ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಸಿದ್ದರಾಮಯ್ಯ Archives » Dynamic Leader
November 21, 2024
Home Posts tagged ಸಿದ್ದರಾಮಯ್ಯ
ರಾಜ್ಯ

ಮೈಸೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ನಿವೇಶನ ಹಂಚಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.

ಮುಡಾ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ನವೆಂಬರ್ 6 ರಂದು ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ಪೊಲೀಸರು ನೋಟಿಸ್ ನೀಡಿದ್ದರು.

ಈ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ 10 ಗಂಟೆಗೆ ಮೈಸೂರಿನ ಲೋಕಾಯುಕ್ತ ಕಚೇರಿಗೆ ಆಗಮಿಸಿದ್ದು, ಮುಡಾ ನಿವೇಶನ ಹಂಚಿಕೆ ಸಂಬಂಧ ವಿಚಾರಣೆ ಎದುರಿಸುತ್ತಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 40 ವರ್ಷದ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ಪ್ರಕರಣವೊಂದರ ಆರೋಪಿಯಾಗಿ ವಿಚಾರಣೆ ಎದುರಿಸುತ್ತಿದ್ದಾರೆ.

ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ಈಗಾಗಲೇ ಎಲ್ಲಾ ಆರೋಪಿಗಳ ವಿಚಾರಣೆ ಮುಗಿಸಿದ್ದು, ಇಂದು ಸಿದ್ದರಾಮಯ್ಯನವರನ್ನು ವಿಚಾರಣೆ ಒಳಪಡಿಸಿದ್ದಾರೆ. ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲನೇ ಆರೋಪಿಯಾಗಿದ್ದಾರೆ. 2ನೇ ಆರೋಪಿ ಅವರ ಪತ್ನಿ ಪಾರ್ವತಿ, 3ನೇ ಆರೋಪಿ ಮಲ್ಲಿಕಾರ್ಜುನ ಹಾಗೂ 4ನೇ ಅರೋಪಿ ದೇವರಾಜು ಸೇರಿ ಹಲವರ ವಿಚಾರಣೆಯನ್ನು ಲೋಕಾಯುಕ್ತ ನಡೆಸಿದೆ.

ಮುಡಾ ಹಗರಣ ಸಂಬಂಧ ಮೈಸೂರಿನ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಸೋದರ ಮಾವ ಮಲ್ಲಿಕಾರ್ಜುನ ಸ್ವಾಮಿ ಮತ್ತು ದೇವರಾಜು ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂಬುದು ಗಮನಾರ್ಹ.

ಬೆಂಗಳೂರು

ಬೆಂಗಳೂರು: ಹಳ್ಳಿಕಾರ ಸಮುದಾಯದ ಸಮಾವೇಶ-2024 ಮತ್ತು ವಿದ್ಯಾರ್ಥಿವೇತನ ವಿತರಣಾ ಸಮಾರಂಭ ಇಂದು ಬೆಂಗಳೂರಿನಲ್ಲಿ ನಡಿಯಿತು. ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.  

“ನನಗೆ ಹಳ್ಳಿಕಾರ ಸಮುದಾಯದ ಬಗ್ಗೆ ಸಹಾನುಭೂತಿ ಇದೆ. ಖಂಡಿತಾ ಸಹಾಯ ಮಾಡುತ್ತೇನೆ. ಹಳ್ಳಿಕಾರ ಸಮುದಾಯವನ್ನು ಪ್ರವರ್ಗ 3ಎ ಸೇರಿಸಿದ್ದು ಸರಿಯಲ್ಲ. ಪ್ರವರ್ಗ 1ಕ್ಕೆ ಸೇರಿಸಬೇಕು ಎನ್ನುವ ಬೇಡಿಕೆ ಬಗ್ಗೆ ವರದಿ ತರಿಸಿಕೊಂಡು ನಂತರ ಸೂಕ್ತ ತೀರ್ಮಾನ ಮಾಡುತ್ತೇನೆ” ಎಂದು ಹೇಳಿದರು.

“ಹಳ್ಳಿಕಾರ ಸಮುದಾಯವನ್ನು ಪ್ರವರ್ಗ 3A ಯಿಂದ ಪ್ರವರ್ಗ 1ಕ್ಕೆ ಸೇರಿಸಬೇಕು ಎನ್ನುವ ಬೇಡಿಕೆ ಇದೆ. ಸಮಾಜದಲ್ಲಿ ಯಾವ್ಯಾವ ಜಾತಿಯ ಆರ್ಥಿಕ, ಸಾಮಾಜಿಕ ಸ್ಥಿತಿ ಗತಿ ತಿಳಿಯಲು ಜಾತಿ ಸಮೀಕ್ಷಾ ವರದಿಗಳು ಮುಖ್ಯ. 2011ರ ಜನಗಣತಿಯೇ ಕೊನೆ ಗಣತಿ. ಈಗ ನಮ್ಮ ಸರ್ಕಾರ ಜಾತಿ ಗಣತಿ ವರದಿಯನ್ನು ಸ್ವೀಕರಿಸಿದೆ” ಎಂದು ಹೇಳಿದರು.

