ನಾನು ಆಯವ್ಯಯ ಸಿದ್ಧತೆಗೆ ಕುಳಿತಾಗ ಬುದ್ಧ, ಬಸವಣ್ಣ, ಅಂಬೇಡ್ಕರ್, ಗಾಂಧೀಜಿ, ನೆಹರು, ಮಹಾತ್ಮ ಫುಲೆ, ಕುವೆಂಪು, ನಾರಾಯಣ ಗುರುಗಳು ಇಂತಹ ಮಹಾತ್ಮರು ನೆನಪಾಗುತ್ತಾರೆ. ಇವರೆಲ್ಲರ ಕನಸಿನ ನಾಡನ್ನು ಕಟ್ಟುವ ಆಶಯದ ಬಜೆಟ್ ರೂಪಿಸಬೇಕು ಎನ್ನುವುದು ನನ್ನ ಬದ್ಧತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
“ಸಾಮಾಜಿಕ ಸ್ವಾತಂತ್ರ್ಯ ಇಲ್ಲದ ರಾಜಕೀಯ ಸ್ವಾತಂತ್ರ್ಯ ಏನು ಪ್ರಯೋಜನ? ಎಂದು ಬಾಬಾ ಸಾಹೇಬರು ಪ್ರಶ್ನಿಸಿದ್ದರು. ಅದಕ್ಕಾಗಿಯೇ ಅವರು, “ರಾಜಕೀಯ ಪ್ರಭುತ್ವದ ತಳಪಾಯ ಸಾಮಾಜಿಕ ಪ್ರಭುತ್ವದಲ್ಲಿರಬೇಕು” ಎಂದಿದ್ದರು. ಬಸವಣ್ಣ ದಾಸೋಹದ ಮಹತ್ವ ಹೇಳಿದ್ದರು. ಹೀಗೆ ಈ ಎಲ್ಲಾ ಮಹಾನುಭಾವರ ಸರ್ವರನ್ನೂ ಒಳಗೊಳ್ಳುವ ಪ್ರಗತಿಯ ಮಾದರಿಯನ್ನು ನಾನು ಪಾಲಿಸಿದ್ದೇನೆ. ಸರ್ವರ ಅಭಿವೃದ್ಧಿಗೆ ಪೂರಕವಾದ ಬಜೆಟ್ ರೂಪಿಸಿದ್ದೇನೆ.
ನಾವು ಚುನಾವಣೆಯಲ್ಲಿ ಕೊಟ್ಟ ಭರವಸೆಯನ್ನು ಬಜೆಟ್ ನಲ್ಲಿ ಈಡೇರಿಸಿದ್ದೇವೆ. ಬಜೆಟ್ ನಲ್ಲಿ ಅಗತ್ಯ ಅನುದಾನ ಕೊಟ್ಟು ಐದು ಗ್ಯಾರಂಟಿಗಳಲ್ಲಿ ನಾಲ್ಕನ್ನು ಈಗಾಗಲೇ ಜಾರಿ ಮಾಡಿದ್ದೇವೆ. ನಾವು ಹೇಳಿದ್ದನ್ನು ಮಾಡಿದ್ದೇವೆ. ಬಿಜೆಪಿಯವರು “ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ” ಎಂದರು. ಆದರೆ ತಾವು ಹೇಳಿದಂತೆ ನಡೆದುಕೊಳ್ಳಲಿಲ್ಲ. ಹೀಗಾಗಿ ಬಿಜೆಪಿಯ ಟೊಳ್ಳುತನ, ಬೇಜವಾಬ್ದಾರಿತನ, ನಕಲಿತನ ನಾಡಿನ ಜನರೆದುರು ಬೆತ್ತಲಾಗಿದೆ. ಗುಜರಾತ್ ಮಾದರಿ ಎಂದು ಭಾಷಣ ಕೊಚ್ಚುತ್ತಿದ್ದವರು ಕರ್ನಾಟಕದ ಗ್ಯಾರಂಟಿ ಮಾದರಿಗೆ, ಕರ್ನಾಟಕದ ಅಭಿವೃದ್ಧಿ ಮಾದರಿಗೆ ಹೆದರಿದ್ದಾರೆ.
