ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
August 2024 » Page 6 of 7 » Dynamic Leader
November 22, 2024
Home 2024 August (Page 6)
ದೇಶ

ನವದೆಹಲಿ: ಮದ್ಯ ನೀತಿ ಪ್ರಕರಣದಲ್ಲಿ ಒಂದೂವರೆ ವರ್ಷದ ಬಳಿಕ ಮನೀಶ್ ಸಿಸೋಡಿಯಾಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ದೆಹಲಿ ಆಮ್ ಆದ್ಮಿ ಸರ್ಕಾರದ ಹೊಸ ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಆಮ್ ಆದ್ಮಿ ಪಕ್ಷದ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿತ್ತು. ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಅವರನ್ನು ಫೆಬ್ರವರಿ 2023ರಲ್ಲಿ ಜಾರಿ ಇಲಾಖೆ ಬಂಧಿಸಿ ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು.

ಅವರ ವಿರುದ್ಧ ದೆಹಲಿ ರೋಸ್ ಅವೆನ್ಯೂ ಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿದೆ. ಅಲ್ಲಿ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ ನಂತರ, ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಮೇಲ್ಮನವಿಯನ್ನು ಕೂಡ ಮೇ 21 ರಂದು ವಜಾಗೊಳಿಸಲಾಯಿತು. ಇದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಧೀಶರಾದ ಗವಾಯಿ ಮತ್ತು ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯ ಪೀಠವು ದಿನಾಂಕವನ್ನು ಸೂಚಿಸದೆ ಕಳೆದ 6 ರಂದು ಮುಂದೂಡಿದ್ದರು.

ಈ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾಗೆ ಇಂದು (ಆಗಸ್ಟ್ 09) ಜಾಮೀನು ಮಂಜೂರಾಗಿದೆ. ರೂ.10 ಲಕ್ಷ ಪಾವತಿಸುವುದರೊಂದಿಗೆ, ಪಾಸ್‌ಪೋರ್ಟ್ ಒಪ್ಪಿಸುವಂತೆಯೂ ಆದೇಶಿಸಲಾಗಿದೆ.

ಬೆಂಗಳೂರು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಷಯಾಧಾರಿತ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

“ಭಾರತ ಸ್ವಾತಂತ್ರ್ಯೋತ್ಸವ ಅಂಗವಾಗಿ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಈ ಬಾರಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಷಯಾಧಾರಿತ ಫಲಪುಷ್ಪ ಪ್ರದರ್ಶನವನ್ನು ಆಗಸ್ಟ್ 8 ರಿಂದ 19 ರವರೆಗೆ ಏರ್ಪಡಿಸಲಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ರವರ ಜೀವನಸಾಧನೆ, ದೇಶಕ್ಕೆ ನೀಡಿದ ಕೊಡುಗೆ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ, ಬೌದ್ಧ ಮತ ಸ್ವೀಕಾರ, ಸಂವಿಧಾನ ರಚನಾ ಸಮಿತಿಯಲ್ಲಿ ಪಾತ್ರ, ಸಂವಿಧಾನದ ಆಶಯಗಳು, ಪ್ರಜಾಪ್ರಭುತ್ವ ವ್ಯವಸ್ಥೆ ಸೇರಿದಂತೆ ಹಲವು ಪ್ರಮುಖ ವಿಷಯಗಳನ್ನು ಆಧರಿಸಿದ ಫಲಪುಷ್ಪ ಪ್ರದರ್ಶವನ್ನು ಏರ್ಪಡಿಸಲಾಗಿದೆ” ಎಂದು ಹೇಳಿದರು.

“ಅಂಬೇಡ್ಕರ್ ರವರು ಎಂದೆಂದಿಗೂ ಪ್ರಸ್ತುತ. ಈ ಬಾರಿಯ ಫಲಪುಷ್ಪ ಪ್ರದರ್ಶನ ಜನರು ಸಂವಿಧಾನಗಳ ಆಶಯಗಳನ್ನರಿಯಲು ಅಪೂರ್ವ ಅವಕಾಶ ಒದಗಿಸಿದೆ. ಜನರು ಸಂವಿಧಾನದ ಬಗ್ಗೆ ಅರಿವು ಪಡೆದಾಗ ಮಾತ್ರ ಸಂವಿಧಾನದ ರೀತ್ಯ ನಡೆದುಕೊಳ್ಳಲು ಸಾಧ್ಯ. ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಅಂಬೇಡ್ಕರ್ ರವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯಲಾಗುತ್ತದೆ. ಅಂಬೇಡ್ಕರ್ ರವರು ಎಂದೆಂದಿಗೂ ಪ್ರಸ್ತುತ” ಎಂದು ಹೇಳಿದರು.

“ಯಾವುದೇ ಜಾತಿ, ಧರ್ಮ, ಭಾಷೆ, ಪ್ರದೇಶಗಳಿಗೆ ಸೇರಿದ ಜನರಿಗೂ ಸಮಾನ ಅವಕಾಶಗಳು ದೊರೆಯಬೇಕು. ಜನರಿಗೆ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ದೊರೆತಾಗ ಮಾತ್ರ ರಾಜಕೀಯ ಸ್ವಾತಂತ್ರ್ಯ ಗಳಿಸಲು ಸಾಧ್ಯ ಎಂಬುದರಲ್ಲಿ ನಂಬಿಕೆಯಿರಿಸಿದ್ದರು. ಅಂಬೇಡ್ಕರ್ ರವರು ಬಾಲ್ಯದಿಂದ ತಮ್ಮ ಜೀವಿತಾವಧಿಯಲ್ಲಿನ ಪ್ರಮುಖ ಸಾಧನೆಗಳನ್ನು ವಿವಿಧ ರೂಪದಲ್ಲಿ ಪ್ರದರ್ಶನದಲ್ಲಿ ಬಿಂಬಿಸಲಾಗಿದ್ದು, ಜನರು ಅವರ ಆಶಯಗಳ ಬಗ್ಗೆ ಅರಿಯಬಹುದಾಗಿದೆ” ಎಂದು ಹೇಳಿದರು.

ತೋಟಗಾರಿಕಾ ಇಲಾಖೆಯ ವತಿಯಿಂದ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನಕ್ಕೆ ಸುಮಾರು 12 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ವಿವಿಧ ತಳಿಗಳ ಸುಮಾರು 30 ಲಕ್ಷ ಹೂವುಗಳನ್ನು ಈ ಪುಷ್ಪ ಪ್ರದರ್ಶನದಲ್ಲಿ ಬಳಸಲಾಗಿದೆ.

 

ದೇಶ

ನವದೆಹಲಿ: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ವಕ್ಫ್ ಬೋರ್ಡ್ ತಿದ್ದುಪಡಿ ಮಸೂದೆಯನ್ನು ಮಂಡಿಸಿದ್ದಾರೆ. ಧಾರ್ಮಿಕ ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಬಳಸಲು ಮುಸ್ಲಿಮರು ಚರ ಮತ್ತು ಸ್ಥಿರ ಆಸ್ತಿಯನ್ನು ದಾನ ಮಾಡುತ್ತಾರೆ. ಈ ದೇಣಿಗೆಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಿಸಲು ರಾಜ್ಯಗಳಲ್ಲಿ ವಕ್ಫ್ ಮಂಡಳಿಗಳು ಮತ್ತು ರಾಷ್ಟ್ರೀಯ ಮಟ್ಟದಲ್ಲಿ ವಕ್ಫ್ ಕೌನ್ಸಿಲ್‌ಗಳಿವೆ. ಇದಲ್ಲದೇ ವಕ್ಫ್ ಟ್ರಿಬ್ಯೂನಲ್ ಕೂಡ ಇದೆ.

