ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
News Archives » Page 11 of 11 » Dynamic Leader
October 23, 2024
Home Posts tagged News (Page 11)
ಕ್ರೈಂ ರಿಪೋರ್ಟ್ಸ್

ತಿರುಪತಿ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಭಕ್ತಾಧಿಗಳು ಮುಗಿ ಬೀಳುತ್ತಿದ್ದಾರೆ. ದರ್ಶನ ಪಡೆದು ಸುಸ್ತಾಗಿ ಬರುವ ಭಕ್ತಾಧಿಗಳು, ಲಡ್ಡು ಕೌಂಟರ್ ಗಳಲ್ಲಿ ಬಹಳ ಹೊತ್ತು ಕಾದು ಲಾಡನ್ನು ಪಡೆಯಬೇಕಾದ ಪರಿಸ್ಥಿತಿಯಿದೆ. ಇದನ್ನು ಬಳಸಿಕೊಂಡು ಹೆಚ್ಚುವರಿ ಬೆಲೆಗೆ ಲಾಡುಗಳನ್ನು ಹೊರಗೆ ಮಾರಾಟ ಮಾಡಲಾಗುತ್ತಿದೆ.

ಲಡ್ಡು ತಯಾರಿಸುವ ಘಟಕದಿಂದ ಟ್ರೇಗಳಲ್ಲಿ ಲಡ್ಡುಗಳನ್ನು ಜೋಡಿಸಿ, ಕನ್ವೇಯರ್ ಬೆಲ್ಟ್ ಮೂಲಕ ಪ್ರಸಾದ ಮಾರಾಟ ಕೌಂಟರ್‌ ಬಳಿ ಸಾಗಿಸಲಾಗುತ್ತದೆ. ಅಲ್ಲಿಂದ ಟ್ರಾಲಿಗಳನ್ನು ಬಳಸಿ ಪ್ರಸಾದ ಕೌಂಟರ್‌ಗಳಿಗೆ ಲಡ್ಡುಗಳನ್ನು ತೆಗೆದುಕೊಂಡು ಹೋಗುತ್ತಾರೆ.

ಈ ಕೆಲಸಕ್ಕೆ ನಿಯೋಜನೆಗೊಂಡಿರುವ ನೌಕರರು, ಮಾರ್ಗ ಮಧ್ಯೆ ಲಡ್ಡುಗಳನ್ನು ಕದ್ದು, ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎಂಬ ಗೌಪ್ಯ ಮಾಹಿತಿಯು ದೇವಸ್ತಾನದ ವಿಜಿಲೆನ್ಸ್ ಅಧಿಕಾರಿಗಳಿಗೆ ಲಭಿಸಿತು. ಮಾಹಿತಿ ಮೇರೆಗೆ ದೇವಸ್ಥಾನದ ವಿಜಿಲೆನ್ಸ್ ಅಧಿಕಾರಿಗಳು ಲಡ್ಡು ಸಾಗಾಟದ ಮೇಲೆ ನಿಗಾ ವಹಿಸಿದ್ದರು.

ಆ ವೇಳೆ ದೇವಸ್ಥಾನದ ಐವರು ನೌಕರರು 15 ಟ್ರೇಗಳಲ್ಲಿ ಇಟ್ಟಿದ್ದ 750 ಲಾಡುಗಳನ್ನು ಕದ್ದು, ತೆಗೆದುಕೊಂಡು ಹೋಗುವುದನ್ನು ಕಂಡ ವಿಜಿಲೆನ್ಸ್ ಅಧಿಕಾರಿಗಳು ಅವರನ್ನು ಸುತ್ತುವರಿದು ಹಿಡಿದರು. ಅದಲ್ಲದೇ ಈ ಲಾಡು ಖದೀಮರು ಇದುವರೆಗೂ 35 ಸಾವಿರ ಲಡ್ಡುಗಳನ್ನು ಕದ್ದು ಹೆಚ್ಚುವರಿ ಬೆಲೆಗೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.

