ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Arvind Kejriwal Archives » Page 2 of 2 » Dynamic Leader
December 4, 2024
Home Posts tagged Arvind Kejriwal (Page 2)
ದೇಶ

ನವದೆಹಲಿ: ಆಮ್ ಆದ್ಮಿ ಶಾಸಕರನ್ನು ಖರೀದಿಸಲು ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಈ ಬಗ್ಗೆ ಕೇಜ್ರಿವಾಲ್ ಅವರು ತಮ್ಮ ‘ಎಕ್ಸ್’ ಸೈಟ್ ನಲ್ಲಿ ನೀಡಿರುವ ಹೇಳಿಕೆಯಲ್ಲಿ, “ಕಳೆದ 9 ವರ್ಷಗಳಿಂದ ಆಮ್ ಆದ್ಮಿ ಸರ್ಕಾರವನ್ನು ಉರುಳಿಸಲು ಬಿಜೆಪಿ ತೀವ್ರ ಪ್ರಯತ್ನ ನಡೆಸುತ್ತಿದೆ. ಬಿಜೆಪಿಯ ಪ್ರಯತ್ನ ಯಶಸ್ವಿಯಾಗಲಿಲ್ಲ. ಆಮ್ ಆದ್ಮಿ ಶಾಸಕರನ್ನು ಖರೀದಿಸಲು ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು 7 ಶಾಸಕರಿಗೆ ಬಿಜೆಪಿ 25 ಕೋಟಿ ರೂ.ವರೆಗೆ ಮಾತುಕತೆ ನಡೆಸಿದೆ. 21 ಶಾಸಕರ ಜತೆ ಮಾತುಕತೆ ನಡೆಸಲಾಗಿದೆ.

ದೇವರು ಮತ್ತು ಜನರ ಬೆಂಬಲ ಯಾವಾಗಲೂ ನಮ್ಮ ಮೇಲಿದೆ. ನಮ್ಮ ಎಲ್ಲಾ ಶಾಸಕರು ಒಟ್ಟಿಗೆ ಇದ್ದಾರೆ. ಆಮ್ ಆದ್ಮಿ ಸರ್ಕಾರ ಎಷ್ಟು ಒಳ್ಳೆಯ ಕೆಲಸ ಮಾಡಿದೆ ಎಂಬುದು ದೆಹಲಿಯ ಜನರಿಗೆ ಗೊತ್ತಿದೆ. ದೆಹಲಿಯ ಜನರು ಆಮ್ ಆದ್ಮಿ ಪಕ್ಷವನ್ನು ತುಂಬಾ ಪ್ರೀತಿಸುತ್ತಾರೆ.

ಹಾಗಾಗಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವನ್ನು ಸೋಲಿಸುವ ಬಿಜೆಪಿಯ ಪ್ರಯತ್ನ ಯಶಸ್ವಿಯಾಗುವುದಿಲ್ಲ. ಬಿಜೆಪಿಯವರು ನನ್ನನ್ನು ಬಂಧಿಸಿ ಸುಳ್ಳು ಮೊಕದ್ದಮೆ ಹೂಡಿ ಸರ್ಕಾರವನ್ನು ಉರುಳಿಸಲು ಬಯಸುತ್ತಿದ್ದಾರೆ” ಎಂದು ಕೇಜ್ರಿವಾಲ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದೇಶ ರಾಜಕೀಯ

ನವದೆಹಲಿ: ಮದ್ಯ ನೀತಿ ಹಗರಣ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲಿದ್ದಾರೆ. ಈ ಹಿನ್ನಲೆಯಲ್ಲಿ, ‘ಕೇಜ್ರಿವಾಲ್ ಅವರನ್ನು ಬಂಧಿಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಅವರನ್ನು ಬಂಧಿಸಿದರೆ ದೆಹಲಿ ಸರಕಾರ ಜೈಲಿನಿಂದಲೇ ಕಾರ್ಯನಿರ್ವಹಿಸಲಿದೆ’ ಎಂದು ಆಮ್ ಆದ್ಮಿ ಪಕ್ಷದ ಹಿರಿಯ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷ ಆಡಳಿತ ನಡೆಸುತ್ತಿದೆ. ಕಳೆದ 2021-2022ರ ಹಣಕಾಸು ವರ್ಷದಲ್ಲಿ, ಮದ್ಯ ಮಾರಾಟದ ನೀತಿಯನ್ನು ತಿದ್ದುಪಡಿ ಮಾಡಲಾಯಿತು. ಇದು ಖಾಸಗಿ ಕಂಪನಿಗಳು ಹಾಗೂ ಸಗಟು ವ್ಯಾಪಾರಿಗಳಿಗೆ ಅನುಕೂಲವಾಗಿದ್ದು, ಈ ಮೂಲಕ ಹಲವು ಕೋಟಿ ರೂ.ಗಳ ವಂಚನೆ ನಡೆದಿದೆ ಎಂಬ ದೂರುಗಳು ಕೇಳಿಬಂದವು.

ಇದಕ್ಕೆ ಸಂಬಂಧಿಸಿದಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಸಿಬಿಐ ತನಿಖೆಗೆ ಆದೇಶಿಸಿದರು. ಇದರಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿತು. ಈ ಪ್ರಕರಣದಲ್ಲಿ, ಅಬಕಾರಿ ಇಲಾಖೆ ಉಸ್ತುವಾರಿ ವಹಿಸಿಕೊಂಡಿದ್ದ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಲಾಯಿತು. ಅವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಲಾಗಿದೆ.

ಇತ್ತೀಚೆಗಷ್ಟೇ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತ್ತು. ‘ಈ ವಿಷಯದಲ್ಲಿ ವಂಚನೆ ನಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಹೀಗಾಗಿ ಜಾಮೀನು ನೀಡಲು ಸಾಧ್ಯವಿಲ್ಲ’ ಎಂದು ಆದೇಶ ಹೊರಡಿಸಿತು. ಈ ಹಿನ್ನಲೆಯಲ್ಲಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಹಾಜರಾಗುವಂತೆ ಆಮ್ ಆದ್ಮಿ ಪಕ್ಷದ ಮುಖ್ಯ ಸಂಯೋಜಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶ್ನಾಲಯ ಸಮನ್ಸ್ ಜಾರಿಮಾಡಿದೆ.

ಇದರ ಪ್ರಕಾರ ಅರವಿಂದ್ ಕೇಜ್ರಿವಾಲ್ ಇಂದು ನವದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಗೆ ಹಾಜರಾಗಲಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರನ್ನು ಸಿಬಿಐ ಅಧಿಕಾರಿಗಳು ಈಗಾಗಲೇ ವಿಚಾರಣೆ ನಡೆಸಿದ್ದಾರೆ. ಮೊದಲ ಬಾರಿಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸಲಿದೆ.

