ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಬಿಜೆಪಿ ಜೆಡಿಎಸ್ ಮೈತ್ರಿ Archives » Dynamic Leader
October 19, 2024
Home Posts tagged ಬಿಜೆಪಿ ಜೆಡಿಎಸ್ ಮೈತ್ರಿ
ರಾಜಕೀಯ

ಮೈಸೂರು: ಇಂದು ಮೈಸೂರಿನ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ನೀಡಿರುವ ನೋಟೀಸಿಗೆ ಈಗಾಗಲೇ ಉತ್ತರ ನೀಡಲಾಗಿದ್ದು, ಅದನ್ನು ರಾಜಪಾಲರು ಒಪ್ಪಿಕೊಳ್ಳುವ ನಂಬಿಕೆಯಿದೆ ಎಂದು ಹೇಳಿದರು.

“ಮುಡಾ ವಿಷಯದಲ್ಲಿ ಸಂಪೂರ್ಣವಾಗಿ ಕಾನೂನು ಪ್ರಕಾರ ನಡೆದಿದೆ. ನಿವೇಶನ ಹಂಚಿಕೆಯಲ್ಲಿ ಯಾವುದೇ ರೀತಿಯ ಪ್ರಭಾವವನ್ನು ನಾನು ಬೀರಿಲ್ಲ. ಕಾನೂನು ಪ್ರಕಾರವಾಗಿರುವ ಹಿನ್ನೆಲೆಯಲ್ಲಿಯೇ ಬಿಜೆಪಿ ಸರ್ಕಾರದ ಅವಧಿಯಲ್ಲಿ 2021ರಲ್ಲಿ ನನ್ನ ಪತ್ನಿಗೆ ಬದಲಿ ನಿವೇಶನ ನೀಡಲಾಗಿದೆ” ಎಂದು ಹೇಳಿದರು.

“ಮುಡಾ ಅಕ್ರಮವಾಗಿ ನಮ್ಮ ಜಮೀನನ್ನು ಸ್ವಾಧೀನ ಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಬದಲಿ ನಿವೇಶನ ಕೋರಿ 2014ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನನ್ನ ಪತ್ನಿ ಅರ್ಜಿ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ನಾನು ಈ ಕುರಿತು ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ” ಎಂದು ಹೇಳಿದರು.

“ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ನನ್ನ ಮೇಲೆ ಆಪಾದನೆಗಳನ್ನು ಮಾಡುತ್ತಿವೆ. ಆಪರೇಶನ್‌ ಕಮಲ ನಡೆಸಲು ಪ್ರಯತ್ನಿಸಿದರೂ, ಸರ್ಕಾರ ಅಸ್ಥಿರಗೊಳಿಸಲು ಸಾಧ್ಯವಾಗದ ಕಾರಣ ಇದನ್ನು ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಕಳೆದ ಒಂದು ವರ್ಷದ ಅವಧಿಯಲ್ಲಿ ಯಶಸ್ವಿಯಾಗಿ ಜಾರಿಗೊಳಿಸಿ, ಬಡವರ ಪರವಾಗಿ ಕೆಲಸ ಮಾಡುತ್ತಿರುವುದನ್ನು ಸಹಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ” ಎಂದು ಕಿಡಿಕಾರಿದರು.

“ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದ್ದರು. ಮೊದಲ ದಿನದಿಂದಲೂ ಗ್ಯಾರಂಟಿ ಯೋಜನೆ ವಿರುದ್ಧವಾಗಿ ಅವರು ಮಾತನಾಡುತ್ತಿದ್ದಾರೆ. ಒಂದು ವೇಳೆ ಗ್ಯಾರಂಟಿ ಯೋಜನೆ ಆರಂಭಿಸಿದರೂ, ಅದನ್ನು ನಿಲ್ಲಿಸಿ ಬಿಡುತ್ತಾರೆ ಎಂದಿದ್ದರು. ಆದರೆ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದಿಂದ ಅವರು ಹತಾಶರಾಗಿದ್ದಾರೆ” ಎಂದು ಹೇಳಿದರು.

“ಈ ವಯಸ್ಸಿನಲ್ಲಿ ಪೋಕ್ಸೋ ಪ್ರಕರಣದಲ್ಲಿ ಸಿಲುಕಿರುವ ಯಡಿಯೂರಪ್ಪ ಅವರು ನ್ಯಾಯಾಲಯದ ದಯೆಯಿಂದ ಜೈಲು ಪಾಲಾಗದೆ ಬಚಾವಾಗಿದ್ದಾರೆ. 82ರ ವಯಸ್ಸಿನಲ್ಲಿ ಇಂತಹ ಪ್ರಕರಣದಲ್ಲಿ ಚಾರ್ಜ್‌ಶೀಟ್‌ ಹಾಕಿಸಿಕೊಂಡಿರುವ ಯಡಿಯೂರಪ್ಪ ಅವರಿಗೆ ನನ್ನ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಅವರು ನೈತಿಕತೆ ಇದ್ದರೆ ಸಾರ್ವಜನಿಕ ಜೀವನದಿಂದ ನಿವೃತ್ತರಾಗಬೇಕು. ಅವರ ವಿರುದ್ಧ 20ಕ್ಕೂ ಅಧಿಕ ಪ್ರಕರಣಗಳು ಇದ್ದು, ಈ ಕುರಿತು ವಿವರವಾದ ಮಾಹಿತಿಯನ್ನು ನೀಡಲಿದ್ದೇನೆ” ಎಂದು ಗುಡುಗಿದರು.