ವಕ್ಫ್ ಬೋರ್ಡ್ ಕಾಯ್ದೆ 1995ರಲ್ಲಿ, ವಕ್ಫ್ ಆಸ್ತಿಗಳ ನಿರ್ವಹಣೆಗೆ ಸಂಬಂಧಿಸಿದಂತೆ ಹಲವಾರು ನಿಬಂಧನೆಗಳನ್ನು ಮಾಡಿದೆ. ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದಲ್ಲಿ 2013ರಲ್ಲಿ, ಇದರಲ್ಲಿ ಹಲವು ನಿಬಂಧನೆಗಳನ್ನು ಸಡಿಲಗೊಳಿಸಲಾಯಿತು ಮತ್ತು ಉದಾರೀಕರಣಗೊಳಿಸಲಾಯಿತು.

ಪ್ರಸ್ತುತ, 9.4 ಲಕ್ಷ ಎಕರೆ ಪ್ರದೇಶದಲ್ಲಿ 8.7 ಲಕ್ಷ ಆಸ್ತಿಗಳು ದೇಶಾದ್ಯಂತ ವಕ್ಫ್ ಮಂಡಳಿಗಳ ಒಡೆತನದಲ್ಲಿದೆ. ವಕ್ಫ್ ಆಸ್ತಿ ನಿರ್ವಹಣೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ, ವಕ್ಫ್ ಬೋರ್ಡ್ ಕಾಯ್ದೆಗೆ ತಿದ್ದುಪಡಿ ತರುವ ಹೊಸ ಮಸೂದೆಯನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್, ಸಮಾಜವಾದಿ ಸೇರಿದಂತೆ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿವೆ.

ಮಸೂದೆಯ ಕೆಲವು ಮುಖ್ಯಾಂಶಗಳು:
ಕುಟುಂಬದ ಆಸ್ತಿಯಲ್ಲಿ ಮುಸ್ಲಿಂ ಮಹಿಳೆಯರ ಹಕ್ಕುಗಳ ರಕ್ಷಣೆಯನ್ನು ಖಾತ್ರಿಪಡಿಸಲಾಗುವುದು.

ವಕ್ಫ್ ಆಸ್ತಿಗಳನ್ನು ಸರ್ವೆ ಆಯುಕ್ತರಿಂದ ಜಿಲ್ಲಾಧಿಕಾರಿಯವರೆಗೆ ಅಥವಾ ಜಿಲ್ಲಾಧಿಕಾರಿ ನೇಮಿಸಿಸುವ ಉಪ ಜಿಲ್ಲಾಧಿಕಾರಿಗಳಿಂದ ಪರಿಶೀಲನೆ ನಡೆಸಲಾಗುವುದು.

ಕೇಂದ್ರೀಯ ವಕ್ಫ್ ಕೌನ್ಸಿಲ್ ಮತ್ತು ರಾಜ್ಯ ವಕ್ಫ್ ಮಂಡಳಿಗಳಲ್ಲಿ ಮುಸ್ಲಿಂ ಮಹಿಳೆಯರು ಮತ್ತು ಮುಸ್ಲಿಮೇತರರು ಭಾಗವಹಿಸುವಿಕೆಯನ್ನು ಖಾತ್ರಿಪಡಿಸಲಾಗುವುದು.

ಬೋರ ಮತ್ತು ಅಗಕಾನಿಗಳಿಗೆ ಪ್ರತ್ಯೇಕ ಮಂಡಳಿ ಸ್ಥಾಪಿಸಲಾಗುವುದು. ವಕ್ಫ್ ಬೋರ್ಡ್‌ಗಳು ಸುನ್ನಿ, ಶಿಯಾ, ಬೋರಾ, ಅಗಾಕಾನಿಗಳು ಮತ್ತು ಆ ಧರ್ಮದ ಹಿಂದುಳಿದ ವರ್ಗಗಳನ್ನು ಒಳಗೊಂಡಿರಬೇಕು.

ಎಲ್ಲಾ ವಕ್ಫ್ ಆಸ್ತಿಗಳನ್ನು ಸಾಮಾನ್ಯ ಕೇಂದ್ರ ತಾಣದ ಮೂಲಕ ನೋಂದಾಯಿಸಬೇಕು. ಅದರ ಮಾಹಿತಿಯನ್ನು ಕ್ರೋಢೀಕರಿಸಬೇಕು.

ಆಸ್ತಿಯನ್ನು ನೋಂದಾಯಿಸುವ ಮೊದಲು, ಕಂದಾಯ ಕಾನೂನುಗಳನ್ನು ಅನುಸರಿಸಬೇಕು. ಮತ್ತು ಎಲ್ಲಾ ಪಕ್ಷಗಳ ಅಭಿಪ್ರಾಯಗಳನ್ನು ಆಲಿಸಲಾಗುವುದು.

ವಕ್ಫ್ ಆಸ್ತಿಗಳಿಗೆ, ಇನ್ನು ವಕ್ಫ್ ಬೋರ್ಡ್‌ಗಳು ಮಾತ್ರ ಅಧಿಕಾರವಲ್ಲ.

ವಕ್ಫ್ ಮಂಡಳಿಯ ಆಸ್ತಿಗಳು ಮತ್ತು ಅದರ ಚಟುವಟಿಕೆಗಳಿಂದ ಸಿಗುವ ಆದಾಯಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಕೇಂದ್ರ ತಾಣದಲ್ಲಿ ಪೋಸ್ಟ್ ಮಾಡಬೇಕು.

ನ್ಯಾಯಮಂಡಳಿ ವ್ಯವಸ್ಥೆಯನ್ನು ಪರಿಷ್ಕರಿಸಲಾಗುವುದು. ಮತ್ತು ನ್ಯಾಯಾಧಿಕರಣದ ತೀರ್ಪನ್ನು ಹೈಕೋರ್ಟ್‌ಗಳಲ್ಲಿ ಪ್ರಶ್ನಿಸಬಹುದು. ವಕ್ಫ್ ಆಸ್ತಿ ನಿರ್ವಹಣೆಯಲ್ಲಿ ಸುಧಾರಣೆಗಳನ್ನು ಕೈಗೊಳ್ಳುವ ಸಲುವಾಗಿ ಹೊಸ ಮಸೂದೆಯಲ್ಲಿ ಹಲವು ತಿದ್ದುಪಡಿಗಳನ್ನು ಸೇರಿಸಲಾಗಿದೆ ಎಂದು ಹೇಳಲಾಗಿದೆ.

ಬೆಂಗಳೂರು

ಬೆಂಗಳೂರು: ಬ್ರಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಬಾರ್ ಮತ್ತು ಸ್ಟಾರ್ ಹೋಟೆಲ್‌ಗಳಿಗೆ ಮಧ್ಯರಾತ್ರಿ ಒಂದು ಗಂಟೆಯವರೆಗೆ ತೆರೆಯಲು ಅನುಮತಿ ನೀಡಿರುವ ರಾಜ್ಯ ಸರ್ಕಾರದ ನಡೆಯನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಖಂಡಿಸಿದ್ದಾರೆ.