ದುಡಿಯುವ ಜನರ ಜೇಬಿನಲ್ಲಿ ಹಣ ಇರಬೇಕು, ಶ್ರಮಿಕ ಜನರ ಜೇಬಿಗೆ ಹಣ ಹಾಕಬೇಕು ಎನ್ನುವುದು ಕರ್ನಾಟಕ ಮಾದರಿ. ಜನರ ಜೇಬಿಗೆ ಕೈ ಹಾಕಿ ಕಿತ್ತುಕೊಳ್ಳಬೇಕು ಎನ್ನುವುದು ಗುಜರಾತ್ ಮಾದರಿ. ಗುಜರಾತ್ ಮಾದರಿಯಲ್ಲಿ ಪೆನ್ನು, ಪೆನ್ಸಿಲ್, ಬಿಸ್ಕೆಟ್, ಬೆಣ್ಣೆ, ಮಂಡಕ್ಕಿ ಮೇಲೂ ಟ್ಯಾಕ್ಸ್ ಹಾಕಿದರು. ಕರ್ನಾಟಕ ಮಾದರಿಯಲ್ಲಿ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 6 ರಿಂದ 8 ಸಾವಿರ ರೂಪಾಯಿ ಉಳಿತಾಯ, ಉಪಯೋಗ ಆಗುವಂತಹ ಕಾರ್ಯಕ್ರಮಗಳನ್ನು ನೀಡಿದ್ದೇವೆ. ಪ್ರತೀ ದಿನ ನಾಡಿನ ಜನತೆ ನಮ್ಮ ಗ್ಯಾರಂಟಿಗಳ ಪ್ರಯೋಜನ ಪಡೆಯುತ್ತಿದ್ದಾರೆ. ಪ್ರತೀ ದಿನ ಪ್ರತೀ ಕುಟುಂಬಕ್ಕೆ ಸರ್ಕಾರದ ಸ್ಪಂದನೆ ಸಿಗುತ್ತಿದೆ. ಇದು ಬಿಜೆಪಿಯ ಹೊಟ್ಟೆಕಿಚ್ಚಿಗೆ ಕಾರಣವಾಗಿದೆ. ಅವರ ಹೊಟ್ಟೆಕಿಚ್ಚು ಅವರನ್ನೇ ಸುಡುತ್ತದೆ.
ಬಿಜೆಪಿಯವರು ವಿಶ್ವಗುರುವಿನ ಬಗ್ಗೆ ಭರ್ಜರಿ ಭಾಷಣ ಮಾಡುತ್ತಾರೆ. ಆ ವಿಶ್ವಗುರುವಿಗೆ ತಮ್ಮ ಪಕ್ಷದಲ್ಲಿ ಒಬ್ಬ ವಿರೋಧ ಪಕ್ಷದ ನಾಯಕನನ್ನು ಆರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬರೀ ಭಾಷಣದಿಂದ ನಾಡಿನ, ದೇಶದ ಜನರ ಸಂಕಷ್ಟ ಪರಿಹಾರ ಆಗುವುದಿಲ್ಲ ಎನ್ನುವ ಪಾಠವನ್ನು ವಿಶ್ವಗುರುವಿಗೆ ಜನ ಕಲಿಸಿದ್ದಾರೆ.
ಆರ್ಥಿಕತೆಯ ಚಲನಶೀಲತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಐದು ಗ್ಯಾರಂಟಿ ಯೋಜನೆಗಳ ಮೂಲಕ ಸಾರ್ವತ್ರಿಕ ಮೂಲ ಆದಾಯದ ಪರಿಕಲ್ಪನೆಯನ್ನು ಪರಿಚಯಿಸುತ್ತಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ. ಇದು “ಕರ್ನಾಟಕ ಮಾದರಿ ಅಭಿವೃದ್ಧಿ”. ಜನರು ಬೆಲೆ ಏರಿಕೆ, ಇಂಧನ ಬೆಲೆ ಏರಿಕೆ, ನಿರುದ್ಯೋಗ ಮೊದಲಾದ ಸಮಸ್ಯೆಗಳಿಂದ ತತ್ತರಿಸಿದ್ದು, ಅವರ ಬದುಕು ಸುಧಾರಿಸುವ ಉದ್ದೇಶದಿಂದ ಈ ಯೋಜನೆಗಳನ್ನು ಜಾರಿಗೆ ತರಲಾಗಿದೆ.
