ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Dalit PM Archives » Dynamic Leader
January 9, 2025
Home Posts tagged Dalit PM
ರಾಜ್ಯ

ಖಾಸಿಂ ಸಾಬ್ ಎ.

ಸಾವಿರಾರು ವರ್ಷಗಳ ಕಾಲದಿಂದ ವರ್ಣ ಜಾತಿಯ ಕಾರಣಕ್ಕಾಗಿ ಸಾಮಾಜಿಕ ನ್ಯಾಯ ಹಾಗೂ ಅಧಿಕಾರದ ಎಲ್ಲಾ ಅವಕಾಶಗಳಿಂದ ವಂಚಿತರಾಗಿರುವ ದಲಿತರು, ನಾಗರಿಕ ಹಕ್ಕುಗಳು ಮತ್ತು ಹಳ್ಳಿಯಿಂದ ದಿಲ್ಲಿಯವರೆಗಿನ ಎಲ್ಲಾ ರಾಜಕೀಯ ಅವಕಾಶಗಳಿಂದ ಇಂದಿಗೂ ವಂಚಿತರಾಗಿದ್ದಾರೆ.

ಡಾ.ಬಾಬಾಸಾಹೇಬ್ ಅಂಬೇಡ್ಕರರ ಸಂಸದೀಯ ಪ್ರಜಾಪ್ರಭುತ್ವದ ಸಂವಿಧಾನದ ಮೂಲಕವೇ ದಲಿತ, ಶೋಷಿತರ ಸಾಮಾಜಿಕ ನ್ಯಾಯ ಸಾಧ್ಯ. ಈ ಮೂಲಕವೇ ರಾಜಕೀಯ ಪಾಲುದಾರಿಕೆ, ಹಂಚಿಕೆ ಸಾಧ್ಯ ಎಂಬ ಕಲ್ಪನೆಗೆ ಭಾರತಕ್ಕೆ ದಲಿತ ಪ್ರಧಾನಿ ಎಂಬ ಕೂಗು ಹಿಂಬು ನೀಡುತ್ತಿದೆ. ಸ್ವಾತಂತ್ರ್ಯ ಸಂಗ್ರಾಮದ ಫಲವಾಗಿ ಬ್ರಿಟಿಷರಿಂದ ರಾಜಕೀಯ ಸ್ವಾತಂತ್ರ್ಯವನ್ನು ಪಡೆದರೂ, ಅದು ರಾಜಕೀಯ ಹಸ್ತಾಂತರವಾಗಿಯೇ ಉಳಿದಿದೆಯೆ ಹೊರತು ದೇಶದ ದಲಿತರ, ಮಹಿಳೆಯರ, ಧಾರ್ಮಿಕ ಅಲ್ಪಸಂಖ್ಯಾತ ಮುಸ್ಲಿಮರ, ಶೋಷಿತ ಸಮುದಾಯಗಳ ಪಾಲಿಗೆ ಈ ಸ್ವತಂತ್ರ ಇನ್ನು ಸಾಧ್ಯವಾಗಿಲ್ಲ. ಅಸಮಾನತೆಯ ಸಿದ್ಧಾಂತಗಳಲ್ಲಿಯೇ ಇಂದಿಗೂ ಜೀವಿಸುತ್ತಿರುವ ದೇಶದ ಜಾತಿಗ್ರಸ್ಥ, ಧರ್ಮಗ್ರಸ್ಥ ಹಾಗೂ ಪಾಳೆಗಾರಿಕೆಯ ವ್ಯವಸ್ಥೆಯಿಂದ  ಭಾರತೀಯ ರಾಜಕಾರಣ ಸ್ವಾತಂತ್ರ್ಯ ಪಡೆಯಲು ಸಾಧ್ಯವಾಗಲಿಲ್ಲ.

