ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಇಸ್ರೇಲ್ Archives » Page 2 of 2 » Dynamic Leader
November 21, 2024
Home Posts tagged ಇಸ್ರೇಲ್ (Page 2)
ವಿದೇಶ

ಹಮಾಸ್‌ನ ಹಿರಿಯ ಅಧಿಕಾರಿ ಅಲಿ ಬರಾಕಾ ಮಾತನಾಡಿ, ಸೋವಿಯತ್ ರಷ್ಯಾದಂತೆ ಅಮೆರಿಕವೂ ಮುಂದೊಂದು ದಿನ ಕುಸಿಯಲಿದೆ. ಇಸ್ರೇಲ್-ಹಮಾಸ್ ಯುದ್ಧದಲ್ಲಿ ಅಮೆರಿಕ ಇಸ್ರೇಲ್ ಅನ್ನು ಬೆಂಬಲಿಸುತ್ತಿದೆ. ಇದರಿಂದ ಪ್ಯಾಲೆಸ್ತೀನ್ ನಲ್ಲಿ ಇಸ್ರೇಲ್ ಸೇನೆ ಕ್ರೂರ ದಾಳಿ ನಡೆಸುತ್ತಿದೆ.

ಈ ಹಿನ್ನಲೆಯಲ್ಲಿ, ಹಮಾಸ್ ಸಂಘಟನೆಯ ಹಿರಿಯ ಅಧಿಕಾರಿ ಅಲಿ ಬರಾಕಾ ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ, ‘ಸೋವಿಯತ್ ರಷ್ಯಾದಂತೆ ಅಮೆರಿಕ ಒಡೆಯುತ್ತದೆ. ಅಮೆರಿಕದ ಶತ್ರು ರಾಷ್ಟ್ರಗಳೆಲ್ಲ ಒಂದಾಗಲು ಸಮಾಲೋಚನೆ ನಡೆಸಲಾಗುತ್ತಿದೆ. ಅವರೆಲ್ಲರೂ ಒಟ್ಟಾಗಿ ಯುದ್ಧಕ್ಕೆ ಮುಂದಾದರೆ ಅಮೆರಿಕಕ್ಕೆ ಭಾರಿ ನಷ್ಟವಾಗುತ್ತದೆ.

ಅಮೇರಿಕ ಪ್ರಬಲ ರಾಷ್ಟ್ರವಾಗಿ ಇರುವುದಿಲ್ಲ. ಅಮೆರಿಕದ ಮೇಲೆ ದಾಳಿ ಮಾಡಿದ್ದಕ್ಕಾಗಿ ನಾನು ಉತ್ತರ ಕೊರಿಯಾವನ್ನು ಶ್ಲಾಘಿಸುತ್ತೇನೆ. ಅಮೆರಿಕದ ಮೇಲೆ ದಾಳಿ ಮಾಡುವ ವಿಶ್ವದ ಏಕೈಕ ವ್ಯಕ್ತಿ ಎಂದರೆ ಅದು ಉತ್ತರ ಕೊರಿಯಾದ ನಾಯಕ ಮಾತ್ರ. ಅಮೆರಿಕ ಮೇಲೆ ದಾಳಿ ಮಾಡುವ ಸಾಮರ್ಥ್ಯವನ್ನು ಉತ್ತರ ಕೊರಿಯಾ ಹೊಂದಿರುವುದರಿಂದ, ಉತ್ತರ ಕೊರಿಯಾ ಕೂಡ ನಮ್ಮ ಮೈತ್ರಿಗೆ ಸೇರಬಹುದು.

ಹಮಾಸ್ ನಿಯೋಗ ಇತ್ತೀಚೆಗೆ ರಷ್ಯಾದ ಮಾಸ್ಕೋಗೆ ಭೇಟಿ ನೀಡಿತ್ತು; ಅದೇ ರೀತಿ ಚೀನಾಕ್ಕೆ ಹೋಗುತ್ತದೆ. ಇರಾನ್‌ಗೆ ಅಮೆರಿಕದ ಮೇಲೆ ದಾಳಿ ಮಾಡುವ ಸಾಮರ್ಥ್ಯ ಇಲ್ಲ. ಈ ಯುದ್ಧದಲ್ಲಿ ಇರಾನ್ ಮಧ್ಯಪ್ರವೇಶಿಸಿದರೆ, ಅದು ಜಿಯೋನಿಸ್ಟ್ ಸಂಘಟನೆ ಮತ್ತು ಅಮೆರಿಕದ ನೆಲೆಗಳ ಮೇಲೆ ದಾಳಿ ಮಾಡುತ್ತದೆ. ಆದರೆ ಇರಾನ್ ಬಳಿ ಸಾಕಷ್ಟು ಶಸ್ತ್ರಾಸ್ತ್ರಗಳಿಲ್ಲ.’ ಎಂದು ಹೇಳಿದರು.