ಗ್ಯಾರಂಟಿ ಕಾರ್ಯಕ್ರಮಗಳ ಮೂಲಕ ದೇಶದಲ್ಲಿಯೇ ದೊಡ್ಡ ಮೊತ್ತ ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕ, ವಿರೋಧ ಪಕ್ಷದವರು ಗ್ಯಾರಂಟಿ ಯೋಜನೆಗಳ ಜಾರಿ ಸಾಧ್ಯವಿಲ್ಲ ಎಂದರು. ಆದರೆ ಈಗಾಗಲೇ 3 ಯೋಜನೆಗಳು ಜಾರಿಯಾಗಿವೆ. ಗೃಹ ಲಕ್ಷ್ಮಿ ಯೋಜನೆಗೆ ನೋಂದಣಿ ಪ್ರಾರಂಭವಾಗಿದೆ. ಯುವನಿಧಿ ಯೋಜನೆ ಬಹುತೇಕ ಡಿಸೆಂಬರ್ ತಿಂಗಳಿನಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ.
ಎಲ್ಲ ಗ್ಯಾರೆಂಟಿ ಯೋಜನೆಗಳಿಗೆ ಆಯವ್ಯಯದಲ್ಲಿ ಅನುದಾನ ಹಂಚಿಕೆ ಮಾಡಲಾಗಿದೆ. ಅನುದಾನ ಕ್ರೋಢೀಕರಣವನ್ನೂ ಆಯವ್ಯಯದಲ್ಲಿ ವಿವರಿಸಲಾಗಿದೆ. ಈ ಕಾರ್ಯಕ್ರಮಗಳಿಗೆ ವಾರ್ಷಿಕ ಒಟ್ಟು 52,068 ಕೋಟಿ ರೂ.ಗಳು ಅಗತ್ಯವಿದೆ. 1.30 ಕೋಟಿ ಕುಟುಂಬಗಳಿಗೆ ಈ ಗ್ಯಾರಂಟಿ ಯೋಜನೆಗಳ ಸೌಲಭ್ಯ ದೊರೆಯಲಿದೆ. ಪ್ರತಿ ಕುಟುಂಬಕ್ಕೆ ತಿಂಗಳಿಗೆ 4-5 ಸಾವಿರ ರೂ. ಅಂದರೆ ವಾರ್ಷಿಕ 48,000- 60,000 ರೂ. ದೊರಕುತ್ತದೆ. ದೇಶದ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ಮೊತ್ತವನ್ನು ಜಾತಿ ಧರ್ಮ ನೋಡದೇ ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕ. ಈ ವರ್ಷ 35,410 ಕೋಟಿಗಳನ್ನು 5 ಗ್ಯಾರೆಂಟಿಗಳಿಗೆ ಮೀಸಲಿರಿಸಿದ್ದೇವೆ.
ಡಾ.ಬಿ.ಆರ್.ಅಂಬೇಡ್ಕರ್ ಹೇಳಿದಂತೆ ಸಾಮಾಜಿಕ ಪ್ರಭುತ್ವಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂಬ ಮಾತಿನಲ್ಲಿ ನಮಗೆ ನಂಬಿಕೆ ಇದೆ. ಹಾಗೂ ಇದಕ್ಕೆ ಬದ್ಧರಾಗಿದ್ದೇವೆ. ಬಜೆಟ್ ಸಿದ್ದಮಾಡುವಾಗ ನಮ್ಮ ಕಣ್ಣಿಗೆ ಅಂಬೇಡ್ಕರ್, ಗಾಂಧಿ, ಬುದ್ಧ, ಕುವೆಂಪು, ನಾರಾಯಣ ಗುರು ಅವರ ಆಶಯಗಳು ಕಾಣುತ್ತವೆ. ಕಟ್ಟಕಡೆಯ ವ್ಯಕ್ತಿ ಸಂತುಷ್ಟವಾಗಬೇಕು. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಭಾಗೀದಾರರಾಗಬೇಕು. ಅದರ ಫಲವನ್ನು ಎಲ್ಲರೂ ಸಮಾನರಾಗಿ ಹಂಚಿಕೊಳ್ಳಬೇಕು. ಇದನ್ನೇ ಕುವೆಂಪು ಸಮಬಾಳು, ಸಮಪಾಲು ಎಂದಿದ್ದು.
ನಾವು ಹಿಂದೆಯೂ ನುಡಿದಂತೆ ನಡೆದಿದ್ದೇವೆ. 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಈ ಹಿಂದೆ ನಾನು ಮುಖ್ಯಮಂತ್ರಿ ಆಗಿದ್ದಾಗ 1 ಲಕ್ಷದ 16 ಸಾವಿರ ಕೋಟಿ ರೂ.ಗಳ ಸಾಲವಾಗಿದೆ. 2018 ಮಾರ್ಚ್ ಅಂತ್ಯಕ್ಕೆ 2,45,000 ಕೋಟಿ ಸಾಲ ಇತ್ತು. 2023 ಕ್ಕೆ ಇದು 5,20,೦00 ಕೋಟಿ ರೂ.ಗೆ ಹೆಚ್ಚಾಗಿದೆ.
