ಮುಂಬೈ: ಸಿಬಿಐ ಸಂಸ್ಥೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ರವರ ಪಂಜರದ ಗಿಣಿ ಎಂದು ಶಿವಸೇನೆ (ಯುಬಿಟಿ) ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಟೀಕಿಸಲಾಗಿದೆ.
ಪ್ರತಿಪಕ್ಷ ನಾಯಕರ ಮೇಲೆ ಸೇಡು ತೀರಿಸಿಕೊಳ್ಳಲು ಕೇಂದ್ರ ಸರ್ಕಾರ ಸಿಬಿಐ, ಜಾರಿ ನಿರ್ದೇಶನಾಲಯದಂತಹ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಪ್ರತಿಪಕ್ಷಗಳು ನಿರಂತರವಾಗಿ ಆರೋಪಿಸುತ್ತಿವೆ. ಕಳೆದ ತಿಂಗಳು ಸಿಬಿಐ, ಜಾರಿ ನಿರ್ದೇಶನಾಲಯದಂತಹ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ 9 ಪ್ರತಿಪಕ್ಷಗಳ ನಾಯಕರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು.
ಈ ಹಿನ್ನಲೆಯಲ್ಲಿ ಕೆಲ ದಿನಗಳ ಹಿಂದೆ ಪ್ರಧಾನಿ ನರೆಂದ್ರ ಮೋದಿಯವರು ‘ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರು, ಅಧಿಕಾರಿಗಳು ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದ್ದರು. ‘ದೇಶವನ್ನು ಭ್ರಷ್ಟಾಚಾರ ಮುಕ್ತ ಮಾಡಲು ಸಿಬಿಐ ವ್ಯವಸ್ಥೆಯಂತಹ ಸಂಸ್ಠೆಯ ಅಗತ್ಯವಿದೆ’ ಎಂದೂ ಹೇಳಿದ್ದರು.
ಈ ಹಿನ್ನಲೆಯಲ್ಲಿ ಶಿವಸೇನೆ (ಯುಬಿಟಿ) ಪಕ್ಷದ ನಿಯತಕಾಲಿಕೆಯಾದ ಸಾಮ್ನಾದಲ್ಲಿ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಅವರು ‘ಸಿಬಿಐ ಸಂಸ್ಥೆಯು ಮೋದಿ ಮತ್ತು ಅಮಿತ್ ಶಾ ಅವರ ಪಂಜರದ ಗಿಣಿಯಾಗಿದೆ’ ಎಂದು ಟೀಕಿಸಿದ್ದಾರೆ. ‘ಅಧಿಕಾರಿಗಳು ಯಾರೇ ಭ್ರಷ್ಟಾಚಾರ ಮಾಡಿದರೂ ಕ್ರಮ ಕೈಗೊಳ್ಳಬೇಕು ಎಂದು ಮೋದಿ ಹೇಳಿದ್ದರೂ ಸಿಬಿಐ ಸಂಸ್ಥೆಯು ಮೋದಿ ಮತ್ತು ಅಮಿತ್ ಶಾ ರವರ ಪಂಜರದ ಗಿಣಿಯೇ ಎಂಬುದರಲ್ಲಿ ಯಾರಿಗೂ ಅನುಮಾನವಿಲ್ಲ’ ಎಂದು ಹೇಳಿದ್ದಾರೆ.