ಬಿಜೆಪಿ ಬಿ ಟೀಂ ಜೆಡಿಎಸ್ ಎಂದು ನಾವು ಅನೇಕ ಬಾರಿ ಹೇಳಿದ್ದೆವು. ಈಗ ಹೆಚ್.ಡಿ.ಕುಮಾರಸ್ವಾಮಿ ನಮ್ಮ ಮಾತು ಸತ್ಯ ಎಂಬುದನ್ನು ನಿರೂಪಿಸಲು ಹೊರಟಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಯಾವುದೇ ತತ್ವ ಸಿದ್ದಾಂತಗಳಿಲ್ಲ. ಕೋಮುವಾದಿ ಪಕ್ಷ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಹೊರಟಿರುವ ಜೆಡಿಎಸ್‌ಗೆ ಯಾವ ಸಿದ್ದಾಂತವಿದೆ? ಅದೊಂದು ಅವಕಾಶವಾದಿ ಪಕ್ಷ. ಅಧಿಕಾರಕ್ಕಾಗಿ ಯಾರ ಜೊತೆಗಾದರೂ ಸೈ ಎನ್ನುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಜೆಡಿಎಸ್ ಮುಂದಿರುವ ಜಾತ್ಯಾತೀತ ಎಂಬ ಪದ ಕೇವಲ ಸೋಗಲಾಡಿತನವಷ್ಟೆ. 2006ರಲ್ಲಿ ಬಿಜೆಪಿ ಜೊತೆ ಸೇರಿ 20-20 ಸರ್ಕಾರ ಮಾಡಿದಾಗಲೇ ಜಾತ್ಯಾತೀತ ತತ್ವಕ್ಕೆ ಕುಮಾರಸ್ವಾಮಿ ಎಳ್ಳು ನೀರು ಬಿಟ್ಟಿದ್ದರು. ಆಗಲೇ ಜೆಡಿಎಸ್ ಅವನತಿ ಶುರುವಾಗಿದ್ದು. 2004ರಲ್ಲಿ 59 ಸ್ಥಾನ ಗೆದ್ದಿದ್ದ ಜೆಡಿಎಸ್ ಈ ಬಾರಿ 19 ಸ್ಥಾನಕ್ಕೆ ಕುಸಿಯಲು ಈ ನಕಲಿ ಜಾತ್ಯತೀತ ಸಿದ್ದಾಂತವೇ ಕಾರಣ.
ಬಿಜೆಪಿಗೆ ವಿಪಕ್ಷ ನಾಯಕನ ಎರವಲು ಸೇವೆ ನೀಡುತ್ತಿರುವ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಬದಲು ವಿಲೀನ ಮಾಡಿಕೊಳ್ಳಲಿ. ಆಗ ತಾವೇ ಅಧಿಕೃತವಾಗಿ ವಿಪಕ್ಷ ನಾಯಕನಾಗಬಹುದು. ಈ ಮೂಲಕವಾದರೂ ಕುಮಾರಸ್ವಾಮಿ ಅವರ ಸುಳ್ಳು ಜಾತ್ಯತೀತತೆಯ ನಕಲಿ ಶ್ಯಾಮನ ಅವತಾರ ಕೊನೆಯಾಗಲಿ. ಎಂದು ವ್ಯಂಗ್ಯವಾಡಿದ್ದಾರೆ.