ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Raja Venkatappa Nayak Archives » Dynamic Leader
December 3, 2024
Home Posts tagged Raja Venkatappa Nayak
ರಾಜಕೀಯ

ವರದಿ: ರಾಮು ನೀರಮಾನ್ವಿ

ರಾಯಚೂರು: ರಾಯಚೂರು ಜಿಲ್ಲೆಯ ಮಾನ್ವಿ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಹಂಪಯ್ಯ ನಾಯಕ, ಜೆಡಿಎಸ್‌ನಿಂದ ರಾಜಾ ವೆಂಕಟಪ್ಪ ನಾಯಕ, ಬಿಜೆಪಿಯಿಂದ ಬಿ.ವಿ.ನಾಯಕ ಅಭ್ಯರ್ಥಿಗಳಾಗಿದ್ದಾರೆ. ಮೂರು ಪಕ್ಷಗಳ ನಡುವೆ ತೀವ್ರ ಪೈಪೋಟಿಯ ಮತಯಾಚನೆ ನೆಡೆದಿದೆ. ಮತ ಬೇಟೆಯಲ್ಲಿ ಮೂರು ಪಕ್ಷಗಳು ಬಿಸಿಲಿನಲ್ಲಿ ಬೆವರು ಹರಿಸುತ್ತಿದ್ದಾರೆ. ಮಾನ್ವಿ ನಗರದಲ್ಲಿ ಜೆಡಿಎಸ್ ಪ್ರಚಾರದಲ್ಲಿ ಮುಂದೆ ಇರುವುದು ಕಂಡು ಬಂದಿದೆ. ಕಾಂಗ್ರೆಸ್ ಬಿಜೆಪಿಗಿಂತ ಮೊದಲಿಗೆ ಜೆಡಿಎಸ್ ಚುನಾವಣೆ ಪ್ರಚಾರವನ್ನು ಕೈಗೊಂಡ ಕಾರಣ ಮತದಾರರನ್ನು ತನ್ನತ್ತ ಸೆಳೆಯಲು ಯಾಶಸ್ವಿಯಾಗಿದೆ. ಕ್ಷೇತ್ರದ ಹಳ್ಳಿಗಳಲ್ಲಿ ಜೆಡಿಎಸ್ ಪಕ್ಷದ ಅಬ್ಬರದ ಪ್ರಚಾರ ಮತ್ತು ಪಕ್ಷದ ಸೇರ್ಪಡೆ ಕಾರ್ಯಕ್ರಮಗಳು ಬರದಿಂದ ಸಾಗಿದ್ದು ಪಕ್ಷಕ್ಕೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ.

ಬಿಜೆಪಿಯೂ ಹಿಂದೆ ಬಿದ್ದಿಲ್ಲ. ಅದೂ ತನ್ನ ಪ್ರಯತ್ನವನ್ನು ಮಾಡುತ್ತಿದೆ. ಆದರೆ ಬೇರೆ ತಾಲ್ಲೂಕಿನಿಂದ ವಲಸೆ ಬಂದ ಕಾರಣ ಮತದಾರರನ್ನು ಸೆಳೆಯುವಲ್ಲಿ ಸಪಲವಾಗಿಲ್ಲ. ಕೆಲವು ಕಡೆ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾಗಿದ್ದು ಆ ಪಕ್ಷಕ್ಕೆ ಸ್ವಪ್ಲ ಬಲ ಹೆಚ್ಚಾಗಿದೆ. ಪಕ್ಷ ಸೇರ್ಪಡೆ ಬರದಿಂದ ಮುಂದುವರಿಯುತ್ತಿದೆ. ಇನ್ನೂ ಕಾಂಗ್ರೆಸ್ ಪಕ್ಷದ ನೆಡೆಯು ಮೋಡಮುಸುಕಿದ ವಾತಾವರಣ ಇದೆ. ಕೆಲವು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಹಾಗೂ ಜೆಡಿಎಸ್‌ಗೆ ಸೇರಿರುವುದರಿಂದ ಆ ಪಕ್ಷಕ್ಕೆ ಹಿನ್ನಡೆಯಾಗಿದ್ದರೂ ಎಂ.ಈರಣ್ಣ ಅವರ ಸೇರ್ಪಡೆಯಿಂದ ನಿಟ್ಟುಸಿರು ಬಿಡುವಂತೆ ಅಗಿದೆ. ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರ ಕೊರತೆ ಎದ್ದು ಕಾಣುತ್ತಿದೆ. ತಾಲ್ಲೂಕಿನ ದೊಡ್ಡ ದೊಡ್ಡ ಹಳ್ಳಿಗಳಲ್ಲಿ ಕೂಡಾ ಇದೇ ಪರಿಸ್ಥಿತಿ ಮುಂದುವರಿಯುತ್ತಿದೆ. ಕೆಲವು ಕಾರ್ಯಕರ್ತರು ಕಾಂಗ್ರೆಸ್ ನಾಯಕರ ಬಗ್ಗೆ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ. ಇದು ಹಗಲಿನಷ್ಟೆ ಸತ್ಯ.