ವಿದೇಶ

ಬೀಜಿಂಗ್: ಚೀನಾದ ಬೈದು (Baidu) ಮತ್ತು ಅಲಿಬಾಬಾ (Alibaba) ಆನ್‌ಲೈನ್ ನಕ್ಷೆಗಳಿಂದ ಇಸ್ರೇಲ್ ಹೆಸರನ್ನು ತೆಗೆದುಹಾಕಲಾಗಿದೆ. ಪ್ಯಾಲೆಸ್ತೀನ್ ಗೆ ಬೆಂಬಲ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಇಸ್ರೇಲ್ ಮತ್ತು ಹಮಾಸ್ ನಡುವೆ 20 ದಿನಗಳಿಗೂ ಹೆಚ್ಚು ಕಾಲ ಸಂಘರ್ಷ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಚೀನಾದ ಪ್ರಮುಖ ತಂತ್ರಜ್ಞಾನ ಕಂಪನಿಗಳಾದ ಅಲಿಬಾಬಾ ಮತ್ತು ಬೈದು ತಮ್ಮ ಆನ್‌ಲೈನ್ ನಕ್ಷೆಗಳಿಂದ ಇಸ್ರೇಲ್ ಹೆಸರನ್ನು ತೆಗೆದುಹಾಕಿವೆ. ಚೀನಾದ ಪ್ಯಾಲೆಸ್ತೀನ್ ಪರ ನಿಲುವನ್ನು ಬೆಂಬಲಿಸುವ ಸಲುವಾಗಿ ಚೀನಾದ ಕಂಪನಿಗಳು ಈ ಕ್ರಮವನ್ನು ತೆಗೆದುಕೊಂಡಿರಬಹುದು ಎಂದು ಹೇಳಲಾಗುತ್ತದೆ.

ಆದಾಗ್ಯೂ, ಬೈದುವಿನ ಚೈನೀಸ್ ಭಾಷೆಯ ಆನ್‌ಲೈನ್ ನಕ್ಷೆಯಲ್ಲಿ ಅಂತರಾಷ್ಟ್ರೀಯವಾಗಿ ಸೂಚಿಸಲಾದ ಅಳತೆಗಳ ಪ್ರಕಾರ ಇಸ್ರೇಲ್‌ನ ಗಡಿಗಳನ್ನು ಗುರುತಿಸಲಾಗಿದ್ದರೂ ಆ ಪ್ರದೇಶದಲ್ಲಿ ಇಸ್ರೇಲ್ ಹೆಸರನ್ನು ಉಲ್ಲೇಖಿಸಲಾಗಿಲ್ಲ. ಅಲಿಬಾಬಾ ಮತ್ತು ಬೈದು ಕಂಪನಿಗಳು ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ.

ಇಸ್ರೇಲ್-ಹಮಾಸ್ ಯುದ್ಧದಲ್ಲಿ ಯಾರನ್ನೂ ಬೆಂಬಲಿಸದ ಚೀನಾ ಪ್ಯಾಲೆಸ್ತೀನ್ ಗೆ ಪ್ರತ್ಯೇಕ ರಾಜ್ಯ ನೀಡುವುದೇ ಪರಿಹಾರ ಎಂದು ಹೇಳಿದ್ದು ಗಮನಾರ್ಹ.

ವಿದೇಶ

ಬೀಜಿಂಗ್: ಇಸ್ರೇಲ್ ಮತ್ತು ಹಮಾಸ್ ನಡುವಿನ ಸಮರದಲ್ಲಿ ಮೌನವಾಗಿದ್ದ ಚೀನಾ ಇದೀಗ ತನ್ನ ನಿಲುವನ್ನು ಬದಲಿಸಿದ್ದು, “ಇಸ್ರೇಲ್ ಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕು ಇದೆ” ಎಂದು ಹೇಳಿದೆ.

