ಬೆಂಗಳೂರು: ಕರ್ನಾಟಕ ಸರ್ಕಾರವು ನಮ್ಮ ಯುವಕರಿಗೆ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಇದೇ ಫೆಬ್ರವರಿ 26 ಮತ್ತು 27 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಯುವ ಸಮೃದ್ಧಿ’ ಮೆಗಾ ಉದ್ಯೋಗ ಮೇಳವನ್ನು ಆಯೋಜಿಸಿದ್ದು ನಾಡಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಈ ಉದ್ಯೋಗ ಮೇಲಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.
ಇಂದು ವಿಧಾನಸೌಧದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವರಾದ ಡಾ.ಶರಣ ಪ್ರಕಾಶ್ ಪಾಟೀಲ್ ಹಾಗೂ ಐಟಿ/ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ‘ಯುವ ಸಮೃದ್ಧಿ’ ಮೆಗಾ ಉದ್ಯೋಗ ಮೇಳದ ಕುರಿತು ವಿವರ ಹಂಚಿಕೊಂಡರು.
ಈ ಉದ್ಯೋಗ ಮೇಳದಲ್ಲಿ ರಾಷ್ಟೀಯ, ಅಂತಾರಾಷ್ಟ್ರೀಯ ಮಟ್ಟದ ಸುಮಾರು 500ಕ್ಕೂ ಅಧಿಕ ಕಂಪನಿಗಳು ಭಾಗವಹಿಸುತ್ತಿದ್ದು ಒಂದು ಲಕ್ಷಕ್ಕೂ ಅಧಿಕ ಉದ್ಯೋಗಗಳು ಲಭ್ಯವಿದೆ ಎಂದು ಹೇಳಿದರು.
ಈಗಾಗಲೇ ಆನ್ಲೈನ್ ಮೂಲಕ ರಾಜ್ಯದ 31 ಸಾವಿರಕ್ಕೂ ಅಧಿಕ ಯುವಕರು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ನೋಂದಾಯಿಸಿಕೊಂಡಿದ್ದಾರೆ. ಅವರ ಅನುಕೂಲಕ್ಕಾಗಿ 600ಕ್ಕೂ ಅಧಿಕ ಸ್ಟಾಲ್ ಗಳನ್ನು ಹಾಕಲಾಗಿದ್ದು ವಿವಿಧ ಭಾಗಗಳಿಂದ ಆಗಮಿಸುವ ಯುವಕರಿಗಾಗಿ ಉಚಿತ ಬಸ್ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂಬ ಮಾಹಿತಿಯನ್ನು ಒದಗಿಸಿದರು.
ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಡಿಪ್ಲೊಮೊ, ಐಟಿಐ, ಎಂಜಿನಿಯರಿಂಗ್ ಸೇರಿದಂತೆ ಯಾವುದೇ ವಿದ್ಯಾರ್ಹತೆ ಹೊಂದಿದವರಿಗೂ ಇಲ್ಲಿ ಉದ್ಯೋಗಾವಕಾಶಗಳು ಲಭ್ಯವಿದ್ದು ನಾಡಿನ ಯುವಜನತೆ ಈ ಉದ್ಯೋಗಮೇಳದಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಇದೊಂದು ಅತ್ಯುತ್ತಮ ವೇದಿಕೆಯಾಗಿದೆ ಎಂದು ಹೇಳಿದರು.