ಕೇಂದ್ರದ ಮೋದಿ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ 10% ಮೀಸಲಾತಿ ನೀಡಿದೆ. ಈ ವ್ಯಾಪ್ತಿಯೊಳಗೆ ಹಳ್ಳಿಕಾರ ಸಮುದಾಯ ಬರುತ್ತದೆಯಾ ಎನ್ನುವುದು ಪರಿಶೀಲಿಸಬೇಕಿದೆ. ಈ ಸಮುದಾಯವನ್ನು ಪ್ರವರ್ಗ 3ಎ ಗೆ ಸೇರಿಸಿರುವುದು ಸರಿಯಲ್ಲ. ಆದ್ದರಿಂದ ಶಾಶ್ವತ ಹಿಂದುಳಿದ ಆಯೋಗಕ್ಕೆ ನಿಮ್ಮ ಬೇಡಿಕೆ ಕಳುಹಿಸಿ, ಅಧ್ಯಯನ ಮಾಡಿಸಿ ವರದಿ ಪಡೆಯಲಾಗುವುದು. ಆ ಬಳಿಕ ಸಮುದಾಯಕ್ಕೆ ನ್ಯಾಯಯುತವಾಗಿ ಏನು ಸಲ್ಲಬೇಕು ಎನ್ನುವುದನ್ನು ಪರಿಶೀಲಿಸಲಾಗುವುದು” ಎಂದು ಹೇಳಿದರು.

ರಾಜ್ಯ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಿಯಮಬಾಹಿರ ವರ್ಗಾವಣೆಯಾಗಿದ್ದ ಹಣವನ್ನು ತಕ್ಷಣವೇ ನಿಗಮಕ್ಕೆ ಬಿಡುಗಡೆ ಮಾಡಿ ಜನಾಂಗದ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ಕ್ರಮವಹಿಸಬೇಕು ಎಂದು ವಾಲ್ಮೀಕಿ ನಾಯಕ ಸಮಾಜದ ನಿಯೋಗದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.

ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಡಾ.ಪ್ರಸನ್ನಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಶಾಸಕರಾದ ಬಿ.ಎಂ.ನಾಗರಾಜ, ಟಿ.ರಘುಮೂರ್ತಿ, ಬಸನಗೌಡ ತುರವಿಹಾಳ, ರಾಜಾ ವೇಣುಗೋಪಾಲ ನಾಯಕ, ಡಾ.ಶ್ರೀನಿವಾಸ, ಲೋಕಸೇವಾ ಆಯೋಗದ ಮಾಜಿ ಸದಸ್ಯ ಜಿ.ಟಿ.ಚಂದ್ರಶೇಖರಪ್ಪ ಮತ್ತಿತರ ಮುಖಂಡರನ್ನೊಳಗೊಂಡ ವಾಲ್ಮೀಕಿ ನಾಯಕ ಸಮಾಜದ ನಿಯೋಗದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದು  ಭೇಟಿಯಾಗಿ ಚರ್ಚಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಿಯಮಬಾಹಿರ ವರ್ಗಾವಣೆಯಾಗಿದ್ದ ಹಣವನ್ನು ತಕ್ಷಣವೇ ನಿಗಮಕ್ಕೆ ಬಿಡುಗಡೆ ಮಾಡಿ ಜನಾಂಗದ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ಕ್ರಮವಹಿಸಬೇಕು ಹಾಗೂ ತಳವಾರ ಹೆಸರಿನಲ್ಲಿ ನಕಲಿ ಪರಿಶಿಷ್ಟ ಪಂಗಡ ಪ್ರಮಾಣಪತ್ರ ಪಡೆಯುತ್ತಿರುವುದನ್ನು ತಡೆಯಲು ಅಗತ್ಯ ಕ್ರಮವಹಿಸಬೇಕು ಎಂದು ಮನವಿ ಮಾಡಿದರು.

ಈ ಬಗ್ಗೆ ತಕ್ಷಣ ಸಭೆ ಕರೆದು ಚರ್ಚಿಸಿ, ಸಮಸ್ಯೆ ಬಗೆಹರಿಸುವುದಾಗಿ ಮುಖ್ಯಮಂತ್ರಿಗಳು ನಿಯೋಗಕ್ಕೆ ಭರವಸೆ ನೀಡಿದರು.

ರಾಜ್ಯ

ಬೆಂಗಳೂರು: ನಾಡಿನ ಸಮಸ್ತ ಜನತೆಗೆ ಗಾಂಧಿ ಜಯಂತಿಯ ಹಾರ್ದಿಕ ಶುಭಾಶಯಗಳು ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಮುವಾದ, ಸರ್ವಾಧಿಕಾರ ಮತ್ತು ಹಿಂಸೆಯಿಂದ ಕೂಡಿರುವ ಜಗತ್ತಿನಲ್ಲಿ ಸತ್ಯ, ಶಾಂತಿ ಮತ್ತು ಅಹಿಂಸೆಯ ಸಾಕಾರಮೂರ್ತಿಯಾಗಿದ್ದ ಮಹಾತ್ಮ ಗಾಂಧೀಜಿಯವರು ಮಾತ್ರ ನಮ್ಮ ಕೈಹಿಡಿದು ಮುನ್ನಡೆಸಬಲ್ಲರು ಎಂದು ಹೇಳಿದ್ದಾರೆ.

ಸತ್ಯದ ಸತ್ವ ಪರೀಕ್ಷೆಯನ್ನು ಎದುರಿಸುತ್ತಿರುವ ಈಗಿನ ನನ್ನ ಹೋರಾಟಕ್ಕೆ ಕೂಡಾ ಬಾಪುವಿನ ಬದುಕು ಮತ್ತು ಚಿಂತನೆಗಳೇ ಧೈರ್ಯ, ಶಕ್ತಿ ಮತ್ತು ಭರವಸೆಯನ್ನು ನೀಡಿದೆ ಎಂದು ಹೇಳಿದ್ದಾರೆ.