ದೇವಸ್ಥಾನದ 5 ಜನ ನೌಕರರನ್ನು ಬಂಧಿಸಿರುವ ವಿಜಿಲೆನ್ಸ್ ಅಧಿಕಾರಿಗಳು, ಈ ಘಟನೆಯಲ್ಲಿ ಇನ್ನು ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ರಾಜಕೀಯ

ಬೆಂಗಳೂರು: ಕೆಪಿಸಿಸಿ ಕಚೇರಿಯ ಇಂದಿರಾ ಗಾಂಧಿ ಸಭಾ ಭವನದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆದಿದ್ದು, ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.  ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಹೆಸರನ್ನು ಪ್ರಸ್ತಾಪಿಸಿದರು. ಇದಕ್ಕೆ ಶಾಸಕರೆಲ್ಲರೂ ಸಹಮತ ಸೂಚಿಸಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದರು.

ಕೇವಲ 25 ನಿಮಿಷ ಸಭೆ ನಡೆಸಲಾಯಿತು. ಇಂದು ನಡೆದ ಸಿಎಲ್‌ಪಿ ಸಭೆಯಲ್ಲಿ ಎಐಸಿಸಿ ವೀಕ್ಷಕರಾದ ಸುಶೀಲ್ ಕುಮಾರ್​ ಶಿಂಧೆ, ಜಿತೇಂದ್ರ ಸಿಂಗ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌  ಹಾಗೂ ನೂತನವಾಗಿ ಆಯ್ಕೆಯಾಗಿದ್ದ ಶಾಸಕರು ಭಾಗಿಯಾಗಿದ್ದರು. ಶಾಸಕರು ಬಂದ ಇಂದಿರಾಗಾಂಧಿ ಸಭಾಂಗಣದ ದ್ವಾರದಿಂದ ಸಿದ್ದರಾಮಯ್ಯ ಪ್ರವೇಶ ಮಾಡಿದರು. ಡಿಕೆಶಿ ಆಗಮನಕ್ಕೆ ಪೊಲೀಸರು ಬ್ಯಾರಿಗೇಡ್ ಹಾಕಿ ಪ್ರತ್ಯೇಕ ವ್ಯವಸ್ಥೆ ಮಾಡಿದ್ದರು.

“ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ನನ್ನನ್ನು ಆಯ್ಕೆ ಮಾಡಿದ ಶಾಸಕ ಮಿತ್ರರೆಲ್ಲರಿಗೂ ತುಂಬುಹೃದಯದ ಕೃತಜ್ಞತೆಗಳು. ನನ್ನ ಪ್ರಕಾರ ಪ್ರತಿಯೊಬ್ಬ ಶಾಸಕರು ಕೂಡಾ ನಾಯಕರು. ಈ ಸಾಮೂಹಿಕ ನಾಯಕತ್ವದ ಮೂಲಕವೇ ನವಕರ್ನಾಟಕವನ್ನು ಕಟ್ಟೋಣ. ರಾಜ್ಯದ ಜನತೆಯ ನಿರೀಕ್ಷೆಗಳನ್ನು ಸಾಕಾರಗೊಳಿಸೋಣ” ಎಂದು ಸಭೆಯ ನಂತರ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.  

ನಾಳೆ ಬೆಳಗ್ಗೆ 9 ಗಂಟೆಗೆ ಸಿದ್ದರಾಮಯ್ಯ ಅವರು ಸಂಭಾವ್ಯ ಸಚಿವರ ಪಟ್ಟಿ ಜತೆ ದೆಹಲಿಗೆ ತೆರಳಲಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಅನುಮೋದನೆ ಪಡೆದು ನಂತರ ಸಂಪುಟ ರಚನೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಸಿನಿಮಾ

ಐಶ್ವರ್ಯಾ ರಜನಿಕಾಂತ್ ಸದ್ಯ ‘ಲಾಲ್ ಸಲಾಂ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಟ ರಜನಿಕಾಂತ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಲೈಕಾ ನಿರ್ಮಾಣದ ಈ ಚಿತ್ರಕ್ಕೆ ಎ.ಆರ್.ರಹಮಾನ್‌ ಸಂಗೀತ ಸಂಯೋಜಿಸಿದ್ದಾರೆ.

