ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
INDIA Alliance Archives » Page 4 of 6 » Dynamic Leader
December 5, 2024
Home Posts tagged INDIA Alliance (Page 4)
ರಾಜಕೀಯ

ಡಿ.ಸಿ.ಪ್ರಕಾಶ್

ಬಿಜೆಪಿ ಅಧಿಕಾರಕ್ಕೆ ಬಂದು 10 ವರ್ಷ ಪೂರೈಸಲಿರುವ ಹಿನ್ನೆಲೆಯಲ್ಲಿ ಸದ್ಯದಲ್ಲೇ ಸಂಸತ್ ಚುನಾವಣೆ ನಡೆಯಲಿದೆ. ಕಳೆದ 10 ವರ್ಷಗಳಲ್ಲಿ ಬಿಜೆಪಿ ಜನರಿಗೆ ಯಾವುದೇ ಒಳ್ಳೆಯ ಕಾರ್ಯಕ್ರಮಗಳನ್ನು ತಂದಿಲ್ಲವಾದ್ದರಿಂದ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ರಾಮಮಂದಿರವನ್ನು ಕೈಗೆತ್ತುಕೊಂಡಿತು.

ಆರಂಭದಲ್ಲಿ ಉತ್ತರದ ರಾಜ್ಯಗಳಲ್ಲಿ ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಈ ಬಾರಿಯ ಚುನಾವಣೆಯಲ್ಲಿ 400 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಮೋದಿ ಸೇರಿದಂತೆ ಬಿಜೆಪಿ ನಾಯಕರು ಅಬ್ಬರಿಸಿದ್ದರು. ಆದರೆ ಇತ್ತೀಚಿನ ಚುನಾವಣಾ ಬಾಂಡ್ ಹಗರಣ ಬಿಜೆಪಿಯ ನಿಜ ಮುಖವನ್ನು ಬಯಲು ಮಾಡಿದೆ.

ಅಲ್ಲದೆ ಈ ಬಾರಿಯ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಒಗ್ಗೂಡದಂತೆ ಬಿಜೆಪಿ ವಿಪಕ್ಷ ನಾಯಕರನ್ನು ಜಾರಿ ಇಲಾಖೆ ಹಾಗೂ ಐಟಿ ಇಲಾಖೆಯ ಮೂಲಕ ಬಂಧಿಸಿದೆ. ಆದರೂ ವಿರೋಧ ಪಕ್ಷಗಳು “ಇಂಡಿಯಾ” ಮೈತ್ರಿಕೂಟವನ್ನು ರಚಿಸಿಕೊಂಡು ದೇಶಾದ್ಯಂತ ಬಲಗೊಳ್ಳುತ್ತಿವೆ.

ಇದರಿಂದಾಗಿ ಆರಂಭದಲ್ಲಿ ತಮಿಳುನಾಡು, ಕೇರಳದಂತಹ ರಾಜ್ಯಗಳಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಪ್ರಧಾನಿ ಮೋದಿ, ಕಳೆದ 6 ದಿನಗಳಿಂದ ಪ್ರಚಾರದಲ್ಲಿ ಹೆಚ್ಚು ಆಸಕ್ತಿ ತೋರಿಸದೆ ಬೇರೆಯ ಚಿಂತೆಯಲ್ಲಿ ಮುಳುಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಸೋಲು ಖಚಿತ ಎಂಬ ಕಾರಣದಿಂದ ಬಿಜೆಪಿಯ ಪ್ರಮುಖ ನಾಯಕರು ಕೂಡ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ ಎಂದೂ ಹೇಳಲಾಗುತ್ತಿದೆ.

ಗುಪ್ತಚರ ಸಂಸ್ಥೆಗಳು ನೀಡಿರುವ ಮಾಹಿತಿ ಪ್ರಕಾರ ದೇಶಾದ್ಯಂತ ಬಿಜೆಪಿ ವಿರೋಧಿ ಅಲೆ ಎದ್ದಿದ್ದು, ದಕ್ಷಿಣ ರಾಜ್ಯಗಳಲ್ಲದೇ ಉತ್ತರದ ರಾಜ್ಯಗಳಲ್ಲೂ ಬಿಜೆಪಿಗೆ ಸೋಲು ಎದುರಾಗಲಿದೆ ಎಂದು ವರದಿಗಳಾಗಿವೆ. ಇದರಿಂದಲೇ ಚುನಾವಣಾ ಪ್ರಚಾರದಲ್ಲಿ ಹೆಚ್ಚು ಆಸಕ್ತಿ ತೋರಿಸದೆ ಪ್ರಧಾನಿ ನರೇಂದ್ರ ಮೋದಿ ದೂರ ಉಳಿದಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜಕೀಯ

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸ್ ಮಾಡಲು ಪ್ರಧಾನಿ ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಕೇಜ್ರಿವಾಲ್ ಬಂಧನವನ್ನು ಖಂಡಿಸಿ ದೆಹಲಿಯಲ್ಲಿ ಇಂದು ನಡೆದ “ಇಂಡಿಯಾ” ಮೈತ್ರಿಕೂಟದ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ಪ್ರಧಾನಿ ಅವರು ಲೋಕಸಭೆ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ದೊಡ್ಡ ಪಕ್ಷವಾದ ಕಾಂಗ್ರೆಸ್ ನ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸುತ್ತಿದ್ದಾರೆ. ಇದು ಯಾವ ರೀತಿಯ ಚುನಾವಣೆ?

ಬಿಜೆಪಿಯಿಂದ ನನ್ನ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ವಿರೋಧ ಪಕ್ಷದ ನಾಯಕರನ್ನು ಬಂಧಿಸಿ ಜೈಲಿಗೆ ಹಾಕಲಾಗುತ್ತದೆ. ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಯ ಮೂಲಕ ದೇಶವನ್ನು ನಡೆಸಲು ಪ್ರಯತ್ನಿಸುತ್ತಿದ್ದಾರೆ. ವಿದ್ಯುನ್ಮಾನ ಮತಯಂತ್ರ, ಮ್ಯಾಚ್ ಫಿಕ್ಸಿಂಗ್, ಸಾಮಾಜಿಕ ಮಾಧ್ಯಮ ಮತ್ತು ಮಾಧ್ಯಮಗಳ ಒತ್ತಡವಿಲ್ಲದೆ ಬಿಜೆಪಿ 180 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಿಲ್ಲ.

ಸಂವಿಧಾನವು ಜನರ ಧ್ವನಿಯಾಗಿದೆ. ಇದು ಕೊನೆಗೊಂಡರೆ ದೇಶಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದರೆ ಸಂವಿಧಾನವನ್ನೇ ಬದಲಿಸುತ್ತೇವೆ ಎಂದು ಬಿಜೆಪಿ ಸಂಸದರು ಹೇಳುತ್ತಾರೆ. ಇದು ಅವರ ನೀತಿಯನ್ನು ಪರೀಕ್ಷಿಸುವ ಪ್ರಯತ್ನವಾಗಿದೆ.

