ದೇಶ Archives » Page 10 of 53 » Dynamic Leader
October 23, 2024
Home Archive by category ದೇಶ (Page 10)

ದೇಶ

ದೇಶ

ಡಿ.ಸಿ.ಪ್ರಕಾಶ್

“ಭಾರತದ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳು ನಡೆಸಿದ ಭ್ರಷ್ಟಾಚಾರ ಮತ್ತು ಹಗರಣಗಳನ್ನು ಬಹಿರಂಗಪಡಿಸುವವರನ್ನು ಮೌನಗೊಳಿಸಲು ಮತ್ತು ಬೆದರಿಸುವ ಪ್ರಯತ್ನವಾಗಿ ಸೆಬಿ ನಮಗೆ ಶೋಕಾಸ್ ನೋಟಿಸ್ ಕಳುಹಿಸಿದೆ!” – ಹಿಂಡೆನ್‌ಬರ್ಗ್

ಹಿಂಡೆನ್‌ಬರ್ಗ್ ಸಂಶೋಧನಾ ಸಂಸ್ಥೆಗೆ ಸೆಬಿ (SEBI) ವಿವರಣೆ ಕೋರಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಏತನ್ಮಧ್ಯೆ, ಸೆಬಿಯ ನೋಟಿಸ್ ಪಡೆದ ನಂತರ, ಹಿಂಡೆನ್‌ಬರ್ಗ್ ರಿಸರ್ಚ್ ಮತ್ತೊಮ್ಮೆ ವಂಚನೆಯ ಆರೋಪವನ್ನು ಎತ್ತಿದೆ!

ಅಮೆರಿಕ ಮೂಲದ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್, ಅದಾನಿ ಸಮೂಹ ಹಲವಾರು ವರ್ಷಗಳಿಂದ ಹಣಕಾಸಿನ ಅಕ್ರಮಗಳಲ್ಲಿ ತೊಡಗಿವೆ ಎಂಬ ವರದಿಯನ್ನು ಕಳೆದ ವರ್ಷದ ಆರಂಭದಲ್ಲಿ ಪ್ರಕಟಿಸಿತು. ಈ ವರದಿಯಿಂದ ಷೇರು ಮೌಲ್ಯದಲ್ಲಿ ಕುಸಿತವನ್ನು ಕಂಡು, ಭಾರೀ ನಷ್ಟವನ್ನು ಎದುರಿಸಿದ ಅದಾನಿ ಸಮೂಹ ಶ್ರೀಮಂತರ ಪಟ್ಟಿಯಿಂದಲೂ ದೂರ ಸರಿಯಿತು.

ಅಲ್ಲದೆ, ಈ ವಿಚಾರ ಸಂಸತ್ತಿನವರೆಗೂ ಪ್ರತಿಧ್ವನಿಸಿತು. ಹಿಂಡೆನ್‌ಬರ್ಗ್ ವರದಿಯ ಸತ್ಯಾಸತ್ಯತೆಯನ್ನು ತನಿಖೆ ಮಾಡಲು ಕೋರಿ ಸಲ್ಲಿಸಲಾದ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ ಅದಾನಿ ಗ್ರೂಪ್ ವಿರುದ್ಧದ ಪ್ರಕರಣವನ್ನು ಸೆಬಿ ತನಿಖೆ ನಡೆಸಬೇಕು ಎಂದು ತೀರ್ಪು ನೀಡಿದೆ.

ತರುವಾಯ, ಸೆಬಿ ಕಳೆದ ಒಂದುವರೆ ವರ್ಷಗಳಿಂದ ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದು, ಈಗ ಸೆಬಿ, ವಿವರಣೆಯನ್ನು ಕೋರಿ ಹಿಂಡೆನ್‌ಬರ್ಗ್ ರಿಸರ್ಚ್ ಕಂಪನಿಗೆ ಶೋಕಾಸ್ ನೋಟಿಸ್ ಕಳುಹಿಸಿದೆ. ಏತನ್ಮಧ್ಯೆ, ಸೆಬಿಯ ನೋಟಿಸ್ ಪಡೆದ ನಂತರ, ಹಿಂಡೆನ್‌ಬರ್ಗ್ ರಿಸರ್ಚ್ ಮತ್ತೊಮ್ಮೆ ವಂಚನೆಯ ಆರೋಪವನ್ನು ಎತ್ತಿದೆ.

ಈ ಬಗ್ಗೆ ಹಿಂಡೆನ್ಬರ್ಗ್, “ಭಾರತದ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳು ನಡೆಸಿದ ಭ್ರಷ್ಟಾಚಾರ ಮತ್ತು ಹಗರಣಗಳನ್ನು ಬಹಿರಂಗಪಡಿಸುವವರನ್ನು ಮೌನಗೊಳಿಸಲು ಮತ್ತು ಬೆದರಿಸುವ ಪ್ರಯತ್ನವಾಗಿ ಸೆಬಿ ನಮಗೆ ಶೋಕಾಸ್ ನೋಟಿಸ್ ಕಳುಹಿಸಿದೆ. ಸೆಬಿಯಂತಹ ಸಂಸ್ಥೆಗಳು ವಂಚಕರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳುತ್ತವೆ ಎಂದು ಹಲವರು ಭಾವಿಸಬಹುದು. ಆದರೆ ಇಲ್ಲಿ ಇದಕ್ಕೆ ವ್ಯತಿರಿಕ್ತವಾಗಿ, ಅಂತಹ ಮೋಸದ ಅಭ್ಯಾಸಗಳನ್ನು ಹೊರ ಜಗತ್ತಿಗೆ ತರುವವರ ಬಗ್ಗೆ ಸೆಬಿ ಹೆಚ್ಚು ಆಸಕ್ತಿ ತೋರುತ್ತಿದೆ” ಎಂದು ಅಪಾದಿಸುವ ಜೊತೆಗೆ ಈ ವಿಚಾರದಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕ್‌ನ ವಿರುದ್ಧವೂ ಆರೋಪ ಮಾಡಿದೆ. ಅಂದರೆ, ಅದಾನಿ ಷೇರುಗಳನ್ನು ಶಾರ್ಟ್ (Short) ಮಾಡಲು ಹಿಂಡೆನ್‌ಬರ್ಗ್ ಹೂಡಿಕೆದಾರ ಪಾಲುದಾರನನ್ನು (Investor Partner) ಬಳಸಿಕೊಂಡಿದೆ. ಈ ಪಾಲುದಾರರು ಅದಾನಿ ಷೇರುಗಳನ್ನು ಶಾರ್ಟ್ ಮಾಡಲು ನಿಧಿಯನ್ನು (Fund)  ಬಳಸಿದ್ದಾರೆ. ಕೋಟಕ್ ಮಹೀಂದ್ರಾ ಬ್ಯಾಂಕ್ ಈ ನಿಧಿಯನ್ನು ರಚಿಸಿ, ನಿರ್ವಹಿಸಿದೆ ಎಂಬ ಹೊಸ ಆರೋಪವನ್ನು ಎತ್ತಿದೆ.

ಅದಾನಿ ಷೇರುಗಳನ್ನು ಶಾರ್ಟ್ ಮಾಡುವ ಮೂಲಕ ಹಿಂಡೆನ್‌ಬರ್ಗ್ 4.1 ಮಿಲಿಯನ್ ಡಾಲರ್ ಗಳಿಸಿದೆ. ಇದಲ್ಲದೆ, ಅದಾನಿ ಗ್ರೂಪ್‌ನ ಡಾಲರ್ ಬಾಂಡ್‌ಗಳನ್ನು ಶಾರ್ಟ್ ಮಾಡಿದ್ದರಿಂದ ಕೇವಲ 31,000 ಡಾಲರ್ ಮಾತ್ರ ಸಿಕ್ಕಿದೆ ಎಂದು ಹಿಂಡೆನ್‌ಬರ್ಗ್ ವರದಿ ಮಾಡಿದೆ.

ಆದರೆ ಸೆಬಿಯ ನೋಟಿಸ್‌ನಲ್ಲಿ ಕೋಟಾಕ್ ಕಂಪನಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲದೆ ‘KMIL’ ಎಂಬ ಸಂಕ್ಷಿಪ್ತ ರೂಪವನ್ನು ಮಾತ್ರ ಬಳಸಲಾಗಿದೆ. ಇದರೊಂದಿಗೆ ಕೋಟಕ್ ಬ್ಯಾಂಕ್ ಮತ್ತು ಅದರ ಸಂಸ್ಥಾಪಕ ಉದಯ್ ಕೋಟಕ್ ಅವರನ್ನು ತನಿಖೆಯಿಂದ ಮರೆಮಾಡಲು ಸೆಬಿ ಪ್ರಯತ್ನಿಸುತ್ತಿದೆ ಎಂಬ ಅನುಮಾನವನ್ನೂ ಹಿಂಡೆನ್‌ಬರ್ಗ್ ಹುಟ್ಟುಹಾಕಿದೆ.

ದೇಶ

ಲಕ್ನೋ: ಉತ್ತರ ಪ್ರದೇಶದಲ್ಲಿ ಆಧ್ಯಾತ್ಮಿಕ ಉಪನ್ಯಾಸದಲ್ಲಿ ನೂಕುನುಗ್ಗಲು ಉಂಟಾಗಿ 100 ಮಂದಿ ಸಾವನ್ನಪ್ಪಿದ್ದಾರೆ!

ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಶಿಕಂದರಾ ರಾವ್ ನಗರದಲ್ಲಿ ‘ಬೋಲೆ ಬಾಬಾ ಸತ್ಸಂಗ’ ಎಂಬ ಆಧ್ಯಾತ್ಮಿಕ ಪ್ರವಚನ ನಡೆಯಿತು. ಆ ವೇಳೆ ನಡೆದ ಜನಜಂಗುಳಿಯಲ್ಲಿ ಮಹಿಳೆಯರು, ಮಕ್ಕಳು ಸೇರಿ 100 ಮಂದಿ ಸಾವನ್ನಪ್ಪಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತರ ಶವಗಳನ್ನು ಹೊರತೆಗೆದಿದ್ದಾರೆ.

