ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ರೈತರು Archives » Page 2 of 2 » Dynamic Leader
November 22, 2024
Home Posts tagged ರೈತರು (Page 2)
ರಾಜಕೀಯ

ಬೆಂಗಳೂರು: ಕರ್ನಾಟಕದ ನಿರಂತರ ಹೋರಾಟ, ಬಂದ್‌ ನಡುವೆಯೂ ದೆಹಲಿಯ ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ತಮಿಳುನಾಡಿಗೆ ನೀರು ಹರಿಸುವಂತೆ ಸೂಚಿಸಿದೆ. 18 ದಿನಗಳ ಕಾಲ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ತಿಳಿಸಿದೆ. ಈ ಹಿನ್ನಡೆಗೆ ಕಾಂಗ್ರೆಸ್ ಸರ್ಕಾರ ಕಾರಣವೆಂದು ಮಾಜಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಪೆಟ್ಟಿನ ಮೇಲೆ ಪೆಟ್ಟು ತಿನ್ನುತ್ತಿರುವ ಕರ್ನಾಟಕಕ್ಕೆ ಈಗ ಮತ್ತೆ ದೊಡ್ಡ ಹಿನ್ನಡೆ ಆಗಿದೆ. ಹಿನ್ನಡೆ ಎನ್ನುವುದು ನಿರಂತರವಾಗಿದ್ದು, ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ತಮಿಳುನಾಡಿಗೆ ಇನ್ನೂ 18 ದಿನಗಳ ಕಾಲ ನಿತ್ಯವೂ 3000 ಕ್ಯೂಸೆಕ್ಸ್ ಹರಿಸಲು ಕರ್ನಾಟಕಕ್ಕೆ ಇಂದು ಆದೇಶ ನೀಡಿದೆ. ಇದು ನಿಜಕ್ಕೂ ಆಘಾತಕಾರಿ; ಕಾವೇರಿ ಮತ್ತು ಕನ್ನಡಿಗರ ಪಾಲಿಗೆ ಮರಣಶಾಸನ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕಾವೇರಿ ಕೊಳ್ಳ ಮತ್ತು ಬೆಂಗಳೂರು ನಗರದ ಜನರ ಕತ್ತು ಹಿಚುಕುವುದಕ್ಕೆಂದೇ ಕಾಂಗ್ರೆಸ್ ಸರಕಾರ ಬಂದಿದೆಯೇನೋ ಎಂದು ಬಹಳ ನೋವಿನಿಂದ ಹೇಳಲೇಬೇಕಾಗಿದೆ

‘ಕೆಆರ್ಎಸ್ ಜಲಾಶಯಕ್ಕೆ ನಿತ್ಯವೂ 10,000 ಕ್ಯೂಸೆಕ್ ಒಳಹರಿವು ಇದೆ’ ಎನ್ನುತ್ತಾರೆ ಜಲ ಸಂಪನ್ಮೂಲ ಸಚಿವರು. ಇದಕ್ಕೆ ತದ್ವಿರುದ್ಧವಾಗಿ ಸಮಿತಿಯ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ‘ನಮ್ಮಲ್ಲಿ ನೀರೇ ಇಲ್ಲ’ ಎಂಬ ಮಾಹಿತಿ ನೀಡುತ್ತಾರೆ. ಇನ್ನೊಂದೆಡೆ ಹಿರಿಯ ಅಧಿಕಾರಿಯೊಬ್ಬರು ‘ಈ ಆದೇಶದಿಂದ ರಾಜ್ಯಕ್ಕೆ 2.5 ಟಿಎಂಸಿ ನೀರು ಉಳಿತಾಯವಾಗಿದೆ’ ಎನ್ನುತ್ತಾರೆ. ‘ಎತ್ತು ಏರಿಗೆ, ಕೋಣ ನೀರಿಗೆ’ ಎನ್ನುವಂತಿದೆ ಜಲ ಸಂಪನ್ಮೂಲ ಇಲಾಖೆ ಮತ್ತು ಸರಕಾರದ ಪರಿಸ್ಥಿತಿ. ಹೆಜ್ಜೆಹೆಜ್ಜೆಗೂ ಅನರ್ಥಗಳನ್ನೇ ಮಾಡುತ್ತಿರುವ ಈ ಸರಕಾರದ ವೈಫಲ್ಯದ ಲಾಭವನ್ನು ತಮಿಳುನಾಡು ಅತ್ಯಂತ ಜಾಣತನದಿಂದ ಪಡೆದುಕೊಳ್ಳುತ್ತಿದೆ ಎಂದು ಕಿಡಿಕಾರಿದ್ದಾರೆ.

