ನವದೆಹಲಿ: ‘ರಾಹುಲ್ ಹೆಡ್‌ಲೈನ್ಸ್ (Headlines)ನಲ್ಲಿ ಸ್ಥಾನ ಪಡೆಯಲು ರಣತಂತ್ರ ರೂಪಿಸಿ ಮಾತನಾಡುತ್ತಿದ್ದಾರೆ’ ಎಂದು ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿಸಿದ್ದಾರೆ.
ಇಂಗ್ಲಿಷ್ ಸುದ್ದಿ ವಾಹಿನಿಯೊಂದಕ್ಕೆ ಸ್ಮೃತಿ ಇರಾನಿ ನೀಡಿದ ಸಂದರ್ಶನ: ಚುನಾವಣೆ ಸಂದರ್ಭದಲ್ಲಿ ಜನರ ಮನಸ್ಸಿನಲ್ಲಿ ಸ್ಥಾನ ಪಡೆಯಲು ರಾಹುಲ್ ಆಗಾಗ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದರು. ಅದೊಂದು ಪ್ರಹಸನವಾಯಿತು. ಆ ತಂತ್ರ ಫಲಿಸದ ಕಾರಣ ಈಗ ಜಾತಿ ಸಮಸ್ಯೆ ಬಗ್ಗೆ ಮಾತನಾಡಲು ಶುರು ಮಾಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಗೆಲುವಿನ ರುಚಿ ಕಂಡಿದ್ದೇವೆ ಎಂದು ಭಾವಿಸಿರುವ ರಾಹುಲ್ ಈಗ ವಿಭಿನ್ನ ರಾಜಕೀಯ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ.
ಮಿಸ್ ಇಂಡಿಯಾ:
ಅವರು ಜಾತಿ ಗಣತಿ ಬಗ್ಗೆ ಮಾತನಾಡುತ್ತಾರೆ. ರಾಹುಲ್ ಅವರ ಜಾತಿ ರಾಜಕಾರಣ ಹೊಸ ತಂತ್ರ. ಮಿಸ್ ಇಂಡಿಯಾ ಸ್ಪರ್ಧೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರಿಗೆ ತಿಳಿದಿದೆ. ಆದರೂ ಅವರು ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಮಾತುಗಳನ್ನು ಹೇಳುತ್ತಿದ್ದಾರೆ. ಏಕೆಂದರೆ ಇದು ಮುಖ್ಯಾಂಶಗಳನ್ನು (Headlines) ಪಡೆಯುತ್ತದೆ. ಇದೆಲ್ಲ ಗೊತ್ತಿದ್ದರೂ ಪ್ಲಾನ್ ಮಾಡಿ ಮಾಡುತ್ತಿದ್ದಾರೆ. ಈ ರೀತಿ ಸ್ಮೃತಿ ಇರಾನಿ ಹೇಳಿದ್ದಾರೆ.
ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ವಿರುದ್ಧ ಸ್ಮೃತಿ ಇರಾನಿ ಸೋತಿದ್ದರು. ಇದರಿಂದ ಮತ್ತೊಮ್ಮೆ ಸಚಿವೆಯಾಗುವ ಅವಕಾಶವನ್ನು ಕಳೆದುಕೊಂಡರು. 2019ರ ಚುನಾವಣೆಯಲ್ಲಿ ಸ್ಮೃತಿ ಇರಾನಿ ರಾಹುಲ್ ಗಾಂಧಿಯನ್ನು ಸೋಲಿಸಿ, ಜಯಗಳಿಸುವುದರ ಮೂಲಕ ಕೇಂದ್ರ ಸಚಿವೆಯಾದವರು ಎಂಬುದು ಗಮನಾರ್ಹ.