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವೂ 18ನೇ ದಿನವೂ ಮುಂದುವರಿದಿದೆ. ಈ ದಾಳಿಯ ಪ್ರಾರಂಭದಿಂದಲೂ, ಅಮೆರಿಕಾ, ಬ್ರಿಟನ್ ಮತ್ತು ಫ್ರಾನ್ಸ್ ಸೇರಿದಂತೆ ದೇಶಗಳು ಇಸ್ರೇಲನ್ನು ಬೆಂಬಲಿಸುತ್ತಾ ಹಮಾಸ್ ಹೋರಾಟಗಾರರನ್ನು ಖಂಡಿಸುತ್ತಾ ಬಂದಿವೆ. ಆದರೆ ಈ ವಿಚಾರದಲ್ಲಿ ಚೀನಾ ಯಾರನ್ನೂ ಬೆಂಬಲಿಸದೆ ದೂರವೇ ಉಳಿದಿತ್ತು.

ಯುದ್ಧವನ್ನು ತಕ್ಷಣವೇ ಕೊನೆಗೊಳಿಸಬೇಕೆಂದು ಕರೆ ನೀಡಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಪ್ಯಾಲೆಸ್ತೀನ್ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಲು ಅರಬ್ ರಾಷ್ಟ್ರಗಳು ಮತ್ತು ಈಜಿಪ್ಟ್ ಜೊತೆ ಸೇರಿ ಕೆಲಸ ಮಾಡಲು ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ ಅಮಾಯಕರನ್ನು ಕೊಂದ ಹಮಾಸ್ ಭಯೋತ್ಪಾದಕರನ್ನು ಖಂಡಿಸಬೇಕು ಎಂದು ಅಮೆರಿಕಾ ಸಂಸದರು ಚೀನಾವನ್ನು ಒತ್ತಾಯಿಸುತ್ತಾ ಬಂದರು. ಇಸ್ರೇಲ್ ಕೂಡ ತಮ್ಮ ಅಸಮಾಧಾನ ವ್ಯಕ್ತಪಡಿಸಿತ್ತು.

ಇದರ ಬಗ್ಗೆ ಮಾತನಾಡಿರುವ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ, “ಪ್ರತಿಯೊಂದು ರಾಷ್ಟ್ರಕ್ಕೂ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕಿದೆ. ಅದೇ ಸಮಯದಲ್ಲಿ, ನಾವು ಅಂತರರಾಷ್ಟ್ರೀಯ ಕಾನೂನುಗಳನ್ನು ಗೌರವಿಸಬೇಕು ಮತ್ತು ಮುಗ್ಧ ಜನರನ್ನು ರಕ್ಷಿಸಬೇಕು. ಯುದ್ಧದಿಂದಾಗಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಅಲ್ಲಿ ಪರಿಸ್ಥಿತಿ ಕೆಟ್ಟಿರುವುದು ಬೇಸರವಾಗಿದೆ. ಅಮಾಯಕರು ಸಂಕಷ್ಟಕ್ಕೆ ಸಿಲುಕಿರುವುದನ್ನು ನಾನು ಖಂಡಿಸುತ್ತೇನೆ ಮತ್ತು ಅಂತರಾಷ್ಟ್ರೀಯ ಕಾನೂನಿನ ಉಲ್ಲಂಘನೆಯ ವಿರುದ್ಧವೂ ಪ್ರತಿಭಟಿಸುತ್ತೇನೆ” ಎಂದು ಹೇಳಿದ್ದಾರೆ.

ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಇದೇ 26 ರಿಂದ 28 ರವರೆಗೆ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಆ ಸಂದರ್ಭದಲ್ಲಿ ದೇಶದ ನಾಯಕರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಅಮೆರಿಕಾ ಮತ್ತು ಐರೋಪ್ಯ ಒಕ್ಕೂಟದಿಂದ ಭಯೋತ್ಪಾದಕ ಸಂಘಟನೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಹಮಾಸ್ ಸಂಘಟನೆಯನ್ನು ಚೀನಾ ಖಂಡಿಸಿರುವುದು ಗನಾರ್ಹ.