ನಾವು ಕುಡಿಯಲು ನೀರು ಕೇಳುತ್ತಿದ್ದೇವೆ, ತಮಿಳುನಾಡು ಅಕ್ರಮವಾಗಿ ಮಿತಿಮೀರಿದ ವಿಸ್ತೀರ್ಣದಲ್ಲಿ ಬೆಳೆದ ‘ಕುರುವೈ’ ಬೆಳೆಗೆ ನೀರು ಕೇಳುತ್ತಿದೆ. ಅಲ್ಲಿ ಸ್ವಾರ್ಥ ಇದೆ; ಇಲ್ಲಿ ಜನರ ಬದುಕಿದೆ. ಮಾನವೀಯ ನ್ಯಾಯಕ್ಕೆ ವಿರುದ್ಧವಾದ ತಮಿಳುನಾಡು ನಡೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ಆ ರಾಜ್ಯದ ಇಂಥ ಮನಃಸ್ಥಿತಿಯ ವಿರುದ್ಧ ಪ್ರಬಲ ಹೋರಾಟ ಮಾಡುವ ಇಚ್ಛಾಶಕ್ತಿ ಈ ಸರ್ಕಾರಕ್ಕೆ ಇಲ್ಲದಾಗಿದೆ. ಕೇವಲ ಪಾಲುದಾರ ಪಕ್ಷ ಡಿಎಂಕೆಯ ಯೋಗಕ್ಷೇಮವನ್ನೇ ಕೈ ಸರಕಾರ ನೋಡುತ್ತಾ, ಕರ್ನಾಟಕದ ಹಿತವನ್ನು ಸಂಪೂರ್ಣ ಬಲಿ ಕೊಟ್ಟಿದೆ. ಕನ್ನಡಿಗರ ಮೇಲೆ ‘ಬಂಡೆ’ ಎಳೆದಿದೆ ಎಂದು ಆಡಳಿತ ರೂಢ ಡಿಎಂಕೆ ಮತ್ತು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರು. ಈಗಾಗಲೇ ಕಾವೇರಿ ನೀರು ಹಂಚಿಕೆಯನ್ನು ನ್ಯಾಯಾಧಿಕರಣ ಅಖೈರುಗೊಳಿಸಿದ್ದು, ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಆದರೆ, ಸಂಕಷ್ಟ ಕಾಲದಲ್ಲಿ ಪರಿಹಾರವೇನು? ಮಾತೆತ್ತಿದರೆ ನೀರು ಬಿಡಿ ಎಂದು ಆದೇಶಿಸುವ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) & ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಈ ಕೂಡಲೇ ‘ಸಂಕಷ್ಟ ಹಂಚಿಕೆ ಸೂತ್ರ’ವನ್ನು ರೂಪಿಸಲೇಬೇಕು. ಆ ನಿಟ್ಟಿನಲ್ಲಿ ಸರ್ಕಾರ ಒತ್ತಡ ಹೇರಿ, ಆ ಸೂತ್ರ ರೂಪಿಸದ ಹೊರತು ತಮಿಳುನಾಡಿಗೆ ನೀರು ಹರಿಸುವ ಪ್ರಶ್ನೆಯೇ ಇಲ್ಲವೆಂದು ಕಡ್ಡಿ ತುಂಡು ಮಾಡಿದಂತೆ ಸ್ಪಷ್ಟವಾಗಿ ಹೇಳಲೇಬೇಕು. ಯಾವುದೇ ಕಾರಣಕ್ಕೂ ಈಗ ನೀರು ಹರಿಸಬಾರದು ಎಂದು ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ದೇಶ

ಡಿ.ಸಿ.ಪ್ರಕಾಶ್ ಸಂಪಾದಕರು

ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಂದಿದ್ದ ಕೃಷಿ ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ 2020ರಲ್ಲಿ ರೈತರು ಪ್ರತಿಭಟನೆ ನಡೆಸಿದ್ದರು. ಈ ಹೋರಾಟ ಭಾರತವನ್ನು ಸ್ಥಬ್ದಗೊಳಿಸಿತ್ತು. ಅದರಲ್ಲೂ ದೆಹಲಿಯ ಗಡಿಗೆ ಹೊಂದಿಕೊಂಡಿರುವ ಸಿಂಘು, ಟಿಕ್ರಿ ಮತ್ತು ಗಾಜಿಪುರ ಪ್ರದೇಶಗಳಲ್ಲಿ ಪಂಜಾಬ್, ಹರಿಯಾಣ ಸೇರಿದಂತೆ ದೇಶದ ವಿವಿಧ ರಾಜ್ಯಗಳ ರೈತರು ಕೊರೊನಾ ವೈರಸ್ ಹರಡುವಿಕೆಯ ನಡುವೆಯೂ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು.

