“ರಾಷ್ಟ್ರಪತಿಗೆ ನೀಡಿರುವ ಸಾಂವಿಧಾನಿಕ ಹಕ್ಕನ್ನು ನಿರಾಕರಿಸುತ್ತದೆ ಒಬ್ಬ ಮನುಷ್ಯನ ದುರಹಂಕಾರ” ಎಂದು ಕಾಂಗ್ರೆಸ್ ಅಪಾದಿಸಿದೆ. ಈ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾಡಿರುವ ಟ್ವೀಟ್ ನಲ್ಲಿ, “ನಿನ್ನೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಂಚಿಯ ಜಾರ್ಖಂಡ್ ಹೈಕೋರ್ಟ್ ಸಂಕೀರ್ಣದಲ್ಲಿ ದೇಶದ ಅತಿದೊಡ್ಡ ನ್ಯಾಯಾಂಗ ಸಂಕೀರ್ಣವನ್ನು ಉದ್ಘಾಟಿಸಿದರು. ರಾಷ್ಟ್ರಪತಿಗೆ ನೀಡಿರುವ ಸಾಂವಿಧಾನಿಕ ಹಕ್ಕನ್ನು ಒಬ್ಬ ವ್ಯಕ್ತಿಯ ದುರಹಂಕಾರವು ನಿರಾಕರಿಸಿದೆ. ನೂತನ ಸಂಸತ್ ಭವನವನ್ನು ಉದ್ಘಾಟಿಸುವ ಹಕ್ಕು ರಾಷ್ಟ್ರಪತಿಗಳಿಗೆ ಇದೆ.
ಒಬ್ಬ ವ್ಯಕ್ತಿಯ ಸ್ವಯಂ ಪ್ರಚಾರದ ದುರಾಸೆಯಿಂದ ಆದಿವಾಸಿ ಸಮುದಾಯದ ಪ್ರಥಮ ಪ್ರಜೆಯ ಹಕ್ಕುನ್ನು ಕಸಿದುಕೊಳ್ಳಲಾಗಿದೆ. ರಾಷ್ಟ್ರಪತಿಗಳಿಗೆ ಪ್ರಧಾನಿ ಅವಮಾನ ಮಾಡಿದ ಹಿನ್ನೆಲೆಯಲ್ಲಿ 20 ಪಕ್ಷಗಳು ಸಂಸತ್ತಿನ ಉದ್ಘಾಟನೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿವೆ. ಕಾಂಗ್ರೆಸ್, ಎಡ ಪಕ್ಷಗಳು, ಟಿಎಂಸಿ, ಎಸ್‌ಪಿ ಮತ್ತು ಆಮ್ ಆದ್ಮಿ ಪಕ್ಷ ಸೇರಿದಂತೆ 19 ವಿರೋಧ ಪಕ್ಷಗಳು ಜಂಟಿಯಾಗಿ ಬಹಿಷ್ಕಾರವನ್ನು ಘೋಷಿಸಿವೆ. ಪ್ರಜಾಪ್ರಭುತ್ವದ ಆತ್ಮವು ಹೀರಿಕೊಂಡಾಗ ಹೊಸ ಕಟ್ಟಡದಲ್ಲಿ ಯಾವುದೇ ಮೌಲ್ಯವನ್ನು ಕಾಣಲಾಗದು ಎಂದು ಅವರು ಬಣ್ಣಿಸಿದ್ದಾರೆ.
ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ನೂತನ ಸಂಸತ್ ಭವನವನ್ನು ಉದ್ಘಾಟಿಸದಿದ್ದರೆ ತಮ್ಮ ಪಕ್ಷ ಪಾಲ್ಗೊಳ್ಳುವುದಿಲ್ಲ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. 19 ವಿರೋಧ ಪಕ್ಷಗಳ ಜಂಟಿ ಹೇಳಿಕೆಯಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮುವನ್ನು ಸಂಪೂರ್ಣವಾಗಿ ಪಕ್ಕಕ್ಕೆ ಇರಿಸಿ, ನೂತನ ಸಂಸತ್ ಭವನವನ್ನು ತಾವೇ ಉದ್ಘಾಟಿಸವ ಪ್ರಧಾನಿ ಮೋದಿಯ ನಿರ್ಧಾರ, ಗಂಭೀರ ಅವಮಾನ ಮಾತ್ರವಲ್ಲ ನಮ್ಮ ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿ” ಎಂದು ಅವರು ತಮ್ಮ ಟ್ವಿಟ್ಟರ್ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.