ದೇಶ Archives » Page 20 of 53 » Dynamic Leader
October 24, 2024
Home Archive by category ದೇಶ (Page 20)

ದೇಶ

ದೇಶ

ಹಿರಿಯ ನಾಯಕರೊಬ್ಬರು ನನ್ನ ಬಳಿಗೆ ಬಂದು, ‘ಪ್ರಧಾನಿಯಾಗಿ, ಮುಖ್ಯಮಂತ್ರಿಯಾಗಿ ಸಾಕಷ್ಟು ಸೇವೆ ಸಲ್ಲಿಸಿದ್ದೀರಿ; ಸ್ವಲ್ಪ ವಿಶ್ರಾಂತಿ ಪಡೆದುಕೊಳ್ಳಿ’ ಎಂದು ಕೇಳಿಕೊಂಡರು.

ಲೋಕಸಭೆ ಚುನಾವಣೆಗೆ ಎಲ್ಲ ಪಕ್ಷಗಳು ಬಹಳ ಗಂಭೀರವಾಗಿ ಸಿದ್ಧತೆಗಳನ್ನು ಮಾಡಿಕೊಂಡು ಬರುತ್ತಿವೆ. ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಮೂರನೇ ಅವಧಿಗೆ ಅಧಿಕಾರ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿವೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಪ್ರತಿ ಮಂಗಳವಾರದಂದು ಸಮಾಲೋಚನಾ ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಚುನಾವಣೆ ಗೆಲುವಿನ ತಂತ್ರಗಳನ್ನು ರೂಪಿಸಲು ಆರಂಭಿಸಿದ್ದಾರೆ.

ಈ ಸಮಾಲೋಚನಾ ಸಭೆಗಳಲ್ಲಿ ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ಭಾಗವಹಿಸಿ, ಮೊದಲ ಬಾರಿ ಮತ ಚಲಾಯಿಸಲಿರುವ ಹೊಸ ಮತದಾರರು, ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳು, ಹಿಂದುಳಿದ ವರ್ಗಗಳ ಮತದಾರರು, ಯುವಕರು ಮತ್ತು ಮಹಿಳೆಯರು ಹೀಗೆ ಪ್ರತಿಯೊಂದು ವಿಭಾಗವನ್ನು ಗುರಿಯಾಗಿಟ್ಟುಕೊಂಡು ಯೋಜನೆ ರೂಪಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೆಹಲಿಯ ಭಾರತ್ ಮಂಟಪದಲ್ಲಿ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆ ನಡೆಯಿತು.

ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, “ಮುಂದಿನ 100 ದಿನಗಳಲ್ಲಿ ನಾವೆಲ್ಲರೂ ಪ್ರತಿಯೊಬ್ಬ ಹೊಸ ಮತದಾರರನ್ನು, ಪ್ರತಿಯೊಬ್ಬ ಫಲಾನುಭವಿಯನ್ನು, ಪ್ರತಿ ಸಮುದಾಯವನ್ನು ತಲುಪಬೇಕಾಗಿದೆ. ಎಲ್ಲರ ವಿಶ್ವಾಸವನ್ನು ಗಳಿಸಬೇಕು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) 400 ಕ್ಷೇತ್ರಗಳಲ್ಲಿ ಗೆಲುವನ್ನು ಸಾದಿಸಲು ಶ್ರಮಿಸಬೇಕು. ಅದರಲ್ಲಿ ಬಿಜೆಪಿ 370 ಸ್ಥಾನಗಳಲ್ಲಿ ಗೆಲ್ಲಬೇಕು. ಇದು ಎಲ್ಲವನ್ನು ನಾನು ಮೂರನೇ ಬಾರಿಗೆ ಆಡಳಿತವನ್ನು ಆನಂದಿಸಲಿಕ್ಕಾಗಿ ಕೇಳುತ್ತಿಲ್ಲ. ನಾನು ಇನ್ನೂ ಈ ದೇಶಕ್ಕಾಗಿ ಕೆಲಸ ಮಾಡಲು ಬಯಸುತ್ತಿದ್ದೇನೆ.

ನನ್ನ ಮನೆಯ ಬಗ್ಗೆ ಮಾತ್ರ ಯೋಚಿಸಿದ್ದರೆ ಕೋಟಿಗಟ್ಟಲೆ ಜನರಿಗೆ ಮನೆ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ. 10 ವರ್ಷಗಳ ಸಮತೋಲಿನ ಆಡಳಿತ ಮತ್ತು 25 ಕೋಟಿ ಜನರನ್ನು ಬಡತನದಿಂದ ಮೇಲಕ್ಕೆತ್ತಿರುವುದು ದೊಡ್ಡ ಸಾಧನೆಯಾಗಿದೆ. ಹಿರಿಯ ನಾಯಕರೊಬ್ಬರು ನನ್ನ ಬಳಿಗೆ ಬಂದು, ‘ಪ್ರಧಾನಿಯಾಗಿ, ಮುಖ್ಯಮಂತ್ರಿಯಾಗಿ ಸಾಕಷ್ಟು ಸೇವೆ ಸಲ್ಲಿಸಿದ್ದೀರಿ; ಸ್ವಲ್ಪ ವಿಶ್ರಾಂತಿ ಪಡೆದುಕೊಳ್ಳಿ’ ಎಂದು ಕೇಳಿಕೊಂಡರು. ಆದರೆ ಈಗಲೂ ನಾನು ರಾಜನೀತಿಗಾಗಿ ಅಲ್ಲ ರಾಷ್ಟ್ರನೀತಿಗಾಗಿ ಕಾರ್ಯನಿರ್ವಹಿಸುತ್ತಿದ್ದೇನೆ” ಎಂದು ಹೇಳಿದ್ದಾರೆ.