ಜೆಡಿಎಸ್, ಬಿಜೆಪಿಯಲ್ಲಿ ಕಾರ್ಯಕರ್ತರು ಹೊಸ ಹುರುಪಿನಿಂದ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ಆದರೇ ಈ ರೀತಿಯ ವಾತಾವರಣ ಕಾಂಗ್ರೆಸ್‌ನಲ್ಲಿ ಕಂಡು ಬರುತ್ತಿಲ್ಲ. ಇದು ಆ ಪಕ್ಷಕ್ಕೆ ದೊಡ್ಡ ಹೊಡೆತವಾಗಿದೆ. ಚುನಾವಣೆಗೆ ಇನ್ನೂ ಕೇವಲ ಐದು ದಿನ ಬಾಕಿಯಿದ್ದರೂ ಕಾಂಗ್ರೆಸ್ ಕಾರ್ಯಕರ್ತರು ಮುಖ ಜೋತಾಕಿಕೊಂಡು ತಿರುಗಾಡುತ್ತಿದ್ದಾರೆ. ಹೀಗಿರುವಾಗ ಕಾಂಗ್ರೆಸ್‌ಗೆ ಇದೊಂದು ದೊಡ್ಡ ಹೊಡೆತ ಅಂದರೆ ಅತಿಶಯೋಕ್ತಿಯಲ್ಲ. ಒಟ್ಟಿನಲ್ಲಿ ಕಾಂಗ್ರೆಸ್ ಪುಟಿದೇಳಬೇಕಾದ ಪರಸ್ಥಿತಿ ಎದುರಾಗಿದೆ. ಅದರ ನಾಯಕರು ಇತ್ತ ಕಡೆ ಗಮನ ಹರಿಸುವರೇ ಎಂಬುದನ್ನು ಕಾದು ನೋಡಬೇಕು. ಅಂತು ಮಾನ್ವಿ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಚಾರದಲ್ಲಿ ಜೆಡಿಎಸ್ ಎಲ್ಲರಿಗಿಂತಲು ಒಂದು ಹೆಜ್ಜೆ ಮುಂದಿದೆ. ನಂತರ ಬಿಜೆಪಿ, ಅನಂತರ ಕಾಂಗ್ರೆಸ್ ಇದೆ ಎಂಬ ಸುದ್ದಿ ಕೇಳಿಬರುತ್ತಿದೆ. ಇದೇ ರೀತಿಯಲ್ಲಿ ಜೆಡಿಎಸ್ ಮುನ್ನೆಡೆದರೆ ಅದು ಗೆಲುವಿನ ದಡ ಸೇರುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇನ್ನೂ ಐದು ದಿನಗಳು ಚುನಾವಣೆಗೆ ಬಾಕಿ ಉಳಿದಿರುವುದರಿಂದ ಪಕ್ಷಗಳು ಯಾವ ತಂತ್ರಗಳನ್ನು ಅನುಸರಿಸುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