ನಾವು ಬಡವರ ಪರವಾಗಿದ್ದೇವೆ. ಬೆಲೆ ಏರಿಕೆ ಹಾಗೂ ನಿರುದ್ಯೋಗದಿಂದ ತತ್ತರಿಸಿರುವ ಜನರ ಜೇಬಿಗೆ ಹಣ ತುಂಬುವ ಕೆಲಸ ಮಾಡಿದ್ದೇವೆ. ಸಾರ್ವತ್ರಿಕ ಮೂಲ ಆದಾಯವನ್ನು ಎಲ್ಲಾ ಅಭಿವೃದ್ಧಿಯಾಗಿರುವ ರಾಜ್ಯಗಳು ಮಾಡುತ್ತಿವೆ. ಇದು ಕರ್ನಾಟಕ ಮಾದರಿ. ಉದ್ಯೋಗ ಸೃಷ್ಟಿಯಾಗಲು ಆರ್ಥಿಕ ಚಟುವಟಿಕೆಗಳು ಅಗತ್ಯ. ಇಲ್ಲದಿದ್ದರೆ ಹೂಡಿಕೆಗಳು ಆಗುವುದಿಲ್ಲ.
ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. 32 ಸಾವಿರ ಕೋಟಿ ರೂ.ಗಳು ಒಂದು ವರ್ಷಕ್ಕೆ ಖರ್ಚಾಗುತ್ತದೆ. ಒಂದೇ ಯೋಜನೆಗೆ ಇಷ್ಟು ದೊಡ್ಡ ಮೊತ್ತವನ್ನು ವೆಚ್ಚ ಮಾಡುತ್ತಿರುವ ಮೊಲದ ರಾಜ್ಯ ಕರ್ನಾಟಕ. ಇದಕ್ಕಾಗಿ 17,500 ಕೋಟಿ ಈ ವರ್ಷ ಮೀಸಟ್ಟಿದ್ದೇವೆ. ಅನ್ನಭಾಗ್ಯಕ್ಕೆ 10,125 ಕೋಟಿ ರೂ, ಗೃಹಜ್ಯೋತಿಗೆ 13 ಸಾವಿರ ಕೋಟಿ, ಶಕ್ತಿಗೆ 2,800 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ.
2022-23ರ ಬಜೆಟ್ ಗಾತ್ರ 2,65,720 ಕೋಟಿ ಇತ್ತು, ನಮ್ಮ ಸರ್ಕಾರದ ಬಜೆಟ್ 3,27,747 ಕೋಟಿ ರೂ.ಇದೆ. ಹಿಂದಿಗಿಂತ 62,027 ಸಾವಿರ ಕೋಟಿ ಜಾಸ್ತಿಯಿದೆ. ಬೆಳವಣಿಗೆಯ ಪ್ರಮಾಣ ಶೇ.22 ಇದೆ. ರೈತರಿಗೆ 3 ಲಕ್ಷದವರೆಗೆ ಬಡ್ಡಿರಹಿತ ಸಾಲ ಮುಂಚೆ ನೀಡುತ್ತಿದ್ದೆವು. ಈಗ 5 ಲಕ್ಷದವರೆಗೆ ಮೊತ್ತವನ್ನು ಹೆಚ್ಚಿಸಲಾಗಿದೆ. 10 ಲಕ್ಷದವರೆಗೆ 3% ಬಡ್ಡಿ ಇದ್ದಿದ್ದು , ಈಗ ಅದನ್ನು 15 ಲಕ್ಷಕ್ಕೆ ಏರಿಸಲಾಗಿದೆ. ಶಾಲಾ ವಿದ್ಯಾರ್ಥಿಗಳಿಗೆ 9, 10ನೇ ತರಗತಿ ವಿದ್ಯಾರ್ಥಿಗಳಿಗೂ ಸೇರಿ ವಾರದಲ್ಲಿ 2 ದಿನ ಮೊಟ್ಟೆ ನೀಡಲಾಗುತ್ತಿದೆ.
