ದೇಶ Archives » Page 21 of 53 » Dynamic Leader
October 24, 2024
Home Archive by category ದೇಶ (Page 21)

ದೇಶ

ದೇಶ

ಕ್ರಿಶ್ಚಿಯನ್ನರ ಸಭೆಯಲ್ಲಿ ಭಾಗವಹಿಸಿದ್ದಕ್ಕಾಗಿ 2 ಅಮೆರಿಕನ್ನರಿಗೆ 41,500 ರೂಪಾಯಿ ದಂಡ ವಿಧಿಸಿರುವ ಅಸ್ಸಾಂ ಪೊಲೀಸರಿಗೆ ಟೀಕೆಗಳ ಮಹಾಪೂರವೇ ಹರಿದು ಬರುತ್ತಿದೆ.

ಪ್ರಪಂಚದಾದ್ಯಂತದ ಪ್ರವಾಸಿಗರು ಪ್ರತಿದಿನ ಭಾರತಕ್ಕೆ ಭೇಟಿ ನೀಡುತ್ತಾರೆ. ಅವರು ಭಾರತದ ಕಲೆ, ಸಂಸ್ಕೃತಿ ಮತ್ತು ವಸ್ತ್ರಾಲಂಕಾರ ಮುಂತಾದವುಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. ಕೆಲವರು ಇದನ್ನು ಫೋಟೋ ತೆಗೆದು ಅಥವಾ ವೀಡಿಯೊ ಮಾಡಿ ಅದನ್ನು ತಮ್ಮ ವೆಬ್‌ಸೈಟ್‌ಗಳಲ್ಲಿ ಅಥಾವಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ.

ಹೀಗೆ ದಿನನಿತ್ಯ ಭಾರತಕ್ಕೆ ಬರುವ ಪ್ರವಾಸಿಗರು ಯಾವುದಾದರೊಂದು ರೀತಿಯಲ್ಲಿ ದುರಂತಕ್ಕೆ ಸಿಲುಕಿಕೊಳ್ಳುತ್ತಾರೆ. ನಿರ್ದಿಷ್ಟವಾಗಿ, ಬಿಜೆಪಿ ಆಡಳಿತವಿರುವ ಅಥವಾ ಬಿಜೆಪಿ ಮೈತ್ರಿಕೂಟದ ರಾಜ್ಯಗಳಲ್ಲಿ ಪ್ರವಾಸಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯದ ಘಟನೆಗಳು ನಡೆಯುತ್ತವೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ  ಭಾರತೀಯ ಮಹಿಳೆಯರಿಗೆ ಭದ್ರತೆ ಇಲ್ಲದ ಹಾಗೇ ವಿದೇಶಿ ಮಹಿಳೆಯರಿಗೂ ಇಲ್ಲಿ ಭದ್ರತೆ ಇಲ್ಲವೆಂದು ಹಲವರು ಖಂಡಿಸುತ್ತಿದ್ದಾರೆ.

ಈ ಹಿನ್ನಲೆಯಲ್ಲಿ, ಅಮೆರಿಕದ ಜಾನ್ ಮ್ಯಾಥ್ಯೂ (64) ಮತ್ತು ಮೈಕಲ್ ಜೇಮ್ಸ್ (77) ಎಂಬ ಇಬ್ಬರು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದಾರೆ. ನಂತರ ಅವರು ಫೆಬ್ರವರಿ 1 ರಂದು ಬಿಜೆಪಿ ಆಡಳಿತವಿರುವ ಅಸ್ಸಾಂ ರಾಜ್ಯದ ಸೋನಿತ್ಪುರ್ ಜಿಲ್ಲೆಗೆ ತೆರಳಿ, ಅಲ್ಲಿ ನಡೆಯುತ್ತಿದ್ದ ಕ್ರೈಸ್ತರ ಸಭೆಯೋಂದರಲ್ಲಿ ಭಾಗವಹಿಸಿದ್ದಾರೆ. ಇದನ್ನು ಕಂಡ ರಾಜ್ಯ ಪೊಲೀಸರು ಕೂಡಲೇ ಅವರಿಗೆ ದಂಡ ವಿಧಿಸಿದ್ದಾರೆ. ಅದೂ ಐನೂರು, ಸಾವಿರ ರೂ ಅಲ್ಲ 500 ಡಾಲರ್ (ಭಾರತೀಯ ಕರೆನ್ಸಿಯಲ್ಲಿ ರೂ.41,500) ದಂಡ ವಿಧಿಸಿದ್ದಾರೆ.

ಅವರು ತಮ್ಮ ಬಗ್ಗೆ ಹೇಳಿಕೊಳ್ಳಲು ಪ್ರಯತ್ನಿಸಿದರೂ, ರಾಜ್ಯ ಪೊಲೀಸರು ತಲಾ 41,500 ರೂ.ಗಳ ದಂಡವನ್ನು ಸಂಗ್ರಹಿಸಿದ ನಂತರವೇ ಅವರನ್ನು ಬಿಡುಗಡೆ ಗೊಳಿಸಿದ್ದಾರೆ. ಈ ಘಟನೆಗೆ ಬಗ್ಗೆ ಹೇಳಿರುವ ರಾಜ್ಯ ಪೊಲೀಸರು, ‘ಪ್ರವಾಸಿ ವೀಸಾದಲ್ಲಿರುವವರು ಧಾರ್ಮಿಕ ಸಭೆಗಳಲ್ಲಿ ಭಾಗವಹಿಸಬಾರದು ಎಂಬ ನಿಯಮವಿದ್ದು, ಆ ನಿಯಮವನ್ನು ಉಲ್ಲಂಘಿಸಿ, ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಕಾರಣಕ್ಕೆ ಅವರಿಗೆ ದಂಡ ವಿಧಿಸಲಾಗಿದೆ’ ಎಂದು ಹೇಳಿದ್ದಾರೆ.

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮಾತ್ರವಲ್ಲದೆ, ಪ್ರತಿದಿನ ವಿವಿಧ ಪ್ರವಾಸಿಗರು ದೇಶಾದ್ಯಂತ ದೇವಾಲಯಗಳಿಗೆ ಭೇಟಿ ನೀಡುತ್ತಾರೆ ಮತ್ತು ಪೂಜೆಯ ಸಮಯದಲ್ಲಿ ಅಲ್ಲಿದ್ದು ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾರೆ. ಅವರಿಗೆಲ್ಲ ದಂಡ ವಿಧಿಸದೇ, ಕ್ರಿಶ್ಚಿಯನ್ ಕೂಟಗಳಿಗೆ ಹಾಜರಾಗಿದ್ದಕ್ಕಾಗಿ ಮಾತ್ರ ದಂಡ ವಿಧಿಸಬೇಕೇ? ಎಂದು ಹಲವರು ಪ್ರಶ್ನೆಗಳ ಮೂಲಕ ಖಂಡಿಸುತ್ತಿದ್ದಾರೆ.

