• ಡಿ.ಸಿ.ಪ್ರಕಾಶ್ ಸಂಪಾದಕರು
ದೂರದರ್ಶನ, ಭಾರತದ ಹಳೆಯ ಟಿವಿ ಚಾನೆಲ್, ಪ್ರಸ್ತುತ ತನ್ನ ಲೋಗೋದ ಬಣ್ಣವನ್ನು ಬದಲಾಯಿಸುವ ಮೂಲಕ ವಿವಾದದಲ್ಲಿ ಸಿಲುಕಿಕೊಂಡಿದೆ. 1959ರಲ್ಲಿ ಸ್ಥಾಪನೆಯಾದ ಈ ದೂರದರ್ಶನವನ್ನು ಮೂಲತಃ ಹಿಂದಿಯಲ್ಲಿ ಪ್ರಾರಂಭಿಸಲಾಯಿತು. ಸರ್ಕಾರಿ ದೂರದರ್ಶನವಾದ ಇದು, ಭವಿಷ್ಯದಲ್ಲಿ ಬಹುಭಾಷಾ ಜನರನ್ನು ತಲುಪಬೇಕು ಎಂಬುದಕ್ಕಾಗಿ ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಬೆಂಗಾಲಿ ಮುಂತಾದ ವಿವಿಧ ಭಾಷೆಗಳಲ್ಲಿ ನಿರ್ಮಿಸಲಾಯಿತು.
ಸರ್ಕಾರದ ಒಡೆತನದ ದೂರದರ್ಶನ್, ಕೇಂದ್ರ ಬಿಜೆಪಿ ಸರ್ಕಾರವನ್ನು ಬೆಂಬಲಿಸಿ ವಿವಿಧ ಸುದ್ದಿ ಮತ್ತು ಅಭಿಪ್ರಾಯಗಳನ್ನು ನೀಡುತ್ತಿದೆ. ಬಿಜೆಪಿ ಸರ್ಕಾರದ ಪರವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ ಪಕ್ಷವನ್ನು ಬೆಂಬಲಿಸಿ ಸುದ್ದಿಯನ್ನೂ ಪ್ರಕಟಿಸುತ್ತಿದೆ. ದೂರದರ್ಶನದ ಈ ಕ್ರಮವನ್ನು ಪ್ರತಿಪಕ್ಷಗಳು ತೀವ್ರವಾಗಿ ಖಂಡಿಸುತ್ತಿದೆ.
ಇತ್ತೀಚೆಗಂತೂ ಭಾರೀ ವಿವಾದಕ್ಕೀಡಾದ ‘ದಿ ಕೇರಳ ಸ್ಟೋರಿ’ ಚಿತ್ರವನ್ನು ಚುನಾವಣೆ ಸಂದರ್ಭದಲ್ಲಿ ದೂರದರ್ಶನದಲ್ಲಿ ಪ್ರಸಾರ ಮಾಡುವುದಾಗಿ ಘೋಷಿಸಿತ್ತು. ತೀವ್ರ ಪ್ರತಿಭಟನೆಯ ನಡುವೆಯೂ ಚಿತ್ರ ಪ್ರದರ್ಶನಗೊಂಡಿತು. ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷವನ್ನು ಹುಟ್ಟುಹಾಕುವ ಚಿತ್ರವನ್ನು ಪ್ರಸಾರ ಮಾಡಿದ್ದಕ್ಕಾಗಿ ದೂರದರ್ಶನವನ್ನು ಅನೇಕರು ಖಂಡಿಸುತ್ತಿದ್ದಾರೆ.
ಈ ಹಿನ್ನಲೆಯಲ್ಲಿ, ಬಿಜೆಪಿಯವರು ಹೇಳುವುದನ್ನು ನಾವು ಕೇಳುತ್ತೇವೆ ಎಂಬುದನ್ನು ಸಾಬೀತುಪಡಿಸಿ ತೋರಿಸಲು, ದೂರದರ್ಶನ್ ತಮ್ಮ ವಾಹಿನಿಯ ಲೋಗೋದ ಬಣ್ಣವನ್ನೇ ಬದಲಾಯಿಸಿದೆ. ದೂರದರ್ಶನ ಟಿವಿಯ ಸುದ್ದಿ ವಾಹಿನಿ ಡಿಡಿ ನ್ಯೂಸ್ (DD News) ಲೋಗೋದ ಬಣ್ಣವನ್ನು ಕೇಸರಿ ಬಣ್ಣಕ್ಕೆ ಬದಲಾಯಿಸಿದೆ. ಇದಕ್ಕೆ ದೇಶಾದ್ಯಂತ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.
ಆ ನಿಟ್ಟಿನಲ್ಲಿ ದೂರದರ್ಶನದ ಮಾಜಿ ಸಿಇಒ ಜವಾಹರ್ ಸಿರ್ಕಾರ್ ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅವರು ಪ್ರಕಟಿಸಿರುವ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ, “ರಾಷ್ಟ್ರೀಯ ಪ್ರಸಾರಕ ದೂರದರ್ಶನ ತನ್ನ ಐತಿಹಾಸಿಕ ಲೋಗೋವನ್ನು ಕೇಸರಿ ಬಣ್ಣಕ್ಕೆ ಬದಲಾಯಿಸಿದೆ. ಅದರ ಮಾಜಿ CEO ಆಗಿ, ನಾನು ಅದರ ಕೇಸರಿಮಯವನ್ನು ಎಚ್ಚರಿಕೆಯಿಂದ ಮತ್ತು ಸೂಕ್ಷ್ಮತೆಯಿಂದ ನೋಡುತ್ತಿದ್ದೇನೆ. ಇನ್ನು ದೂರದರ್ಶನ ‘ಪ್ರಸಾರ ಭಾರತಿ’ ಅಲ್ಲ; ‘ಪ್ರಚಾರ ಭಾರತಿ’!” ಎಂದು ಹೇಳಿದ್ದಾರೆ.
ಸರ್ಕಾರ ಒಡೆತನದ ದೂರದರ್ಶನವೊಂದು ಇಂತಹ ರಾಜಕೀಯ ಪಕ್ಷದ ಪರವಾಗಿ ಕೆಲಸ ಮಾಡುವುದಷ್ಟೇ ಅಲ್ಲದೇ, ತಮ್ಮ ಧ್ಯೇಯೋದ್ದೇಶ ಮರೆತು ಲೋಗೋ ಸೇರಿದಂತೆ ಎಲ್ಲವನ್ನೂ ಬದಲಾಯಿಸಿದೆ. ಇದಕ್ಕೆ ದೇಶಾದ್ಯಂತ ಖಂಡನೆಗಳು ವ್ಯಕ್ತವಾಗಿದೆ. ಸರ್ಕಾರಿ ಸ್ವಾಮ್ಯದ ದೂರದರ್ಶನವನ್ನು ಕೇಸರಿಮಯಗೊಳಿಸಲು ಬಿಜೆಪಿ ಯತ್ನಿಸುತ್ತಿರುವುದನ್ನು ವಿರೋಧ ಪಕ್ಷಗಳು ಖಂಡಿಸಿವೆ. ಚುನಾವಣೆ ವೇಳೆ ನಡೆದ ಈ ಘಟನೆ ಇದೀಗ ಭಾರೀ ಸಂಚಲನ ಮೂಡಿಸಿದೆ.