ರಾಜ್ಯಸಭಾ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಏಕೆ? ಖರ್ಗೆ ವಿವರಣೆ
ನವದೆಹಲಿ: “ಬೇರೆ ದಾರಿಯಿಲ್ಲದೆ ಜಗದೀಪ್ ಧನಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುತ್ತಿದ್ದೇವೆ” ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ರಾಜ್ಯಸಭಾ ಅಧ್ಯಕ್ಷರು ಹಾಗೂ ಉಪ ರಾಷ್ಟ್ರಪತಿ ಜಗದೀಪ್ ಧನಕರ್ (Jagdeep Dhankhar) ಅವರನ್ನು ಪದಚ್ಯುತಗೊಳಿಸಲು ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ ಅವಿಶ್ವಾಸ ನಿರ್ಣಯವನ್ನು ಮಂಡಿಸಿದೆ.
ಇದಕ್ಕೆ ಸಂಬಂಧಿಸಿದಂತೆ ಮೈತ್ರಿ ನಾಯಕರು ದೆಹಲಿಯಲ್ಲಿ ಸುದ್ದಿಗಾರರನ್ನು ಭೇಟಿ ಮಾಡಿದರು. ಆಗ ಮಾತನಾಡಿದ ಖರ್ಗೆ ಅವರು, “ರಾಜ್ಯಸಭೆಯನ್ನು ರಾಜಕೀಯವಾಗಿ ನಡೆಸಲಾಗುತ್ತಿದೆ. ನಿಯಮಗಳ ಪ್ರಕಾರ ನಡೆಸುತ್ತಿಲ್ಲ. 1952 ರಿಂದ ಯಾವುದೇ ಉಪರಾಷ್ಟ್ರಪತಿ ರಾಜಕೀಯದಲ್ಲಿ ತೊಡಗಿಸಿಕೊಂಡಿಲ್ಲವಾದ್ದರಿಂದ ಅವರ ವಿರುದ್ಧ ಕಲಂ ಸಂಖ್ಯೆ 67ರ ಅಡಿಯಲ್ಲಿ ಅವಿಶ್ವಾಸ ನಿರ್ಣಯವನ್ನು ತರಲಾಗಿಲ್ಲ. ಏಕಪಕ್ಷೀಯ ಮತ್ತು ಪಕ್ಷಪಾತದ ಕಾರಣದಿಂದಾಗಿ ವಿರೋಧ ಪಕ್ಷಗಳು ಈಗ ಅವಿಶ್ವಾಸ ನಿರ್ಣಯ (Confidence Motion) ಮಂಡಿಸುವ ಅನಿವಾರ್ಯತೆಗೆ ಸಿಲುಕಿವೆ.
ಧನಕರ್ ಅವರು ಬಡ್ತಿಗಾಗಿ ಸರ್ಕಾರದ ವಕ್ತಾರರಂತೆ ವರ್ತಿಸುತ್ತಿದ್ದಾರೆ. ಅವರ ಕಾರ್ಯಗಳು ಅವರು ಹೊಂದಿರುವ ಸ್ಥಾನದ ಘನತೆಗೆ ವಿರುದ್ಧವಾಗಿವೆ. ಪ್ರತಿಪಕ್ಷಗಳನ್ನು ಟೀಕಿಸುವ ಅವರು ಸರ್ಕಾರವನ್ನು ಹೊಗಳುತ್ತಿದ್ದಾರೆ. ಅನ್ಯ ಮಾರ್ಗವಿಲ್ಲದೆ, ಈ ಅವಿಶ್ವಾಸ ನಿರ್ಣಯವನ್ನು ಮಂಡಿಸುವ ಅನಿವಾರ್ಯತೆಗೆ ಅವರು ನಮ್ಮನ್ನು ತಳ್ಳಿದ್ದು ಬೇಸರ ತಂದಿದೆ. ಅವರು ಪ್ರತಿಪಕ್ಷಗಳನ್ನು ಅವಮಾನಿಸುವ ಯಾವುದೇ ಅವಕಾಶವನ್ನು ಬಿಡಲಿಲ್ಲ.
ಅವರ ಕ್ರಮಗಳು ದೇಶದ ಪ್ರಜಾಪ್ರಭುತ್ವದ ಹೆಮ್ಮೆಯನ್ನು ಕೆಡಿಸಿವೆ. ಅವರ ಜತೆ ನಮಗೆ ಯಾವುದೇ ವೈಯಕ್ತಿಕ ದ್ವೇಷ ಅಥವಾ ರಾಜಕೀಯ ಸಂಘರ್ಷ ಇಲ್ಲ. ಮುಖ್ಯೋಪಾಧ್ಯಾಯರಂತೆ ವರ್ತಿಸುವ ಅವರು ನಮ್ಮನ್ನು ವಿದ್ಯಾರ್ಥಿಗಳಂತೆ ನಡೆಸಿಕೊಳ್ಳುತ್ತಿದ್ದಾರೆ. ಕೂಲಂಕಷವಾಗಿ ಚರ್ಚಿಸಿದ ನಂತರ, ನಾವು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಈ ಕ್ರಮವನ್ನು ತೆಗೆದುಕೊಂಡಿದ್ದೇವೆ” ಎಂದು ಹೇಳಿದರು.