ಭಾರತ ಸ್ವಾತಂತ್ರ್ಯದ ಎಂಟುವರೆ ದಶಕಗಳ ನಂತರದ ರಾಷ್ಟ್ರ ರಾಜಕಾರಣದ ಪ್ರಬಲ ಕೂಗು, ದೇಶಕ್ಕೆ ಒಬ್ಬ ದಲಿತ ಪ್ರಧಾನ ಮಂತ್ರಿ ಏಕೆ ಆಗಬಾರದು? ಅಥವಾ ಆಗಬೇಕು ಎಂಬುದಾಗಿದೆ. ಈ ಧ್ವನಿಯ ಹಿಂದೆಯೇ ಇದುವರೆಗೂ ಭಾರತ ಒಬ್ಬ ದಲಿತ ಅಸ್ಪೃಶ್ಯ ವ್ಯಕ್ತಿ ಅಥವಾ ಪ್ರತಿನಿಧಿ ದೇಶದ ಪ್ರಧಾನಿಯ ಹುದ್ದೆಗೇರಲಿಲ್ಲ ಅಥವಾ ಈ ಸ್ಥಾನಪಡೆಯಲು ಬಿಟ್ಟಿಲ್ಲ ಅಥವಾ ಈ ಹುದ್ದೆ ಅಲಂಕರಿಸಲು ಭಾರತೀಯ ಜಾತಿ ಕೇಂದ್ರೀತ ರಾಜಕಾರಣ ಒಪ್ಪಿಲ್ಲ ಎಂಬ ಕಟು ಸತ್ಯವೂ ಅಡಗಿದೆ. ಈ ನಗ್ನ ಸತ್ಯ ಕಾಂಗ್ರೆಸ್ ಪಕ್ಷವೂ ಸೇರಿ ದೇಶದ ಎಲ್ಲಾ ರಾಜಕೀಯ ಪಕ್ಷಗಳಿಗೂ ಅನ್ವಯವಾದ ರಾಜಕೀಯ ನೀತಿಯೆ ಆಗಿದೆ.

ಭಾರತೀಯ ಸಾಮಾಜವು ಮೂಲತಃ ವರ್ಣ, ವರ್ಗ, ಜಾತಿಯಾದಾರಿತ ಮನಸ್ಥಿತಿಯುಳ್ಳದ್ದೆ ಆಗಿದ್ದು ಇಂತಹ ಸಾಮಾಜಿಕ ಸಂರಚನೆಯಿಂದ ಹುಟ್ಟಿದ ಎಲ್ಲಾ ರಾಷ್ಟೀಯ ಪ್ರಾದೇಶಿಕ ಪಕ್ಷಗಳೂ ಸಹ ದಲಿತ ಪ್ರಧಾನಿಯ ಕಲ್ಪನೆಯನ್ನು ಅಷ್ಟು ಸಹಜವಾಗಿ ಇದುವರೆಗೂ ಸ್ವೀಕರಿಸಲು, ಬೆಂಬಲಿಸಲು ಸಾಧ್ಯವಾಗಲಿಲ್ಲ. ಭಾರತದ ವರ್ತಮಾನದ ಅಸ್ಪೃಶ್ಯರ ರಾಜಕೀಯ ನಿರಾಳವೆಂಬಂತೆ ಇಂದು ದಲಿತ ಪ್ರಧಾನಿ ಎಂಬ ಮಾತು ಮುನ್ನೆಲೆಗೆ ಬಂದಿದೆ. ಅದೂ ವಿಶೇಷವಾಗಿ ಕಾಂಗ್ರೆಸ್ ಪಕ್ಷದ ಒಕ್ಕೂಟವಾದ “ಇಂಡಿಯಾ” ಮೈತ್ರಿಕೂಟದಲ್ಲಿ ಪ್ರಸ್ತಾಪವಾಗಿದೆ.