ಯಡಿಯೂರಪ್ಪ ಅಧಿಕಾರದ ಅವಧಿಯಲ್ಲಿ ಚೆಕ್‌ ಮೂಲಕ ಲಂಚದ ಹಣವನ್ನು ಪಡೆದುಕೊಂಡಿದ್ದರು. ಅಕ್ರಮವಾಗಿ ಡಿನೋಟಿಫಿಕೇಶನ್‌ ಮಾಡಿದ್ದರು. ನಾವು ಅಂತಹ ಯಾವುದೇ ಅಕ್ರಮಗಳನ್ನು ಎಸಗಿಲ್ಲ. ವಿರೋಧ ಪಕ್ಷಗಳು ಸುಳ್ಳನ್ನು ನಿರಂತರವಾಗಿ ಹೇಳುವ ಮೂಲಕ ಸತ್ಯ ಮಾಡಲು ಸಾಧ್ಯವಿಲ್ಲ. ಸತ್ಯಕ್ಕೇ ಅಂತಿಮ ಜಯ ಎಂಬ ವಿಶ್ವಾಸವಿದೆ” ಎಂದು ಹೇಳಿದರು.

ರಾಜಕೀಯ

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯದ ಆರೋಪಗಳ ಬಗ್ಗೆ ತನಿಖೆ ನಡೆಸಲು ರಚಿಸಲಾದ ವಿಶೇಷ ತನಿಖಾ ತಂಡ ಸ್ವತಂತ್ರವಾಗಿ ಮತ್ತು ನಿಷ್ಪಕ್ಷಪಾತತನದಿಂದ ತನಿಖೆ ನಡೆಸಲಿದ್ದು, ಇದರಲ್ಲಿ ರಾಜ್ಯ ಸರ್ಕಾರ ಒಂದು ಸೂಜಿಯ ಮೊನೆಯಷ್ಟೂ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಎಸ್‌ಐಟಿ ಎನ್ನುವುದು ರಿಮೋಟ್ ಕಂಟ್ರೋಲ್ ಮೇಲೆ ಕೆಲಸ ಮಾಡುತ್ತಿದೆ. ಅದು ಸರ್ಕಾರದ ರಬ್ಬರ್ ಸ್ಟಾಂಪ್’’ ಎಂದು ಬಿಜೆಪಿ ನಾಯಕ ದೇವರಾಜೇಗೌಡರ ಆರೋಪ ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿದೆ. ಇದು ಅಪರಾಧಿಗಳನ್ನು ರಕ್ಷಿಸುವ ದುರುದ್ದೇಶದಿಂದ ತನಿಖೆಯ ಹಾದಿ ತಪ್ಪಿಸಲು ಮಾಡಿರುವ ಕುತಂತ್ರವಾಗಿದೆ ಎಂದಿದ್ದಾರೆ.

ಎಸ್‌ಐಟಿ ಸಂಪೂರ್ಣವಾಗಿ ಪಾರದರ್ಶಕವಾಗಿ ಕೆಲಸ ಮಾಡುತ್ತಿದೆ. ತಪ್ಪಿತಸ್ಥರು ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ. ಈ ಉದ್ದೇಶದಿಂದಲೇ ಆಯ್ದ ದಕ್ಷ ಅಧಿಕಾರಿಗಳನ್ನು ಸೇರಿಸಿಕೊಂಡು ಎಸ್‌ಐಟಿ ರಚಿಸಲಾಗಿದೆ ಎಂದು ಹೇಳಿದ್ದಾರೆ.

ಈ ಪ್ರಕರಣದಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಹಾಳಾಗುತ್ತಿದೆ ಎಂದು ಬಿಜೆಪಿ ನಾಯಕರು ಈಗ ಗೋಳಾಡುವುದರಿಂದ ಏನೂ ಪ್ರಯೋಜನವಾಗದು, ಜೆಡಿ(ಎಸ್) ಜೊತೆ ಮೈತ್ರಿ ಮಾಡಿಕೊಡುವಾಗಲೇ ಇದನ್ನು ಯೋಚನೆ ಮಾಡಬೇಕಾಗಿತ್ತು.