“ಬಡ ಬೀದಿ ವ್ಯಾಪಾರಿಗಳಿಗೆ ರಾತ್ರಿ ಹತ್ತು ಗಂಟೆಯಾದರೆ ಸಾಕು, ದರ್ಪದಿಂದ ಕಿರುಕುಳ ನೀಡಿ ಬಂದ್ ಮಾಡಿಸುತ್ತಾರೆ. ಮದ್ಯ ವ್ಯಸನಿಗಳಿಂದಲೇ ಅಪರಾಧ ಹೆಚ್ಚಾಗುತ್ತಿದ್ದರೂ ಅದಕ್ಕೆ ಸಮಯ ವಿಸ್ತರಿಸಿ ಇನ್ನಷ್ಟು ಹೆಚ್ಚಿಸಲು ಅನುವು ಮಾಡಿಕೊಡುವ ಸರ್ಕಾರಕ್ಕೆ ಇತ್ತೀಚೆಗೆ ಕುಡುಕರ ಮೇಲೆ ಒಲವು ಹೆಚ್ಚಾದಂತೆ ಕಾಣುತ್ತಿದೆ. ಇತ್ತೀಚೆಗೆ ಸ್ಕಾಚ್ ಗಳ ಬೆಲೆಯಲ್ಲಿ ತೀವ್ರ ಇಳಿಕೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಕುಡಿತಕ್ಕೆ ಅವಕಾಶ ಕೊಟ್ಟು ರಾಜ್ಯದ ಶಾಂತಿ ನೆಮ್ಮದಿಯನ್ನು ಹಾಳು ಮಾಡಲು ಸರ್ಕಾರ ಹೊರಟಿದೆಯೇ ಎಂದು ಪ್ರಶ್ನಿಸಿದ ಅವರು,  ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಎಲ್ಲಾ ಅಪರಾಧ ಪ್ರಕ್ರಿಯೆಗಳು ಮದ್ಯ ವ್ಯಸನಿಗಳಿಂದಲೇ ಹೆಚ್ಚಾಗಿ ನಡೆಯುತ್ತದೆ ಎಂಬ ಸಾಮಾನ್ಯ ಪ್ರಜ್ಞೆಯಾದರೂ ಸರಕಾರಕ್ಕೆ ಇರಬೇಡವೇ?  ಇದನ್ನು ತಡೆಗಟ್ಟುವ ಬದಲು ಅದನ್ನು ಸುಗಮಗೊಳಿಸಲು ಹೊರಟಿರುವುದು ಖಂಡನೀಯ.

ಸರ್ಕಾರವು ಕೇವಲ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಮಾಡುವ ಇಂತಹ ನಡೆಯನ್ನು ನಮ್ಮ ವೆಲ್ಫೇರ್ ಪಾರ್ಟಿ ತೀವ್ರವಾಗಿ ಖಂಡಿಸುತ್ತದೆ. ಸರ್ಕಾರ ಕೂಡಲೇ ಈ ನಿರ್ಧಾರವನ್ನು ಕೈಬಿಡಬೇಕು” ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ರಾಜಕೀಯ

ಮೈಸೂರು: ಇಂದು ಮೈಸೂರಿನ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ನೀಡಿರುವ ನೋಟೀಸಿಗೆ ಈಗಾಗಲೇ ಉತ್ತರ ನೀಡಲಾಗಿದ್ದು, ಅದನ್ನು ರಾಜಪಾಲರು ಒಪ್ಪಿಕೊಳ್ಳುವ ನಂಬಿಕೆಯಿದೆ ಎಂದು ಹೇಳಿದರು.

“ಮುಡಾ ವಿಷಯದಲ್ಲಿ ಸಂಪೂರ್ಣವಾಗಿ ಕಾನೂನು ಪ್ರಕಾರ ನಡೆದಿದೆ. ನಿವೇಶನ ಹಂಚಿಕೆಯಲ್ಲಿ ಯಾವುದೇ ರೀತಿಯ ಪ್ರಭಾವವನ್ನು ನಾನು ಬೀರಿಲ್ಲ. ಕಾನೂನು ಪ್ರಕಾರವಾಗಿರುವ ಹಿನ್ನೆಲೆಯಲ್ಲಿಯೇ ಬಿಜೆಪಿ ಸರ್ಕಾರದ ಅವಧಿಯಲ್ಲಿ 2021ರಲ್ಲಿ ನನ್ನ ಪತ್ನಿಗೆ ಬದಲಿ ನಿವೇಶನ ನೀಡಲಾಗಿದೆ” ಎಂದು ಹೇಳಿದರು.

“ಮುಡಾ ಅಕ್ರಮವಾಗಿ ನಮ್ಮ ಜಮೀನನ್ನು ಸ್ವಾಧೀನ ಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಬದಲಿ ನಿವೇಶನ ಕೋರಿ 2014ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನನ್ನ ಪತ್ನಿ ಅರ್ಜಿ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ನಾನು ಈ ಕುರಿತು ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ” ಎಂದು ಹೇಳಿದರು.

“ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ನನ್ನ ಮೇಲೆ ಆಪಾದನೆಗಳನ್ನು ಮಾಡುತ್ತಿವೆ. ಆಪರೇಶನ್‌ ಕಮಲ ನಡೆಸಲು ಪ್ರಯತ್ನಿಸಿದರೂ, ಸರ್ಕಾರ ಅಸ್ಥಿರಗೊಳಿಸಲು ಸಾಧ್ಯವಾಗದ ಕಾರಣ ಇದನ್ನು ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಕಳೆದ ಒಂದು ವರ್ಷದ ಅವಧಿಯಲ್ಲಿ ಯಶಸ್ವಿಯಾಗಿ ಜಾರಿಗೊಳಿಸಿ, ಬಡವರ ಪರವಾಗಿ ಕೆಲಸ ಮಾಡುತ್ತಿರುವುದನ್ನು ಸಹಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ” ಎಂದು ಕಿಡಿಕಾರಿದರು.

“ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದ್ದರು. ಮೊದಲ ದಿನದಿಂದಲೂ ಗ್ಯಾರಂಟಿ ಯೋಜನೆ ವಿರುದ್ಧವಾಗಿ ಅವರು ಮಾತನಾಡುತ್ತಿದ್ದಾರೆ. ಒಂದು ವೇಳೆ ಗ್ಯಾರಂಟಿ ಯೋಜನೆ ಆರಂಭಿಸಿದರೂ, ಅದನ್ನು ನಿಲ್ಲಿಸಿ ಬಿಡುತ್ತಾರೆ ಎಂದಿದ್ದರು. ಆದರೆ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದಿಂದ ಅವರು ಹತಾಶರಾಗಿದ್ದಾರೆ” ಎಂದು ಹೇಳಿದರು.

“ಈ ವಯಸ್ಸಿನಲ್ಲಿ ಪೋಕ್ಸೋ ಪ್ರಕರಣದಲ್ಲಿ ಸಿಲುಕಿರುವ ಯಡಿಯೂರಪ್ಪ ಅವರು ನ್ಯಾಯಾಲಯದ ದಯೆಯಿಂದ ಜೈಲು ಪಾಲಾಗದೆ ಬಚಾವಾಗಿದ್ದಾರೆ. 82ರ ವಯಸ್ಸಿನಲ್ಲಿ ಇಂತಹ ಪ್ರಕರಣದಲ್ಲಿ ಚಾರ್ಜ್‌ಶೀಟ್‌ ಹಾಕಿಸಿಕೊಂಡಿರುವ ಯಡಿಯೂರಪ್ಪ ಅವರಿಗೆ ನನ್ನ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಅವರು ನೈತಿಕತೆ ಇದ್ದರೆ ಸಾರ್ವಜನಿಕ ಜೀವನದಿಂದ ನಿವೃತ್ತರಾಗಬೇಕು. ಅವರ ವಿರುದ್ಧ 20ಕ್ಕೂ ಅಧಿಕ ಪ್ರಕರಣಗಳು ಇದ್ದು, ಈ ಕುರಿತು ವಿವರವಾದ ಮಾಹಿತಿಯನ್ನು ನೀಡಲಿದ್ದೇನೆ” ಎಂದು ಗುಡುಗಿದರು.