ರಾಜಕೀಯ

ಬೆಂಗಳೂರು: ಹೈಕೋರ್ಟ್ ಆದೇಶದ ಅಂಶಗಳನ್ನು ಮಾಧ್ಯಮದ ಮೂಲಕ ತಿಳಿದುಕೊಂಡಿದ್ದೇನೆ. ಆದೇಶ ಪ್ರತಿ ಪಡೆದು ಓದಿದ ಬಳಿಕ‌ ವಿಸ್ತೃತವಾದ ಪ್ರತಿಕ್ರಿಯೆ ನೀಡುತ್ತೇನೆ ಎಂದು ಇಂದು ನಡೆದ ಮಾಧ್ಯಮ ಘೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನ್ಯಾಯಾಲಯವು ಸೆಕ್ಷನ್ 218 ರ ಅಡಿ ರಾಜ್ಯಪಾಲರು ನೀಡಿದ ಅಭಿಯೋಜನೆಯನ್ನು ನ್ಯಾಯಾಲಯ ಸಂಪೂರ್ಣವಾಗಿ ತಿರಸ್ಕರಿಸಿದೆ. ರಾಜ್ಯಪಾಲರ ಆದೇಶದಲ್ಲಿನ ಸೆಕ್ಷನ್ 17ಎ ಗೆ ಮಾತ್ರ ನ್ಯಾಯಮೂರ್ತಿಗಳು ಸೀಮಿತಗೊಳಿಸಿದ್ದಾರೆ.

ನಾನು ಯಾವುದೇ ತನಿಖೆಗೆ ಹಿಂಜರಿಯುವುದಿಲ್ಲ. ಕಾನೂನಿನ ಅಡಿ ಅಂತಹ ತನಿಖೆಗೆ ಅವಕಾಶ ಇದೆಯೋ ಇಲ್ಲವೋ ಎಂಬ ಬಗ್ಗೆ ತಜ್ಞರ ಜೊತೆ ಸಮಾಲೋಚಿಸುತ್ತೇನೆ. ಕಾನೂನು ತಜ್ಞರ ಜೊತೆ ಚರ್ಚಿಸಿ ಹೋರಾಟದ ರೂಪುರೇಷೆ ನಿರ್ಧರಿಸುತ್ತೇನೆ.

ದೂರುದಾರ ತನ್ನ ದೂರಿನಲ್ಲಿ ಸೆಕ್ಷನ್ 218 ಬಿಎನ್ಎಸ್ಎಸ್, 17 ಎ ಮತ್ತು 19 ಪಿಸಿ ಕಾಯಿದೆ ಪ್ರಕಾರ ತನಿಖೆ ಹಾಗೂ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿದ್ದರು. ಆದರೆ, ರಾಜ್ಯಪಾಲರು ಪ್ರಾಥಮಿಕ ಹಂತದಲ್ಲಿ 19 ಪಿಸಿ ಕಾಯಿದೆ ಪ್ರಕಾರ ಕೇಳಿದ್ದ ಅಭಿಯೋಜನಾ ಅನುಮತಿ‌ ನಿರಾಕರಿಸಿದ್ದರು.

ಈ ದಿನ ಘನ ನ್ಯಾಯಾಲಯ ರಾಜ್ಯಪಾಲರು 218 ಬಿಎನ್ಎಸ್ಎಸ್ ಪ್ರಕಾರ ನೀಡಿರುವ ಅಭಿಯೋಜನಾ ಅನುಮತಿಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿದೆ. ಮುಂದಿನ ದಿನಗಳಲ್ಲಿ ಸತ್ಯ ಹೊರಬಂದು 17ಎ ಅಡಿ ನೀಡಿರುವ ತನಿಖೆ ರದ್ದಾಗಲಿದೆ ಎಂಬ ದೃಢ ವಿಶ್ವಾಸ ನನಗಿದೆ.

ಈ ರಾಜಕೀಯ ಹೋರಾಟದಲ್ಲಿ ರಾಜ್ಯದ ಜನ ನನ್ನ ಹಿಂದೆ ಇದ್ದಾರೆ. ಅವರ ಆಶೀರ್ವಾದವೇ ನನಗೆ ಶ್ರೀರಕ್ಷೆ. ಕಾನೂನು ಮತ್ತು ಸಂವಿಧಾನದಲ್ಲಿ ನನಗೆ ನಂಬಿಕೆ ಇದೆ. ಈ ಹೋರಾಟದಲ್ಲಿ ಅಂತಿಮವಾಗಿ ಸತ್ಯಕ್ಕೆ ಜಯ ಸಿಗಲಿದೆ.

ಇದು ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರದ ಸೇಡಿನ ರಾಜಕೀಯದ ವಿರುದ್ಧದ ಹೋರಾಟ. ಬಿಜೆಪಿ, ಜೆಡಿಎಸ್ ನ ಈ ಸೇಡಿನ ರಾಜಕೀಯದ ವಿರುದ್ಧ ನಮ್ಮ ನ್ಯಾಯಾಂಗದ ಹೋರಾಟ ಮುಂದುವರಿಯಲಿದೆ. ನ್ಯಾಯಾಲಯದ ಮೇಲೆ ನನಗೆ ನಂಬಿಕೆ ಇದೆ.

ನಮ್ಮ ಪಕ್ಷದ ಎಲ್ಲ ಶಾಸಕರು, ನಾಯಕರು ಮತ್ತು ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಹೈಕಮಾಂಡ್ ನನ್ನ ಪರವಾಗಿ ಭದ್ರವಾಗಿ ನಿಂತಿದ್ದು, ಕಾನೂನಿನ ಹೋರಾಟ ಮುಂದುವರಿಸುವಂತೆ ಉತ್ತೇಜನ ನೀಡಿದ್ದಾರೆ.

ನಾನು ಬಡವರ ಪರವಾಗಿದ್ದೇನೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದೇನೆ ಎನ್ನುವ ಕಾರಣಕ್ಕಾಗಿ ನನ್ನ ವಿರುದ್ದ ಬಿಜೆಪಿ, ಜೆಡಿಎಸ್ ರಾಜಕೀಯ ಪ್ರತಿಕಾರಕ್ಕೆ ಇಳಿದಿದೆ.