2013-18ರ ವರೆಗೆ ನಾವು 5 ವರ್ಷದಲ್ಲಿ 14,54,663 ಮನೆಗಳನ್ನು ಕಟ್ಟಿಸಿದ್ದೆವು. ನಾವು ಹಿಂದಿನ ಸರ್ಕಾರಕ್ಕಿಂತ 6 ಲಕ್ಷ ಮನೆಗಳನ್ನು ಹೆಚ್ಚಾಗಿ ನಿರ್ಮಿಸಿದ್ದೆವು. ನಮ್ಮ ಸರ್ಕಾರದ ಅವಧಿಯಲ್ಲಿ 14,169 ಹೆದ್ದಾರಿ ಅಭಿವೃದ್ಧಿಪಡಿಸಿದ್ದೆವು. ಬಿಜೆಪಿ ಸರ್ಕಾರ 8,037 ಕಿ.ಮಿ ಮಾತ್ರ ನಿರ್ಮಿಸಿದ್ದಾರೆ. ಎಸ್ ಸಿಎಸ್ ಪಿ / ಟಿಎಸ್ ಪಿ ಕಾನೂನು ಬಂದ ನಂತರ, ನಮ್ಮ ಸರ್ಕಾರ 5 ವರ್ಷದಲ್ಲಿ 88,530 ಕೋಟಿ ಖರ್ಚು ಮಾಡಿತ್ತು. ನಮ್ಮದು ಬಡವರ ಪರವಾದ ಸರ್ಕಾರ.
ನಮ್ಮ ಬಜೆಟ್ ಗಾತ್ರ 2018-19ರಲ್ಲಿ 2,02,297 ಕೊಟಿ ಇತ್ತು. ಆಗ 21,691 ಕೋಟಿ ರೂ. ಎಸ್.ಸಿ/ಎಸ್.ಟಿ ಸಮುದಾಯದ ಯೋಜನೆಗಳಿಗೆ ಮೀಸಲಿಟ್ಟಿದ್ದೆವು. ಈ ಬಾರಿ ಸಹ ಶಿಕ್ಷಣ, ಸಮಾಜ ಕಲ್ಯಾಣ, ಕೃಷಿ, ವಿದ್ಯುತ್, ಬೆಂಗಳೂರು ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಸಾಮಾಜಿಕ, ಆರ್ಥಿಕ ವಲಯಕ್ಕೆ ಕಡಿಮೆ ಮಾಡಿಲ್ಲ. ನೀರಾವರಿ, ವಸತಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ನಮ್ಮ ಸರ್ಕಾರ ಎಲ್ಲರನ್ನು ಒಳಗೊಂಡ ಅಭಿವೃದ್ದಿಯ ಧ್ಯೇಯವನ್ನು ನಂಬಿದೆ.
2023-24ನೇ ಸಾಲಿನಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಈ ಆರ್ಥಿಕ ವರ್ಷಕ್ಕೆ ಸರ್ಕಾರದ ಮುಂಗಡ ಪತ್ರವನ್ನು ಮಂಡಿಸಿದ್ದು, ಹೊಸ ಸರ್ಕಾರ ಬಂದ ಮೇಲೆ ಜನರ ಆಶೋತ್ತರಗಳಿಗೆ ಸ್ಪಂದಿಸಲು, ಸರ್ಕಾರದ ನೀತಿ ನಿಲುವುಗಳು, ಪ್ರಣಾಳಿಕೆಯ ಭರವಸೆಗಳನ್ನು ಒಳಗೊಂಡಿರುವ ಆಯವ್ಯಯ ಮಂಡಿಸುವುದು ನಮ್ಮ ಕರ್ತವ್ಯ. ಬಜೆಟ್ ಮೇಲೆ 62 ಜನ ಆಡಳಿತ ಹಾಗೂ ವಿರೋಧ ಪಕ್ಷದವರು ಸೇರಿ ಮಾತನಾಡಿದ್ದಾರೆ. ಸುಮಾರು 12 ಗಂಟೆ 52 ನಿಮಿಷಗಳ ಕಾಲ ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ಟೀಕೆ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಅದೆರಡನ್ನೂ ಸ್ವಾಗತಿಸುತ್ತೇನೆ. ಚರ್ಚೆಯಲ್ಲಿ ಭಾಗವಹಿಸಿ ಅನಿಸಿಕೆಗಳನ್ನು ವ್ಯಕ್ತಮಾಡಿದ ವಿರೋಧ ಪಕ್ಷದವರಿಗೆ ಧನ್ಯವಾದಗಳು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಣಿ ಟ್ವೀಟ್ ಮಾಡಿದ್ದಾರೆ.