ಖರ್ಗೆ ಹೆಸರಿನ ಮೂಲಕ ಇತಿಹಾಸದ ರಾಷ್ಟ ರಾಜಕಾರಣದಲ್ಲಿ ಇಂದು ಎರಡನೇಯ ಬಾರಿ ಒಬ್ಬ ದಲಿತ ರಾಜಕಾರಣಿಯ ಹೆಸರು ಪ್ರಧಾನಿ ಹುದ್ದೆಗಾಗಿ ಮುನ್ನಲೆಗೆ ಬಂದಿದೆ. ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಲ್ಲಿ 8 ಬಾರಿ ಚುಣಾವಣೆಯಲ್ಲಿ ಗೆದ್ದಿದ್ದ ಪ್ರಭಾವಿ ರಾಜಕೀಯ ಮುತ್ಸದ್ದಿ ಬಾಬು ಜಗಜೀವನ್ ರಾಮ್ ಅವರ ಹೆಸರು ಕೇಳಿ ಬಂದಿತ್ತು. 1977 ಮತ್ತು 1979ರಲ್ಲಿ ಎರಡು ಬಾರಿಯೂ ಇವರು ಪ್ರಧಾನಿಯಾಗುವ ಅವಕಾಶಗಳಿದ್ದರೂ ಕಾಂಗ್ರೆಸ್ ಪಕ್ಷದಲ್ಲಿದ್ದ ಜಾತಿಗ್ರಸ್ಥ ಮೇಲ್ಜಾತಿ ಮುಖಂಡರೇ ಅಡ್ಡಗಾಲಾದ ಪರಿಣಾಮ ಮೊದಲ ದಲಿತ ಪ್ರಧಾನಿಯಾಗುವ ಅವಕಾಶ ತಪ್ಪಿತ್ತು. ಇದರಿಂದ ಬೇಸತ್ತ ಜಗಜೀವನ್ ರಾಮ್ ಕೊನೆಗೆ ಪಕ್ಷದಿಂದ ಹೊರಬಂದು Congress for Democracy (CFD) ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿ ಆನಂತರ ಇವರ ಪಕ್ಷವನ್ನು ಜನತಾ ಸರ್ಕಾರದೊಂದಿಗೆ ವಿಲೀನಗೊಳಿಸಿ ಕೊನೆಗೆ ಉಪ ಪ್ರಧಾನಿಯಾದರು.

ಜಗತ್ತಿನ ರಾಜಕೀಯ ಇತಿಹಾಸ ಕಂಡಾಗ, ವರ್ಣ ಶ್ರೇಷ್ಠತೆಯ ಗೀಳಿನಲ್ಲಿಯೇ ನೂರಾರು ವರ್ಷಗಳು ಅಧಿಕಾರನಡೆಸಿದ ಜೊತೆಗೆ ನೂರು ವರ್ಷಗಳು ಜಗತ್ತಿನ ದೊಡ್ಡಣ್ಣನಾಗಿ ಆಳಿದ ಅಮೇರಿಕಾದಂತ ದೇಶವೂ ಸಹ ಬರಾಕ್ ಒಬಾಮರಂತ ಕರಿಯರನ್ನು ತನ್ನ ದೇಶದ ಅತ್ಯುನ್ನತ ಸ್ಥಾನವಾದ ಅಧ್ಯಕ್ಷ ಸ್ಥಾನವನ್ನು ನೀಡಿ, ಕಪ್ಪು ಜಜಾಂಗದ ಒಬ್ಬರಿಗೆ ಆಳುವ ಅವಕಾಶವನ್ನು ನೀಡಿತು. ಹಾಗೆಯೇ ಸೂರ್ಯ ಮುಳುಗದ ಸಾಮ್ರಾಜ್ಯವಾಗಿ, ಒಂದು ಕಾಲದಲ್ಲಿ ಭಾರತವನ್ನು ತನ್ನ ವಸಾಹತು ದೇಶವಾಗಿಸಿಕೊಂಡು ತನ್ನ ಆಡಳಿತಾವಧಿಯಲ್ಲಿ ತಮ್ಮ ಹೋಟಲ್ ಮತ್ತು ಕ್ಲಬ್ ಗಳಲ್ಲಿ ಭಾರತೀಯರು ಮತ್ತು ನಾಯಿಗಳಿಗೆ ಪ್ರವೇಶವಿಲ್ಲ ಎಂದು ನಾಮಫಲಕಗಳನ್ನು ಹಾಕಿ ತಮ್ಮ ವರ್ಣ ಶ್ರೇಷ್ಠತೆಯನ್ನು ಪ್ರದರ್ಶಿಸಿದ ಬ್ರಿಟಿಷರ ಬ್ರಿಟನ್ ದೇಶ ಕೂಡ ಇಂದು ಭಾರತೀಯನಾದ ರಿಷಿ ಸುನಕ್ ಅವರನ್ನು ತಮ್ಮ ದೇಶದ ಪ್ರಧಾನಿಯಾಗಿ ಆಯ್ಕೆ ಮಾಡಿಕೊಂಡಿದೆ. ಆದರೆ ಭಾರತದಲ್ಲಿ ಮಾತ್ರ ಸ್ವಾತಂತ್ರ್ಯನಂತರವೂ ಕೂಡ ಬಹುಪಕ್ಷಿಯ ಸಂಸದಿಯ ಪ್ರಜಾಪ್ರಭುತ್ವದಲ್ಲಿ ಇಂದಿಗೂ ದಲಿತ ಪ್ರಧಾನಿಯನ್ನು ನೋಡಲು ಸಾಧ್ಯವಾಗಲಿಲ್ಲ. ಅಲ್ಲದೆ, ಸಮಾಜವಾದ, ಮಾರ್ಕ್ಸ್ ವಾದ, ಅಂಬೇಡ್ಕರ್ ವಾದ, ಪೆರಿಯಾರ್ ವಾದ, ಸಮ ಸಮಾಜವಾದ ಬಯಸುವ ಅನೇಕ ಪಕ್ಷಗಳು ಹಲವಾರು ರಾಜ್ಯಗಳಲ್ಲಿ ಅಧಿಕಾರ ಸ್ಥಾಪಿಸಿ ಆಡಳಿತ ನಡೆಸಲು ಸಾಧ್ಯವಾಗಿದ್ದರೂ ಇಂದಿನವರೆಗೂ ಯಾವುದೇ ಪಕ್ಷವು ತನ್ನದೆ ದೇಶದ ದಲಿತ, ಮುಸ್ಲಿಂ, ಮಹಿಳೆಯರಿಗೆ ದೇಶದ ಪ್ರಧಾನಿಯಾಗಲು ಬಿಟ್ಟಿಲ್ಲ.

