ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
PTCL Act Archives » Dynamic Leader
November 22, 2024
Home Posts tagged PTCL Act
ರಾಜ್ಯ

ಬೆಂಗಳೂರು: ಪಿಟಿಸಿಎಲ್ ಕಾಯ್ದೆಗೆ ಕಾಲಮಿತಿ ಅನ್ವಯಿಸುವುದಿಲ್ಲ ಎಂದು ಕಾಯ್ದೆಯಲ್ಲಿ ತಿದ್ದುಪಡಿ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿ ಜನವರಿ 2 ರಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಆಹೋರಾತ್ರಿ ಧರಣಿ ಸತ್ಯಾಗ್ರಹ ನಡೆಯುತ್ತಿದೆ. 67 ದಿನಗಳಿಂದ ಧರಣಿ ಮುಂದುವರಿಯುತ್ತಿದ್ದರೂ ಸರ್ಕಾರ ಕ್ಯಾರೇ ಮಾಡುತ್ತಿಲ್ಲ. ಈ ಹೋರಾಟ ಸುಮಾರು 4 ವರ್ಷಗಳಿಂದ ವಿವಿಧ ರೂಪಗಳಲ್ಲಿ ನಡೆದುಕೊಂಡು ಬಂದಿರುತ್ತದೆ. ಈ ಕಾಯ್ದೆಗೆ ಸಂಬಂಧಪಟ್ಟಂತೆ ನಿಕ್ಕಂಟಿ ರಾಮಲಕ್ಷ್ಮಿ V/S ಕರ್ನಾಟಕ ರಾಜ್ಯ ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಇಟ್ಟುಕೊಂಡು ಎಲ್ಲಾ ನ್ಯಾಯಾಲಯಗಳು ಕಾಯ್ದೆಗೆ ವಿರುದ್ಧವಾಗಿ ಆದೇಶ ನೀಡುತ್ತಿವೆ. ಇದರಿಂದ ಎಸ್.ಸಿ/ಎಸ್.ಟಿ ಸಮುದಾಯದ ಲಕ್ಷಾಂತರ ಕುಟುಂಬಗಳು ಭೂಮಿ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಸುಪ್ರೀಂಕೋರ್ಟ್ ಈ ಹಿಂದೆ ಮಂಚೇಗೌಡ V/S ಕರ್ನಾಟಕ ರಾಜ್ಯ ಮತ್ತು ಹಲವರು ಹೂಡಿದ್ದ ಪ್ರಕರಣಗಳಲ್ಲಿ ‘ವಿಶೇಷ ಕಾಯ್ದೆಗಳಿಗೆ ಕಾಲಮಿತಿ ಅನ್ವಯಿಸುವುದಿಲ್ಲ’ ಎಂದು ಆದೇಶ ಮಾಡಿದ್ದರೂ ಸಹ ಕಾಯ್ದೆಯ ಪರವಾಗಿ ಆದೇಶ ಮಾಡುತ್ತಿಲ್ಲ.

ಸ್ವಾಮೀಜಿಗಳು ಮತ್ತು ದಲಿತ ಮುಖಂಡರುಗಳಿಂದ ಪತ್ರಿಕಾ ಘೋಷ್ಠಿ

PTCL ಕಾಯ್ದೆ ವಿಶೇಷ ಕಾಯ್ದೆಯಾಗಿರುವುದರಿಂದ ಈ ಕಾಯ್ದೆಗೆ ಕಾಲಮಿತಿ ಅನ್ವಯಿಸುವುದಿಲ್ಲ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯ್ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಕಳೆದ ಬಜೆಟ್ ನಲ್ಲಿ PTCL ಕಾಯ್ದೆಗೆ ತಿದ್ದುಪಡಿ ಮಾಡುತ್ತೆವೆ ಎಂದು ಘೋಷಣೆ ಮಾಡಿದ್ದರು. ಆದರೆ ಈ ವಿಚಾರದ ಬಗ್ಗೆ ಇವತ್ತಿನವರೆಗೆ ಸರ್ಕಾರದಿಂದ ಯಾವುದೇ ಮಾಹಿತಿಯಿಲ್ಲ. ವಚನ ಭ್ರಷ್ಟವಾದ ಈ ಸರ್ಕಾರ, ವಿಧಾನ ಸಭೆಯಲ್ಲಿ ನೀಡಿದ ವಾಗ್ದಾನವನ್ನು ಮರೆತು, ಮುಂದಿನ ಚುನಾವಣೆಗೆ ಸಜ್ಜಾಗುತ್ತಿದೆ. ಶೀಘ್ರವೇ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಲಕ್ಷಣಗಳು ಕಂಡುಬರುತ್ತಿರುವ ಕಾರಣದಿಂದ ಮತ್ತು ಇದರಿಂದ ಎಸ್.ಸಿ / ಎಸ್.ಟಿ ಸಮುದಾಯಕ್ಕೆ ಬಾರಿ ಅನ್ಯಾಯವಾಗುವುದನ್ನು ತಡೆಗಟ್ಟುವ ಸಲುವಾಗಿ, ಮಾನ್ಯ ಮುಖ್ಯಮಂತ್ರಿಗಳು ಫೆಬ್ರವರಿ 17 ರಂದು ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಇಂದು ನಡೆಯಲಿರುವ ಸಚಿವ ಸಂಪುಟದಲ್ಲಿ PTCL ಕಾಯ್ದೆಗೆ ತಿದ್ದುಪಡಿ ಸುಗ್ರೀವಾಜ್ಞೆಯನ್ನು ಹೊರಡಿಸುವಂತೆ ಒತ್ತಾಯಿಸಲು ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ – ಕರ್ನಾಟಕ ವತಿಯಿಂದ ನೆನ್ನೆ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾ ಘೋಷ್ಠಿಯನ್ನು ಆಯೋಜಿಸಲಾಗಿತ್ತು.