ನೀವು ಪೂರ್ಣ ಪ್ರಯತ್ನದಿಂದ ಅವರ ವಿರುದ್ಧ ಮತ ಚಲಾಯಿಸದಿದ್ದರೆ, ಅವರ ಮ್ಯಾಚ್ ಫಿಕ್ಸಿಂಗ್ ಗೆಲ್ಲುತ್ತದೆ. ಅವರು ಗೆದ್ದರೆ ಸಂವಿಧಾನವನ್ನು ನಾಶಪಡಿಸುತ್ತಾರೆ. ಈ ಚುನಾವಣೆ ಸಾಮಾನ್ಯ ಚುನಾವಣೆಯಲ್ಲ. ದೇಶ ಮತ್ತು ಸಂವಿಧಾನವನ್ನು ರಕ್ಷಿಸುವ ಚುನಾವಣೆ” ಎಂದು ರಾಹುಲ್ ಹೇಳಿದರು.

ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಮೋದಿ ರಾಜ್ಯಗಳಲ್ಲಿ ಸರ್ಕಾರ ರಚಿಸಲು ಮತ್ತು ವಿರೋಧ ಪಕ್ಷದ ನಾಯಕರನ್ನು ಹೆದರಿಸಲು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವ ಬೇಕೋ ಅಥವಾ ಸರ್ವಾಧಿಕಾರ ಬೇಕೋ ಎಂಬುದನ್ನು ಜನರೇ ನಿರ್ಧರಿಸಬೇಕು. ಸರ್ವಾಧಿಕಾರವನ್ನು ಬೆಂಬಲಿಸುವವರನ್ನು ದೇಶದಿಂದ ಹೊರಹಾಕಬೇಕು. ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿಷ ಇದ್ದಂತೆ; ವಿಷ ತಿಂದರೆ ಸಾವು ಸಂಭವಿಸುತ್ತದೆ” ಎಂದು ಹೇಳಿದರು.

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಪ್ರಸ್ತುತ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಪಾರ್ಟಿ-3, ಕಾಂಗ್ರೆಸ್-2, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟ-1 ಸ್ಥಾನಕ್ಕೆ ಸ್ಪರ್ಧಿಸಲು ಒಪ್ಪಂದ ನಡೆದಿವೆ ಎಂಬ ವರದಿಗಳು ಬರುತ್ತಿವೆ!

ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಪಾರ್ಟಿ ಮತ್ತು ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿರುವ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯೊಂದಿಗೆ ಕಾಂಗ್ರೆಸ್ ಪಕ್ಷವು ಸುಗಮ ಕ್ಷೇತ್ರ ಒಪ್ಪಂದವನ್ನು ಮಾಡಿಕೊಂಡಿದೆ ಎಂದು ವರದಿಯಾಗಿವೆ. ಈ ಕುರಿತು ಅಧಿಕೃತ ಅಧಿಸೂಚನೆ ಹೊರ ಬೀಳುವುದೊಂದೆ ಬಾಕಿ.

ಕಾಂಗ್ರೆಸ್ ಪಕ್ಷವು ‘ಇಂಡಿಯಾ’ ಮೈತ್ರಿಕೂಟದಲ್ಲಿರುವ ಆಮ್ ಆದ್ಮಿ ಪಕ್ಷ, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಾರ್ಟಿಯೊಂದಿಗೆ ಕ್ಷೇತ್ರ ಒಪ್ಪಂದದ ಮಾತುಕತೆಗಳನ್ನು ನಡೆಸಿತು. ಆದರೆ, ಈ ಮಾತುಕತೆಗಳಲ್ಲಿ ಆರಂಭದಲ್ಲಿ ಭಾರಿ ಹಿನ್ನಡೆ ಉಂಟಾಯಿತು. ಅಲ್ಲದೆ, ‘ಇಂಡಿಯಾ’ ಮೈತ್ರಿಕೂಟವನ್ನು ರಚಿಸಿದ್ದ ನಿತೀಶ್ ಕುಮಾರ್, ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ ಮತ್ತೆ ಪಲಾಯನ ಮಾಡಿದರು. ಉತ್ತರಪ್ರದೇಶದಲ್ಲಿ ರಾಷ್ಟ್ರೀಯ ಲೋಕದಳ ಕೂಡ ಬಿಜೆಪಿ ಕಡೆಗೆ ಓಡಿ ಹೋಯಿತು.

‘ಇಂಡಿಯಾ’ ಮೈತ್ರಿಕೂಟವು ಲೋಕಸಭೆ ಚುನಾವಣೆಯನ್ನು ಎದುರಿಸಲಿದೆಯೇ? ‘ಇಂಡಿಯಾ ಮೈತ್ರಿಕೂಟ ಉಳಿಯುತ್ತದೆಯೇ? ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಮುಗಿಲುಮುಟ್ಟಿದವು. ಈ ಹಿನ್ನಲೆಯಲ್ಲಿ, ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ 5 ರಾಜ್ಯಗಳಲ್ಲಿ ಸೀಟು ಹಂಚಿಕೆ ನಿರ್ಧಾರ ಪ್ರಕಟಿಸಿತು. ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಪ್ರಬಲವಾಗಿರುವುದರಿಂದ ಪ್ರತ್ಯೇಕವಾಗಿ ಸ್ಪರ್ಧಿಸಲು ನಿರ್ಧಾರ ಕೈಗೊಂಡಿತು. ಉತ್ತರಪ್ರದೇಶದಲ್ಲೂ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಸುಲಲಿತವಾಗಿ ಕ್ಷೇತ್ರ ಒಪ್ಪಂದವನ್ನು ಮಾಡಿಕೊಂಡಿತು.

ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷವು ಡಿಎಂಕೆ ಜೊತೆ ಸೀಟು ಹಂಚಿಕೆಗೆ ಮಾತುಕತೆ ನಡೆಸುತ್ತಿದೆ. ಈ ಮಾತುಕತೆ ಶೀಘ್ರದಲ್ಲೇ ಅಂತ್ಯಗೊಳ್ಳಲಿದೆ ಎಂದು ವರದಿಗಳಾಗಿವೆ. ಆಂಧ್ರಪ್ರದೇಶದಲ್ಲಿ, ರಾಜ್ಯ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಶರ್ಮಿಳಾ ಎಡಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಕೇರಳದಲ್ಲಿ ಎಡ ಪಕ್ಷಗಳು ಮತ್ತು ಕಾಂಗ್ರೆಸ್ ಪ್ರಬಲ ಪಕ್ಷಗಳಾಗಿರುವುದರಿಂದ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿವೆ.