ಈ ಹಿನ್ನಲೆಯಲ್ಲಿ, ಆಮ್ ಆದ್ಮಿ ಪಕ್ಷದ ಹಿರಿಯ ನಾಯಕರು ತನಿಖೆಯ ನಂತರ ಅವರನ್ನು ಬಂಧಿಸುವ ಭೀತಿಯನ್ನು ವ್ಯಕ್ತಪಡಿಸಿದ್ದಾರೆ. ಕೇಜ್ರಿವಾಲ್ ಅವರನ್ನು ಬಂಧಿಸಿದರೆ ಸರ್ಕಾರವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಇದರ ಬಗ್ಗೆ ಪಕ್ಷದ ಹಿರಿಯ ನಾಯಕ ಮತ್ತು ರಾಜ್ಯ ಸಚಿವ ಸೌರಭ್ ಭಾರದ್ವಾಜ್ ನಿನ್ನೆ ಹೇಳಿಕೆ ನೀಡಿದ್ದಾರೆ:

‘ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದರೆ, ಸರ್ಕಾರವನ್ನು ಯಾರು ಮುನ್ನಡೆಸುತ್ತಾರೆ ಎಂಬುದನ್ನು ಪಕ್ಷದ ಹಿರಿಯ ನಾಯಕರು ಒಟ್ಟಾಗಿ ನಿರ್ಧರಿಸುತ್ತಾರೆ. ಪಕ್ಷದ ಎಲ್ಲಾ ನಾಯಕರು ಜೈಲಿನಲ್ಲಿರಬೇಕೆಂದು ಬಿಜೆಪಿ ಬಯಸುತ್ತದೆ. ಹಾಗೆ ಎಲ್ಲರನ್ನೂ ಜೈಲಿಗೆ ಹಾಕಿದರೆ ಜೈಲಿನಿಂದಲೇ ಆಡಳಿತ ನಡೆಸುತ್ತೇವೆ.

ಈ ಸರ್ಕಾರ ನೀಡುತ್ತಿರುವ ಉಚಿತ ವಿದ್ಯುತ್, ಕುಡಿಯುವ ನೀರು, ವೈದ್ಯಕೀಯ ಸೌಲಭ್ಯಗಳನ್ನು ನಿಲ್ಲಿಸಬೇಕೆಂದು ಬಿಜೆಪಿ ಬಯಸುತ್ತಿದೆ. ಆದರೆ, ಅದು ಸಾಧ್ಯವಿಲ್ಲ; ಜೈಲಿನಲ್ಲಿದ್ದರೂ ಜನರ ಸೇವೆ ಮಾಡುತ್ತೇವೆ’ ಎಂದು ಅವರು ಹೇಳಿದರು. ಪಕ್ಷದ ಸಂಸದ ರಾಘವ್ ಚಂದಾ ಅವರು ಅರವಿಂದ್ ಕೇಜ್ರಿವಾಲ್ ಅವರನ್ನು ತನಿಖೆಯ ನಂತರ ಬಂಧಿಸುವ ಭೀತಿಯನ್ನು ವ್ಯಕ್ತಪಡಿಸಿದ್ದಾರೆ.

ರಾಜಕೀಯ

ನವದೆಹಲಿ: ವಿರೋಧಪಕ್ಷಗಳ ‘ಇಂಡಿಯಾ’ ಮೈತ್ರಿಯ ಹೆಸರನ್ನು ‘ಭಾರತ’ ಎಂದು ಬದಲಾಯಿಸಿದರೆ ಏನು ಮಾಡುತ್ತೀರಿ? ಎಂದು ಬಿಜೆಪಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಶ್ನೆ ಕೇಳಿದ್ದಾರೆ.

ನವದೆಹಲಿಯಲ್ಲಿ 400 ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಿ ನಂತರ ಮಾತನಾಡಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, “2023ರ ಅಂತ್ಯದ ವೇಳೆಗೆ ದೆಹಲಿಯಲ್ಲಿ 1900 ಎಲೆಕ್ಟ್ರಿಕ್ ಬಸ್‌ಗಳು ಕಾರ್ಯನಿರ್ವಹಿಸಲಿವೆ ಎಂದು ಹೇಳಿದ್ದಾರೆ. ಇಂದು ಬಿಡುಗಡೆಯಾದ ಎಲೆಕ್ಟ್ರಿಕ್ ಬಸ್‌ಗಳಲ್ಲಿ ಅಂಗವಿಕಲರಿಗಾಗಿ ಇಳಿಜಾರು (Ramp) ಗಳನ್ನು ಅಳವಡಿಸಲಾಗಿದೆ. ಅಲ್ಲದೆ ಪ್ರತಿ ಬಸ್ಸಿನಲ್ಲಿ 3 ಸಿಸಿಟಿವಿಗಳನ್ನು ಅಳವಡಿಸಲಾಗಿದೆ.

ನಮ್ಮ ದೇಶದಲ್ಲಿ 140 ಕೋಟಿ ಜನರಿದ್ದಾರೆ. ‘ಇಂಡಿಯಾ’ ಮೈತ್ರಿಯ ಹೆಸರನ್ನು ‘ಭಾರತ’ ಎಂದು ಬದಲಾಯಿಸಿದರೆ ಬಿಜೆಪಿಯವರಿಂದ ಏನು ಮಾಡಲು ಸಾಧ್ಯ? ಇಂಡಿಯಾ ಹೆಸರನ್ನು ‘ಭಾರತ್’ ಎಂದು ಬದಲಾಯಿಸುವ ಮಸೂದೆಯನ್ನು ಕೇಂದ್ರ ಬಿಜೆಪಿ ಸರ್ಕಾರ ಮಂಡಿಸಲು ಹೊರಟಿದೆ ಎಂದು ಹೇಳುತ್ತಿರುವಾಗಲೇ ಮುಖ್ಯಮಂತ್ರಿ ಕೇಜ್ರಿವಾಲ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಮಣಿಪುರ: ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ ವಿಶ್ವಸಂಸ್ಥೆ; ತಿರಸ್ಕರಿಸಿದ ಭಾರತ!