ಇತ್ತೀಚೆಗೆ ನಡೆದ ‘ಇಂಡಿಯಾ’ ಮೈತ್ರಿಕೂಟದ ಸಭೆಯಲ್ಲಿ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ನ ಮಮತಾ ಬ್ಯಾನರ್ಜಿ ಹಾಗೂ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ರವರು ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಪ್ರಧಾನಿ ಹುದ್ದೆಗೆ ಸೂಚಿಸುವ ಮೂಲಕ  ದಲಿತ ಪ್ರಧಾನಿ ಎಂಬ ಐತಿಹಾಸಿಕ ಕಲ್ಪನೆಗೆ ಮರು ಹುಟ್ಟು ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ‘ಇಂಡಿಯಾ’ ಮೈತ್ರಿಕೂಟದ ಸಹ ಸದಸ್ಯ ಪಕ್ಷಗಳೇ  ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡುವ ಮಾತುಗಳನ್ನು ಆ ಒಕ್ಕೂಟದ ವೇದಿಕೆಯ ನಾಯಕರಿಂದಲೇ ವ್ಯಕ್ತವಾಗಿವೆ. ದೇಶದ ರಾಜಕೀಯದ ಮಟ್ಟಿಗೆ ಇದು ಪ್ರಮುಖ ಹಾಗೂ ಮಹತ್ವದ ಬೆಳವಣಿಯಾಗಿದೆ. ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆಯವರ ಹೆಸರು ಪ್ರಸ್ತಾಪಗೊಂಡದ್ದು ಕಾಂಗ್ರೆಸೇತರ ಹಾಗೂ ಬಹುಜನ ಸಮಾಜ ಪಾರ್ಟಿ, ಲೋಕ ಜನಶಕ್ತಿ ಪಾರ್ಟಿ, ರೀ ಪಬ್ಲಿಕನ್ ಪಾರ್ಟಿ, ದಲಿತ್ ಪ್ಯಾಂಥರ್ಸ್ ನಂತಹ ದಲಿತ ಮುಂದಾಳತ್ವದ ಪಕ್ಷಗಳಿಂದಲ್ಲ. ದಲಿತೇತರ ಪಕ್ಷ ಹಾಗೂ ನಾಯಕರಿಂದ ಎಂಬುದು ಗಮನರ್ಹ.