ಎಸ್‌ಐಟಿ ತನಿಖೆಯ ಯಶಸ್ಸು ಈಗ ಸಂಪೂರ್ಣವಾಗಿ ಕೇಂದ್ರ ಸರ್ಕಾರ ನೀಡುವ ಸಹಕಾರವನ್ನು ಅವಲಂಬಿಸಿದೆ. ವಿದೇಶದಲ್ಲಿದ್ದಾನೆ ಎಂದು ಹೇಳಲಾದ ಆರೋಪಿ ಪ್ರಜ್ವಲ್ ರೇವಣ್ಣನವರನ್ನು ಭಾರತಕ್ಕೆ ಕರೆತರಲು ಸಹಕಾರ ನೀಡಬೇಕಾಗಿರುವುದು ಕೇಂದ್ರ ಸರ್ಕಾರ. ಜೆಡಿಎಸ್ ಜೊತೆ ಈಗಲೂ ರಾಜಕೀಯ ಮೈತ್ರಿ ಹೊಂದಿರುವ ಬಿಜೆಪಿ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಾಗಿದೆ ಎಂದು ಹೇಳಿದ್ದಾರೆ.

ರಾಜಕೀಯ

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.

ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಜನರ ಧ್ವನಿ, ಸಂವಿಧಾನ ರಕ್ಷಣೆಯ ಧ್ವನಿ, ರಾಜ್ಯದ ಪರವಾದ ಧ್ವನಿ, ಸಾಮಾಜಿಕ ನ್ಯಾಯದ ಧ್ವನಿ, ಇವರು ನಮ್ಮ-ನಿಮ್ಮಲ್ಲರ ಧ್ವನಿಯಾಗಿ ಸಂಸತ್ತಿಗೆ ಹೋಗ್ತಾರೆ. ಒಗ್ಗಟ್ಟಾಗಿ ಕೆಲಸ ಮಾಡಿ ಗೆಲ್ಲಿಸಿ ಕಳಿಸೋಣ ಎಂದು ಹೇಳಿದರು.

ನಮ್ಮ ಅಭ್ಯರ್ಥಿ ಎಂ.ಲಕ್ಷ್ಮಣ್ ಸಾಮಾನ್ಯ ಒಕ್ಕಲಿಗ ಕುಟುಂಬದಿಂದ ಬಂದು, ಶ್ರಮದಿಂದ ಮೇಲೆ ಬಂದ ಕಾರ್ಯಕರ್ತ. ಇವರು ಒಕ್ಕಲಿಗರೇ ಅಲ್ಲ ಎನ್ನುವ ಅಪಪ್ರಚಾರವನ್ನು ವ್ಯಾಪಕವಾಗಿ ಮಾಡುತ್ತಿದ್ದಾರೆ. ಆದರೆ, ಎಂ.ಲಕ್ಷ್ಮಣ್ ಅವರು ಅಪ್ಪಟ ಒಕ್ಕಲಿಗರು. ಬಿಜೆಪಿ ಒಕ್ಕಲಿಗರಿಗೆ ಟಿಕೆಟ್ ತಪ್ಪಿಸಿದೆ ಎನ್ನುವ ಅಸಮಾಧಾನ ಹಲವರಲ್ಲಿದೆ, ಆ ಕಾರಣಕ್ಕೇ ಲಕ್ಷ್ಮಣ್ ಅವರು ಒಕ್ಕಲಿಗರೇ ಅಲ್ಲ ಎನ್ನುವ ಅಪಪ್ರಚಾರ ಮಾಡುತ್ತಿದ್ದಾರೆ. ಈ ಸುಳ್ಳು ಮತ್ತು ಅಪಪ್ರಚಾರವನ್ನು ನಂಬಬೇಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ನಮ್ಮ ನಾಡಿಗೆ ಪ್ರವಾಹ ಬಂದಾಗ ನರೇಂದ್ರ ಮೋದಿ ಬರಲಿಲ್ಲ; ಬರಗಾಲ ಬಂದಾಗಲೂ ಮೋದಿ ಬರಲಿಲ್ಲ. ತೆರಿಗೆಯಲ್ಲಿ ರಾಜ್ಯಕ್ಕೆ ಅನ್ಯಾಯವಾದಾಗಲೂ ಮೋದಿ ಬರಲಿಲ್ಲ; ಚುನಾವಣೆ ಬಂತು ನೋಡಿ – ಮೋದಿ ರಾಜ್ಯಕ್ಕೆ ಮೇಲಿಂದ ಮೇಲೆ ಬರ್ತಾರೆ ಎಂದು ವ್ಯಂಗ್ಯವಾಡಿದರು.

ಹೆಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರವನ್ನು ಬೀಳಿಸಿದ್ದೇ ಬಿಜೆಪಿ. ಹಾಗಂತ ಇದೇ ಕುಮಾರಸ್ವಾಮಿ ಬಯ್ಯುತ್ತಿದ್ದರು. ಈಗ ದೇವೇಗೌಡರು ಮತ್ತು ಕುಮಾರಸ್ವಾಮಿ ಇಬ್ಬರೂ ಬಿಜೆಪಿ ಜತೆ ಸೇರಿಕೊಂಡಿದ್ದಾರೆ. ಆದ್ದರಿಂದ ಇವರು ತಮ್ಮ ಪಕ್ಷದ ಹೆಸರಿನಲ್ಲಿರುವ ಸೆಕ್ಯುಲರ್ ಪದವನ್ನು ಕಿತ್ತಾಕೋದು ಉತ್ತಮ ಎಂದೆ. ಇಷ್ಟು ಹೇಳಿದ್ದಕ್ಕೇ ದೇವೇಗೌಡರು ಸಿದ್ದರಾಮಯ್ಯರಿಗೆ ಗರ್ವ ಇದೆ ಎನ್ನುತ್ತಿದ್ದಾರೆ.

ದೇವೇಗೌಡರ ಕುರಿತ ನಮಗಿರುವುದು ರಾಜಕೀಯ ವಿರೋಧ ಮಾತ್ರ. ನಿಮ್ಮ ರಾಜಕೀಯ ನಿಲುವುಗಳಿಗೆ ಮಾಡುವ ವಿರೋಧ. ಯಾವುದೇ ಕಾರಣಕ್ಕೂ ದೇವೇಗೌಡರ ಬಗ್ಗೆ ವೈಯುಕ್ತಿಕ ವಿರೋಧ ಇಲ್ಲವೇ ಇಲ್ಲ. ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡರನ್ನೂ ಬಳಸಿ ಬಿಸಾಡಿದ ಜೆಡಿಎಸ್ ನವರು, ನನ್ನನ್ನೂ ಪಕ್ಷದಿಂದ ಹೊರಗೆ ಹಾಕಿದರು. ಇದೇ ರೀತಿ ಹಲವು ನಾಯಕರನ್ನು ಬಳಸಿ ಬಿಸಾಕಿದ್ದಾರೆ. ಇವರ ಈ ರಾಜಕೀಯ ವರ್ತನೆಗೆ ಮಾತ್ರ ನಮ್ಮ ವಿರೋಧ ಎಂದು ಪುನರುಚ್ಚಿಸಿದರು.

ಆದ್ದರಿಂದ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಕಣ್ಣೀರಿಗೆ ಮರಳಾಗದೆ, ಅವರ ಮಾತುಗಳನ್ನು, ಅವರ ವರ್ತನೆಯನ್ನು, ಪದೇ ಪದೇ ಬದಲಾಗುವ ಅವರ ನಿಲುವುಗಳನ್ನು ಪ್ರಶ್ನಿಸಿ ಪ್ರಭುದ್ಧವಾದ ಮತ್ತು ಖಚಿತವಾದ ರಾಜಕೀಯ ನಿರ್ಧಾರ ತೆಗೆದುಕೊಳ್ಳಬೇಕು. ಮೈಸೂರಿನ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಮಾಡಿದ, ನಾನು ಮುಖ್ಯಮಂತ್ರಿಯಾಗಿ ಮಾಡಿದ ಅಭಿವೃದ್ಧಿ ಕೆಲಸಗಳು ಕಣ್ಣ ಮುಂದಿವೆ. ಬಿಜೆಪಿ, ಜೆಡಿಎಸ್ ಸರ್ಕಾರದಲ್ಲಿ ಮೈಸೂರಿಗೆ ಏನು ಕೆಲಸ ಮಾಡಿದ್ದಾರೆ ತೋರಿಸಲಿ ಎಂದು ಸವಾಲೆಸದರು.

ಪಶು ಸಂಗೋಪನಾ ಸಚಿವರಾದ ಕೆ.ವೆಂಕಟೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ತನ್ವೀರ್ ಸೇಠ್,‌ ಚಾಮರಾಜ ಕ್ಷೇತ್ರದ ಶಾಸಕರಾದ ಹರೀಶ್ ಗೌಡ, ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಪುಷ್ಪಾ ಅಮರನಾಥ್, ಲೋಕಸಭಾ ಅಭ್ಯರ್ಥಿ ಲಕ್ಷ್ಮಣ್ ಮತ್ತು ಜಿಲ್ಲೆಯ ಶಾಸಕರುಗಳು, ಮಾಜಿ ಶಾಸಕರುಗಳು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಮುಖಂಡರು ಹಾಗೂ ಬ್ಲಾಕ್ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ವೇದಿಕೆಯಲ್ಲಿ ಉಪಸ್ಥಿತರಿದ್ದರು.