ರಾಜಕೀಯ

ನವದೆಹಲಿ: ದೆಹಲಿಯಲ್ಲಿ ಸೇವೆಗಳ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಜಾರಿಗೊಳಿಸಿದ ಸುಗ್ರೀವಾಜ್ಞೆಯನ್ನು ಕಾಂಗ್ರೆಸ್ ಬೆಂಬಲಿಸುವುದಿಲ್ಲ; ಫೆಡರಲಿಸಂ ಅಂತ್ಯಗೊಳಿಸುವ ಕೇಂದ್ರ ಸರ್ಕಾರದ ಪ್ರಯತ್ನಗಳನ್ನು ನಾವು ನಿರಂತರವಾಗಿ ವಿರೋಧಿಸುತ್ತಿದ್ದೇವೆ. ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸರ್ಕಾರದ ದೆಹಲಿ ಸುಗ್ರೀವಾಜ್ಞೆಯನ್ನು ಕಾಂಗ್ರೆಸ್ ವಿರೋಧಿಸಲಿದೆ ಎಂದು ಪಕ್ಷದ ಹಿರಿಯ ನಾಯಕ ಪವನ್ ಖೇರಾ ಹೇಳಿದ್ದಾರೆ. ಈ ಸುಗ್ರೀವಾಜ್ಞೆಯನ್ನು ವಿರೋಧಿಸಿದರೆ ಮಾತ್ರ ವಿರೋಧ ಪಕ್ಷಗಳ ಸಭೆಯಲ್ಲಿ ಭಾಗವಹಿಸುತ್ತೇವೆ ಎಂದು ಆಮ್ ಆದ್ಮಿ ಪಕ್ಷ ಹೇಳಿರುವ ಬೆನ್ನಲ್ಲೇ ಕಾಂಗ್ರೆಸ್ ಈ ನಿರ್ಧಾರ ಕೈಗೊಂಡಿದೆ.

ದೆಹಲಿಯಲ್ಲಿ ಯಾರಿಗೆ ಅಧಿಕಾರ ಎಂಬ ಬಗ್ಗೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ತಂದಿತ್ತು. ಈ ಸುಗ್ರೀವಾಜ್ಞೆಗೆ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದರ ವಿರುದ್ಧ ಕೇಜ್ರಿವಾಲ್ ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳಿಗೆ ತೆರಳಿ ಬೆಂಬಲ ಸಂಗ್ರಹಿಸಿದರು. ಕಾಂಗ್ರೆಸ್ ಮಾತ್ರ ಮೌನವಾಗಿತ್ತು.

ಇದಾದ ಬಳಿಕ ಈ ವಿಚಾರದಲ್ಲಿ ಕಾಂಗ್ರೆಸ್ ತನ್ನ ನಿಲುವನ್ನು ಕೂಡಲೇ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು. ಪಾಟ್ನಾದಲ್ಲಿ ನಡೆದ ಪ್ರತಿಪಕ್ಷಗಳ ಸಮಾವೇಶದಲ್ಲೂ ಕಾಂಗ್ರೆಸ್ ತನ್ನ ನಿಲುವು ಪ್ರಕಟಿಸದಿರುವುದನ್ನು ವಿರೋಧಿಸಿ, ಕೇಜ್ರಿವಾಲ್ ಪತ್ರಿಕಾಗೋಷ್ಠಿಯನ್ನು ಬಹಿಷ್ಕರಿಸಿದ್ದರು.

ಸುಗ್ರೀವಾಜ್ಞೆಯನ್ನು ಬೆಂಬಲಿಸಲು ಕಾಂಗ್ರೆಸ್ ನಿರಾಕರಿಸಿದರೆ, ಮುಂದಿನ ದಿನಗಳಲ್ಲಿ ಪ್ರತಿಪಕ್ಷಗಳ ಸಭೆಗಳನ್ನು ಬಹಿಷ್ಕರಿಸುವುದಾಗಿ ಕೇಜ್ರಿವಾಲ್ ಘೋಷಿಸಿದ್ದರು. ಈ ಹಿನ್ನಲೆಯಲ್ಲಿ ಈ ತುರ್ತು ಸುಗ್ರೀವಾಜ್ಞೆಗೆ ವಿರುದ್ಧ; ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಲು ಕಾಂಗ್ರೆಸ್ ಮುಂದಾಗಿದೆ.

ಈ ನಿಟ್ಟಿನಲ್ಲಿ ದೆಹಲಿ ಸರ್ಕಾರದ ಆಡಳಿತಕ್ಕೆ ಸಂಬಂಧಿಸಿದ ಸುಗ್ರೀವಾಜ್ಞೆಯನ್ನು ಕಾಂಗ್ರೆಸ್ ವಿರೋಧಿಸಲಿದೆ ಎಂದು ಪಕ್ಷದ ಹಿರಿಯ ನಾಯಕ ಪವನ್ ಖೇರಾ ಹೇಳಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಾತನಾಡಿ, ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಪಕ್ಷಗಳ ಸಭೆಯಲ್ಲಿ ಆಮ್ ಆದ್ಮಿ ಪಕ್ಷ ಭಾಗವಹಿಸಲಿದೆ ಎಂದು ನಾನು ಭಾವಿಸುತ್ತೇನೆ. ಸುಗ್ರೀವಾಜ್ಞೆಗೆ ಸಂಬಂಧಿಸಿದಂತೆ ನಮ್ಮ ನಿಲುವು ಸ್ಪಷ್ಟವಾಗಿದೆ. ಆ ಸುಗ್ರೀವಾಜ್ಞೆಯನ್ನು ನಾವು ಬೆಂಬಲಿಸುವುದಿಲ್ಲ. ಎಂದು ಹೇಳಿದ್ದಾರೆ.

ದೇಶ ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಮೋದಿ ಆಡಳಿತವನ್ನು ಕಿತ್ತೊಗೆಯಲು ನಿರ್ಧರಿಸಿರುವ ಪಕ್ಷಗಳ ನಾಯಕರು ಜೂನ್ 23 ರಂದು ಪಾಟ್ನಾದಲ್ಲಿ ಸಭೆ ಸೇರಲಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪೂರ್ವ ಪ್ರಯತ್ನದಲ್ಲಿ ನಡೆಯಲಿರುವ ಸಭೆಯಾಗಿರುವುದರಿಂದ ಇದು ರಾಷ್ಟ್ರ ರಾಜಕಾರಣದಲ್ಲಿ ಭಾರೀ ನಿರೀಕ್ಷೆಯನ್ನು ಮೂಡಿಸಿದೆ.

ನಿತೀಶ್ ಕುಮಾರ್ ಅವರೇ ಪಾಟ್ನಾ ಸಭೆಯ ಹೀರೋ. ಏಕೆಂದರೆ ಒಂದಾಗಲು ಸಾದ್ಯವೇ ಇಲ್ಲವೆಂದ ಪಕ್ಷಗಳನ್ನೆಲ್ಲ ಒಟ್ಟುಗೂಡಿಸಿ, ಒಂದೇ ವೇದಿಕೆಗೆ ಕರೆತರುವುದರಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿಯನ್ನು ತೀವ್ರವಾಗಿ ವಿರೋಧಿಸುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಹಾಗೂ ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಮುಂತಾದವುಗಳನ್ನು ಹೇಳಬಹುದು. ಕಳೆದ ತಿಂಗಳವರೆಗೆ ಕಾಂಗ್ರೆಸ್ ಜೊತೆ ಕೈಜೋಡಿಸುವ ಅವಕಾಶವೇ ಇಲ್ಲವೆಂದು ಹೇಳಿಕೊಂಡಿದ್ದ ಆ ಪರಿಸ್ಥಿತಿ ಈಗ ಸಂಪೂರ್ಣವಾಗಿ ಬದಲಾಗಿದೆ. ಅದಕ್ಕೆ ನಿತೀಶ್‌ಕುಮಾರ್ ಅವರ ಪ್ರಯತ್ನವೇ ಕಾರಣವಾಗಿದೆ.