ಅದೇ ರೀತಿ ಜಮ್ಮು-ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಜೊತೆ ಕಾಂಗ್ರೆಸ್ ಪಕ್ಷ ನಡೆಸಿದ ಸೀಟು ಹಂಚಿಕೆಯ ಮೊದಲ ಹಂತದ ಮಾತುಕತೆಯಲ್ಲಿ ಭಾರಿ ಹಿನ್ನಡೆಯಾಗಿತ್ತು. ಇದರಿಂದ ಕಾಂಗ್ರೆಸ್ ಜೊತೆ ಯಾವುದೇ ಮೈತ್ರಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಘೋಷಿಸಿದ್ದರು.

ಆದರೆ, ಕಾಂಗ್ರೆಸ್ ಪಕ್ಷವು ಸೀಟು ಹಂಚಿಕೆ ಬಗ್ಗೆ ನಿರಂತರ ಮಾತುಕತೆ ನಡೆಸಿದ ಪರಿಣಾಮ, ಪ್ರಸ್ತುತ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಪಾರ್ಟಿ-3, ಕಾಂಗ್ರೆಸ್-2, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟ-1 ಸ್ಥಾನಕ್ಕೆ ಸ್ಪರ್ಧಿಸಲು ಒಪ್ಪಂದ ನಡೆದಿವೆ ಎಂಬ ವರದಿಗಳು ಬರುತ್ತಿವೆ. ಈ ಕುರಿತು ಅಧಿಕೃತ ಅಧಿಸೂಚನೆ ಯಾವಾಗ ಬೇಕಾದರೂ ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ. ಇದರಿಂದ ಬಿಜೆಪಿಯ 370 ಕ್ಷೇತ್ರಗಳ ಕನಸು ಬಗ್ನವಾಗವ ಕಾಲ ಸಮೀಪಿಸುತ್ತಿದೆಯೇ ಎಂಬುದನ್ನು ಕಾದು ನೋಡಣ.

ರಾಜಕೀಯ

ಲಖನೌ: ಸರ್ಕಾರಿ ಉದ್ಯೋಗಾಕಾಂಕ್ಷಿಗಳ ಸಮಯವನ್ನು ವ್ಯರ್ಥ ಮಾಡುವುದೇ ಬಿಜೆಪಿ ಸರ್ಕಾರದ ಗುರಿಯಾಗಿದೆ. ಎಂದು ಕಾಂಗ್ರೆಸ್ ಸಂಸದ ರಾಹುಲ್ ಆರೋಪಿಸಿದ್ದಾರೆ. ಕಾಂಗ್ರೆಸ್ ಸಂಸದ ರಾಹುಲ್ ‘ಭಾರತ್ ಜೋಡೋ ನ್ಯಾಯ ಯಾತ್ರೆ’ ನಡೆಸುತ್ತಿದ್ದಾರೆ. ಈಗ ಉತ್ತರ ಪ್ರದೇಶದಲ್ಲಿ ರ‍್ಯಾಲಿ ನಡೆಯುತ್ತಿದೆ.

ಆಗ್ರಾದಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿ ಸಣ್ಣ ವ್ಯಾಪಾರಿಗಳ ಮೇಲೆ ಪರಿಣಾಮ ಬೀರಿದೆ. ಯುವಕರಿಗೆ ಉದ್ಯೋಗವಿಲ್ಲ, ರೈತರು ಇನ್ನೂ ಬೀದಿಯಲ್ಲಿ ಕುಳಿತಿದ್ದಾರೆ. ಜನರಿಗಾಗಿ ಕೆಲಸ ಮಾಡುವುದು ಸರ್ಕಾರದ ಕರ್ತವ್ಯ. ಜನರು ಇದನ್ನು ಅರ್ಥಮಾಡಿಕೊಳ್ಳದಿದ್ದರೆ, ಯಾವುದೇ ಬದಲಾವಣೆ ಸಂಭವಿಸುವುದಿಲ್ಲ.

ನಿಮ್ಮ ಸ್ವಂತ ಯೋಗಕ್ಷೇಮದ ಬಗ್ಗೆ ಯೋಚಿಸಲು ಪ್ರಾರಂಭಿಸಿ ಎಂಬುದನ್ನು ಮಾತ್ರ ನಾನು ನಿಮಗೆ ಹೇಳಲು ಬಯಸುತ್ತೇನೆ. ಅಗ್ನಿಪಥ್ ಯೋಜನೆಯಡಿ ಸೇನೆಯಲ್ಲಿ ಸೇವೆ ಸಲ್ಲಿಸುವ ಯುವಕರ ಆರ್ಥಿಕ ಸ್ಥಿತಿ 4 ವರ್ಷಗಳ ನಂತರ ಹದಗೆಡಲಿದೆ.

ಯುವಕರಿಗೆ ಉದ್ಯೋಗ ನೀಡಲು ಅವರು ಬಯಸದೇ ಇರುವ ಕಾರಣ, ಸರ್ಕಾರಿ ಉದ್ಯೋಗಾಕಾಂಕ್ಷಿಗಳ ಸಮಯವನ್ನು ವ್ಯರ್ಥ ಮಾಡುವುದೇ ಬಿಜೆಪಿ ಸರ್ಕಾರದ ಉದ್ದೇಶವಾಗಿದೆ. ದೇಶದಲ್ಲಿ ದ್ವೇಷ ಹೆಚ್ಚಾಗಲು ಅನ್ಯಾಯವೇ ಕಾರಣ. ಭಾರತದಲ್ಲಿ ಬಡವರಿಗೆ, ರೈತರಿಗೆ, ಯುವಕರಿಗೆ ಮತ್ತು ಮಹಿಳೆಯರಿಗೆ ಅನ್ಯಾಯವಾಗಿದೆ. ಈ ಅನ್ಯಾಯದ ವಿರುದ್ಧ ‘ಭಾರತ್ ಜೋಡೋ ನ್ಯಾಯ ಯಾತ್ರೆ’ ಆರಂಭಿಸಿದ್ದೇನೆ” ಎಂದು ಹೇಳಿದರು.

ರಾಜಕೀಯ

ಕೊಲ್ಕತ್ತಾ: 2024ರ ಸಂಸತ್ತಿನ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ, ಸೀಟು ಹಂಚಿಕೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ನಡುವೆ ಮಾತುಕತೆಗಳು ತೀವ್ರಗೊಂಡಿವೆ. ಈ ಹಿನ್ನಲೆಯಲ್ಲಿ, ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಹಲವು ಹಂತಗಳಲ್ಲಿ ಮಾತುಕತೆ ನಡೆಸಲಾಗುತ್ತಿದೆ.

