ನವದೆಹಲಿ: 2024-25ನೇ ಸಾಲಿನ ಮಧ್ಯಂತರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಮನೆಯ ಮೇಲ್ಛಾವಣಿ ಮೇಲಿನ ಸೌರಶಕ್ತಿ ಫಲಕಗಳನ್ನು ಅಳವಡಿಸಿಕೊಂಡ 1 ಕೋಟಿ ಮನೆಗಳಿಗೆ ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು ಎಂದು ಘೋಷಿಸಿದ್ದಾರೆ. ಇದರಿಂದ ತಿಂಗಳಿಗೆ ರೂ.15 ಸಾವಿರದಿಂದ ರೂ.18 ಸಾವಿರ ವರೆಗೆ ಆದಾಯ ಗಳಿಸಬಹುದು ಎಂದು ಹೇಳಿದ್ದಾರೆ.
ಇನ್ನೂ ಕೆಲವೇ ತಿಂಗಳುಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಫೆಬ್ರವರಿ 1) ಲೋಕಸಭೆಯಲ್ಲಿ ಮಧ್ಯಂತರ ಬಜೆಟ್ ಅನ್ನು ಮಂಡಿಸಿದರು. “ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಮುಂದಿನ 5 ವರ್ಷಗಳಲ್ಲಿ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಮತ್ತು ಮುಂದಿನ 5 ವರ್ಷಗಳು ಅಭಿವೃದ್ಧಿಗಾಗಿ” ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಬಜೆಟ್‌ನ ಮುಖ್ಯಾಂಶಗಳು:
• ಮುಂದಿನ 5 ವರ್ಷಗಳಲ್ಲಿ 2 ಕೋಟಿ ಮನೆಗಳನ್ನು ನಿರ್ಮಿಸಲಾಗುವುದು.
• ಮನೆಯ ಮೇಲ್ಛಾವಣಿ ಮೇಲಿನ ಸೌರಶಕ್ತಿ ಫಲಕಗಳನ್ನು ಅಳವಡಿಸಿಕೊಂಡ 1 ಕೋಟಿ ಮನೆಗಳಿಗೆ ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು.
• ದೇಶಾದ್ಯಂತ ವೈದ್ಯಕೀಯ ಕಾಲೇಜುಗಳ ಸಂಖ್ಯೆಯನ್ನು ಹೆಚ್ಚಿಸಲು ವಿಶೇಷ ಸಮಿತಿಯನ್ನು ರಚಿಸಲಾಗುವುದು.
• ಪೌಷ್ಟಿಕಾಂಶದ ಕೊರತೆಯನ್ನು ಸರಿಪಡಿಸಲು ಹೊಸ ಆ್ಯಪ್ ಪರಿಚಯಿಸಲಾಗುವುದು.
• ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು 9 ರಿಂದ 18 ವರ್ಷದೊಳಗಿನ ಬಾಲಕಿಯರಿಗೆ ಲಸಿಕೆ ಕಾರ್ಯಕ್ರಮವನ್ನು ಪರಿಚಯಿಸಲಾಗುವುದು.
1 ಲಕ್ಷ ಕೋಟಿ ರೂ:
• ಸಂಶೋಧನೆ ಮತ್ತು ನಾವೀನ್ಯತೆ ಯೋಜನೆಗಳನ್ನು ಉತ್ತೇಜಿಸಲು 1 ಲಕ್ಷ ಕೋಟಿ ರೂಪಾಯಿಗಳ ನಿಧಿಯನ್ನು ವಿನಿಯೋಗಿಸಲಾಗುವುದು.
• ಮೀನುಗಾರಿಕೆ ಕ್ಷೇತ್ರದಲ್ಲಿ 55 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗುವುದು.
• ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ವಿಮಾ ಯೋಜನೆ ವಿಸ್ತರಿಸಲಾಗುವುದು.
