ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Anti Conversion Bill Archives » Dynamic Leader
October 23, 2024
Home Posts tagged Anti Conversion Bill
ರಾಜಕೀಯ

ಡಿ.ಸಿ.ಪ್ರಕಾಶ್

ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ‘ತಮ್ಮ ಕ್ಷೇತ್ರದಲ್ಲಿ ಕ್ರೈಸ್ತ ಧರ್ಮಕ್ಕೆ ಬಲವಂತವಾಗಿ ಮತಾಂತರ ಮಾಡುತ್ತಿದ್ದಾರೆ’ ಎಂದು ವಿಧಾನಮಂಡಲ ಅಧಿವೇಶನದಲ್ಲಿ ಸಂಘಪರಿವಾರದ ತುತ್ತೂರಿಯಂತೆ ಮೊಳಗಿದರು. ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಬಿಜೆಪಿ ಸರ್ಕಾರಕ್ಕೆ ಅನುವುಮಾಡಿಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರು ಮತಾಂತರ ನಿಷೇಧ ಕಾಯ್ದೆಯ ಪಿತಾಮಹ.

ಈಗ “ತಮಗೆ ಪರಿಶಿಷ್ಟ ಜಾತಿ ಎಂಬ ಕಾರಣಕ್ಕೆ ಮಹಾರಾಷ್ಟ್ರದ ನಾಗಪುರದ ಹೆಗಡೇವಾರ್ ಸ್ಮಾರಕ ಕಟ್ಟಡದಲ್ಲಿ ಪ್ರವೇಶ ನಿರಾಕರಿಸಲಾಯಿತು” ಎಂದು ಆರೋಪಿಸಿ ಸಂಚಲನ ಮೂಡಿಸಿದ್ದಾರೆ. ಇದರ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಆರ್‌ಎಸ್‌ಎಸ್ ದಕ್ಷಿಣ ಮಧ್ಯಕ್ಷೇತ್ರಿಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ ಅವರು, “ಇದೊಂದು ನಿರಾಧಾರ ಹಾಗೂ ಹುರುಳಿಲ್ಲದ ಆರೋಪ” ಎಂದು ಹೇಳಿದ್ದಾರೆ.

“ರಾಜ್ಯ ವಿಧಾನಸಭೆ ಚುನಾವಣೆಗೆ 4 ತಿಂಗಳ ಮೊದಲು ಈ ಘಟನೆ ನಡೆದಿತ್ತು ಎನ್ನುವ ಗೂಳಿಹಟ್ಟಿ ಶೇಖರ್ ಅವರು, ಆ ನಂತರ ಸಂಘದ ಅನೇಕ ಪ್ರಮುಖರನ್ನು ಭೇಟಿಯಾದರೂ ಎಲ್ಲಿಯೂ ತಮಗಾದ ಈ ಅವಮಾನದ ಬಗ್ಗೆ ಹೇಳಿರಲಿಲ್ಲ. ಹತ್ತು ತಿಂಗಳ ನಂತರ ಈ ರೀತಿ ಹೇಳಿಕೆ ನೀಡಿರುವುದು ಆಶ್ಚರ್ಯಕರ” ಎಂದು ವಿವರಣೆ ನೀಡಿದ್ದಾರೆ.

ಬಾಬಾಸಾಹೇಬ್ ಅಂಬೇಡ್ಕರ್ ಅವರು, ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಹೋರಾಡಿ ರಾಜಕೀಯ ಮೀಸಲಾತಿ ಕಲ್ಪಿಸಿಕೊಟ್ಟರು. ಅದರ ಪರಿಣಾಮದಿಂದಲೇ ಇವರೆಲ್ಲರು ಶಾಸಕರು, ಸಚಿವರುಗಳು ಆಗಿದ್ದಾರೆ. ಅಂಬೇಡ್ಕರ್ ಅವರು ಶೋಷಿತರನ್ನು ಬಡಿದೆಬ್ಬಿಸಿ ಸ್ವಾಭೀಮಾನದ ಉಣಬಡಿಸಿದರೆ, ಇವರೆಲ್ಲ ನವ ಬ್ರಾಹ್ಮಣರಾಗಿ ಎಲ್ಲರಿಗೂ ಕುಂಕುಮ, ನಾಮ ಹಚ್ಚಿದರು.   