ರಾಜಕೀಯ

ವರದಿ: ರಾಮು ನೀರಮಾನ್ವಿ

ರಾಯಚೂರು: ರಾಯಚೂರು ಜಿಲ್ಲೆ, ಮಾನ್ವಿ ವಿಧಾನ ಸಭಾ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ರಾಜಕೀಯ ಚಿತ್ರಣ ಬದಲಾಗುತ್ತಲೇ ಇದೆ. ಕೊನೆಗೆ ಪಕ್ಷೇತರ ಅಭ್ಯರ್ಥಿ ಡಾ.ತನುಶ್ರಿ ಕೂಡಾ ತಮ್ಮ ನಾಮ ಪತ್ರವನ್ನು ಸಲ್ಲಿಸಿದ್ದಾರೆ. ಕಾಂಗ್ರೆಸ್, ಬಿಜೆಪಿ ತನ್ನ ಪಕ್ಷದಿಂದ ಚುನಾವಣೆಗೆ ನಿಲ್ಲಿಸಲು ಅಭ್ಯರ್ಥಿಗಳನ್ನು ಅಯ್ಕೆ ಮಾಡಿಕೊಂಡ ರೀತಿಯ ಬಗ್ಗೆ ಅನುಮಾನಗಳಿವೆ. ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಯ್ಕೆ ಮಾಡುವಲ್ಲಿ ಗಜ ಪ್ರಸವದಂತಾಗಿದೆ. ಆದರೆ ಕೊನೆ ಗಳಿಗೆಯಲ್ಲಿ ಹಿರಿಯ ಮುಖಂಡ ಮಾಜಿ ಶಾಸಕ ಹಂಪಯ್ಯ ನಾಯಕ ಅವರಿಗೆ ಕಾಂಗ್ರೆಸ್‌ ಟಿಕೆಟ್ ಕೊಟ್ಟಿದೆ. ಇದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಕಾರಣ, ಶರಣಯ್ಯ ನಾಯಕರಿಗೆ ಟಿಕೆಟ್ ಕೊಡ್ತಿವಿ ಅಂತ ಹೇಳಿ, ಅವರನ್ನು ಬಿಜೆಪಿಗೆ ರಾಜಿನಾಮೆ ಕೊಡಿಸಿ, ಬಿಜೆಪಿಯಿಂದ ಕಾಂಗ್ರೆಸ್ ಗೆ ಕರೆತಂದರು. ನಂತರ ಹಂಪಯ್ಯ ನಾಯಕ ಅವರಿಗೆ ಟಿಕೆಟ್ ನೀಡಿ, ಶರಣಯ್ಯ ನಾಯಕ ಅವರನ್ನು ಅತಂತ್ರದಲ್ಲಿ ಬಿಟ್ಟಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ಹಂಪಯ್ಯ ನಾಯಕ

 ಇದು ಕಾಂಗ್ರೆಸ್‌ನ ಕಥೆಯಾದರೆ, ಬಿಜೆಪಿಯಲ್ಲಿ ಬೇರೆಯದೆ ಆಟ ಇದೆ. ಮೊದಲಿಗೆ ಮಾನಪ್ಪ ನಾಯಕ, ಗಂಗಾಧರ ನಾಯಕ, ಇನ್ನಿತರ ಅಭ್ಯರ್ಥಿಗಳೆಲ್ಲ ಟಿಕೆಟ್‌ಗಾಗಿ ಹರಸಾಹಸ ಮಾಡಿದರೂ ಇವರೆಲ್ಲರನ್ನು ಕಡೆಗಣಿಸಿ ಪಕ್ಕದ ದೇವದುರ್ಗ ತಾಲ್ಲೂಕಿನ ರಾಯಚೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಬಿ.ವಿ.ನಾಯಕರಿಗೆ ಟಿಕೆಟ್ ನೀಡಿದ್ದಾರೆ. ಇದರಿಂದ ಸ್ಥಳೀಯ ಬಿಜೆಪಿ ಮುಖಂಡರಿಗೆ ಇರುಸುಮುರುಸಾಗಿದೆ. ಪ್ರಬಲವಾದ ಗಂಗಾಧರ ನಾಯಕರಿಗೆ ಟಿಕೆಟ್ ಕೈ ತಪ್ಪಿರುವುದು ಅವರ ಅಭಿಮಾನಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ‘ಸ್ಥಳೀಯರನ್ನು ಬಿಟ್ಟು ವಲಸೆ ಬಂದವರಿಗೆ ಟಿಕೆಟ್ ಕೊಟ್ಟರೆ ನಾವೇನು ಕತ್ತೆ ಕಾಯುವುದೇ? ಬಿಜೆಪಿ ಪಕ್ಷ ಬೆಳೆಸಲು ನಾವು ಬೇಕು; ಟಿಕೆಟ್ ಇನ್ನೊಬ್ಬರಿಗೆ ಕೊಟ್ಟರೆ ನಾವೇನು ಮಾಡಬೇಕು; ಅಂತಿದ್ದಾರೆ ಬಿಜೆಪಿಯ ಕಾರ್ಯಕರ್ತರು.

