ವರದಿ: ಅರುಣ್ ಜಿ.,
ಗೆಲುವಿಗೆ ನೂರು ಜನ ಅಪ್ಪಂದಿರು, ಸೋಲಿಗೆ ಮಾತ್ರ ಒಬ್ಬನೇ… ಅನ್ನೋ ಮಾತಿದೆಯಲ್ಲಾ ಹಾಗೇ ಚಿತ್ರರಂಗದಲ್ಲಿ ಕೂಡಾ. ಎಲ್ಲವೂ ನಾನೇ, ನನ್ನಿಂದಲೇ ಎನ್ನುವ ಈಗೇ ಬೆಳೆದಿರುತ್ತದೆ. ಎಲ್ಲೆಲ್ಲಿಂದಲೋ ಬಂದವರು ಒಂದು ಕಡೆ ಸೇರಿ ಏನೋ ಸಾಧಿಸುತ್ತಾರೆ. ಅಲ್ಲೀತನಕ ಇದ್ದ ಒಗ್ಗಟ್ಟು ಒಂದೇ ಏಟಿಗೆ ದಿಕ್ಕಾಪಾಲಾಗಿರುತ್ತದೆ.
ಅದಾಗಲೇ ಎರಡು ಬಾರಿ ಸೋಲು ಕಂಡ ನಿರ್ದೇಶಕ, ಅವನನ್ನು ಅವಮಾನಿಸುವ ಬೆಳೆದು ನಿಂತ ಹೀರೋಗಳು, ಸೆಟೆದು ನಿಂತವನು ಮಾಡೋದು ಏನೇನೂ ಅಲ್ಲದ, ಯಾವುದೋ ಶಾಲೆಯಲ್ಲಿ ಪಾಠ ಮಾಡುವ ಮೇಷ್ಟ್ರನ್ನು ಕರೆತಂದು ಹೀರೋ ಮಾಡುತ್ತಾನೆ. ಆ ಪ್ರಯತ್ನ ಏನಾಗುತ್ತದೆ? ಸಿನಿಮಾವೊಂದರ ಯಶಸ್ಸಿನ ಜೊತೆ ಜೊತೆಗೇ ಹುಟ್ಟಿಕೊಳ್ಳುವ ಅಭಿಮಾನಿಳು, ಎಲ್ಲದರಿಂದ ವಿಮುಕ್ತನಾಗಬಯಸುವ ಸೂಪರ್ ಸ್ಟಾರ್, ಅವನ ಪ್ರೇಯಸಿ… ಹೀಗೆ ಸಿನಿಮಾರಂಗದ ಇಂಚಿಂಚೂ ವಿವರಗಳನ್ನು ಬಿಚ್ಚಿಟ್ಟಿರುವ ಚಿತ್ರ ಸೌತ್ ಇಂಡಿಯನ್ ಹೀರೋ. ಸಾಮಾನ್ಯಕ್ಕೆ ಸಿನಿಮಾದೊಳಗೆ ಸಿನಿಮಾದ ವಿಚಾರಗಳನ್ನು ಹೇಳಿರುವ ಸಿನಿಮಾಗಳು ಗೆದ್ದಿರುವುದು ಕಡಿಮೆ. ಆರಂಭದಲ್ಲಿ ಉಪೇಂದ್ರ ʼಶ್!ʼ, ʻಎʼ ಥರದ ಸಿನಿಮಾಗಳಲ್ಲಿ ಇಂಥ ಪ್ರಯತ್ನ ಮಾಡಿದ್ದರು. ಆ ನಂತರ ಹರೀಶ್ ರಾಜ್ ಕಲಾಕಾರ್ ಎನ್ನುವ ಸಿನಿಮಾದಲ್ಲಿ ಇದೇ ರೀತಿಯ ಚಿತ್ರರಂಗದ ಒಳಸುಳಿಗಳನ್ನು ತೆರೆದಿಟ್ಟಿದ್ದರು. ಈಗ ನಿರ್ದೇಶಕ ನರೇಶ್ ಕುಮಾರ್ ಬೇರೆಯದ್ದೇ ಕೋನದಲ್ಲಿ ಸಿನಿಮಾರಂಗದ ವಿವರಗಳನ್ನು ಕಟ್ಟಿಕೊಟ್ಟಿದ್ದಾರೆ.