ದೇಶ

ದೇಶಾದ್ಯಂತ ಇರುವ ಜೈಲುಗಳಲ್ಲಿ ಮಹಿಳಾ ಕೈದಿಗಳು ಗರ್ಭಧಾರಣೆ ಆಗುತ್ತಿರುವ ವಿಚಾರವನ್ನು ಸುಪ್ರೀಂಕೋರ್ಟ್ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲು ಮುಂದಾಗಿದೆ.

ಪಶ್ಚಿಮ ಬಂಗಾಳದ ಜೈಲುಗಳಲ್ಲಿ ಮಹಿಳಾ ಕೈದಿಗಳು ದೊಡ್ಡ ಪ್ರಮಾಣದಲ್ಲಿ ಗರ್ಭಧಾರಣೆ ಆಗುತ್ತಿರುವ ವಿಚಾರವನ್ನು ಪ್ರಶ್ನಿಸಿ ಕೊಲ್ಕತ್ತಾ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿವೆ. ಅದರಲ್ಲೂ ಪಶ್ಚಿಮ ಬಂಗಾಳದ ಹಲವು ಕಾರಾಗೃಹಗಳಲ್ಲಿ 196 ಮಕ್ಕಳು ಕಾರಾಗೃಹದಲ್ಲೇ ಹುಟ್ಟಿ ಅಲ್ಲೇ ಬಂಧನದಲ್ಲಿದ್ದಾರೆ. ಆದ್ದರಿಂದ ಮಹಿಳಾ ಕೈದಿಗಳಿರುವ ಜಾಗಕ್ಕೆ, ಪುರುಷ ಜೈಲು ಸಿಬ್ಬಂದಿಗಳ ಪ್ರವೇಶವನ್ನು ನಿಷೇಧಿಸಬೇಕು ಎಂದು ಮನವಿ ಮಾಡಲಾಗಿದೆ.

ಈ ವಿಷಯ ಭಾರೀ ಚರ್ಚೆಗೆ ಗ್ರಾಸವಾಗಿರುವಾಗಲೇ ಸುಪ್ರೀಂ ಕೋರ್ಟ್ ಈ ಬಗ್ಗೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ. ಇದರಲ್ಲಿ ದೇಶಾದ್ಯಂತ ಜೈಲುಗಳಲ್ಲಿರುವ ಮಹಿಳಾ ಕೈದಿಗಳ ಸ್ಥಿತಿಗತಿ ಸೇರಿದಂತೆ ನಾನಾ ವಿಷಯಗಳ ಕುರಿತು ವಿಚಾರಿಸಲಿದ್ದಾರೆ. ಈ ವಿಷಯದಲ್ಲಿ ನ್ಯಾಯಾಲಯಕ್ಕೆ ಸಹಾಯ ಮಾಡಲು ವಕೀಲರಾದ ಗೌರವ್ ಅಗರ್ವಾಲ್ ಮತ್ತು ಕೇಂದ್ರ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರನ್ನು ನೇಮಿಸಲಾಗಿದೆ.

ಅಲ್ಲದೆ ಈ ಗುಂಪಿನಲ್ಲಿ ಕೆಲವು ಮಹಿಳಾ ಜೈಲು ಪೊಲೀಸ್ ಅಧಿಕಾರಿಗಳನ್ನು ಸೇರಿಸಿ ಮುಂದೆ, ಯಾವ ರೀತಿಯ ಸುಧಾರಣೆಗಳನ್ನು ಮಾಡಬಹುದು ಎಂಬುದನ್ನು ಪರಿಶೀಲಿಸುವಂತೆ ಹಾಗೂ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳಿಂದ ಮಾಹಿತಿ ಸಂಗ್ರಹಿಸಿ ದಾಖಲಿಸುವಂತೆಯೂ ಆದೇಶ ನೀಡಿ ಪ್ರಕರಣದ ತನಿಖೆಯನ್ನು ಮುಂದೂಡಿದ್ದಾರೆ.

ದೇಶ

ಪಾಟ್ನಾ: ಬಿಹಾರದಲ್ಲಿ ನಡೆಯುತ್ತಿರುವ ‘ಭಾರತ ಜೋಡೋ ನ್ಯಾಯ ಯಾತ್ರೆ’ಯ ವೇಳೆ ರಾಹುಲ್ ಪ್ರಯಾಣಿಸುತ್ತಿದ್ದ ಜೀಪನ್ನು ರಾಷ್ಟ್ರೀಯ ಜನತಾ ದಳದ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಚಲಾಯಿಸಿದ್ದು ಎಲ್ಲರ ಗಮನ ಸೆಳೆಯಿತು.