ಪಕ್ಷೇತರ ಅಭ್ಯರ್ಥಿ ಡಾ.ತನುಶ್ರಿ

ಕಾಂಗ್ರೆಸ್‌ನಿಂದ ವಲಸೆ ಬಂದವರಿಗೆ ಟಿಕೆಟ್ ಕೊಟ್ಟರೆ ನಾವೇನು ಮಾಡಬೇಕು. ನಮಗೂ ಶಕ್ತಿ ಇದೆ. ಚುನಾವಣೆ ಎದುರಿಸಲು ನಮಗೆ ತಾಕತ್ತು ಇಲ್ಲವಾದಲ್ಲಿ ಬೇರೆಯವರಿಗೆ ಟಿಕೆಟ್ ಕೊಡಬೇಕಾಗಿತ್ತು. ಮಾತೆತ್ತಿದರೆ ‘ಬಿಜೆಪಿ ಪಕ್ಷವು ಕಾರ್ಯಕರ್ತರಿಗೆ ಟಿಕೆಟ್ ಕೊಡುತ್ತದೆ’ ಎಂದು ಹೇಳುವ ಇವರು, ಗಂಗಾಧರ ನಾಯಕರಿಗೆ ಏಕೆ ಟಿಕೆಟ್ ಕೊಡಲಿಲ್ಲ ಅಂತ ಬಿಜೆಪಿ ಕಾರ್ಯಕರ್ತರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಿ.ವಿ.ನಾಯಕರ ತಂದೆ ನಾಲ್ಕು ಬಾರಿ ರಾಯಚೂರು ಲೋಕಸಭಾ ಸದಸ್ಯರಾಗಿದ್ದವರು. ಒಂದು ಬಾರಿ ಶಾಸಕರಾಗಿದ್ದರು. ಬಿ.ವಿ.ನಾಯಕರು ಒಂದು ಬಾರಿ ಸಂಸದರಾಗಿ ಅಯ್ಕೆ ಆದವರು, ಇನ್ನೊಬ್ಬ ಮಗ RDCC Bank Member. ಇಷ್ಟೆಲ್ಲ ಸ್ಥಳೀಯ ಮಟ್ಟದಲ್ಲಿ ಅಧಿಕಾರ ಅನುಭವಿಸಿದವರು ಈಗ ತನಗೆ ಕಾಂಗ್ರೆಸ್ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ರಾತ್ರೋರಾತ್ರಿ ಬಿಜೆಪಿಗೆ ವಲಸೆ ಹೋಗುವುದು ಸಮಂಜಸವಲ್ಲ.

ಮೇಲಾಗಿ ರಾಯಚೂರು ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಬಿ.ವಿ.ನಾಯಕರೇ ಅವರ ಪಕ್ಷದ ಅಭ್ಯರ್ಥಿಯಾದವರಿಗೆ ಟಿಕೆಟ್ (ಬಿ ಪಾರ್ಮ) ಕೊಡಬೇಕು ಅಂತದರಲ್ಲಿ, ‘ನನಗೆ ಟಿಕೆಟ್ ಸಿಗಲಿಲ್ಲ’ ಅಂತ ಬಿಜೆಪಿಗೆ ಹೋಗುವುದು ಯಾವ ನ್ಯಾಯ ಎಂದು ಅವರ ಕಾರ್ಯಕರ್ತರೆ ಕೇಳುತ್ತಿದ್ದಾರೆ. ಒಂದುಕಡೆ ದೇವದುರ್ಗದ ಶಿವನಗೌಡನ ರಾಜಕೀಯಕ್ಕೆ ಬಿ.ವಿ.ನಾಯಕ ತಲೆಬಾಗಿರುವ ಸುದ್ದಿಗಳು ಹೊರ ಬರುತ್ತಿದೆ. ಅಂದರೆ ಅಧಿಕಾರಕ್ಕಾಗಿ ನಾವು ಒಂದೇ ಪಕ್ಷದಲ್ಲಿ ಇದ್ದರೆ, ನಮಗೆ ಎದುರಾಳಿಗಳು ಯಾರು ಇರುವುದಿಲ್ಲ; ಎಲ್ಲರೂ ನಾವೆ, ನಮ್ಮ ಕುಟುಂಬದವರೇ ಅಧಿಕಾರದಲ್ಲಿ ಇರುತ್ತೇವೆ ಅನ್ನುವ ಮನೋಭಾವ ಹೊರಬಿದ್ದಿದೆ.