ನನ್ನ 40 ವರ್ಷಗಳ ರಾಜಕೀಯ ಜೀವನದುದ್ದಕ್ಕೂ ಇಂತಹ ಸೇಡು, ಸಂಚಿನ ರಾಜಕೀಯವನ್ನು ಎದುರಿಸಿದ್ದೇನೆ ಮತ್ತು ರಾಜ್ಯದ ಜನರ ಆಶೀರ್ವಾದ, ಹಾರೈಕೆಯ ಬಲದಿಂದ ಗೆಲ್ಲುತ್ತಾ ಬಂದಿದ್ದೇನೆ. ಈ ಹೋರಾಟವನ್ನು ಜನತೆಯ ಆಶೀರ್ವಾದದ ಬಲದಿಂದ ಗೆಲ್ಲುತ್ತೇನೆ ಎಂಬ ವಿಶ್ವಾಸ ಇದೆ.

ಮುಡಾ ಪ್ರಕರಣ ಒಂದು ನೆಪ ಅಷ್ಟೇ. ಬಡವರು ಮತ್ತು ಶೋಷಿತರ ಪರವಾಗಿರುವ ನಮ್ಮ ಸರ್ಕಾರದ ಯೋಜನೆಗಳನ್ನು ನಿಲ್ಲಿಸಬೇಕೆಂಬುದೇ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮುಖ್ಯ ಉದ್ದೇಶ.

ಮುಡಾ ಪ್ರಕರಣವನ್ನು ಸೃಷ್ಟಿಸಿ, ಅದರ ಮೂಲಕ ಸುಳ್ಳು ಆರೋಪಗಳನ್ನು ಮಾಡುತ್ತಿರುವವರ ಮುಖಗಳನ್ನು ಒಮ್ಮೆ ರಾಜ್ಯದ ಜನತೆ ಸರಿಯಾಗಿ ನೋಡಬೇಕೆಂದು ಮನವಿ ಮಾಡುತ್ತೇನೆ.

ನನ್ನ ರಾಜೀನಾಮೆ ಕೇಳುತ್ತಿರುವ ಇದೇ ನಾಯಕರು ನಾನು ರಾಜ್ಯದ ಬಡವರು, ಶೋಷಿತರ ಪರವಾಗಿ ಜಾರಿಗೆ ತಂದಿದ್ದ ಯೋಜನೆಗಳನ್ನು ವಿರೋಧಿಸಿದವರೇ ಆಗಿದ್ದಾರೆ.

ಇದೇ ಬಿಜೆಪಿ, ಜೆಡಿಎಸ್  ನಾಯಕರು ನಾನು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಅನ್ನಭಾಗ್ಯ, ಕ್ಷೀರ ಭಾಗ್ಯ, ಕ್ಷೀರ ಧಾರೆ, ವಿದ್ಯಾಸಿರಿ, ಕೃಷಿಭಾಗ್ಯ, ಪಶುಭಾಗ್ಯ, ಇಂದಿರಾ ಕ್ಯಾಂಟೀನ್ ಯೋಜನೆಗಳನ್ನು ವಿರೋಧಿಸಿದ್ದಾರೆ.

ಇಂದು ನನ್ನ ವಿರುದ್ಧ ರಾಜಕೀಯ ಸಂಚು ನಡೆಸುತ್ತಿರುವ ಇದೇ ನಾಯಕರು ಎಸ್‌ಸಿಎಸ್‌ಪಿ/ಟಿಎಸ್‌‌ಪಿ ಕಾಯ್ದೆಯನ್ನು ವಿರೋಧಿಸಿದ್ದಾರೆ.

ಕರ್ನಾಟಕದ ಜನತೆ ಇಲ್ಲಿಯ ವರೆಗೆ ಭಾರತೀಯ ಜನತಾ ಪಕ್ಷಕ್ಕೆ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವಷ್ಟು ಬಹುಮತ ನೀಡಿಲ್ಲ. ಇಲ್ಲಿಯ ವರೆಗೆ ಬಿಜೆಪಿ ಅನೈತಿಕವಾಗಿ, ದುಡ್ಡಿನ ಬಲದಿಂದ ಆಪರೇಷನ್ ಕಮಲ ನಡೆಸಿ ಅಧಿಕಾರಕ್ಕೆ ಬಂದದ್ದು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಆಪರೇಷನ್ ಕಮಲಕ್ಕೆ ಅವಕಾಶವೇ ಇಲ್ಲದಂತೆ ನಮ್ಮ ಪಕ್ಷಕ್ಕೆ 136 ಸದಸ್ಯರ ಬಲ ನೀಡಿ ಗೆಲ್ಲಿಸಿದರು.

ಇದರಿಂದ ಹತಾಶೆಗೀಡಾಗಿರುವ ಬಿಜೆಪಿ, ಜೆಡಿಎಸ್ ನಾಯಕರು, ರಾಜಭವನವನ್ನು ದುರ್ಬಳಕೆ ಮಾಡಿಕೊಂಡು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಸಿದ್ದಾರೆ.

ರಾಜಭವನದ ದುರ್ಬಳಕೆ ಮೂಲಕ ವಿರೋಧ ಪಕ್ಷಗಳ ಸರ್ಕಾರವನ್ನು ಹಣಿಯುವ ಸಂಚನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶಾದ್ಯಂತ ನಡೆಸುತ್ತಿದೆ.