ಮಣಿಪುರದಿಂದ ಮುಂಬೈ ವರೆಗೆ ಕಾಂಗ್ರೆಸ್ ಸಂಸದ ರಾಹುಲ್  ಗಾಂಧಿ ಎರಡನೇ ಹಂತದ ಭಾರತ ಜೋಡೋ ನ್ಯಾಯ ಯಾತ್ರೆಯನ್ನು ಕೈಗೊಂಡಿದ್ದಾರೆ. ಇದರ ಅಂಗವಾಗಿ ಯಾತ್ರೆ ಬಿಹಾರದ ಸಸಾರಂ ಪ್ರದೇಶವನ್ನು ಪ್ರವೇಶಿಸಿತು. ಆ ವೇಳೆ ರಾಹುಲ್ ಬಂದಿದ್ದ ಜೀಪನ್ನು ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಜನತಾದಳದ ನಾಯಕ ತೇಜಸ್ವಿ ಯಾದವ್ ಚಲಾಯಿಸಿಕೊಂಡು ಹೋದರು.

ಇದರ ಬೆನ್ನಲ್ಲೇ ಇಂದು ಸಂಜೆ ನಡೆಯುವ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ ಜೊತೆಗೆ ತೇಜಸ್ವಿ ಯಾದವ್ ವೇದಿಕೆ ಏರಲಿದ್ದಾರೆ. ಇದರ ನಂತರ, ಯಾತ್ರೆಯು ಉತ್ತರಪ್ರದೇಶವನ್ನು ಪ್ರವೇಶಿಸಲಿದೆ. ತೇಜಸ್ವಿ ಯಾದವ್ ಅವರು ರಾಹುಲ್ ಪ್ರಯಾಣಿಸುತ್ತಿದ್ದ ಜೀಪ್ ಅನ್ನು ಚಾಲನೆ ಮಾಡುತ್ತಿರುವ ಚಿತ್ರಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ.

ದೇಶ

ಚುನಾವಣಾ ಬಾಂಡ್ ಯೋಜನೆಯು ಸಮಾನತೆ, ನ್ಯಾಯಸಮ್ಮತತೆ ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ಉಲ್ಲಂಘಿಸಿದೆ. ಮತ್ತು ಸುಪ್ರೀಂ ಕೋರ್ಟ್‌ನ ತೀರ್ಪು ಚುನಾವಣೆಯಲ್ಲಿ ಪಾರದರ್ಶಕತೆ, ಮಾಹಿತಿ ಹಕ್ಕು ಮತ್ತು ಸಮಾನತೆ ಮುಂತಾದವುಗಳಿಗೆ ಸಿಕ್ಕಿದ ಜಯವಾಗಿದೆ.

ರಾಜಕೀಯ ಪಕ್ಷಗಳು ದೇಣಿಗೆ ಪಡೆಯುವ ಚುನಾವಣಾ ಬಾಂಡ್ ಯೋಜನೆ ಅಸಿಂಧು ಎಂದು ಸುಪ್ರೀಂ ಕೋರ್ಟ್ ನಿನ್ನೆ ತೀರ್ಪು ನೀಡಿದೆ. ದೇಣಿಗೆಗಳ ವಿವರವನ್ನು ಚುನಾವಣಾ ಆಯೋಗಕ್ಕೆ ನೀಡುವಂತೆಯೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಆದೇಶಿಸಿದೆ.

ಹೀಗಾಗಿ ಕಾರ್ಪೊರೇಟ್ ಕಂಪನಿಗಳು ಮತ್ತು ದೊಡ್ಡ ಉದ್ಯಮಿಗಳಿಂದ ಪ್ರತಿ ಪಕ್ಷಗಳು ಎಷ್ಟು ಹಣ ಪಡೆದಿವೆ ಎಂಬ ವಿವರವನ್ನು ಮಾರ್ಚ್ 31 ರೊಳಗೆ ಭಾರತೀಯ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟವಾಗಲಿದೆ.

ಈ ಹಿನ್ನಲೆಯಲ್ಲಿ, ಸುಪ್ರೀಂ ಕೋರ್ಟ್ನ ಈ ತೀರ್ಪನ್ನು ಮಾಜಿ ಹಣಕಾಸು ಸಚಿವ ಹಾಗೂ ರಾಜ್ಯಸಭಾ ಸದಸ್ಯ ಪಿ.ಚಿದಂಬರಂ ಸ್ವಾಗತಿಸಿದ್ದಾರೆ. ಮತ್ತು ಈ ತೀರ್ಪಿನ ಕುರಿತು ಪ್ರತಿಕ್ರಿಯಿಸಿದ್ದಾರೆ.

