ವರದಿ: ರಾಮು ನೀರ ಮಾನ್ವಿ
ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನ ಬಾಕಿ ಉಳಿದಿದೆ. ಮಾನ್ವಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿ.ಹಂಪಯ್ಯ ನಾಯಕ, ಜೆಡಿಎಸ್ ನಿಂದ ರಾಜಾ ವೆಂಕಟಪ್ಪ ನಾಯಕ, ಬಿಜೆಪಿಯಿಂದ ಬಿ.ವಿ.ನಾಯಕ ಹಾಗೂ ಆಮ್ ಆದ್ಮಿಯಿಂದ ರಾಜಾ ಶಾಮಸುಂದರ್ ನಾಯಕ ಮುಂತಾದವರು ಚುನಾವಣೆ ಅಖಾಡದಲ್ಲಿ ಇದ್ದಾರೆ.
ದಿನದಿಂದ ದಿನಕ್ಕೆ ಎಲ್ಲಾ ರಾಜಕೀಯ ಪಕ್ಷಗಳ ಪ್ರಚಾರವು ಭರಾಟೆಯಿಂದ ನೆಡೆಯುತ್ತಿದೆ. ಪ್ರಚಾರದಲ್ಲಿ ಯಾವುದೇ ಪಕ್ಷಗಳು ನಾ ಮುಂದೆ ತಾಮುಂದೆ ಅನ್ನುವ ರೀತಿಯಲ್ಲಿ ಪ್ರಚಾರವನ್ನು ಮಾಡುತ್ತಿದೆ. ಕಳೆದ 2018ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ರಾಜ ವೆಂಕಟಪ್ಪ ನಾಯಕ ಜಯ ಶಾಲಿಯಾಗಿದ್ದರು. ಎರಡನೇ ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಡಾ.ತನುಶ್ರೀ, ಮೂರನೆಯ ಸ್ಥಾನದಲ್ಲಿ ಬಿಜೆಪಿಯ ಶರಣಪ್ಪ ನಾಯಕ ಹಾಗೂ ನಾಲ್ಕನೇ ಸ್ಥಾನದಲ್ಲಿ ಕಾಂಗ್ರೆಸ್‌ನ ಹಂಪಯ್ಯ ನಾಯಕ ಇದ್ದರು. ಆದರೆ ಈ ಸಾರಿ ಮಾನ್ವಿಯ ಮತದಾರರು ಕ್ಷೇತ್ರದ ಚಿತ್ರಣವನ್ನೇ ಬದಲಾಯಿಸಲಿದ್ದಾರೆ ಎಂಬ ಸೂಚನೆ ಸಿಕ್ಕಿದೆ.
ಪ್ರಸ್ತುತ ಜೆಡಿಎಸ್ ಮೊದಲ ಸ್ಥಾನದಲ್ಲಿ ಇದ್ದರೆ, ಎರಡನೆಯದಾಗಿ ಕಾಂಗ್ರೆಸ್ ಇದೆ. ಮೂರನೆಯ ಸ್ಥಾನದಲ್ಲಿ ಬಿಜೆಪಿ ಇದ್ದು, ಎಂದಿನಂತೆ ಎಲ್ಲಾ ಪಕ್ಷಗಳಲ್ಲಿ ಪಕ್ಷಾಂತರ ಪರ್ವ ಎಡಬಿಡದೆ ನಡೆಯುತ್ತಿದೆ. ಮುಂಜಾನೆ ಒಂದು ಪಕ್ಷದಲ್ಲಿದ್ದರೆ ಮಧ್ಯಾಹ್ನ ಒಂದು ಪಕ್ಷದಲ್ಲಿರುತ್ತಾರೆ. ರಾತ್ರಿಯಲ್ಲಿ ಮತ್ತೊಂದು ಪಕ್ಷದಲ್ಲಿ ಕಂಡುಬರುತ್ತಾರೆ. ಅವರಿಗೆ ಪಕ್ಷ ಸಿದ್ದಾಂತ, ತತ್ವ, ನಿಷ್ಟೆ ಯಾವುದೂ ಇಲ್ಲ. ಆರು ಕೊಟ್ಟರೆ ಅತ್ತೆಯ ಕಡೆ; ಹತ್ತು ಕೊಟ್ಟರೆ ಮಾವನ ಕಡೆ ಅನ್ನುವ ಪರಿಸ್ಥಿತಿ ಇಲ್ಲಿದೆ. ಒಟ್ಟಿನಲ್ಲಿ ಪಕ್ಷಾಂತರ ಪರ್ವ ಜೋರಾಗಿದ್ದು, ಮತದಾರರು ಹಾಗೂ ಕಾರ್ಯಕರ್ತರು ನಾಯಕರ ಇಡುಗಂಟು ಕಡೆ ಕಣ್ಣಿಟ್ಟು ಕಾಯುತ್ತಿದ್ದಾರೆ. ಆದರೆ ಯಾರೂ ಹಣ ಬಿಚ್ಚುತ್ತಿಲ್ಲ ಎಂದು ಕಾರ್ಯಕರ್ತರು ಗೋಳಾಡುತ್ತಿದ್ದಾರೆ. ‘ನಾ ಖಾವುಂಗ ನಾ ಖಾನೆ ದುಂಗಾ’ ಅನ್ನುವ ಪರಿಸ್ಥಿತಿ ಇಲ್ಲಿದೆ. ಇದರಿಂದ ಕಾರ್ಯಕರ್ತರು ಗೊಂದಲಕ್ಕೆ ಸಿಲುಕಿ ಕೊಂಡಿದ್ದಾರೆ.
