ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಭೂಪೇಶ್ ಬಾಗೇಲ್ Archives » Dynamic Leader
November 22, 2024
Home Posts tagged ಭೂಪೇಶ್ ಬಾಗೇಲ್
ದೇಶ

ಡಿ.ಸಿ.ಪ್ರಕಾಶ್ ಸಂಪಾದಕರು

ಬಿಜೆಪಿ ಆಡಳಿತವಿರುವ ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ಗಡಿ ಭದ್ರತಾ ಪಡೆ ಮತ್ತು ಜಿಲ್ಲಾ ಮೀಸಲು ಪಡೆ ನಡೆಸಿದ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ಸುಮಾರು 29 ನಕ್ಸಲೀಯರು ಎನ್‌ಕೌಂಟರ್‌ನಲ್ಲಿ ಹತರಾಗಿದ್ದಾರೆ.

ಸಂಸತ್ತಿನ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಕ್ಸಲ್ (ಮಾವೋವಾದಿ) ನಿರ್ಮೂಲನೆಗೆ ಕೇಂದ್ರ ಸರ್ಕಾರ ತೀವ್ರ ಪ್ರಯತ್ನ ನಡೆಸುತ್ತಿದೆ. ಈ ರೀತಿಯಾಗಿ, ಬಿಜೆಪಿ ಆಡಳಿತವಿರುವ ಛತ್ತೀಸ್‌ಗಢ ರಾಜ್ಯದ ಕಂಕೇರ್ ಜಿಲ್ಲೆಯಲ್ಲಿ ಗಡಿ ಭದ್ರತಾ ಪಡೆ ಮತ್ತು ಜಿಲ್ಲಾ ಮೀಸಲು ಪಡೆ ನಡೆಸಿದ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ಸುಮಾರು 29 ನಕ್ಸಲೀಯರು ಎನ್‌ಕೌಂಟರ್‌ನಲ್ಲಿ ಹತರಾಗಿದ್ದಾರೆ.

ಗೃಹ ಸಚಿವಾಲಯದ ಪ್ರಕಾರ, ಕಳೆದ ಹತ್ತು ವರ್ಷಗಳ ಬಿಜೆಪಿ ಆಡಳಿತದಲ್ಲಿ ನಕ್ಸಲ್ ಉಗ್ರಗಾಮಿತ್ವವನ್ನು ಶೇ.70 ರಿಂದ ಶೇ.52ಕ್ಕೆ ಇಳಿಸಲಾಗಿದೆ. ಅಲ್ಲದೆ, ಭವಿಷ್ಯದಲ್ಲಿ ನಕ್ಸಲ್ ಮುಕ್ತ ಭಾರತ ನಿರ್ಮಾಣ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಖಡಾಖಂಡಿತವಾಗಿ ಹೇಳಿದ್ದಾರೆ.

ಈ ವರ್ಷದ ಆರಂಭದಿಂದ, ಗಡಿ ಭದ್ರತಾ ಪಡೆ (BSF), ಜಿಲ್ಲಾ ಮೀಸಲು ಪಡೆ (DRG) ಮತ್ತು ಕಮಾಂಡೋ ಬೆಟಾಲಿಯನ್ (COBRA) ಸೇರಿದಂತೆ ಸಶಸ್ತ್ರ ಪಡೆಗಳು ನಕ್ಸಲ್ ಪ್ರಭಾವಿತ ಛತ್ತೀಸ್‌ಗಢ ರಾಜ್ಯದ ಅರಣ್ಯಗಳಲ್ಲಿ ನಕ್ಸಲ್ ಹುಡುಕಾಟ ಮತ್ತು ಬೇಟೆಯಲ್ಲಿ ತೊಡಗಿವೆ.

ಈ ಹಿನ್ನೆಲೆಯಲ್ಲಿ ಕಳೆದ ಫೆಬ್ರವರಿ ಅಂತ್ಯದಲ್ಲಿ ಛತ್ತೀಸ್‌ಗಢದ ಕಂಕೇರ್ ಅರಣ್ಯ ಪ್ರದೇಶದಲ್ಲಿ ನಕ್ಸಲರೆಂದು ಶಂಕಿಸಿ ಅಲೆದಾಡುತ್ತಿದ್ದ ಮೂವರನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದರು. ಆದರೆ, ಮೃತ ಮೂವರ ಕುಟುಂಬಗಳು ಮತ್ತು ಗ್ರಾಮಸ್ಥರು, ‘ನಾವು ಆದಿವಾಸಿಗಳು ಅರಣ್ಯವನ್ನು ಅವಲಂಬಿಸಿ ಬದುಕುತ್ತಿದ್ದೇವೆ.