ಪಶ್ಚಿಮ ಬಂಗಾಳದಲ್ಲಿ, ಕಾಂಗ್ರೆಸ್ 8 ರಿಂದ 14 ಸ್ಥಾನಗಳನ್ನು ಕೇಳುವ ಮೂಲಕ ತೃಣಮೂಲ ಕಾಂಗ್ರೆಸ್ ಜೊತೆ ಮಾತುಕತೆ ಆರಂಭಿಸಿತು. ಆದರೆ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ‘ಪಶ್ಚಿಮ ಬಂಗಾಳದಲ್ಲಿ ನಿಮಗೆ ಒಬ್ಬ ಶಾಸಕರೂ ಇಲ್ಲ. ಎರಡು ಲೋಕಸಭಾ ಕ್ಷೇತ್ರಗಳನ್ನು ನೀಡುತ್ತೇನೆ. ಆ ಎರಡು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವನ್ನು ಖಚಿತಪಡಿಸಿಕೊಳ್ಳೋಣ’ ಎಂದರು. ಅಂತಿಮವಾಗಿ ಕಾಂಗ್ರೆಸ್‌ಗೆ 6 ಲೋಕಸಭಾ ಕ್ಷೇತ್ರಗಳನ್ನು ನೀಡುವಂತೆ ಒತ್ತಾಯಿಸಿತು.

ಈ ಹಿನ್ನಲೆಯಲ್ಲಿ, ಇತ್ತೀಚೆಗೆ ಮಾಲ್ದಾ ಪ್ರದೇಶದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ‘ಕಾಂಗ್ರೆಸ್‌ಗೆ ಒಂದು ಸ್ಥಾನವನ್ನೂ ನೀಡುವುದಿಲ್ಲ’ ಎಂದು ಹೇಳಿದರು. ಅಲ್ಲದೆ, ‘ಇಂಡಿಯಾ’ ಮೈತ್ರಿಕೂಟದಲ್ಲಿ ತನ್ನ ಭಾಗವಹಿಸುವಿಕೆಯನ್ನು ಸದ್ಯಕ್ಕೆ ತಡೆಹಿಡಿದಿರುವುದಾಗಿಯೂ ಚುನಾವಣೆಯ ಫಲಿತಾಂಶವನ್ನು ಆಧರಿಸಿ, ಚುನಾವಣೆಯ ನಂತರ ಈ ನಿರ್ಧಾರವನ್ನು ಮರುಪರಿಶೀಲನೆ ಮಾಡುವುದಾಗಿಯೂ ಅವರು ಹೇಳಿದರು.

ಈ ಹಿನ್ನಲೆಯಲ್ಲಿ, ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳ ನಡುವಿನ ಮಾತುಕತೆ ಪುನರಾರಂಭವಾಗಿದ್ದು, ಸಕಾರಾತ್ಮಕ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಒಮ್ಮತಕ್ಕೆ ಬಂದರೆ, ಸದ್ಯದಲ್ಲೇ ಘೋಷಣೆ ಹೊರಬೀಳಲಿದೆ ಎಂದು ವರದಿಯಾಗಿದೆ.

ಕಾಂಗ್ರೆಸ್ ಪಕ್ಷವು, ಪಶ್ಚಿಮ ಬಂಗಾಳದ 42 ಸ್ಥಾನಗಳ ಪೈಕಿ ಬರ್ಹಾಂಪುರ್, ದಕ್ಷಿಣ ಮಾಲ್ದಾ, ಉತ್ತರ ಮಾಲ್ದಾ, ರಾಯ್‌ಗಂಜ್, ಡಾರ್ಜಿಲಿಂಗ್ ಮತ್ತು ಪುರುಲಿಯಾ ಮುಂತಾದ 6 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಯಸುತ್ತಿದೆ. ಈ ಪೈಕಿ 5 ಸ್ಥಾನಗಳನ್ನು ಕಾಂಗ್ರೆಸ್ ಪಡೆಯಲಿದೆ ಎಂದು ನಂಬುವುದಾಗಿ ಆ ಪಕ್ಷದ ಮೂಲಗಳು ತಿಳಿಸಿವೆ.

ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದೊಂದಿಗೆ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮಾತುಕತೆ ನಡೆಸಿತ್ತು. ಅದರಂತೆ ಉತ್ತರ ಪ್ರದೇಶದ 80 ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಲ್ಲಿ ಮತ್ತು ದೆಹಲಿಯ 7 ಕ್ಷೇತ್ರಗಳ ಪೈಕಿ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತಿದೆ ಎಂಬುದು ಗಮನಾರ್ಹ.

ದೇಶ

ಪಾಟ್ನಾ: ಬಿಹಾರದಲ್ಲಿ ನಡೆಯುತ್ತಿರುವ ‘ಭಾರತ ಜೋಡೋ ನ್ಯಾಯ ಯಾತ್ರೆ’ಯ ವೇಳೆ ರಾಹುಲ್ ಪ್ರಯಾಣಿಸುತ್ತಿದ್ದ ಜೀಪನ್ನು ರಾಷ್ಟ್ರೀಯ ಜನತಾ ದಳದ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಚಲಾಯಿಸಿದ್ದು ಎಲ್ಲರ ಗಮನ ಸೆಳೆಯಿತು.

ಮಣಿಪುರದಿಂದ ಮುಂಬೈ ವರೆಗೆ ಕಾಂಗ್ರೆಸ್ ಸಂಸದ ರಾಹುಲ್  ಗಾಂಧಿ ಎರಡನೇ ಹಂತದ ಭಾರತ ಜೋಡೋ ನ್ಯಾಯ ಯಾತ್ರೆಯನ್ನು ಕೈಗೊಂಡಿದ್ದಾರೆ. ಇದರ ಅಂಗವಾಗಿ ಯಾತ್ರೆ ಬಿಹಾರದ ಸಸಾರಂ ಪ್ರದೇಶವನ್ನು ಪ್ರವೇಶಿಸಿತು. ಆ ವೇಳೆ ರಾಹುಲ್ ಬಂದಿದ್ದ ಜೀಪನ್ನು ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಜನತಾದಳದ ನಾಯಕ ತೇಜಸ್ವಿ ಯಾದವ್ ಚಲಾಯಿಸಿಕೊಂಡು ಹೋದರು.

ಇದರ ಬೆನ್ನಲ್ಲೇ ಇಂದು ಸಂಜೆ ನಡೆಯುವ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ ಜೊತೆಗೆ ತೇಜಸ್ವಿ ಯಾದವ್ ವೇದಿಕೆ ಏರಲಿದ್ದಾರೆ. ಇದರ ನಂತರ, ಯಾತ್ರೆಯು ಉತ್ತರಪ್ರದೇಶವನ್ನು ಪ್ರವೇಶಿಸಲಿದೆ. ತೇಜಸ್ವಿ ಯಾದವ್ ಅವರು ರಾಹುಲ್ ಪ್ರಯಾಣಿಸುತ್ತಿದ್ದ ಜೀಪ್ ಅನ್ನು ಚಾಲನೆ ಮಾಡುತ್ತಿರುವ ಚಿತ್ರಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ.