‘ಚುನಾವಣಾ ಬಾಂಡ್ ಯೋಜನೆಯು ಸಮಾನತೆ, ನ್ಯಾಯಸಮ್ಮತತೆ ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ಉಲ್ಲಂಘಿಸಿದೆ. ಮತ್ತು  ಸುಪ್ರೀಂ ಕೋರ್ಟ್‌ನ ತೀರ್ಪು ಚುನಾವಣೆಯಲ್ಲಿ ಪಾರದರ್ಶಕತೆ, ಮಾಹಿತಿ ಹಕ್ಕು ಮತ್ತು ಸಮಾನತೆ ಮುಂತಾದವುಗಳಿಗೆ ಸಿಕ್ಕಿದ ಜಯವಾಗಿದೆ’ ಎಂದು ಹೇಳಿದ್ದಾರೆ.

‘ಪ್ರಸ್ತುತ ದೊಡ್ಡ ಕಾರ್ಪೊರೇಟ್‌ಗಳಿಂದ ಮತ್ತು ದೊಡ್ಡ ದೊಡ್ಡ ಬಂಡವಾಳಶಾಹಿಗಳಿಂದ ಬಿಜೆಪಿ ಪಡೆದ ದೇಣಿಗೆಯಲ್ಲಿ ಶೇಕಡಾ 90ರಷ್ಟು ಬಹಿರಂಗಗೊಳ್ಳಲಿದೆ.

ಹಣ ಕೊಟ್ಟವರು ಯಾರು? ಅವರು ಹಣ ಪಾವತಿಸಿದಾಗ, ಅದಕ್ಕೆ ಪ್ರತಿಯಾಗಿ ಪಕ್ಷ ಅವರಿಗೆ ನೀಡಿದ್ದು ಏನು? ಎಂಬುದನ್ನು ಜಗತ್ತೇ ತಿಳಿಯಲಿದೆ. ರಾಜಕೀಯ ಪಕ್ಷಗಳಿಗೆ ಹಣ ಏಕೆ ಕೊಡಲಾಯಿತು ಎಂದು ಜನ ಪ್ರಶ್ನಿಸುತ್ತಾರೆ. ಆಗ ಜನರು ತಮ್ಮದೇ ಆದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ’ ಎಂದು ಚಿದಂಬರಂ ಹೇಳಿದ್ದಾರೆ.  

ದೇಶ

ಗುಜರಾತ್ ನಲ್ಲಿ ಕಳೆದ 2 ವರ್ಷಗಳಲ್ಲಿ ಕೇವಲ 32 ಯುವಕರಿಗೆ ಮಾತ್ರವೇ ಉದ್ಯೋಗ ನೀಡಿರುವುದು ಆಘಾತಕಾರಿಯಾಗಿದೆ.

ಗುಜರಾತ್ ರಾಜ್ಯದಲ್ಲಿ ವಿಧಾನಸಭೆ ಅಧಿವೇಶನ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಶಾಸಕರು ‘ಬಿಜೆಪಿ ಆಡಳಿತದಲ್ಲಿ ಎಷ್ಟು ಯುವಕರಿಗೆ ಸರ್ಕಾರಿ ಉದ್ಯೋಗ ಸಿಕ್ಕಿದೆ’ ಎಂದು ಪ್ರಶ್ನೆ ಎತ್ತಿದರು.

ಇದಕ್ಕೆ ಕೈಗಾರಿಕಾ ಸಚಿವ ಬಲವಂತ್ ಸಿಂಗ್ ರಜಪೂತ್ ನೀಡಿರುವ ಪ್ರತಿಕ್ರಿಯೆ ಭಾರೀ ಆಘಾತವನ್ನುಂಟು ಮಾಡಿದೆ. ಕಳೆದ ಎರಡು ವರ್ಷಗಳಲ್ಲಿ 29 ಜಿಲ್ಲೆಗಳಿಂದ 2,38,978 ಪದವೀಧರರು ಸರ್ಕಾರಿ ಉದ್ಯೋಗಗಳಿಗೆ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಆನಂದ್ ಜಿಲ್ಲೆಯಲ್ಲಿ 21,633, ವಡೋದರಾದಲ್ಲಿ 18,732 ಮತ್ತು ಅಹಮದಾಬಾದ್‌ನಲ್ಲಿ 16,400 ಜನರು ನೋಂದಾಯಿಸಿಕೊಂಡಿದ್ದಾರೆ.

ಕಳೆದ 2 ವರ್ಷಗಳಲ್ಲಿ ಇಷ್ಟು ಲಕ್ಷ ಮಂದಿ ಸರ್ಕಾರಿ ಉದ್ಯೋಗಕ್ಕೆ ಹೆಸರು ನೋಂದಾಯಿಸಿಕೊಂಡಿದ್ದು ಕೇವಲ 32 ಯುವಕರಿಗೆ ಮಾತ್ರ ಸರ್ಕಾರಿ ನೌಕರಿ ನೀಡಲಾಗಿದೆ’ ಎಂದು ಸಚಿವರು ವಿಧಾನಸಭೆಯಲ್ಲಿ ಘೋಷಣೆ ಮಾಡಿರುವುದು ಭಾರೀ ಆಘಾತವನ್ನುಂಟು ಮಾಡಿದೆ.