ನಾವು ತೊಗಟೆ, ಎಲೆಗಳು ಮತ್ತು ಇತರ ಉತ್ಪನ್ನಗಳಿಗಾಗಿ ಕಾಡಿಗೆ ಹೋಗುತ್ತೇವೆ. ಹೀಗಾಗಿ ಎಲೆ ಸಂಗ್ರಹದ ಸೀಸನ್ ಶುರುವಾಗಿರುವುದರಿಂದ ಮೂವರೂ ಮರಗಳ ತೊಗಟೆಗಳು, ಕಾಂಡಗಳು ಸೇರಿದಂತೆ ವಸ್ತುಗಳಿಂದ ಹಗ್ಗಗಳನ್ನು ತಯಾರಿಸಲು ಕಾಡಿಗೆ ತೆರಳಿದ್ದರು. ಆದರೆ ಸರಕಾರಕ್ಕೆ ಲೆಕ್ಕ ಕೊಡಬೇಕು ಎಂಬುದಕ್ಕಾಗಿ ಮೂವರು ಅಮಾಯಕರನ್ನು ನಕ್ಸಲರು ಎಂದು ಆರೋಪಿಸಿ ಪೊಲೀಸರು ನಕಲಿ ಎನ್‌ಕೌಂಟರ್ ಮಾಡಿದ್ದಾರೆ’ ಎಂದು ಆರೋಪಿಸಿದರು.

ತರುವಾಯ, ಮಾರ್ಚ್ ಅಂತ್ಯದಲ್ಲಿ, ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಸಿಪುರಪಟ್ಟಿ ಅರಣ್ಯ ಪ್ರದೇಶದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಆರು ಜನರನ್ನು ನಕ್ಸಲೀಯರು ಎಂದು ಶಂಕಿಸಿ ಭದ್ರತಾ ಪಡೆಗಳು ಗುಂಡಿಕ್ಕಿ ಕೊಂದರು. ಈ ಕುರಿತು ಹೇಳಿಕೆ ನೀಡಿರುವ ನಕ್ಸಲ್ ಸಂಘಟನೆಯ ಕಾರ್ಯದರ್ಶಿ, ‘ಸತ್ತವರಲ್ಲಿ ಇಬ್ಬರು ಮಾತ್ರ ನಮ್ಮ ಸಂಘಟನೆಯ ಸದಸ್ಯರು. ಉಳಿದ ನಾಲ್ವರು ಗ್ರಾಮದ ನಾಗರಿಕರು.

ಜನರನ್ನು ಭೇಟಿ ಮಾಡಲು ಮತ್ತು ಅವರ ಕುಂದುಕೊರತೆಗಳನ್ನು ಆಲಿಸಲು ಗ್ರಾಮಕ್ಕೆ ಹೋದ ನಮ್ಮ ಇಬ್ಬರು ಸಂಘಟಕರು ಮತ್ತು ನಾಲ್ವರು ನಿರಾಯುಧ ನಾಗರಿಕರನ್ನು ಭದ್ರತಾ ಪಡೆಗಳು ಕರೆದೊಯ್ದು ವಿಚಾರಣೆಗೆ ಒಳಪಡಿಸಿ ನಂತರ ಅವರನ್ನು ಓಡಲುಬಿಟ್ಟು ಮನಬಂದಂತೆ ಗುಂಡಿಕ್ಕಿ ಕೊಂದಿದ್ದಾರೆ.