ನಟ ರಜನೀಕಾಂತ್ ಹಾಗೂ ಮಾಜಿ ಕ್ರಿಕಟಿಗ ಕಪಿಲ್ ದೇವ್

ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ‘ಲಾಲ್ ಸಲಾಂ’ ಚಿತ್ರದಲ್ಲಿ ಮೊಯ್ದೀನ್ ಭಾಯ್ ಪಾತ್ರವನ್ನು ನಟ ರಜನಿಕಾಂತ್ ಮಾಡಲಿದ್ದಾರೆ ಎಂದು ಚಿತ್ರತಂಡ ಪ್ರಕಟಿಸಿತ್ತು. ಇತ್ತೀಚೆಗಷ್ಟೇ ನಟ ರಜನಿಕಾಂತ್ ಅವರು ‘ಲಾಲ್ ಸಲಾಂ’ ಚಿತ್ರೀಕರಣಕ್ಕಾಗಿ ಮುಂಬೈಗೆ ತೆರಳಿದ್ದರು.

ಈ ಸಂದರ್ಭದಲ್ಲಿ ನಟ ರಜನಿಕಾಂತ್ ಅವರು ‘ಲಾಲ್ ಸಲಾಂ’ ಚಿತ್ರದ ಹೊಸ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಅದರಂತೆ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ ಎಂಬ ವಿಷಯವನ್ನು ರಜನಿಕಾಂತ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದಾರೆ. “ಮೊದಲ ಬಾರಿಗೆ ವಿಶ್ವಕಪ್ ಗೆಲ್ಲುವ ಮೂಲಕ ಭಾರತವನ್ನು ಹೆಮ್ಮೆಪಡುವಂತೆ ಮಾಡಿದ ಮಹಾನ್, ಗೌರವಾನ್ವಿತ ಮತ್ತು ಅದ್ಭುತ ವ್ಯಕ್ತಿಯಾದ ಕಪಿಲ್ ದೇವ್‌ಜಿ ಅವರೊಂದಿಗೆ ಕೆಲಸ ಮಾಡುವುದು ನನಗೆ ಸಂತೋಷವಾಗಿದೆ” ಎಂದು ಅವರು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಇದೀಗ ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ಮೂಡಿಸಿದೆ.

ವಿದೇಶ

ನ್ಯೂಯಾರ್ಕ್: 1100 ವರ್ಷಗಳಷ್ಟು ಹಳೆಯದಾದ ಹೀಬ್ರೂ ಬೈಬಲ್ ಅನ್ನು 9ನೇ ಶತಮಾನದ ಕೊನೆಯಲ್ಲಿ ಮತ್ತು 10ನೇ ಶತಮಾನದ ಆರಂಭದಲ್ಲಿ ಬರೆಯಲಾಗಿದೆ.

ಇದು ಪ್ರಪಂಚದ ಅತ್ಯಂತ ಹಳೆಯ ಬೈಬಲ್ ಹಸ್ತಪ್ರತಿಗಳಲ್ಲಿ ಒಂದಾಗಿದೆ. ಬೈಬಲ್ ಅನ್ನು ರೊಮೇನಿಯಾದ ಮಾಜಿ ಅಮೆರಿಕ ರಾಯಭಾರಿ ಆಲ್ಫ್ರೆಡ್ ಮೋಸೆಸ್ ಖರೀದಿಸಿದ್ದರು. ಈ ಹೀಬ್ರೂ ಬೈಬಲ್ ಅನ್ನು ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಹರಾಜು ಕೇಂದ್ರದಲ್ಲಿ ಹರಾಜು ಮಾಡಲಾಯಿತು. ಎರಡು ಕಂಪನಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತು.

4 ನಿಮಿಷಗಳ ಹರಾಜಿನ ನಂತರ, ಹೀಬ್ರೂ ಬೈಬಲ್ ಅನ್ನು ಸೋಥೆಬಿಸ್ ಸಂಸ್ಥೆ 38.1 ಮಿಲಿಯನ್‌ಗೆ ಖರೀದಿಸಿತು (ಭಾರತೀಯ ಕರೆನ್ಸಿಯಲ್ಲಿ ರೂ.313 ಕೋಟಿ). ಇಸ್ರೇಲ್‌ನ ಟೆಲ್ ಅವಿವ್‌ನಲ್ಲಿರುವ ಯಹೂದಿ ಮ್ಯೂಸಿಯಂಗೆ ಬೈಬಲ್ ಅನ್ನು ದಾನ ಮಾಡಲಾಗುವುದು ಎಂದು ಸೋಥೆಬಿಸ್ ಸಂಸ್ಥೆ ತಿಳಿಸಿದೆ.