ದೇಶ

ನವದೆಹಲಿ: 2024-25ನೇ ಸಾಲಿನ ಮಧ್ಯಂತರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಮನೆಯ ಮೇಲ್ಛಾವಣಿ ಮೇಲಿನ ಸೌರಶಕ್ತಿ ಫಲಕಗಳನ್ನು ಅಳವಡಿಸಿಕೊಂಡ 1 ಕೋಟಿ ಮನೆಗಳಿಗೆ ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು ಎಂದು ಘೋಷಿಸಿದ್ದಾರೆ. ಇದರಿಂದ ತಿಂಗಳಿಗೆ ರೂ.15 ಸಾವಿರದಿಂದ ರೂ.18 ಸಾವಿರ ವರೆಗೆ ಆದಾಯ ಗಳಿಸಬಹುದು ಎಂದು ಹೇಳಿದ್ದಾರೆ.

ಇನ್ನೂ ಕೆಲವೇ ತಿಂಗಳುಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಫೆಬ್ರವರಿ 1) ಲೋಕಸಭೆಯಲ್ಲಿ ಮಧ್ಯಂತರ ಬಜೆಟ್ ಅನ್ನು ಮಂಡಿಸಿದರು. “ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಮುಂದಿನ 5 ವರ್ಷಗಳಲ್ಲಿ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಮತ್ತು ಮುಂದಿನ 5 ವರ್ಷಗಳು ಅಭಿವೃದ್ಧಿಗಾಗಿ” ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಬಜೆಟ್‌ನ ಮುಖ್ಯಾಂಶಗಳು:
ಮುಂದಿನ 5 ವರ್ಷಗಳಲ್ಲಿ 2 ಕೋಟಿ ಮನೆಗಳನ್ನು ನಿರ್ಮಿಸಲಾಗುವುದು.
ಮನೆಯ ಮೇಲ್ಛಾವಣಿ ಮೇಲಿನ ಸೌರಶಕ್ತಿ ಫಲಕಗಳನ್ನು ಅಳವಡಿಸಿಕೊಂಡ 1 ಕೋಟಿ ಮನೆಗಳಿಗೆ ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು.
ದೇಶಾದ್ಯಂತ ವೈದ್ಯಕೀಯ ಕಾಲೇಜುಗಳ ಸಂಖ್ಯೆಯನ್ನು ಹೆಚ್ಚಿಸಲು ವಿಶೇಷ ಸಮಿತಿಯನ್ನು ರಚಿಸಲಾಗುವುದು.
ಪೌಷ್ಟಿಕಾಂಶದ ಕೊರತೆಯನ್ನು ಸರಿಪಡಿಸಲು ಹೊಸ ಆ್ಯಪ್‌ ಪರಿಚಯಿಸಲಾಗುವುದು.
ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು 9 ರಿಂದ 18 ವರ್ಷದೊಳಗಿನ ಬಾಲಕಿಯರಿಗೆ ಲಸಿಕೆ ಕಾರ್ಯಕ್ರಮವನ್ನು ಪರಿಚಯಿಸಲಾಗುವುದು.

1 ಲಕ್ಷ ಕೋಟಿ ರೂ:
ಸಂಶೋಧನೆ ಮತ್ತು ನಾವೀನ್ಯತೆ ಯೋಜನೆಗಳನ್ನು ಉತ್ತೇಜಿಸಲು 1 ಲಕ್ಷ ಕೋಟಿ ರೂಪಾಯಿಗಳ ನಿಧಿಯನ್ನು ವಿನಿಯೋಗಿಸಲಾಗುವುದು.
ಮೀನುಗಾರಿಕೆ ಕ್ಷೇತ್ರದಲ್ಲಿ 55 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗುವುದು.
ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ವಿಮಾ ಯೋಜನೆ ವಿಸ್ತರಿಸಲಾಗುವುದು.
ದೇಶಾದ್ಯಂತ 41 ಸಾವಿರ ಕೋಚ್‌ಗಳನ್ನು ವಂದೇ ಭಾರತ್ ರೈಲು ಗುಣಮಟ್ಟಕ್ಕೆ ಮೇಲ್ದರ್ಜೆಗೇರಿಸಲಾಗುವುದು.
ಸರಕು ರೈಲು ಸಂಚಾರಕ್ಕಾಗಿ ಪ್ರತ್ಯೇಕವಾಗಿ ಲೈನ್‌ಗಳನ್ನು ನಿರ್ವಹಿಸಲಾಗುವುದು.
ಮೆಟ್ರೊ ರೈಲು ಯೋಜನೆಗಳನ್ನು ಇನ್ನಷ್ಟು ನಗರಗಳಿಗೆ ವಿಸ್ತರಿಸಲಾಗುವುದು.

ಪ್ರವಾಸೋದ್ಯಮ:
ದೇಶದ ವಿಮಾನಯಾನ ಸಂಸ್ಥೆಗಳು 1000 ಹೊಸ ವಿಮಾನಗಳನ್ನು ಖರೀದಿಸಲು ಯೋಜಿಸುತ್ತಿವೆ.
ಉಡಾನ್ ಯೋಜನೆಯಡಿಯಲ್ಲಿ 517 ಹೊಸ ಮಾರ್ಗಗಳಲ್ಲಿ ಕಡಿಮೆ ದರದ ವಿಮಾನಯಾನ ಸೇವೆಯನ್ನು ಪ್ರಾರಂಭಿಸಲು ಯೋಜಿಸಲಾಗಿದೆ.
ಲಕ್ಷದ್ವೀಪವನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿ ಮಾಡಲು ಕ್ರಮಕೈಗೊಳ್ಳಲಾಗುವುದು.
ಪ್ರವಾಸೋದ್ಯಮವನ್ನು ಉತ್ತೇಜಿಸಲು ಬಡ್ಡಿ ರಹಿತ ಸಾಲ ಯೋಜನೆ ಜಾರಿಗೊಳಿಸಲಾಗುವುದು.
ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ವಿವಿಧ ಯೋಜನೆಗಳನ್ನು ಪರಿಚಯಿಸಲಾಗುವುದು.

ವಿತ್ತೀಯ ಕೊರತೆ:
2023-24ರ ಪರಿಷ್ಕೃತ ಅಂದಾಜಿನ ಪ್ರಕಾರ ಸರ್ಕಾರದ ವೆಚ್ಚ 40.90 ಲಕ್ಷ ಕೋಟಿ ರೂಪಾಯಿಗಳು.
2024-2025ರಲ್ಲಿ ದೇಶದ ವಿತ್ತೀಯ ಕೊರತೆ 5.1 ರೊಳಗೆ ನಿಯಂತ್ರಿಸಲಾಗುವುದು.
2025-26 ರ ವೇಳೆಗೆ ವಿತ್ತೀಯ ಕೊರತೆಯನ್ನು ಶೇಕಡಾ 4.5 ಕ್ಕಿಂತ ಕಡಿಮೆ ಮಾಡಲು ಯೋಜಿಸಲಾಗುವುದು.
10 ವರ್ಷಗಳಲ್ಲಿ ತೆರಿಗೆದಾರರ ಸಂಖ್ಯೆ 2.4 ಪಟ್ಟು ಹೆಚ್ಚಾಗಿದೆ.