ಇದೊಂದು ನಕಲಿ ಎನ್‌ಕೌಂಟರ್, ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳು ಕೂಡ ಪೊಲೀಸರು ಮತ್ತು ಭದ್ರತಾ ಪಡೆಗಳು ಜೋಡಿಸಿಟ್ಟಿದ್ದು’ ಎಂದು ಅವರು ಆರೋಪಿಸಿದ್ದಾರೆ. ಇದನ್ನು ಭದ್ರತಾ ಪಡೆ ನಿರಾಕರಿಸಿದೆ. ಈ ಹಿನ್ನಲೆಯಲ್ಲಿ, ನಕ್ಸಲರ ಹತ್ಯೆಯನ್ನು ಪ್ರತಿಭಟಿಸಲು ನಕ್ಸಲೀಯರು ಏಪ್ರಿಲ್ 3 ರಂದು ಸುಕ್ಮಾ ಮತ್ತು ಬಿಜಾಪುರದಲ್ಲಿ ಒಂದುದಿನದ ಬಂದ್ ಗೆ ಕರೆ ನೀಡಿದರು.

ಆ ಬಳಿಕ ನಕ್ಸಲರ ಬೇಟೆಯನ್ನು ಮತ್ತಷ್ಟು ತೀವ್ರಗೊಳಿಸಿದ ಸರ್ಕಾರ, ಹುಡುಕಾಟವನ್ನು ಮುಂದುವರಿಸಿತು. ನಕ್ಸಲರು ಬಂದ್ ಘೋಷಿಸಿದ ದಿನವೇ, ಛತ್ತೀಸ್‌ಗಢದ ಬಿಜಾಪುರದಲ್ಲಿ 13 ನಕ್ಸಲೀಯರನ್ನು ಎನ್‌ಕೌಂಟರ್‌ ಮಾಡಲಾಯಿತು. ತದನಂತರ, ಏಪ್ರಿಲ್ 6 ರಂದು ಕಂಕೇರ್‌ನಲ್ಲಿ ಇನ್ನೂ 3 ನಕ್ಸಲೀಯರನ್ನು ಕೊಲ್ಲಲಾಯಿತು.

ಇದೇ ಹಿನ್ನಲೆಯಲ್ಲಿ, ಕಂಕೇರ್ ಜಿಲ್ಲೆಯ ಹಪಟೋಲಾ ಅರಣ್ಯದಲ್ಲಿ ಏಪ್ರಿಲ್ 16ರಂದು ಗಡಿ ಭದ್ರತಾ ಪಡೆಗಳು 15 ಮಹಿಳೆಯರು ಸೇರಿದಂತೆ ಒಟ್ಟು 29 ನಕ್ಸಲೀಯರನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಅದರಲ್ಲಿ, ಸರ್ಕಾರದಿಂದ ತಲಾ ರೂ.25 ಲಕ್ಷ ಘೋಷಣೆ ಮಾಡಿದ್ದ ನಕ್ಸಲ್ ಚಳುವಳಿಯ ಪ್ರಮುಖ ನಾಯಕ ಶಂಕರ್ ರಾವ್ ಕೂಡ ಕೊಲೆಯಾಗಿದ್ದಾರೆ.

ಅವರಿಂದ ಐದು ಎಕೆ-47 ರೈಫಲ್‌ಗಳು ಮತ್ತು ಎಲ್‌ಎಂಜಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತು ಮೃತರ 18 ಶವಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಭದ್ರತಾ ಪಡೆಗಳು ತಿಳಿಸಿವೆ. ಅಲ್ಲದೆ, ನಕ್ಸಲರೊಂದಿಗಿನ ಈ ಕಾಳಗದಲ್ಲಿ ಮೂವರು ಭದ್ರತಾ ಸಿಬ್ಬಂದಿಗಳು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ವರ್ಷವೊಂದರಲ್ಲೇ ಇದುವರೆಗೆ 79 ನಕ್ಸಲೀಯರು ಹತರಾಗಿದ್ದಾರೆ ಮತ್ತು ಈ ನಿರ್ದಿಷ್ಟ ದಾಳಿಯು ದೇಶದಲ್ಲೇ ಅತ್ಯಂತ ಭೀಕರ ದಾಳಿಯಾಗಿದೆ ಎಂದು ಸರ್ಕಾರ ಹೇಳಿದೆ. ಹೀಗಾಗಿ ಈ ದಾಳಿಯ ಬಗ್ಗೆ ಮಾತನಾಡಿರುವ ಛತ್ತೀಸ್‌ಗಢ ಬಿಜೆಪಿ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ, “ಕಂಕೇರ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್ ಐತಿಹಾಸಿಕ ವಿಜಯವಾಗಿದೆ” ಎಂದು ಹೇಳಿದ್ದಾರೆ.