ಮೃತದೇಹಗಳ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ. ಇನ್ನೂ ಹಲವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳು ಶೀಘ್ರ ಗುಣಮುಖರಾಗುವಂತೆ ಅಗತ್ಯ ಚಿಕಿತ್ಸೆ ನೀಡಲು ಕ್ರಮಕೈಗೊಳ್ಳುವಂತೆ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸಂಸತ್ತಿನಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ, ಅಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದ್ದಾರೆ.

ಉತ್ತರಪ್ರದೇಶದ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂತಾಪ ಸೂಚಿಸಿದ್ದಾರೆ.

ದೇಶ

ಅಲಹಾಬಾದ್: “ಮತಾಂತರ ನಡೆಯುವ ಧಾರ್ಮಿಕ ಸಭೆಗಳನ್ನು ತಡೆದು ನಿಲ್ಲಿಸಬೇಕು” ಎಂದು ಹೇಳಿರುವ ಅಲಹಾಬಾದ್ ಹೈಕೋರ್ಟ್ “ಇದೇ ರೀತಿ ಮುಂದುವರಿದರೆ ದೇಶದ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗುತ್ತಾರೆ” ಎಂದು ಹೇಳಿದೆ. ಇಂತಹ ಆದೇಶ ವಿವಾದ ಸೃಷ್ಟಿಸಿದೆ.

ಇತ್ತೀಚೆಗೆ ಉತ್ತರದ ರಾಜ್ಯಗಳಲ್ಲಿ ನ್ಯಾಯಾಲಯಗಳು ನೀಡುವ ತೀರ್ಪುಗಳು ಹಾಗೂ ಅವರು ವ್ಯಕ್ತಪಡಿಸುವ ಅಭಿಪ್ರಾಯಗಳು ವಿವಾದಕ್ಕೀಡಾಗುತ್ತಿವೆ. ಮತ್ತು ನ್ಯಾಯಾಧೀಶರು ವಿಜ್ಞಾನವನ್ನೇ ಪ್ರಶ್ನಿಸುವಂತಹ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಅಚ್ಚರಿ ಮೂಡಿಸುತ್ತಿದಾರೆ.

ಕಳೆದ ವರ್ಷ ಅಲಹಾಬಾದ್ ಹೈಕೋರ್ಟ್ ವ್ಯಕ್ತಪಡಿಸಿದ್ದ ಅಭಿಪ್ರಾಯವೊಂದು ಎಲ್ಲರಿಗೂ ಆಘಾತವನ್ನು ಉಂಟುಮಾಡಿತ್ತು. ಹಸುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದರು ಎಂದು ಆರೋಪಿಸಿ, ಗೋಮಾಂಸ ವ್ಯಾಪಾರಿ ಒಬ್ಬರನ್ನು ಬಂಧಿಸಿದ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ನ್ಯಾಯಾಧೀಶರು, “ಗೋವು ನಮ್ಮ ಭೂಮಿಗೆ ತಾಯಿ ಇದ್ದಂತೆ; ಗೋವಿನ ರಕ್ತವು ಭೂಮಿಯ ಮೇಲೆ ಚೆಲ್ಲಿದರೆ ಅದು ಈ ಜಗತ್ತಿಗೆ ಒಳ್ಳೆಯದಲ್ಲ.

ಗೋವು ದೇವರ ಅದ್ಭುತ ಸೃಷ್ಟಿ. ಹಸುವಿನ ಮೂತ್ರ (ಗೋಮೂತ್ರ) ಎಲ್ಲಾ ರೋಗಗಳನ್ನು ಗುಣಪಡಿಸುತ್ತದೆ. ಹಸುವಿನ ಸಗಣಿಯಿಂದ ಮನೆಯನ್ನು ಸಾರಿಸಿದರೆ ಅಣು ವಿಕಿರಣವೂ ಮನೆಯೊಳಗೆ ಪ್ರವೇಶಿಸುವುದಿಲ್ಲ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ವೈದ್ಯರು ಮತ್ತು ವಿಜ್ಞಾನಿಗಳು ನ್ಯಾಯಾಧೀಶರ ಅಭಿಪ್ರಾಯಗಳು ಯಾವುದೇ ವೈಜ್ಞಾನಿಕ ಸತ್ಯವನ್ನು ಹೊಂದಿಲ್ಲ ಎಂದು ಟೀಕಿಸಿದರು.

ಈ ಹಿನ್ನೆಲೆಯಲ್ಲಿ, ಉತ್ತರಪ್ರದೇಶದ ನಿವಾಸಿ ರಾಮ್ ಕಾಲಿ ಪ್ರಜಾಪತಿ ಎಂಬವರು ಪೊಲೀಸರಿಗೆ ದೂರು ನೀಡಿದ್ದು, “ನನ್ನ ಸಹೋದರ ರಾಂಪಾಲ್ ಮಾನಸಿಕ ಅಸ್ವಸ್ಥ. ಅವರನ್ನು ಕೈಲಾಶ್ ಎಂಬುವರು ದೆಹಲಿಗೆ ಕರೆದೊಯ್ದರು. ಸಹೋದರ ಮನೆಗೆ ಹಿಂತಿರುಗಲಿಲ್ಲ. ಕೈಲಾಶ್ ಅವರನ್ನು ಕೇಳಿದಾಗ ಅವರು ಸರಿಯಾಗಿ ಉತ್ತರ ನೀಡಲಿಲ್ಲ.

ಕೈಲಾಶ್ ಅವರು ನಮ್ಮ ಹಳ್ಳಿಯಿಂದ ದೆಹಲಿಗೆ ಅನೇಕ ಜನರನ್ನು ಕರೆದೊಯ್ದು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಿದ್ದಾರೆ” ಎಂದು ಹೇಳಿದ್ದಾರೆ. ಇದರ ನಂತರ, ಕೈಲಾಶ್ ಅವರನ್ನು ಕಳ್ಳಸಾಗಣೆ ಮತ್ತು ಮತಾಂತರ ನಿಷೇಧ ಕಾಯ್ದೆಯಡಿ ಬಂಧಿಸಲಾಯಿತು.

ಕೈಲಾಶ್ ಜಾಮೀನು ಕೋರಿ ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದರು. ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರು ಕೈಲಾಶ್ ಅವರ ಜಾಮೀನು ಅರ್ಜಿಯನ್ನು ನಿನ್ನೆ ವಿಚಾರಣೆ ನಡೆಸಿದರು. ರಾಜ್ಯದ ಪರ ವಾದ ಮಂಡಿಸಿದ ವಕೀಲರು, ಧಾರ್ಮಿಕ ಸಭೆಗಳಲ್ಲಿ ಭಾಗವಹಿಸುವ ಅನೇಕರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದಾರೆ. ಇದಕ್ಕಾಗಿ ಕೈಲಾಶ್ ಹಣ ಪಡೆಯುತ್ತಿದ್ದಾರೆ ಎಂದರು.

ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾಧೀಶರು, “ಸಂವಿಧಾನದ 25ನೇ ವಿಧಿಯು ತನ್ನ ಧರ್ಮವನ್ನು ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ಒದಗಿಸುತ್ತದೆ. ಆದರೆ, ಒಂದು ಧಾರ್ಮಿಕ ನಂಬಿಕೆಯಿಂದ ಇನ್ನೊಂದು ಧರ್ಮಕ್ಕೆ ಮತಾಂತರವಾಗುವ ಹಕ್ಕನ್ನು ನೀಡಿಲ್ಲ. ‘ಪ್ರೊಪಗೇಶನ್ ‘ (Propagation) ಎಂಬ ಪದಕ್ಕೆ ಪ್ರೋತ್ಸಾಹಿಸಬಹುದು ಎಂದು ಅರ್ಥ ಹೇಳಬಹುದು.

ಆದರೆ ನೀವು ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರಗೊಳ್ಳಬಹುದು ಎಂದು ಅರ್ಥವಲ್ಲ. ರಾಂಪಾಲ್ ಮನೆಗೆ ಹಿಂತಿರುಗಲಿಲ್ಲ. ಹಲವರನ್ನು ಮತಾಂತರಕ್ಕೆ ಕರೆದುಕೊಂಡು ಹೋಗಿದ್ದಾರೆ. ಇದನ್ನು ಮುಂದುವರೆಸಿದರೆ ದೇಶದ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗುತ್ತಾರೆ. ಮತಾಂತರಕ್ಕೆ ಕಾರಣವಾಗುವ ಧಾರ್ಮಿಕ ಸಭೆಗಳನ್ನು ಕೂಡಲೇ ನಿಲ್ಲಿಸಬೇಕು. ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.

ದೇಶ

ಡಿ.ಸಿ.ಪ್ರಕಾಶ್

“ಪ್ರಪಂಚದಾದ್ಯಂತ ವೃತ್ತಿ ವಿಭಜನೆ ಇದೆ; ಕಾರ್ಮಿಕರ ವಿಭಜನೆ ಭಾರತದಲ್ಲಿ ಮಾತ್ರ ಇದೆ! ಪೆರಿಯಾರ್ ಮತ್ತು ಅಂಬೇಡ್ಕರ್ ಹೇಳುವುದು ಇದನ್ನೆ” – ಎ.ರಾಜಾ

18ನೇ ಲೋಕಸಭೆಯ ಅಧಿವೇಶನ ಜೂನ್ 24 ರಿಂದ ಆರಂಭವಾಗಿದೆ. ಮೊದಲ ಎರಡು ದಿನ ಹೊಸ ಸಂಸದರ ಪ್ರಮಾಣ ವಚನ ಸ್ವೀಕರಿಸುವ ಕಾರ್ಯ ನಡೆಯಿತು. ನಂತರ ಮೂರನೇ ದಿನ ನಡೆದ ಸ್ಪೀಕರ್ ಚುನಾವಣೆಯಲ್ಲಿ ಬಿಜೆಪಿಯ ಓಂ ಬಿರ್ಲಾ ಮತ್ತೆ ಗೆಲುವು ಸಾಧಿಸಿದರು. ಇದರ ಬೆನ್ನಲ್ಲೇ ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆ ನಡೆಯುತ್ತಿದೆ.