ರಕ್ಷಣಾ ಇಲಾಖೆ:
ರಕ್ಷಣಾ ವಲಯದಲ್ಲಿನ ಹೂಡಿಕೆಯನ್ನು ಶೇ 11.1ರಷ್ಟು ಹೆಚ್ಚಿಸಿ 11,11,111 ಕೋಟಿ ರೂ.ಗೆ ಹೆಚ್ಚಿಸಲಾಗುವುದು.
ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆ ಒಟ್ಟು ದೇಶೀಯ ಬೆಳವಣಿಗೆಯಾದ ಜಿಡಿಪಿಯ ಶೇ.3.4%ರಷ್ಟು ಇರುತ್ತದೆ.

ದೇಶ

ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿಯಾಗಿದ್ದ ಹೇಮಂತ್ ಸೊರನ್ ಅವರನ್ನು ನಿನ್ನೆ ರಾತ್ರಿ ಜಾರಿ ನಿರ್ದೇಶನಾಲಯ ಬಂಧಿಸಿದೆ. ಏಳು ಗಂಟೆಗಳ ವಿಚಾರಣೆ ಬಳಿಕ ಅವರನ್ನು ಬಂಧಿಸಲಾಗಿದೆ. ಇಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಈ ಹಿನ್ನಲೆಯಲ್ಲಿ, ಜಾರಿ ಇಲಾಖೆಯ ಕ್ರಮದ ವಿರುದ್ಧ ರಾಜ್ಯ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಕಳೆದ ರಾತ್ರಿ ಬಂಧನವಾದ ನಂತರ, ಅವರು ತಮ್ಮ ‘ಎಕ್ಸ್’ ಸೈಟ್‌ನಲ್ಲಿ ಪೋಸ್ಟ್ ಮಾಡಿರುವ ಸಂದೇಶದಲ್ಲಿ, “ಇದೊಂದು ವಿರಾಮ. ಜೀವನವು ಒಂದು ದೊಡ್ಡ ಯುದ್ಧವಾಗಿದೆ. ನಾನು ಪ್ರತಿ ಕ್ಷಣವೂ ಹೋರಾಡಿದೆ; ಪ್ರತಿ ಕ್ಷಣವೂ ಹೋರಾಡುತ್ತೇನೆ. ಆದರೆ, ನಾನು ರಾಜಿ ಮಾಡಿಕೊಳ್ಳಲು ಮಂಡಿಯೂರುವುದಿಲ್ಲ” ಎಂದು ಹೇಳಿದ್ದಾರೆ.

“ಸೋಲು ಅಥವಾ ಗೆಲವು ನಾನು ಯಾವುದಕ್ಕೂ ಹೆದರುವುದಿಲ್ಲ; ನಾನು ಸೋಲನ್ನು ಒಪ್ಪಿಕೊಳ್ಳುವುದಿಲ್ಲ” ಎಂದು ಹೇಮಂತ್ ಸೋರೆನ್ ಹೇಳಿದ್ದಾರೆ.

ದೇಶ

ದೆಹಲಿ: ಕಳೆದ ವರ್ಷ ಡಿಸಂಬರ್ 13 ರಂದು ಸಂಸತ್ತಿನ ಲೋಕಸಭೆಯ ಸಭಾಂಗಣದಲ್ಲಿ ಇಬ್ಬರು ವ್ಯಕ್ತಿಗಳು ಇದ್ದಕ್ಕಿದ್ದಂತೆ ಸಂಸದರು ಕುಳಿತುಕೊಳ್ಳುವ ಸ್ಥಳಕ್ಕೆ ಜಿಗಿದು ಬಣ್ಣದ ಹೊಗೆ ಬಾಂಬ್ ಸಿಡಿಸಿದ್ದು ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು. ಇದರಿಂದಾಗಿ ಇಡೀ ಲೋಕಸಭೆಯ ಸಭಾಂಗಣ ಹೊಗೆ ವಲಯದಂತಿತ್ತು. ಆಗ ಸಂಸದರು ಲೋಕಸಭೆಯ ಭದ್ರತಾ ಸಿಬ್ಬಂದಿಯೊಂದಿಗೆ ಸೇರಿ ಅವರನ್ನು ಅಡ್ಡಗಟ್ಟಿ ಹಿಡಿದರು. ಇದೇ ವೇಳೆ ಮತ್ತಿಬ್ಬರು ಕೂಡ ಇದೇ ರೀತಿಯಲ್ಲಿ ಸಂಸತ್ ಆವರಣದ ಮೇಲೆ ದಾಳಿ ನಡೆಸಿದ್ದರು.

ಈ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಸದರಿ ಪ್ರಕರಣದಲ್ಲಿ ಇನ್ನಿಬ್ಬರನ್ನೂ ಬಂಧಿಸಲಾಗಿತ್ತು. ದೆಹಲಿ ಪೊಲೀಸರು ಉಪಾ (ಯುಪಿಎ) ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಬಂಧಿತರೆಲ್ಲರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಅವರನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಹಾರ್ದಿಕ್ ಕೌರ್ ಮುಂದೆ ಇಂದು ಹಾಜರುಪಡಿಸಲಾಯಿತು. ಬಂಧಿತರಲ್ಲಿ ಐವರು (6ನೇ ಆರೋಪಿ ನೀಲಂ ಆಜಾದ್ ಹೊರತುಪಡಿಸಿ) ಮನೋರಂಜನ್, ಸಾಗರ್ ಶರ್ಮಾ, ಲಲಿತ್ ಝಾ, ಅಮೋಲ್ ಶಿಂಧೆ, ಮಹೇಶ್ ಕ್ವಾಟ್ ಮುಂತಾದವರು “ನಮ್ಮಿಂದ 70 ಖಾಲಿ ಪೇಪರ್‌ಗಳಿಗೆ ಬಲವಂತವಾಗಿ ಸಹಿ ಪಡೆಯಲಾಗಿದ್ದು, ವಿರೋಧ ಪಕ್ಷಗಳೊಂದಿಗೆ ಸಂಪರ್ಕವಿದೆ ಎಂದು ಒಪ್ಪಿಕೊಳ್ಳುವಂತೆ ಪೊಲೀಸರು ತಮಗೆ ಚಿತ್ರಹಿಂಸೆ ನೀಡಿದ್ದಾರೆ” ಎಂದು ಹೇಳಿದ್ದಾರೆ.

ಈ ಬಗ್ಗೆ ಪೊಲೀಸರು ಉತ್ತರ ನೀಡುವಂತೆ ಕೋರಿದ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 17ಕ್ಕೆ ಮುಂದೂಡಿದ್ದಾರೆ.

ದೇಶ

ತಿರುವನಂತಪುರಂ: ಕೇರಳದಲ್ಲಿ ಮಾರ್ಕ್ಸಿಸ್ಟ್ ಕಮ್ಯುನಿಸ್ಟ್ ಮತ್ತು  ಇಂಡಿಯಾ ಕಮ್ಯುನಿಸ್ಟ್ ನೇತೃತ್ವದ ಎಡಪಂಥೀಯ ಸಮ್ಮಿಶ್ರ ಸರ್ಕಾರ ನಡೆಯುತ್ತಿದೆ. ಪಿಣರಾಯಿ ವಿಜಯನ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ.