ಜೆಡಿಎಸ್ ಅಭ್ಯರ್ಥಿ ರಾಜ ವೆಂಕಟಪ್ಪ ನಾಯಕ

ಕಾಂಗ್ರೆಸ್‌ನಿಂದ ಕೆಲವು ಮರಿ ಪುಡಾರಿಗಳು, ಹತ್ತು ಓಟು ಹಾಕಿಸದವರು, ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋಗಿದ್ದಾರೆ ಎಂಬ ಸುದ್ದಿಕೂಡ ಹೊರಬಂದಿದೆ. ಇದರಿಂದ ಕಾಂಗ್ರೆಸ್‌ಗೆ ಏನು ದಕ್ಕೆಯಾಗುವುದಿಲ್ಲ ಅಂತಿದ್ದಾರೆ ಅವರ ಪಕ್ಷದ ಮುಖಂಡರುಗಳು. ಮಾನ್ವಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿರುವ ರಾಜ ವೆಂಕಟಪ್ಪ ನಾಯಕ ತಾಲೂಕಿನ ತುಂಬಾ ಬಿರುಸಿನಿಂದ ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. ಪ್ರತಿಯೊಂದು ಹಳ್ಳಿಗೂ ಬೇಟಿ ನೀಡಿ ಮತ ಬೇಟೆಯಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ಗಿಂತ ಜೆಡಿಎಸ್ ಚುನಾವಣಾ ಆರ್ಭಟ ಮುಗಿಲು ಮುಟ್ಟಿದೆ. ಆದರೆ ಮುಂದಿನ ದಿನಗಳಲ್ಲಿ ಯಾರ ಅರ್ಭಟ ಹೆಚ್ಚಾಗುತ್ತದೆ ಎಂಬುದನ್ನು ಕಾದು ನೋಡಿ.! ನಮ್ಮ ನಿಖರವಾದ ವರದಿಯನ್ನೂ ನೋಡಿ.!!

ರಾಜಕೀಯ

ವರದಿ: ರಾಮು, ನೀರಮಾನ್ವಿ

ಮಾನ್ವಿ: ರಾಯಚೂರು ಜಿಲ್ಲೆ, ಮಾನ್ವಿ ವಿಧಾನ ಸಭಾ ಕ್ಷೇತ್ರದ ಚುನಾವಣೆಯು ದಿನದಿಂದ ದಿನಕ್ಕೆ ಹಲವಾರು ರೀತಿಯ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಮಾನ್ವಿ ಕ್ಷೇತ್ರದಲ್ಲಿ, ಅಧಿಕಾರದ ಚುಕ್ಕಾಣಿ ಹಿಡಿಯಲು ಸದರಿ ಜನಾಂಗದಲ್ಲಿಯೇ ತೀವ್ರ ಪೈಪೋಟಿ ನೆಡೆಯುತ್ತಿದೆ. ಜೆಡಿಎಸ್ ನಿಂದ ಹಾಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರಿಗೆ ಈ ಬಾರಿಯೂ ಜೆಡಿಎಸ್ ಟಿಕೆಟ್ ನೀಡುವುದು ಖಚಿತವಾಗಿದೆ. ಅವರು ಮತ್ತೊಮ್ಮೆ ಆರಿಸಿ ಬರಲು ತೆರೆಮರೆಯಲ್ಲಿ ಕಸರತ್ತು ಮಾಡಿಕೊಂಡು ಬರುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯ ಪಂಚರತ್ನ ಯಾತ್ರೆಯ ಎಫೆಕ್ಟು ಇವರಿಗೆ ಕೈ ಕೊಡುವುದೇ ಎಂದು ಕಾದು ನೋಡೋಣ.