ಮಾಜಿ ಅಮೆರಿಕ ರಾಯಭಾರಿ ಮೋಸೆಸ್ ಅವರು, ‘ಹೀಬ್ರೂ ಬೈಬಲ್ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದೆ. ಇದು ಪಾಶ್ಚಿಮಾತ್ಯ ನಾಗರಿಕತೆಯ ಅಡಿಪಾಯವಾಗಿದೆ. ಇದು ಯಹೂದಿ ಜನರಿಗೆ ಸೇರಿದ್ದು ಎಂದು ತಿಳಿದು ನನಗೆ ಸಂತೋಷವಾಗಿದೆ’ ಎಂದು ಹೇಳಿದರು.

1994ರಲ್ಲಿ, ಲಿಯೊನಾರ್ಡೊ ಡಾ ವಿನ್ಸಿಯ ಕೋಡೆಕ್ಸ್ ಲೀಸೆಸ್ಟರ್ ಹಸ್ತಪ್ರತಿ 30.8 ಮಿಲಿಯನ್‌ ಡಾಲರ್‌ಗೆ ಮಾರಾಟವಾಯಿತು. ಹೀಬ್ರೂ ಬೈಬಲ್ ಅದನ್ನು ತಳ್ಳಿಹಾಕಿದೆ. ಇದು ಇದುವರೆಗೆ ಹರಾಜಿನಲ್ಲಿ ಮಾರಾಟವಾದ ಅತ್ಯಂತ ಮೌಲ್ಯಯುತವಾದ ಹಸ್ತಪ್ರತಿಯಾಗಿದೆ.

ವಿದೇಶ

ವಾಷಿಂಗ್ಟನ್: ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದಲ್ಲಿ ಬಂಧಿಸಲಾಗಿದ್ದ ಉಗ್ರ ತಹವ್ವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ನ್ಯಾಯಾಲಯವು ಅನುಮತಿ ನೀಡಿದೆ. 2008ರಲ್ಲಿ ಮುಂಬೈನಲ್ಲಿ ನಡೆದ ಉಗ್ರರ ದಾಳಿಯಲ್ಲಿ 166 ಮಂದಿ ಸಾವನ್ನಪ್ಪಿದ್ದರು. ದಾಳಿಯ ಪ್ರಮುಖ ಶಂಕಿತ ಡೇವಿಡ್ ಹೆಡ್ಲಿಯನ್ನು ಅಮೆರಿಕಾದಲ್ಲಿ ಬಂಧಿಸಲಾಗಿತ್ತು. ಆತನು ಈಗ 35 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.

ಡೇವಿಡ್ ಹೆಡ್ಲಿ

ಆತನ ಸ್ನೇಹಿತ ಮತ್ತು ಸಹ-ಸಂಚುಕೋರ ಪಾಕಿಸ್ತಾನ ಮೂಲದವನಾಗಿದ್ದು ಕೆನಡಾದಲ್ಲಿ ನೆಲಸಿದ್ದ ಉದ್ಯಮಿ ತಹವ್ವೂರ್ ರಾಣಾವನ್ನು 2020ರಲ್ಲಿ ಅಮೆರಿಕಾದಲ್ಲಿ ಬಂಧಿಸಲಾಗಿತ್ತು. ದಾಳಿಯಲ್ಲಿ ಆತನ ಪಾತ್ರದ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆಯನ್ನು ನಡೆಸುತ್ತಿದೆ. ಆತನನ್ನು ವಾಂಟೆಡ್ ಕ್ರಿಮಿನಲ್ ಎಂದು ಘೋಷಿಸಿ, ಹಸ್ತಾಂತರಿಸುವಂತೆ ಕೋರಿ ಸಿಬಿಐ ಅಮೆರಿಕದ ಚಿಕಾಗೋ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿತು.

ಮುಂಬೈ ದಾಳಿ

ಲಾಸ್ ಏಂಜಲೀಸ್ ಕೇಂದ್ರ ಜಿಲ್ಲಾ ನ್ಯಾಯಾಧೀಶೆ ಜಾಕ್ವೆಲಿನ್ ಸೂಲ್ಜಿಯನ್ ಅವರು ಮೇ 16 ರಂದು ಹೊರಡಿಸಿದ ಆದೇಶದಲ್ಲಿ, “2008ರ ಮುಂಬೈ ಭಯೋತ್ಪಾದನಾ ದಾಳಿಯ ಶಂಕಿತ ತಹವ್ವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಬಹುದು. ಅವರು ಆರೋಪಿಸಲಾದ ಅಪರಾಧಗಳಿಗಾಗಿ ಅವರನ್ನು ಹಸ್ತಾಂತರಿಸಲು ಆದೇಶಿಸಲಾಗಿದೆ” ಎಂದು ತೀರ್ಪನ್ನು ನೀಡಿದ್ದಾರೆ.