ವಿದೇಶ

ವ್ಯಾಟಿಕನ್: ಇಸ್ರೇಲ್ ಮತ್ತು ಹಮಾಸ್ ಭಯೋತ್ಪಾದಕರ ನಡುವಿನ ಸಮರ ಮುಂದುವರಿದಿರುವಾಗಲೇ ಪೋಪ್ ಫ್ರಾನ್ಸಿಸ್ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಇಸ್ರೇಲ್ ಸೇನೆ ಮತ್ತು ಹಮಾಸ್ ಭಯೋತ್ಪಾದಕರ ನಡುವೆ ಕಳೆದ ಅಕ್ಟೋಬರ್ 7 ರಿಂದ ದಾಳಿ ಮುಂದುವರಿಯುತ್ತಿದೆ. ಇದರಲ್ಲಿ ಇಸ್ರೇಲೀಯರು 1,400 ಮಂದಿ ಮತ್ತು ಪ್ಯಾಲೆಸ್ತೀನಿಯರು 4,469 ಮಂದಿ ಸಾವನ್ನಪ್ಪಿದ್ದಾರೆ. ಅಮೆರಿಕ ಯುದ್ಧವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದೆ.

ಈ ಹಿನ್ನಲೆಯಲ್ಲಿ, ವ್ಯಾಟಿಕನ್ ಕ್ಯಾಥೋಲಿಕ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಜಗತ್ತಿನ ವಿವಿಧ ಸಂಘರ್ಷಗಳನ್ನು ಮತ್ತು ಶಾಂತಿಯ ಮಾರ್ಗಗಳನ್ನು ಗುರುತಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವನ್ನು ಕೊನೆಗಾಣಿಸಲು ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ವಿದೇಶ

ಇಸ್ರೇಲ್ ಸೇನೆಯು ಗಾಜಾದ ಮೇಲೆ ವೈಟ್ ಪಾಸ್ಪರಸ್ (ಬಿಳಿ ರಂಜಕ) ಬಾಂಬ್‌ಗಳನ್ನು ಬೀಳಿಸಿದೆ ಎಂದು ಆರೋಪಿಸಲಾಗಿದೆ.

ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವಿನ ಯುದ್ಧ ತೀವ್ರಗೊಂಡಿದೆ. ಹಮಾಸ್, ಮೊದಲು ಇಸ್ರೇಲ್ ಮೇಲೆ ಹಠಾತ್ ದಾಳಿ ನಡೆಸಿ ಅನೇಕ ಸಾವುನೋವುಗಳಿಗೆ ಕಾರಣವಾದಾಗ, ಇಸ್ರೇಲ್ ಉಗ್ರವಾಗಿ ಪ್ರತಿದಾಳಿ ನಡೆಸುತ್ತಿದೆ. ಹಮಾಸ್ ವಶಪಡಿಸಿಕೊಂಡ ಗಾಜಾ ಗಡಿಯಲ್ಲಿರುವ ಪ್ರದೇಶಗಳ ಮೇಲೆ ಇಸ್ರೇಲ್ ಮತ್ತೆ ಹಿಡಿತ ಸಾಧಿಸಿದೆ. ಜೊತೆಗೆ ಗಾಜಾದ ಮೇಲೆ ವೈಮಾನಿಕ ದಾಳಿ ನಡೆಸುವುದನ್ನು ಮುಂದುವರೆಸಿದೆ. ಈ ದಾಳಿಯಲ್ಲಿ ಹಲವು ಮಂದಿ ಸಾವನ್ನಪ್ಪಿದ್ದಾರೆ.

ನಾಲ್ಕನೇ ದಿನವೂ ಯುದ್ಧ ಮುಂದುವರಿದಿದ್ದು, ಇಸ್ರೇಲ್ ಅಂತಾರಾಷ್ಟ್ರೀಯವಾಗಿ ನಿಷೇಧಿತ ವೈಟ್ ಪಾಸ್ಪರಸ್ ಬಾಂಬ್‌ಗಳನ್ನು ಬಳಸುತ್ತಿದೆ ಎಂದು ಆರೋಪಿಸಲಾಗಿದೆ. ಉತ್ತರ ಗಾಜಾದಲ್ಲಿ ಇಸ್ರೇಲಿ ಸೇನೆಯು ಹೆಚ್ಚು ಜನನಿಬಿಡ ಪ್ರದೇಶಗಳ ಮೇಲೆ ವೈಟ್ ಪಾಸ್ಪರಸ್ ಬಾಂಬ್‌ಗಳನ್ನು ಬೀಳಿಸುತ್ತಿದೆ ಎಂದು ಹೇಳಿಕೊಳ್ಳುವ ವೀಡಿಯೊ ಮತ್ತು ಫೋಟೋಗಳನ್ನು ಪ್ಯಾಲೆಸ್ಟೀನಿಯರು ಬಿಡುಗಡೆ ಮಾಡಿದ್ದಾರೆ. ಇದರಿಂದ ಜನರು ಭಯಭೀತರಾಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಬೆಂಕಿಯ ಮಳೆ ಬೀಳುವಂತಿದೆ. ಆದರೆ ಈ ವೀಡಿಯೋ ವಾಸ್ತವವಾಗಿ ಗಾಜಾದಲ್ಲಿ ರೆಕಾರ್ಡ್ ಆಗಿದೆಯೇ? ಇತ್ತೀಚಿನ ವೀಡಿಯೊನಾ? ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ.