ಈ ಹಿನ್ನೆಲೆಯಲ್ಲಿ, ಇಂದು ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಬಿಜೆಪಿ ಆಡಳಿತದ ಅರಾಜಕತೆಯನ್ನು ಬಯಲಿಗೆಳೆದವು. ಆ ಮೂಲಕ ಡಿಎಂಕೆ ಲೋಕಸಭೆ ಸಂಸದ ಹಾಗೂ ಡಿಎಂಕೆ ಪಕ್ಷದ ಸಚೇತಕ ಎ.ರಾಜಾ ಬಿಜೆಪಿಯನ್ನು ತೀವ್ರವಾಗಿ ಟೀಕಿಸಿ ಮಾತನಾಡಿದ್ದಾರೆ.

ಈ ಕುರಿತು ಮಾತನಾಡಿದ ಡಿಎಂಕೆ ಸಂಸದ ಎ.ರಾಜಾ, “ಕೇಂದ್ರ ಸರ್ಕಾರವು ತನ್ನ ಆಲೋಚನೆಗಳನ್ನು ರಾಷ್ಟ್ರಪತಿ ಮತ್ತು ಸ್ಪೀಕರ್ ಭಾಷಣಗಳ ಮೂಲಕ ಹೇರಲು ಪ್ರಯತ್ನಿಸುತ್ತದೆ. ಕೇಂದ್ರ ಸರ್ಕಾರ ಫ್ಯಾಸಿಸ್ಟ್ ತತ್ವಗಳಿಗೆ ಬದ್ಧವಾಗಿದೆ. ಬಿಜೆಪಿ ಆಡಳಿತಗಾರರಿಗೆ ತುರ್ತು ಪರಿಸ್ಥಿತಿ ಬಗ್ಗೆ ಮಾತನಾಡುವ ಹಕ್ಕಿಲ್ಲ. ತಮಿಳುನಾಡಿನ ಜನರು 2ನೇ ಬಾರಿ ಫ್ಯಾಸಿಸಂ ವಿರುದ್ಧ ಮತ ಚಲಾಯಿಸಿದ್ದಾರೆ.

300ಕ್ಕೂ ಹೆಚ್ಚು ಸ್ಥಾನಗಳನ್ನು ವಶಪಡಿಸಿಕೊಳ್ಳುತ್ತೇವೆ ಎಂದು ಮೋದಿ ಹೇಳಿದರು. ಆದರೆ ಜನರು ಅದನ್ನು ತಿರಸ್ಕರಿಸಿದರು. ಕೇವಲ 240 ಸ್ಥಾನಗಳನ್ನು ಹೊಂದಿರುವ ಬಿಜೆಪಿ ಸರ್ಕಾರವನ್ನು ರಾಷ್ಟ್ರಪತಿ ಭಾಷಣದ ಮೂಲಕ ಬಹುಮತದ ಸರ್ಕಾರ ಎಂದು ಕರೆಯುವುದು ಹೇಗೆ? ಬಹುಮತದ ಸರ್ಕಾರ ಎಂದು ಹೇಳುವುದೇ ದೊಡ್ದ ಸುಳ್ಳು.

ನಾವು ತಮಿಳುನಾಡಿನಿಂದ ನೀಟ್ ವಿರುದ್ಧ ನಿರ್ಣಯವನ್ನು ಕಳುಹಿಸಿದ್ದೇವೆ. ಇನ್ನೂ ಒಪ್ಪಿಕೊಂಡಿಲ್ಲ. ನೀವು ತಮಿಳುನಾಡನ್ನು ಗೌರವಿಸುವುದಿಲ್ಲ. ನೀವು ನಮ್ಮನ್ನು ಕಸದ ಬುಟ್ಟಿಯಂತೆ ಕಾಣುತ್ತೀರಿ. ಅದಕ್ಕೇ ತಮಿಳುನಾಡು 40 ಕ್ಷೇತ್ರಗಳಲ್ಲೂ ನಿಮ್ಮನ್ನು ಸೋಲಿಸಿ ತಕ್ಕ ಪಾಠ ಕಲಿಸಿದೆ!

ಪ್ರಪಂಚದಾದ್ಯಂತ ವೃತ್ತಿ ವಿಭಜನೆ ಇದೆ; ಕಾರ್ಮಿಕರ ವಿಭಜನೆ ಭಾರತದಲ್ಲಿ ಮಾತ್ರ ಇದೆ! ಪೆರಿಯಾರ್ ಮತ್ತು ಅಂಬೇಡ್ಕರ್ ಹೇಳುವುದು ಇದನ್ನೆ. ಈ ವಿಭಜನೆಯನ್ನು ನೀವು ಹಿಂದೂ ಧರ್ಮದ ಹೆಸರಿನಲ್ಲಿ ಶಾಶ್ವತಗೊಳಿಸಲು ಬಯಸುತ್ತೀರಿ!

ಸಾರ್ವಜನಿಕ ವಲಯದಲ್ಲಿ ಲಾಭವಿಲ್ಲ ಎಂದು ಎಲ್ಲವನ್ನೂ ಹಾಳು ಮಾಡುತ್ತಿದ್ದೀರಿ. ಹಿಂದುಳಿದ ಮತ್ತು ಪರಿಶಿಷ್ಟ ಜಾತಿಗಳಿಗೆ ಸರ್ಕಾರಿ ಉದ್ಯೋಗಗಳು ಸಿಗುವುದಾದರೂ ಹೇಗೆ? ಮೀಸಲಾತಿಯನ್ನು ಸೂಚ್ಯವಾಗಿ ನಾಶಮಾಡಲು ನೀವು ಇದನ್ನು ಮಾಡುತ್ತಿದ್ದೀರಿ. ಏಕೆಂದರೆ ನೀವು ಮೇಲ್ಜಾತಿಗಳಿಂದ ನಡೆಸಲ್ಪಡುವ ಹಿಂದೂ ರಾಷ್ಟ್ರವನ್ನು ನಿರ್ಮಿಸಲು ಬಯಸುತ್ತಿದ್ದೀರಿ.

ನೀಟ್ ಪರೀಕ್ಷೆಯ ಮೂಲಕ, ಬಹುಮತ (Majority), ನಿರ್ವಹಣೆ (Management) ಮತ್ತು ಪಾವತಿ (Payment) ಎಂಬ ಮೂರು ವಿಭಾಗಗಳನ್ನು ಸ್ಥಾಪಿಸಲಾಗಿದೆ. ಅದಕ್ಕಾಗಿಯೇ ನಾವು ನೀಟ್ ಪದ್ಧತಿಯನ್ನು ವಿರೋಧಿಸುತ್ತಿದ್ದೇವೆ. 8 ಕೋಟಿ ಜನರನ್ನು ಪ್ರತಿನಿಧಿಸುವ ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕರಿಸಿ ಕಳುಹಿಸಿಕೊಟ್ಟ NEET ವಿನಾಯಿತಿ ನಿರ್ಧಾರವನ್ನು ಕೇಂದ್ರ ಸರ್ಕಾರ ಕಸದ ಬುಟ್ಟಿಗೆ ಎಸದಿದೆ.

ಮೊಘಲರು ಹೊರಗಿನಿಂದ ಬಂದವರು ಎನ್ನುವುದಾದರೆ, ಆರ್ಯರು ಮಾತ್ರ ಯಾರು? ಅವರೂ ಹೊರಗಿನಿಂದ ಬಂದವರೇ. ಇದಕ್ಕಾಗಿಯೇ ಅಂಬೇಡ್ಕರ್ ಅವರು ‘ದ್ರಾವಿಡರಿಗೆ ಮಾತ್ರ ಭಾರತದ ಭೂಮಿ ಮೇಲೆ ಹಕ್ಕು ಚಲಾಯಿಸುವ ಯೋಗ್ಯತೆ ಇರುವುದು’ ಎಂದು ಹೇಳಿದ್ದರು!

ನಾನು ಪೆರಿಯಾರ್ ಅವರ ದ್ರಾವಿಡ ಮಣ್ಣಿನಿಂದ ಇಲ್ಲಿಗೆ ಬಂದಿದ್ದೇನೆ. ತಮಿಳುನಾಡಿನಲ್ಲಿ ಎಲ್ಲರೂ ಸಮಾನವಾಗಿ ಬದುಕಲು ಮತ್ತು ಉನ್ನತ ಶಿಕ್ಷಣ ಪಡೆಯಲು ಪೆರಿಯಾರ್, ಅಣ್ಣಾದುರೈ ಮತ್ತು ಕರುಣಾನಿಧಿ ಕಾರಣ. ಹಾಗಾಗಿ ದೇಶಕ್ಕೆ ದ್ರಾವಿಡ ನೀತಿಗಳು ಏಕೆ ಬೇಕು ಎಂಬುದನ್ನು ಬಿಜೆಪಿ ಅರಿತುಕೊಳ್ಳಬೇಕು.

ಅದಾನಿ ವಂಚನೆ ಪ್ರಕರಣಕ್ಕೆ ಉತ್ತರಿಸಲು ಪ್ರಧಾನಿಗೆ ಬೆನ್ನೆಲುಬು ಇಲ್ಲ. ವಿರೋಧ ಪಕ್ಷಗಳು 15 ದಿನಗಳ ಕಾಲ ಕಪ್ಪು ಅಂಗಿ ಧರಿಸಿ ಸಂಸತ್ತಿಗೆ ಬಂದು ಪ್ರತಿಭಟನೆ ನಡೆಸಿದರೂ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅಕ್ರಮಗಳಿಗೆ ಪ್ರತಿಕ್ರಿಯಿಸದೆ ಇಷ್ಟು ಮೌನವಾಗಿರುವ ಸರ್ಕಾರವನ್ನು ನಾನೆಂದೂ ನೋಡಿಲ್ಲ ಎಂದು ಕಿಡಿಕಾರಿದ್ದಾರೆ.