ಈ ಹಿಂದೆ ಫಸ್ಟ್ ರ‍್ಯಾಂಕ್ ರಾಜು ಮತ್ತು ರಾಜು ಕನ್ನಡ ಮೀಡಿಯಂ ಎಂಬೆರಡು ಸಿನಿಮಾಳನ್ನು ನಿರ್ದೇಶಿಸಿದ್ದವರು ನರೇಶ್. ತೀರಾ ಹೊಸಬರನ್ನು ಬಳಸಿಕೊಂಡು ಅತ್ಯುತ್ತಮ ಕಂಟೆಂಟ್ ಕೊಡುವ ತಾಕತ್ತಿರುವ ನಿರ್ದೇಶಕ. ಏನೇನೂ ಹಿನ್ನೆಲೆ ಇಲ್ಲದೆ ಬಂದು ಸಿನಿಮಾ ಹೀರೋ ಆಗುವವರು, ಅವರನ್ನು ರೂಪಿಸುವ ನಿರ್ದೇಶಕ, ನಿರ್ಮಾಪಕ, ಎಲ್ಲಕ್ಕಿಂತಾ ಮುಖ್ಯವಾಗಿ ಹೀರೋಗಳನ್ನು ಆರಾಧಿಸುವ ಅಭಿಮಾನಿಗಳು, ಎಲ್ಲವನ್ನೂ ಗಮನಿಸುವ ಮೀಡಿಯಾಗಳು – ಎಲ್ಲರ ದೃಷ್ಟಿಯಲ್ಲಿ ಸೌತ್ ಇಂಡಿಯನ್ ಹೀರೋ ಸಿನಿಮಾ ಕ್ರಿಯೇಟ್ ಆದಂತಿದೆ. ಇದಲ್ಲದೆ, ಸಿನಿಮಾ ನಟರ ವರಸೆಗಳನ್ನು, ಅವರಾಡುವ ಆಟಗಳನ್ನು ಲೇವಡಿ ಮಾಡುವ, ತಿವಿಯುವ ಕೆಲಸ ಕೂಡಾ ಈ ಚಿತ್ರದಲ್ಲಿ ಆಗಿದೆ. ಸದ್ಯ ಕಣ್ಣಮುಂದೆ ಇರುವ ಹೀರೋಗಳು, ಅವರ ಅಭಿಮಾನಿಗಳ ಚಿತ್ರಣವನ್ನು ಕಣ್ಣ ಮುಂದೆ ತಂದಿದ್ದಾರೆ.
ಸಾರ್ಥಕ್ ಸಿನಿಮಾದಲ್ಲಿ ಹೀರೋ ಆಗುವ ಮುಂಚೆ ಮತ್ತು ನಂತರದ ದೃಶ್ಯಗಳಲ್ಲಿ ಅಗತ್ಯಕ್ಕೆ ತಕ್ಕಷ್ಟು ನಟಿಸಿದ್ದಾರೆ. ನಾಯಕಿ ಕಾಶಿಮಾ ಮತ್ತು ವಿಜಯ್ ಚೆಂಡೂರು ಪಾತ್ರಗಳಿಗೆ ಹೆಚ್ಚು ಸ್ಕೋಪ್ ಸಿಕ್ಕಿದೆ. ಇಡೀ ಸಿನಿಮಾದಲ್ಲಿ ಹೆಚ್ಚು ಗಮನ ಸೆಳೆಯುವುದು ಅಶ್ವಿನ್ ಪಲ್ಲಕ್ಕಿ ನಟನೆ. ಅಮಿತ್ ಎಷ್ಟು ಕೃತಕವೋ ಅಶ್ವಿನ್ ಅಷ್ಟೇ ಸಹಜವಾಗಿ ನಟಿಸಿದ್ದಾರೆ. ಮನರಂಜನೆಯ ಜೊತೆಗೆ ಚಿತ್ರರಂಗದ ಒಳಮರ್ಮಗಳನ್ನು ತಿಳಿದುಕೊಳ್ಳುವ ಬಯಕೆ ಇರುವವರು ಖಂಡಿತಾ ಈ ಚಿತ್ರವನ್ನು ನೋಡಬಹುದು.