ರಾಜಕೀಯ

ಲಖನೌ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಗೆ 11 ಕ್ಷೇತ್ರಗಳನ್ನು ನೀಡಲಾಗುವುದು ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹೇಳಿದ್ದಾರೆ.

ಬಿಜೆಪಿಯನ್ನು ಮೂರನೇ ಬಾರಿಗೆ ಅಧಿಕಾರಕ್ಕೆ ಬರದಂತೆ ತಡೆಯುವ ಉದ್ದೇಶದಿಂದ “ಇಂಡಿಯಾ” ಹೆಸರಿನಲ್ಲಿ 28 ವಿರೋಧ ಪಕ್ಷಗಳು ರಚಿಸಿರುವ ಒಕ್ಕೂಟವು ಕ್ಷೇತ್ರಗಳ ಹಂಚಿಕೆಯ ಬಗ್ಗೆ ಮಾತನಾಡಲು ಪ್ರಾರಂಭಿಸಿದಾಗಿನಿಂದ ಸಮಸ್ಯೆ ತಲೆ ಎತ್ತಲು ಪ್ರಾರಂಭಿಸಿತು.

ಪಶ್ಚಿಮ ಬಂಗಾಳದ ಎಲ್ಲಾ 42 ಕ್ಷೇತ್ರಗಳಲ್ಲಿ ತೃಣಮೂಲ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಮುಖ್ಯಮಂತ್ರಿ ಮಮತಾ ಘೋಷಿಸಿದ್ದಾರೆ. ಅದೇ ರೀತಿ ಪಂಜಾಬ್‌ನ ಎಲ್ಲಾ 13 ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಘೋಷಿಸಿದ್ದಾರೆ.

ಇದಾದ ನಂತರ ಸಮಾಜವಾದಿ ಪಕ್ಷ “ಇಂಡಿಯಾ” ಮೈತ್ರಿಕೂಟದಿಂದ ಹಿಂದೆ ಸರಿದು, ಪ್ರತ್ಯೇಕವಾಗಿ ಸ್ಪರ್ಧಿಸಲಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆದಿತ್ತು.

ಈ ಹಿನ್ನಲೆಯಲ್ಲಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ತಮ್ಮ ‘ಎಕ್ಸ್’ ಜಾಲತಾಣದಲ್ಲಿ ಹಂಚಿಕೊಂಡಿರುವ ಹೇಳಿಕೆಯಲ್ಲಿ, “ಉತ್ತರ ಪ್ರದೇಶದಲ್ಲಿ ತೀವ್ರ ಪೈಪೋಟಿ ಇರುತ್ತದೆ ಎಂದು ನಿರೀಕ್ಷಿಸಿದ್ದ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜೊತೆ ಸುಗಮ ಒಪ್ಪಂದವಾಗಿದೆ” ಎಂದು ಹೇಳಿದ್ದಾರೆ.

ಒಟ್ಟು 80 ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳು ಕಾಂಗ್ರೆಸ್‌ಗೆ ನೀಡಲಾಗಿದೆ. “ಉತ್ತರಪ್ರದೇಶದಲ್ಲಿ “ಇಂಡಿಯಾ” ಮೈತ್ರಿಕೂಟ ಗೆಲ್ಲುತ್ತದೆ” ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. ಮೈತ್ರಿಕೂಟದ ಅಂಗಪಕ್ಷವಾಗಿರುವ ರಾಷ್ಟ್ರಿಯ ಲೋಕದಳಕ್ಕೆ (ಆರ್‌ಎಲ್‌ಡಿ) ಈ ಹಿಂದೆ 7 ಕ್ಷೇತ್ರಗಳನ್ನು ಹಂಚಿಕೆ ಮಾಡಲಾಗಿತ್ತು ಎಂಬುದು ಗಮನಾರ್ಹ

ರಾಜಕೀಯ

ತಿರುಚಿರಾಪಳ್ಳಿ: ತಿರುಚ್ಚಿಯ ಸಿರುಗನೂರಿನಲ್ಲಿ ಸಂಸದ ತೊಲ್.ತಿರುಮಾವಳವನ್ ನೇತೃತ್ವದ ವಿಡುದಲೈ ಚಿರುತ್ತೈಗಳ್ (ಬಿಡುಗಡೆ ಚಿರುತೆಗಳು) ಪಾರ್ಟಿ ವತಿಯಿಂದ “ಪ್ರಜಾಪ್ರಭುತ್ವ ಗೆಲ್ಲುತ್ತದೆ” ಎಂಬ ಶೀರ್ಷಿಕೆಯಡಿ ನಡೆದ ಸಮಾವೇಶದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಭಾಗವಹಿಸಿ ಮಾತನಾಡಿದರು.

ತಿರುಚ್ಚಿ ಸಿರುಗನೂರಿನಲ್ಲಿ ವಿಡುದಲೈ ಚಿರುತ್ತೈಗಳ್ ಪಾರ್ಟಿ ವತಿಯಿಂದ “ಪ್ರಜಾಪ್ರಭುತ್ವ ಗೆಲ್ಲುತ್ತದೆ” ಎಂಬ ಶೀರ್ಷಿಕೆಯಡಿ ಸಮಾವೇಶವನ್ನು ನಡೆಸಲಾಯಿತು. I.N.D.I.A ಮೈತ್ರಿ ಪಕ್ಷದ ನಾಯಕರು ಭಾಗವಹಿಸಿದ್ದ ಈ ಸಮಾವೇಶದಲ್ಲಿ ವಿಡುದಲೈ ಚಿರುತ್ತೈಗಳ್ ನಾಯಕ ತಿರುಮಾವಳವನ್ 33 ನಿರ್ಣಯಗಳನ್ನು ಪ್ರಸ್ತಾಪಿಸಿದರು.

ಈ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, “ಇಡೀ ಭಾರತಕ್ಕೆ ಸಾಮಾಜಿಕ ನ್ಯಾಯ ಮತ್ತು ಸಮತಾವಾದ ಚಿಂತನೆಯನ್ನು ಸಾರುವ ಸರ್ಕಾರವನ್ನು ಸ್ಥಾಪಿಸಲಿಕ್ಕಾಗಿ ಸಹೋದರ ತಿರುಮಾವಳವನ್ “ಪ್ರಜಾಪ್ರಭುತ್ವ ಗೆಲ್ಲುತ್ತದೆ” ಎಂಬ ಸಮಾವೇಶವನ್ನು ಆಯೋಜಿಸಿದ್ದಾರೆ. “ಪ್ರಜಾಪ್ರಭುತ್ವ ಗೆಲ್ಲುತ್ತದೆ” ಎಂದು ಹೇಳಿದರೆ ಸಾಲದು. ಅದಕ್ಕೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು.