ಯಡಿಯೂರಪ್ಪ ಅಧಿಕಾರದ ಅವಧಿಯಲ್ಲಿ ಚೆಕ್‌ ಮೂಲಕ ಲಂಚದ ಹಣವನ್ನು ಪಡೆದುಕೊಂಡಿದ್ದರು. ಅಕ್ರಮವಾಗಿ ಡಿನೋಟಿಫಿಕೇಶನ್‌ ಮಾಡಿದ್ದರು. ನಾವು ಅಂತಹ ಯಾವುದೇ ಅಕ್ರಮಗಳನ್ನು ಎಸಗಿಲ್ಲ. ವಿರೋಧ ಪಕ್ಷಗಳು ಸುಳ್ಳನ್ನು ನಿರಂತರವಾಗಿ ಹೇಳುವ ಮೂಲಕ ಸತ್ಯ ಮಾಡಲು ಸಾಧ್ಯವಿಲ್ಲ. ಸತ್ಯಕ್ಕೇ ಅಂತಿಮ ಜಯ ಎಂಬ ವಿಶ್ವಾಸವಿದೆ” ಎಂದು ಹೇಳಿದರು.

ವಿದೇಶ

• ಡಿ.ಸಿ.ಪ್ರಕಾಶ್ 

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದಂತೆಯೇ ಬಾಂಗ್ಲಾದೇಶದಲ್ಲಿ ಮುಸ್ಲಿಂ ಸಂಪ್ರದಾಯವಾದಿ ಆಡಳಿತವನ್ನು ಸ್ಥಾಪಿಸಲು ಪಾಕಿಸ್ತಾನದ ಐಎಸ್‌ಐ ಸಕ್ರಿಯವಾಗಿ ಪ್ರಯತ್ನಿಸುತ್ತಿದೆ!

ಹಿಂದೂ ಮಹಾಸಾಗರವು ವಿಶ್ವದ 3ನೇ ಅತಿದೊಡ್ಡ ಸಾಗರವಾಗಿದೆ. ಅಂತರರಾಷ್ಟ್ರೀಯ ಕಚ್ಚಾ ತೈಲ ವ್ಯಾಪಾರದಲ್ಲಿ ಶೇ.80ರಷ್ಟು ಮತ್ತು ಅಂತಾರಾಷ್ಟ್ರೀಯ ಸರಕು ವ್ಯಾಪಾರದಲ್ಲಿ ಶೇ.40ರಷ್ಟು  ಈ ಕಡಲ ಪ್ರದೇಶದ ಮೂಲಕವೇ ನಡೆಯುತ್ತದೆ. ಪ್ರಸ್ತುತ ಈ ಪ್ರದೇಶದಲ್ಲಿ ಭಾರತ ಪ್ರಾಬಲ್ಯ ಹೊಂದಿದೆ.

ಇದಕ್ಕೆ ಸವಾಲೆಸೆಯಲು ಚೀನಾ ‘ಒಂದು ರಸ್ತೆ, ಒಂದು ವಲಯ’ ಉಪಕ್ರಮದ ಅಡಿಯಲ್ಲಿ ಭಾರತದ ನೆರೆಯ ರಾಷ್ಟ್ರಗಳನ್ನು ತನ್ನ ಮಿತ್ರರಾಷ್ಟ್ರಗಳಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ, ಬಾಂಗ್ಲಾದೇಶದ ಬಂದರುಗಳು ಮತ್ತು ಮೂಲಸೌಕರ್ಯ ಯೋಜನೆಗಳಲ್ಲಿ ಚೀನಾ ಭಾರಿ ಹೂಡಿಕೆ ಮಾಡಿಕೊಂಡು ಬರುತ್ತಿದೆ. ಆದರೂ, ಆ ದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಭಾರತಕ್ಕೇ ಆಧ್ಯತೆ ನೀಡುತ್ತಿದ್ದರು.

ಇದರಿಂದಾಗಿ ಬಾಂಗ್ಲಾದೇಶದ ವ್ಯಾಪಾರದಲ್ಲಿ ಭಾರತದ ಕೈ ಮೇಲಾಗಿದೆ. ಬಾಂಗ್ಲಾದೇಶದಲ್ಲಿ ಸುಮಾರು 350ಕ್ಕೂ ಹೆಚ್ಚು ಭಾರತೀಯ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. 19,000ಕ್ಕೂ ಹೆಚ್ಚು ಭಾರತೀಯರು ಬಾಂಗ್ಲಾದಲ್ಲಿ ಕೆಲಸ ಮಾಡುತ್ತಿದ್ದಾರೆ.

ಶೇಖ್ ಹಸೀನಾ ಇತ್ತೀಚೆಗೆ ಹೇಳಿದಂತೆ, “ಬಾಂಗ್ಲಾದೇಶದ ತೀಸ್ತಾ ನದಿ ಅಭಿವೃದ್ಧಿ ಯೋಜನೆಯನ್ನು ಕಾರ್ಯಗತಗೊಳಿಸಲು ಚೀನಾ ಉತ್ಸುಕವಾಗಿದೆ. ಆದರೆ, ಈ ಯೋಜನೆಯನ್ನು ಭಾರತಕ್ಕೆ ಹಸ್ತಾಂತರಿಸಲಾಗುವುದು” ಎಂದು ಹೇಳಿದರು.

ಸತತವಾಗಿ ಭಾರತದ ಪರವಾಗಿದ್ದ ಶೇಖ್ ಹಸೀನಾ ಆಡಳಿತವನ್ನು ಕಿತ್ತೊಗೆಯಲು ಚೀನಾ ನಿರ್ಧರಿಸಿತು. ಇದಕ್ಕಾಗಿ ಆ ದೇಶವು ಪಾಕಿಸ್ತಾನದ ಐಎಸ್‌ಐ ಜೊತೆ ರಹಸ್ಯವಾಗಿ ಕೈ ಜೋಡಿಸಿದೆ. ಬಾಂಗ್ಲಾದೇಶಕ್ಕೆ ನುಸುಳಲು ಮತ್ತು ಗಲಭೆಗಳನ್ನು ಎಬ್ಬಿಸಲು ಐಎಸ್‌ಐ ಗೂಢಚಾರರಿಗೆ ಚೀನಾ ಉದಾರವಾಗಿ ಹಣವನ್ನು ನೀಡಿದೆ ಎಂದು ವರದಿಗಳಾಗಿದೆ.