ಮೇಲ್ಜಾತಿಗಳ ದೌರ್ಜನ್ಯಕ್ಕೆ ಹೆದರಿಯೇ ನಮ್ಮ ಪೂರ್ವಜರು ಮತ್ತು ನಮ್ಮ ತಲಮಾರಿನ ಶೋಷಿತರು ತಮಗಿಷ್ಟವಾದ ಕ್ರೈಸ್ತ, ಇಸ್ಲಾಂ ಮತ್ತು ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ಆದರೆ, ಶಾಸಕರಾಗಿದ್ದ ಗೂಳಿಹಟ್ಟಿ ಶೇಖರ್ ಅವರು ಸಂಘಪರಿವಾರದ ಕಾರ್ಯಕರ್ತರೊಂದಿಗೆ ಸೇರಿಕೊಂಡು ಮೂಲನಿವಾಸಿಗಳಾದ ದಲಿತ ಆದಿವಾಸಿ ಬುಡಕಟ್ಟು ಸಮುದಾಯದ ಜನರನ್ನು ಬೆದರಿಸಿ ಹಿಂದೂ ಧರ್ಮದಲ್ಲೇ ಇರಿಸಿಕೊಂಡರು. ಅದರ ಪರಿಣಾಮವನ್ನು ಇಂದು ಅನುಭವಿಸುತ್ತಿದ್ದಾರೆ.

ಗೂಳಿಹಟ್ಟಿ ಶೇಖರ್ ಅವರು ಬಿಜೆಪಿಯಲ್ಲಿದ್ದಾಗ ಹಿಂದುತ್ವಾವನ್ನು ಹಚ್ಚಿಕೊಂಡು ಕ್ರೈಸ್ತರ ವಿರುದ್ಧ ಕುತಂತ್ರ ಮಾಡಿದರು. ಈಗ ಆರ್‌ಎಸ್‌ಎಸ್ ಪರಿವಾರದವರು ಅಪಮಾನಗೊಳಿಸಿ ಹೊರಹಾಕಿದ ಮೇಲೆ ಅವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇಂತಹ ಅಪ್ರಾಮಾಣಿಕ ರಾಜಕಾರಣಿಗಳಿಂದ ಸಮುದಾಯಕ್ಕೆ ಏನೂ ಪ್ರಯೋಜನವಿಲ್ಲ. ಆದ್ದರಿಂದ ರಾಜಕೀಯ ಪಕ್ಷಗಳು ಅವರಿಂದ ದೂರವಿರುವುದೇ ಲೇಸು.

ದೇಶ

ಡಿ.ಸಿ.ಪ್ರಕಾಶ್, ಸಂಪಾದಕರು

ಬಲವಂತದ ಧಾರ್ಮಿಕ ಮತಾಂತರದ ವಿರುದ್ಧದ ಪ್ರಕರಣದಲ್ಲಿ ಕೇಂದ್ರ ಸರ್ಕಾರಿ ವಕೀಲರ ಮೇಲೆ ಗಂಭೀರವಾದ ಪ್ರಶ್ನೆಗಳನ್ನು ಮಾಡಿದ ತಮಿಳುನಾಡು ಸರ್ಕಾರಿ ಹಿರಿಯ ವಕೀಲ ವಿಲ್ಸನ್.

‘ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣವು ರಾಜಕೀಯ ಪ್ರೇರಿತವಾದದ್ದು’ ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದೆ.

ಬಿಜೆಪಿ ವಕೀಲ ಅಶ್ವಿನಿ ಉಪಾಧ್ಯಾಯ ಅವರು ದೇಶಾದ್ಯಂತ ಬಲವಂತದ ಮತಾಂತರದ ವಿರುದ್ಧ ಬಲವಾದ ಕಾನೂನು ಜಾರಿಗೆ ಒತ್ತಾಯಿಸಿ ಸಲ್ಲಿಸಿದ ಅರ್ಜಿಯು ನೆನ್ನೆ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಸಿ.ಡಿ.ರವಿಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತು.