ದೇಶ

Leaders View

ಡಿ.ಸಿ.ಪ್ರಕಾಶ್

ನವದೆಹಲಿ: “ಬಿಜೆಪಿಯ ಹಿಂದೂಗಳು ಹಿಂಸಾತ್ಮಕರು; ನಿಜವಾದ ಹಿಂದೂಗಳಲ್ಲ” ಎಂದು ಹೇಳಿದ ರಾಹುಲ್‌ ಗಾಂಧಿಗೆ ಪ್ರಧಾನಿ ಮೋದಿ ಮತ್ತು ಬಿಜೆಪಿ ಸಂಸದರು ವಿರೋಧ ವ್ಯಕ್ತಪಡಿಸಿದರು. ರಾಹುಲ್ ಕ್ಷಮೆಯಾಚಿಸುವಂತೆ ಒತ್ತಾಯಿಸುತ್ತಿದ್ದಂತೆ ಲೋಕಸಭೆಯಲ್ಲಿ ಕೋಲಾಹಲ ಉಂಟಾಯಿತು.

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಶಿವ, ಯೇಸು ಮತ್ತು ಗುರುನಾನಕ್ ಮುಂತಾದವರ ಭಾವಚಿತ್ರಗಳನ್ನು ತೋರಿಸಿ ಮಾತನಾಡಿದರು. ಸದನದ ನಿಯಮಗಳ ಪ್ರಕಾರ ಯಾವುದೇ ಧಾರ್ಮಿಕ ದೇವರ ಚಿತ್ರಗಳನ್ನು ತೋರಿಸಬಾರದು ಎಂದು ಬಿಜೆಪಿ ಸಂಸದರು ಆಕ್ಷೇಪ ವ್ಯಕ್ತಪಡಿಸಿದರು.

ಮುಂದುವರಿದು ಮಾತನಾಡಿದ ರಾಹುಲ್ ಗಾಂಧಿ, “ಪ್ರಧಾನಿ ಮೋದಿ ಅವರು ಶಿವನೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆ. ನಾವೆಲ್ಲರೂ ಹುಟ್ಟುತ್ತೇವೆ ಮತ್ತು ಸಾಯುತ್ತೇವೆ. ಆದರೆ ಪ್ರಧಾನಿ ಮೋದಿ ಜೈವಿಕವಾಗಿ ಹುಟ್ಟಿದವರಲ್ಲ. ಪ್ರಧಾನಿ ಮೋದಿ ಇಡೀ ಹಿಂದೂ ಧರ್ಮದ ಪ್ರತಿನಿಧಿಯಲ್ಲ. ಒಂದು ನಿರ್ದಿಷ್ಟ ಧರ್ಮ ಮಾತ್ರವಲ್ಲ, ನಮ್ಮಲ್ಲಿರುವ ಎಲ್ಲಾ ಧರ್ಮಗಳು ಧೈರ್ಯ ಮತ್ತು ಅಹಿಂಸೆಯ ಬಗ್ಗೆ ಮಾತನಾಡುತ್ತವೆ.

ಬಿಜೆಪಿಯ ಹಿಂದೂಗಳು ಹಿಂಸಾತ್ಮಕರು; ನಿಜವಾದ ಹಿಂದೂಗಳಲ್ಲ. ಹಿಂದೂ ಧರ್ಮವು ಭಯ, ದ್ವೇಷ ಮತ್ತು ಸುಳ್ಳಿನ ಧರ್ಮವಲ್ಲ. ಬಿಜೆಪಿಯವರು ದಿನದ 24 ಗಂಟೆಯೂ ಹಿಂಸಾಚಾರ ಮತ್ತು ದ್ವೇಷದ ಬಗ್ಗೆ ಮಾತನಾಡುತ್ತಿದ್ದಾರೆ. ಹಿಂದೂ ಧರ್ಮವು ಅಹಿಂಸೆಯನ್ನು ಕಲಿಸುತ್ತದೆ; ದ್ವೇಷವನಲ್ಲ” ಎಂದು ಮಾತನಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರಧಾನಿ ಮೋದಿ, “ರಾಹುಲ್ ಭಾಷಣ ಎಲ್ಲಾ ಹಿಂದೂಗಳ ಮೇಲಿನ ದಾಳಿಯಾಗಿದೆ. ರಾಹುಲ್ ಹಿಂದೂಗಳನ್ನು ಹಿಂಸಾತ್ಮಕ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ” ಎಂದು ಖಂಡಿಸಿದರು. ಲೋಕಸಭೆಯಲ್ಲಿ ಮಾತನಾಡುವಾಗ ಪ್ರಧಾನಿ ಮೋದಿಯವರು ಅಡ್ಡಿಪಡಿಸಿ ಮಾತನಾಡಿದ್ದು ಇದೇ ಮೊದಲು ಎಂಬುದು ಗಮಾರ್ಹ.

ಪ್ರಧಾನಿಯ ನಂತರ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ದೇಶದ ಕೋಟ್ಯಾಂತರ ಜನರು ತಮ್ಮನ್ನು ತಾವು ಹಿಂದೂ ಎಂದು ಹೆಮ್ಮೆಯಿಂದ ಕರೆದುಕೊಳ್ಳುತ್ತಾರೆ. ರಾಹುಲ್ ಅವರ ಭಾಷಣಕ್ಕೆ ಈ ಸದನದಲ್ಲಿ ಮಾತ್ರವಲ್ಲ ಇಡೀ ರಾಷ್ಟ್ರದ ಕ್ಷಮೆಯಾಚಿಸಬೇಕು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಇಡೀ ದೇಶವನ್ನೇ ಬಂಧಿಸಿದವರು ಸುರಕ್ಷತೆಯ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ.

ಕಾಂಗ್ರೆಸ್ ಆಳ್ವಿಕೆಯಲ್ಲಿ ದೆಹಲಿಯಲ್ಲಿ ಸಾವಿರಾರು ಸಿಖ್ಖರನ್ನು ಕಗ್ಗೊಲೆ ಮಾಡಲಾಯಿತು. ಸದನವನ್ನು ಈ ರೀತಿ ನಡೆಸುವಂತಿಲ್ಲ, ರಾಹುಲ್‌ಗೆ ನಿಯಮ ಗೊತ್ತಿಲ್ಲದಿದ್ದರೆ ನಿಯಮದ ಬಗ್ಗೆ ಪಾಠ ಹೇಳಿ. ಭಾವಚಿತ್ರ ತೋರಿಸಬೇಡಿ ಎಂದು ಹೇಳಿದರೂ ಮತ್ತೆ ಮತ್ತೆ ಈ ರೀತಿ ಮಾಡುವುದನ್ನು ಒಪ್ಪುವುದಿಲ್ಲ” ಎಂದರು.

ಆಡಳಿತ ಪಕ್ಷದ ಸಂಸದರು ಭಾರತೀಯ ಸಂವಿಧಾನದವನ್ನು ಎತ್ತಿಹಿಡಿದು ರಾಹುಲ್ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದರು. ಆ ಸಮಯದಲ್ಲಿ ಶಿವನ ಚಿತ್ರವನ್ನು ಮತ್ತೊಮ್ಮೆ ತೋರಿಸಿದ ರಾಹುಲ್, ಅಯೋಧ್ಯೆ ವ್ಯಾಪ್ತಿಯ ಕ್ಷೇತ್ರವನ್ನು ಗೆದ್ದ ಸಮಾಜವಾದಿ ಪಕ್ಷದ ಸಂಸದರನ್ನು ಅಭಿನಂದಿಸಿ, “ರಾಮನ ಜನ್ಮಭೂಮಿಯಾದ ಅಯೋಧ್ಯೆಯಲ್ಲೇ ಬಿಜೆಪಿಗೆ ತಕ್ಕ ಪಾಠ ಕಲಿಸಲಾಗಿದೆ” ಎಂದರು.

ಫೈಜಾಬಾದ್ (ಅಯೋಧ್ಯೆ) ಸಮಾಜವಾದಿ ಸಂಸದ ಅವಧೇಶ್ ಪ್ರಸಾದ್

ರಾಹುಲ್ ಭಾಷಣದ ವೇಳೆ ಮಧ್ಯಂತರದಲ್ಲಿ ಮೈಕ್ ಸ್ವಿಚ್ ಆಫ್ ಆಗುತ್ತಿದ್ದಂತೆ, “ಮೈಕ್ ನಿಯಂತ್ರಣ ಯಾರ ಬಳಿ ಇದೆ? ಅಯೋಧ್ಯೆ ಹೆಸರು ಹೇಳಿದ ತಕ್ಷಣ ನನ್ನ ಮೈಕ್ ಸ್ವಿಚ್ ಆಫ್ ಮಾಡಲಾಗುತ್ತದೆ” ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಭಾಧ್ಯಕ್ಷರು, “ನೀವು ಮಾತನಾಡಲು ಎದ್ದು ನಿಂತಾಗ ನಿಮ್ಮ ಮೈಕ್ ಎಂದಿಗೂ ಆಫ್ ಆಗುವುದಿಲ್ಲ. ಹಳೆಯ ಸಂಸತ್ತಿನಲ್ಲೂ ಸರೀ, ಹೊಸ ಸಂಸತ್ತಿನಲ್ಲೂ ಸರೀ ಇದೇ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿರುತ್ತೇವೆ” ಎಂದರು.

ಮುಂದುವರಿದು ಮಾತನಾಡಿದ ರಾಹುಲ್ ಗಾಂಧಿ, “ಅಯೋಧ್ಯೆ ಕ್ಷೇತ್ರದಿಂದ ಸ್ಪರ್ಧಿಸಲು ಮೋದಿ ಎರಡು ಬಾರಿ ಪ್ರಯತ್ನಿಸಿದ್ದರು. ಆದರೆ, ‘ಅಯೋಧ್ಯೆಯಲ್ಲಿ ಸ್ಪರ್ಧಿಸಬೇಡಿ, ಜನ ಸೋಲಿಸುತ್ತಾರೆ’ ಎಂದು ವಿಶ್ಲೇಷಕರು ಎಚ್ಚರಿಸಿದರು. ಪ್ರಧಾನಿ ಮೋದಿ ಅವರು ಬಿಜೆಪಿ ಸಂಸದರನ್ನು ಹೆದರಿಸುವ ರೀತಿಯಲ್ಲಿ ಇದ್ದಾರೆ.