ಅನಿರೀಕ್ಷಿತವಾದರೂ, ಇದು ಒಂದು ರೀತಿಯಲ್ಲಿ ಬಿಜೆಪಿ ವಿರೋಧಿ ಒಕ್ಕೂಟಕ್ಕೆ ಅನಿವಾರ್ಯವೂ ಕೂಡ. ‘ಇಂಡಿಯಾ’ ಒಕ್ಕೂಟದಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿದೆ. ಬಿಜೆಪಿಯ ಮಟ್ಟಿಗೆ ಪ್ರಮುಖ ಪ್ರತಿಪಕ್ಷವೂ ಆಗಿದೆ. ದೇಶದಲ್ಲಿ ಈಗಾಗಲೇ ಸುಮಾರು 150 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಕಾಂಗ್ರೆಸ್‌ ನೇರಾ ನೇರ ಪ್ರತಿರೋಧ ಒಡ್ಡುತ್ತಿದೆ. ಯಾವುದೇ ಒಕ್ಕೂಟದಲ್ಲಿ ದೊಡ್ಡ ಪಕ್ಷದವರೇ ಪ್ರಧಾನಿ ಅಭ್ಯರ್ಥಿಯಾಗುವುದು ಸ್ವಾಭಾವಿಕ. ಕಾಂಗ್ರೆಸ್ ಪಕ್ಷದ ಹೈಕಮಾಂಡ್, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಕೂಡ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಒಪ್ಪುವ ಎಲ್ಲಾ ಸಾಧ್ಯತೆ-ಕಾರಣಗಳು ದಟ್ಟವಾಗಿವೆ. ಇನ್ನು ಕಾಂಗ್ರೆಸ್ ಒಳಗಿನ ಮೇಲ್ಜಾತಿ ಬಲಿಷ್ಠ ನಾಯಕರ ಒಪ್ಪಿಗೆ ಅಷ್ಟು ಸುಲಭವಲ್ಲದಿದ್ದರೂ ರಾಹುಲ್ ಗಾಂಧಿಯ ಶೃಜನಶೀಲ, ಪ್ರಗತಿಪರ ನಿಲುವುಗಳೇ ಮುಂದಿನ ಕಾಂಗ್ರೆಸ್ ಪಕ್ಷದ ಭವಿಷ್ಯವಾಗುತ್ತಿರುವುದರಿಂದ ಪಕ್ಷದ ಖರ್ಗೆ ವಿರೋಧಿ ಒಳಗುದಿ ತಾತ್ಕಾಲಿಕವಾಗಿ ತಣ್ಣಗಾಗಬಹುದು. ಖರ್ಗೆ ಅವರಂತಹ ಹಿರಿಯ ರಾಜಕೀಯ ಮುತ್ಸದ್ದಿ, ಪ್ರಖರ ವಾಗ್ಮಿಯನ್ನು ಸಹಜವಾಗಿಯೇ ಲೋಹಿಯ ಸಮಾಜವಾದದ ಸಿದ್ಧಾಂತಗಳನ್ನು ನಂಬಿರುವ ನಿತೀಶ್ ಕುಮಾರ್, ಅಖಿಲೇಶ್ ಯಾದವ್, ಲಾಲು ಪ್ರಸಾದ್ ಯಾದವ್ ರವರು ಒಪ್ಪಿಕೊಳ್ಳಬೇಕಿದೆ.

