ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Ram Mandir Archives » Dynamic Leader
November 22, 2024
Home Posts tagged Ram Mandir
ರಾಜಕೀಯ

ಬೆಂಗಳೂರು: “ರಾಮನ ಮೇಲಿನ ಭಕ್ತಿಯನ್ನು ಬಿಜೆಪಿ ರಾಜಕೀಯ ಗೊಳಿಸಿ ಲಾಭ ಪಡೆಯಲು ಯತ್ನಿಸುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜನರನ್ನು ಭಾವನಾತ್ಮಕವಾಗಿ ಪ್ರಚೋಧಿಸಿ ಮತ ಬ್ಯಾಂಕ್ ಭದ್ರಗೊಳಿಸುತ್ತಿದೆ. ಈ ಮೂಲಕ ಬಿಜೆಪಿ ಲೋಕಸಭಾ ಚುನಾವಣೆಗೆ ಸಿದ್ದವಾಗುತ್ತಿದೆ” ಎಂದು ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಹೇಳಿದ್ದಾರೆ.

ಅವರು ಮುಂದುವರಿಯುತ್ತಾ “ಧಾರ್ಮಿಕ ನಂಬಿಕೆಗಳನ್ನು ಬಳಸಿ ಮುಗ್ದ ಜನರನ್ನು ಭಾವನಾತ್ಮಕವಾಗಿ ಕೆರಳಿಸುವ ಯಾವುದೇ  ಪಕ್ಷಗಳು ರಾಜಕೀಯ ಮಾಡಿದರೂ ಅದು ಖಂಡನಾರ್ಹ. ಕಾಂಗ್ರೆಸ್ ಕೂಡ ಆರಂಭದಲ್ಲಿ ಬಿಜೆಪಿಯ ಹಾದಿಯಲ್ಲಿ ಸಾಗುವ ಸೂಚನೆ ನೀಡಿದ್ದರೂ ಈಗ ಅದರಿಂದ ದೂರ ನಿಲ್ಲುವುದಾಗಿ ಹೇಳಿದ್ದು ಸ್ವಾಗತಾರ್ಹ” ಎಂದು ಹೇಳಿದ್ದಾರೆ.

ರಾಮನ ಮೇಲಿನ ಭಕ್ತಿಗಿಂತ ರಾಜಕೀಯವೇ ಮೇರೆ ಮೀರುತ್ತಿದೆ. ರಾಮ ಮಂದಿರ ಪೂರ್ಣಗೊಳ್ಳುವ ಮುನ್ನವೇ ತರಾತುರಿಯ ಉದ್ಘಾಟನೆಗೆ ಬಿಜೆಪಿ ಮುಂದಾಗುತ್ತಿರುವುದು ಏತಕ್ಕೆ? ಲೋಕಸಭೆ ಚುನಾವಣೆ ಆಸನ್ನವಾಗಿರುವಾಗ, ವಿಷಯವಿಲ್ಲದೇ ತಡಕಾಡುವ ಬಿಜೆಪಿಗೆ ಇದರ ಅಗತ್ಯವಿತ್ತು. ರಾಮಮಂದಿರ ವಿವಾದದಿಂದಲೇ ಸಾಕಷ್ಟು ಫಸಲು ತೆಗೆದ ಪಕ್ಷದಿಂದ ಇನ್ನೇನು ತಾನೇ ನಿರೀಕ್ಷಿಸಬಹುದು?” ಎಂದು ಅವರು ಪ್ರಶ್ನಿಸಿದ್ದಾರೆ.

ದೇಶ

ಡಿ.ಸಿ.ಪ್ರಕಾಶ್

ಡಿಸೆಂಬರ್ 6, 1992 ರಂದು ಕರಸೇವೆ ಎಂಬ ಹೆಸರಿನಲ್ಲಿ ಸಂಘಟಿಸಲಾದ ಗುಂಪು ಬಾಬರಿ ಮಸೀದಿಯನ್ನು ಕೆಡವಿ ನೆಲಸಮಗೊಳಿಸಿತು. ಡಿಸೆಂಬರ್ 6, ಜಾತ್ಯತೀತತೆಯ ಮೇಲೆ ಗಡಪಾರೆ ಇಳಿಸಿದ ದಿನ.

ಮಸೀದಿ ಧ್ವಂಸ ಪ್ರಕರಣದಲ್ಲಿ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಅಶೋಕ್ ಸಿಂಘಾಲ್, ಉಮಾಭಾರತಿ ಮತ್ತಿತರರು ಆರೋಪಿಗಳಾಗಿದ್ದರು. ಆದರೆ ಒಟ್ಟಾರೆ ಎಲ್ಲರೂ ಖುಲಾಸೆಗೊಂಡರು. ಸಿಬಿಐ ಇವರ ಮೇಲಿನ ಆರೋಪಗಳನ್ನು ಸಾಬೀತುಪಡಿಸಿಲ್ಲ ಎಂದು ನ್ಯಾಯಾಲಯ ಹೇಳಿತು.

ಬಾಬರಿ ಮಸೀದಿಯನ್ನು 1528-1530ರ ಅವಧಿಯಲ್ಲಿ ಬಾಬರ್‌ನ ಕಮಾಂಡರ್ ಮೀರ್ ಬಾಕಿ ಅವರಿಂದ ನಿರ್ಮಿಸಲಾಯಿತು. ಆದರೆ, ಮಸೀದಿಯ ಜಾಗ ಶ್ರೀರಾಮನ ಜನ್ಮಸ್ಥಳ ಎಂದು ಸಂಘಪರಿವಾರದಿಂದ ಸುಳ್ಳು ಪ್ರಚಾರವನ್ನು ಬಹಳ ವ್ಯವಸ್ಥಿತವಾಗಿ ಮಾಡಲಾಯಿತು. ಆದರೂ ಕೊನೆಯವರೆಗೆ ಇದಕ್ಕೆ ಯಾವುದೇ ಪುರಾವೆಗಳನ್ನು ನೀಡಲು ಅವರಿಂದ ಸಾಧ್ಯವಾಗಲಿಲ್ಲ.