ಇದಕ್ಕೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ಬಲವಾದ ಆಕ್ಷೇಪಣೆಗಳನ್ನು ದಾಖಲಿಸುತ್ತಿದೆ. ‘ಗುಜರಾತ್ ಮಾದರಿ ಭಾರತಕ್ಕೆ ಮಾರ್ಗದರ್ಶಿಯಾಗಿದೆ ಎಂದು ಪ್ರಧಾನಿಯಿಂದ ಹಿಡಿದು ಬಿಜೆಪಿ ಕಾರ್ಯಕರ್ತರವರೆಗೆ ಬಡಾಯಿ ಕೊಚ್ಚಿಕೊಳ್ಳುತ್ತಿರುವ ಹಿನ್ನಲೆಯಲ್ಲಿ, ಗುಜರಾತ್ ವಿಧಾನಸಭೆಯಲ್ಲಿಯೇ ಗುಜರಾತ್ ಮಾದರಿಯ ಯೋಗ್ಯತೆ ಏನು ಎಂಬುದು ಬಹಿರಂಗವಾಗಿದೆ’ ಎಂದು ಕಿಡಿಕಾರಿದ್ದಾರೆ.

ದೇಶ

“ರೈತರು, ಅಪರಾಧಿಗಳಲ್ಲ. ರೈತರನ್ನು ಅಪರಾಧಿಗಳಂತೆ ನಡೆಸಿಕೊಳ್ಳಬಾರದು. ಭಾರತದ ಪ್ರಮುಖ ವಿಜ್ಞಾನಿಗಳಾದ ನಿಮ್ಮೆಲ್ಲರಲ್ಲಿ ನಾನು ವಿನಂತಿಸುವುದು ಇದನ್ನೇ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಇದುವೇ ನನ್ನ ಕೋರಿಕೆ”

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ದೆಹಲಿಯಲ್ಲಿ ಫೆಬ್ರವರಿ 13 ರಿಂದ ರೈತರು ಮುಷ್ಕರ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ದಿವಂಗತ ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್ ಅವರ ಪುತ್ರಿ ಮಧುರಾ ಸ್ವಾಮಿನಾಥನ್ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ನಿಧನರಾದ ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ಘೋಷಿಸಿದೆ. ಇದಕ್ಕಾಗಿ ಕೃತಜ್ಞತೆ ಸಲ್ಲಿಸಲು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ವತಿಯಿಂದ ನೆನ್ನೆ (ಫೆಬ್ರವರಿ 13) ಸಭೆ ಆಯೋಜಿಸಲಾಗಿತ್ತು. ಸಭೆಗೆ ಎಂ.ಎಸ್.ಸ್ವಾಮಿನಾಥನ್ ಅವರ ಪುತ್ರಿ ಹಾಗೂ ಅರ್ಥಶಾಸ್ತ್ರಜ್ಞೆ ಮಧುರಾ ಸ್ವಾಮಿನಾಥನ್ ಭಾಗವಹಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು.

ಆಗ ಮಾತನಾಡಿದ ಅವರು, ‘‘ಪಂಜಾಬ್ ರೈತರು ಇಂದು ದಿಲ್ಲಿಯತ್ತ ಪಾದಯಾತ್ರೆ ನಡೆಸುತ್ತಿದ್ದಾರೆ. ಹರ್ಯಾಣದಲ್ಲಿ ಅವರಿಗಾಗಿ ಜೈಲು ಸಿದ್ಧವಾಗುತ್ತಿದ್ದು, ಅವರನ್ನು ತಡೆಯಲು ಬ್ಯಾರಿಕೇಡ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ನನಗೆ ಪತ್ರಿಕೆಗಳ ಮೂಲಕ ತಿಳಿದುಬಂದಿದೆ.

ನಮಗೆ ಅನ್ನ ನೀಡುವ ರೈತರೊಂದಿಗೆ ಮಾತುಕತೆ ನಡೆಸಬೇಕು. ಅವರು ರೈತರು, ಅಪರಾಧಿಗಳಲ್ಲ. ರೈತರನ್ನು ಅಪರಾಧಿಗಳಂತೆ ನಡೆಸಿಕೊಳ್ಳಬಾರದು. ಭಾರತದ ಪ್ರಮುಖ ವಿಜ್ಞಾನಿಗಳಾದ ನಿಮ್ಮೆಲ್ಲರಲ್ಲಿ ನಾನು ವಿನಂತಿಸುವುದು ಇದನ್ನೇ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಇದುವೇ ನನ್ನ ಕೋರಿಕೆಯಾಗಿದೆ” ಎಂದು ಹೇಳಿದರು.

ದೇಶ

ಅಂಬಲಾ ಬಳಿಯ ಶಂಭು ಗಡಿಯಲ್ಲಿ ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ್ದರಿಂದ ಉದ್ವಿಗ್ನತೆ ಹೆಚ್ಚಿದೆ.

ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ಸೇರಿದಂತೆ ರಾಜ್ಯಗಳ ರೈತ ಸಂಘಟನೆಗಳು, 2021ರಲ್ಲಿ ದಿಲ್ಲಿಯಲ್ಲಿ ನಡೆಸಿದ ಬೃಹತ್ ಪ್ರತಿಭಟನೆಯನ್ನು ಅಂತ್ಯಗೊಳಿಸಲು ರೈತರ ಬೇಡಿಕೆಯನ್ನು ಈಡೇರಿಸಲು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರ ಸಮ್ಮತಿಸಿತು.

ಆದರೆ ಎರಡು ವರ್ಷ ಕಳೆದರೂ ಬೇಡಿಕೆ ಈಡೇರದ ಕಾರಣ, ಹರಿಯಾಣ ಮತ್ತು ದೆಹಲಿಯ ಗಡಿಯಲ್ಲಿ ನಿನ್ನೆಯಿಂದ ರೈತರು ಪ್ರತಿಭಟನೆಯನ್ನು ಮುನ್ನಡೆಸುತ್ತಿದ್ದಾರೆ. ಶಂಭು ಗಡಿಯಲ್ಲಿ ಪೊಲೀಸರು ಮತ್ತು ರೈತರ ನಡುವೆ ಘರ್ಷಣೆ ನಡೆದಿದೆ. ಅಂಬಲಾ ಬಳಿಯ ಶಂಭು ಗಡಿಯಲ್ಲಿ ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ್ದರಿಂದ ಉದ್ವಿಗ್ನತೆ ಹೆಚ್ಚಿದೆ.

ಈ ಹಿನ್ನಲೆಯಲ್ಲಿ, ರೈತರು ಅಶ್ರುವಾಯು ಎದುರಿಸಲು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅಶ್ರುವಾಯು ಪ್ರಭಾವವನ್ನು ಕಡಿಮೆ ಮಾಡಲು ಅವರು ನೀರಿನ ಬಾಟಲಿಗಳು, ಒದ್ದೆಯಾದ ಬಟ್ಟೆಗಳು ಮತ್ತು ರಕ್ಷಣಾ ಸಾಧನಗಳೊಂದಿಗೆ ತಮ್ಮನ್ನು ತಾವು ಸಿದ್ಧಪಡಿಸಿಕೊಂಡಿದ್ದಾರೆ. ಅಲ್ಲದೆ, ಅಶ್ರುವಾಯು ಸಾಗಿಸುವ ಡ್ರೋನ್‌ಗಳನ್ನು ನಿಷ್ಕ್ರಿಯಗೊಳಿಸಲು ಗಾಳಿಪಟಗಳನ್ನು ಹಾರಿಸುತ್ತಿದ್ದಾರೆ.

ಈ ಕುರಿತು ಮಾತನಾಡುವ ರೈತರು, ‘ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನೈತಿಕವಾಗಿ ಹೋರಾಟ ಮಾಡುತ್ತಿದ್ದೇವೆ. ನಾವು ಯಾವುದೋ ಭಯೋತ್ಪಾದಕರನ್ನು ಎದುರಿಸುತ್ತಿದ್ದೇವೆ ಎಂಬಂತೆ ಸರಕಾರಿ ಯಂತ್ರಗಳು ನಮ್ಮನ್ನು ನಡೆಸಿಕೊಳ್ಳುತ್ತಿದೆ. ಡ್ರೋನ್‌ಗಳ ಮೂಲಕ ಅಶ್ರುವಾಯು ಪ್ರಯೋಗಿಸಿ ನಮ್ಮನ್ನು ಚದುರಿಸಲು ಪ್ರಯತ್ನಿಸುತ್ತಿದ್ದಾರೆ. ಅದನ್ನು ಎದುರಿಸಲು ನಾವು ಈ ರೀತಿ ಗಾಳಿಪಟವನ್ನು ಹಾರಿಸುತ್ತಿದ್ದೇವೆ’ ಎಂದು ಹೇಳಿದರು.

ದೇಶ

ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಹರಿಯಾಣ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳ ರೈತರು ದೆಹಲಿಗೆ ತೆರಳಿದ್ದಾರೆ. ಇದರಿಂದ ಸಾರಿಗೆ ದಟ್ಟಣೆ ಸಂಭವಿಸಿದೆ. ಪ್ರತಿಭಟನೆಯನ್ನು ತಡೆಯಲು ಭದ್ರತೆಯನ್ನು ಹೆಚ್ಚಿಸಲಾಗಿದೆ.

ಉತ್ತರ ಪ್ರದೇಶ, ಹರಿಯಾಣ, ಪಂಜಾಬ್‌ ರಾಜ್ಯಗಳ ರೈತ ಸಂಘಟನೆಗಳು, ಕೃಷಿ ಉತ್ಪನ್ನಗಳಿಗೆ ಎಂ.ಎಸ್.ಪಿ (MSP) ಎಂದು ಕರೆಯಲ್ಪಡುವ ಕನಿಷ್ಠ ಬೆಂಬಲ ಬೆಲೆಗೆ ಖಾತ್ರಿ ನೀಡುವ ಕಾನೂನು, ಪಿಂಚಣಿ, ಭೂಕಬಳಿಕೆಗೆ ಸೂಕ್ತ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ, ಇಂದು ರಾಜಧಾನಿ ದೆಹಲಿಯತ್ತ ಬೃಹತ್ ಮೆರವಣಿಗೆಗೆ ಕರೆ ನೀಡಿತ್ತು.