ಏತನ್ಮಧ್ಯೆ, ಕೇರಳ ಸರ್ಕಾರ ಮತ್ತು ರಾಜ್ಯ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ವಿವಿಧ ವಿಷಯಗಳಲ್ಲಿ ದೀರ್ಘಕಾಲದಿಂದ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಕೇರಳ ವಿಧಾನಸಭೆಯ ಇತ್ತೀಚಿನ ಅಧಿವೇಶನದಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ರಾಜ್ಯ ಸರ್ಕಾರದ ನೀತಿಗಳನ್ನು ಓದುವ ಬದಲು ಭಾಷಣದ ಕೊನೆಯ ಪ್ಯಾರಾವನ್ನು ಮಾತ್ರ ಓದಿ ವಿಧಾನಸಭೆಯಿಂದ ಹೊರನಡೆದರು. ಈ ಘಟನೆ ರಾಜ್ಯ ರಾಜಕಾರಣದಲ್ಲಿ ಭಾರೀ ಆಘಾತವನ್ನುಂಟು ಮಾಡಿತ್ತು.

ಈ ವೇಳೆ, ಕೊಲ್ಲಂ ಜಿಲ್ಲೆಯ ಕೊಟ್ಟಾರಕ್ಕರ ಪ್ರದೇಶದಲ್ಲಿ ನಡೆಯಲಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಇಂದು ಮಧ್ಯಾಹ್ನ ಕಾರಿನಲ್ಲಿ ತೆರಳುತ್ತಿದ್ದರು. ಆದರೆ, ಕೊಟ್ಟಾರಕ್ಕರದಲ್ಲಿ ನಡೆಯಲಿದ್ದ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಭಾಗವಹಿಸುವುದನ್ನು ವಿರೋಧಿಸಿ ಆಡಳಿತಾರೂಢ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್‌ ಪಕ್ಷದ ವಿದ್ಯಾರ್ಥಿ ಘಟಕವಾದ ಭಾರತೀಯ ವಿದ್ಯಾರ್ಥಿ ಫೆಡರೇಷನ್‌ (ಎಸ್‌ಐಎಫ್‌) ಪ್ರತಿಭಟನೆ ನಡೆಸಿತು.

ನಿಲಮ್ಮಲ್ ಪ್ರದೇಶದಲ್ಲಿ ರಾಜ್ಯಪಾಲರ ಕಾರು ಸಾಗುತ್ತಿದ್ದಂತೆ ರಸ್ತೆಯ ಇಕ್ಕೆಲಗಳಲ್ಲಿ ಜಮಾಯಿಸಿದ ಎಸ್ಐಎಫ್ ಕಾರ್ಯಕರ್ತರು ರಾಜ್ಯಪಾಲರ ಆಗಮನದ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದರಿಂದ ಕೆರಳಿದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ತಮ್ಮ ಕಾರಿನಿಂದ ಇಳಿದು ರಸ್ತೆಯಲ್ಲಿ ನಡೆದರು.

ಜನನಿಬಿಡ ಎಂಸಿ ರಸ್ತೆಯಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಕಾರಿನಿಂದ ಇಳಿದು ಪ್ರತಿಭಟನಾಕಾರರ ಕಡೆಗೆ ಹೋದರು. ಈ ವೇಳೆ ರಸ್ತೆ ಬದಿ ಜಮಾಯಿಸಿದ್ದ ಪ್ರತಿಭಟನಾಕಾರರು ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದರಿಂದ ಕೆರಳಿದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ರಸ್ತೆ ಬದಿಯ ಟೀ ಅಂಗಡಿಗೆ ತೆರಳಿ ಆಸನದಲ್ಲಿ ಕುಳಿತು ಧರಣಿ ನಡೆಸಿದರು. ಭದ್ರತಾ ಕರ್ತವ್ಯದಲ್ಲಿದ್ದ ಪೊಲೀಸರ ವಿರದ್ದವೂ ವಾಗ್ದಾಳಿ ನಡೆಸಿದರು.

ಅಲ್ಲದೆ, ಪ್ರತಿಭಟನೆಯಲ್ಲಿ ತೊಡಗಿದ್ದವರಿಗೆ ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ ಎಂದು ರಾಜ್ಯಪಾಲರು ಆರೋಪಿಸಿದರು. ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಿಸಿ ಸಾಕ್ಷ್ಯ ಒದಗಿಸದ ಹೊರತು ಇಲ್ಲಿಂದ ಕದಲುವುದಿಲ್ಲ ಎಂದು ಎಚ್ಚರಿಸಿದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲು ಉತ್ತೇಜಿಸುತ್ತಿದ್ದಾರೆ ಎಂದು ಆರೋಪಿಸಿದ ರಾಜ್ಯಪಾಲರು, ಉನ್ನತ ಪೊಲೀಸ್ ಅಧಿಕಾರಿಯನ್ನು ಸಂಪರ್ಕಿಸಿ ಅಥವಾ ಪ್ರಧಾನ ಮಂತ್ರಿ ಕಚೇರಿಗೆ ಕರೆ ಮಾಡಿ ಎಂದು ಸಹಾಯಕರಿಗೆ ಸೂಚಿಸಿದರು.

ತರುವಾಯ, ರಾಜ್ಯಪಾಲರು ಧರಣಿ ಕುಳಿತ ಪ್ರದೇಶಕ್ಕೆ ದೌಡಾಯಿಸಿದ ಉನ್ನತ ಪೊಲೀಸ್ ಅಧಿಕಾರಿಗಳು, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ 17 ಎಸ್ಐಎಫ್ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಿದ ದಾಖಲೆಗಳನ್ನು ಅವರಿಗೆ ನೀಡಿದರು. ಇದರ ನಂತರ, ಟೀ ಅಂಗಡಿಯಲ್ಲಿ 2 ಗಂಟೆಗಳ ಕಾಲ ಧರಣಿ ಕುಳಿತ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಧರಣಿ ಮುಗಿಸಿ ಕೊಟ್ಟಾರಕ್ಕರೆಗೆ ತೆರಳಿದರು.

ಈ ಘಟನೆ ಕೇರಳದಲ್ಲಿ ಸಂಚಲನ ಮೂಡಿಸಿರುವ ಹಿನ್ನೆಲೆಯಲ್ಲಿ, ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿಯೊಂದಿಗೆ ಝಡ್ ಪ್ಲಸ್ ಭದ್ರತೆ ನೀಡುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ.

ದೇಶ

ನವದೆಹಲಿ: ಆಮ್ ಆದ್ಮಿ ಶಾಸಕರನ್ನು ಖರೀದಿಸಲು ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಈ ಬಗ್ಗೆ ಕೇಜ್ರಿವಾಲ್ ಅವರು ತಮ್ಮ ‘ಎಕ್ಸ್’ ಸೈಟ್ ನಲ್ಲಿ ನೀಡಿರುವ ಹೇಳಿಕೆಯಲ್ಲಿ, “ಕಳೆದ 9 ವರ್ಷಗಳಿಂದ ಆಮ್ ಆದ್ಮಿ ಸರ್ಕಾರವನ್ನು ಉರುಳಿಸಲು ಬಿಜೆಪಿ ತೀವ್ರ ಪ್ರಯತ್ನ ನಡೆಸುತ್ತಿದೆ. ಬಿಜೆಪಿಯ ಪ್ರಯತ್ನ ಯಶಸ್ವಿಯಾಗಲಿಲ್ಲ. ಆಮ್ ಆದ್ಮಿ ಶಾಸಕರನ್ನು ಖರೀದಿಸಲು ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು 7 ಶಾಸಕರಿಗೆ ಬಿಜೆಪಿ 25 ಕೋಟಿ ರೂ.ವರೆಗೆ ಮಾತುಕತೆ ನಡೆಸಿದೆ. 21 ಶಾಸಕರ ಜತೆ ಮಾತುಕತೆ ನಡೆಸಲಾಗಿದೆ.