ಈ ಕುರಿತು ಹೇಳುತ್ತಿರುವ ಭಾರತೀಯ ಗುಪ್ತಚರ ಮೂಲಗಳು, ‘ಜಮಾತ್-ಎ-ಇಸ್ಲಾಮಿ ಎಂಬ ಸಂಪ್ರದಾಯವಾದಿ ಸಂಘಟನೆ ಬಾಂಗ್ಲಾದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದರ ವಿದ್ಯಾರ್ಥಿ ಸಂಘಕ್ಕೆ ಸೇರಿದ ಇಸ್ಲಾಮಿ ಛತ್ರ ಶಿಬಿರ್ (Islami Chhatra Shibir) ವಿದ್ಯಾರ್ಥಿಗಳಿಗೆ ಪಾಕಿಸ್ತಾನದ ಐಎಸ್‌ಐ (ISI) ಕಳೆದ ಕೆಲವು ವರ್ಷಗಳಿಂದ ವಿಶೇಷ ತರಬೇತಿ ನೀಡುತ್ತಿದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಶಿಬಿರಗಳಲ್ಲಿ ಅವರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಲಾಗುತ್ತಿದೆ.

ಐಎಸ್‌ಐ ಮೂಲಕ ತರಬೇತಿ ಪಡೆದ ಇವರು, ಬಾಂಗ್ಲಾದೇಶ ವಿದ್ಯಾರ್ಥಿ ಸಂಘದ ಪ್ರತಿಭಟನೆಯನ್ನು ಗಲಭೆಯಾಗಿ ಪರಿವರ್ತಿಸಿ ಅಪಾರ ಪ್ರಮಾಣದ ಪ್ರಾಣಹಾನಿ ಮಾಡಿದ್ದಾರೆ. ಇದಕ್ಕಾಗಿ ಚೀನಾ ಐಎಸ್‌ಐಗೆ ಭಾರಿ ಮೊತ್ತದ ಹಣ ನೀಡಿದೆ.

ದಾವೂದ್ ಇಬ್ರಾಹಿಂನೊಂದಿಗೆ ಸಂಪರ್ಕ: ಬಾಂಗ್ಲಾದೇಶದ ಪ್ರಮುಖ ವಿರೋಧ ಪಕ್ಷವಾದ ಬಿಎನ್‌ಪಿಯ (Bangladesh Nationalist Party) ನಾಯಕ ತಾರಿಕ್ ರೆಹಮಾನ್ (Tarique Rahman) ಅವರು ಬ್ರಿಟನ್ ರಾಜಧಾನಿ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಅವರು ಮತ್ತು ಹಿರಿಯ ಐಎಸ್‌ಐ ಮುಖ್ಯಸ್ಥ ಜಾವಿದ್ ಇತ್ತೀಚೆಗೆ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಭೇಟಿಯಾಗಿದ್ದರು. ಆಗ ಶೇಖ್ ಹಸೀನಾ ಅವರ ಆಡಳಿತವನ್ನು ಕಿತ್ತೊಗೆಯಲು ಸಂಚು ರೂಪಿಸಲಾಗಿದೆ.

ಬಿಎನ್‌ಪಿ ಮುಖ್ಯಸ್ಥ ತಾರಿಕ್ ರೆಹಮಾನ್, ಮುಂಬೈನ ಭೂಗತ ಲೋಕ ಪಾತಕಿ ದಾವೂದ್ ಇಬ್ರಾಹಿಂ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ. ದುಬೈನಲ್ಲಿರುವ ದಾವೂದ್ ಇಬ್ರಾಹಿಂ ಆಸ್ತಿಯನ್ನು ತಾರಿಕ್ ರೆಹಮಾನ್ ಖರೀದಿಸಿದ್ದಾರೆ.

ಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿ ಇತ್ತೀಚೆಗೆ 10 ಟ್ರಕ್‌ಗಳಲ್ಲಿ ಸಾಗಿಸಲಾಗಿದ್ದ ಬಂದೂಕುಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಶಸ್ತ್ರಾಸ್ತ್ರಗಳನ್ನು ಇಸ್ಲಾಮಿ ಛತ್ರ ಶಿಬಿರ್ ಸಂಘಟನೆಗೆ ಸೇರಿದ ವಿದ್ಯಾರ್ಥಿಗಳಿಗೆ ಕಳುಹಿಸಲಾಗಿತ್ತು.

ಇದರ ಹಿಂದೆ ತಾರಿಕ್ ರೆಹಮಾನ್ ಮತ್ತು ದಾವೂದ್ ಇಬ್ರಾಹಿಂ ಇದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದಂತೆಯೇ ಬಾಂಗ್ಲಾದೇಶದಲ್ಲಿ ಮುಸ್ಲಿಂ ಸಂಪ್ರದಾಯವಾದಿ ಆಡಳಿತವನ್ನು ಸ್ಥಾಪಿಸಲು ಪಾಕಿಸ್ತಾನದ ಐಎಸ್‌ಐ ಸಕ್ರಿಯವಾಗಿ ಪ್ರಯತ್ನಿಸುತ್ತಿದೆ’ ಎಂದು ಭಾರತೀಯ ಗುಪ್ತಚರ ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ.

ರಾಜ್ಯ

“ಮೂಲತಃ ಬಿಜೆಪಿಯು ಯಾವಾಗಲೂ ವಕ್ಫ್ ಬೋರ್ಡ್ ವಿರುದ್ಧವಾಗಿದೆ. ಇದರ ಮುಂದುವರಿದು ಈಗ ವಕ್ಫ್ ಮಂಡಳಿಯ ಹಕ್ಕುಗಳನ್ನು ಕಿತ್ತುಕೊಳ್ಳಲು ಮೋದಿ ಸರ್ಕಾರ ಮುಂದಾಗಿದೆ. ಬಿಜೆಪಿ ವಕ್ಫ್ ಬೋರ್ಡ್ ಅನ್ನು ರದ್ದುಪಡಿಸಲು ಬಯಸುತ್ತದೆ!”- ಕರ್ನಾಟಕ ಮುಸ್ಲಿಂ ಯುನಿಟಿ

“ಭಾರತದ ವಕ್ಫ್ 1954ರ ಕಾಯ್ದೆಯಡಿ ಸಂವಿಧಾನಬದ್ದ ಮಂಡಳಿಯಾಗಿ ರಚನೆ ಗೊಂಡಿದೆ. ಅಧಿಕೃತವಾಗಿ ಭಾರತ ಸರ್ಕಾರದಿಂದ ಸ್ಥಾಪಿತವಾದ ಭಾರತೀಯ ಶಾಸನಬದ್ದ ಸಂಸ್ಥೆಯಾಗಿದೆ. ಇಂದಿನ ವಕ್ಫ್ ಮಂಡಳಿಗೆ ಒಳಪಟ್ಟ ಎಲ್ಲಾ ಆಸ್ತಿಗಳು ಹಲವಾರು ದಶಕಗಳಿಂದ ಮುಸ್ಲಿಮರು ಧಾರ್ಮಿಕ ಅಥವಾ ದತ್ತಿ ಉದ್ದೇಶಗಳಿಗಾಗಿ ಶಾಶ್ವತವಾಗಿ ನೀಡಲ್ಪಟ್ಟ ದೇಣಿಗೆಗಳು, ಅದು ಚರ ಅಥವಾ ಸ್ಥಿರ ಆಸ್ತಿಗಳು ಎಲ್ಲವೂ ಶಾಶ್ವತ ಸಮರ್ಪಣೆಗಳೇ ಆಗಿವೆ.