ನನ್ನ ಪ್ರಕರಣದಲ್ಲಿಯೂ ಬಿಜೆಪಿ ಮತ್ತು ಜೆಡಿಎಸ್ ಇದೇ ರೀತಿ ಮುಖಭಂಗ ಅನುಭವಿಸುವುದು ಖಂಡಿತ. ಎಂದು ಹೇಳಿದರು.

ರಾಜಕೀಯ

“ರಾಜ್ಯಪಾಲರು ಕುಮಾರಸ್ವಾಮಿ ಹಾಗೂ ಇತರ ಬಿಜೆಪಿ ನಾಯಕರ ಬಗೆಗಿನ ದೂರುಗಳನ್ನು ಮುಚ್ಚಿಡಲು ಪ್ರಯತ್ನಿಸಿದ್ದು ಜಗಜ್ಜಾಹೀರಾಗಿದೆ” ಕಾಂಗ್ರೆಸ್

ಬೆಂಗಳೂರು: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಇಂದು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.

“ಮುಖ್ಯಮಂತ್ರಿಗಳ ವಿರುದ್ಧ ಖಾಸಗಿ ದೂರುದಾರರೇ ಅನುಮತಿ ಕೋರಬಹುದು. ಸಂವಿಧಾನದ ವಿಧಿ ‘17 ಎ’ ಅಡಿ ಅನುಮತಿ ಕೋರಿದ್ದು ಸರಿಯಾಗಿದೆ. ಸಚಿವ ಸಂಪುಟದ ಶಿಫಾರಸನ್ನು ರಾಜ್ಯಪಾಲರು ತಿರಸ್ಕರಿಸಿದ್ದು ಸರಿಯಾಗಿದೆ. ರಾಜ್ಯಪಾಲರು ವಿವೇಚನೆ ಬಳಸಿದ್ದಾರೆ. ‘17 ಎ’ ಅಡಿಯ ಆದೇಶ ಸಮರ್ಪಕವಾಗಿದೆ” ಎಂದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಮುಖ್ಯಮಂತ್ರಿ ಸಿದ್ದರಾಮಯ್ಯ ಅರ್ಜಿಯನ್ನು ವಜಾಗೊಳಿಸಿದರು.

“ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್​​, ಮುಖ್ಯಮಂತ್ರಿ ಕುಟುಂಬಸ್ಥರು ಫಲಾನುಭವಿಗಳಾಗಿದ್ದಾರೆ. ಹೀಗಾಗಿ ರಾಜ್ಯಪಾಲರ ಕ್ರಮ ಸೂಕ್ತವಾಗಿದೆ. ಸಿಎಂ ಎತ್ತಿದ್ದ ಎಲ್ಲಾ ಕಾನೂನಿನ ಪ್ರಶ್ನೆಗಳನ್ನು ತಿರಸ್ಕರಿಸಲಾಗಿದೆ” ಎಂದಿದೆ. ಮುಖ್ಯಮಂತ್ರಿ ಪರ ವಕೀಲರ ವಾದಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿವಾದ ಮಂಡಿಸಿದ್ದರು. ರಾಜ್ಯಪಾಲರು ಮೇಲ್ನೋಟಕ್ಕೆ ಅಪರಾಧದ ಅಂಶಗಳಿವೆಯೇ ಎಂಬುದನ್ನಷ್ಟೇ ಸೆಕ್ಷನ್ 17 ಎ ಅಡಿಯಲ್ಲಿ ನೋಡಬೇಕು. ರಾಜ್ಯಪಾಲರು ತೀರ್ಪು ನೀಡಿಲ್ಲ ಮತ್ತು ನೀಡುತ್ತಿಲ್ಲ. ತನಿಖೆಗೆ ಅನುಮತಿಯಷ್ಟೇ ನೀಡುತ್ತಿದ್ದಾರೆ. ಹೀಗಾಗಿ ಅವರು ವಿವರವಾದ ಕಾರಣಗಳನ್ನು ಕೊಡಬೇಕಿಲ್ಲ. ಕೊಟ್ಟರೆ ತನಿಖಾಧಿಕಾರಿ ಮೇಲೆ ಪ್ರಭಾವ ಬೀರಿದಂತೆ ಆಗುವ ಸಾಧ್ಯತೆ ಇರುತ್ತದೆ ಎಂದು ತುಷಾರ್ ಮೆಹ್ತಾ ಪ್ರತಿವಾದ ಮಂಡಿಸಿದ್ದರು.

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಕರ್ನಾಟಕ ಕಾಂಗ್ರೆಸ್ ಪಕ್ಷ “ಹೋರಾಟ ಮುಂದುವರೆಯಲಿದೆ, ಸರ್ಕಾರವನ್ನು ಅಸ್ಥಿರಗೊಳಿಸುವ ರಾಜ್ಯಪಾಲರ ಪ್ರಯತ್ನಕ್ಕೆ, ಬಿಜೆಪಿಯ ಷಡ್ಯಂತ್ರಕ್ಕೆ ಬಗ್ಗುವ ಪ್ರಶ್ನೆಯೇ ಇಲ್ಲ. ರಾಜ್ಯಪಾಲರು ಕುಮಾರಸ್ವಾಮಿ ಹಾಗೂ ಇತರ ಬಿಜೆಪಿ ನಾಯಕರ ಬಗೆಗಿನ ದೂರುಗಳನ್ನು ಮುಚ್ಚಿಡಲು ಪ್ರಯತ್ನಿಸಿದ್ದು ಜಗಜ್ಜಾಹೀರಾಗಿದೆ, ಈ ಬಗ್ಗೆ ದೂರುಗಳು ಹೇಗೆ ಸೋರಿಕೆಯಾದವು ಎಂದು ರಾಜ್ಯಪಾಲರ ಪ್ರಶ್ನೆಯೇ ಅವರ ತಾರತಮ್ಯದ ರಾಜಕೀಯಕ್ಕೆ ಪುರಾವೆ ಒದಗಿಸುತ್ತವೆ” ಎಂದು ಹೇಳಿದೆ.