ಈ ಹಿನ್ನಲೆಯಲ್ಲಿ, ರಾಜ್ಯಗಳ ರೈತರು ಕೇಂದ್ರ ಸರ್ಕಾರದ ವಿರುದ್ಧ ಮುತ್ತಿಗೆ ಹೋರಾಟ ನಡೆಸಲು ದೆಹಲಿಗೆ ತೆರಳಿದ್ದಾರೆ. ಇದರಿಂದಾಗಿ ದೆಹಲಿಯ ಪ್ರಮುಖ ಗಡಿ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ನಗರದ ಪ್ರಮುಖ ರಸ್ತೆಗಳ ಮಾರ್ಗವನ್ನು ಬದಲಿಸಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ.

ಮಾರ್ಚ್ 12ರವರೆಗೆ ದೆಹಲಿಯಲ್ಲಿ 144 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪ್ರತಿಭಟನಾಕಾರರು ಯಾವುದೇ ಅಹಿತಕರ ಘಟನೆಗೆ ಒಳಗಾಗದಂತೆ ತಡೆಯಲು ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿದೆ. ಅರೆಸೇನಾ ಪಡೆಗಳೂ ಭದ್ರತೆಯಲ್ಲಿ ತೊಡಗಿವೆ.

ದೇಶ

ನವದೆಹಲಿ: ಉತ್ತರಪ್ರದೇಶಕ್ಕೆ ಹಂಚಿಕೆಯಾದ ಮೊತ್ತವು ಒಟ್ಟು 5 ರಾಜ್ಯಗಳಿಗೆ ಹಂಚಿಕೆಯಾದ ಮೊತ್ತಕ್ಕಿಂತ ಸುಮಾರು 50 ಸಾವಿರ ಕೋಟಿ ಹೆಚ್ಚು ಎಂದು ತಮಿಳುನಾಡು ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲ್ ಸೇವೆಗಳ ಸಚಿವ ಡಾ.ಪಳನಿವೇಲ್ ತ್ಯಾಗರಾಜನ್ (ಪಿಟಿಆರ್) ಹೇಳಿದ್ದಾರೆ.

ಕೇರಳ, ತಮಿಳುನಾಡು ದೆಹಲಿ ಹಾಗೂ ಪಂಜಾಬ್ ರಾಜ್ಯಗಳ ನಾಯಕರು “GST ಹಣದ ಮರು ಹಂಚಿಕೆ ಮತ್ತು ಅನುದಾನ ಹಂಚಿಕೆಯಲ್ಲಿ ರಾಜ್ಯಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ರಾಜಧಾನಿ ದೆಹಲಿಯಲ್ಲಿ ನೆನ್ನೆ ಪ್ರತಿಭಟನೆ ನಡೆಸಿದ್ದರು. ಇದರಲ್ಲಿ ತಮಿಳುನಾಡು ಸರ್ಕಾರದ ಪರವಾಗಿ ಭಾಗವಹಿಸಿ ಡಾ.ಪಳನಿವೇಲ್ ತ್ಯಾಗರಾಜನ್ ಮಾತನಾಡಿದರು.

“ಕಳೆದ 5 ವರ್ಷಗಳಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಸೇರಿದಂತೆ ದಕ್ಷಿಣ ರಾಜ್ಯಗಳು GST ಮತ್ತು ನೇರ ತೆರಿಗೆಗಳಿಗೆ ಕೊಡುಗೆ ನೀಡಿದ ಒಟ್ಟು ತೆರಿಗೆ (ಆಮದು ಸುಂಕದ ಮೇಲಿನ GST ಹೊರತುಪಡಿಸಿ) – 22,26,983.39 ಕೋಟಿ.

ಕಳೆದ ಐದು ವರ್ಷಗಳಲ್ಲಿ ಉತ್ತರ ಪ್ರದೇಶ ಕೊಡುಗೆ ನೀಡಿದ ಮೊತ್ತ ರೂ.3,41,817.60 ಕೋಟಿಗಳು.
(Difference in Contribution: Rs.18,85,166 Crores)

ಕಳೆದ 5 ವರ್ಷಗಳಲ್ಲಿ ಮೇಲೆ ತಿಳಿಸಲಾದ ದಕ್ಷಿಣದ ರಾಜ್ಯಗಳಿಗೆ ಬಿಡುಗಡೆಯಾದ ಕೇಂದ್ರ ತೆರಿಗೆಗಳು ಮತ್ತು ಸುಂಕಗಳು (ಒಟ್ಟು) – ರೂ.6,42,295.05 ಕೋಟಿಗಳು.