ದೇವರು ಮತ್ತು ಜನರ ಬೆಂಬಲ ಯಾವಾಗಲೂ ನಮ್ಮ ಮೇಲಿದೆ. ನಮ್ಮ ಎಲ್ಲಾ ಶಾಸಕರು ಒಟ್ಟಿಗೆ ಇದ್ದಾರೆ. ಆಮ್ ಆದ್ಮಿ ಸರ್ಕಾರ ಎಷ್ಟು ಒಳ್ಳೆಯ ಕೆಲಸ ಮಾಡಿದೆ ಎಂಬುದು ದೆಹಲಿಯ ಜನರಿಗೆ ಗೊತ್ತಿದೆ. ದೆಹಲಿಯ ಜನರು ಆಮ್ ಆದ್ಮಿ ಪಕ್ಷವನ್ನು ತುಂಬಾ ಪ್ರೀತಿಸುತ್ತಾರೆ.

ಹಾಗಾಗಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವನ್ನು ಸೋಲಿಸುವ ಬಿಜೆಪಿಯ ಪ್ರಯತ್ನ ಯಶಸ್ವಿಯಾಗುವುದಿಲ್ಲ. ಬಿಜೆಪಿಯವರು ನನ್ನನ್ನು ಬಂಧಿಸಿ ಸುಳ್ಳು ಮೊಕದ್ದಮೆ ಹೂಡಿ ಸರ್ಕಾರವನ್ನು ಉರುಳಿಸಲು ಬಯಸುತ್ತಿದ್ದಾರೆ” ಎಂದು ಕೇಜ್ರಿವಾಲ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದೇಶ

ಮಧ್ಯಪ್ರದೇಶದ ಭೋಪಾಲ್ ಮೂಲದ ಮಹಿಳೆಯೊಬ್ಬರು ಮದುವೆಯಾದ ಐದೇ ತಿಂಗಳಲ್ಲಿ ಪತಿಯಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಈ ದಂಪತಿಗಳಿಗೆ ಮದುವೆಯಾಗಿತ್ತು. ಆ ವ್ಯಕ್ತಿ ಐಟಿ ವಲಯದಲ್ಲಿ ಕೆಲಸ ಮಾಡುತ್ತಿದ್ದು ಉತ್ತಮ ಆದಾಯ ಗಳಿಸುತ್ತಿದ್ದಾರೆ. ಹಾಗೆಯೇ ಮಹಿಳೆಯೂ ಕೆಲಸಕ್ಕೆ ಹೋಗುತ್ತಿದ್ದಾರೆ; ಅವರಿಗೂ  ಒಳ್ಳೆಯ ಸಂಬಳ ಇದೆ. ಮೊದಲು ಅವರು ತಮ್ಮ ಹನಿಮೂನ್‌ಗಾಗಿ ವಿದೇಶಕ್ಕೆ ಹೋಗಲು ಯೋಜಿಸಿದ್ದರು. ಒಳ್ಳೆಯ ಸಂಬಳ ಪಡೆಯುತ್ತಿದ್ದರಿಂದ ಇಬ್ಬರಿಗೂ ಹನಿಮೂನ್‌ಗೆ ವಿದೇಶಕ್ಕೆ ಹೋಗುವುದು ದೊಡ್ದ ಸಮಸ್ಯೆ ಆಗಿರಲಿಲ್ಲ.

ತಮ್ಮ ಹನಿಮೂನ್ ಯೋಜನೆ ಬಗ್ಗೆ ಮಾತನಾಡಿದ ಮಹಿಳೆ, “ನನ್ನ ಪತಿ ತನ್ನ ಹೆತ್ತವರನ್ನು ನೋಡಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಹನಿಮೂನ್‌ಗೆ ವಿದೇಶಕ್ಕೆ ಹೋಗುವ ಆಲೋಚನೆಯನ್ನು ತಿರಸ್ಕರಿಸಿದರು. ದೇಶೀಯವಾಗಿ ಹನಿಮೂನ್‌ಗೆ ಹೋಗೋಣ” ಎಂದು ಹೇಳಿದರು. ಇದರ ನಂತರ, ದಂಪತಿಗಳು ಅಂತಿಮವಾಗಿ ಗೋವಾ ಮತ್ತು ದಕ್ಷಿಣ ಭಾರತಕ್ಕೆ ಭೇಟಿ ನೀಡಲು ನಿರ್ಧರಿಸಿದರು.

ಆದರೆ ಅವರ ಪತಿ, ರಾಮಮಂದಿರ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕಾಗಿ ಅಯೋಧ್ಯೆಗೆ ಹೋಗಬೇಕೆಂದು ಅವರ ತಾಯಿ ಬಯಸಿದ್ದರಿಂದ ಅಯೋಧ್ಯೆ ಮತ್ತು ವಾರಣಾಸಿಗೆ ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದಾರೆ. ಆದರೆ ಅವರು ತನ್ನ ಹೆಂಡತಿಗೆ ಇದನ್ನು ಹೇಳದೇ ಪ್ರವಾಸಕ್ಕೆ ಒಂದು ದಿನ ಮೊದಲು ಮಾಹಿತಿ ನೀಡಿದ್ದಾರೆ. ಉದ್ಘಾಟನಾ ಸಮಾರಂಭಕ್ಕೂ ಮುನ್ನ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಬೇಕೆಂದು ತಾಯಿಯ ಇಚ್ಛೆಯಂತೆ ಪ್ರವಾಸವನ್ನು ಯೋಜಿಸಿದ್ದಾಗಿ ಪತಿ ವಿವರಿಸಿದ್ದಾರೆ.

ನಂಬಿ ಮೋಸಗೊಳಿಸಿದ್ದಾರೆ ಎಂದು ಆಘಾತಗೊಂಡ ಮಹಿಳೆ ಅದನ್ನು ಬಹಿರಂಗಪಡಿಸದೆ, ಅಯೋಧ್ಯೆಗೆ ಹೋಗಲು ಯಾವುದೇ ವಿರೋಧ ವ್ಯಕ್ತಪಡಿಸದೇ ಅಯೋಧ್ಯೆ ಮತ್ತು ವಾರಣಾಸಿಗೆ ಭೇಟಿ ನೀಡಿ ಬಂದಿದ್ದಾರೆ. ಹಿಂತಿರುಗಿ ಬಂದು ಸುಮಾರು 10 ದಿನಗಳ ನಂತರ, ಜನವರಿ 19 ರಂದು ಮಹಿಳೆ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

“ಮದುವೆಗೆ ಮೊದಲಿನಿಂದಲೂ ಪತಿ ತನಗಿಂತ ಅವರ ಕುಟುಂಬ ಸದಸ್ಯರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ. ದಂಪತಿಗೆ ಈಗ ಭೋಪಾಲ್ ಕೌಟುಂಬಿಕ ನ್ಯಾಯಾಲಯವು ಆಲೋಚನೆ ಪಡೆಯಲು ಸಮಯ ನೀಡಿದೆ.