ರಾಜ್ಯ

ಕಲಬುರಗಿ: ಕಲಬುರಗಿ ತಾಲ್ಲೂಕಿನ‌ ಕವಲಗಿ (ಕೆ) ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣನವರ ಜಯಂತ್ಸೋತ್ಸವವನ್ನು ಉದ್ಘಾಟಿಸಿ, ರಾಯಣ್ಣನ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳಿಕ ಸ್ವಾತಂತ್ರ್ಯ ಸೇನಾನಿಗೆ ಪುಷ್ಪನಮನ ಸಲ್ಲಿಸಿದರು.

ತಿಂಥಣಿ ಕಾಗಿನೆಲೆ ಪೀಠದ ಜಗದ್ಗುರು ಸಿದ್ದರಾಮಾನಂದಪುರಿ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ, ಶಾಸಕರಾದ ಎಂ.ವೈ.ಪಾಟೀಲರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ, ಸಚಿವರಾದ ಬೈರತಿ ಸುರೇಶ್, ಶರಣ ಪ್ರಕಾಶ್ ಪಾಟೀಲ್, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾದ ಬಿ.ಆರ್.ಪಾಟೀಲ್ ಸೇರಿದಂತೆ ಜಿಲ್ಲೆಯ ಶಾಸಕರು, ಸಮುದಾಯದ ಮುಖಂಡರುಗಳು ಉಪಸ್ಥಿತರಿದ್ದರು.

ರಾಜಕೀಯ

ರಾಣೆಬೆನ್ನೂರು: ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದ ಗೆರಿಲ್ಲಾ ಸೇನಾನಿ ರಾಯಣ್ಣನನ್ನು ಬ್ರಿಟೀಷರಿಗೆ ಮೋಸದಿಂದ ಹಿಡಿದುಕೊಟ್ಟವರು ನಮ್ಮವರೇ. ಇಂಥಾ ದೇಶದ್ರೋಹಿಗಳು ನಮ್ಮೊಳಗೆ ಈಗಲೂ ಇದ್ದಾರೆ. ಇಂಥಾ ದೇಶದ್ರೋಹಿಗಳು ಎಲ್ಲಾ ಕಾಲದಲ್ಲೂ ಇರುತ್ತಾರೆ. ಇಂಥವರನ್ನು ನಾವು ಒಗ್ಗಟ್ಟಿನಿಂದ ಎದುರಿಸಬೇಕು; ಸೋಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಣೆಬೆನ್ನೂರು ತಾಲ್ಲೂಕು ದೇವರಗುಡ್ಡದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಕಂಚಿನ ಪುತ್ಥಳಿ ಲೋಕಾರ್ಪಣೆಗೊಳಿಸಿ, ಬಳಿಕ ಕನಕಭವನವನ್ನು ಉದ್ಘಾಟಿಸಿ ಮಾತನಾಡಿದರು.

“ಮಾಲತೇಶ ದೇವರ ಸನ್ನಿಧಿ ದೇವರಗುಡ್ಡವನ್ನು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಮತ್ತು ದೇವರಗುಡ್ಡ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಇರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ಕಾನೂನು ಹೋರಾಟ ನಡೆಸಲಾಗುವುದು. ದೇವರಗುಡ್ಡಕ್ಕೆ ಎಲ್ಲಾ ಮೂಲಭೂತ ಸೌಕರ್ಯಗಳನ್ನೂ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ” ಎಂದು ಹೇಳಿದರು.

“ನನ್ನ ವಿರುದ್ಧ ನಡೆಯುತ್ತಿರುವ ಬಿಜೆಪಿ – ಜೆಡಿಎಸ್ ನ ಸೇಡು, ಹೊಟ್ಟೆಕಿಚ್ಚಿನ ಪಿತೂರಿ ಸಹಿಸಬೇಡಿ. ಮಾಲತೇಶ ದೇವರ ಆಶೀರ್ವಾದ – ನಿಮ್ಮ ಪ್ರೀತಿ ನನ್ನ ಮೇಲಿರಲಿ” ಎಂದು ಪ್ರಾರ್ಥಿಸಿಕೊಂಡರು.

“ನಾನು ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿ ಜನರಿಗೆ ಕೊಟ್ಟ ಮಾತನ್ನು ಈಡೇರಿಸುತ್ತಿದ್ದೇನೆ. ಮೊದಲ ಬಾರಿ ಮುಖ್ಯಮಂತ್ರಿ ಆದಾಗಲೂ ಹಲವು ಭಾಗ್ಯಗಳನ್ನು ಜನರ ಮಡಿಲಿಗೆ ಹಾಕುವ ಮೂಲಕ ನುಡಿದಂತೆ ನಡೆದಿದ್ದೇನೆ. ಎರಡನೇ ಬಾರಿ ಸಿಎಂ ಆಗಿ ಒಂದೇ ವರ್ಷದಲ್ಲಿ ಐದಕ್ಕೆ ಐದೂ ಗ್ಯಾರಂಟಿಗಳನ್ನೂ ಜಾರಿ ಮಾಡಿದ್ದೇನೆ” ಎಂದು ಹೇಳಿದರು.