ದಕ್ಷಿಣದ  ಎಡಪಂತಿಯರ ಅಧಿಕಾರವುಳ್ಳ ಕೇರಳ, ಪೆರಿಯಾರ್ ವಿಚಾರ ಪ್ರೇರಿತ ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಅಧಿಕಾರಸ್ಥ ಪಕ್ಷಗಳು ಈಗಲೇ ‘ಇಂಡಿಯಾ’ ಮೈತ್ರಿಕೂಟದ ಸಹಭಾಗಿ ಪಕ್ಷಗಳಾಗಿವೆ. ಮುಖ್ಯವಾಗಿ ಈ ದಕ್ಷಿಣ ಭಾರತದ ರಾಜ್ಯಗಳು ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿದ್ದು ಸುಮಾರು 200 ಲೋಕಸಭಾ ಕ್ಷೇತ್ರಗಳನ್ನು ಹೊಂದಿವೆ. ದಕ್ಷಿಣ ಭಾರತದ ಕರ್ನಾಟಕದ ಖರ್ಗೆ ಪ್ರಧಾನಿ ಎಂದು ಬಿಂಬಿಸುವ ಮೂಲಕ, ದಲಿತ ಪ್ರಧಾನಿ ಎಂಬ ಪ್ರಚಾರದಿಂದ ರಾಷ್ಟ್ರಾದ್ಯಂತ ದಲಿತ ಮತಗಳ ಕ್ರೋಢೀಕರಣ ಜೊತೆಗೆ ಸೆಕ್ಯುಲರ್ ಅಜಂಡಾದೊಂದಿಗೆ ಮುಸ್ಲಿಮರ ಮತಗಳನ್ನು ಪಡೆಯುವ ಮೂಲಕ ಬಿಜೆಪಿಯನ್ನು ಸೋಲಿಸುವ ರಾಜಕೀಯ ಲೆಕ್ಕಾಚಾರವನ್ನು ‘ಇಂಡಿಯಾ’ ಮೈತ್ರಿಕೂಟವು ಒಳಗೊಂಡಿದೆ. ಅಲ್ಲದೆ, ಇಪ್ಪತ್ತೆಂಟಕ್ಕೂ ಹೆಚ್ಚು ಪಕ್ಷಗಳ ವೇದಿಕೆಯಾದ ಈ ಮೈತ್ರಿಕೂಟವನ್ನು ಸಮಾಧಾನಿಸಿ, ಸಮನ್ವಯಗೊಳಿಸುವುದು ಅಷ್ಟು ಸುಲಭದ ಕಾರ್ಯವಲ್ಲ. ಇದರ ಜೊತೆಗೆ ಸಂಘಪರಿವಾರದ ಹಿಂದುತ್ವದ ಸಾಂಸ್ಕೃತಿಕ ರಾಜಕಾರಣ ಹಾಗೂ ಮುಸ್ಲಿಂ ವಿರೋಧಿ ಅಜಂಡಾವನ್ನೇ ವೋಟ್ ಬ್ಯಾಂಕ್ ಆಗಿಸಿಕೊಂಡು ಎರಡು ಬಾರಿ ಗೆದ್ದು, ಅಧಿಕಾರ ಹಿಡಿದಿರುವ ಬಿಜೆಪಿ ಹಾಗೂ ನರೇಂದ್ರ ಮೋದಿಯವರನ್ನು ಸೋಲಿಸುವಂತಹ ದೊಡ್ಡ ಜವಾಬ್ದಾರಿಯನ್ನು ನಿಭಾಯಿಸುವ ಹಿರಿತನ ಮತ್ತು ಅರ್ಹ ವ್ಯಕ್ತಿತ್ವ ಖರ್ಗೆಯವರಿಗಿದೆ ಎಂಬ ಕಾರಣಕ್ಕಾಗಿಯೆ ಕಾಂಗ್ರೆಸಲ್ಲದ ಹಾಗೂ ದಲಿತೇತರ ನಾಯಕರಾದ ಅರವಿಂದ್ ಕೇಜ್ರಿವಾಲ್ ಮತ್ತು ಮಮತಾ ಬ್ಯಾನರ್ಜಿಯವರು ಪ್ರಧಾನಿ ಅಭ್ಯರ್ಥಿಯಾಗಿ ಖರ್ಗೆಯವರ ಹೆಸರನ್ನು ಸೂಚಿಸಿದ್ದಾರೆ.

‘ಇಂಡಿಯಾ’ ಮೈತ್ರಿಕೂಟ ಪಕ್ಷಗಳ ದಲಿತ ಪ್ರಧಾನಿ ಎಂಬ ರಾಜಕಾರಣದ ಹಿಂದೆ ಏನೇ ರಾಜಕೀಯವಿದ್ದರೂ, ವಿದ್ಯಾರ್ಥಿ ದೇಸೆಯಲ್ಲಿಯೇ ರಾಜಕಾರಣದ ಆಸಕ್ತಿಯುಳ್ಳ ಖರ್ಗೆಯವರು ಕಾನೂನು ಪದವೀಧರರು. 1969ರಲ್ಲಿ ಪಕ್ಷ ಸೇರಿ ಕಲಬುರಗಿ ನಗರ ಕಾಂಗ್ರೆಸ್‌ನ ಅಧ್ಯಕ್ಷರಾದರು. 1972ರಲ್ಲಿ ಗುರುಮಿಠಕಲ್‌ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು. ಅಂದಿನಿಂದ ಸತತ ಎಂಟು ಬಾರಿ ವಿಧಾನಸಭೆಗೆ ಆಯ್ಕೆಯಾದ ಖರ್ಗೆ, 2008ರ ಕ್ಷೇತ್ರ ಪುನರ್‌ವಿಂಗಡಣೆಯ ನಂತರ ಚಿತ್ತಾಪುರಕ್ಕೆ ಬಂದು, ಅಲ್ಲಿಂದ ಸ್ಪರ್ಧಿಸಿ ಸತತ ಒಂಬತ್ತನೇ ಬಾರಿಗೆ ಶಾಸಕರಾದರು.