ಎರಡು ವಿಭಿನ್ನ ಜೀವನ ಪರಿಸರದಲ್ಲಿ ಬದುಕುತ್ತಿರುವ ಇಬ್ಬರು ವ್ಯಕ್ತಿಗಳು ಪತಿ-ಪತ್ನಿಯಾಗಿ ಒಟ್ಟಿಗೆ ಪ್ರಯಾಣಿಸಲು ಪ್ರಾರಂಭಿಸಿದಾಗ, ಅವರು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಾರೆ. ಪತಿಯಾದವರು ತಮ್ಮ ಕುಟುಂಬದ ಆದ್ಯತೆ ಹಾಗೂ ಪತ್ನಿಯ ಮನಸ್ಸನ್ನು ಅರಿತು ಜೀವನ ನಡೆಸಬೇಕು. ಅದೇ ರೀತಿ ಪತ್ನಿಯಾದವಳು ತಮ್ಮ ಪ್ರಾಶಸ್ತ್ಯಗಳನ್ನು ಬಿಟ್ಟುಕೊಡದೆ ಅರ್ಥ ಮಾಡಿಕೊಂಡು ನಡೆಯಬೇಕು. ಕೌಟುಂಬಿಕ ಸಂಬಂಧ ಸುಗಮವಾಗಿ ಸಾಗಲು ಇಬ್ಬರ ಸಹಕಾರವೂ ಮುಖ್ಯವಾಗಿದೆ. ತಾನು ಯಾವ ಸ್ಥಳದಲ್ಲಿ ತನ್ನ ಸಂಗಾತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ವಿಫಲರಾಗುತ್ತೇವೆ ಎಂಬುದನ್ನು ಇಬ್ಬರೂ ವಾಸ್ತವಿಕ ನೆಲೆಗಟ್ಟಿನಿಂದ ಯೋಚಿಸಿ ಜೀವನವನ್ನು ಸಾಗಿಸಿದರೆ ಸಮಸ್ಯೆಗಳಿದ್ದರೂ ಈ ರೀತಿ ವಿಚ್ಛೇದನಕ್ಕೆ ಕಾರಣವಾಗುವುದಿಲ್ಲ.

ದೇಶ

“ಸಾರ್ವಜನಿಕವಾಗಿ ಕಟ್ಟಿಹಾಕಿ ಪೊಲೀಸರಿಂದ ಥಳಿಸುವುದು ಯಾವ ರೀತಿಯ ದಬ್ಬಾಳಿಕೆ?, ಕಟ್ಟಿಹಾಕಿ ಹೊಡೆಯಲು ನಿಮಗೆ ಕಾನೂನು ಅಧಿಕಾರವಿದೆಯೇ?” ಎಂದು ಸುಪ್ರೀಂ ಕೋರ್ಟ್ ಪ್ರಶ್ನೆ?

ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅಲ್ಪಸಂಖ್ಯಾತರ ಮೇಲೆ ಪ್ರತಿದಿನ ದಾಳಿಗಳು ನಡೆಯುತ್ತಿವೆ. ಸಿಎಎ (CAA) ಹಾಗೆ ಕಠಿಣ ಕಾನೂನುಗಳನ್ನು ತರುವ ಮೂಲಕ ಅಲ್ಪಸಂಖ್ಯಾತರನ್ನು ಭಾರತದಿಂದ ಪ್ರತ್ಯೇಕಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಇದು ಒಂದೆಡೆಯಾದರೆ ಮತ್ತೊಂದು ಕಡೆ ಹಿಂದೂ ಗುಂಪುಗಳು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮೂಲಕ ಹಿಂಸಾಚಾರವನ್ನು ಅನಾವರಣಗೊಳಿಸುತ್ತಿವೆ.

ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಹೆಚ್ಚು ಧಾರ್ಮಿಕ ಸಂಘರ್ಷಗಳಿವೆ. ಆದರೆ ಈಗ ಬಿಜೆಪಿಯೇತರ ರಾಜ್ಯಗಳಲ್ಲಿ ಕೂಡ ಧಾರ್ಮಿಕ ಸಂಘರ್ಷಗಳು ನಡೆಯುತ್ತಿವೆ. ಆ ಮೂಲಕ ರಾಜ್ಯದಲ್ಲಿ ಬಿಜೆಪಿ ಸುದೀರ್ಘ ಕಾಲ ಆಡಳಿತ ನಡೆಸುತ್ತಿರುವ ಹಾಗೂ ಮೋದಿ ಅವರ ತವರು ರಾಜ್ಯವಾದ ಗುಜರಾತ್‌ನಲ್ಲಿ, ಕಳೆದ ವರ್ಷ ನಡೆದ ಕ್ರೂರ ಘಟನೆಗೆ ಸಂಬಂಧಿಸಿದಂತೆ ತೀರ್ಪೊಂದು ಇದೀಗ ಹೊರಬಿದ್ದಿದೆ.

ಅಕ್ಟೋಬರ್ 2022ರಲ್ಲಿ, ಗುಜರಾತ್‌ನ ಖೇಡಾ ಜಿಲ್ಲೆಯ ಉಂಡೆಲಾ ಗ್ರಾಮದಲ್ಲಿ ಮೂವರು ಯುವಕರು ಪೊಲೀಸರಿಗೆ ಸಿಕ್ಕಿಬಿದ್ದರು. ಕಾರ್ಯಕ್ರಮವೊಂದರಲ್ಲಿ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಿ ಮೂವರನ್ನು ಸಾರ್ವಜನಿಕವಾಗಿ ಕಂಬಕ್ಕೆ ಕಟ್ಟಿ ಅಮಾನುಷವಾಗಿ ಹಲ್ಲೆ ನಡೆಸಿದರು. ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾದಾಗ ಹಲವರು ಘಟನೆಯನ್ನು ಖಂಡಿಸಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಈ ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಈ ಪ್ರಕರಣದಲ್ಲಿ, ‘ಲಾಠಿಯಿಂದ ಹೊಡೆಯುವುದು ಹಿಂಸೆಯಾಗುವುದಿಲ್ಲ; ನಾವು ಬೇಷರತ್ತಾಗಿ ಕ್ಷಮೆಯಾಚಿಸುತ್ತೇವೆ’ ಎಂದು ಘಟನೆಯಲ್ಲಿ ಭಾಗಿಯಾದ ಪೊಲೀಸರು ನ್ಯಾಯಾಲಯಕ್ಕೆ ಹೇಳಿದ್ದು ವಿವಾದಕ್ಕೀಡಾಗಿತ್ತು.

ಈ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲಿ ಪೊಲೀಸರ ಅಪರಾಧ ಸಾಬೀತಾಗಿದ್ದು, ಕಳೆದ ವರ್ಷ (2023) ಅಕ್ಟೋಬರ್‌ನಲ್ಲಿ ತಪ್ಪಿತಸ್ಥರಾದ 4 ಪೊಲೀಸರಿಗೆ ಶಿಕ್ಷೆ ಪ್ರಕಟಿಸಲಾಗಿತ್ತು. ಅದರಂತೆ ಗುಜರಾತ್ ಹೈಕೋರ್ಟ್ ಅವರಿಗೆ 14 ದಿನಗಳ ಜೈಲು ಶಿಕ್ಷೆ ಮತ್ತು ರೂ.2,000 ದಂಡ ವಿಧಿಸಿ ತೀರ್ಪು ನೀಡಿತು.