ರಾಮಮಂದಿರ ಉದ್ಘಾಟನೆಯಾದಾಗ ಅಂಬಾನಿ ಮತ್ತು ಅದಾನಿ ಮಾತ್ರ ಅಲ್ಲಿದ್ದರು; ಸಣ್ಣ ವ್ಯಾಪಾರಿಗಳನ್ನು ಬೀದಿಗೆ ಎಸೆದರು. ಅಯೋಧ್ಯೆ ಜನರ ಭೂಮಿಯನ್ನು ಕಸಿದುಕೊಂಡರು; ಮನೆಗಳನ್ನು ಕೆಡವಲಾಯಿತು. ದೇವಸ್ಥಾನದ ಉದ್ಘಾಟನಾ ಸಮಾರಂಭಕ್ಕೆ ಸ್ಥಳೀಯರು ಯಾರುಕೂಡ ಬಂದಿರಲಿಲ್ಲ. ಹಾಗಾಗಿಯೇ ಅಯೋಧ್ಯೆಯ ಜನತೆ ಬಿಜೆಪಿಗೆ ಉತ್ತಮ ತೀರ್ಪು ನೀಡಿದ್ದಾರೆ” ಎಂದರು.

ಆಗ ಮತ್ತೊಮ್ಮೆ ಎದ್ದು ನಿಂತ ಪ್ರಧಾನಿ ಮೋದಿ, “ಸಂವಿಧಾನ ಏನು ಹೇಳುತ್ತದೋ ಅದನ್ನು ಪಾಲಿಸುತ್ತೇನೆ” ಎಂದರು. “ವಿರೋಧ ಪಕ್ಷದ ನಾಯಕನನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬುದನ್ನು ಪ್ರಜಾಪ್ರಭುತ್ವ ಮತ್ತು ಸಂವಿಧಾನ ನನಗೆ ಕಲಿಸಿದೆ. ರಾಹುಲ್‌ಗೆ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಬಗ್ಗೆ ಕಲಿಸಬೇಕು” ಎಂದರು.

ಮತ್ತೇ ಎದ್ದು ನಿಂತು ಮಾತನಾಡಿದ ರಾಹುಲ್ ಗಾಂಧಿ, “ನೀಟ್ ಪರೀಕ್ಷೆ ಶ್ರೀಮಂತರ ಆಯ್ಕೆಯಾಗಿದೆ. ನೀಟ್ ಪರೀಕ್ಷೆಯ ಮೂಲಕ ವೈದ್ಯಕೀಯ ಶಿಕ್ಷಣ ವ್ಯಾಪಾರವಾಗಿದೆ. ನೀವು ಎಲ್ಲಾ ವೃತ್ತಿಪರ ಪರೀಕ್ಷೆಗಳನ್ನು ವಾಣಿಜ್ಯ ಮಾದರಿ ಪರೀಕ್ಷೆಗಳನ್ನಾಗಿ ಮಾಡಿದ್ದೀರಿ.

7 ವರ್ಷಗಳಲ್ಲಿ 70 ಬಾರಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಕಾಂಗ್ರೆಸ್‌ಗೆ ನಿಮ್ಮನ್ನು ಕಂಡು ಹೆದರಿಕೆಯಿಲ್ಲ. ಆದರೆ ನೀವು ಕಾಂಗ್ರೆಸ್‌ಗೆ ಹೆದರುತ್ತಿದ್ದೀರಿ. ನೀಟ್‌ ಪರೀಕ್ಷೆಯಲ್ಲಿ ಒಬ್ಬರು ‘ಟಾಪರ್’ ಆಗಬಹುದು. ಆದರೆ, ಅವರಲ್ಲಿ ಹಣವಿಲ್ಲದಿದ್ದರೆ ವೈದ್ಯಕೀಯ ಶಿಕ್ಷಣ ಓದಲು ಸಾಧ್ಯವಿಲ್ಲ.

ಇದನ್ನು ಶ್ರೀಮಂತ ಮಕ್ಕಳಿಗಾಗಿ ತರಲಾಗಿದೆ. ಈ ಪರೀಕ್ಷೆಯ ಮೂಲಕ ನೀವು ಸಾವಿರಾರು ಕೋಟಿ ಗಳಿಸಿದ್ದೀರಿ. ನೀಟ್ ಪರೀಕ್ಷೆಯ ಬಗ್ಗೆ ರಾಷ್ಟ್ರಪತಿಗಳ ಭಾಷಣದಲ್ಲಿ ಒಂದೇ ಒಂದು ಮಾತು ಇರಲಿಲ್ಲ. ನೀಟ್ ಬಗ್ಗೆ ಒಂದು ದಿನದ ಚರ್ಚೆ ನಡೆಯಬೇಕು.

ನೀಟ್ ಪರೀಕ್ಷೆಗೆ ವಿದ್ಯಾರ್ಥಿಗಳು ಇಡೀ ವರ್ಷ ತಯಾರಿ ನಡೆಸುತ್ತಾರೆ. ವಿದ್ಯಾರ್ಥಿಗಳಿಗೆ, ಕುಟುಂಬಗಳು ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿ ಅಗತ್ಯ ಬೆಂಬಲವನ್ನು ನೀಡುತ್ತವೆ. ಆದರೆ ಇಂದು ನೀಟ್ ಪರೀಕ್ಷೆಯನ್ನೇ ನಂಬದ ವಾತಾವರಣ ನಿರ್ಮಾಣವಾಗಿದೆ.

ಈ ಪರೀಕ್ಷೆಯನ್ನು ಶ್ರೀಮಂತ ವಿದ್ಯಾರ್ಥಿಗಳಿಗಾಗಿಯೇ ಸಿದ್ಧಪಡಿಸಲಾಗಿದೆ. ನಾನು ವಿರೋಧ ಪಕ್ಷದ ನಾಯಕನಾದ ನಂತರ ನನಗೆ ಹಿಂದೆಂದೂ ಅನಿಸದ ಸಂಗತಿಯೊಂದು ಅರಿವಾಯಿತು. ಕಾಂಗ್ರೆಸ್ ಪಕ್ಷವನ್ನು ಮಾತ್ರವಲ್ಲ, ನಾನು ಇಲ್ಲಿರುವ ಪ್ರತಿ ವಿರೋಧ ಪಕ್ಷಗಳನ್ನೂ ಪ್ರತಿನಿಧಿಸುತ್ತೇನೆ. ಪ್ರತಿಪಕ್ಷಗಳ ವಿರುದ್ಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯವನ್ನು ನಿಯೋಜಿಸಿದಾಗಲೂ ಅವರನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ.

ನೀವು ಸಭಾಧ್ಯಕ್ಷರ ಆಸನದಲ್ಲಿ ಕುಳಿತಾಗ ಪ್ರಧಾನಿ ಮತ್ತು ನಾನು ಕೈಕುಲುಕಿದೆವು. ನಾನು ಕೈಕುಲುಕಿದಾಗ ನೀವು ಗಂಭೀರವಾಗಿ ಕುಳಿತು ಕೈಕುಲುಕಿದ್ದೀರಿ, ಆದರೆ ಪ್ರಧಾನಿ ಕೈಕುಲುಕಿದಾಗ ನೀವು ನಮಸ್ಕರಿಸಿ ಕೈಕುಲುಕ್ಕುತ್ತೀರಿ. ಸಭಾಧ್ಯಕ್ಷರು ಯಾರಿಗೂ ತಲೆಬಾಗಬಾರದು. ಈ ಸದನದಲ್ಲಿ ಸ್ಪೀಕರ್‌ಗಿಂತ ದೊಡ್ಡವರು ಯಾರೂ ಇಲ್ಲ” ಎಂದು ಮಾತನಾಡಿದರು.

ದೇಶ

ಡಿ.ಸಿ.ಪ್ರಕಾಶ್

ವಿರೋಧ ಪಕ್ಷಗಳ ಪ್ರತಿಭಟನೆಯ ನಡುವೆಯೇ ನಾಳೆ ದೇಶಾದ್ಯಂತ ಮೂರು ಹೊಸ ಕ್ರಿಮಿನಲ್ ಕಾನೂನುಗಳು ಜಾರಿಗೆ ಬರಲಿವೆ. ಭಾರತೀಯ ದಂಡ ಸಂಹಿತೆ (IPC), ಕ್ರಿಮಿನಲ್ ಪ್ರೊಸೀಜರ್ ಕೋಡ್ (CRPC) ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ ಸೇರಿದಂತೆ ಬ್ರಿಟಿಷ್ ಕಾಲದ ಕಾನೂನುಗಳನ್ನು ಬದಲಿಸಿ, ಭಾರತೀಯ ನ್ಯಾಯ ಸಂಹಿತಾ (BNS), ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS) ಮತ್ತು ಭಾರತೀಯ ಸಾಕ್ಷಿ ಅಧಿನಿಯಮ್ ಮುಂತಾದ 3 ಕ್ರಿಮಿನಲ್ ಕಾನೂನುಗಳನ್ನು ಕಳೆದ ವರ್ಷ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅಂಗೀಕರಿಸಲಾಗಿತ್ತು.

ರಾಷ್ಟ್ರಪತಿಗಳ ಒಪ್ಪಿಗೆಯ ನಂತರ ಕಳೆದ ಡಿಸೆಂಬರ್‌ನಲ್ಲಿ ಕೇಂದ್ರ ಸರ್ಕಾರದ ಗೆಜೆಟ್‌ನಲ್ಲಿ ಇದನ್ನು ಪ್ರಕಟಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಎಲ್ಲಾ ಮೂರು ಹೊಸ ಕ್ರಿಮಿನಲ್ ಕಾನೂನುಗಳು ನಾಳೆಯಿಂದ (ಸೋಮವಾರ) ಜಾರಿಗೆ ಬರಲಿವೆ. ಹೊಸ ಕ್ರಿಮಿನಲ್ ಕಾನೂನುಗಳು ತನಿಖೆ ಮತ್ತು ನ್ಯಾಯಾಲಯದ ಪ್ರಕ್ರಿಯೆಗಳಲ್ಲಿ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡುವುದರೊಂದಿಗೆ, ದೇಶದ ಪ್ರತಿ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣಗಳನ್ನು ದಾಖಲಿಲು ಅಸ್ತಿತ್ವದಲ್ಲಿರುವ ಅಪರಾಧ ಟ್ರ್ಯಾಕಿಂಗ್ ಸಿಸ್ಟಮ್ (CCTNS) ಬಳಕೆಯಲ್ಲಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRP) 23 ಕಾರ್ಯಾಚರಣೆಯ ನವೀಕರಣಗಳನ್ನು ಪರಿಚಯಿಸಿದೆ.