ಸತತ ಎರಡು ಅವಧಿಗೆ ಅಧಿಕಾರದ ಗದ್ದುಗೆಯಲ್ಲಿ ಕುಳಿತಿರುವ ಬಿಜೆಪಿಯ್ ವಿರುದ್ಧ, ಬಹುತೇಕ ಪಕ್ಷಗಳು ಒಗ್ಗೂಡಿರುವುದು ರಾಷ್ಟ್ರ ರಾಜಕಾರಣದ ಪ್ರಮುಖ ಘಟನೆಯಾಗಿದೆ. ಅದೇ ಸಮಯದಲ್ಲಿ, ಈ ಕಾರ್ಯಕ್ರಮ ದೊಡ್ಡ ಪರಿಣಾಮ ಬೀರಬೇಕಾದರೆ, ಭಾಗವಹಿಸುವ ಪಕ್ಷಗಳ ಪ್ರಮುಖ ನಾಯಕರು ಮಾತ್ರ ಸಭೆಯಲ್ಲಿ ಭಾಗವಹಿಸಬೇಕೆಂಬುದು ಷರತ್ತಾಗಿದೆ. ಆದರೆ ಬಿಜೆಪಿಗೆ ಪರ್ಯಾಯವಾಗಿರುವ ಕಾಂಗ್ರೆಸ್ ಪಕ್ಷದ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಈ ಸಭೆಯಲ್ಲಿ ಭಾಗವಹಿಸಲು ಆಸಕ್ತಿ ತೋರಿದರು. ಆದರೆ ಸಭೆಯಲ್ಲಿ ಪಕ್ಷಗಳ ನಾಯಕರು ಮಾತ್ರ ಭಾಗವಹಿಸಬೇಂಬ ನಿತೀಶ್ ಕುಮಾರ್ ಅವರ ಷರತ್ತನ್ನು ಒಪ್ಪಿಕೊಳ್ಳುವ ಮೂಲಕ ಖರ್ಗೆಯವರ ಭಾಗವಹಿಸುವಿಕೆಯನ್ನು ಖಚಿತಪಡಿಸಲಾಗಿದೆ.

ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್, ಅಖಿಲೇಶ್ ಯಾದವ್, ಡಿಎಂಕೆ ಅಧ್ಯಕ್ಷ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ಟಿ.ರಾಜಾ, ರಾಷ್ಟ್ರೀಯವಾದಿ ಕಾಂಗ್ರೆಸ್ ಅಧ್ಯಕ್ಷ ಶರದ್ ಪವಾರ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಶಿವಸೇನೆ (ಉದ್ಧವ್) ಅಧ್ಯಕ್ಷ ಉದ್ಧವ್ ಠಾಕ್ರೆ, ಜಾರ್ಖಂಡ್ ಮುಕ್ತಿ ಮೋಚಾ ಅಧ್ಯಕ್ಷರೂ ಆಗಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರನ್ ಸೇರಿದಂತೆ 16 ರಿಂದ 20 ಪಕ್ಷಗಳ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಆಂಧ್ರ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸೇರಿದಂತೆ ಕೆಲವು ನಾಯಕರನ್ನು ಹೊರತುಪಡಿಸಿ ಉಳಿದೆಲ್ಲ ವಿರೋಧ ಪಕ್ಷಗಳ ನಾಯಕರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಕಾಂಗ್ರೆಸ್ ನಾಯಕರಾಗಲೀ ಅಥವಾ ಬೇರೆ ಪಕ್ಷಗಳ ಮುಖಂಡರೇ ಆಗಲಿ ಇಂತಹ ಪ್ರಯತ್ನ ನಡೆಸಿದ್ದರೆ, ಇಷ್ಟು ಪಕ್ಷಗಳ ಒಪ್ಪಿಗೆ ಸಿಗುತ್ತಿತ್ತೇನೋ ಎಂಬ ಅನುಮಾನ ಮೂಡುತ್ತಿದೆ. ಹಿರಿಯ ರಾಜಕಾರಣಿ ನಿತೀಶ್ ಕುಮಾರ್ ಅವರು ಎಲ್ಲಾ ಪಕ್ಷಗಳ ನಾಯಕರೊಂದಿಗೆ ನಿಕಟ ಸ್ನೇಹವನ್ನು ಹೊಂದಿರುವುದರಿಂದ ಇದು ಸಾಧ್ಯವಾಗಿದೆ.

ಸಭೆಯ ದಿನಾಂಕವನ್ನು ಮೊದಲು ಜೂನ್ 12 ಎಂದು ಘೋಷಿಸಲಾಗಿತ್ತು. ಆದರೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸ್ಟಾಲಿನ್ ಮತ್ತು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ಸಭೆಯನ್ನು ಮತ್ತೊಂದು ದಿನಾಂಕಕ್ಕೆ ಮುಂದೂಡುವಂತೆ ಮನವಿ ಮಾಡಿದರು. ಜೂನ್ 23 ರಂದು ಸಭೆ ನಡೆಯಲಿದೆ ಎಂದು ನಿತೀಶ್ ಕುಮಾರ್ ಘೋಷಿಸಿದ್ದಾರೆ. ಸಭೆ ನಡೆಯುವ ಸ್ಥಳದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು. ನಂತರ ಕಾಂಗ್ರೆಸ್ ಆಡಳಿತವಿರುವ ಹಿಮಾಚಲ ಪ್ರದೇಶದ ಶಿಮ್ಲಾವನ್ನು ಆಯ್ಕೆ ಮಾಡಬಹುದು ಎಂಬ ವರದಿಯೂ ಪ್ರಕಟವಾಗಿತು.

ಈ ಹಿನ್ನಲೆಯಲ್ಲಿ, ಪಾಟ್ನಾದಲ್ಲಿ ಸಭೆ ನಡೆಯಲಿದೆ ಎಂದು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಖಚಿತಪಡಿಸಿದ್ದಾರೆ. ವಿರೋಧ ಪಕ್ಷಗಳ ಸಭೆಗೆ ಹಲವು ನಾಯಕರ ಹಾಜರಾತಿಯನ್ನು ಖಚಿತಪಡಿಸಿರುವುದಕ್ಕೆ ನಿತೀಶ್ ಕುಮಾರ್ ಅವರ ಪ್ರಯತ್ನಕ್ಕೆ ಇದು ಮೊದಲ ಯಶಸ್ಸು ಎಂದು ಪರಿಗಣಿಸಲಾಗಿದೆ.