“ನಾನು ಅಸೂಯೆ ಮಾಡುವವರಿಂದ ದ್ವೇಷದ ರಾಜಕಾರಣ ಮಾಡುವವರಿಂದ ಅಧಿಕಾರಕ್ಕೆ ಬರಲಿಲ್ಲ. ಜನರ ಆಶೀರ್ವಾದದಿಂದ ಹಿಂದುಳಿದ ಸಮಾಜದ ಸಿದ್ದರಾಮಯ್ಯ ಸಿಎಂ‌ ಆಗಿರೋದು. ಜನರ ಆಶೀರ್ವಾದ ಇರುವವರೆಗೂ ನನಗೆ ಯಾರೂ ಏನೂ ಮಾಡಲಾಗುವುದಿಲ್ಲ

ಜಾತಿ ವ್ಯವಸ್ಥೆಯ ಈ ಸಮಾಜದಲ್ಲಿ ಅತ್ಯಂತ ಕಟ್ಟಕಡೆಯ ವ್ಯಕ್ತಿಗೂ ಅವಕಾಶ ಸಿಗಬೇಕು ಎಂದು ಮಹಾತ್ಮಗಾಂಧಿ ಹೇಳಿದ್ದರು. ಇದರಲ್ಲಿ ನಂಬಿಕೆ ಇಟ್ಟು ಕಾರ್ಯಕ್ರಮ ರೂಪಿಸುತ್ತಿದ್ದೇನೆ. ಇದೇ ವಿಪಕ್ಷದವರಿಗೆ ಹೊಟ್ಟೆಕಿಚ್ಚು. ಈ ಹೊಟ್ಟೆಕಿಚ್ಚಿನಿಂದ ಅವರೇ ನಾಶ ಆಗುತ್ತಾರೆಯೇ ಹೊರತು ನನ್ನನ್ನು ಅಲುಗಾಡಿಸಲು ಸಾಧ್ಯವಿಲ್ಲ” ಎಂದು ಕಿಡಿಕಾರಿದರು.

“ನಾನು ಯಾರಿಗೂ, ಯಾವುದೇ ಪಿತೂರಿ-ಷಡ್ಯಂತ್ರಕ್ಕೂ ಭಯ ಪಡುವವನಲ್ಲ. ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದ ಗೆರಿಲ್ಲಾ ಸೇನಾನಿ ರಾಯಣ್ಣನನ್ನು ಬ್ರಿಟೀಷರಿಗೆ ಮೋಸದಿಂದ ಹಿಡಿದುಕೊಟ್ಟವರು ನಮ್ಮವರೇ. ಇಂಥಾ ದೇಶದ್ರೋಹಿಗಳು ನಮ್ಮೊಳಗೆ ಈಗಲೂ ಇದ್ದಾರೆ. ಇಂಥಾ ದೇಶದ್ರೋಹಿಗಳು ಎಲ್ಲಾ ಕಾಲದಲ್ಲೂ ಇರುತ್ತಾರೆ. ಇಂಥವರನ್ನು ನಾವು ಒಗ್ಗಟ್ಟಿನಿಂದ ಎದುರಿಸಬೇಕು, ಸೋಲಿಸಬೇಕು.

ಸಂಗೊಳ್ಳಿ ರಾಯಣ್ಣನವರ ದೇಶಪ್ರೇಮ, ಹೋರಾಟ ಮನೋಭಾವವನ್ನು ನಾವು ರೂಢಿಸಿಕೊಂಡಾಗ ಮಾತ್ರ ರಾಯಣ್ಣನ ಆಶಯ ಈಡೇರುತ್ತದೆ” ಎಂದು ಹೇಳಿದರು.

ರಾಜಕೀಯ

ಬೆಂಗಳೂರು: ಪರಿಶಿಷ್ಟ ಜಾತಿ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸಲು ನಾನು ಬದ್ಧನಾಗಿದ್ದು, ಇದರ ಬಗ್ಗೆ ಯಾವುದೇ ಅನುಮಾನ, ಅಪನಂಬಿಕೆ ಬೇಡ. ನಾನು ಈಗಾಗಲೇ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

“ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಕಾನೂನು ತಜ್ಞರು ಮತ್ತು ಸಮುದಾಯದ ನಾಯಕರ ಜೊತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇನೆ. ಒಳಮೀಸಲಾತಿಯನ್ನು ದಲಿತ ಸಮುದಾಯ ಒಮ್ಮತದಿಂದ ಒಪ್ಪಿಕೊಂಡು ಅನುಷ್ಠಾನಕ್ಕೆ ಬೆಂಬಲ ನೀಡಿರುವುದು ಸ್ವಾಗತಾರ್ಹ ಕ್ರಮವಾಗಿದೆ” ಎಂದು ಹೇಳಿದ್ದಾರೆ.

“ಸಚಿವರಾದ  ಕೆ.ಹೆಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ್ ಮತ್ತು ಮಾಜಿ ಸಚಿವ ಹೆಚ್.ಆಂಜನೇಯ ಹಾಗೂ ಮಾಜಿ ರಾಜ್ಯಸಭಾ ಸದಸ್ಯರಾದ ಎಲ್.ಹನುಮಂತಯ್ಯ ಮತ್ತು ದಲಿತ ಶಾಸಕರು ಹಾಗೂ ಮುಖಂಡರ ನಿಯೋಗ ಇಂದು ನನ್ನನ್ನು ಭೇಟಿಯಾಗಿ ಒಳ ಮೀಸಲಾತಿ ಜಾರಿ ಸಂಬಂಧ ಚರ್ಚೆ ನಡೆಸಿದರು. ಒಳಮೀಸಲಾತಿ ಜಾರಿ ವಿಚಾರದಲ್ಲಿ ನನ್ನ ಬದ್ಧತೆಯನ್ನು ಅವರಿಗೆ ತಿಳಿಸಿದೆ.