ಪ್ರತಿಭಟನೆಯಲ್ಲಿ ಮಾವಳ್ಳಿ ಶಂಕರ್

ಪತ್ರಿಕಾ ಘೋಷ್ಠಿಯಲ್ಲಿ ಮೈಸೂರಿನ ಉರಿಲಿಂಗ ಪೆದ್ದಿಮಠದ ಪರಮಪೂಜ್ಯ ಶ್ರೀ.ಜ್ಞಾನಪ್ರಕಾಶ ಸ್ವಾಮೀಜಿ, ಚಿತ್ರದುರ್ಗದ ಹರಳಯ್ಯ ಗುರುಪೀಠದ ಪರಮಪೂಜ್ಯ ಶ್ರೀ.ಹರಳಯ್ಯ ಸ್ವಾಮೀಜಿ, ಚಿತ್ರದುರ್ಗದ ಸೇವಾಲಾಲ್ ಬಂಜಾರ ಗುರುಪೀಠದ ಪರಮಪೂಜ್ಯ ಶ್ರೀ.ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಡಿ.ಎಸ್.ಎಸ್ (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಡಿ.ಎಸ್.ಎಸ್. ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ, ಡಿ.ಎಸ್.ಎಸ್. (ಸಮನ್ವಯ) ರಾಜ್ಯ ಸಂಚಾಲಕ ಬಸವರಾಜ ಕೌತಾಳ, ಹೈಕೋರ್ಟ್ ವಕೀಲರು ಮತ್ತು ಬಿಪಿಎಸ್ ರಾಜ್ಯಾಧ್ಯಕ್ಷ ಹರಿರಾಮ್ ಹಾಗೂ ಪಿಟಿಸಿಎಲ್ ಭೂಮಿ ವಂಚಿತರ ಹೋರಾಟ ಸಮಿತಿಯ ಎಂ.ಹೆಚ್.ಮಂಜುನಾಥ ಮುಂತಾದವರು ಭಾಗವಹಿಸಿದ್ದರು.

ಪ್ರತಿಭಟನಾ ನಿರತರು

ಪತ್ರಿಕಾ ಘೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸ್ವಾಮೀಜಿಗಳು ಮತ್ತು ದಲಿತ ಮುಖಂಡರುಗಳು, “ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ PTCL ಕಾಯ್ದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಬೇಕು, ಚುನಾವಣೆ ಘೋಷಣೆಯಾದರೆ ಕಾಯ್ದೆಗೆ ತಿದ್ದುಪಡಿ ತರಲು ಆಗುವುದಿಲ್ಲ. ಇದರಿಂದ ದಲಿತ ಸಮುದಾಯಕ್ಕೆ ಬಾರಿ ಹಿನ್ನಡೆಯಾಗುತ್ತದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯ್ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಕಳೆದ ಬಜೆಟ್ ನಲ್ಲಿ PTCL ಕಾಯ್ದೆಗೆ ತಿದ್ದುಪಡಿ ಮಾಡುತ್ತೆವೆ ಎಂದು ಘೋಷಣೆ ಮಾಡಿದ್ದರು. ಸದನದಲ್ಲಿ ಮಾತು ಕೊಟ್ಟಂತೆ ಅದನ್ನು ಉಳಿಸಿಕೊಂಡು, ಸದನದ ಗೌರವವನ್ನು ಕಾಪಾಡಬೇಕು. ನಿರ್ಲಕ್ಷ್ಯ ಮಾಡಿದರೆ ಸಮುದಾಯದ ಸ್ವಾಮೀಜಿಗಳು ಮತ್ತು ದಲಿತ ಮುಖಂಡರಿಂದ 224 ಕ್ಷೇತ್ರದಲ್ಲೂ ಪತ್ರಿಕಾ ಘೋಷ್ಠಿಯನ್ನು ನಡೆಸಿ, ಮುಂದಿನ ಚುನಾವಣೆಯಲ್ಲಿ 224 ಕ್ಷೇತ್ರದಲ್ಲೂ ಬಿಜೆಪಿಗೆ ಮತ ಹಾಕದಂತೆ ಪ್ರಚಾರ ನಡೆಸಲಾಗುವುದು. ನಿರ್ಧಿಷ್ಟವಾಗಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್, ಕಂದಾಯ ಸಚಿವ ಆರ್.ಅಶೋಕ್, ಕಾನೂನು ಸಚಿವ ಮಾಧುಸ್ವಾಮಿಯ ವಿರುದ್ಧ ಮತ ಹಾಕದಂತೆ ಪ್ರಚಾರ ನಡೆಸಲಾಗುವುದು” ಎಂದು ಎಚ್ಚರಿಕೆಯನ್ನು ನೀಡಿದರು.