• ದೇಶಾದ್ಯಂತ 41 ಸಾವಿರ ಕೋಚ್‌ಗಳನ್ನು ವಂದೇ ಭಾರತ್ ರೈಲು ಗುಣಮಟ್ಟಕ್ಕೆ ಮೇಲ್ದರ್ಜೆಗೇರಿಸಲಾಗುವುದು.
• ಸರಕು ರೈಲು ಸಂಚಾರಕ್ಕಾಗಿ ಪ್ರತ್ಯೇಕವಾಗಿ ಲೈನ್‌ಗಳನ್ನು ನಿರ್ವಹಿಸಲಾಗುವುದು.
• ಮೆಟ್ರೊ ರೈಲು ಯೋಜನೆಗಳನ್ನು ಇನ್ನಷ್ಟು ನಗರಗಳಿಗೆ ವಿಸ್ತರಿಸಲಾಗುವುದು.
ಪ್ರವಾಸೋದ್ಯಮ:
• ದೇಶದ ವಿಮಾನಯಾನ ಸಂಸ್ಥೆಗಳು 1000 ಹೊಸ ವಿಮಾನಗಳನ್ನು ಖರೀದಿಸಲು ಯೋಜಿಸುತ್ತಿವೆ.
• ಉಡಾನ್ ಯೋಜನೆಯಡಿಯಲ್ಲಿ 517 ಹೊಸ ಮಾರ್ಗಗಳಲ್ಲಿ ಕಡಿಮೆ ದರದ ವಿಮಾನಯಾನ ಸೇವೆಯನ್ನು ಪ್ರಾರಂಭಿಸಲು ಯೋಜಿಸಲಾಗಿದೆ.
• ಲಕ್ಷದ್ವೀಪವನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿ ಮಾಡಲು ಕ್ರಮಕೈಗೊಳ್ಳಲಾಗುವುದು.
• ಪ್ರವಾಸೋದ್ಯಮವನ್ನು ಉತ್ತೇಜಿಸಲು ಬಡ್ಡಿ ರಹಿತ ಸಾಲ ಯೋಜನೆ ಜಾರಿಗೊಳಿಸಲಾಗುವುದು.
• ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ವಿವಿಧ ಯೋಜನೆಗಳನ್ನು ಪರಿಚಯಿಸಲಾಗುವುದು.
ವಿತ್ತೀಯ ಕೊರತೆ:
• 2023-24ರ ಪರಿಷ್ಕೃತ ಅಂದಾಜಿನ ಪ್ರಕಾರ ಸರ್ಕಾರದ ವೆಚ್ಚ 40.90 ಲಕ್ಷ ಕೋಟಿ ರೂಪಾಯಿಗಳು.
• 2024-2025ರಲ್ಲಿ ದೇಶದ ವಿತ್ತೀಯ ಕೊರತೆ 5.1 ರೊಳಗೆ ನಿಯಂತ್ರಿಸಲಾಗುವುದು.
• 2025-26 ರ ವೇಳೆಗೆ ವಿತ್ತೀಯ ಕೊರತೆಯನ್ನು ಶೇಕಡಾ 4.5 ಕ್ಕಿಂತ ಕಡಿಮೆ ಮಾಡಲು ಯೋಜಿಸಲಾಗುವುದು.
• 10 ವರ್ಷಗಳಲ್ಲಿ ತೆರಿಗೆದಾರರ ಸಂಖ್ಯೆ 2.4 ಪಟ್ಟು ಹೆಚ್ಚಾಗಿದೆ.
ರಕ್ಷಣಾ ಇಲಾಖೆ:
• ರಕ್ಷಣಾ ವಲಯದಲ್ಲಿನ ಹೂಡಿಕೆಯನ್ನು ಶೇ 11.1ರಷ್ಟು ಹೆಚ್ಚಿಸಿ 11,11,111 ಕೋಟಿ ರೂ.ಗೆ ಹೆಚ್ಚಿಸಲಾಗುವುದು.
• ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆ ಒಟ್ಟು ದೇಶೀಯ ಬೆಳವಣಿಗೆಯಾದ ಜಿಡಿಪಿಯ ಶೇ.3.4%ರಷ್ಟು ಇರುತ್ತದೆ.