ಕಾಂಗ್ರೆಸ್ ನಲ್ಲಿ ಗೊಂದಲದ ವಾತಾವರಣ ಇದೆ. ಆ ಪಕ್ಷದಿಂದ ಜಿ.ಹಂಪಯ್ಯ ನಾಯಕ, ಶರಣಪ್ಪ ನಾಯಕ ಗುಡದಿನ್ನಿ, ರಾಜ ವಸಂತ್ ನಾಯಕ, ದೇವದುರ್ಗದ ಮಾಜಿ ಸಂಸದರಾದ ಬಿ.ವಿ.ನಾಯಕ ಮುಂತಾದವರು ತಮ್ಮದೇ ಆದ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಟಿಕೆಟ್ ಗಾಗಿ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಈ ಬಾರಿ ಕಾಂಗ್ರೆಸ್ ಯಾರಿಗೆ ಟಿಕೆಟ್ ನೀಡಲಿದೆ ಎಂಬ ಗುಟ್ಟನ್ನು ಬಿಟ್ಟುಕೊಡದೆ, ಆಕಾಂಕ್ಷಿಗಳನ್ನು ತುದಿಕಾಲಮೇಲೆ ನಿಲ್ಲುವಂತೆ ಮಾಡಿದೆ. ಬಿಜೆಪಿ ಪಕ್ಷದಲ್ಲಿ ಮಾಜಿ ಶಾಸಕರಾದ ಗಂಗಾಧರ ನಾಯಕ, ಮಾನಪ್ಪ ನಾಯಕ, ಮ್ಯಾಕಲ್ ಅಯ್ಯಪ್ಪ ನಾಯಕ ಸೇರಿದಂತೆ ಹಾಲಿ ಸಚಿವರಾದ ಶ್ರೀರಾಮುಲು ಹಾಗೂ ದೇವದುರ್ಗ ಶಾಸಕರಾದ ಶಿವನಗೌಡ ನಾಯಕ ಅವರು ಟಿಕೆಟ್ ಗಾಗಿ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅಮ್ ಅದ್ಮಿ ಪಕ್ಷದಿಂದ ರಾಜ ಶ್ಯಾಮ್ ಸುಂದರ್ ನಾಯಕ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ. ಇನ್ನು ಜನಾರ್ದನ ರೆಡ್ಡಿಯ ಕರ್ನಾಟಕ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯು ಕೂಡ ಕಣದಲ್ಲಿ ಇರಬಹುದು ಎಂದು ಹೇಳಲಾಗುತ್ತಿದೆ. ಅಲ್ಲದೆ ಕಳೆದ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿದ ಡಾ.ತನುಶ್ರೀ ಕೂಡ ಕಾಂಗ್ರೆಸ್ ಟಿಕೆಟ್ ಗಾಗಿ ಹರಸಾಹಸ ಪಡುತ್ತಿರುವುದು ಗುಟ್ಟಾಗಿ ಏನು ಉಳಿದಿಲ್ಲ. ಒಂದು ವೇಳೆ ಕಾಂಗ್ರೆಸ್ ಟಿಕೆಟ್ ಕೊಡದಿದ್ದರೆ ಹಿಂದಿನಂತೆ; ಮುಂದೆಯೂ ಪಕ್ಷೇತರರಾಗಿ ಸ್ಪರ್ಧಿಸುವುಸು ನಿಶ್ಚಿತ.