ಆದರೆ ಗುಜರಾತ್ ನ್ಯಾಯಾಲಯದ ತೀರ್ಪಿನ ವಿರುದ್ಧ 4 ಮಂದಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ನಿನ್ನೆ ಸುಪ್ರೀಂ ಕೋರ್ಟ್ ಮತ್ತೊಮ್ಮೆ ಗುಜರಾತ್ ಪೊಲೀಸರನ್ನು ಪ್ರಶ್ನಿಸಿದೆ.

“ಸಾರ್ವಜನಿಕವಾಗಿ ಕಟ್ಟಿಹಾಕಿ ಪೊಲೀಸರಿಂದ ಥಳಿಸುವುದು ಯಾವ ರೀತಿಯ ದಬ್ಬಾಳಿಕೆ?, ಕಟ್ಟಿಹಾಕಿ ಹೊಡೆಯಲು ನಿಮಗೆ ಕಾನೂನು ಅಧಿಕಾರವಿದೆಯೇ?” ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಹಾಗೂ “ಜನರನ್ನು ಕಂಬಗಳಿಗೆ ಕಟ್ಟಿಹಾಕಿ, ಸಾರ್ವಜನಿಕವಾಗಿ ಹೊಡೆದು, ವಿಡಿಯೋ ತೆಗೆಯುವುದೆಲ್ಲ ಯಾವ ರೀತಿಯ ಹಿಂಸೆ? ಹಾಗಾಗಿ ಈ ಪ್ರಕರಣದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಬೇಕಾಗಿದೆ” ಎಂದು ಹೇಳಿ, ಸದರಿ ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ.

ದೇಶ

ಚೆನ್ನೈ: ಕಳೆದ 10 ವರ್ಷಗಳ ಬಿಜೆಪಿ ಸರ್ಕಾರದ ವೈಫಲ್ಯವನ್ನು ಮುಚ್ಚಿಡಲು ಅಯೋಧ್ಯೆಯಲ್ಲಿ ರಾಮನ ಅದ್ಧೂರಿ ಸಮಾರಂಭವನ್ನು ಯೋಜಿಸಲಾಗಿದೆ ಎಂದು ವಿಡುದಲೈ ಚಿರುತ್ತೈಗಳ್ (ಬಿಡುಗಡೆ ಚಿರುತೆಗಳು) ನಾಯಕ ತಿರುಮಾವಳವನ್ ಹೇಳಿದ್ದಾರೆ.

ವರ್ಣಾಶ್ರಮವನ್ನು ಸ್ಥಾಪಿಸಲು ಮೋದಿ ಹಾಗೂ ಅಮಿತ್ ಶಾ ಶ್ರಮಿಸುತ್ತಿದ್ದಾರೆ. ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಆರ್‌ಎಸ್‌ಎಸ್‌ ರವಿಯಾಗಿ ಕೆಲಸ ಮಾಡುತ್ತಿದ್ದಾರೆ. ಮೋದಿಯವರ 10 ವರ್ಷಗಳ ಆಡಳಿತ ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಾಯ ತಂದಿದೆ.

ಮೋದಿ ಆಡಳಿತ ವೈಫಲ್ಯದಿಂದ ಜನರ ಗಮನ ಬೇರೆಡೆ ಸೆಳೆಯಲು ಅಯೋಧ್ಯೆಯಲ್ಲಿ ಅದ್ಧೂರಿ ಸಮಾರಂಭ ನಡೆದಿದೆ. ಇಂಥವರ ಆಡಳಿತ ಮುಂದುವರಿದರೆ ಕೈಗಾರಿಕೋದ್ಯಮಿಗಳೇ ಬಲಗೊಳ್ಳಲು ಸಾಧ್ಯ. ಮೋದಿ ಆಡಳಿತವನ್ನು ತೊಡೆದುಹಾಕುವುದು ದೇಶದ ಪ್ರಮುಖ ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.

­—–

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿನ್ನೆ ಅದ್ಧೂರಿ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರು ರಾಮನ ಪ್ರತಿಮೆಯನ್ನು ಉದ್ಘಾಟಿಸಿದರು. ಈ ಸಮಾರಂಭದಲ್ಲಿ ಭಾರತದ ಪ್ರಮುಖ ರಾಜಕೀಯ ನಾಯಕರು, ಆಧ್ಯಾತ್ಮಿಕ ನಾಯಕರು, ಗಣ್ಯ ವ್ಯಕ್ತಿಗಳು, ಸಿನಿಮಾ ತಾರೆಯರು, ಕ್ರೀಡಾ ವ್ಯಕ್ತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸದಸ್ಯರು ಅಯೋಧ್ಯೆ ಉತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.

ಈ ಹಿನ್ನಲೆಯಲ್ಲಿ, ಅಯೋಧ್ಯೆ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮವನ್ನು ಚುನಾವಣಾ ರಾಜಕೀಯಕ್ಕಾಗಿ ಬಿಜೆಪಿ ಸರ್ಕಾರ ಬಳಸಿಕೊಂಡಿದೆ ಮತ್ತು ಅಯೋಧ್ಯೆ ಕಾರ್ಯಕ್ರಮವನ್ನು ಪ್ರಚಾರ ವೇದಿಕೆಯನ್ನಾಗಿ ಮಾಡಿದೆ ಎಂದು ದೇಶಾದ್ಯಂತ ವಿರೋಧ ಪಕ್ಷಗಳು ಟೀಕಿಸುತ್ತಿವೆ. ಈ ಹಿನ್ನಲೆಯಲ್ಲಿ, ಮುಸ್ಲಿಮರ ವಿರುದ್ಧ ದ್ವೇಷದ ರಾಜಕಾರಣ, ರಾಮನ ಹೆಸರಿನಲ್ಲಿ ಗೆಲುವು ಸಾಧಿಸಿದೆ ಎಂದು ತಿರುಮಾವಳವನ್ ಟೀಕಿಸಿದ್ದಾರೆ.

ಅಯೋಧ್ಯೆ ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಸಂಬಂಧಿಸಿದಂತೆ ವಿಡುದಲೈ ಚಿರುತ್ತೈಗಳ್ (ಲಿಬರೇಶನ್ ಟೈಗರ್ಸ್) ಪಕ್ಷದ ನಾಯಕ ಹಾಗೂ ಸಂಸದ ತೊಲ್.ತಿರುಮಾವಳವನ್ ಪ್ರಕಟಿಸಿದ ‘ಎಕ್ಸ್’ ಸೈಟ್ ಪೋಸ್ಟ್‌ನಲ್ಲಿ, “ಮುಸ್ಲಿಮರ ವಿರುದ್ಧ ದ್ವೇಷದ ರಾಜಕಾರಣ ರಾಮನ ಹೆಸರಿನಲ್ಲಿ ಗೆಲುವು ಸಾಧಿಸಿದೆ.