ಆಗ ತಮಿಳುನಾಡು ಸರ್ಕಾರದ ಪರ ಹಾಜರಿದ್ದ ಹಿರಿಯ ವಕೀಲ ವಿಲ್ಸನ್ ಮತ್ತು ವಕೀಲ ಕುಮನನ್ ತಮ್ಮ ವಾದವನ್ನು ಮಂಡಿಸಿದರು.

‘ಅರ್ಜಿದಾರರಾದ ಅಶ್ವಿನಿ ಉಪಾಧ್ಯಾಯ ಅವರು ದೇಶದ್ರೋಹದ ಆರೋಪಕ್ಕೆ ಸಂಬಂಧಿಸಿದಂತೆ ಈ ವಿಷಯವನ್ನು ಸಂಪರ್ಕಿಸುತ್ತಿದ್ದಾರೆ ಮತ್ತು ಅರ್ಜಿದಾರರಾದ ಅಶ್ವಿನಿ ಉಪಾಧ್ಯಾಯ ಅವರು ಬಿಜೆಪಿಯ ಹಿರಿಯ ವಕ್ತಾರರಾಗಿರುವುದರಿಂದ ಈ ಪ್ರಕರಣವು ರಾಜಕೀಯ ಪ್ರೇರಿತವಾದದ್ದು’ ಎಂದು ವಾದವನ್ನು ಮುಂದಿಟ್ಟರು.

‘ಈ ಪ್ರಕರಣದ ಮನವಿಯ ಸಾರದಲ್ಲಿ, ಅಶ್ವಿನಿ ಉಪಾಧ್ಯಾಯ ಹೆಚ್ಚಾಗಿ ತಮಿಳುನಾಡಿನತ್ತ ಗಮನಸೆಳೆದಿದ್ದಾರೆ ಆದ್ದರಿಂದ ನಮ್ಮ ವಾದಗಳನ್ನು ಆಲಿಸದೆಯೇ ನ್ಯಾಯಾಲಯವು ಈ ಪ್ರಕರಣವನ್ನು ಹೇಗೆ ಮುಂದುವರಿಸಾಲು ಸಾಧ್ಯ? ಎಂಬ ಪ್ರಶ್ನೆಯನ್ನೂ ಪೀಠದ ಮುಂದಿಟ್ಟರು. 

ನ್ಯಾಯಮೂರ್ತಿ ಎಂ.ಆರ್.ಶಾ ಮಧ್ಯಪ್ರವೇಶಿಸಿ, ‘ಈ ಪ್ರಕರಣದಲ್ಲಿ ರಾಜಕೀಯವನ್ನು ತರಬಾರದು ಮತ್ತು ಅರ್ಜಿದಾರರು ರಾಜಕೀಯ ಪಕ್ಷಕ್ಕೆ ಸೇರಿದವರಾಗಿರುವುದರಿಂದ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಲು ಸಾಧ್ಯವಿಲ್ಲ’ ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ತಮಿಳುನಾಡು ವಕೀಲ ವಿಲ್ಸನ್, ‘ಅರ್ಜಿದಾರರಾದ ಅಶ್ವಿನಿ ಉಪಾಧ್ಯಾಯ ಅವರು ಸಂಪೂರ್ಣ ರಾಜಕೀಯ ಉದ್ದೇಶದಿಂದ ಈ ಪ್ರಕರಣವನ್ನು ಮುಂದುವರಿಸಿದ್ದಾರೆ. ಆದ್ದರಿಂದಲೇ ತಮಿಳುನಾಡು ಸರಕಾರ ಈ ವಿಷಯವನ್ನು ಕಟ್ಟುನಿಟ್ಟಾಗಿ ವಿರೋಧಿಸುತ್ತಿದೆ’ ಎಂದರು.