ಇಡೀ ಭಾರತದ ಮುಸ್ಲಿಮರಿಂದ ಪಡೆದ ಅನುದಾನದಿಂದಲೇ ವಕ್ಫ್ ಆಸ್ತಿಗಳನ್ನು ಸಂಗ್ರಹಿಸಲಾಗಿದೆಯೇ ಹೊರತು ಯಾವುದೇ ರಾಜ್ಯಗಳ ಅಥವಾ ಕೇಂದ್ರ ಸರ್ಕಾರಗಳಿಂದ ಪಡೆದ ಆಸ್ತಿಗಳಲ್ಲ. ಇಂತಹ ವಕ್ಫ್ ಮಂಡಳಿಯ ಹಕ್ಕುಗಳನ್ನು ಕಿತ್ತುಕೊಳ್ಳಲು ಮೋದಿ ಸರ್ಕಾರ ಮುಂದಾಗಿರುವುದು ಖಂಡನೀಯ” ಎಂದು ಕರ್ನಾಟಕ ಮುಸ್ಲಿಂ ಯುನಿಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

“ವಕ್ಫ್ ಮಂಡಳಿಯ ಅಧಿಕಾರ ಮತ್ತು ಅದರ ಕಾರ್ಯಚಟುವಟಿಕೆಗೆ ತಿದ್ದುಪಡಿ ತರಲು ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಮಸೂದೆಯನ್ನು ತರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಈ ನಿಲುವು ಸಂವಿಧಾನ ವಿರೋಧಿಯಾಗಿದೆ.

ಮೂಲತಃ ಬಿಜೆಪಿಯು ಯಾವಾಗಲೂ ವಕ್ಫ್ ಬೋರ್ಡ್ ವಿರುದ್ಧವಾಗಿದೆ. ಇದರ ಮುಂದುವರಿದು ಈಗ ವಕ್ಫ್ ಮಂಡಳಿಯ ಹಕ್ಕುಗಳನ್ನು ಕಿತ್ತುಕೊಳ್ಳಲು ಮೋದಿ ಸರ್ಕಾರ ಮುಂದಾಗಿದೆ. ಬಿಜೆಪಿ ವಕ್ಫ್ ಬೋರ್ಡ್ ಅನ್ನು ರದ್ದುಪಡಿಸಲು ಬಯಸುತ್ತದೆ. ಕೇಂದ್ರ ಸರ್ಕಾರವೇ ಈ ಮಸೂದೆಯ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದೆ.

ನಮ್ಮ ದೇಶದಲ್ಲಿ 1995ರ ವಕ್ಫ್ ಕಾಯ್ದೆ ಇದ್ದು, 2013ರಲ್ಲಿ ತಿದ್ದುಪಡಿ ಮಾಡಲಾಗಿದೆ. ಇದರ ಅಡಿಯಲ್ಲಿಯೇ ವಕ್ಫ್ ಆಸ್ತಿ ನಿರ್ವಹಣೆ ಮಾಡಲಾಗುತ್ತಿದೆ.

ಯಾವುದೇ ಭೂಮಿಯನ್ನು ತನ್ನ ಸ್ವಂತ ಆಸ್ತಿ ಎಂದು ಘೋಷಿಸುವ ವಕ್ಫ್ ಮಂಡಳಿಯ ಪರಮಾಧಿಕಾರವನ್ನು ಕಡಿತಗೊಳಿಸುವುದು ಸೇರಿದಂತೆ ವಕ್ಫ್ ಕಾಯ್ದೆಯಲ್ಲಿ ಹಲವಾರು ತಿದ್ದುಪಡಿಗಳನ್ನು ತರುವ ಮಸೂದೆ ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಮುಂದಾಗಿರುವುದು ಖಂಡನೀಯ.

ಈ ಹೊಸ ಮಸೂದೆಯು ವಕ್ಫ್ ಕಾಯ್ದೆಯಲ್ಲಿ ಸುಮಾರು 40 ತಿದ್ದುಪಡಿಗಳನ್ನು ಪ್ರಸ್ತಾಪಿಸುವ ಯೋಜನೆ ಹೊಂದಿದೆ. ಈ ಮಸೂದೆಗೆ ಕೇಂದ್ರ ಸಚಿವ ಸಂಪುಟ ಈಗಲೇ ಅನುಮೋದನೆ ನೀಡಿದೆ ಎಂದು ವರದಿಗಳು ತಿಳಿಸಿವೆ.

ಕರಡು ಮಸೂದೆಯು ಪ್ರಸ್ತಾಪಿಸಿದ ಪ್ರಮುಖ ತಿದ್ದುಪಡಿಗಳಲ್ಲಿ ವಕ್ಫ್ ಬೋರ್ಡ್‌ಗಳ ಪುನರ್‌ ರಚನೆ, ಮಂಡಳಿಗಳ ಸಂಯೋಜನೆಯನ್ನು ಬದಲಾಯಿಸುವುದು, ಮಂಡಳಿಯು ವಕ್ಫ್‌ ಆಸ್ತಿ ಎಂದು ಘೋಷಿಸುವ ಮೊದಲು ಭೂಮಿಯ ಪರಿಶೀಲನೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಕಾಯ್ದೆಯ ಕೆಲವು ಷರತ್ತುಗಳನ್ನು ರದ್ದುಗೊಳಿಸುವುದು ಸೇರಿದೆ.

ಕೇಂದ್ರ ವಕ್ಫ್ ಕೌನ್ಸಿಲ್ ಮತ್ತು ರಾಜ್ಯ ವಕ್ಫ್ ಮಂಡಳಿಗಳ ಸಂಯೋಜನೆಯನ್ನು ಬದಲಾಯಿಸುವುದು ಮತ್ತು ವಕ್ಫ್ ಕಾಯ್ದೆಯ ಸೆಕ್ಷನ್ 9 ಮತ್ತು ಸೆಕ್ಷನ್ 14ಕ್ಕೆ ತಿದ್ದುಪಡಿ ತರುವುದು ಮತ್ತು ರಾಜ್ಯ ವಕ್ಫ್ ಮಂಡಳಿಗಳು ತನ್ನದೆಂದು ಹೇಳಿಕೊಂಡಿರುವ ವಿವಾದಿತ ಭೂಮಿಯನ್ನು ಹೊಸದಾಗಿ ಪರಿಶೀಲಿಸಲು ಮಸೂದೆಯು ಪ್ರಸ್ತಾಪಿಸಿದೆ ಎಂದು ತಿಳಿದು ಬಂದಿದೆ. ಇಂತಹ ಕೇಂದ್ರ ಸರಕಾರದ ನಿಲುವುಗಳನ್ನು ಕರ್ನಾಟಕ ಮುಸ್ಲಿಂ ಯುನಿಟಿಯ ವಿರೋಧವಿದೆ ಹಾಗೂ ಬಲವಾಗಿ ಖಂಡಿಸುತ್ತದೆ.

ಪ್ರಸ್ತುತ, ದೇಶದ 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 30 ವಕ್ಫ್ ಮಂಡಳಿಗಳಿವೆ. 1995ರಲ್ಲಿ ವಕ್ಫ್ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಅದಕ್ಕೆ 2013ರಲ್ಲಿ ಕೆಲ ತಿದ್ದುಪಡಿ ತರಲಾಗಿದೆ. ಇವುಗಳ ನಿರ್ದೇಶನಗಳಲ್ಲಿಯೇ ಪ್ರಸ್ತುತ ಭಾರತ ವಕ್ಫ್ ಮಂಡಳಿ ಹಾಗು ರಾಜ್ಯ ವಕ್ಫ್ ಮಂಡಳಿಗಳು ಸಕ್ರಿಯವಾಗಿವೆ. ಇಂತಹ ಸಕ್ರಿಯ ಸರ್ಕಾರಿ ವಕ್ಫ್‌ ಕಾಯ್ದೆ ಮತ್ತು ಮಂಡಳಿಗಳನ್ನು ಬಿಜೆಪಿ ಮತ್ತು ಸಂಘಪರಿವಾರ ವಿರೋಧಿಸುತ್ತಾ ಬರುತ್ತಿರುವುದು ನಾಚಿಕೆಗೇಡು.