ರಾಮ ಎಂಬ ಕ್ಷತ್ರಿಯ ಗುರುತನ್ನು ಆಯುಧವಾಗಿ ಬಳಸಿ, ಮೋದಿ ಎಂಬ ವೈಶ್ಯರೊಂದಿಗೆ ಸೇರಿ, ಅಮಾಯಕ ಶೂದ್ರ ಹಿಂದೂಗಳನ್ನು ಹಿಮ್ಮೆಟ್ಟಿಸಿ, ಅವರನ್ನು ಬೀಳಿಸಿದ ಬ್ರಾಹ್ಮಣ ಸನಾತನಿಯರ ರಾಜಕೀಯ ಜೂಜಿನ ವಿಜಯೋತ್ಸವವೇ ಅಯೋಧ್ಯೆಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮ.

ಹಿಂದುತ್ವದ ಹೆಸರಿನಲ್ಲಿ, ಶೈವ ಧರ್ಮ ಸೇರಿದಂತೆ ಇತರ ಎಲ್ಲ ಹಿಂದೂ ಅಸ್ಮಿತೆಗಳನ್ನು ವೈಷ್ಣವೀಕರಣಗೊಳಿಸುವ ಷಡ್ಯಂತ್ರವನ್ನು ಪ್ರದರ್ಶಿಸಲಾಗಿದೆ. ಇದು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ವಿರುದ್ಧ ಮಾತ್ರವಲ್ಲದೆ ಇಡೀ ರಾಷ್ಟ್ರ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧವಾಗಿದೆ” ಎಂದು ಟೀಕಿಸಿದ್ದಾರೆ.

ದೇಶ

“ಜಮ್ಮು ಮತ್ತು ಕಾಶ್ಮೀರ ರಾಜ್ಯವು ಕೇಂದ್ರ ಸರ್ಕಾರದ ಅಧೀನದಲ್ಲಿದ್ದಾಗ, ಮೂಲಸೌಕರ್ಯ ಯೋಜನೆಗಳಲ್ಲಿ ಹಣಕಾಸಿನ ಅಕ್ರಮಗಳು ನಡೆದಿವೆ”

ಹಣಕಾಸು ವಿಚಾರ ಸಂಕಿರಣವೊಂದರಲ್ಲಿ ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಮಣ್ಯಂ ಅವರು ಸಾರ್ವಜನಿಕವಾಗಿ ವ್ಯಕ್ತಪಡಿಸಿರುವ ಅಭಿಪ್ರಾಯಗಳ ಕುರಿತು ಅಲ್ಜಜೀರಾ (alzazeera) ಸುದ್ದಿ ಸಂಸ್ಥೆ ವರದಿಯೊಂದನ್ನು ಪ್ರಕಟಿಸಿದೆ. ಅದರಲ್ಲಿ ಕಾಣಿಸಿಕೊಂಡಿರುವ ಮುಖ್ಯ ವಿಷಯಗಳ ಕುರಿತು ವಿವರವಾಗಿ ನೋಡೋಣ.

ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಕೇಂದ್ರ ಎಂದು ಕರೆಯಲ್ಪಡುವ ಸರ್ಕಾರೇತರ ಚಿಂತಕರ ಚಾವಡಿ ಆಯೋಜಿಸಿದ್ದ ಭಾರತದ ಆರ್ಥಿಕ ಪರಿಸ್ಥಿತಿ ಕುರಿತ ವಿಚಾರ ಸಂಕಿರಣದಲ್ಲಿ, ನೀತಿ ಆಯೋಗ್ ಸಿಇಒ ಬಿವಿಆರ್ ಸುಬ್ರಮಣ್ಯಂ ಅವರು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಅದರಲ್ಲಿ “ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ಸರಕಾರದ ಶೇ.50ರಷ್ಟು ತೆರಿಗೆ ರಾಜ್ಯ ಸರಕಾರಕ್ಕೆ ಬರಬೇಕೆಂಬ ಷರತ್ತು ಇತ್ತು” ಆದರೆ ಮೋದಿ ಪ್ರಧಾನಿಯಾದ ನಂತರ ಅವರ ಆಲೋಚನಾ ಕ್ರಮದಲ್ಲಿ ಬದಲಾವಣೆಯಾಗಿದೆ.

2014ರಲ್ಲಿ ಕೇಂದ್ರ ಸರ್ಕಾರದ ಶೇ.42ರಷ್ಟು ತೆರಿಗೆ ರಾಜ್ಯಗಳಿಗೆ ಸೇರಬೇಕು. ಆದರೆ ಅದನ್ನು ಶೇ.33ಕ್ಕೆ ಇಳಿಸುವಂತೆ ಪ್ರಧಾನಿ ಒತ್ತಾಯಿಸಿದರು. ಆದರೆ ಅಂದಿನ ನೀತಿ ಆಯೋಗದ ಅಧ್ಯಕ್ಷ ವೈ.ವಿ.ರೆಡ್ಡಿ ಇದಕ್ಕೆ ಒಪ್ಪಿರಲಿಲ್ಲ. ಇದನ್ನು ಅವರು ನಿರಾಕರಿಸಿದರು.

ನಾನು ಪ್ರಧಾನಿ ಕಾರ್ಯಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಮೂವರ ನಡುವೆ ನಡೆದ ಸಮಾಲೋಚನೆಯಲ್ಲಿ ಈ ಕುರಿತು ಚರ್ಚೆ ನಡೆದಿದೆ.

ಸರ್ಕಾರದ ಲೆಕ್ಕಪತ್ರಗಳು ಪಾರದರ್ಶಕವಾಗಿಲ್ಲದಿದ್ದರೆ ಅವುಗಳನ್ನು ಹಿಂಡನ್‌ಬರ್ಗ್‌ನಂತಹ ವರದಿಗಳ ಮೂಲಕ ಬಹಿರಂಗಪಡಿಸಬಹುದು. ಅಲ್ಲದೆ, ಜಮ್ಮು ಮತ್ತು ಕಾಶ್ಮೀರ ರಾಜ್ಯವು ಕೇಂದ್ರ ಸರ್ಕಾರದ ಅಧೀನದಲ್ಲಿದ್ದಾಗ, ಮೂಲಸೌಕರ್ಯ ಯೋಜನೆಗಳಲ್ಲಿ ಹಣಕಾಸಿನ ಅಕ್ರಮಗಳು ನಡೆದಿವೆ” ಎಂದು ಹೇಳಿದ್ದಾರೆ.

ಸರ್ಕಾರಿ ಅಧಿಕಾರಿಯೊಬ್ಬರ ಈ ಬಹಿರಂಗ ಹೇಳಿಕೆ ಹಲವು ಚರ್ಚೆಗಳನ್ನು ಮುನ್ನೆಲೆಗೆ ತಂದಿದೆ. ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಮಣ್ಯಂ ಅವರ ಈ ಮುಕ್ತ ಭಾಷಣವನ್ನು ಯೂಟ್ಯೂಬ್‌ನಿಂದ ತೆಗೆದುಹಾಕಲಾಗಿದೆ ಎಂದು ಅಲ್ಜಜೀರಾ (alzazeera) ವರದಿ ಮಾಡಿದೆ.