ಈ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿ ಯಾರು?
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಹಂಪಯ್ಯ ನಾಯಕ, ಬಿಜೆಪಿಯಿಂದ ಶರಣಪ್ಪ ನಾಯಕ, ಜೆಡಿಎಸ್ ನಿಂದ ರಾಜಾ ವೆಂಕಟಪ್ಪ ನಾಯಕ, ಪಕ್ಷೇತರ ಅಭ್ಯರ್ಥಿ ಎಂ.ಈರಣ್ಣನವರ ಸೊಸೆ ಡಾ.ತನುಶ್ರೀ ಅವರ ಮದ್ಯ ತೀವ್ರ ಸ್ವರೂಪದ ಪೈಪೋಟಿ ಇತ್ತು. ಆದರೆ ಎಲ್ಲವನ್ನು ಹಿಮ್ಮೆಟ್ಟಿಸಿ ಗೆದ್ದ ನಿಂತವರು ಜೆಡಿಎಸ್ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ. ಆದರೇ ಆಗಿನ ಪರಿಸ್ಥಿತಿಯೇ ಬೇರೆಯದಾಗಿತ್ತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಚುನಾವಣೆಯಲ್ಲಿ ಎಂ.ಈರಣ್ಣನವರು ತಮ್ಮ ಮಡದಿಯನ್ನು ಅಧ್ಯಕ್ಷೆಯಾಗಿ ಮಾಡಲು ಶತಃ ಪ್ರಯತ್ನ ಮಾಡುತ್ತಿರುವ ಸಂದರ್ಭದಲ್ಲಿ, ರಾಯಚೂರು ಜಿಲ್ಲಾ ಮುಖಂಡರು ಅದಕ್ಕೆ ಎಳ್ಳು ನೀರು ಬಿಟ್ಟು, ರಾಜಕೀಯ ಗಂದ ಗಾಳಿ ಗೊತ್ತಿಲ್ಲದ ಬಿಜೆಪಿ ಪಕ್ಷದ ಅದಿ ವೀರಲಕ್ಷ್ಮಿ ಎನ್ನುವ ಅಭ್ಯರ್ತಿಯನ್ನು ತಂದು ವಾಮ ಮಾರ್ಗದಲ್ಲಿ ಗೆಲ್ಲಿಸಿಕೊಂಡರು. ಇದರಿಂದ ಕೆಂಡಾಮಂಡಲರಾದ ಎಂ.ಈರಣ್ಣ, ಅಧ್ಯಕ್ಷರ ಚುನಾವಣೆಯಲ್ಲಿ ಕುತಂತ್ರ ಮಾಡಿದ ಕಾಂಗ್ರೆಸ್ ಪಕ್ಷದ ನಾಯಕರಿಗೆ ತಕ್ಕ ಪಾಠವನ್ನು ಕಲಿಸಬೇಕೆನ್ನುವ ಜಿದ್ದಿಗೆ ಬಿದ್ದು, ಸೊಸೆ ಡಾ.ತನುಶ್ರೀಯನ್ನು ಪಕ್ಷೇತರ ಅಭ್ಯರ್ತಿಯಾಗಿ ಕಣಕ್ಕೆ ಇಳಿಸಿ, ಕಾಂಗ್ರೆಸ್ ಸೋಲಿಸುವಲ್ಲಿ ಯಶಶ್ವಿಯಾದರು. ಆದ್ದರಿಂದ ಜೆಡಿಎಸ್ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ಗೆಲುವು ಸುಲುಭವಾಗಿತ್ತು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ನಾಲ್ಕನೇ ಸ್ಥಾನಕ್ಕೆ ಕಳುಹಿಸಿದ ಕೀರ್ತಿ ಎಂ.ಈರಣ್ಣನವರಿಗೆ ಸಲ್ಲುತ್ತದೆ.

ಎಂ.ಈರಣ್ಣ

ಕಳೆದ ಬಾರಿ ನೆಡದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಹಂಪಯ್ಯ ನಾಯಕ, ಜೆಡಿಎಸ್ ನಿಂದ ರಾಜ ವೆಂಕಟಪ್ಪ ನಾಯಕ, ಬಿಜೆಪಿಯಿಂದ ಮೊದಲಿಗೆ ಮಾನಪ್ಪ ನಾಯಕಗೆ ಟಿಕೆಟ್ ಘೋಷಿಸಿ, ನಂತರ ಶರಣಪ್ಪ ನಾಯಕ ಗುಡದಿನ್ನಿ ಅವರಿಗೆ ನೀಡಲಾಯಿತು. ಶರಣಪ್ಪ ನಾಯಕ ಈಗ ಕಾಂಗ್ರೆಸ್ ನಲ್ಲಿ ಇದ್ದಾರೆ. ಮುಂಬರುವ ಚುನಾವಣೆಯಲ್ಲಿ ಎಂ.ಈರಣ್ಣ ಹಾಗೂ ಅವರ ಸೊಸೆ ಡಾ.ತನುಶ್ರೀಯ ಪಾತ್ರ ನಿರ್ನಾಯಕವಾಗಿರುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಕಳೆದ ಬಾರಿ ಇದ್ದಂತ ವಾತವಾರಣ ಈಗಿಲ್ಲ. ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ. ಇದರಿಂದಾಗಿ ಈ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು ಯಾಕ್ಷ ಪ್ರಶ್ನೆಯಾಗಿದೆ. ಟಿಕೆಟ್ ಹಂಚಿಕೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಗೊಂದಲವಿದೆ. ಇವರೆಡರ ಮದ್ಯ ಎಂ.ಈರಣ್ಣನವರ ನೆಡೆ ಗುಪ್ಪವಾಗಿದೆ. ಹಾಗಾದರೆ ಗೆಲ್ಲುವ ಅಭ್ಯರ್ತಿ ಯಾರು ಎಂಬುದು ರಾಯಚೂರಿನಲ್ಲಿ ಮಾತ್ರವಲ್ಲ ಮಾನ್ವಿಯಲ್ಲೂ ಪ್ರತಿಧ್ವನಿಸುತ್ತಿದೆ.