ತಮಿಳುನಾಡಿನಲ್ಲಿ ಬಿಜೆಪಿ ಎಂಬುದು ಶೂನ್ಯ. ತಮಿಳುನಾಡಿನಲ್ಲಿ ಬಿಜೆಪಿ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಕೇವಲ ತಮಿಳುನಾಡಿನಲ್ಲಿ ಮಾತ್ರ ಬಿಜೆಪಿಯನ್ನು ಸೋಲಿಸಿದರೆ ಸಾಲದು. ಅದನ್ನು ಅಖಿಲ ಭಾರತ ಮಟ್ಟದಲ್ಲಿ ಸೋಲಿಸಬೇಕು. ಅದಕ್ಕೆ ಬುನಾದಿ I.N.D.I.A ಮೈತ್ರಿಕೂಟ.

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ಭಾರತದಲ್ಲಿ ಒಕ್ಕೂಟ ವ್ಯವಸ್ಥೆ ಇರುವುದಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆ ಇರುವುದಿಲ್ಲ, ಸಂಸದೀಯ ಪ್ರಕ್ರಿಯೆ ಇರುವುದಿಲ್ಲ, ಅಂತಿಮವಾಗಿ ರಾಜ್ಯಗಳೇ ಇರುವುದಿಲ್ಲ. ಇದನ್ನು ಎಲ್ಲರೂ ಅರಿತುಕೊಳ್ಳಬೇಕು. ಅವರು ರಾಜ್ಯಗಳನ್ನು ಪಾಲಿಕೆಗಳಾಗಿ (Corporation) ಮಾಡುತ್ತಾರೆ” ಎಂದು ಅವರು ಎಚ್ಚರಿಸಿದರು.

ಇದನ್ನು ಅನುಸರಿಸಿ ಮಾತನಾಡಿದ ತಿರುಮಾವಳವನ್, “ತಮಿಳುನಾಡು ಉತ್ತರ ಭಾರತದ ರಾಜ್ಯಗಳಂತೆ ಅಲ್ಲ. ಇದು ಚಿರತೆಗಳ ರಾಜ್ಯ. ತಮಿಳುನಾಡಿನ ಪ್ರತಿಯೊಂದು ಹಳ್ಳಿಯಲ್ಲೂ ಚಿರತೆಗಳಿವೆ. ಕುರಿಮರಿಗಳು ಇಲ್ಲಿ ಬಂದು ನೋಡಿದರೆ ಗೊತ್ತಾಗುತ್ತೆ. ಮೋದಿಯನ್ನು ಅಧಿಕಾರದಿಂದ ದೂರವಿಡಬೇಕು. ಇನ್ನು ವಿಳಂಬ ಮಾಡಲು, ಮೋಜು ಮಾಡಲು ಸಾಧ್ಯವಿಲ್ಲ.

ಇದು ಚುನಾವಣಾ ರಾಜಕೀಯ ಲೆಕ್ಕಾಚಾರವಲ್ಲ. ದೇಶವನ್ನು, ದೇಶದ ಜನರನ್ನು ಹಾಗೂ ಪ್ರಜಾಪ್ರಭುತ್ವವನ್ನು ಉಳಿಸಬೇಕಾಗಿದೆ. ಈ ಸಮ್ಮೇಳನದ ಸಮಾರಂಭದ ನಾಯಕ ಸಂವಿಧಾನವೇ ಆಗಿದೆ. ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ವಂಚಿಸುವ ವಂಚಕರ ಕೈಗೆ ಈ ದೇಶ ಸಿಕ್ಕಿಬಿದ್ದಿದೆ. ಮೋದಿ ಜನರಿಗೆ ವಂಚಿಸುತ್ತಿದ್ದಾರೆ.

ಮೋದಿಯಿಂದ ನಾನು ಇದನ್ನು ಸಾಧಿಸಿದ್ದೇನೆ; ಅದನ್ನು ಸಾಧಿಸಿದ್ದೇನೆ, ಈ 10 ವರ್ಷಗಳಲ್ಲಿ ನಾವು ಈ ಯೋಜನೆಯನ್ನು ಜಾರಿಗೆ ತಂದಿದ್ದೇವೆ ಎಂದು ಹೇಳಲು ಸಾಧ್ಯವೇ? ಮೋದಿ ಮತ್ತು ಅಮಿತ್ ಶಾ ಅವರ ಸೇವೆ ಅಂಬಾನಿ ಮತ್ತು ಅಧಾನಿಗಾಗಿ ಕೆಲಸ ಮಾಡುವುದೊಂದೇ” ಎಂದು ಕಿಡಿಕಾರಿದರು.

“ಪ್ರಜಾಪ್ರಭುತ್ವ ಗೆಲ್ಲುತ್ತದೆ” ಸಮಾವೇಶಕ್ಕೆ ರಾಜ್ಯಾದ್ಯಂತ ಬಂದಿದ್ದ ಲಕ್ಷಾಂತರ ಕಾರ್ಯಕರ್ತರನ್ನು ನೋಡಿ ವಿರೋಧಿಗಳಿಗೆ ನಡುಕ ಉಂಟಾಗಿರುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಬಹುದು.   

ರಾಜಕೀಯ

ಲಕ್ನೋ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಶುಕ್ರವಾರ “ಇಂಡಿಯಾ” ಮೈತ್ರಿಕೂಟದಲ್ಲಿ ನಡೆಯುತ್ತಿರುವ ಬಿರುಕುಗಳಿಗೆ ಕಾಂಗ್ರೆಸ್ ಅನ್ನು ದೂಷಿಸಿದ್ದಾರೆ. ಮತ್ತು ಮೈತ್ರಿ ಪಾಲುದಾರರೊಂದಿಗೆ ಚರ್ಚಿಸಲು ಮತ್ತು ತೊಡಗಿಸಿಕೊಳ್ಳಲು ತೋರಿಸಬೇಕಾದ ಉತ್ಸಾಹವು ಗೋಚರಿಸುತ್ತಿಲ್ಲ ಎಂದು ಹೇಳಿದ್ದಾರೆ.