ಖರ್ಗೆಯವರು ಕರ್ನಾಟಕ ಸರ್ಕಾರದ ಹಲವು ಮುಖ್ಯಮಂತ್ರಿಗಳ ಸಂಪುಟದಲ್ಲಿ ಪ್ರಮುಖ ಖಾತೆಗಳ ಸಚಿವರಾಗಿ ಕೆಲಸ ಮಾಡಿದ್ದಾರೆ. 1976ರಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ, 1978ರ ದೇವರಾಜ ಅರಸುರವರ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ ರಾಜ್ ರಾಜ್ಯ ಸಚಿವ, 1980ರಲ್ಲಿ ಗುಂಡೂರಾವ್ ರವರ ಸಂಪುಟದಲ್ಲಿ ಕಂದಾಯ ಸಚಿವ,  1990ರಲ್ಲಿ ಬಂಗಾರಪ್ಪ ಸಂಪುಟದಲ್ಲಿ ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ,  1992ರ ವೀರಪ್ಪ ಮೊಯ್ಲಿ ಸಂಪುಟದಲ್ಲಿ ಸಹಕಾರ ಮತ್ತು ಮಧ್ಯಮ ಹಾಗೂ ಬೃಹತ್ ಕೈಗಾರಿಕಾ ಸಚಿವ, 1999ರಲ್ಲಿ ಎಸ್.ಎಂ.ಕೃಷ್ಣ ಸಂಪುಟದಲ್ಲಿ ಗೃಹ ಸಚಿವರಾಗಿಯೂ ಮಲ್ಲಿಕಾರ್ಜುನ ಖರ್ಗೆ ಜವಾಬ್ದಾರಿ ನಿರ್ವಹಿಸಿದ್ದಾರೆ. ಅಲ್ಲದೆ, 2004ರ ಧರ್ಮಸಿಂಗ್ ಸಂಪುಟದಲ್ಲಿ ಸಾರಿಗೆ ಮತ್ತು ಜಲಸಂಪನ್ಮೂಲ ಸಚಿವರೂಸಹ ಆಗಿದ್ದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಲವಾರು ಬಾರಿ ಮುಖ್ಯಮಂತ್ರಿ ಗಾದಿಯ ಸನಿಹ ಬಂದಿದ್ದ ಖರ್ಗೆಯವರು ಕೊನೆ ಗಳಿಗೆಯಲ್ಲಿ ಜಾತಿ ರಾಜಕೀಯ ಲೆಕ್ಕಾಚಾರಗಳಿಂದ ವಂಚಿತರಾಗಿದ್ದರು.

1994 ಹಾಗೂ 2008ರಲ್ಲಿ ರಾಜ್ಯ ವಿಧಾನಸಭೆಯ ವಿಪಕ್ಷ ನಾಯಕರಾಗಿದ್ದ ಖರ್ಗೆ 2005ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದರು. ಆ ನಂತರ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿ, ಮನಮೋಹನ್‌ ಸಿಂಗ್ ಸಂಪುಟದಲ್ಲಿ ರೈಲ್ವೆ ಸಚಿವ, ಕಾರ್ಮಿಕ ಮತ್ತು ಉದ್ಯೋಗ ಸಚಿವ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿದ್ದರು. 2014-19ರವರೆಗೆ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿದ್ದರು. ಜೊತೆಗೆ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರೂ ಆಗಿದ್ದರು. ನಂತರ 2019ರ ಲೋಕಸಭಾ ಚುನಾವಣೆಯಲ್ಲಿ ಸೋತರು. ಅದು ಅವರ ಐದು ದಶಕಗಳ ಚುನಾವಣಾ ರಾಜಕಾರಣದಲ್ಲಿನ ಮೊದಲ ಸೋಲು.