‘ತಮಿಳುನಾಡಿನಲ್ಲಿ 2002ರಲ್ಲಿ ಧಾರ್ಮಿಕ ಮತಾಂತರ ತಡೆಗೆ ಕಾನೂನನ್ನು ತಂದರೂ 2006ರಲ್ಲಿ ರಾಜ್ಯ ವಿಧಾನಸಭೆ ಅದನ್ನು ರದ್ದುಗೊಳಿಸಿತ್ತು’ ಎಂದು ವಾದವನ್ನು ಮುಂದುವರಿಸಿದರು.

‘ಈ ವಿಚಾರದಲ್ಲಿ ಅರ್ಜಿದಾರರಾದ ಅಶ್ವಿನಿ ಉಪಾಧ್ಯಾಯ ಅವರು ತಮಿಳುನಾಡು ಕುರಿತು ಹೇಳಿದ್ದೆಲ್ಲವೂ ಹಸಿ ಸುಳ್ಳು. ಕಡ್ಡಾಯ ಧಾರ್ಮಿಕ ಮತಾಂತರದ ಬಗ್ಗೆ ನಿರ್ಧರಿಸಲು ರಾಜ್ಯ ಶಾಸಕಾಂಗಕ್ಕೆ ಸಂಪೂರ್ಣ ಅಧಿಕಾರವಿದೆ. ಕಾನೂನು ರೂಪಿಸಲು ರಾಜ್ಯ ಶಾಸಕಾಂಗಕ್ಕೆ ಸುಪ್ರೀಂ ಕೋರ್ಟ್ ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ’ ಎಂದು ರಾಜ್ಯದ ಹಕ್ಕನ್ನು ಪುನರುಚ್ಚರಿಸಿದರು.

ಮುಂದುವರಿದು ಮಾತನಾಡಿದ ವಿಲ್ಸನ್, ‘ತಮಿಳುನಾಡಿಗೆ ಯಾವ ಯಾವ ಕಾನೂನುಗಳು ಸೂಕ್ತ ಎಂಬುದು ಸರಕಾರಕ್ಕೆ ಸ್ಪಷ್ಟವಾಗಿ ಗೊತ್ತಿದೆ. ಜನರ ಅಗತ್ಯತೆಗಳು ಶಾಸಕಾಂಗದಲ್ಲಿ ತಿಳಿದುಕೊಂಡು ಪ್ರತಿಫಲಿಸುತ್ತದೆ. ಮತ್ತು ಇಂತಹ ಚಟುವಟಿಕೆಗಳ ಮೂಲಕ ರಾಜ್ಯದ ಹಕ್ಕುಗಳನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಸುಪ್ರೀಂ ಕೋರ್ಟ್ ಮನಗಾಣಬೇಕು’ ಎಂದು ಅವರು ಒತ್ತಿ ಹೇಳಿದರು.

ನಂತರ ನ್ಯಾಯಾಧೀಶರು, ‘ಈ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರದ ಅಭಿಪ್ರಾಯ ಮತ್ತು ನಿಲುವು ಏನು?’ ಎಂದು ತಮಿಳುನಾಡು ಸರ್ಕಾರದ ಪರವಾಗಿ ಹಾಜರಿದ್ದ ಹಿರಿಯ ವಕೀಲ ವಿಲ್ಸನ್ ಅವರನ್ನು ಪ್ರಶ್ನಿಸಿದರು.

ಅದಕ್ಕೆ ತಮಿಳುನಾಡು ಸರ್ಕಾರದ ಪರವಾಗಿ ಪ್ರತಿಕ್ರಿಯಿಸಿದ ಹಿರಿಯ ವಕೀಲ ವಿಲ್ಸನ್, ‘ಈ ವಿಚಾರದಲ್ಲಿ ಜನರಿಗೆ ಏನು ಬೇಕು ಎಂಬುದನ್ನು ಜನರೇ ತೀರ್ಮಾನಿಸಲಿ ಎಂಬುದೇ ನಮ್ಮ ನಿಲುವು’ ಎಂದರು. ಈ ಪ್ರಕರಣದಲ್ಲಿ ನ್ಯಾಯಾಲಯವು ತಮ್ಮ ಅಭಿಪ್ರಾಯವನ್ನು ಕೇಳ ಬೇಕು ಎಂದೂ ಅವರು ಒತ್ತಿ ಹೇಳಿದರು.

