ನವದೆಹಲಿ: ಮುಂದಿನ ವರ್ಷ ಸಂಸತ್ತಿಗೆ ಚುನಾವಣೆ ನಡೆಯಲಿದೆ. ಲೋಕಸಭೆ ಚುನಾವಣೆ ಎದುರಿಸಲು ಎಲ್ಲ ಪಕ್ಷಗಳು ಈಗಾಗಲೆ ಸಿದ್ದತೆಗಳನ್ನು ನಡೆಸಿಕೊಂಡು ಬರುತ್ತಿವೆ. ಸದ್ಯ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಭಾರತೀಯ ಜನತಾ ಪಕ್ಷವು ಕೂಡ 3ನೇ ಅವಧಿಗೆ ಅಧಿಕಾರ ಹಿಡಿಯಲು ತಂತ್ರಗಳನ್ನು ರೂಪಿಸುತ್ತಿದೆ.
ಭಾರತೀಯ ಜನತಾ ಪಾರ್ಟಿ ವಿಶೇಷವಾಗಿ ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿಯ ಪರವಾಗಿ ಹೆಚ್ಚುವರಿ ಕ್ಷೇತ್ರಗಳನ್ನು ಗೆಲ್ಲಲು ಮುಂದಾಗಿದೆ. ಇದಕ್ಕಾಗಿ ನಾಯಕರು ರಣತಂತ್ರ ರೂಪಿಸುತ್ತಿದ್ದಾರೆ. ಅದರ ಭಾಗವಾಗಿಯೇ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ಧಿಯನ್ನು ಹರಿಯಬಿಟ್ಟಿದ್ದಾರೆ.
ಪ್ರಧಾನಿ ಮೋದಿ ಉತ್ತರದಲ್ಲಿ ಒಂದು ಹಾಗೂ ದಕ್ಷಿಣ ರಾಜ್ಯದಲ್ಲಿ ಒಂದು ಕ್ಷೇತ್ರಕ್ಕೆ ಸ್ಪರ್ಧಿಸಲು ನಿರ್ಧರಿಸಿದ್ದು, ದಕ್ಷಿಣ ರಾಜ್ಯದ ತಮಿಳುನಾಡಿನಿಂದಲೇ ಅವರು ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಪ್ರಧಾನಿ ಮೋದಿ ತಮಿಳುನಾಡಿನಲ್ಲಿ ಸ್ಪರ್ಧಿಸುವುದಾದರೆ ರಾಮನಾಥಪುರಂ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಭಾರತೀಯ ಜನತಾ ಪಕ್ಷದ ತಮಿಳುನಾಡು ಅಧ್ಯಕ್ಷ ಅಣ್ಣಾಮಲೈ ಅವರನ್ನು ಕೇಳಿದಾಗ, ‘ಪ್ರಧಾನಿ ನರೇಂದ್ರ ಮೋದಿ ವಿದೇಶಿಯಲ್ಲ; ಆತ ಭಾರತೀಯ. ಅವರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ನಾಡಿನ ಜನ ಅವರ ಮೇಲೆ ಪ್ರೀತಿ, ಮಮತೆ ಹೊಂದಿದ್ದಾರೆ. ಅಷ್ಟೇ ಅಲ್ಲ ಮುಂದಿನ ಸಂಸತ್ ಚುನಾವಣೆ ವೇಳೆ ತಮಿಳುನಾಡಿನಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಇದು ನಿಜವೇ ಎಂದು ಅನೇಕರು ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಕಳೆದ 2 ದಿನಗಳ ಹಿಂದೆ ನಾನು ತೂತ್ತುಕುಡಿಗೆ ಹೋಗಿದ್ದೆ. ಅಲ್ಲಿನ ಅಂಗಡಿಯೊಂದರಲ್ಲಿ ಟೀ ಕುಡಿಯಲು ಹೋಗಿದ್ದಾಗ, ನನ್ನನ್ನು ನೋಡಿದ ಅಲ್ಲಿನ ಜನರು, ಪ್ರಧಾನಿ ಮೋದಿ ತಮಿಳುನಾಡಿನಲ್ಲಿ ಸ್ಪರ್ಧಿಸುತ್ತಾರೆಯೇ? ಎಂದು ಕೇಳಿದರು.
ಇದನ್ನು ತಿಳಿದುಕೊಳ್ಳಲು ಜನರು ತುಂಬಾ ಆಸಕ್ತಿ ಹೊಂದಿದ್ದಾರೆ. ತಮಿಳುನಾಡಿನಲ್ಲಿ ಭಾರತೀಯ ಜನತಾ ಪಕ್ಷವನ್ನು ಬಲಿಷ್ಠಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ.
ತಮಿಳುನಾಡಿನ ಜನರು ಪ್ರಧಾನಿ ಮೋದಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದಾರೆ. ಅವರ ಚಟುವಟಿಕೆಗಳನ್ನು ಮೆಚ್ಚುತ್ತಾರೆ. ತಮಿಳುನಾಡಿನಲ್ಲೂ ಪ್ರಧಾನಿ ಮೋದಿಯ ಅಲೆ ಎದ್ದಿದೆ. ತಮಿಳುನಾಡಿನಲ್ಲೂ ಭಾರತೀಯ ಜನತಾ ಪಕ್ಷಕ್ಕೆ ಪ್ರತ್ಯೇಕ ಗುರುತು ಸಿಗಬೇಕು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇದನ್ನು ನಾವು ಸಾಬೀತು ಮಾಡುತ್ತೇವೆ’ ಎಂದರು.