ನಾನು, ನಮ್ಮ ಪಕ್ಷ ಮತ್ತು ನಮ್ಮ ಸರ್ಕಾರಕ್ಕೆ ಸಾಮಾಜಿಕ ನ್ಯಾಯದ ಪರವಾದ ಖಚಿತ ಮತ್ತು ದೃಢ ನಿಲುವು ಇದೆ. ಇದರಲ್ಲಿ ಗೊಂದಲ ಇಲ್ಲವೇ ಇಲ್ಲ. ಮೀಸಲಾತಿಯ ಸೌಲಭ್ಯದ ನ್ಯಾಯಯುತ ಹಂಚಿಕೆಗೆ ಒಳಮೀಸಲಾತಿ ಅಗತ್ಯ ಎನ್ನುವುದು ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಅರಿವಾಗಿದೆ. ಸುಪ್ರೀಂ ಕೋರ್ಟ್ ತೀರ್ಪು ಕೂಡಾ ಇದೇ ಅಭಿಪ್ರಾಯವನ್ನು ಹೊಂದಿದೆ” ಎಂದಿದ್ದಾರೆ.

“ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಕೆನೆಪದರದ ವಿಚಾರ ಪ್ರಸ್ತಾಪವಾಗಿರುವುದು ಕೆಲವರಲ್ಲಿ ಗೊಂದಲ ಉಂಟು ಮಾಡಿದೆ. ನ್ಯಾಯಾಲಯದ ತೀರ್ಪಿನ ವಿಶ್ಲೇಷಣೆಗೆ ನಾನು ಹೋಗುವುದಿಲ್ಲ. ನಾನು ಅರ್ಥಮಾಡಿಕೊಂಡಂತೆ ಒಳ ಮೀಸಲಾತಿ ಜಾರಿಗೊಳಿಸಲು ಕೆನೆಪದರದ ವಿಚಾರ ಅಡ್ಡಿಯಾಗಲಾರದು. ಕೆನೆಪದರದ ಬಗ್ಗೆ ಇಡೀ ದಲಿತ ಸಮುದಾಯದ ನಿಲುವೇ ನನ್ನ ನಿಲುವೂ ಆಗಿದೆ” ಎಂದು ಸ್ಪಷ್ಟ ಪಡಿಸಿದ್ದಾರೆ.

“ಭಾರತೀಯ ಜನತಾ ಪಕ್ಷದ ಕೆಲವು ನಾಯಕರು ಅನಗತ್ಯವಾಗಿ ಊಹಾಪೋಹಗಳ ಮೂಲಕ ಒಳಮೀಸಲಾತಿ ವಿಷಯವನ್ನು ಮುಂದಿಟ್ಟುಕೊಂಡು ನಮ್ಮ ಸರ್ಕಾರದ ವಿರುದ್ಧ ದಲಿತರನ್ನು ಎತ್ತಿಕಟ್ಟುವ ಕುಟಿಲ ಪ್ರಯತ್ನ ನಡೆಸುತ್ತಿದ್ದಾರೆ. ಸಾಮಾಜಿಕ ನ್ಯಾಯದ ವಿರೋಧಿಗಳಾದ ಈ ಬಿಜೆಪಿ ನಾಯಕರ ಈ ಕುಟಿಲತನವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ದಲಿತ ಸಮುದಾಯಕ್ಕೆ ಇದೆ ಎಂದು ನಾನು ತಿಳಿದುಕೊಂಡಿದ್ದೇನೆ” ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ರಾಜ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಇಂದು ಕರ್ನಾಟಕ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ ಪ್ರಕರಣದ ವಿಚಾರಣೆಯನ್ನು ಆಗಸ್ಟ್ 29ಕ್ಕೆ ಮುಂದೂಡಿದೆ.

ಇದೇ ವೇಳೆ ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶಿಸುವಂತೆ ಸಲ್ಲಿಕೆಯಾಗಿರುವ ಅರ್ಜಿಗಳ ಆದೇಶವನ್ನು ಆಗಸ್ಟ್ 29ಕ್ಕೆ ಮುಂದೂಡುವಂತೆ ಜನಪ್ರತಿನಿಧಿಗಳ ಕೋರ್ಟ್ ಗೆ ಹೈಕೋರ್ಟ್ ಸೂಚಿಸಿದ್ದು ಈ ಮೂಲಕ ಸಿದ್ದರಾಮಯ್ಯ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರೆ, ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ವಕೀಲ, ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ಆಗಿರುವ ತುಷಾರ್ ಮೆಹ್ತಾ ಅವರು ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ನಂತರ ನ್ಯಾಯಮೂರ್ತಿಗಳು ಮಧ್ಯಂತರ ಆದೇಶ ನೀಡಿದರು.

ಸಾಮಾಜಿಕ ಹೋರಾಟಗಾರರಾದ ಸ್ನೇಹಮಯಿ ಕೃಷ್ಣ ಮತ್ತು ಟಿ.ಜೆ.ಅಬ್ರಹಾಂ ಅವರು ಸಲ್ಲಿಸಿರುವ ದೂರುಗಳ ಮುಂದಿನ ವಿಚಾರಣೆಯನ್ನು ಆಗಸ್ಟ್ 20 ಮತ್ತು 21ರಂದು ವಿಶೇಷ ನ್ಯಾಯಾಲಯದಲ್ಲಿ ಕ್ರಮವಾಗಿ ನಡೆಯಲಿದೆ ಎಂದು ಅರ್ಜಿದಾರರ ಪರ ವಕೀಲರು ಸೂಚಿಸಿದ ನಂತರ ಮಧ್ಯಂತರ ಆದೇಶವನ್ನು ನೀಡಲಾಗಿದೆ. ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ದೂರುದಾರರಾದ ಪ್ರತಿವಾದಿಗಳಿಗೆ ಕಾಲಾವಕಾಶ ನೀಡಲಾಗಿದೆ.