ವೈಟ್ ಪಾಸ್ಪರಸ್ ಶೀಘ್ರದಲ್ಲೇ ಹೊತ್ತಿ ಉರಿಯುವ ರಾಸಾಯನಿಕವಾಗಿದೆ. ಗಾಳಿಗೆ ಒಡ್ಡಿಕೊಂಡಾಗ ಅದು ತ್ವರಿತವಾಗಿ ಮತ್ತು ಪ್ರಕಾಶಮಾನವಾಗಿ ಉರಿಯುತ್ತದೆ. ಅಮೆರಿಕಾ ಸೇರಿದಂತೆ ವಿವಿಧ ದೇಶಗಳ ಸೇನೆಗಳು, ಶತ್ರುಗಳ ಗುರಿಗಳನ್ನು ನಾಶಪಡಿಸಲು ಮತ್ತು ಹಾನಿ ಮಾಡಲು ಬೆಂಕಿಯ ಆಯುಧವಾಗಿ ವೈಟ್ ಪಾಸ್ಪರಸ್ ಬಾಂಬುಗಳನ್ನು ಬಳಸುತ್ತವೆ.

ಈ ರಾಸಾಯನಿಕವು ಹೊತ್ತಿಕೊಂಡಾಗ ಹೆಚ್ಚಿನ ಶಾಖವನ್ನು (ಸುಮಾರು 815 ° C) ಉತ್ಪಾದಿಸುತ್ತದೆ ಮತ್ತು ದಟ್ಟವಾದ ಬಿಳಿ ಹೊಗೆಯನ್ನು ಹೊರಸೂಸುತ್ತದೆ. ಉದ್ವಿಗ್ನ ಪ್ರದೇಶಗಳಲ್ಲಿ ಶತ್ರುವನ್ನು ಅಸ್ಥಿರಗೊಳಿಸಲು ಹೊಗೆ ವಲಯವನ್ನು ರಚಿಸಲು ಸೇನೆಗಳು ಈ ರೀತಿಯ ರಾಸಾಯನಿಕವನ್ನು ಬಳಸುತ್ತವೆ.

ಒಮ್ಮೆ ವೈಟ್ ಪಾಸ್ಪರಸ್ ಹೊತ್ತಿಕೊಂಡರೆ ಅದನ್ನು ಆರಿಸುವುದು ಬಹಳ ಕಷ್ಟ. ಹೊತ್ತಿ ಉರಿಯುವ ಈ ರಾಸಾಯನಿಕವು ಮಾನವನ ಚರ್ಮ ಮತ್ತು ಬಟ್ಟೆ ಸೇರಿದಂತೆ ಹಲವು ಪ್ರದೇಶಗಳಿಗೆ ಅಂಟಿಕೊಂಡರೆ ಬಹಳ ತೊಂದರೆಯಾಗುತ್ತದೆ. ಅಂಗಾಂಶ ಮತ್ತು ಮೂಳೆಗೆ ಆಳವಾಗಿ ತೂರಿಕೊಳ್ಳುತ್ತದೆ ಮತ್ತು ತೀವ್ರವಾದ ಸುಡುವಿಕೆಗೆ ಕಾರಣವಾಗುತ್ತದೆ.

ನಾಗರಿಕರ ಮೇಲೆ ವೈಟ್ ಪಾಸ್ಪರಸ್ ಬಾಂಬ್‌ಗಳನ್ನು ಬಳಸುವುದನ್ನು ಯುದ್ಧ ಅಪರಾಧ ಎಂದು ಪರಿಗಣಿಸಲಾಗುತ್ತದೆ. ರಷ್ಯಾ ಇತ್ತೀಚೆಗೆ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಈ ರೀತಿಯ ಬಾಂಬ್ ಅನ್ನು ಬಳಸಿದೆ ಎಂದು ಆರೋಪಿಸಲಾಗಿದೆ ಎಂಬುದು ಗಮನಾರ್ಹ.