ಎಲ್.ಕೆ.ಅಡ್ವಾಣಿಯವರು ಈ ಕಥೆಯನ್ನು ಹರಡುತ್ತಲೇ ರಥಯಾತ್ರೆಯನ್ನೂ ನಡೆಸಿದರು. ವಿ.ಪಿ.ಸಿಂಗ್ ನೇತೃತ್ವದ ರಾಷ್ಟ್ರೀಯ ರಂಗದ ಆಡಳಿತದಲ್ಲಿ ಮಂಡಲ್ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಘೋಷಿಸಿದ್ದೇ ಆರ್‌ಎಸ್‌ಎಸ್ ಪರಿವಾರ ಅಯೋಧ್ಯೆ ವಿಷಯವನ್ನು ಗಂಭೀರವಾಗಿ ಪರಿಗಣಿಸಲು ಕಾರಣ.

ಮಂಡಲ್-ಕಮಂಡಲ್ ಎಂಬ ಚರ್ಚೆಗಳು ನಡೆದವು. ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಬಾರದು ಎಂಬುದು ಆರ್‌ಎಸ್‌ಎಸ್ ಪರಿವಾರದ ಚಿಂತನೆ. ಅದಕ್ಕಾಗಿಯೇ ಅವರು ರಾಮಮಂದಿರ ಸಮಸ್ಯೆಯನ್ನು ಕೈಗೆತ್ತಿಕೊಂಡರು.

ನರೇಂದ್ರ ಮೋದಿ ಆಡಳಿತದಲ್ಲಿ ಅಯೋಧ್ಯೆ ನಿವೇಶನಕ್ಕೆ ಸಂಬಂಧಿಸಿದ ಪ್ರಕರಣವನ್ನು ಸಹ ಜಾಣ್ಮೆಯಿಂದ ಮುಚ್ಚಿ ಹಾಕಲಾಯಿತು ಮತ್ತು ಮಸೀದಿ ಕೆಡವಿದ ಸ್ಥಳದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ರಾಮನ ಮಂದಿರವನ್ನೂ ನಿರ್ಮಿಸಲಾಯಿತು. ಅಯೋಧ್ಯೆ ವಿಚಾರದಲ್ಲಿ ನ್ಯಾಯಾಲಯ ನೀಡಿದ್ದು ತೀರ್ಪು; ನ್ಯಾಯವಲ್ಲ! ಎಂಬುದು ಎಲ್ಲರಿಗೂ ತಿಳಿದ ವಿಷಯ.

ಇದೀಗ ದೇಶಾದ್ಯಂತ ಜಾತಿವಾರು ಜನಗಣತಿ ನಡೆಯಬೇಕೆಂಬ ಬೇಡಿಕೆ ಮುನ್ನೆಲೆಗೆ ಬಂದಿದೆ. ಮತ್ತೊಂದೆಡೆ, ರಾಮಮಂದಿರ ನಿರ್ಮಾಣವನ್ನು ಪ್ರಧಾನಿ ಮೋದಿಯವರು ತಮ್ಮ 10 ವರ್ಷಗಳ ಆಡಳಿತದ ಸಾಧನೆ ಎಂದು ಬಿಂಬಿಸುತ್ತಿದ್ದಾರೆ. 1990ರ ದಶಕದಲ್ಲಿ ಇದ್ದ ಅದೇ ಪರಿಸ್ಥಿತಿ ಈಗ ಮರುಕಳಿಸಿದೆ.

ಜಾತಿವಾರು ಜನಗಣತಿಯನ್ನು ಬಿಜೆಪಿ ಒಪ್ಪುತ್ತಿಲ್ಲ. ಆದರೆ ಸಾಮಾಜಿಕ ನ್ಯಾಯದ ಶಕ್ತಿಗಳು ಇದನ್ನು ಖಚಿತಪಡಿಸಬೇಕು. ಮತೀಯವಾದಕ್ಕೆ ದೇಶ ಭಾರೀ ಬೆಲೆ ಕೊಟ್ಟಿದೆ. ಭಾರತವು ಜಾತ್ಯತೀತ ರಾಷ್ಟ್ರವಾಗಿ ಮುಂದುವರಿಯುತ್ತದೆಯೇ ಅಥವಾ ಇಲ್ಲವೇ ಎಂಬುದು ಡಿಸೆಂಬರ್-6 ರ ಹೊತ್ತಿಗೆ ಎದ್ದಿರುವ ಪ್ರಶ್ನೆಯಾಗಿದೆ.

ಹಿಂದುಳಿದ ವರ್ಗದವರು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪಡೆಯಲು ಈ ದೇಶ ಎರಡನ್ನು ಕಳೆದುಕೊಂಡಿದೆ. ಒಂದು ವಿ.ಪಿ.ಸಿಂಗ್ ಅವರ ಅಧಿಕಾರ. ಮತ್ತೊಂದು ಐತಿಹಾಸಿಕವಾದ ಬಾಬರಿ ಮಸೀದಿ. ಅದು ಮತ್ತೊಮ್ಮೆ ಮರುಕಳಿಸದಿರಲು ನಾವು ಮರೆಯಬಾರದ ದಿನ ಡಿಸೆಂಬರ್-6.