ವಕ್ಫ್‌ ಕಾಯ್ದೆಗೆ ತಿದ್ದುಪಡಿ ತಂದು ವಕ್ಫ್ ಮಂಡಳಿಗಳ ಅಧಿಕಾರವನ್ನು ಕಡಿತಗೊಳಿಸುವುದನ್ನು ವಕ್ಫ್ ಮಂಡಳಿಗೆ ಇರುವ ಕಾನೂನಿನ ಮಾನ್ಯತೆಯನ್ನು ಹಾಳುಮಾಡುವ ತಿದ್ದುಪಡಿಗಳನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ.

ಸದ್ಯ ಭಾರತ ವಕ್ಫ್ ಮಂಡಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತರಲು ಬಯಸಿರುವ ಸುಮಾರು ನಲವತ್ತು ತಿದ್ದುಪಡಿಗಳಿಗೆ ನಮ್ಮ ವಿರೋಧಿವಿದೆ.

ವಕ್ಫ್ ಮಂಡಳಿಗೆ ಸಂಬಂದಿಸಿದಂತೆ ಈ ತಿದ್ದುಪಡಿ ಕಾಯ್ದೆಗಳು ಜಾರಿಯಾದಲ್ಲಿ ಮುಂದಿನ ದಿನಗಳಲ್ಲಿ ಈ ಕಾಯ್ದೆಗಳನ್ನು ವಿರೋಧಿಸಿ ರಾಜ್ಯದಲ್ಲಿ ದೊಡ್ಡಮಟ್ಟದ ಜನಾಂದೋಲನ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು” ಎಂದು ಕರ್ನಾಟಕ ಮುಸ್ಲಿಂ ಯುನಿಟಿ (KMU)ಯ ರಾಜ್ಯಾಧ್ಯಕ್ಷರಾದ ಜಬ್ಬಾರ ಕಲಬುರ್ಗಿ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಖಾಸಿಂ ಸಾಬ್ ಅವರು ಪತ್ರಿಕಾ ಹೇಳಿಕೆಯ ಮೂಲಕ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.

ಬೆಂಗಳೂರು

ಬೆಂಗಳೂರು: ರಾಜಧಾನಿಗೆ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಸಂಬಂಧ ಇಂದು ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಮತ್ತು ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಎಂ.ಬಿ.ಪಾಟೀಲ್ ವಿಸ್ತೃತ ಚರ್ಚೆ ನಡೆಸಿದರು.

ನಂತರ ಮಾಧ್ಯಮ ಗೋಷ್ಠಿಯಲ್ಲಿ ವಿಚಾರ ಹಂಚಿಕೊಂಡ ಸಚಿವರು, “ನೂತನ ವಿಮಾನ ನಿಲ್ದಾಣಕ್ಕೆ ಐಡೆಕ್ ಸಂಸ್ಥೆಯು 7 ಜಾಗಗಳನ್ನು ಗುರುತಿಸಿದೆ. ವಿಮಾನ ನಿಲ್ದಾಣಕ್ಕೆ ಯಾವ ಜಾಗ ಸೂಕ್ತ ಎನ್ನುವುದನ್ನು ಬೆಂಗಳೂರು ಮತ್ತು ಕರ್ನಾಟಕದ ಹಿತದೃಷ್ಟಿಯಿಂದ ತೀರ್ಮಾನಿಸಲಾಗುವುದು. ಈ ಸಂಬಂಧ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಜತೆ ಮಂಗಳವಾರ ಅಥವಾ ಬುಧವಾರ ಚರ್ಚಿಸಿ, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಕ್ಷಿಪ್ರಗತಿಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗುವುದು” ಎಂದು ಹೇಳಿದರು.

“ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಮಾತನಾಡಿ, “ನೂತನ ವಿಮಾನ ನಿಲ್ದಾಣದ ಸಂಬಂಧ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಅವರು ಈಗಾಗಲೇ ಹತ್ತಕ್ಕೂ ಹೆಚ್ಚು ಸಭೆಗಳನ್ನು ನಡೆಸಿದ್ದಾರೆ. ಬೆಂಗಳೂರು ನಗರದ ಅಭಿವೃದ್ಧಿ, ಅವಕಾಶ ಮತ್ತು ಪ್ರಯಾಣಿಕರು ಹಾಗೂ ಸರಕು ಸಾಗಣೆ ಒತ್ತಡ ಪರಿಗಣಿಸಿ, ಮುಂದಿನ ಹೆಜ್ಜೆ ಇಡಲಾಗುವುದು” ಎಂದರು.

ಅಡ್ವೊಕೇಟ್ ಜನರಲ್ ಶಶಿಕಿರಣ ಶೆಟ್ಟಿ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾಶಂಕರ್, BBMP ಆಯುಕ್ತರಾದ ತುಷಾರ್ ಗಿರಿನಾಥ್, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಎನ್.ಮಂಜುಳಾ, ಮೂಲಸೌಕರ್ಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಹೆಬ್ಸಿಬಾ ರಾಣಿ ಕೊರ್ಲಪಟಿ ಮುಂತಾದವರು ಉಪಸ್ಥಿತರಿದ್ದರು.

ವಿದೇಶ

“ಪ್ರಸ್ತುತ ಜಾಗತಿಕ ವಾಸ್ತವದೊಂದಿಗೆ ನಾವು ಯುದ್ಧವನ್ನು ನಿರ್ವಹಿಸಲು ಸಾಧ್ಯವಿಲ್ಲ. ಗಾಜಾಕ್ಕೆ ಬರುತ್ತಿರುವ ಮಾನವೀಯ ನೆರವು ಇಸ್ರೇಲ್‌ಗೆ ಅಪಾಯವನ್ನು ತಂದೊಡ್ಡುತ್ತದೆ.” – ಇಸ್ರೇಲ್ ಹಣಕಾಸು ಮಂತ್ರಿ.

ಇಸ್ರೇಲ್ – ಹಮಾಸ್ ನಡುವೆ ಒಂದು ವರ್ಷದಿಂದ ಯುದ್ಧ ನಡೆಯುತ್ತಿದೆ. ಕಳೆದ 24 ಗಂಟೆಗಳಲ್ಲಿ ಇಸ್ರೇಲ್ ದಾಳಿಯಲ್ಲಿ ಕನಿಷ್ಠ 40 ಜನರು ಸಾವನ್ನಪ್ಪಿದ್ದಾರೆ ಮತ್ತು 71 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಗಾಜಾ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 39,623 ಜನರು ಸಾವನ್ನಪ್ಪಿದ್ದಾರೆ. 91,469 ಜನರು ಗಾಯಗೊಂಡಿದ್ದಾರೆ ಎಂದು ಅಧಿಕೃತವಾಗಿ ವರದಿಯಾಗಿದೆ.