ಖರ್ಗೆ ಕೂಡ ದೇವೇಗೌಡರಂತೆಯೇ ಪ್ರಬುದ್ಧ ರಾಜಕಾರಣಿ. ಸಾಧ್ಯವಾದರೆ ಎರಡನೇ ಕನ್ನಡಿಗ ಪ್ರಧಾನಿ. ಶೂದ್ರ ಹಾಗೂ ದಲಿತ ಪ್ರಧಾನಿಗಳನ್ನು ದೇಶಕ್ಕೆ ಕೊಡುಗೆ ಕೊಟ್ಟ ರಾಜ್ಯ ಕರ್ನಾಟಕವಾಗಬಹುದು. ಇವರು ಅಧ್ಯಕ್ಷರಾದಾಗಿನಿಂದ ಕಾಂಗ್ರೆಸ್ ಪಕ್ಷ ಜನರಿಗೆ ಹಾಗೂ ಕಾರ್ಯಕರ್ತರಿಗೆ ಹೆಚ್ಚು ಹತ್ತಿರವಾಗುತ್ತಿದೆ. ಒಂದಷ್ಟು ಪಕ್ಷದ ನಾಯಕರು ಜಾತ್ಯತೀತ ತತ್ವಗಳಪರ ಬಹಿರಂಗವಾಗಿ ಹೇಳಿಕೆಗಳನ್ನು ನೀಡಿ ತಾವು ಕೂಡ ಜನಪದ, ಪ್ರಗತಿಪರ ಎಂದು ಸಾಬೀತು ಪಡಿಸಲು ಪ್ರಯತ್ನಿಸುತ್ತಿದ್ದಾರೆ; ಎನ್ನುವುದು ಕೂಡ ಸತ್ಯ. ಕರ್ನಾಟಕದ ರಾಜಕಾರಣದಲ್ಲಿ ದಲಿತ ಮುಖ್ಯಮಂತ್ರಿಯ ಕೂಗು ಸಹ ದಶಕಗಳ ಹಿಂದಿನ ಒತ್ತಾಯವಾಗಿದೆ. ಇದರ ಮೊದಲ ಸಾಲಿನಲ್ಲಿ ಇದ್ದ ಹೆಸರು ಖರ್ಗೆಯವರದ್ದೇ ಆಗಿದೆ. ದಲಿತರೊಳಗಿನ ಎಡ-ಬಲ ಒಳಮೀಸಲಾತಿಗಳ ನಡುವೆಯೂ ಖರ್ಗೆ ಹೆಸರೇ ರಾಜ್ಯದ ಬಹುತೇಕ ಎಸ್ಸಿ-ಎಸ್ಟಿ ಸಮುದಾಯಗಳ ಆಯ್ಕೆ ಆಗಿತ್ತು.

ಅಂಬೇಡ್ಕರರ ನೈಜ ಅನುಯಾಯಿ, ಸಮಾಜವಾದಿ, ಸಮ ಸಮಾಜದ ಕನಸುಳ್ಳ ಒಬ್ಬ ದಲಿತ ಪ್ರತಿನಿದಿಯಾಗಿ ಒಂದು ವೇಳೆ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿಯಾದರೇ ದೇಶದ ಮೊದಲ ದಲಿತ ಪ್ರಧಾನಮಂತ್ರಿ ಎನ್ನಿಸಿಕೊಳ್ಳಲಿದ್ದಾರೆ. ಅಲ್ಲದೆ, ಇಂದು ದೇಶದಲ್ಲಿ ತಾಂಡವವಾಡುತ್ತಿರುವ ಧರ್ಮದ್ವೇಷದ, ಜಾತಿ ಕೇಂದ್ರೀತ ರಾಜಕಾರಣದ ಬದಲಾಗಿ ಸೋಷಿತರ ಸಾಮಾಜಿಕ ನ್ಯಾಯದ ರಾಜಕಾರಣಕ್ಕೆ ಅವರು ಸಾಕ್ಷಿಯೂ ಆಗಬಹುದು.