ಆದರೆ ಬಿಜೆಪಿಯ ದೇವದುರ್ಗದ ಶಿವನಗೌಡ ನಾಯಕರ ಒಂದು ಮಾತು ಈಗ ಎಲ್ಲಡೆ ವೈರಲ್ ಆಗಿದೆ. ‘ರಾಯಚೂರು ಜಿಲ್ಲೆಯಲ್ಲಿ ಅಭಿವೃದ್ಧಿ ಮಾಡುವವರು ಮಾನ್ವಿಯಲ್ಲಿ ಯಾರೂ ಇಲ್ಲ; ದೇವದುರ್ಗದ ನಾವೇ ಬರಬೇಕು’ ಅನ್ನುವ ಮಾತು ಮಾನ್ವಿ ತಾಲೂಕಿನ ಜನತೆಯಲ್ಲಿ ಆಕ್ರೋಷಕ್ಕೆ ಕಾರಣವಾಗಿದೆ. ಇದರಿಂದ ಬಿಜೆಪಿ ಅಭ್ಯರ್ಥಿಗೆ ಬಹು ದೊಡ್ಡ ಹೊಡೆತವಾಗಲಿದೆ. ಈ ಮಾತುಗಳಿಂದ ತಾಲೂಕಿನ ಜನತೆ ಕೆಂಡದಂತೆ ಹಾಗಿದ್ದಾರೆ. ಇದರಿಂದಾಗಿ ಬಿಜೆಪಿ ಪಕ್ಷ ಹಿನ್ನಡೆಗೆ ಕಾರಣವಾಗಿದೆ. ಅಂತಿಮವಾಗಿ ಕಾಂಗ್ರೆಸ್, ಜೆಡಿಎಸ್ ಮಧ್ಯೆ ರಣ ಕಾಳಗ ನಡೆಯುವುದು ಬಹುತೇಕ ಖಚಿತವಾಗಿದೆ.
ಕಳೆದ ಭಾರಿ ಪಕ್ಷೇತರರಾಗಿ ಸ್ಪರ್ದಿಸಿದ ಎಂ.ಈರಣ್ಣನವರ ಸೊಸೆ ಡಾ.ತನುಶ್ರೀ, ಮೂವತ್ತೇಳು ಸಾವಿರ ಮತಗಳನ್ನು ತೆಗೆದುಕೊಂಡು ಸೋತಿದ್ದರು. ಇದು ಒಂದು ರೀತಿಯಲ್ಲಿ ಜೆಡಿಎಸ್ ಅಭ್ಯರ್ಥಿಯ ಗೆಲುವಿಗೆ ಬಹುಮುಖ್ಯ ಕಾರಣವಾಗಿತ್ತು. ನೆನ್ನೆ ನೆಡೆದ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ನೇತ್ರತ್ವದಲ್ಲಿ ಎಂ.ಈರಣ್ಣ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು ಕಾಂಗ್ರೆಸ್‌ನ ಬಹುದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಇದರಿಂದ ಕ್ಷೇತ್ರದಲ್ಲಿ ಗೆಲುವು ಯಾರದ್ದು ಎಂಬ ವಿಷಯವು ಗೊಂದಲಕ್ಕೆ ಕಾರಣವಾಗಿದೆ. ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ; ಮನ್ವಿಯ ಪ್ರಜ್ಞಾವಂತ ಮತದಾರರು ಯಾರಿಗೆ ಆಶೀರ್ವಾದ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು.