ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Mosque Destruction Archives » Dynamic Leader
October 23, 2024
Home Posts tagged Mosque Destruction
ದೇಶ

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಗಜಾಪುರ ಗ್ರಾಮದಲ್ಲಿರುವ ಮಸೀದಿಯನ್ನು ಧ್ವಂಸ ಮಾಡಿರುವ ಚಿತ್ರ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಆ ವೀಡಿಯೋದಲ್ಲಿ ಮಸೀದಿಯ ಗೋಡೆಗಳನ್ನು ಹತ್ತಿ, ಕೇಸರಿ ಧ್ವಜವನ್ನು ನೆಟ್ಟು, ಸುತ್ತಿಗೆಯಿಂದ ಮಿನಾರ್‌ಗೆ ಹೊಡೆಯುತ್ತಿದ್ದಾರೆ. ಅಲ್ಲದೆ, ಆ ಗುಂಪು ‘ಜೈ ಶ್ರೀ ರಾಮ್’ ಎಂದು ಘೋಷಣೆ ಮಾಡುತ್ತಾ ಮಸೀದಿಯೊಳಗೆ ಪ್ರವೇಶಿಸಿ ಒಳಗಿರುವ ಎಲ್ಲವನ್ನೂ ಒಡೆದು ಹಾಕುತ್ತದೆ. ಮಸೀದಿಯ ಕೆಲವು ಭಾಗಗಳಿಗೆ ಹಾನಿಯಾಗಿದ್ದು, ಅಲ್ಲಿ ಇರಿಸಲಾಗಿದ್ದ ಪುಸ್ತಕಗಳು ಮತ್ತು ಇತರ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಮಸೀದಿಯ ಹೊರಗೆ ನಿಲ್ಲಿಸಿದ್ದ ವಾಹನವನ್ನು ಧ್ವಂಸಗೊಳಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ.

ಈ ದಾಳಿಯಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಇಮ್ರಾನ್ ಸನದಿ ಆಗ್ರಹಿಸಿದ್ದಾರೆ. ಈ ಕುರಿತು ಅವರು, “ಮಸೀದಿಯನ್ನು ಧ್ವಂಸ ಗೊಳಿಸುವುದರ ಜೊತೆಗೆ ಮುಸ್ಲಿಂ ಜನರ ಮೇಲೂ ದಾಳಿ ಮಾಡಲಾಗಿದೆ. ಇದರಲ್ಲಿ 40 ಮುಸ್ಲಿಮರು ಮತ್ತು 6 ವರ್ಷದ ಮಗು ಬಾಧಿತವಾಗಿದೆ. ಆದರೆ, ಯಾವುದೇ ಪ್ರಾಣ ಹಾನಿಯಾಗಿಲ್ಲ. ಸಾಮಾನ್ಯವಾಗಿ ಈ ದಾಳಿಯಲ್ಲಿ ಮುಸ್ಲಿಮರನ್ನು ಗುರಿಯಾಗಿಸಲಾಗಿತ್ತು” ಎಂದು ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಮುಸ್ಲಿಂ ಸಂಘಟನೆಗಳು ಜಮಾಯಿಸಿ ಪ್ರತಿಭಟನೆ ನಡೆಸಿವೆ. ಅದರಂತೆ ಸದರಿ ಪ್ರದೇಶದಲ್ಲಿ ಪೊಲೀಸ್ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಈ ಕುರಿತು ಕೊಲ್ಹಾಪುರ ಪೊಲೀಸ್ ವರಿಷ್ಠಾಧಿಕಾರಿ ಮಹೇಂದ್ರ ಪಂಡಿತ್ ಮಾತನಾಡಿ, “ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸ್ಥಳದಲ್ಲಿ ಪೊಲೀಸ್ ಪಡೆಗಳನ್ನು ಕೇಂದ್ರೀಕರಿಸಲಾಗಿದೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದ್ದು, ತನಿಖೆ ನಡೆಸುತ್ತಿದ್ದೇವೆ” ಎಂದು ಹೇಳಿದ್ದಾರೆ.

ಗಜಾಪುರ ಗ್ರಾಮದಿಂದ ವಿಶಾಲಗಡ ಕೋಟೆಯವರೆಗೆ ಮತು ಕೋಟೆಯ ತಪ್ಪಲಿನಲ್ಲಿರುವ ಅತಿಕ್ರಮಣಗಳನ್ನು ತೆರವುಗೊಳಿಸುವಂತೆ ಹಾಗೂ ಪ್ರಾಣಿ ಹಿಂಸೆಯನ್ನು ನಿಷೇಧಿಸುವಂತೆ ಆಗ್ರಹಿಸಿ ಹಿಂದುತ್ವ ಸಂಘಟನೆಗಳು ಅಲ್ಲಿ ಪ್ರತಿಭಟನೆ ನಡೆಸಿವೆ. ಇದಾದ ಬಳಿಕವೇ ಆ ಗುಂಪು ಮಸೀದಿ ಮೇಲೆ ದಾಳಿ ನಡೆಸಿವೆ ಎಂದು ಮುಸ್ಲಿಂ ಜನರು ದೂರಿದ್ದಾರೆ. ಇದರ ಹಿಂದೆ ರಾಜ್ಯಸಭಾ ಮಾಜಿ ಸಂಸದ ಸಂಭಾಜಿರಾಜೇ ಛತ್ರಪತಿ ಕೂಡ ಇದ್ದಾರೆ ಎನ್ನಲಾಗುತ್ತಿದೆ.

ಹೈದರಾಬಾದ್ ಸಂಸದ ಓವೈಸಿ ಈ ಮಸೀದಿ ಧ್ವಂಸದ ವಿಡಿಯೋವನ್ನು ತಮ್ಮ ಎಕ್ಸ್ ಪೇಜ್ ನಲ್ಲಿ ಶೇರ್ ಮಾಡಿ ಖಂಡಿಸಿದ್ದಾರೆ. ದಾಳಿಕೋರರ ವಿರುದ್ಧ ಮಹಾರಾಷ್ಟ್ರ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಡಿಸೆಂಬರ್ 6, 1992 ರಂದು ಬಾಬರಿ ಮಸೀದಿ ಧ್ವಂಸದಂತಹ ಘಟನೆ ಮತ್ತೆ ಸಂಭವಿಸಿದೆ” ಎಂದು ಅವರು ಹೇಳಿದ್ದಾರೆ.