ಹೊಸ ಕಾರ್ಯವಿಧಾನಗಳಿಗೆ ಮತ್ತು ಸುಗಮ ಪರಿವರ್ತನೆಗಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎನ್‌ಸಿಆರ್‌ಪಿ ತಾಂತ್ರಿಕ ನೆರವು ಒದಗಿಸಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 5,65,746 ಕಾನ್ಸ್‌ಟೇಬಲ್‌ಗಳು, ಜೈಲು, ಫೋರೆನ್ಸಿಕ್ ಮತ್ತು ನ್ಯಾಯಾಂಗ ಅಧಿಕಾರಿಗಳು ಸೇರಿದಂತೆ 5,84,174 ಅಧಿಕಾರಿಗಳಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನೀಡಲಾಗಿದೆ. ಕೇಂದ್ರ ಪಂಚಾಯತ್ ರಾಜ್ ಸಚಿವಾಲಯವು 3 ಹೊಸ ಕಾನೂನುಗಳ ಕುರಿತು 40 ಲಕ್ಷ ಸ್ವಯಂ ಸೇವಕರಿಗೆ ತರಬೇತಿ ನೀಡಿದೆ.

ಹೊಸ ಕಾನೂನುಗಳ ಅಡಿಯಲ್ಲಿ ವಿದ್ಯುನ್ಮಾನವಾಗಿ ಸಮನ್ಸ್ ಸೂಚನೆಗಳನ್ನು ಡೌನ್‌ಲೋಡ್ ಮಾಡಲು ಅನುಕೂಲವಾಗುವಂತೆ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಇ-ಸಾಕ್ಷಿಯ, ನ್ಯಾಯಶ್ರುತಿ ಮತ್ತು ಇ-ಸಮನ್ಸ್ ಎಂಬ 3 ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಿದೆ. ನಾಳೆ 3 ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೆ ತರುವ ಕೆಲಸಗಳು ತರಾತುರಿಯಲ್ಲಿ ನಡೆಯುತ್ತಿದ್ದರೆ, ಸಂಸತ್ತಿನಲ್ಲಿ ಚರ್ಚೆಯಿಲ್ಲದೆ 3 ಹೊಸ ಕಾನೂನುಗಳನ್ನು ಅಂಗೀಕರಿಸಲಾಗಿದೆ ಎಂದು ವಿರೋಧ ಪಕ್ಷದ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಕಾನೂನುಗಳನ್ನು ತರಾತುರಿಯಲ್ಲಿ ಅನುಷ್ಠಾನಗೊಳಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲೂ ಪ್ರಕರಣ ಬಾಕಿಯಿದೆ. ಹಲವು ರಾಜ್ಯಗಳಲ್ಲಿ ವಕೀಲರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೂ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ನಾಳೆಯಿಂದ ಹೊಸ ಕಾನೂನುಗಳನ್ನು ಜಾರಿಗೆ ತರಲು ಹೊರಟಿದೆ.

ಈ ಕಾಯ್ದೆಯ ಪ್ರಕಾರ, ಯಾವುದೇ ನೊಂದ ವ್ಯಕ್ತಿ ತಮ್ಮ ಮನೆಯಿಂದಲೇ ಇ-ಎಫ್‌ಐಆರ್ ಮೂಲಕ ದೂರು ದಾಖಲಿಸಬಹುದು. ನಿರ್ದಿಷ್ಟ ಪೊಲೀಸ್ ಠಾಣೆ ಮಿತಿಯನ್ನು ಲೆಕ್ಕಿಸದೆ ಯಾವುದೇ ರಾಜ್ಯದಲ್ಲಿ ಎಲ್ಲಿ ಬೇಕಾದರೂ ದೂರು ಸಲ್ಲಿಸಬಹುದು. ಜೀರೋ ಎಫ್‌ಐಆರ್ ಮೂಲಕವೂ ದೂರು ದಾಖಲಿಸಬಹುದು. ದೂರುಗಳನ್ನು ಡಿಜಿಟಲ್ ರೂಪದಲ್ಲೂ ಸಲ್ಲಿಸಬಹುದು. ವಿಚಾರಣೆಗಾದ ಅವಧಿಯನ್ನು ನಿರ್ದಿಷ್ಟಪಡಿಸಲಾಗಿದೆ. ಹೊಸ ಕಾನೂನಿನ ಪ್ರಕಾರ, ತನಿಖಾಧಿಕಾರಿಯು 90 ದಿನಗಳಲ್ಲಿ ಪ್ರಕರಣದ ಪ್ರಗತಿಯನ್ನು ಸಂತ್ರಸ್ತರಿಗೆ ಅಥವಾ ದೂರುದಾರರಿಗೆ ತಿಳಿಸಲಾಗುವುದು.

ದೇಶ

ಇಂದೋರ್: ಮಧ್ಯಪ್ರದೇಶದಲ್ಲಿ 14 ಮಹಿಳೆಯರು ಸೇರಿದಂತೆ 30 ಜನರು ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಕಾನೂನುಬದ್ಧವಾಗಿ ಮತಾಂತರಗೊಂಡಿದ್ದಾರೆ. ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್ ನೇತೃತ್ವದ ಬಿಜೆಪಿ ಅಧಿಕಾರದಲ್ಲಿದೆ.

ಇಲ್ಲಿ ‘ಸಜಾ ಸಂಸ್ಕೃತಿ ಮಂಚ್’ (Sajha Sanskriti Manch)ಎಂಬ ಹಿಂದೂ ಸಂಘಟನೆ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಯ ವತಿಯಿಂದ ನಿನ್ನೆ ಅಲ್ಲಿನ ವಿನಾಯಕ ದೇವಸ್ಥಾನದಲ್ಲಿ ಕಾರ್ಯಕ್ರಮ ನಡೆಯಿತು. ಇದರಲ್ಲಿ 14 ಮುಸ್ಲಿಂ ಮಹಿಳೆಯರು ಸೇರಿದಂತೆ 30 ಜನರು ವೇದ ಮಂತ್ರಗಳನ್ನು ಪಠಿಸುವ ಮೂಲಕ ಕಾನೂನುಬದ್ಧವಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಘಟನೆಯ ಅಧ್ಯಕ್ಷ ಸ್ಯಾಮ್ ಪಾವ್ರಿ (Sam Pawri), “ಮಧ್ಯಪ್ರದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ 2021ರ ಪ್ರಕಾರ, 30 ಮುಸ್ಲಿಮರು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಅವರೆಲ್ಲರೂ, ಜಿಲ್ಲಾಡಳಿತಕ್ಕೆ ಔಪಚಾರಿಕವಾಗಿ ಇದಕ್ಕಾದ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದಾರೆ.

ಇದರಲ್ಲಿ ಯಾವುದೇ ನಿಯಮ ಉಲ್ಲಂಘನೆಯಾಗಲೀ, ಬಲವಂತದ ಮತಾಂತರವಾಗಲೀ ನಡೆದಿಲ್ಲ” ಎಂದು ಹೇಳಿದ್ದಾರೆ.

ದೇಶ

ನವದೆಹಲಿ: ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೆರಿಕ ನೀಡಿರುವ ಹೇಳಿಕೆ ನಿರಂಕುಶವಾಗಿದ್ದು ಅದನ್ನು ತಿರಸ್ಕರಿಸುತ್ತಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

ಈ ಸಂಬಂಧ ಮಾತನಾಡಿರುವ ರಣಧೀರ್ ಜೈಸ್ವಾಲ್, ‘ಅಮೆರಿಕ ವರದಿಯು ಏಕಪಕ್ಷೀಯವಾಗಿದೆ. ಭಾರತದ ಸಾಮಾಜಿಕ ರಚನೆಯನ್ನು ಅರ್ಥಮಾಡಿಕೊಳ್ಳದೆ ವರದಿಯನ್ನು ಸಿದ್ಧಪಡಿಸಲಾಗಿದೆ. ಆರೋಪಗಳು ಮತ್ತು ತಪ್ಪು ನಿರೂಪಣೆಗಳನ್ನು ಮಿಶ್ರಣಗೊಳಿಸಿ ವರದಿ ಸಿದ್ಧಪಡಿಸಲಾಗಿದೆ. ನಾವು ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ಅಮೆರಿಕ ವರದಿಯನ್ನು ತಿರಸ್ಕರಿಸುತ್ತೇವೆ’ ಎಂದು ಹೇಳಿದ್ದಾರೆ.

ದೇಶ

 ಡಿ.ಸಿ.ಪ್ರಕಾಶ್

ತಮಿಳುನಾಡಿನಲ್ಲಿ ಹೆಚ್ಚುತ್ತಿರುವ ಮರ್ಯಾದಾ ಹತ್ಯೆಗಳನ್ನು ತಡೆಯಲು ಪ್ರತ್ಯೇಕ ಕಾನೂನು ರೂಪಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ!

ಭಾರತದಲ್ಲಿ ಮರ್ಯಾದಾ ಹತ್ಯೆಗಳು ನಿರಂತರವಾಗಿ ನಡೆಯುತ್ತಿರುವ ರಾಜ್ಯಗಳಲ್ಲಿ ತಮಿಳುನಾಡು ಕೂಡ ಒಂದು. ಅದರಲ್ಲೂ ಕಳೆದ ದಶಕದಲ್ಲಿ ತಮಿಳುನಾಡಿನಲ್ಲಿ 150ಕ್ಕೂ ಹೆಚ್ಚು ಜಾತಿ ಸಂಬಂಧಿತ ಹತ್ಯಗಳು ನಡೆದಿವೆ ಎಂದು ಅಂಕಿಅಂಶಗಳು ಹೇಳುತ್ತವೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಮರ್ಯಾದಾ ಹತ್ಯೆಗಳನ್ನು ತಡೆಯಲು ಪ್ರತ್ಯೇಕ ಕಾನೂನು ಜಾರಿಯಾಗಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ನಮ್ಮ ದೇಶದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಕಾನೂನು ನೀಡಿದೆ. ಆದರೆ ಜಾತಿಯ ಹೆಸರಿನಲ್ಲಿ ಆ ಹಕ್ಕನ್ನು ಕಸಿದುಕೊಳ್ಳುವ ಕ್ರೌರ್ಯ ನಮ್ಮ ಸಮಾಜದಲ್ಲಿ ನಡೆಯುತ್ತಿದೆ. ತಮ್ಮ ಸ್ವಂತ ಇಚ್ಚೆಯ ಆಧಾರದ ಮೇಲೆ ಕೂಡಿ ಬಾಳುವ ಆಯ್ಕೆಯನ್ನು ಕೈಗೆತ್ತಿಕೊಳ್ಳುವ ಯುವ ಜೋಡಿಗಳನ್ನು ಕೊಲ್ಲಲಾಗುತ್ತದೆ.

ಮರ್ಯಾದಾ ಹತ್ಯೆಯಲ್ಲಿ ಜೀವ ಕಳೆದುಕೊಂಡ ಗೋಕುಲ್ ರಾಜ್

ಜಾತಿ ಸಂಘಟನೆಗಳು ಮತ್ತು ಜಾತಿ ಆಧಾರಿತ ರಾಜಕೀಯ ಪಕ್ಷಗಳು ಇದರ ಹಿಂದೆ ಇವೆ. ಜಾತಿಗೆ ವಿರುದ್ಧವಾಗಿ ಮದುವೆಯಾಗುವ ಯುವ ಜೋಡಿಗಳನ್ನು ಗೌರವ ಮತ್ತು ಜಾತಿ ಶುದ್ಧತೆಯ ಹೆಸರಿನಲ್ಲಿ ಹತ್ಯೆ ಮಾಡಲಾಗುತ್ತದೆ. ಅಂತಹ ಕೊಲೆಗಳು ಮತ್ತು ಸಂಬಂಧಿತ ಅಪರಾಧಗಳನ್ನು ಶಿಕ್ಷಿಸುವ ಕಾನೂನು ಭಾರತದಲ್ಲಿಲ್ಲ. ಹಾಗಾಗಿ ಮರ್ಯಾದಾ ಹತ್ಯೆಗಳು ಸೇರಿದಂತೆ ಅಪರಾಧಗಳಿಗೆ ಪ್ರತ್ಯೇಕ ಕಾನೂನು ಜಾರಿಗೆ ತರಬೇಕು ಎಂದು ಕಮ್ಯುನಿಸ್ಟ್ ಪಕ್ಷಗಳು ಸೇರಿದಂತೆ ಸಂಘಟನೆಗಳು ಒತ್ತಾಯಿಸುತ್ತಿವೆ.

ಮರ್ಯಾದಾ ಹತ್ಯೆಗಳನ್ನು ತಡೆಯಲು ಪ್ರತ್ಯೇಕ ಕಾನೂನು ತರುವಂತೆ ಸಿಪಿಎಂ, ಸಿಪಿಐ, ಕಾಂಗ್ರೆಸ್ ಸೇರಿದಂತೆ ಪಕ್ಷಗಳ ಶಾಸಕರು ತಮಿಳುನಾಡು ವಿಧಾನಸಭೆಯಲ್ಲಿ ಹಲವು ಬಾರಿ ಧ್ವನಿ ಎತ್ತಿದ್ದಾರೆ. ಓ.ಪನ್ನೀರ್ ಸೆಲ್ವಂ ಮುಖ್ಯಮಂತ್ರಿಯಾಗಿದ್ದಾಗಲೂ ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿತ್ತು.

ಸ್ಟಾಲಿನ್ ಮುಖ್ಯಮಂತ್ರಿಯಾದ ನಂತರವೂ ಪ್ರತ್ಯೇಕ ಕಾನೂನು ಬೇಡಿಕೆ ಮುಂದಿಟ್ಟು ವಿಧಾನಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು. ಇತ್ತೀಚೆಗಷ್ಟೇ ತಿರುನಲ್ವೇಲಿಯಲ್ಲಿ ಅಂತರ್ಜಾತಿ ದಂಪತಿಗಳಿಗೆ ಆಶ್ರಯ ನೀಡಿದ್ದಕ್ಕಾಗಿ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಕಚೇರಿಯನ್ನು ಧ್ವಂಸ ಮಾಡಿದ್ದು ತಮಿಳುನಾಡಿನ ರಾಜಕೀಯ ವಲಯದಲ್ಲಿ ಭಾರೀ ಆಘಾತವನ್ನು ಉಂಟು ಮಾಡಿತ್ತು.

ಸಿಪಿಎಂ ಕಚೇರಿ ಮೇಲಿನ ದಾಳಿ

ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಸಿಪಿಎಂ ಕಚೇರಿ ಮೇಲಿನ ದಾಳಿ ಕುರಿತು ಗಮನ ಸೆಳೆಯುವ ನಿರ್ಣಯ ಮಂಡಿಸಲಾಯಿತು. ಆ ವೇಳೆ ಕಾಂಗ್ರೆಸ್, ಸಿಪಿಎಂ, ಸಿಪಿಐ, ಎಂಡಿಎಂಕೆ, ವಿಡುದಲೈ ಚಿರುತ್ತೈಗಳ್, ಟಿವಿಕೆ, ಎಂಡಿಎಂಕೆ, ಬಿಜೆಪಿ ಶಾಸಕರು ಸಿಪಿಎಂ ಕಚೇರಿ ಮೇಲಿನ ದಾಳಿಯನ್ನು ಖಂಡಿಸಿದರು. ಇದರಲ್ಲಿ ಪಿಎಂಕೆ (ಪಾಟಾಳಿ ಮಕ್ಕಳ್ ಕಚ್ಚಿ) ಮತ್ತು ಕೊಂಗು ಮಕ್ಕಳ್ ದೇಸಿಯ ಕಚ್ಚಿ ಭಾಗವಹಿಸಲಿಲ್ಲ.

ಗಮನ ಸೆಳೆಯುವ ನಿರ್ಣಯಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸ್ಟಾಲಿನ್, ‘ಅಂತರ್ಜಾತಿ ವಿವಾಹಗಳಿಗೆ ಸಂಬಂಧಿಸಿದ ಎಲ್ಲಾ ರೀತಿಯ ಅಪರಾಧಗಳ ವಿಚಾರಣೆಗೆ ಸರ್ಕಾರದಿಂದ ಪ್ರತ್ಯೇಕವಾಗಿ ವಿಶೇಷ ಕ್ರಿಮಿನಲ್ ಪ್ರಾಸಿಕ್ಯೂಟರನ್ನು ನೇಮಿಸಲಾಗುವುದು. ಇಂತಹ ಪ್ರಕರಣಗಳಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಗಳ ಬದಲಿಗೆ ಉಪ ಪೊಲೀಸ್ ವರಿಷ್ಠಾಧಿಕಾರಿಯನ್ನು ತನಿಖಾ ಅಧಿಕಾರಿಯನ್ನಾಗಿ ನೇಮಿಸಲು ಕ್ರಮಕೈಗೊಳ್ಳಲಾಗುವುದು’ ಎಂದರು.

ಮರ್ಯಾದಾ ಹತ್ಯೆಗಳು ಸೇರಿದಂತೆ ಅಪರಾಧಗಳನ್ನು ತಡೆಯಲು ಪ್ರತ್ಯೇಕ ಕಾನೂನು ರೂಪಿಸಬೇಕು ಎಂಬ ಬೇಡಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸ್ಟಾಲಿನ್, ‘ಪ್ರತ್ಯೇಕ ಕಾನೂನನ್ನು ತರುವ ಬದಲು, ಅಸ್ತಿತ್ವದಲ್ಲಿರುವ ಕಾನೂನುಗಳು, ವಿಶೇಷವಾಗಿ ದೌರ್ಜನ್ಯ ತಡೆ ಕಾಯಿದೆ, ಭಾರತೀಯ ದಂಡ ಸಂಹಿತೆ ಮತ್ತು ಭಾರತೀಯ ಅಪರಾಧ ಪ್ರಕ್ರಿಯಾ ಸಂಹಿತೆಯ ಆಧಾರದ ಮೇಲೆ ಗಂಭೀರ ಮತ್ತು ತ್ವರಿತ ಕ್ರಮಗಳನ್ನು ತೆಗೆದುಕೊಂಡು ಅಪರಾಧಿಗಳನ್ನು ಕಾನೂನಿನ ಮುಂದೆ ತರುವುದು ಸರಿಯಾಗಿರುತ್ತದೆ ಎಂದು ಈ ಸರ್ಕಾರ ನಂಬುತ್ತದೆ’ ಎಂದು ಹೇಳಿದರು.

ಮರ್ಯಾದಾ ಹತ್ಯೆಯಲ್ಲಿ ಜೀವ ಕಳೆದುಕೊಂಡ ಧರ್ಮಪುರಿ ಇಳವರಸು

ಅಂದರೆ ಮರ್ಯಾದಾ ಹತ್ಯೆಗಳನ್ನು ತಡೆಯಲು ಪ್ರತ್ಯೇಕ ಕಾನೂನು ಅಗತ್ಯವಿಲ್ಲ ಎಂಬ ನಿಲುವನ್ನು ಡಿಎಂಕೆ ಸರ್ಕಾರ ತೆಗೆದುಕೊಂಡಿದೆ ಎಂಬುದು ಇದರ ಮೂಲಕ ಸ್ಪಷ್ಟವಾಗಿ ಕಾಣುತ್ತದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ತಮ್ಮ ನಿಲುವನ್ನು ಮರುಪರಿಶೀಲಿಸಬೇಕು ಎಂದು ತಮಿಳುನಾಡು ಅಸ್ಪೃಶ್ಯತೆ ನಿರ್ಮೂಲನಾ ಸಮಿತಿ ಒತ್ತಾಯಿಸಿದೆ.

ಈ ಕುರಿತು ತಮಿಳುನಾಡು ಅಸ್ಪೃಶ್ಯತೆ ನಿರ್ಮೂಲನಾ ಸಮಿತಿಯ ಅಧ್ಯಕ್ಷ ಚೆಲ್ಲಕಣ್ಣು, ಪ್ರಧಾನ ಕಾರ್ಯದರ್ಶಿ ಸ್ಯಾಮ್ಯುಯೆಲ್ ರಾಜ ಹೇಳಿಕೆ ನೀಡಿದ್ದಾರೆ. ಅದರಲ್ಲಿ, ‘ಮರ್ಯಾದಾ ಹತ್ಯೆಗಳ ವಿರುದ್ಧ ಪ್ರತ್ಯೇಕ ಕಾನೂನು ಅಗತ್ಯವಿಲ್ಲ ಎಂಬ ಮುಖ್ಯಮಂತ್ರಿಯವರ ಹೇಳಿಕೆ ಸ್ವೀಕಾರಾರ್ಹವಲ್ಲ. ಮರ್ಯಾದಾ ಹತ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತ್ಯೇಕ ಕಾನೂನಿನ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ.

ಅಂತರ್ಜಾತಿ ಪ್ರೇಮಿಗಳನ್ನು ಬರ್ಬರವಾಗಿ ಕೊಲ್ಲಲಾಗುತ್ತದೆ. ದಂಪತಿ ಅಥವಾ ಅವರ ಸಂಬಂಧಿಕರನ್ನು ಗ್ರಾಮದಿಂದ ಬಹಿಷ್ಕರಿಸುವುದು, ಶಿಕ್ಷೆ, ಸಾಮಾಜಿಕ ಬಹಿಷ್ಕಾರ, ಆರ್ಥಿಕ ದಿಗ್ಬಂಧನ, ಆಸ್ತಿಯ ಹಕ್ಕುಗಳ ನಿರಾಕರಣೆ ಮುಂತಾದ ದೌರ್ಜನ್ಯಗಳು ಸಹ ಪ್ರದರ್ಶಿಸಲಾಗುತ್ತದೆ.

ಮರ್ಯಾದಾ ಹತ್ಯೆಯಲ್ಲಿ ಜೀವ ಕಳೆದುಕೊಂಡ ಉಡುಮಲೈ ಶಂಕರ್

ಉಡುಮಲೈ ಶಂಕರ್ ಅವರಿಂದ ಆರಂಭಗೊಂಡು, ಪೊಲೀಸ್ ಠಾಣೆಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳದ ಕಾರಣ ವಿವಿಧ ಮರ್ಯಾದಾ ಹತ್ಯೆಗಳ ಪ್ರಕರಣಗಳು ಹಾಗೆಯೇ ಸ್ಥಗಿತಗೊಂಡಿವೆ. ಆದ್ದರಿಂದ, ವಿಶೇಷ ಕಾನೂನು ಅಗತ್ಯವಿದೆ. ಮೌಖಿಕವಾಗಿ ಅಥವಾ ಲಿಖಿತವಾಗಿ, ಪೊಲೀಸ್ ಠಾಣೆಯಲ್ಲಿ ಅಥವಾ ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಮಾಣೀಕರಿಸಿ ಅಂತರ್ಜಾತಿ ವಿವಾಹಕ್ಕೆ ಮುಂದಾಗುವ ದಂಪತಿಗಳನ್ನು ಪ್ರತ್ಯೇಕಿಸುವ ಪ್ರಕ್ರಿಯೆಯಲ್ಲಿ ಪೊಲೀಸರು ತೊಡಗಬಾರದು. ಉಲ್ಲಂಘಿಸಿದರೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸಬೇಕು. ಮರ್ಯಾದಾ ಹತ್ಯೆಗಳು ಸೇರಿದಂತೆ ಅಪರಾಧಗಳಿಗೆ ಪ್ರತ್ಯೇಕ ಕಾನೂನು ಜಾರಿ ಮಾಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಡಿಎಂಕೆಯ ಮಿತ್ರಪಕ್ಷವಾದ ವಿಡುದಲೈ ಚಿರುತ್ತೈಗಳ್ ಪಕ್ಷದ ನಾಯಕ ತೊಲ್ ತಿರುಮಾವಳವನ್ ಕೂಡ ಪ್ರತ್ಯೇಕ ಕಾನೂನಿಗೆ ಒತ್ತಾಯಿಸಿದ್ದಾರೆ. ಅವರು, ‘ತಮಿಳುನಾಡಿನಲ್ಲಿ ಮರ್ಯಾದಾ ಹತ್ಯೆಗಳನ್ನು ನಿಯಂತ್ರಿಸಲು ಭಾರತೀಯ ಕಾನೂನು ಆಯೋಗ ಮತ್ತು ಸುಪ್ರೀಂ ಕೋರ್ಟ್‌ನ ಸೂಚನೆಗಳನ್ನು ಆಧರಿಸಿ ತಮಿಳುನಾಡು ಸರ್ಕಾರವು ವಿಶೇಷ ಕಾನೂನನ್ನು ಜಾರಿಗೊಳಿಸಬೇಕು; ಅಲ್ಲಿಯವರೆಗೆ, 2018ರಲ್ಲಿ ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ನಿರ್ದಿಷ್ಟಪಡಿಸಿದ ಕಾರ್ಯವಿಧಾನಗಳನ್ನು ಅನುಸರಿಸಬೇಕು ಎಂದು ವಿಡುದಲೈ ಚಿರುತ್ತೈಗಳ್ ಪಕ್ಷದ ಪರವಾಗಿ ಒತ್ತಾಯಿಸುತ್ತೇವೆ’ ಎಂದು ಅವರು ಸುದೀರ್ಘ ಹೇಳಿಕೆಯನ್ನು ಪ್ರಕಟಿಸಿದ್ದಾರೆ.

ಆದರೂ ಡಿಎಂಕೆ ಈ ವಿಚಾರದಲ್ಲಿ ಪ್ರತ್ಯೇಕ ಕಾನೂನು ಬೇಕಿಲ್ಲ ಎಂಬ ಮನೋಭಾವನೆಯಲ್ಲಿ ಮುಂದುವರಿದಂತೆ ಕಾಣುತ್ತಿದೆ. ಸಮ್ಮಿಶ್ರ ಪಕ್ಷಗಳ ಬೇಡಿಕೆಗಳನ್ನು ಡಿಎಂಕೆ ಸರ್ಕಾರ ಒಪ್ಪಿಕೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ದೇಶ

ಬೆಂಗಳೂರು: ಸನಾತನ ಧರ್ಮ ಭಾಷಣದ ಆರೋಪಕ್ಕೆ ಸಂಬಂಧಿಸಿದಂತೆ ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಇಂದು ಬೆಂಗಳೂರಿನ ಮೆಟ್ರೋಪಾಲಿನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾದರು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸನಾತನ ವಿರೋಧಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ್ದ ಮುಖ್ಯಮಂತ್ರಿ ಸ್ಟಾಲಿನ್ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ಭಾರತದಾದ್ಯಂತ ಸಂಚಲನ ಮೂಡಿಸಿದ್ದರು. ‘ಸನಾತನ ಧರ್ಮ ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ. ಹಾಗಾಗಿ ಸನಾತನ ಧರ್ಮವನ್ನು ತೊಲಗಿಸಬೇಕು’ ಎಂದು ಉದಯನಿಧಿ ಸ್ಟಾಲಿನ್ ಮಾಡಿದ ಭಾಷಣವನ್ನು ಬಿಜೆಪಿ ಮತ್ತು ಬಲಪಂಥೀಯರು ತೀವ್ರವಾಗಿ ಖಂಡಿಸಿದ್ದರು ಮತ್ತು ಪ್ರತಿಭಟನೆಗಳನ್ನು ಸಹ ನಡೆಸಿದ್ದರು. ಈ ಬಗ್ಗೆ ಸ್ವತಃ ಪ್ರಧಾನಿ ಮೋದಿಯವರೇ ತಮ್ಮ ಸಂಪುಟದ ಸಚಿವರೊಂದಿಗೆ ಮಾತನಾಡಿದ್ದರು.

ಅಲ್ಲದೆ, ಸನಾತನ ಧರ್ಮದ ಕುರಿತು ಉದಯನಿಧಿ ಅವರ ಭಾಷಣದ ವಿರುದ್ಧ ನ್ಯಾಯಾಲಯಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿದ್ದವು. ಆ ಮೂಲಕ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಪರಮೇಶ್ವರ್ ಸಲ್ಲಿಸಿದ್ದ ಅರ್ಜಿಯನ್ನು ಆಧರಿಸಿ ನ್ಯಾಯಾಲಯ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ಅಲ್ಲದೇ ಖುದ್ದಾಗಿ ಹಾಜರಾಗುವಂತೆ ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿಯೇ ಬೆಂಗಳೂರಿಗೆ ಆಗಮಿಸಿದ ಉದಯನಿಧಿ, ಇಂದು ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರಾದರು.

ಉದಯನಿಧಿ ಕಡೆಯಿಂದ ಸನಾತನ ಭಾಷಣಕ್ಕೆ ಸಂಬಂಧಿಸಿದಂತೆ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಕ್ರೋಢೀಕರಿಸಿ ಒಂದೇ ಸ್ಥಳದಲ್ಲಿ ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೇವೆ. ಪ್ರಕರಣದ ವಿಚಾರಣೆ ಬಾಕಿ ಇದೆ. ಈ ಬಗ್ಗೆ ದೂರುದಾರರು ಉತ್ತರ ನೀಡಬೇಕಾಗಿದೆ ಹೀಗಾಗಿ ವಿಚಾರಣೆಯನ್ನು ಮುಂದೂಡಬೇಕು ಎಂದು ಮನವಿ ಮಾಡಿದರು.

ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಆಗಸ್ಟ್ 8ಕ್ಕೆ ಮುಂದೂಡಿದರು. ಈ ಪ್ರಕರಣದಲ್ಲಿ ಉದಯನಿಧಿ ಸ್ಟಾಲಿನ್‌ಗೆ ಜಾಮೀನು ಮಂಜೂರು ಮಾಡಿದ ನ್ಯಾಯಾಧೀಶರು 1 ಲಕ್ಷ ರೂಪಾಯಿ ಬಾಂಡ್ ಪಾವತಿಸುವಂತೆ ಆದೇಶಿಸಿದ್ದಾರೆ.