“ಕಾಂಗ್ರೆಸ್ ಮುಂದೆ ಬರಬೇಕಿತ್ತು. “ಇಂಡಿಯಾ” ಮೈತ್ರಿಕೂಟದೊಂದಿಗೆ ಚರ್ಚಿಸಲು ಮತ್ತು ತೊಡಗಿಸಿಕೊಳ್ಳಲು ಕಾಂಗ್ರೆಸ್ ತೋರಿಸಬೇಕಾದ ಉತ್ಸಾಹವು ಕಾಣೆಯಾಗಿದೆ” ಎಂದು ಅಖಿಲೇಶ್ ಯಾದವ್ ಇಂಡಿಯಾ ಟುಡೇ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಪ್ರಚಾರ ಮಾಡುವ ಸಾಧ್ಯತೆಯ ಬಗ್ಗೆ ಮಾತನಾಡಿದ ಅಖಿಲೇಶ್ ಯಾದವ್, “ಅಂತಹ ಸಹಯೋಗವು ಕಾರ್ಯರೂಪಕ್ಕೆ ಬರುತ್ತದೆಯೇ ಎಂಬುದನ್ನು ಸಮಯವೇ ಹೇಳುತ್ತದೆ” ಎಂದು ಹೇಳಿದ್ದಾರೆ.

ಬಿಹಾರದಲ್ಲಿನ ಪ್ರಸ್ತುತ ರಾಜಕೀಯ ಪ್ರಕ್ಷುಬ್ಧತೆ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು “ಇಂಡಿಯಾ” ಮೈತ್ರಿಕೂಟದಿಂದ ಹೊರಹೋಗುವ ಸಂಭಾವ್ಯತೆಯ ಬಗ್ಗೆ ಪ್ರಶ್ನಿಸಿದಾಗ, ಅಖಿಲೇಶ್ ಯಾದವ್ ಮತ್ತೊಮ್ಮೆ ಕಾಂಗ್ರೆಸ್ ಅನ್ನು ಟೀಕಿಸಿದರು ಮತ್ತು ಪಕ್ಷವು ಉಪಕ್ರಮವನ್ನು ತೆಗೆದುಕೊಂಡಿದ್ದರೆ ಪ್ರಸ್ತುತ ಪರಿಸ್ಥಿತಿಯನ್ನು ತಪ್ಪಿಸಬಹುದಿತ್ತು ಎಂದು ಪ್ರತಿಪಾದಿಸಿದರು.

ನಿತೀಶ್ ಕುಮಾರ್ ಎನ್‌ಡಿಎ ಪಾಳಯಕ್ಕೆ ಸೇರ್ಪಡೆಯಾಗುತ್ತಾರೆ ಎಂಬ ವರದಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅಖಿಲೇಶ್, “ನಿತೀಶ್ ಕುಮಾರ್ ಅವರು “ಇಂಡಿಯಾ” ಮೈತ್ರಿಯೊಂದಿಗೆ ಇರಬೇಕೆಂದು ನಾನು ಬಯಸುತ್ತೇನೆ. ಎಲ್ಲಾ ನಂತರ, ಅವರೇ ಉಪಕ್ರಮವನ್ನು ತೆಗೆದುಕೊಂಡು ಭಾರತ ಮೈತ್ರಿಯನ್ನು ರಚಿಸಿದರು” ಎಂದು ಹೇಳಿದ್ದಾರೆ.

“ನಿತೀಶ್ ಕುಮಾರ್ ಏಕೆ ಅಸಮಾಧಾನಗೊಂಡಿದ್ದಾರೆ? ಅವರ ಕುಂದುಕೊರತೆಗಳನ್ನು ಚರ್ಚಿಸಬಹುದು, ಮತ್ತು ಅವರು ಕೇಳಿದಾಗ ಪರಿಹಾರವು ಹೊರಹೊಮ್ಮಬಹುದು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ” ಎಂದು ಯುಪಿ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.

ಜೆಡಿಯು ಮುಖ್ಯಸ್ಥರು ಬಿಹಾರದಲ್ಲಿ ಮತ್ತು ಪ್ರಾದೇಶಿಕ ಪಕ್ಷಗಳು ಮೈತ್ರಿಗೆ ಸೇರ್ಪಡೆಗೊಂಡ ಇತರ ರಾಜ್ಯಗಳಲ್ಲಿ “ಇಂಡಿಯಾ” ಮೈತ್ರಿಕೂಟದಲ್ಲಿ ವಿಫಲವಾದ ಸೀಟು ಹಂಚಿಕೆ ಮಾತುಕತೆಗಳ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದೆ.

ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಕೇವಲ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಲಾಭಕ್ಕಾಗಿ ಆಯೋಜಿಸಲಾಗಿದೆಯೇ ಹೊರತು “ಇಂಡಿಯಾ” ಮೈತ್ರಿಕೂಟಕ್ಕಲ್ಲ ಎಂದು ನಿತೀಶ್ ಕುಮಾರ್ ನಂಬಿದ್ದಾರೆ.

ಏತನ್ಮಧ್ಯೆ, ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಡುವಿನ ಆಂತರಿಕ ಭಿನ್ನಾಭಿಪ್ರಾಯವು ಬಿಹಾರದ ರಾಜಕೀಯ ವಲಯಗಳನ್ನು ಅಲುಗಾಡಿಸಿದೆ ಮತ್ತು ಪ್ರಸ್ತುತ ಸರ್ಕಾರವು ಭಾರಿ ಬದಲಾವಣೆಯತ್ತ ನೋಡುತ್ತಿದೆ.

ಬಿಹಾರದ ಮಹಾಘಟಬಂಧನ್‌ನ ಪ್ರಮುಖ ಮಿತ್ರಪಕ್ಷಗಳಾದ ಜೆಡಿಯು ಮತ್ತು ಆರ್‌ಜೆಡಿ 122ರ ಮಾಂತ್ರಿಕ ಗುರುತನ್ನು ಪೂರೈಸಲು ಮ್ಯಾರಥಾನ್ ಸಭೆಗಳನ್ನು ನಡೆಸುತ್ತಿವೆ.

ನಿತೀಶ್ ಕುಮಾರ್ ಆಡಳಿತಾರೂಢ ಮೈತ್ರಿಕೂಟದಿಂದ ಜೆಡಿಯು ಹಿಂತೆಗೆದುಕೊಳ್ಳುವ ಸನ್ನಿವೇಶದಲ್ಲಿ, ಆರ್‌ಜೆಡಿ 122 ಅಂಕಗಳನ್ನು ತಲುಪಲು ಮತ್ತು ರಾಜ್ಯ ವಿಧಾನಸಭೆಯಲ್ಲಿ ತನ್ನ ಪ್ರಾಬಲ್ಯವನ್ನು ಕಾಪಾಡಿಕೊಳ್ಳಲು ಎಂಟು ಹೆಚ್ಚುವರಿ ಶಾಸಕರ ಅಗತ್ಯವಿದೆ.

ರಾಜಕೀಯ

ನವದೆಹಲಿ: ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿಯನ್ನು ಸೋಲಿಸಲು ವಿರೋಧ ಪಕ್ಷಗಳು ಒಟ್ಟಾಗಿ ‘ಇಂಡಿಯಾ’ ಮೈತ್ರಿಕೂಟವನ್ನು ರಚಿಸಿವೆ.