ಟ್ರಾಕ್ಟರ್ ರ‍್ಯಾಲಿ, ಚಕ್ಕಾ ಜಾಮ್ ಮತ್ತು ರಸ್ತೆ ತಡೆಗಳಂತಹ ಹಲವಾರು ಹಂತಗಳ ಪ್ರತಿಭಟನೆಗಳನ್ನು ನಡೆಸಿದರೂ ಕೇಂದ್ರ ಸರ್ಕಾರ ರೈತರ ನ್ಯಾಯಸಮ್ಮತ ಬೇಡಿಕೆಗಳನ್ನು ನಿರ್ಲಕ್ಷಿಸಿ ವಂಚಿಸುತ್ತಾ ಬಂದಿತು. ಮತ್ತು ಬಿಜೆಪಿ ಬೆಂಬಲಿಗರು ಅವರ ವಿರುದ್ಧ ಮಾನಹಾನಿ ಹರಡಲು ಹಲವು ಪ್ರಯತ್ನಗಳನ್ನು ಮಾಡಿದರು. ಸರಣಿ ಪ್ರತಿಭಟನೆಗಳ ಪರಿಣಾಮದಿಂದ ಮಣಿದ ಕೇಂದ್ರ ಸರ್ಕಾರ ಅಂತಿಮವಾಗಿ ರೈತ ವಿರೋಧಿ ಕಾಯ್ದೆಯನ್ನು ಹಿಂತೆಗೆದುಕೊಂಡಿತು.

ಅದೇ ಸಮಯದಲ್ಲಿ, ಮೋದಿಯವರ ಆಡಳಿತ ದೌರ್ಜನ್ಯವನ್ನು ಟೀಕಿಸಿದ ಅನೇಕ ಪತ್ರಕರ್ತರನ್ನು ಬಿಜೆಪಿ ಸರ್ಕಾರ ಬೆದರಿಸುತ್ತಲೇ ಬಂದಿತು. ಮತ್ತು ಕೇಂದ್ರ ಸರ್ಕಾರದಿಂದ ಕೆಲವು ಪತ್ರಕರ್ತರನ್ನು ಜೈಲಿಗಟ್ಟುವ ಕ್ರೌರ್ಯವೂ ನಡೆಯಿತು.

ಈ ಹಿನ್ನಲೆಯಲ್ಲಿ ಟ್ವಿಟರ್‌ನ ಮಾಜಿ ಸಿಇಒ ಜಾಕ್ ಡಾರ್ಸಿ ಅವರು, ‘ರೈತರ ಪ್ರತಿಭಟನೆಯ ಸುದ್ದಿ ನೀಡುವ ಖಾತೆಗಳನ್ನು ಮತ್ತು ಸರ್ಕಾರವನ್ನು ಟೀಕಿಸುವ ಖಾತೆಗಳನ್ನು ನಿಷ್ಕ್ರಿಯಗೊಳಿಸಲು ಭಾರತ ಸರ್ಕಾರ ಕೇಳಿತು’ ಎಂಬ ಆಘಾತಕಾರಿ ಮಾಹಿತಿಯನ್ನು ಬಿಡುಗಡೆ ಮಾಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘2020-21ರ ರೈತರ ಪ್ರತಿಭಟನೆಯ ಖಾತೆಗಳನ್ನು ನಿರ್ಬಂಧಿಸಲು, ಭಾರತ ಸರ್ಕಾರದಿಂದ ಅನೇಕ ವಿನಂತಿಗಳು ಬಂದವು ಮತ್ತು ಸರ್ಕಾರವನ್ನು ಟೀಕಿಸುವ ಪತ್ರಕರ್ತರ ಖಾತೆಗಳನ್ನು ನಿರ್ಬಂಧಿಸುವಂತೆಯೂ ಭಾರತ ಸರ್ಕಾರ ಕೇಳಿತು’ ಎಂದು ಹೇಳಿದ್ದಾರೆ.

“ಅಲ್ಲದೆ, ಬೃಹತ್ ಮಾರುಕಟ್ಟೆಯಾಗಿರುವ ಭಾರತದಲ್ಲಿ ಟ್ವಿಟರ್ ಕಂಪನಿಯನ್ನು ಮುಚ್ಚುವುದಾಗಿ ಭಾರತ ಸರ್ಕಾರ ಬೆದರಿಕೆ ಹಾಕಿತ್ತು ಮತ್ತು ಖಾತೆಗಳನ್ನು ಬ್ಲಾಕ್ ಮಾಡದಿದ್ದರೆ ಟ್ವಿಟರ್ ಉದ್ಯೋಗಿಗಳ ಮನೆಗಳ ಮೇಲೆ ದಾಳಿ ನಡೆಸುವುದಾಗಿ ಅವರು ಹೇಳಿದರು . ಅವರು ಹೇಳಿದಂತೆ ದಾಳಿ ನಡೆಸಲಾಗಿತ್ತು. ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಇದು ನಡೆಯುತ್ತಿದೆ” ಎಂದು ನೋವಿನಿಂದ ಹೇಳಿದ್ದಾರೆ. ಅವರ ಈ ಹೇಳಿಕೆ ಅಘಾತಕಾರಿಯಾಗಿದೆ.