ಈ ಹಿನ್ನೆಲೆಯಲ್ಲಿ, ಇಸ್ರೇಲ್‌ನ ಹಣಕಾಸು ಮಂತ್ರಿ ಮತ್ತು ಬಲಪಂಥೀಯ ಬೆಂಬಲಿಗರಾದ ಬೆಜಲೆಲ್ ಸ್ಮೊಟ್ರಿಚ್ (Bezalel Smotrich) ಅವರು ಯಾದ್ ಬಿನ್ಯಾಮಿನ್‌ (Yad Binyamin)ನಲ್ಲಿ ಇಸ್ರೇಲ್ ಹಯೋಮ್ ಔಟ್‌ಲೆಟ್ (Hayom Outlet) ಆಯೋಜಿಸಿದ್ದ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು.

ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಇಸ್ರೇಲ್‌ ಹಣಕಾಸು ಮಂತ್ರಿ ಬೆಜಲೆಲ್ ಸ್ಮೊಟ್ರಿಚ್

“2005ರಲ್ಲಿ ಇಸ್ರೇಲ್ ಗಾಜಾದಿಂದ ಹೊರನಡೆಯದಿದ್ದರೆ, ಅಕ್ಟೋಬರ್ 7ರ ದಾಳಿ ನಡೆಯುತ್ತಿರಲಿಲ್ಲ. ಪ್ರಸ್ತುತ ಜಾಗತಿಕ ವಾಸ್ತವದೊಂದಿಗೆ ನಾವು ಯುದ್ಧವನ್ನು ನಿರ್ವಹಿಸಲು ಸಾಧ್ಯವಿಲ್ಲ. ಗಾಜಾಕ್ಕೆ ಬರುತ್ತಿರುವ ಮಾನವೀಯ ನೆರವು ಇಸ್ರೇಲ್‌ಗೆ ಅಪಾಯವನ್ನು ತಂದೊಡ್ಡುತ್ತದೆ.

ನಮ್ಮ ಒತ್ತೆಯಾಳುಗಳನ್ನು ಹಿಂತಿರುಗಿಸುವವರೆಗೆ ಗಾಜಾದ 2 ಮಿಲಿಯನ್ ನಾಗರಿಕರು ಹಸಿವಿನಿಂದ ಸಾವನ್ನಪ್ಪಿದರೂ ಸಹ, ಗಾಜಾ ಪಟ್ಟಿಗೆ ಮಾನವೀಯ ನೆರವನ್ನು ತಡೆಹಿಡಿಯುವುದು ನೈತಿಕವಾಗಿ ಸಮರ್ಥನೆಯಾಗಿದೆ. ಆದರೆ ಅಂತಾರಾಷ್ಟ್ರೀಯ ಸಮುದಾಯ ಅದಕ್ಕೆ ಅವಕಾಶ ನೀಡುವುದಿಲ್ಲ.

ಅದಕ್ಕಾಗಿಯೇ ನಾವು ಗಾಜಾಕ್ಕೆ ಸಹಾಯವನ್ನು ಅನುಮತಿಸುತ್ತಿದ್ದೇವೆ. ನಾವು ಇಂದು ಒಂದು ನಿರ್ದಿಷ್ಟ ವಾಸ್ತವದಲ್ಲಿ ಬದುಕುತ್ತಿದ್ದೇವೆ. ಆದ್ದರಿಂದ ಈ ಯುದ್ಧಕ್ಕೆ ಅಂತಾರಾಷ್ಟ್ರೀಯ ಮನ್ನಣೆಯ ಅಗತ್ಯವಿದೆ.” ಎಂದು ಹೇಳಿದ್ದಾರೆ.

ವಿದೇಶ

ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೆಲಿಕಾಪ್ಟರ್‌ ಮೂಲಕ ದೇಶ ತೊರೆದ ಶೇಖ್ ಹಸೀನಾ ಪ್ರಸ್ತುತ ಭಾರತದಲ್ಲಿ ನೆಲೆಸಿದ್ದಾರೆ!

ಎರಡು ವರ್ಷಗಳ ಹಿಂದೆ ಶ್ರೀಲಂಕಾದಲ್ಲಿ ಭುಗಿಲೆದ್ದಿದ್ದ ಆಡಳಿತ ವಿರೋಧಿ ಪ್ರತಿಭಟನೆ ಇದೀಗ ಬಾಂಗ್ಲಾದೇಶದಲ್ಲಿ ಭುಗಿಲೆದ್ದಿದೆ. ಬಾಂಗ್ಲಾದೇಶದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ, ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮರ ಕುಟುಂಬಗಳಿಗೆ ಶೇ.30ರಷ್ಟು ನೀಡಿರುವ ಮೀಸಲಾತಿಗೆ ವಿರುದ್ಧವಾಗಿ… ಪ್ರಧಾನಿ ಶೇಖ್ ಹಸೀನಾ ವಿರುದ್ಧ ರಾಷ್ಟ್ರವ್ಯಾಪಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ಒಂದು ಹಂತದಲ್ಲಿ ಹಿಂಸಾಚಾರಕ್ಕೆ ತಿರುಗಿದೆ.

ಸುಮಾರು ಒಂದು ತಿಂಗಳ ಕಾಲ ನಡೆದ ಈ ಹಿಂಸಾಚಾರದಲ್ಲಿ 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಹಲವಾರು ಸಾವುನೋವುಗಳಿಗೆ ಪ್ರತಿಕ್ರಿಯೆಯಾಗಿ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ, ಕಳೆದ ವಾರದಿಂದ ಪ್ರತಿಭಟನೆಗಳು ತೀವ್ರಗೊಂಡಿದ್ದು, ಇಂದು ಬೆಳಗ್ಗೆ ರಾಷ್ಟ್ರ ರಾಜಧಾನಿ ಢಾಕಾದಲ್ಲಿ ಪ್ರಧಾನಿಯವರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಲು ಸಾವಿರಾರು ಜನರು ಜಮಾಯಿಸಿದರು.

ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೆಲಿಕಾಪ್ಟರ್‌ ಮೂಲಕ ದೇಶ ತೊರೆದರು. ಸದ್ಯ ಶೇಖ್ ಹಸೀನಾ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ.

ಈ ಹಿನ್ನೆಲೆಯಲ್ಲಿ, ಪ್ರತಿಭಟನಾಕಾರರು ಬಾಂಗ್ಲಾದೇಶದ ಪ್ರಧಾನಿ ನಿವಾಸವನ್ನು ದೋಚಿದ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ಹರಡುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ಪ್ರತಿಭಟನಾಕಾರರು ಪ್ರಧಾನಿ ನಿವಾಸದ ಕಡತಗಳನ್ನು ನಾಶಪಡಿಸುತ್ತಿದ್ದಾರೆ.

ಅಲ್ಲದೆ, ಒಳಗೆ ಬಿರಿಯಾನಿ ಸೇರಿದಂತೆ ಆಹಾರಗಳನ್ನು ಸೇವಿಸುವುದು, ಮೇಕೆ, ಮೊಲ, ಬಾತುಕೋಳಿ ಇತ್ಯಾದಿಗಳನ್ನು ಹೊತ್ತೊಯ್ಯುವುದು, ದಿಂಬು, ಬೆಡ್ ಶೀಟ್, ಸೂಟ್ ಕೇಸ್ ಇತ್ಯಾದಿಗಳನ್ನು ಹೊತ್ತೊಯ್ಯುವ ದೃಶ್ಯಗಳು ಇವೆ. ಅದೇ ಸಮಯದಲ್ಲಿ ದೇಶದ ಸೇನಾ ಮುಖ್ಯಸ್ಥರು ಶೀಘ್ರದಲ್ಲೇ ಮಧ್ಯಂತರ ಸರ್ಕಾರವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ ಎನ್ನಲಾಗಿದೆ.