ಆಗ ಮಧ್ಯ ಪ್ರವೇಶಿಸಿದ ನ್ಯಾಯಮೂರ್ತಿಗಳು, ‘ಈ ವಿಷಯವು ತುಂಬಾ ಗಂಭೀರವಾಗಿದೆ. ಹಾಗಾಗಿ ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರದ ಅಡ್ವೊಕೇಟ್ ಜನರಲ್ ಅವರ ಮಾರ್ಗದರ್ಶನವೂ ಬೇಕು’ ಎಂದು ತಿಳಿಸಿದರು.

ಆ ಸಮಯದಲ್ಲಿ ಕೇಂದ್ರ ಸರ್ಕಾರದ ಮುಖ್ಯ ವಕೀಲ ವೆಂಕಟರಮಣಿ ಅವರು ಸದರಿ ಪ್ರಕರಣಕ್ಕೆ ಹಾಜರಾಗಿ ಸಹಾಯ ಮಾಡಬೇಕೆಂದು ನ್ಯಾಯಮೂರ್ತಿಗಳು ಕೇಳಿಕೊಂಡರು.

ಈ ಸಂದರ್ಭದಲ್ಲಿ ಹಿರಿಯ ವಕೀಲ ವಿಲ್ಸನ್ ಮಾತನಾಡಿ, ‘ಪ್ರಕರಣದ ಶೀರ್ಷಿಕೆಯನ್ನು ಬದಲಾಯಿಸಬೇಕು’ ಎಂಬ ಯೋಚನೆಯನ್ನು ನ್ಯಾಯ ಪೀಠದ ಮುಂದಿಟ್ಟರು. 

ಬಲವಂತದ ಧಾರ್ಮಿಕ ಮತಾಂತರದ ವಿರುದ್ಧದ ಪ್ರಕರಣದಿಂದ ‘ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದಂತೆ’ ಎಂಬುದಾಗಿ ಪ್ರಕರಣದ ಶೀರ್ಷಿಕೆಯನ್ನು ಬದಲಾಯಿಸಲಾಗುವುದು ಎಂದು ನ್ಯಾಯಾಧೀಶರು ಹೇಳಿದರು.

ಮುಂದುವರಿದ ನ್ಯಾಯಮೂರ್ತಿಗಳು, ‘ಒಬ್ಬರು ತಾನು ಯಾವ ಧರ್ಮವನ್ನು ಅನುಸರಿಸಬೇಕೆಂಬುದು ಅವರವರ ಮೂಲಭೂತ ಹಕ್ಕು. ಅದೇ ಸಂದರ್ಭದಲ್ಲಿ ಬಲವಂತದಿಂದ ಒಬ್ಬರನ್ನು ಮತಾಂತರ ಗೊಳಿಸುವುದು ಬೇರೆಯದಾಗಿದೆ. ಹೀಗಿರುವಾಗ ಒಬ್ಬರನ್ನು ಬಲವಂತವಾಗಿ ಮತಾಂತರಗೊಳಿಸುತ್ತಿದ್ದಾರೆ ಎಂದರೆ ಏನು ಮಾಡಬಹುದು? ಹೀಗಾಗದಂತೆ ತಡೆಯಲು ಯಾವ ಕ್ರಮಗಳನ್ನು ಕೈಗೊಳ್ಳಬಹುದು?’ ಎಂದು ನ್ಯಾಯಮೂರ್ತಿಗಳು ಕೇಂದ್ರ ಸರಕಾರದ ಮುಖ್ಯ ವಕೀಲರನ್ನು ಪ್ರಶ್ನಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಅಭಿಯೋಜಕರು, ಪ್ರಕರಣದ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ನಂತರ ಪ್ರತಿಕ್ರಿಯೆ ನೀಡುವುದಾಗಿ ಕೋರ್ಟಿಗೆ ತಿಳಿಸಿದರು.

ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 7ಕ್ಕೆ ಮುಂದೂಡಲಾಯಿತು.