ಉತ್ತರ ಪ್ರದೇಶಕ್ಕೆ ಬಿಡುಗಡೆಯಾದ ಮೊತ್ತ – 6,91,375.12 ಕೋಟಿ ರೂ.
(Difference in sharing: Rs.49,080 Crores)

ಒಂದು ರಾಜ್ಯಕ್ಕೆ ಹಂಚಿಕೆಯಾದ ಮೊತ್ತವು ಒಟ್ಟು 5 ರಾಜ್ಯಗಳಿಗೆ ಹಂಚಿಕೆಯಾದ ಮೊತ್ತಕ್ಕಿಂತ ಸುಮಾರು 50 ಸಾವಿರ ಕೋಟಿ ಹೆಚ್ಚು” ಎಂದು ಹೇಳಿದ್ದಾರೆ.

ಇದೇ ವಿಚಾರಕ್ಕಾಗಿ ಮೊನ್ನೆ ಕರ್ನಾಟಕ ರಾಜ್ಯ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮುಂದಾಳುತ್ವದಲ್ಲಿ ದೆಹಲಿ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು ಎಂಬುದು ಗಮನಾರ್ಹ.

ದೇಶ

ಪ್ರಧಾನಿ ನರೇಂದ್ರ ಮೋದಿ ಅವರು ಇತರ ಹಿಂದುಳಿದ ವರ್ಗಕ್ಕೆ ಸೇರಿದವರು ಎಂದು ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಿ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಅವರು ಜನವರಿ 14 ರಂದು ಮಣಿಪುರದಿಂದ ಮಹಾರಾಷ್ಟ್ರಕ್ಕೆ ಭಾರತ್ ಜೋಡೋ ನ್ಯಾಯ ಯಾತ್ರೆಯ ಎರಡನೇ ಹಂತವನ್ನು ಪ್ರಾರಂಭಿಸಿದರು.

ಯಾತ್ರೆಯು ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಛತ್ತೀಸ್‌ಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಸೇರಿದಂತೆ 15 ರಾಜ್ಯಗಳನ್ನು ಒಳಗೊಂಡಿದೆ. ಒಟ್ಟು 66 ದಿನಗಳಲ್ಲಿ 110 ಜಿಲ್ಲೆಗಳಲ್ಲಿ ಸುಮಾರು 6700 ಕಿ.ಮೀ. ಪ್ರಯಾಣಿಸುವ ಸಲುವಾಗಿ ಈ ನಡಿಗೆ ನಡೆಯಲಿದೆ.

ಮಣಿಪುರ, ನಾಗಾಲ್ಯಾಂಡ್, ಅಸ್ಸಾಂ, ಬಿಹಾರ ಮತ್ತು ಪಶ್ಚಿಮ ಬಂಗಾಳದ ನಂತರ ಇದೀಗ ಒಡಿಶಾದಲ್ಲಿ ರಾಹುಲ್ ಗಾಂಧಿ ಪಾದಯಾತ್ರೆ ನಡೆತ್ತಿದ್ದಾರೆ. ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ಪ್ರಧಾನಿ ಮೋದಿ ಇತರ ಹಿಂದುಳಿದ ವರ್ಗಕ್ಕೆ ಸೇರಿದವರು ಎಂದು ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ವಾಸ್ತವವಾಗಿ ಮೋದಿ ಸಾಮಾನ್ಯ ಜಾತಿ ಕುಟುಂಬದಲ್ಲಿ ಜನಿಸಿದವರು.

ಇವರು “ತೆಲಿ” ಜಾತಿಗೆ ಸೇರಿದವರು. 2000 ರಲ್ಲಿ, ಗುಜರಾತ್‌ನ ಬಿಜೆಪಿ ಸರ್ಕಾರವು ತೆಲಿ ವರ್ಗವನ್ನು ಇತರ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿಕೊಂಡಿತ್ತು. ಈ ಕಾರಣಕ್ಕಾಗಿ, ತಮ್ಮ ಜೀವನ ಪರ್ಯಂತ ಅವರು ಜಾತಿವಾರು ಜನಗಣತಿ ನಡೆಸಲು ಅನುಮತಿ ಕೊಡುವುದಿಲ್ಲ” ಎಂದು ಟೀಕಿಸಿದ್ದಾರೆ.

ರಾಹುಲ್ ಗಾಂಧಿಯವರ ಈ ಹೇಳಿಕೆ ಭಾರತದಲ್ಲಿ ಸಂಚಲನ ಮೂಡಿಸಿದೆ. ಈಗಾಗಲೇ ಮೋದಿಯವರ ಶಿಕ್ಷಣದ ವಿವರಗಳನ್ನು ಬಹಿರಂಗಪಡಿಸದೇ ಇರುವ ಹಿನ್ನಲೆಯಲ್ಲಿ, ಈಗ ಅವರ ಜಾತಿಯ ಪ್ರಶ್ನೆಯೂ ಉದ್ಭವಿಸಿದೆ. ಪ್ರಧಾನಿ ಮೋದಿವಿವಿಧ ವೇದಿಕೆಗಳಲ್ಲಿ ತಾನು ಇತರೆ ಹಿಂದುಳಿದ ವರ್ಗಕ್ಕೆ ಸೇರಿದವನು ಎಂದು ಹೇಳಿಕೊಂಡು ಮತ ಸಂಗ್ರಹಿಸಿರುವುದು ಗಮನಾರ್ಹ.