ದೇಶ

ನವದೆಹಲಿ: ಜಲ್ಲಿಕಟ್ಟು, ಕಂಬಾಲಾ ಸೇರಿದಂತೆ ಗೂಳಿಗಳಿಂದ ನಡೆಸುವ ಕ್ರೀಡೆಗೆ ಅವಕಾಶ ನೀಡಿರುವ ಕಾನೂನಿನ ವಿರುದ್ಧ ಪ್ರಾಣಿ ದಯಾ ಸಂಘಟನೆಗಳ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆಯನ್ನು ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ನೇತೃತ್ವದ ಐವರು ಸದಸ್ಯರ ರಾಜಕೀಯ ಸಾಂವಿಧಾನಿಕ ಪೀಠ ನಡೆಸಿತು.

ಪ್ರಕರಣದ ವಿಚಾರಣೆ ವೇಳೆ ಪ್ರಾಣಿ ದಯಾ ಸಂಘಟನೆಗಳು ‘ಜಲ್ಲಿಕಟ್ಟು ಸ್ಪರ್ಧೆ ವೇಳೆ ಗೂಳಿಗಳಿಗೆ ಚಿತ್ರಹಿಂಸೆ ನೀಡಲಾಗುತ್ತಿದೆ. ಮತ್ತು ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಗೂಳಿಗಳನ್ನು ಒತ್ತಾಯಿಸಲಾಗುತ್ತಿದೆ’ ಎಂದು ವಾದ ಮಂಡಿಸಿದ್ದರು. ನಂತರ ವಾದ ಮಂಡಿಸಿದ ತಮಿಳುನಾಡು ಸರ್ಕಾರ, ‘ಜಲ್ಲಿಕಟ್ಟು ತಮಿಳರ ಸಾಂಸ್ಕೃತಿಕ ವಿದ್ಯಮಾನವಾಗಿದೆ. ಸಂಪ್ರದಾಯವು ಪೂಜೆಯ ಅಂಶಗಳೊಂದಿಗೆ ಸಂಬಂಧಿಸಿದೆ. ಈ ಸಂಬಂಧ ತಮಿಳುನಾಡು ಸರ್ಕಾರ ತಂದಿರುವ ಕಾನೂನಿಗೆ ರಾಷ್ಟ್ರಪತಿಗಳೂ ಅನುಮೋದನೆ ನೀಡಿರುವುದರಿಂದ ಪ್ರಾಣಿ ದಯಾ ಸಂಘಟನೆಗಳ ಅರ್ಜಿಗಳನ್ನು ವಜಾಗೊಳಿಸಬೇಕು’ ಎಂದು ತಮಿಳುನಾಡು ಸರ್ಕಾರ ವಾದ ಮಂಡಿಸಿತು.

ಎಲ್ಲರ ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ ನ್ಯಾಯಮೂರ್ತಿ ಕೆ.ಎನ್.ಜೋಸೆಫ್ ನೇತೃತ್ವದ ಸಾಂವಿಧಾನಿಕ ಪೀಠ ಇಂದು ತೀರ್ಪುನ್ನು ನೀಡಿದೆ. ಅದರಂತೆ ಜಲ್ಲಿಕಟ್ಟು ನಿಷೇಧಕ್ಕೆ ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ‘ಜಲ್ಲಿಕಟ್ಟು ಕುರಿತು ತಮಿಳುನಾಡು ಸರ್ಕಾರ ಸಲ್ಲಿಸಿರುವ ದಾಖಲೆಗಳು ತೃಪ್ತಿಕರವಾಗಿವೆ. ಜಲ್ಲಿಕಟ್ಟು ತಮಿಳುನಾಡಿನ ಸಂಸ್ಕೃತಿಯ ಅವಿಭಾಜ್ಯ ಅಂಗ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ’ ಎಂದು ಹೇಳಿದೆ.