ದೇಶ ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಕಾಂಗ್ರೆಸ್ ಪಕ್ಷವು ರಾಜ್ಯ ಪಕ್ಷಗಳೊಂದಿಗೆ ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಭಾರತೀಯ ಜನತಾ ಪಕ್ಷವನ್ನು ರಾಷ್ಟ್ರ ಮಟ್ಟದಲ್ಲಿ ಸೋಲಿಸಲು ಸಾಧ್ಯ ಎಂದು ಮಮತಾ ಬ್ಯಾನರ್ಜಿ, ಫಾರೂಕ್ ಅಬ್ದುಲ್ಲಾ, ನಿತೀಶ್ ಕುಮಾರ್, ಲಾಲೂ ಪ್ರಸಾದ್ ಯಾದವ್, ಶರದ್ ಪವಾರ್ ಮುಂತಾದ ನಾಯಕರು ಒತ್ತಾಯಿಸಿದ್ದಾರೆ. ಆದರೆ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯ ಪಕ್ಷಗಳೊಂದಿಗೆ ಒಟ್ಟಾಗಿ ಕೆಲಸ ಮಾಡುವಲ್ಲಿ ವಿವಿಧ ಸಮಸ್ಯೆಗಳು ಕಂಡುಬರುತ್ತವೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಿರೋಧ ಪಕ್ಷಗಳನ್ನು ಕಾಂಗ್ರೆಸ್ ನೇತೃತ್ವದಲ್ಲಿ ಒಟ್ಟುಗೂಡಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಇದುವರೆಗೆ ಮಮತಾ ಬ್ಯಾನರ್ಜಿ, ಶರದ್ ಪವಾರ್, ಚಂದ್ರಶೇಖರ್ ರಾವ್, ಅಖಿಲೇಶ್ ಯಾದವ್, ಕೇಜ್ರಿವಾಲ್ ಸೇರಿದಂತೆ ರಾಜ್ಯದ ವಿವಿಧ ಪಕ್ಷದ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಅವರನ್ನೂ ಭೇಟಿಯಾಗಿದ್ದರು. ಇದಾದ ಬಳಿಕ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನ ಅಂತಿಮ ರೂಪ ಪಡೆಯುತ್ತಿದೆ. ಈ ವೇಳೆ ರಾಜಕೀಯ ತಜ್ಞರು ಕುತೂಹಲದಿಂದ ಕಾಯುತ್ತಿದ್ದ ಎಲ್ಲ ವಿರೋಧ ಪಕ್ಷಗಳು ಒಂದೆಡೆ ಸೇರುವ ಕಾರ್ಯಕ್ರಮ ಜೂನ್ 12 ರಂದು ಬಿಹಾರದ ರಾಜಧಾನಿ ಪಾಟ್ನಾದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.

ಈ ಸಭೆಗೆ ಹಾಜರಾಗುವಂತೆ ನಿತೀಶ್ ಕುಮಾರ್ ವಿಪಕ್ಷ ನಾಯಕರಿಗೆ ಆಹ್ವಾನ ನೀಡಿದ್ದಾರೆ. ಈ ಸಭೆಯಲ್ಲಿ ಕಾಂಗ್ರೆಸ್ ಪರವಾಗಿ ಖರ್ಗೆ ಮತ್ತು ರಾಹುಲ್ ಭಾಗವಹಿಸುವುದು ಖಚಿತವಾಗಿದೆ. ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ಕೇಜ್ರಿವಾಲ್ ಮತ್ತು ಶರದ್ ಪವಾರ್ ಕೂಡ ಪಾಲ್ಗೊಳ್ಳುವ ನಿರೀಕ್ಷೆಯಿದೆ.ಈ ಸಭೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕೂಡ ಭಾಗವಹಿಸುವ ನಿರೀಕ್ಷೆಯಿದೆ. ಕಮ್ಯುನಿಸ್ಟರೂ ಭಾಗವಹಿಸಲಿದ್ದಾರೆ.

ಆದರೆ, ನಿತೀಶ್ ಕುಮಾರ್ ಅವರು ವಿರೋಧ ಪಕ್ಷಗಳನ್ನು ಒಟ್ಟುಗೂಡಿಸುವಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಭಾರತ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಚಂದ್ರಶೇಖರ್ ರಾವ್, ತೆಲುಗು ದೇಶಂ ಅಧ್ಯಕ್ಷ ಚಂದ್ರಬಾಬು ನಾಯ್ಡು, ವೈ.ಎಸ್.ಆರ್. ಕಾಂಗ್ರೆಸ್ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮತ್ತು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರನ್ನು ಸಮನ್ವಯಗೊಳಿಸಲು ನಿತೀಶ್ ಕುಮಾರ್ ಅವರಿಗೆ ಇನ್ನೂ ಸಾಧ್ಯವಾಗಿಲ್ಲ.

ಆದರೂ ನಿತೀಶ್ ಕುಮಾರ್ ಅವರು ಒಮ್ಮತದಿಂದ ಎಲ್ಲರನ್ನೂ ಒಟ್ಟುಗೂಡಿಸಿ ಕಾರ್ಯನಿರ್ವಹಿಸಲು ನಿರ್ಧರಿಸಿದ್ದಾರೆ. ಕಳೆದ 2019ರ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಶೇ.38ರಷ್ಟು ಮತಗಳನ್ನು ಪಡೆದಿತ್ತು. ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಮೂಲಕ ಭಾರತೀಯ ಜನತಾ ಪಕ್ಷಕ್ಕೆ ತೀವ್ರ ಬಿಕ್ಕಟ್ಟು ಸೃಷ್ಟಿಸಬಹುದು ಎಂದು ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಅದರಲ್ಲೂ ನಿರ್ದಿಷ್ಟವಾಗಿ ಒಟ್ಟು 543 ಎಂಪಿ ಕ್ಷೇತ್ರದಲ್ಲಿ ಕನಿಷ್ಠ 450 ಕ್ಷೇತ್ರಗಳಲ್ಲಿ ಸಾಮಾನ್ಯ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

450 ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧ ಸಾಮಾನ್ಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಖಂಡಿತವಾಗಿಯೂ ಭಾರತೀಯ ಜನತಾ ಪಕ್ಷಕ್ಕೆ ಬಹುಮತ ಬರದಂತೆ ತಡೆಯಬಹುದು ಎಂದು ನಿತೀಶ್ ಕುಮಾರ್ ರಾಜ್ಯ ಪಕ್ಷದ ನಾಯಕರೊಂದಿಗೆ ಮಾತನಾಡುತ್ತಿದ್ದಾರೆ. ಆದರೆ ರಾಜ್ಯ ಪಕ್ಷದ ನಾಯಕರು ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸುವ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿರುವುದರಿಂದ ಕಾಂಗ್ರೆಸ್ ತನ್ನ ನಿಲುವು ಬದಲಿಸುತ್ತದೆಯೇ? ಎಂಬುದನ್ನು ಕಾದು ನೋಡಬೇಕು.

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

2014ರಲ್ಲಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದಿತ್ತು. ಅಂದಿನಿಂದ ಕೇಂದ್ರ ಸರ್ಕಾರವು ದೆಹಲಿ ಸರ್ಕಾರದ ನಿರ್ಧಾರಗಳಲ್ಲಿ ನಿರಂತರವಾಗಿ ಹಸ್ತಕ್ಷೇಪ ಮಾಡುತ್ತಾ ಬರುತ್ತಿದೆ. ಇದರಿಂದಾಗಿ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರದ ನಡುವೆ ಸಂಘರ್ಷ ಏರ್ಪಟ್ಟಿದೆ. ಮತ್ತು 2019ರಲ್ಲಿ ನ್ಯಾಯಾಧೀಶ ಅಶೋಕ್ ಭೂಷಣ್ ಅವರ ಪೀಠವು “ದೆಹಲಿ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ” ಎಂದು ತೀರ್ಪು ನೀಡಿತ್ತು. ತರುವಾಯ, ಕೇಂದ್ರ ಸರ್ಕಾರದ ಅಧಿಕಾರದ ವಿರುದ್ಧ ಆಮ್ ಆದ್ಮಿ ಪಕ್ಷದ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಲಾಯಿತು.

ಈ ಪ್ರಕರಣದಲ್ಲಿ ಸಾಂವಿಧಾನಿಕ ಪೀಠದ 5 ನ್ಯಾಯಮೂರ್ತಿಗಳು ಇತ್ತೀಚೆಗೆ ಸರ್ವಾನುಮತದ ತೀರ್ಪು ನೀಡಿದರು. ನ್ಯಾಯಮೂರ್ತಿಗಳ ತೀರ್ಪಿನಲ್ಲಿ, ‘‘2019ರಲ್ಲಿ ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರ ಪೀಠ ನೀಡಿದ ತೀರ್ಪಿಗೆ ಒಮ್ಮತವಿಲ್ಲ; ಜನರ ಹಿತವನ್ನು ಈಡೇರಿಸಲಿಕ್ಕಾಗಿಯೇ ಕಾನೂನುಗಳನ್ನು ಅಂಗೀಕರಿಸುವ ಅಧಿಕಾರವನ್ನು ಶಾಸಕಾಂಗ ಸಭೆಗಳಿಗೆ ನೀಡಲಾಗಿದೆ.

ಇದು ಕೇಂದ್ರಾಡಳಿತ ಪ್ರದೇಶವಾಗಿದ್ದರೂ, ದೆಹಲಿ ಸರ್ಕಾರ ಒಕ್ಕೂಟದ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಜಾಪ್ರಭುತ್ವ ಮತ್ತು ಒಕ್ಕೂಟದ ನೀತಿ ಎಂದರೆ ನಮ್ಮ ರಾಜಕೀಯ ಶಾಸನದ ಮೂಲಭೂತ ರಚನೆಯ ಅಂಗ. ಕೆಲವು ನಿರ್ದಿಷ್ಟ ಅಂಶಗಳಲ್ಲಿ ಮಾತ್ರ ಕೇಂದ್ರ ಸರ್ಕಾರವು ಮಧ್ಯ ಪ್ರವೇಶಿಸುವ ಅಧಿಕಾರವನ್ನು ಹೊಂದಿರುತ್ತದೆ. ಅಧಿಕಾರಿಗಳು, ಸಚಿವರ ಆದೇಶವನ್ನು ಕಾರ್ಯಗತಗೊಳಿಸುವುದನ್ನು ತಡೆದರೆ, ಜಂಟಿ ಹೊಣೆಗಾರಿಕೆಗೆ ತೊಂದರೆಯಾಗುತ್ತದೆ.

ವಿಧಾನಸಭೆಯ ಅಧಿಕಾರಕ್ಕೆ ಹೊರಗೆ ಇರುವ ಕೆಲವು ಅಂಶಗಳಲ್ಲಿ ಮಾತ್ರ ಲೆಫ್ಟಿನೆಂಟ್ ಗವರ್ನರ್ ಮಧ್ಯೆ ಪ್ರವೇಶಿಸಬಹುದು. ಜನರ ಆಯ್ಕೆಯನ್ನು ಪ್ರತಿನಿಧಿಸುವ ಅಧಿಕಾರವನ್ನು ಶಾಸನಸಭೆಗೆ ನೀಡಲಾಗಿದೆ. ಪ್ರಜಾಪ್ರಭುತ್ವ ಸರ್ಕಾರದಲ್ಲಿ ಆಡಳಿತದ ಅಧಿಕಾರ, ಜನರಿಂದ ಆಯ್ಕೆಯಾದವರೊಂದಿಗೆ ಮಾತ್ರ ಇರಬೇಕು. ದೆಹಲಿಯಲ್ಲಿ ಲೆಫ್ಟಿನೆಂಟ್ ಗವರ್ನರ್‌ಗಿಂತ ಮುಖ್ಯಮಂತ್ರಿಗೆ ಹೆಚ್ಚಿನ ಅಧಿಕಾರವಿದೆ” ಎಂದು ಹೇಳಿದೆ.

ಆದರೆ, ಸುಪ್ರೀಂ ಕೋರ್ಟ್‌ನ ಈ ಐತಿಹಾಸಿಕವಾದ ತೀರ್ಪನ್ನು ರದ್ದುಗೊಳಿಸುವ ಸಲುವಾಗಿ, ಕೇಂದ್ರ ಸರ್ಕಾರ ದೆಹಲಿಯ ಅಧಿಕಾರವನ್ನು ಲೆಫ್ಟಿನೆಂಟ್ ಗವರ್ನರ್‌ಗೆ ನೀಡುವ ತುರ್ತು ಕಾನೂನನ್ನು ರಾತ್ರೋರಾತ್ರಿ ಜಾರಿಗೆ ತಂದಿದೆ. ಜನರಿಂದ ಆಯ್ಕೆಯಾದ ಶಾಸಕಾಂಗಕ್ಕೆ ಅಧಿಕಾರ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಹಿನ್ನಲೆಯಲ್ಲಿ, ‘ಯಾವುದೇ ಶಾಸಕಾಂಗ ಅಥವಾ ನ್ಯಾಯಾಲಯವು ಆದೇಶವನ್ನು ಬದಲಾಯಿಸಲು ಸಾಧ್ಯವಿಲ್ಲ’ ಎಂಬ ಷರತ್ತಿನೊಂದಿಗೆ ಕೇಂದ್ರ ಸರ್ಕಾರ ತುರ್ತು ಕಾನೂನನ್ನು ಜಾರಿಗೆ ತಂದಿದೆ.

ಮುಂದಿನ 6 ತಿಂಗಳೊಳಗೆ ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದರೆ ಮಾತ್ರ ಈ ಸುಗ್ರೀವಾಜ್ಞೆ ಕಾನೂನಾಗಲಿದೆ. ಈ ಹಿನ್ನಲೆಯಲ್ಲಿ ದೆಹಲಿಯ ಆಮ್ ಆದ್ಮಿ ಸರ್ಕಾರವು ಈ ಕಾನೂನನ್ನು ಜಾರಿಗೆ ತರದಂತೆ ತಡೆಯಲು ಪ್ರಯತ್ನಿಸುತ್ತಿದೆ. ಲೋಕಸಭೆಯಲ್ಲಿ ಬಿಜೆಪಿ ಬಹುಮತ ಹೊಂದಿದ್ದರೆ, ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಬಹುಮತವನ್ನು ಹೊಂದಿವೆ.

ಇದರಿಂದಾಗಿ ವಿರೋಧ ಪಕ್ಷಗಳ ಬೆಂಬಲ ಪಡೆಯಲು ದೆಹಲಿ ಸರ್ಕಾರ ತೀವೃತೆಯನ್ನು ತೋರುತ್ತಿದೆ. ಇದಕ್ಕಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರತಿಪಕ್ಷ ನಾಯಕರನ್ನು ಭೇಟಿ ಮಾಡಿ ಬೆಂಬಲ ಕೋರುತ್ತಿದ್ದಾರೆ. ಅವರು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿ ಬೆಂಬಲ ಕೋರಿದ್ದಾರೆ. ಇದೀಗ ಎನ್‌ಸಿಪಿ ನಾಯಕ ಶರದ್ ಪವಾರ್ ಅವರನ್ನು ಭೇಟಿಮಾಡಿ ಬೆಂಬಲ ಕೋರಿದ್ದಾರೆ. ಬಳಿಕ ಮಾತನಾಡಿದ ಅರವಿಂದ್ ಕೇಜ್ರಿವಾಲ್, “ರಾಜ್ಯಸಭೆಯಲ್ಲಿ ತುರ್ತು ಕಾಯ್ದೆಯನ್ನು ಸೋಲಿಸಿದರೆ, ಅದುವೇ 2024ರ ಲೋಕಸಭೆ ಚುನಾವಣೆಗೆ ಸೆಮಿಫೈನಲ್ ಪಂದ್ಯ ಆಗಲಿದೆ. 2024ರಲ್ಲಿ ಮೋದಿ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂಬ ಸಂದೇಶ ಇದಾಗಿರುತ್ತದೆ” ಎಂದು ಹೇಳಿದರು.

   

ರಾಜಕೀಯ

ಕೋಲ್ಕತ್ತಾ: ದೆಹಲಿ ಸರ್ಕಾರದ ಅಧಿಕಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತಂದಿರುವ ತುರ್ತು ಕಾಯ್ದೆಯನ್ನು ವಿರೋಧಿಸುವ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರಿಗೆ ಬಂಗಾಳ ಮುಖ್ಯಮಂತ್ರಿ ಮಮತಾ ಬೆಂಬಲ ನೀಡಿದ್ದಾರೆ.

ದೆಹಲಿ ಸರ್ಕಾರದ ಅಧಿಕಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, “ದೆಹಲಿ ಸರ್ಕಾರವು ಶಾಸಕಾಂಗ ಮತ್ತು ಕಾರ್ಯಾಂಗದ ಅಧಿಕಾರವನ್ನು ಹೊಂದಿದೆ” ಎಂದು ಸುಪ್ರೀಂ ಕೋರ್ಟ್ ಹೇಳಿತು. ಇದರ ವಿರುದ್ಧ ಕೇಂದ್ರ ಸರ್ಕಾರ ಹೊಸ ತುರ್ತು ಕಾಯ್ದೆಯನ್ನು ಜಾರಿಗೆ ತಂದಿದೆ. ಇದನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದ ಸಂಸದರು ವಿರೋಧಿಸಿದ್ದಾರೆ. ಈ ಹಿನ್ನಲೆಯಲ್ಲಿ ದೆಹಲಿ ಸರ್ಕಾರಕ್ಕೆ ಬೆಂಬಲವನ್ನು ಪಡೆಯಲು ಬಿಜೆಪಿ ಆಡಳಿತವಿಲ್ಲದ ರಾಜ್ಯಗಳ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಕೇಜ್ರಿವಾಲ್ ಮುಂದಾಗಿದ್ದಾರೆ.

ಈ ಹಿನ್ನಲೆಯಲ್ಲಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಯೋಜಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಪಕ್ಷದ ಮುಖಂಡರು ಕೋಲ್ಕತ್ತಾದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾದರು. ಆಗ ಇಬ್ಬರೂ ಕೇಂದ್ರ ಸರ್ಕಾರದ ತುರ್ತು ಕಾಯ್ದೆ ಬಗ್ಗೆ ಚರ್ಚೆ ನಡೆಸಿದರು.

ನಂತರ, ಮಮತಾ ಬ್ಯಾನರ್ಜಿ ಅವರು ಸುದ್ದಿಗಾರರಿಗೆ ಸಂದರ್ಶನ ನೀಡಿದರು:
“ದೆಹಲಿ ಸರ್ಕಾರದ ವಿರುದ್ಧ ಕೇಂದ್ರ ಸರ್ಕಾರದ ತುರ್ತು ಮಸೂದೆಯನ್ನು ತೃಣಮೂಲ ಕಾಂಗ್ರೆಸ್ ವಿರೋಧಿಸಲಿದೆ. ಈ ವಿಚಾರದಲ್ಲಿ ವಿರೋಧ ಪಕ್ಷಗಳು ಒಂದಾಗುವಂತೆ ಒತ್ತಾಯಿಸುತ್ತೇವೆ. ಕೇಂದ್ರ ಸರ್ಕಾರವು ಸಂವಿಧಾನವನ್ನು ಬದಲಾಯಿಸುತ್ತದೆಯೋ ಅಥವಾ ದೇಶದ ಹೆಸರನ್ನು ಬದಲಾಯಿಸುತ್ತದೆಯೋ ಎಂಬ ಭಯ ನಮಗಿದೆ” ಎಂದರು.