ಅದೇ ರೀತಿ ಉಪಮುಖ್ಯಮಂತ್ರಿ ವಿಜಯ್ ಶರ್ಮಾ ಅವರು “ಗಡಿ ಭದ್ರತಾ ಪಡೆಯ ಯೋಧರನ್ನು ಅಭಿನಂದಿಸುತ್ತೇನೆ. ಭವಿಷ್ಯದಲ್ಲಿ ನಕ್ಸಲ್ ಮುಕ್ತ ಛತ್ತೀಸ್‌ಗಢವನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು! ಇದು ನಕ್ಸಲ್ ವಾದದ ವಿರುದ್ಧ ಛತ್ತೀಸ್‌ಗಢ ಪೊಲೀಸರು ನಡೆಸಿದ ಸರ್ಜಿಕಲ್ ಸ್ಟ್ರೈಕ್” ಎಂದು ಬಣ್ಣಿಸಿದ್ದಾರೆ.

ಹಾಗೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, “ದೇಶದಿಂದ ನಕ್ಸಲಿಸಂ ಮುಕ್ತಗೊಳಿಸಲು ಮೋದಿ ಸರಕಾರ ಬದ್ಧವಾಗಿದೆ. ಅಲ್ಲದೆ, ಛತ್ತೀಸ್‌ಗಢದ ಕಂಕೇರ್‌ನಲ್ಲಿ ಭದ್ರತಾ ಪಡೆಗಳ ಈ ಮಹಾನ್ ವಿಜಯವು ನಕ್ಸಲಿಸಂನ ಸಂಪೂರ್ಣ ನಿರ್ಮೂಲನೆಗೆ ಪ್ರಮುಖ ಹೆಜ್ಜೆಯಾಗಿದೆ!” ಎಂದು ಹೇಳಿದ್ದಾರೆ.

ಈ ಹಿನ್ನಲೆಯಲ್ಲಿ, ಛತ್ತೀಸ್‌ಗಢದ ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಾಗೇಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಸಂಚಲನದ ಮಾಹಿತಿ ನೀಡಿದ್ದಾರೆ. ಅಂದರೆ “ಬಿಜೆಪಿ ಆಡಳಿತದಲ್ಲಿ ನಕಲಿ ಎನ್‌ಕೌಂಟರ್‌ಗಳು ಸರ್ವಸಾಮಾನ್ಯವಾಗಿ ನಡೆಯುತ್ತಿವೆ. ಅದರಲ್ಲೂ ಕಳೆದ ನಾಲ್ಕು ತಿಂಗಳಲ್ಲಿ ನಕಲಿ ಎನ್‌ಕೌಂಟರ್‌ಗಳ ಸಂಖ್ಯೆ ತೀವ್ರವಾಗಿ ಹೆಚ್ಚಿದೆ.

ಬಿಜೆಪಿ ಸರ್ಕಾರವು ಅನೇಕ ಮುಗ್ಧ ಬುಡಕಟ್ಟು ಗ್ರಾಮಸ್ಥರನ್ನು ‘ನಕ್ಸಲರು’ ಎಂದು ಬ್ರಾಂಡ್ ಮಾಡಿ ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲುತ್ತಿದೆ. ಅಲ್ಲದೆ, ‘ಸುಳ್ಳು ಪ್ರಕರಣ’ ದಾಖಲಿಸಿ ಬಂಧಿಸುತ್ತೇವೆ ಎಂದು ಆದಿವಾಸಿಗಳಿಗೆ ಪೊಲೀಸರು ಬೆದರಿಕೆ ಹಾಕುತ್ತಿದ್ದಾರೆ. ಕಂಕೇರ್ ಮಾತ್ರವಲ್ಲದೆ ಕವರ್ತಾ ಜಿಲ್ಲೆಯಲ್ಲೂ ಇಂತಹ ಘಟನೆಗಳನ್ನು ಕೇಳಿ ಬರುತ್ತಿವೆ!” ಎಂದು ಹೇಳಿ ಸಂಚಲನ ಮೂಡಿಸಿದ್ದಾರೆ.