ಕಾಂಗ್ರೆಸ್, ಡಿಎಂಕೆ, ತೃಣಮೂಲ ಕಾಂಗ್ರೆಸ್, ಸಂಯುಕ್ತ ಜನತಾ ದಳ, ಸಮಾಜವಾದಿ ಪಕ್ಷ ಮತ್ತು ಇತರ ಪ್ರಮುಖ ವಿರೋಧ ಪಕ್ಷಗಳಾದ ‘ಇಂಡಿಯಾ’ ಮೈತ್ರಿಕೂಟ ಇದುವರೆಗೆ ಮೂರು ಬಾರಿ ಸಭೆ ನಡೆಸಿದೆ. ಈ ಸಭೆಯಲ್ಲಿ ಮೈತ್ರಿಕೂಟದ ಕಾರ್ಯಚಟುವಟಿಕೆಗಳ ಕುರಿತು ಚರ್ಚಿಸಲಾಯಿತು.

ಆದಾಗ್ಯೂ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರು? ಎಂಬುದು ಅಧಿಕೃತವಾಗಿ ಘೋಷಣೆಯಾಗಿಲ್ಲ. ಏತನ್ಮಧ್ಯೆ, ‘ಇಂಡಿಯಾ’ ಮೈತ್ರಿಕೂಟದ ಸಂಯೋಜಕರನ್ನಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಆಯ್ಕೆ ಮಾಡಬೇಕು ಮತ್ತು ಜನವರಿ ಅಂತ್ಯದೊಳಗೆ ಸೀಟು ಹಂಚಿಕೆ ಬಗ್ಗೆ ಚರ್ಚಿಸಬೇಕು ಎಂದು ಒತ್ತಾಯಿಸಲಾಯಿತು.

ಈ ಹಿನ್ನಲೆಯಲ್ಲಿ, ಇಂದು ವೀಡಿಯೋ ಕಾನ್ಫರೆನ್ಸ್ ಮೂಲಕ ‘ಇಂಡಿಯಾ’ ಮೈತ್ರಿಕೂಟದ ಪಕ್ಷದ ನಾಯಕರ ಸಮಾಲೋಚನೆ ಸಭೆ ನಡೆಯಿತು.

ಕಾಂಗ್ರೆಸ್ ಪರವಾಗಿ ಮಲ್ಲಿಕಾರ್ಜುನ ಖರ್ಗೆ, ಡಿ.ಎಂ.ಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಶರದ್ ಪವಾರ್ ಸೇರಿದಂತೆ 14 ಪಕ್ಷಗಳ ಮುಖಂಡರುಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು. ಮಮತಾ ಬ್ಯಾನರ್ಜಿ ಈ ಸಭೆಯಲ್ಲಿ ಭಾಗವಹಿಸಲಿಲ್ಲ. ಕ್ಷೇತ್ರ ಹಂಚಿಕೆ ಕುರಿತು ಇಂದಿನ ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು.

ಈ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ‘ಇಂಡಿಯಾ’ ಮೈತ್ರಿಕೂಟದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ನಿತೀಶ್ ಕುಮಾರ್ ಅವರು ಅಧ್ಯಕ್ಷರ ಸ್ಥಾನಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಖರ್ಗೆ ಅವರ ಹೆಸರನ್ನು ಅಧ್ಯಕ್ಷರ ಸ್ಥಾನಕ್ಕೆ ಪ್ರಸ್ತಾಪಿಸಲಾಗಿದೆ ಎಂದು ತಿಳಿದುಬಂದಿದೆ.

ಮೈತ್ರಿಕೂಟದ ಸಂಯೋಜಕರಾಗಿ ನಿತೀಶ್ ಕುಮಾರ್ ಅವರನ್ನು ನೇಮಿಸಲು ನಿರ್ಧರಿಸಿದ್ದಾರೆ. ಎಲ್ಲಾ ಸಮ್ಮಿಶ್ರ ಪಕ್ಷಗಳು ಒಮ್ಮತದ ಬೆಂಬಲ ನೀಡಿದರೆ ಈ ಜವಾಬ್ದಾರಿಯನ್ನು ನಿತೀಶ್ ಕುಮಾರ್ ವಹಿಸಿಕೊಳ್ಳುವುದಾಗಿ ಹೇಳಿದ್ದಾರೆ.

ಮೈತ್ರಿಕೂಟದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸದ ಉದ್ಧವ್ ಠಾಕ್ರೆಯವರು ಅದರ ಸಂಬಂಧ ವಿವರಣೆ ನೀಡಿದ್ದಾರೆ: “ಈ ವಿಷಯದಲ್ಲಿ ಯಾವುದೇ ತಪ್ಪು ತಿಳುವಳಿಕೆ ಇರಬಾರದು. ನಾನು ನಿಗದಿತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಬೇಕಾಗಿದ್ದರಿಂದ, ಸಮಾಲೋಚನಾ ಸಭೆಗೆ ಹಾಜರಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಸಭೆಗೆ ಹಾಜರಾಗುವುದು ಕಷ್ಟವಾಗಿರುತ್ತದೆ. ಸಭೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಈಗಾಗಲೇ ತಿಳಿಸಿದ್ದೇನೆ” ಎಂದು ಹೇಳಿದರು.

‘ಇಂಡಿಯಾ’ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಸದ್ಯಕ್ಕೆ ಅಗತ್ಯವಿಲ್ಲ ಎಂದು ಶರದ್ ಪವಾರ್ ಹೇಳಿದ್ದಾರೆ. “ಚುನಾವಣೆಯಲ್ಲಿ ಮತ ಕೇಳಲು ಯಾರನ್ನಾದರೂ ಪ್ರಧಾನಿ ಅಭ್ಯರ್ಥಿಯನ್ನಾಗಿ ಸೂಚಿಸುವ ಅಗತ್ಯವಿಲ್ಲ. ಚುನಾವಣೆ ನಂತರ ನಾಯಕನನ್ನು ಆಯ್ಕೆ ಮಾಡೋಣ. 1977ರ ಚುನಾವಣೆಯ ಸಮಯದಲ್ಲಿ, ವಿರೋಧ ಪಕ್ಷಗಳು ಮೊರಾರ್ಜಿ ದೇಸಾಯಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಸೂಚಿಸಲಿಲ್ಲ. ವಿರೋಧ ಪಕ್ಷಗಳು ಗೆದ್ದ ನಂತರ ಅವರು ಪ್ರಧಾನಿಯಾಗಿ ಆಯ್ಕೆಯಾದರು” ಎಂದು ಹೇಳಿದರು.