ದೇಶ

ದೆಹಲಿ: 10 ದಿನಗಳೊಳಗೆ 164 ಕೋಟಿ ರೂಪಾಯಿ ಪಾವತಿಸದಿದ್ದರೆ ಪಕ್ಷದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಆಮ್ ಆದ್ಮಿ ಪಕ್ಷಕ್ಕೆ ನೋಟಿಸ್ ಜಾರಿಮಾಡಲಾಗಿದೆ. ಇದರಿಂದ ದೆಹಲಿ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

‘ಸರ್ಕಾರಿ ಜಾಹೀರಾತುಗಳ ನೆಪದಲ್ಲಿ ಆಮ್ ಆದ್ಮಿ ಪಕ್ಷ ರಾಜಕೀಯ ಜಾಹೀರಾತುಗಳಿಗೆ ಹಣ ಸುರಿದಿದೆ’ ಎಂದು ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾ ಆರೋಪಿಸಿದ್ದಾರೆ. ಸಕ್ಸೇನಾ ಅವರು ಡಿಸಂಬರ್ 20ರಂದು ಪತ್ರವೊಂದನ್ನು ಬರೆದು ಕೂಡಲೇ 97 ಕೋಟಿ ಪಾವತಿಸುವಂತೆ ಸೂಚಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೇಜ್ರಿವಾಲ್, ‘ರಾಜ್ಯಪಾಲರಿಗೆ ಇಂತಹ ಪತ್ರ ಕಳುಹಿಸುವ ಅಧಿಕಾರವಿಲ್ಲ’ ಎಂದು ಉತ್ತರಿಸಿದ್ದರು.

ಈ ಹಿನ್ನಲೆಯಲ್ಲಿ ವಾರ್ತಾ ಮತ್ತು ಪ್ರಚಾರ ಸಚಿವಾಲಯ 10 ದಿನದೊಳಗೆ 164 ಕೋಟಿ ರೂಪಾಯಿ ಪಾವತಿಸದಿದ್ದರೆ ಪಕ್ಷದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ನೋಟಿಸ್ ಜಾರಿಮಾಡಿದೆ. ಕೇಂದ್ರ ಸರ್ಕಾರದ ಈ ಕ್ರಮವನ್ನು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತೀವ್ರವಾಗಿ ಖಂಡಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜನರಿಂದ ಆಯ್ಕೆಯಾದ ಸಚಿವರು ಮತ್ತು ಸರ್ಕಾರವನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದರು.

ಮದ್ಯ ನೀತಿ ಹಾಗೂ ಭ್ರಷ್ಟಾಚಾರದ ದೂರುಗಳ ಬೆನ್ನಲ್ಲೇ ಮತ್ತೆ 164 ಕೋಟಿ ರೂಪಾಯಿ ಸಮಸ್ಯೆ ಭುಗಿಲೆದ್ದು ದೆಹಲಿ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಕ್ರೈಂ ರಿಪೋರ್ಟ್ಸ್ ದೇಶ

ದೆಹಲಿ: ದೆಹಲಿಯಲ್ಲಿ ಕಳ್ಳನೊಬ್ಬ ಪೊಲೀಸ್ ಕಾನ್‌ಸ್ಟೆಬಲ್‌ ಗೆ 12 ಬಾರಿ ಇರಿದಿರುವ ಘಟನೆ ಸಂಚಲನವನ್ನು ಮೂಡಿಸಿದೆ.

ರಾಜಸ್ಥಾನದ ಸಿಕರ್ ಪ್ರದೇಶದವರಾದ ಶಂಬು ದಯಾಳನಿಗೆ ಒಬ್ಬ ಮಗ ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಈತ ದೆಹಲಿಯ ಪೊಲೀಸ್ ಠಾಣೆಯೊಂದರಲ್ಲಿ ಕಾನ್ ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದರು. ಜನವರಿ 4ರಂದು ಆ ಪ್ರದೇಶದ ಕೊಳೆಗೇರಿಯಲ್ಲಿ ವಾಸವಿದ್ದ ಮಹಿಳೆಯೊಬ್ಬರು ‘ಅನೀಶ್ ಎಂಬುವನು ತನ್ನ ಪತಿಯ ಫೋನನ್ನು ಕಿತ್ತುಕೊಂಡು ನಮಗೆ ಬೆದರಿಕೆ ಹಾಕಿದ್ದಾನೆ’ ಎಂದು ದೂರ ನೀಡಿದ್ದರು.

ದೂರನ್ನು ಸ್ವೀಕರಿಸಿದ ಪೊಲೀಸ್ ಅಧಿಕಾರಿ, ಕಾನ್ ಸ್ಟೇಬಲ್ ಶಂಬು ದಯಾಳ್ ಅವರನ್ನು ದುರುದಾರ ಮಹಿಳೆಯೊಂದಿಗೆ ಕಳುಹಿಸಿ ಅನೀಶನನ್ನು ಬಂಧಿಸುವಂತೆ ಸೂಚಿಸಿದ್ದರು. ಸಂತ್ರಸ್ತೆಯ ಜೊತೆಗಿದ್ದ ಶಂಬು ದಯಾಳ್ ಸ್ಥಳಕ್ಕೆ ಆಗಮಿಸಿದ್ದು, ಮಹಿಳೆ ಅನೀಶನನ್ನು ಗುರುತಿಸಿದ್ದಾಳೆ. ಪೊಲೀಸ್ ಪೇದೆ ಅನೀಶ್‌ನನ್ನು ಹಿಡಿದು ಬೆದರಿಸಿ ಕದ್ದ ಫೋನನ್ನು ವಶಪಡಿಸಿಕೊಂಡಿದ್ದಾರೆ. ಮತ್ತು ಆತನನ್ನು ಬಂಧಿಸಿ ಪಶ್ಚಿಮ ದೆಹಲಿಯ ಮಾಯಾಪುರಿ ಮಾರುಕಟ್ಟೆಯ ಮೂಲಕ ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ಆಗ ಕಳ್ಳ ಅನೀಶ್ ತನ್ನ ಶರ್ಟ್ ನಲ್ಲಿ ಬಚ್ಚಿಟ್ಟಿದ್ದ ಚಾಕುವನ್ನು ತೆಗೆದು ಶಂಬು ದಯಾಳ್ ಗೆ ಇರಿಯಲು ಆರಂಭಿಸಿದ್ದಾನೆ. ಅಲ್ಲಿ ನೆರೆದಿದ್ದ ಜನರ ಮಧ್ಯೆಯೇ ಅನೀಶ್ 12 ಬಾರಿ ಚಾಕುವಿನಿಂದ ಇರಿದಿದ್ದಾನೆ. ಇದರಿಂದ ಕಾನ್‌ಸ್ಟೆಬಲ್‌ಗೆ ಎದೆ ಮತ್ತು ಹೊಟ್ಟೆಯಲ್ಲಿ ಗಂಭೀರ ಗಾಯಗಳಾಗಿವೆ.

ಈ ವೇಳೆ ಸ್ಥಳದಲ್ಲಿದ್ದ ಮತ್ತೊಬ್ಬ ಪೊಲೀಸ್ ಅನೀಶನನ್ನು ಹಿಡಿದು ಬಂಧಿಸಿದ್ದಾರೆ. ನಂತರ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದ ಶಂಬು ದಯಾಳ್ ಚಿಕಿತ್ಸೆ ಫಲಕಾರಿಯಾಗದೆ ಕಳೆದ ಭಾನುವಾರ ಮೃತಪಟ್ಟಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಕಾನ್ ಸ್ಟೇಬಲ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಅವರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.