದುಕೊಂಡಿದೆ. ಇದು ದೇಶಕ್ಕೆ ಸಾಕಷ್ಟು ನಷ್ಟವನ್ನು ಉಂಟುಮಾಡಿದೆ.
4. ಟ್ರಂಪ್ ಘೋಷಣೆ
ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಟ್ರಂಪ್ ಅವರ ಘೋಷಣೆಯಿಂದ ಅಮೆರಿಕ ಕೂಡ ಈ ವಿಷಯದಲ್ಲಿ ಮೌನವಾಗಿದೆ. ಏತನ್ಮಧ್ಯೆ, ಇಸ್ರೇಲ್-ಲೆಬನಾನ್ ಕದನ ವಿರಾಮ ಘೋಷಿಸಿದ ಬೆನ್ನಲ್ಲೆ ಸಿರಿಯಾದಲ್ಲಿ ಬಂಡುಕೋರರು ಯುದ್ಧವನ್ನು ಪ್ರಾರಂಭಿಸಿದರು. ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡು ಅವರು ಗಂಭೀರವಾಗಿ ಕಾರ್ಯನಿರ್ವಹಿಸಿದರು. ಇದಕ್ಕೆ ಇನ್ನೊಂದು ಕಾರಣವನ್ನೂ ಹೇಳಲಾಗುತ್ತಿದೆ.
5. ಬಯಲಾದ ಭ್ರಷ್ಟಾಚಾರ ಸಮಸ್ಯೆ
ಭ್ರಷ್ಟಾಚಾರದ ಸಮಸ್ಯೆಗಳಿಂದಾಗಿ ಸಿರಿಯನ್ ಸರ್ಕಾರದೊಳಗೆ ಸಮಸ್ಯೆಗಳು ಭುಗಿಲೆದ್ದವು. ಇದರಿಂದಾಗಿ ವಿಮಾನ ಮತ್ತು ಟ್ಯಾಂಕ್‌ಗಳಿಗೆ ಇಂಧನ ತುಂಬಿಸಲಾಗಿಲ್ಲ. ಇಸ್ರೇಲ್‌ನ ವೈಮಾನಿಕ ದಾಳಿಯೂ ಒಂದು ಕಾರಣ. ಇದರ ಹೊರತಾಗಿ, ಮತ್ತೊಂದೆಡೆ, ಅನೇಕ ಜನರು ಸರ್ಕಾರದ ವಿರುದ್ಧ ಹೋರಾಡಲು ಬಯಸದೇ ನೆರೆಯ ದೇಶಗಳಿಗೆ ವಲಸೆ ಹೋಗಿದ್ದಾರೆ. ಇದೆಲ್ಲದರ ಲಾಭವನ್ನು ಬಂಡಾಯ ಪಡೆಗಳು ಬಳಸಿಕೊಂಡರು. ಈ ಸರ್ಕಾರವನ್ನು ಉರುಳಿಸಲು ಮಾಸ್ಟರ್‌ಮೈಂಡ್ ಆಗಿ ಕೆಲಸ ಮಾಡಿದವರು ಇಸ್ಲಾಮಿಕ್ ಸಶಸ್ತ್ರ ಪಡೆಗಳ ನೇತೃತ್ವದ ಬಂಡಾಯ ಗುಂಪಿನ ಅಲ್-ಜೋಲಾನಿಯೇ (Al-Jolani). ಅವರ ಸಲಹೆ ಮತ್ತು ಮಾರ್ಗದರ್ಶನ ಈ ಯಶಸ್ಸಿಗೆ ಕಾರಣವಾಯಿದೆ ಎಂದು ಹೇಳಲಾಗುತ್ತಿದೆ. ಇದಕ್ಕಿಂತ ಇನ್ನೊಂದು ಅದೃಷ್ಟವೂ ಬಂಡುಕೋರರಿಗೆ ಒಲಿದುಬಂದಿದೆ. ಹೌದು, ಕಾಲಕಾಲಕ್ಕೆ ಇಸ್ರೇಲಿ ಯುದ್ಧ ವಿಮಾನಗಳು ಸಿರಿಯಾದ ಹಲವಾರು ನಲೆಗಳ ಮೇಲೆ ವೈಮಾನಿಕ ದಾಳಿಗಳನ್ನು ನಡೆಸಿವೆ. ಅದರ ಮೂಲಕ ಸಿಕ್ಕಿದ ಶಸ್ತ್ರಾಸ್ತ್ರಗಳನ್ನೂ ಬಂಡುಕೋರರು ಬಳಸಿಕೊಂಡಿದ್ದಾರೆ ಎಂದೂ ವರದಿಯಾಗಿದೆ.
ಅಸ್ಸಾದ್ ಆಡಳಿತವನ್ನು ಉರುಳಿಸುವಲ್ಲಿ ಇಸ್ರೇಲ್‌ನ ಪ್ರಮುಖ ಪಾತ್ರವು ನಿರ್ಣಾಯಕವಾಗಿತ್ತು. ಆ ಆಡಳಿತ ಪತನಗೊಂಡಾಗ ಮೊದಲು ಅಭಿನಂದಿಸಿದವರು ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು. ಕಳೆದ 13 ದಿನಗಳಲ್ಲಿ ಜೋಲಾನಿ ನೇತೃತ್ವದ ಬಂಡಾಯ ಪಡೆ ಅಸಾದ್ ಆಡಳಿತವನ್ನು ಯಶಸ್ವಿಯಾಗಿ ಉರುಳಿಸಿದ್ದು ಹೀಗೆ.